ಮಂಜುನಾಥ್ ನಾಯ್ಕ
ಆಗಾಗ್ಗೆ ಮನೆಗೆ ಬರಲು ಹೇಳ್ತಿದ್ಲು, ಮೈಕೈ ಮುಟ್ಟಿಯೂ ಮಾತಾಡ್ಸಿದ್ಲು, ಅದೆಲ್ಲ ಅಂತಹ ದೊಡ್ಡ ವಿಷಯವಾ ಅಂತ ನಾನು ಸುಮ್ಮನೇ ಇದ್ದೆ. ಅಷ್ಟಕ್ಕೂ ಅವಳು ನನ್ನ ಬಾಸ್. ಇವೆಲ್ಲಾ ದೊಡ್ಡದು ಮಾಡಿದರೆ ನನ್ನ ಕೆಲಸಕ್ಕೇ ಕುತ್ತು ಅಂತ ಸುಮ್ಮನಿದ್ದೆ.
ಸದಾನಂದ ಉರುಫ್ ಧರ್ಮೇಂದ್ರ ರಾಜಪುರೋಹಿತ್ ಕೆಲಸದಿಂದ ವಜಾಗೊಂಡದ್ದು ಮುಂದಿನ ವಿಧಾನಸಭಾ ಚುನಾವಣೆಯ ಚರ್ಚೆಯಲ್ಲಿ ನಿರತರಾದ ಗೆಳೆಯರ ವಲಯದಲ್ಲೂ ಒಂದು ಚೂರೂ ಬಣ್ಣ ಪಡೆಯದೇ, ಕಾಲಿ ಹಾಳೆಯ ಮೇಲಿನ ಪೆನ್ಸಿಲ್ ಸ್ಕೆೆಚ್ ಕೂಡಾ ಆಗದೆ ಮರೆಯಾದದ್ದು ಒಂದು ರೀತಿಯಲ್ಲಿ ಪುರೋಹಿತನಿಗೆ ಅನುಕೂಲವೇ ಆಗಿ ಪರಿಣಮಿಸಿತ್ತು.
ಇದ್ದಕ್ಕಿದ್ದಂತೆ ವಾರದ ಹಿಂದೆ ಸಂಜೆ ಬಂದ ಒಂದು ಸುದ್ದಿ ಸ್ಪೋಟಗೊಳ್ಳದೆ ಗುಸುಗುಸುವಾಗಿ ಎಲ್ಲರ ಬಾಯಲ್ಲಿ ಉಳಿದದ್ದು ಎರಡು ದಿನದ ಹಿಂದೆ ಕಾಗದದ ರೂಪದಲ್ಲಿ ಪುರೋಹಿತನ ಕೈ ಸೇರಿದಾಗಲೇ ಖಾತ್ರಿಯಾದದ್ದು. ಜೊತೆಗೆ ಆತಂಕ ಕೂಡಾ. ಇಂತಹ ಸಣ್ಣ ಕಾರಣಕ್ಕೂ ಕೆಲಸ ತೆಗೆಯುತ್ತಾ? ಅಲ್ಲದೇ ಹೀಗೆ ಏಕಾಏಕಿ ಕೆಲಸದಿಂದ ತೆಗೆದರೆ ಪುರೋಹಿತನ ಮುಂದಿನ ಬದುಕಾದರೂ ಹೇಗೆ..? ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾದರೂ ಕಾಲಘಟ್ಟದಲ್ಲಿ ಈ ಸಾಫ್ಟ್‌ವೇರ್ ಉದ್ಯೋಗಕ್ಕೆ ಅಗತ್ಯವಿರುವ ಅಪ್‌ಡೇಟ್ ಆಗುವ ಪ್ರಮುಖ ಅಂಶವನ್ನೇ ಕಳಕೊಂಡವನು.
ಅದೇ ಕಾರಣಕ್ಕೆ ಅವನನ್ನು ಪ್ರೋಗ್ರಾಂ ಬರೆಯುವುದಕ್ಕೆ ನಾಲಾಯಕ್ ಎಂದು ಆ ಡಿಪಾರ್ಟ್‌ಮೆಂಟಿನವರು ಬೇಡವೆಂದಿದ್ದರು. ಯಾಕೆಂದರೆ ಅವನು ಓದುವಾಗ ಇದ್ದ ಒರಾಕಲ್, ಈಗ ತನ್ನ ದಶಾವತಾರಗಳನ್ನು ಕಳೆದು ಹೊಸ ಅವತಾರಗಳನ್ನು ತಳೆದು ನಿಂತಿದ್ದರೆ ಪುರೋಹಿತ ಮಾತ್ರ ವೇದಗಣಿತ, ಕಣಾದ ಎಂಬ ಪದಗಳಲ್ಲೇ ಮುಳುಗಿ ದಿನಕ್ಕೊಂದು ತನ್ನದೆ ಆದ ಆದರೆ ಇಪ್ಲಿಮೆಂಟ್ ಮಾಡಲಾಗದ ಹೊಸ ಸಂಶೋಧನೆಯ ಜೊತೆಗೆ ಬಂದು, ತಿಂದ ಅನ್ನ ಸುಸೂತ್ರವಾಗಿ ಜೀರ್ಣವಾಗಲು ಹಾಕಿದ ಬೀಡಾದ ಕೆಂಪು ರಸದ ನಡುವಿನ ಬಾಯಿಂದ ತುಸು ಆಚೆ ಚಾಚಿದ ತನ್ನ ಕೊಳಕು ಉಬ್ಬು ಹಲ್ಲು ಪ್ರದರ್ಶಿಸುತ್ತಾ ನಿಲ್ಲುತ್ತಿದ್ದ.
ಹತ್ತು ನಿಮಿಷಕ್ಕೆ ಒಂದು ಹೊಸ ಪ್ರೋಗ್ರಾಂ ಬರೆಯಬಲ್ಲ ಜೀನ್ಸ್ ಪ್ಯಾಂಟ್ ಟೀಶರ್ಟ್‌ನ ಹೊಸ ಹುಡುಗಿಯರ ಎದೆಗಾರಿಕೆಯ ಎದುರು ಪುರೋಹಿತನ ಕೌಶಲ ಮಂಕಾಯಿತು. ಬಹುರಾಷ್ಟ್ರೀಯ, ಸಾಗರದಂತಹ ಕಂಪೆನಿಯ ಆದಾಯದಲ್ಲಿ ಪುರೋಹಿತನ ಸಂಬಳ ಸಿಂಧುವಿನಲ್ಲಿನ ಬಿಂದುವಿನಂತೆ ಆಗಿ ಕಾಣೆಯಾದದ್ದರಿಂದ ಅಲ್ಲದೆ ಅಲ್ಲಿನ ಕೆಲಸ ಸಮುದ್ರ ಮಥನ ತರಹದ್ದಾಗಿದ್ದು ಕೊನೆಗೂ ಅಮೃತ ಆಚೆಗೆ ಬರಲು ಪ್ರಯತ್ನ ಯಾರದ್ದು ಎಂದು ಪ್ರಮಾಣೀಕರಿಸಲು ಸ್ವತಃ ದೇವತೆಗಳಿಗೇ ಅನುಮಾನ ತರು ವಂತಹ ಸಂದರ್ಭಕ್ಕೆ ಕಾರಣವಾಗುವ ಸನ್ನಿವೇಶದಲ್ಲಿದ್ದುದರಿಂದ, ಪುರೋಹಿತನ ಕೆಲಸ ಅವನ ಬಾಸ್ ಆಗಿದ್ದ ತರಂಗಿಣಿ ಶರ್ಮಾಗೆ ಆಪ್ತ ಕಾರ್ಯದರ್ಶಿಯದ್ದಾದರೂ ಅವನ ವಿಸಿಟಿಂಗ್ ಕಾರ್ಡಲ್ಲಿ ಮಾತ್ರ ಸಾಫ್ಟ್‌ವೇರ್ ಇಂಜಿನೀಯರ್ ಎಂದೇ ನಮೂ ದಾಗಿತ್ತು.
ಕಾರಣ ಸಾಫ್ಟ್‌ವೇರ್ ಕಂಪೆನಿಯಲ್ಲಿ ಆಪ್ತ ಕಾರ್ಯದರ್ಶಿ ಕೆಲಸವೆಂದರೆ ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೆ ಕೆಲಸ ಕೊಟ್ಟ ಹಾಗೆ ಎನ್ನುವುದನ್ನು ಅಲ್ಲಿನ ಪ್ರಾಜೆಕ್ಟ್ ಮುಖ್ಯಸ್ಥೆ ತರಂಗಿಣಿ ಮೇಡಂ ಅರ್ಥ ಮಾಡಿಕೊಂಡದ್ದು ನಿಚ್ಚಳವಾಗಿತ್ತು. ಯಾರಿಂದ ತಮಾಷೆಗೆ, ಛೇಡಿಕೆಗೆ ಒಳಗಾಗಿದ್ದರೂ ಪುರೋಹಿತ ಕೆಟ್ಟವನಲ್ಲ ಎಂಬುದು ಕಂಪೆನಿಯ ತಳಮಹಡಿಯಿಂದ 30ನೇ ಮಹಡಿ ಯವರೆಗೆ ಏರಿಸುವ ಮತ್ತು ಇಳಿಸುವ ಲಿಫ್‌ಟ್‌ನಲ್ಲೂ ಚರ್ಚೆಯಾಗುತ್ತಿತ್ತು.
ಅವನು ಇನ್ನೂ ವೇದಕಾಲದಲ್ಲೇ ಇದ್ದಾನೆ, ಅಪ್ಪ ಅಮ್ಮ ಸಭ್ಯಸ್ಥರು, ಅದಕ್ಕೆ ಹಾಗೇ..ಮಗುವಿನಂತಹ ಮನಸ್ಸು..ಎಂದು
ಕೆಲವರೆಂದರೆ ‘ಇವನಿಗೆ ಮಕ್ಕಳಾದದ್ದಾದರೂ ಹೇಗೆ ಮಾರಾಯಾ!’ ಎಂದು ಇನ್ನೂ ಕೆಲವರು ಅವನ ಬುಡವನ್ನೇ ಅಲುಗಾಡಿ ಸುವ ಮಾತನ್ನಾಡುತ್ತಿದ್ದರು. ಇಂತಹ ಪುರೋಹಿತ ಕೆಲಸದಿಂದ ವಜಾ ಆದದ್ದು ಲೈಂಗಿಕ ದೌರ್ಜನ್ಯ ಮಾಡಿದ ಎಂಬ ಕಾರಣಕ್ಕೆ! ಅದೂ ಬೇರೆ ಯಾರ ಮೇಲಲ್ಲಾ, ತನ್ನ ಬಾಸ್ ಆದ ತರಂಗಿಣಿಯ ಮೇಲೆ. 600 ಇಂಜಿನಿಯರ್‌ಗಳು ಇರುವ ವ್ಯವಸ್ಥೆ ಮೂಗಿನ ಮೇಲೆ ಬೆರಳಿಟ್ಟಿತ್ತು.
‘ಪುರೋಹಿತ ಹೀಗೆ ಮಾಡ್ಲಿಕ್ಕುಂಟಾ?’ ಅಂತ. ಅಲ್ಲದೆ ಪರ್ಸನಲ್ ಸೆಕ್ರೆಟರಿ ಆಗಿದ್ದಾತ ಕಳೆದ ಹತ್ತು ವರ್ಷದಿಂದ ಮಾಡದ್ದನ್ನು ಈಗ ಮಾಡ್ತಾನಾ? ಎಂಬ ಮಾತುಗಳ ಜೊತೆಗೆ ‘ನಲವತ್ತರ ನಂತರವೇ ಒಂಥರಾ ಸೆಕ್ಸುವಲ್ ಅವೇಕನಿಂಗ್ ಅಂತ ಆಗುತ್ತಂತೆ. ಆಗಲೇ ಗಂಡಸು ಅಂದುಕೊಂಡವನ ನಿಜರೂಪ ಬಯಲಾಗೋದು. ಅವನಿಗೆ ಇನ್ನು ಈ ಉದ್ಯೋಗದಲ್ಲಿ ಕೆರಿಯರ್ ಇಲ್ಲ ಅಂತ ಖಾತ್ರಿ ಆಯ್ತು ನೋಡು, ಅದಕ್ಕೇ ಇದಕ್ಕೆಲ್ಲಾ ಹಿಂದು ಮುಂದು ನೋಡಿರಲಿಕ್ಕಿಲ್ಲ’ ಎಂಬ ಮಾತುಗಳು ಮಧ್ಯ ವಯಸ್ಸಿನ, ಎರಡು ಹೆಣ್ಣುಮಕ್ಕಳ ತಂದೆ ಆಗಿರುವ ಸಾಫ್ಟ್‌ವೇರ್ ಇಂಜಿನೀಯರ್ ಆಗಿಯೂ ಡಿಮಾಂಡ್ ಇಲ್ಲದ ದುಡಿಯುವ ತಾಕತ್ತಿಲ್ಲದ ಸದಾ ಸಂದ್ಯಾವಂದನೆ, ಪೂಜೆ ಅಂತ ಮಾಡಿ ಕ್ರಾಪು ಮಾಡಿದ ಮುಂದಲೆಯ ಹಿಂದೆ ಸಣ್ಣದೊಂದು ಜುಟ್ಟು ಅಡಗಿಸಿಕೊಂಡ
ಪುರೋಹಿತನನ್ನು ಗುರಿಯಾಗಿಸಿದ್ದೇ ಎಂದು ಅರ್ಥ ಮಾಡಿಕೊಳ್ಳುವಲ್ಲಿ ವಾರದ ಹಿಂದೆ ಟಾಯ್ಲೆಟ್ ತೊಳೆಯಲು ಸೇರಿಕೊಂಡ ಹೆಬ್ಬೆೆಟ್ಟು ಒತ್ತಿಯೇ ಸಂಬಳ ತೆಗೆದುಕೊಳ್ಳುವ ತಿಮ್ಮಾರಪ್ಪನೂ ಹಿಂದೆ ಬೀಳಲಿಲ್ಲ. ‘ಅಲ್ಲಾ, ಈ ದೌರ್ಜನ್ಯ ಎನ್ನುವುದು ಬಾಸ್ ಗಳಿಂದ ಸಬ್ ಆರ್ಡಿನೇಟ್‌ಗಳ ಮೇಲೆ ಆಗುವಂತದ್ದಲ್ಲವಾ, ಅಂತದ್ದರಲ್ಲಿ ಈ ಪುರೋಹಿತ ತರಂಗಿಣಿ ಮೇಡಂ ಮೇಲೆ..’ ಮಧ್ಯದಲ್ಲೇ ಬಾಯಿ ಹಾಕಿದ ಗೆಳೆಯ ಉತ್ತರಿಸಿದ್ದ.
‘ಅದು ಹಾಗಲ್ಲಾ ಮಗಾ..ಬಾಕಿ ದೌರ್ಜನ್ಯಗಳ ತರಹಾ ಅಲ್ಲಾ ಈ ಲೈಂಗಿಕ ದೌರ್ಜನ್ಯ. ಎಲ್ಲಾ ದೌರ್ಜನ್ಯಗಳೂ ಬಾಸ್‌ನಿಂದ
ಸಬ್‌ಆರ್ಡಿನೇಟ್ ಕಡೆ ಕೆಳಮುಖ ಚಲನೆ ಹೊಂದಿದ್ದರೆ ಇದು ಹಾಗಲ್ಲಾ, ದ್ವಿಮುಖ ಚಲನೆ ಹೊಂದಿರ್ತದೆ’ ಎಂದಿದ್ದ. ಅವನ ಎದುರು ಅಲ್ಪ ಸ್ವಲ್ಪ ಕಥೆ ಕವನ ಬರೆದು ಸಾಹಿತಿ ಎನಿಸಿಕೊಂಡಿದ್ದ ನಾನು ನನ್ನ ತೂಕ ಕಡಿಮೆ ಆಗಬಾರದು ಎಂದುಕೊಂಡು ‘ಹೌದು..ಹೌದು’ ಎಂದಷ್ಟೇ ಹೇಳಿ ಜಾರಿಕೊಂಡಿದ್ದೆ.
ಆದರೆ ಈ ದ್ವಿಮುಖ ಚಲನೆ ಎಂಬ ಶಬ್ದವಷ್ಟೇ ತಲೆಯಲ್ಲಿ ಉಳಿದು ಹರಳುಗಟ್ಟಿ ಬ್ರೈನ್ ಟ್ಯೂಮರ್ ತರಹದ ಅನುಭವವನ್ನು ಆಗಾಗ್ಗೆ ಕೊಡುತ್ತಿತ್ತು. ಮೊಬೈಲ್‌ಗೆ ಫೋನ್ ಮಾಡಿದರೂ ಅದು ಸ್ವಿಚ್‌ಆಫ್ ಆಗಿದೆ ಎಂಬ ಸಂದೇಶ ಬಂದುದರಿಂದ ಒಂದು ದಿನ ಈ ಪುರೋಹಿತನನ್ನು ಹುಡುಕಿಕೊಂಡು ಹೋಗಿಯಾದರೂ ಕೇಳಿಯೆ ಬಿಡಬೇಕು ‘ನಿನ್ನ ಹಕೀಕತ್ ಏನೋ ಮಗನೇ? ಜನ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಆ ಹೆಂಗಸಿಗೆ ಕೈಹಾಕಲು ಯಾಕೆ ಹೋದೆಯೋ, ಮನೇಲಿ ಹೆಂಡ್ತಿ ಇಲ್ಲವಾ? ಅಂಥಾ ತೆವಲಿದ್ದರೆ ಐನೂರೋ, ಸಾವಿರವೋ ಕೊಟ್ಟು ಯಾವಳ ಹತ್ತಿರವಾದರೂ ಹೋಗಬಹುದಿತ್ತಲ್ಲ.
ಈ ವಯಸ್ಸಿಗೆ ಇದೆಲ್ಲಾ ಸರಿಯಾ? ಈಗ ಹೊಟ್ಟೆಗೆ ಏನು ಮಣ್ ತಿಂತೀಯಾ. ನೋಡೀಗ ನಿನ್ನ ಚಟಕ್ಕೆ ಹೆಂಡತಿ ಮಕ್ಕಳು ಹಾದಿ ಮೇಲೆ ಬೀಳುವ ಹಾಗಾಯ್ತು. ಅದೂ ಹಾಗಿರ್ಲಿ, ಜನರೆದುರು ತಲೆ ಎತ್ತಿಕೊಂಡು ತಿರುಗುವುದಾದರೂ ಹೇಗೆ ನೀನೇ ಹೇಳಪ್ಪಾ’ ಎಂದು ಚೆನ್ನಾಗಿಯೇ ಜಾಡಿಸಬೇಕು ಎಂದು ಮನೆ ಹುಡುಕಿಕೊಂಡು ಹೋದರೆ, ಪುರೋಹಿತ ಮನೆ ಖಾಲಿ ಮಾಡಿಕೊಂಡು ಹೋಗಿದ್ದ. ಹೀಗೆ ನಾಲ್ಕಾರು ವರ್ಷದಿಂದ ನಾಪತ್ತೆಯಾದ ಪುರೋಹಿತ ಮೊನ್ನೆ ನನ್ನೂರಿನಲ್ಲಿ ನನಗೆ ಎದುರಾದದ್ದು, ಭೂಮಿ
ಉರುಟಾಗಿದೆ ಒಂದಲ್ಲಾ ಒಂದು ದಿನ ಅದೇ ವ್ಯಕ್ತಿ ಅದೇ ಜಾಗವನ್ನು ನಮಗರಿವಿಲ್ಲದೇ ನಾವು ಸಂದರ್ಶಿಸುತ್ತೆವೆ ಎಂಬ
ಮಾತನ್ನು ಸತ್ಯವಾಗಿಸಿತ್ತು.
ಬಹಳ ದಿನಗಳ ನಂತರ ಸಿಕ್ಕಿದ್ದಾನೆ ಎಂದುಕೊಂಡರೆ ಅದೇ ಹಳೇ ವರಸೆ – ವೇದಗಣಿತ, ಕಣಾದ, ಪುಷ್ಪಕ ವಿಮಾನ, ಅದಕ್ಕೆ ಇಂಧನವಾಗಿ ಗಂಜಲದ ಪ್ರಯೋಗ! ‘ನೀನೂ ನನ್ನ ಜೊತೆಗೆ ಸೇರಿಕೊಳ್ಳೋ, ಒಂದು ಪ್ರಾಜೆಕ್ಟ್ ಮಾಡಿಬಿಡೋಣಾ. ಅಮೇರಿಕಾದ ನಾಸಾವೇ ಮೂಗಿನ ಮೇಲೆ ಬೆರಳಿಡಬೇಕು ಹಾಗೆ. ಒಂದು ಸಾರಿ ಇದಕ್ಕೆ ಪೇಟೆಂಟು ಅಂತಾ ಸಿಕ್ಕಿದರೆ ಹಣ, ಹೆಸರು.. ಅವನ ಮಾತುಗಳನ್ನು ಮುಂದೆ ನಾನು ಕೇಳಿಸಿಕೊಳ್ಳಲು ಸಿದ್ಧನಿರಲಿಲ್ಲ. ‘ಈಗಲೆ ಐವತ್ತು ದಾಟಿದ್ದೇವೆ.
ಇದ್ದದ್ದರಲ್ಲಿ ಹರಾ ಶಿವಾ ಅಂತ ದಿನ ತೆಗೆದು ಹೋದರಾಯ್ತು ಬಿಡು. ಅದೆಲ್ಲಾ ಈಗ ಯಾಕೋ’ ಅವನ ಆ ಕೊರೆತದಿಂದ ತಪ್ಪಿಸಿ ಕೊಳ್ಳಲು ಮಧ್ಯೆ ಬಾಯಿ ಹಾಕಿದ್ದೆ. ಮುಂಡೇ ಮಗ ಗೋಮುಖ ವ್ಯಾಘ್ರ ಮಾಡುವುದನ್ನೆಲ್ಲಾ ಮಾಡಿ ಮಳ್ಳನ ತರಾ ಮಾತಾಡ್ತಾನೆ ಎಂದುಕೊಂಡೇ ‘ಅಲ್ಲಾ ಆ ವಿಷಯ ಏನಾಯ್ತೋ, ಒಂದು ನೂರು ಸಲ ಫೋನ್ ಮಾಡಿದ್ದೆ. ಸ್ವಿಚ್ ಆಫ್ ಅಂತ ಉತ್ತರ ಬಂತು. ಮನೆ ಹತ್ತಿರ ಬಂದರೆ ಮನೆ ಖಾಲಿ. ಒಂದು ವಿಷಯ ಗೆಳೆಯರು ಅಂತ ನಮಗೆ ತಿಳಿಸಲೂ ಇಲ್ಲವಲ್ಲೋ’ ಎಂದವನೆ ಮತ್ತೆ ಅವನ ಹಳೆಟ್ರ್ಯಾಕ್‌ಗೆ ಬಂದರೆ ಕಷ್ಟ ಅಂತ ‘ಅದೇನೋ ಆವಮ್ಮನ ವಿಚಾರ’ ಎಂದು ಪೀಠಿಕೆ ಹಾಕಿದೆ.
‘ತರಂಗಿಣಿದಾ? ಅದೇ ಸೆಕ್ಸುವಲ್ ಹೆರಾಸ್ಮೆಂಟ್‌ದು’ ಎಲ್ಲೋ ನಡೆದದ್ದು ಯಾರದೋ ವಿಚಾರ ಎನ್ನುವಂತೆ ಶುರುಮಾಡಿದ. ‘ಅದೇನಿಲ್ಲಾ ಕಣೋ. ಪರ್ಸನಲ್ ಸೆಕ್ರೇಟರಿ ಆಗಿ ಕೆಲ್ಸ ಮಾಡ್ತಿದ್ನಾ. ಆಗಾಗ್ಗೆ ಮನೆಗೆ ಬರಲು ಹೇಳ್ತಿದ್ಲು, ಮೈಕೈ ಮುಟ್ಟಿಯೂ ಮಾತಾಡ್ಸಿದ್ಲು, ಅದೆಲ್ಲ ಅಂತಹ ದೊಡ್ಡ ವಿಷಯವಾ ಅಂತ ನಾನು ಸುಮ್ಮನೇ ಇದ್ದೆ. ಅಷ್ಟಕ್ಕೂ ಅವಳು ನನ್ನ ಬಾಸ್. ಇವೆಲ್ಲಾ
ದೊಡ್ಡದು ಮಾಡಿದರೆ ನನ್ನ ಕೆಲಸಕ್ಕೇ ಕುತ್ತು ಅಂತ ಸುಮ್ಮನಿದ್ದೆ. ಅದೂ ಅಲ್ಲದೇ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲ್ಸ ಮಾಡ್ತಾನೆ, ಇದೆಲ್ಲಾ ಕಾಮನ್ ಅನ್ನುವಷ್ಟರ ಮಟ್ಟಿನ ಬೇಸಿಕ್ ಕಾಮನ್ಸೆನ್ ಇಲ್ಲಾ ಮಗನಿಗೆ ಅಂತ ನೀವೆಲ್ಲಾ ಬೇರೆ ಜಾಡಿಸ್ತೀರಿ.
ಅದೂ ಅಲ್ಲದೆ ಅವಳು ಪ್ರಾಜೆಕ್ಟ್ ಚೀಫ್ ಬೇರೆ. ಇದರಿಂದ ಅವಳ ಇಮೇಜ್‌ಗೆ ಧಕ್ಕೆ ಆದರೆ ಅಂತ ಸುಮ್ಮನಿದ್ದ.’ ಅವನ ಮಾತು ಗಳು ಬೇರೆಯವರಿಗೆ ಸಮಯೋಚಿತ ಪ್ಲಾನ್‌ನಂತೆ ಕಂಡರೂ ಇವೆಲ್ಲಾ ಈ ಹಿಂದೆ ನಮ್ಮ ದಿನನಿತ್ಯದ ಭೇಟಿಯಲ್ಲಿ ಹೇಳಿದ್ದರಿಂದ ಅದು ಸತ್ಯ ಎಂಬ ಅರಿವಿದ್ದೂ ‘ಅದೆಲ್ಲಾ ಹಿಂದೆಯೇ ಹೇಳಿದ್ದೆಯೋ.. ಆವತ್ತು ಏನಾಯ್ತು ಹೇಳು?’ ಎಂದೆ. ‘ಅವತ್ತು ಬೆಳಿಗ್ಗೆೆ ಹೊಸ ಸಾಫ್ಟ್ವೇರ್ ಕಾಂಟ್ರಾಕ್ಟ್ ಸಿಕ್ಕಿದ ಬಗ್ಗೆ ಮತ್ತು ಅದರ ಪ್ಲಾನ್ ಬಗ್ಗೆ ಅಂತ ಮೀಟಿಂಗ್ ಕರೆದಿದ್ದಳು. ಎಲ್ಲಾ ಪ್ರಾಜೆಕ್ಟ್ ಇಂಜಿನಿ ಯರ್‌ಗಳೂ ಸೇರಿದ್ದರು.
ನಾನು ಹೆಂಡತಿಗೆ ಹುಶಾರಿಲ್ಲದ್ದರಿಂದ ಔಷಧಿ ತಂದುಕೊಟ್ಟು ಮಗನನ್ನು ಶಾಲೆಗೆ ಬಿಟ್ಟು ಬರುವಾಗ ಹತ್ತು ನಿಮಿಷ ತಡವಾಗಿತ್ತು. ನನ್ನ ಕಂಡವಳೇ ಲೇಟಾಗಿ ಬಂದದ್ದಕ್ಕೋ ಏನೋ ಗುರುಗುಟ್ಟಿದಳು. ಏನೂ ಗೊತ್ತಿಲ್ಲದವನಂತೆ ಕೂತೆ. ಹೊಸ ಪ್ರೊಗ್ರಾಮ್ ಬರೆಯುವುದರ ಬಗ್ಗೆ ಮೀಟಿಂಗ್ ಶುರುವಾಯ್ತು. ಸ್ಮಾರ್ಟ್‌ಬೋರ್ಡ್ ಮೇಲಿನ ಪ್ರೋಗ್ರಾಮ್ ಎಕ್ಸ್‌ಪ್ಲೈನ್ ಮಾಡಲು ನಮ್ಮ ಕಡೆಗೆ ತಿರುಗಿದಾಗಲೇ ನನಗೆ ಅರಿವಾದದ್ದು ಮೇಡಮ್ ಚೂಡಿದಾರದ ಟಾಪ್‌ನ ಒಂದೂ ಬಟನ್ ಹಾಕಿಲ್ಲ ಎಂದು.
ಅವತ್ತಿನ ಮೀಟಿಂಗ್‌ಗೆ ಹಾಜರಿರಬೇಕಾದ ಕ್ಷಮಾ ಇನ್ನೂ ಬಂದಿರಲಿಲ್ಲ. ನಾನು, ಸಮಂತ್ ಪಾಂಡೆ, ಸುರೇಶ್ ಅನಗೋಳ್ಕರ್, ಜಸರಾಜ್ ಸಿಂಗ್, ಮಾರುತಿ ಕಣವಿ ಇಷ್ಟೇ ಜನ ಇದ್ದದ್ದು. ತರಂಗಿಣಿ ಮೇಡಮ್ ಕೈಯಲ್ಲಿದ್ದ ಲೇಸರ್ ಟಾರ್ಚ್ ಕೈತಪ್ಪಿ ಕೆಳಗೆ ಬಿದ್ದಾಗ ಅದನ್ನ ಎತ್ತಿಕೊಳ್ಳಲು ಅವರು ಬಗ್ಗಿದರೆ ಒಳಗಿಂದೆಲ್ಲಾ ಬಟಾಬಯಲು!
ಎಲ್ಲರೂ ನೋಡಿ ಸುಮ್ಮನಿದ್ದರು. ಒಬ್ಬರ ಮುಖ ಒಬ್ಬರು ನೋಡಿಕೊಂಡು. ಅವರು ಸಿಚುಯೇಷನ್‌ನ ಎಂಜಾಯ್ ಮಾಡ್ತಿದ್ದಾರೆ ಅಂತ ನನಗೆ ಅನ್ನಿಸಿತು. ಥಟ್ಟನೆ ಎದ್ದು ಹೋದವನೇ ‘ಮೇಡಂ ನಿಮ್ಮ ಚೂಡಿದಾರದ ಟಾಪ್‌ನ ಬಟನ್‌ಗಳನ್ನ ಹಾಕಿಲ್ಲಾ’
ಎಂದೆ. ನೋಡಿಕೊಂಡವಳೇ ರಪ್ಪನೇ ನನ್ನ ಕೆನ್ನೆಗೆ ಬಾರಿಸಿಯೇ ಅಮೇಲೆ ಬಟನ್‌ಗಳನ್ನು ಹಾಕಿಕೊಂಡದ್ದು. ಅವಳು ಅದನ್ನ ಅವಮಾನ ಅಂತ ತೆಗೆದುಕೊಂಡಳೋ ಏನೋ. ಅವತ್ತಿನ ಮೀಟಿಂಗ್ ಅಲ್ಲಿಗೇ ಮುಗಿದಿತ್ತು. ಜೊತೆಗಿದ್ದವರು ರಸಭಂಗವಾದಂತೆ ಕುಳಿತಿದ್ದರೂ ಮೇಡಂ ಬಾರಿಸಿದ್ದು ನೋಡಿ ಗಾಬರಿಯೇ ಆಗಿದ್ದರು.
‘ನಿನಗ್ಯಾಕೋ ಬೇಕಿತ್ತು ಪುರೋಹಿತ, ನಾವು ಅದನ್ನ ಆವಾಗಲೇ ನೋಡಿದ್ದೆವು, ಅದು ಕೊಬ್ಬಿನ ಕೋಳಿ ಅಂತ ಗೊತ್ತಿದ್ದೇ ಸುಮ್ಮ ನಿದ್ದದ್ದು. ಸುಮ್ಮನೇ ಎಂಜಾಯ್ ಮಾಡೋದು ಬಿಟ್ಟು. ಏನೇ ಹೇಳು ಪುರೋಹಿತ ನಿನ್ನನ್ನ ದಡ್ಡ ಎನ್ನಬೇಕೋ, ಜಾಣ ಅನ್ನಬೇಕೋ ತಿಳೀತಿಲ್ಲಾ ಕಣೋ’ ಎಂದಷ್ಟೇ ಹೇಳಿ ಜಾಗ ಖಾಲಿ ಮಾಡಿದರು. ಮರುಕ್ಷಣವೇ ಎಂಡಿ ಯಿಂದ ಫೋನ್ ‘ತಕ್ಷಣವೇ ಛೇಂಬರಿಗೆ ಬನ್ನಿ’ ಅಂತ.
ಹೋದೆ. ‘ಇದು ನನಗೆ ಹೊಸತಲ್ಲಾ ಸಾರ್ ಈ ಹಿಂದೆ ಎರಡು ಮೂರು ಬಾರಿ ಅವರ ಮನೆಯಲ್ಲೇ ಈ ತರಹಾ ಕಂಡಿದ್ದೇನೆ. ಆಗಲೂ ಹೀಗೆ ಹೇಳಿದ ಮೇಲೆ ಸರಿ ಮಾಡಿಕೊಂಡಿದ್ದರು.’ ನನ್ನ ಮಾತುಗಳನ್ನು ಕೇಳಿಸಿಕೊಳ್ಳಲು ಎಂ.ಡಿ ತಯಾರಿರಲೇ ಇಲ್ಲಾ. ‘ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುವ ಬದಲು ನೀವೇ ರಾಜೀನಾಮೆ ಅಂತ ಕೊಟ್ಟರೆ ಚೆನ್ನಾಗಿರುತ್ತೆ’ ಅಂತಷ್ಟೇ ಹೇಳಿ ನನಗೆ ಮರುಮಾತಿಗೆ ಅವಕಾಶವೇ ಕೊಡಲಿಲ್ಲ.
ಖಾಲಿ ಹಾಳೆಯ ಮೇಲೆ ಕಾರಣ ನಮೂದಿಸದೇ ರಾಜೀನಾಮೆ ಬರೆದುಕೊಟ್ಟೆ. ಅವನ ಮಾತುಗಳಲ್ಲಿ ಯಾವುದೇ ಭಾವನೆಗಳೇ ಇರಲ್ಲಿಲ್ಲ. ನೋವಿದ್ದರೂ ಅದನ್ನು ಕಾಲ ಮರೆಸಿರಬೇಕು. ಮನಸ್ಸು ಹಗುರಾಯಿತೋ ಭಾರವಾಯಿತೋ ಗೊತ್ತಾಗಲಿಲ್ಲ. ‘ಛೆ.. ಹೀಗಾಗಬಾರದಿತ್ತು.. ನೀನು ಹೇಳಿದ್ದು ನೋಡಿದರೆ ತರಂಗಿಣಿ ಅಷ್ಟು ಕೆಟ್ಟವರಲ್ಲ ಅನ್ನಿಸ್ತದೆ. ನೀನು ಎಲ್ಲರ ಎದುರಿಗೆ ಹೇಳಿದ್ದಕ್ಕೆ ಅದು ಬೇರೆ ರೀತಿಯ ತಿರುವು ಪಡೆದಂತೆ ಕಾಣಿಸ್ತಿದೆ. ಹಾಳಾಗಿ ಹೋಗಲಿ ಬಿಡೋ.. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಈಗ ಜೀವನಕ್ಕೆ?’ ಎಂದೆ.
‘ಪೌರೋಹಿತ್ಯ ಮಾಡುತ್ತಿದ್ದೇನೆ. ಆಗ ನೀವು ಕರೆದ ಅಡ್ಡಹೆಸರೇ ಈಗ ನನ್ನ ಉದ್ಯೋಗವಾಗಿದೆ. ಬದುಕಿಗೇನೂ ಕೊರತೆಯಿಲ್ಲ.
ಸಾಫ್ಟ್‌ವೇರ್ ಉದ್ಯೋಗದಲ್ಲಿರುವಂತೆ ಹೊಸ ಅಪ್‌ಡೇಟ್‌ನ ಕಾಟ ಇಲ್ಲ. ಎಲ್ಲದರಲ್ಲೂ ಹೊಸತನ್ನು ಬಯಸುವವರು ಈ
ಶ್ರಾದ್ಧ-ಅಪರದಲ್ಲಿ ಮಾತ್ರ ಹಳೆಯದ್ದನ್ನೇ ಇಷ್ಟಪಡ್ತಾರೆ. ಮೋಕ್ಷದ ಆಸೆಯೇ ಅಂತದ್ದು. ಅಲ್ಲದೆ ಅಲ್ಪ ಸ್ವಲ್ಪ ಹೆಸರು ಮಾಡಿದ ಅಪರದ ಪುರೋಹಿತರೇ ಜ್ಯೋತಿಷಿಗಳಾಗಿ ಟೀವಿ ಚಾನಲ್ ಸೇರಿ ಗುರೂಜಿ, ಸ್ವಾಮಿಜಿ ಅಂತ ಜನರಿಂದ ಗೌರವದಿಂದ ಕರೆಸಿ ಕೊಳ್ಳಲು ಶುರುಮಾಡಿ ಈ ಉದ್ಯೋಗ ಬಿಟ್ಟ ಮೇಲಂತೂ ನಮ್ಮಂತಹ ಜೂನಿಯರ್‌ಗಳಿಗೆ ಹಬ್ಬ.
ಅಪರ ಪುರೋಹಿತರು ಅಂದರೆ ಮನೆಯ ಹೆಣ್ಣು ಮಕ್ಕಳನ್ನು ಮದುವೆಯಾಗಲು ಹಿಂದೆ ಮುಂದೆ ನೋಡ್ತಾರೆ ಅಂತಾಳೆ ನನ್ನ
ಹೆಂಡ್ತಿ. ಅದೊಂದೇ ಸಮಸ್ಯೆೆ. ಆದರೂ ನಮ್ಮಂತಹ ಪುರೋಹಿತರ ಮನೆಯ ಹುಡುಗನ್ನೇ ನೋಡದ್ರಾಯ್ತು ಅಂತ ಸಮಾಧಾನ ಮಾಡ್ತಿದ್ದೇನೆ. ಅದೇನಿದ್ದರೂ ಮಕ್ಕಳ ಕಾಲಕ್ಕೆ ಆಗ ನೋಡಿದರಾಯ್ತು.’ ಮುಂದೆ ಕೇಳಲು ಮನಸ್ಸಾಗಲಿಲ್ಲ.
ಅವನ ಘಟನೆಯಲ್ಲಿ ನಾವೆಲ್ಲರೂ ತಪ್ಪಿತಸ್ಥರೋ ಎಂಬ ಅಪರಾಧಿ ಭಾವನೆ ಎದುರಾಯಿತು. ಮಾತು ತಪ್ಪಿಸಲು ಎಂಬಂತೆ ‘ಈಗ ಎಲ್ಲಿಗೆ?’ ಎಂದೆ. ‘ಮನೆಗೆ. ತರಂಗಿಣಿ ಮೇಡಂ ಮನೆಯಿಂದಲೇ ಬರ್ತಿದ್ದೇನೆ. ಅವರ ಅಪ್ಪ ತೀರಿ ಹೋಗಿದ್ದರು. ಅದೆಲ್ಲಿಂದ ನನ್ನ
ಫೋನ್ ನಂಬರ್ ಸಿಕ್ಕಿತೋ, ಫೋನ್ ಮಾಡಿದ್ದರು. ‘ಪುರೋಹಿತರು ಸಿಕ್ಕುವುದು ಕಷ್ಟ.. ಇದೊಂದನ್ನ ಮಾಡಿಕೊಡಿ ಪ್ಲೀಸ್ ’ ಅಂದರು.
ತಿಥಿ ಮುಗೀತು. ಇವತ್ತು ಮಾಸಿಕ. ಗಳಗಳನೆ ಅತ್ತರು. ಯಾಕೋ ಕಾಣೇ. ಬಹುಶಃ ಅಪ್ಪನ ನೆನಪಿನಿಂದಿರಬೇಕು. ಧಾರಾಳವಾಗಿ ದಾನ, ಸಂಭಾವನೆ ಕೊಟ್ಟರು. ‘ನಿಮ್ಮ ತಂದೆಗೆ ಮೋಕ್ಷ ಸಿಗಲಿ. ನಿಮಗೆ ಪಿತೃವಿಯೋಗದ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ’ ಅಂತ ಹಾರೈಸಿ ಬಂದೆ.’ ಅವನ ಮಾತಿನ ನಡುವೆ ಆ ವಿಷಯದ ಬಗ್ಗೆೆ ಕೇಳಬೇಕಿತ್ತು.
ಅವನಿಗೆ ಅರ್ಥವಾಗಿತ್ತು. ‘ನೀನೊಂದು.. ಸಾವಿನ ಮನೆಯಲ್ಲಿ ಕಾರಣವಾ.. ಅಷ್ಟಕ್ಕೂ ಸಾವಿಗೆ ಒಂದು ಕಾರಣ ಇರ್ತದೇನೋ..
ಇದ್ದಂಗೆ ಕಂಡರೂ ಅದು ಸಾವಿನಲ್ಲೇ ಅಂತ್ಯ ಅಲ್ಲವಾ.. ಅದೂ ಸಹಾ ಹಾಗೆ ಸತ್ತು ಹೋದ ವಿಷಯ.. ಅಪರೂಪಕ್ಕೆ ನಿನ್ನ
ಭೇಟಿಯಾದದ್ದು ಬರೀ ಈ ಹಾಳು ಚರ್ಚೆಯೇ ಆಯ್ತು. ಸ್ವಲ್ಪ ಅರ್ಜೆಂಟಿದೆ ಮತ್ತೆ ಸಿಕ್ತೇನೆ. ನಾನು ಆಗಲೆ ಹೇಳಿದ ಪ್ರಾಜೆಕ್ಟ್
ಬಗ್ಗೆ ಮಾತನಾಡುವ ಆಯ್ತಾ. ಅದೇನಾದರೂ ಕ್ಲಿಕ್ ಆದರೆ ಈ ಉದ್ಯೋಗಾನೂ ಬಿಡಬಹುದು. ಇದು ನನ್ನ ಕಾರ್ಡು.
ಬಸ್ಸು ಹೊರಡ್ತಾ ಇದೆ’ ಎಂದು ವಿಸಿಟಿಂಗ್ ಕಾರ್ಡ್ ಕೈಗಿತ್ತು ಉತ್ತರಕ್ಕೆ ಕಾಯದೇ ನಡೆದಿದ್ದ. ಕಾರ್ಡಿನ ಮೇಲೆ ಸದಾನಂದ ಉರುಫ್ ಧರ್ಮೇಂದ್ರರಾಜ, ಪುರೋಹಿತರು ಎಂದಿತ್ತು. ಕಂಬನಿಯಿಂದ ಮಂಜಾದ ಕಣ್ಣು ಗುರುತಿಸಲು ಹೆಣಗಾಡಿದರೂ ಸೋಲಲಿಲ್ಲ.