Sunday, 24th November 2024

ಸಿದ್ಧಲಿಂಗಯ್ಯ ಅವರ ಪಂಚೆ ಪುರಾಣ

ಡಾ.ಶಿವರಾಜ ಬ್ಯಾಡರಹಳ್ಳಿ

ಕಳೆದ ವಾರ ನಮ್ಮನ್ನು ಅಗಲಿದ ಸಿದ್ಧಲಿಂಗಯ್ಯ ಅವರು ಎಲ್ಲರ ಒಡನಾಡಿ, ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಹಿರಿಯ ಕವಿ. ಅವರೊಡನೆ ಒಡನಾಡಿದವರ ಲೇಖಕರೊಬ್ಬರು ತಮ್ಮ ಒಂದೆರಡು ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ವಾರವಷ್ಟೇ ತೀರಿಕೊಂಡ ಡಾ.ಸಿದ್ಧಲಿಂಗಯ್ಯ ಅವರ ಜತೆ ಒಡನಾಡಿದ ನನ್ನಂತಹ ಸಾವಿರಾರು ಜನರಿಗೆ ಅವರ ಜತೆ ಮಾತಾಡುವುದು ಹರಟೆ ಹೊಡೆಯುವುದು ಎಂದರೆ ಬಲು ಹಿತವಾದ ಅನುಭವ. ಒಮ್ಮೆ ನಾನು ಮತ್ತು ಗೆಳೆಯ ಉದಂತ ಶಿವಕುಮಾರ್ ಇಬ್ಬರೂ ಕವಿಗಳ ಮನೆಗೆ ಹೋದೆವು. ನಾನು ಅದೂ ಇದೂ ಮಾತಾಡುತ್ತಾ ‘ಸರ್ ಮೊನ್ನೆ ಒಂದು ಕಾರ್ಯ ಕ್ರಮಕ್ಕೆ ಹಂಪನಾ ಬಂದಿದ್ದರು.

ಗರಿ ಗರಿ ಪಿ ಪಂಚೆ ಉಟ್ಕೊಂಡ್ ಒಳ್ಳೆ ಮಧುಮಗನ್ ತರ ಕಾಣುತ್ತಿದ್ದರು’ಅಂದೆ . ಅದಕ್ಕೆ ‘ಅವರು ನನಗೂ ಒಂದು ಪಂಚೆ ಉಟ್ಟು ಕೊಳ್ಳಬೇಕು ಅನ್ನೋ ಆಸೆ ಇದೆ’ ಅಂದರು. ನಾನು ‘ಸರ್ ಹಲವಾರು ಕಾರ್ಯಕ್ರಮಗಳಿಗೆ ಹೋಗ್ತೀರಿ, ಒಂದು ದಿನ ಪಂಚೆ ಹಾಕೊಂಡ್ ಹೋಗಿ ಸರ್’ ಅಂದೆ. ಆಗ ನೀವೇ ಪಂಚೆ ತಂದುಕೊಡಿ ಅಂದರು. ಅವರೇ ಬಾಯಿ ಬಿಟ್ಟು ಕೇಳಿದಾಗ ಸರಿ ಆಗಲಿ ಸರ್ ನಾಳೆಯೇ ತಂದುಕೊಡುವುದಾಗಿ ಹೇಳಿ ವಾಪಾಸು ಬಂದೆವು.

ನನಗೆ ಮತ್ತು ಶಿವಕುಮಾರ್‌ಗೆ ಎಲ್ಲಿಲ್ಲದ ಅಚ್ಚರಿ, ನಗೆ, ಸಂತೋಷ. ಕುಳ್ಳಗಿನ ಕವಿ ಸಿದ್ಧಲಿಂಗಯ್ಯ ಅವರು ಪಂಚೆ ಉಟ್ಟುಕೊಂಡು ತಿರುಗಾಡಿದರೆ ಹೇಗೆ ಕಾಣಬಹುದು! ಮನೆಯಲ್ಲಿ ಮೇಡಂ ಅವರು ಹೇಗೆ ಪ್ರತಿಕ್ರಿಯಿಸಬಹುದು! ಎಂಬ ಕುತೂಹಲ. ಮಾರನೇ ದಿನ ನಾನು ಶಿವಕುಮಾರ್ ರಾಜ ರಾಜೇಶ್ವರಿ ನಗರದ ಸುತ್ತೆಲ್ಲ ಸುತ್ತಾಡಿ ಬಟ್ಟೆ ಅಂಗಡಿಗಳನ್ನೆಲ್ಲ ತಲಾಶ್ ಮಾಡಿದೆವು. ಜವಳಿ ಅಂಗಡಿಯಲ್ಲಿ ವಿವಿಧ ಬಣ್ಣದ ಪಂಚೆಯನ್ನು ತೋರಿಸುತ್ತಿದ್ದರು. ಅವೆಲ್ಲವೂ ದೊಡ್ಡವೂ ಉದ್ದವೂ ಆಗಿದ್ದವು. ನಾವು ಆದಷ್ಟು ಚಿಕ್ಕದಾಗಿರೋದನ್ನು ತೋರಿಸಿ ಎಂದರೆ ‘ರೀ ಮೊದಲೇ ಹೇಳಬಾರದೇ ಚಿಕ್ಕ ಮಕ್ಕಳಿಗೆ ಅಂತ’ ಎಂದು ರೇಗಿಬಿಟ್ಟರು, ಅಂಗಡಿ ಯವರು.

‘ಸರ್ ಪಂಚೆ ಬೇಕಾಗಿರೋದು ದೊಡ್ಡೋರಿಗೆನೇ’ ಅಂದೆ. ಮತ್ತೆ ಅದಕ್ಕೆ ಸಿಟ್ಟಾದ ಅಂಗಡಿಯವನು ‘ಇಲ್ಲ ನಮ್ಮಲ್ಲಿ ಸಿಗೋದಿಲ್ಲ’ ಅಂದ. ನಾವು ಪೇಚಿಗೆ ಸಿಕ್ಕಂತೆ ಮತ್ತೊಂದು ಅಂಗಡಿಗೆ ಹೋಗಿ, ತಾಪತ್ರಯವೇ ಬೇಡ ಎಂದು ಮೊದಲೇ ‘ಸಣ್ಣ ಹುಡುಗರಿಗೆ ಪಂಚೆ ಬೇಕು’ ಅಂದುಬಿಟ್ಟೆವು. ಅಂಗಡಿಯವರು ಕೂತ್ಕೊಳ್ಳಿ ಅಂದು ಚಿಕ್ಕ ಮಕ್ಕಳು ತೊಡುವ ಸಣ್ಣ ಪಂಚೆಯನ್ನು ತೋರಿಸಿ ‘ಇದಾಗತ್ತಾ ನೋಡಿ’ ಅಂತ ತೋರಿಸುತ್ತಿರುವಾಗ ನಾನು ಮತ್ತು ಶಿವಕುಮಾರ್ ಇಬ್ಬರೂ, ಸಿದ್ಧಲಿಂಗಯ್ಯ ಅವರ ಸೈಜ್ ಕಲ್ಪಿಸಿ ಕೊಂಡು ಒಂದು ಸುಮಾರಾದ ಕಾಟನ್ ಪಂಚೆಯನ್ನು ಆಯ್ಕೆ ಮಾಡಿ ತೆಗೆದುಕೊಂಡು ಬಂದೆವು.

ನಾವು ತಂದ ಕಾಟನ್ ಪಂಚೆ ಗುರುಗಳಿಗೆ ಸರಿಯಾಗಿ ಆಗಬಹುದು ಎಂದು ಭಾವಿಸಿಕೊಂಡೇ ಮನೆಗೆ ಹೋದೆವು. ಗುರುಗಳು ಮನೆಯಲ್ಲಿಯೇ ಇದ್ದರು. ಪಂಚೆ ನೋಡಿ ತುಂಬಾ ಖುಷಿಯಾದ ಗುರುಗಳು ಪಂಚೆ ಕವರನ್ನು ಬಿಚ್ಚಲು ಹೇಳಿದರು. ನಾನು ಬಿಚ್ಚಿ ಅವರ ಸೊಂಟದ ಅಳತೆಗೆ ಪಂಚೆಯನ್ನು ಇಟ್ಟು ನೋಡಿದರೆ ಹೊಟ್ಟೆಯಿಂದ ಕಾಲಿನವರೆಗೆ ಉದ್ಧವಿತ್ತು.‘ಚೆನ್ನಾಗಿದೆ ಆದರೆ ಇದರ ಉದ್ದ ಇಲ್ಲವಲ್ಲನಾನು’ ಅಂದರು. ಅದು ತುಸು ಉದ್ದವೇ ಇತ್ತು. ಆಮೇಲೆ ಬಿಡಿ ಇದನ್ನು‘ನನ್ನಅಳತೆಗೆ ಕತ್ತರಿಸಿ ಕಾರ್ಯ ಕ್ರಮ ಕ್ಕೆ ಉಟ್ಟುಕೊಂಡು ಹೋಗುವ ಪ್ರಯತ್ನಮಾಡುವೆ’ ಎಂದು ಭರವಸೆ ಕೊಟ್ಟರು.

ಆಮೇಲೆ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾಗ ನಾವು ಪಂಚೆಯಲ್ಲಿ ಕವಿಗಳು ಇವತ್ತು ಕಾಣಿಸಿ ಕೊಳ್ಳುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದೆವು. ಆದ್ರೆ ಕವಿಗಳು ಎಂದೂ ಪಂಚೆ ಉಡಲಿಲ್ಲ! ಪಂಚೆ ಮೇಲೆ ಮೋಹ ಮಾತ್ರ ಇತ್ತು. ಚೋಮನ ಮಕ್ಕಳು ಮತ್ತು ಅಡಿಗರ ಹಾಡು ಹಲವಾರು ಸಾರಿ ನಾನು ಗೆಳೆಯರ ಜೊತೆ ಸಿದ್ಧಲಿಂಗಯ್ಯ ಅವರ ಮನೆಗೆ ಹೋದಾಗೆಲ್ಲ ಅವರದೇ ರಚನೆಯಾದ ‘ಚೋಮನ ಮಕ್ಕಳ ಹಾಡು, ಕಾಸನು ಬೀಸಿ ಒಲವಿನ ಬೆಲೆಯನು, ಗೆಳತಿ ಓ ಗೆಳತಿ’ ಹೀಗೆ ಹಲವು ಹಾಡುಗಳನ್ನು ಹಾಡುವಂತೆ ಹೇಳುತ್ತಿದ್ದರು.

ಚೋಮನ ಮಕ್ಕಳ ಹಾಡು ಹಾಡುವಾಗ ಧ್ಯಾನಸ್ಥ ಸ್ಥಿತಿಯಲ್ಲಿ ಆಸ್ವಾದಿಸುತ್ತಿದ್ದರು. ಹಲವಾರು ದಿನಗಳು ಅವರ ಮುಂದೆ ಮೈ ಮರೆತು ಹಾಡುತ್ತಿದ್ದೆ. ತುಂಬಾ ಖುಷಿ ಪಡುತ್ತಿದ್ದರು. ಒಮ್ಮೆ ಸಿದ್ಧಲಿಂಗಯ್ಯ ಅವರ ಮಗಳಾದ ಡಾ.ಮಾನಸ ಅವರನ್ನು ತನ್ನ ಪಕ್ಕ ಕೂರಿಸಿಕೊಂಡು ನಾನು ಹಾಡುವ ಹಾಡನ್ನುತನ್ಮಯತೆಯಿಂದ ಕೇಳಿದ್ದರು.ಆ ಹಾಡಿನಲ್ಲಿ ‘ಅಪ್ಪನ ಬೆವರಿನ ರಕ್ತವು ಸೋರಿ ಕೆಂಪಾದವು ಹೂವು’ ಎಂಬ ಸಾಲು ಕೇಳುವಾಗ ತುಂಬಾ ಭಾವುಕರಾಗುತ್ತಿದ್ದರು. ನಾನೂ ಕೂಡ ಅವರ ಕಣ್ಣುಗಳನ್ನೇ ಗಮನಿಸುತ್ತಿದ್ದೆ. ಇದೆಲ್ಲವೂ ಹಲವರ ಸಮ್ಮುಖದಲ್ಲಿ ನಡೆಯುತ್ತಿತ್ತು. ಕೊನೆಯಲ್ಲಿ ಅಡಿಗರ ‘ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ’ ಎನ್ನುವ ಪದ್ಯವನ್ನು ಕೇಳಿ ಆನಂದ ಪಡುತ್ತಿದ್ದರು.

ನಾನು ಮೊದಲಿಗೆ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಹಾಡಿದ್ದನ್ನು ಕೇಳಿದ್ದ ಸಿದ್ದಲಿಂಗಯ್ಯ ಅವರು ಆ ಹಾಡಿನ ಮಾಧುರ್ಯ, ಅರ್ಥಕ್ಕೆ ಬೆರಗಾಗುತ್ತಿದ್ದರು. ಸಂಜೆಯ ಹೊತ್ತಲ್ಲಿ ಮುದಲ್ ವಿಜಯ್‌ಗೆ ಫೋನ್ ಮಾಡಿ ‘ಶಿವರಾಜ್ ಹಾಡು ಕೇಳಬೇಕಲ್ಲ’ಎಂದು ಹೇಳಿ ನನ್ನ ಬರಮಾಡಿಕೊಳ್ಳುತ್ತಿದ್ದರು. ಅವರ ಮುಂದೆ ಹಾಡಿದ ಹಾಡುಗಳಿಗೆ ಲೆಕ್ಕವಿಲ್ಲ. ಅವರ ಲೈಬ್ರರಿಯಲ್ಲಿ ಕೂತು ಹರಟೆ ಹೊಡೆದ ಸಮಯಕ್ಕೆ ಲೆಕ್ಕವಿಲ್ಲ. ಹೊರಗೆ ಎಲ್ಲಿಯೇ ಭೇಟಿಯಾದರೂ ಬೇರೆಯವರಿಗೆ ‘ಶಿವರಾಜ್ ಒಳ್ಳೆ ಸಿಂಗರ್ ’ ಎಂದೇ ಪರಿಚಯಿಸುತ್ತಿದ್ದರು.

ಕಳೆದ ವಾರ ಅಂಬೇಡ್ಕರ್ ಅಧ್ಯಯನ ಕೇಂದ್ರದ ಮುಂದೆ ಇರಿಸಿದ ಅವರ ಪಾರ್ಥಿವ ಶರೀರದ ಮುಂದೆ ನಿಂತು ಈ ಹಾಡುಗಳನ್ನು ಕೊನೆಯ ಬಾರಿ ಅವರೆದುರು ಹಾಡುವ ಗಳಿಗೆ ಇಷ್ಟು ಬೇಗ ಬರುತ್ತದೆ ಎಂದು ಊಹಿಸಿರಲಿಲ್ಲ. ಹೀಗೆ ಗುರುಗಳ ಜೊತೆ ಒಡನಾಡಿದ ನೂರಾರು ನೆನಪುಗಳು ಒತ್ತರಿಸಿಕೊಂಡು ಬರುತ್ತವೆ. ಕಣ್ಣು ತೇವಗೊಳ್ಳುತ್ತವೆ.