Saturday, 14th December 2024

ಮಾನವೀಯತೆ ಎತ್ತಿ ಹಿಡಿದ ಕವಿ

ಡಾ.ಮನು ಬಳಿಗಾರ್‌

ಅವರ ಸಾಹಿತ್ಯ ಮೂಲತಃ ಮಾನವೀಯತೆ ಮತ್ತು ಸಮಾನತೆ ಒಟ್ಟಾಗಿಸಿಕೊಂಡೇ ಹೊರಬಂದಿದೆ. ಅದು ನೋವುಂಡ ವರ, ತುಳಿತಕ್ಕೊಳಗಾದವರ, ಶೋಷಿತರ, ಅವಮಾನಿತರ ನಿಜಧ್ವನಿ.

ಸಿದ್ಧಲಿಂಗಯ್ಯ ಅವರು ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರನ್ನು ದಲಿತ ಕವಿ ಅಥವಾ ಬಂಡಾಯ ಕವಿ ಎಂದು ಕರೆಯುವುದಕ್ಕಿಂತ ಮಾನವೀಯತೆಯನ್ನು ಪ್ರತಿಪಾದಿಸಿದ ಕವಿ ಎಂದು ಬಣ್ಣಿಸುವುದು ಸೂಕ್ತ. ಆ ದೃಷ್ಟಿಯಿಂದ ಅವರದು ಆದಿಕವಿ ಪಂಪನ ಹಾದಿ. ಅದು ಆನೆ ನಡೆದ ದಾರಿ.

ಕನ್ನಡ ಕಾವ್ಯಕ್ಕೆ ಅವರು ಹೊಸ ಸಂವೇದನೆಯನ್ನು ಕೊಟ್ಟರು. ಅವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನ ಕೇವಲ ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ ಇಡೀ ಭಾರತೀಯ ಸಾಹಿತ್ಯದಲಿ ವಿಶಿಷ್ಟವಾದ ಸ್ಥಾನ ಗಳಿಸಿದ ಶ್ರೇಷ್ಠ ಕೃತಿ. ಸತು ಹೋದ ಸಂವೇದನೆಗಳನ್ನು ಬಡಿದೆಬ್ಬಿಸಿದ ಕಾವ್ಯವದು. ಅವರ ಇಡೀ ಸಾಹಿತ್ಯ ಸೃಷ್ಟಿಗೂ ಇದೇ ರೀತಿ ಒಂದು ಅನನ್ಯವಾದ ಸ್ಥಾನ ಇದೆ. ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ.

ಅನೇಕ ಸ್ಥಾನಮಾನಗಳೂ ಸಿಕ್ಕಿವೆ. ಅವುಗಳಿಗೆಲ್ಲ ಶಿಖರಪ್ರಾಯವಾದ ಕನ್ನಡದ ಜ್ಞಾನಪೀಠ ಎಂದೇ ಹೆಸರಾಗಿರುವ ಕ.ಸಾ.ಪ.
ನೀಡುವ ನೃಪತುಂಗ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ನನ್ನ ಅವರ ಒಡನಾಟ ಅನೇಕ ದಶಕಗಳದ್ದು. ಅವರ ನಮ್ರತೆ, ಜೀವನ ಪಿ ತಿ, ಹಾಸ್ಯಪ್ರಜ್ಞೆಗಳು ಅವರಿಗೇ ವಿಶಿಷ್ಟ. ವಿಧಿ ಅವರನ್ನು ನಮ್ಮಿಂದ ಕಸಿದುಕೊಂಡಿದೆ. ಸಿದ್ಧಲಿಂಗಯ್ಯ ಅವರಿಗೆ ಅವರೇ ಸಾಟಿ. ಅವರ ಜಾಗದಲ್ಲಿ ಇನ್ನೊಬ್ಬರನ್ನು ಊಹಿಸುವುದು ಸಾಧ್ಯವಿಲ್ಲ. ಆ ಅರ್ಥದಲ್ಲಿ ಅವರ ಸಾವು ನಿಜವಾಗಿಯೂ ತುಂಬಿಬಾರದ ನಷ್ಟ. ಈ ಹಿರಿಯ ಕವಿಯ ಅಕಾಲಿಕ ಅಗಲಿಕೆ ತೀರ ನೋವಿನದು. ಈ ಹೊತ್ತಿನಲ್ಲಿ ನನ್ನ ಅವರ ದೀರ್ಘಕಾಲದ ಒಡನಾಟದ ಬಗ್ಗೆ ಒಂದಿಷ್ಟು ಹಂಚಿಕೊಳ್ಳಬೇಕಿದೆ.

ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ / ಆಯುಕ್ತನಾಗಿದ್ದಾಗ ಡಾ. ಸಿದ್ದಲಿಂಗಯ್ಯನವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಸಮಗ್ರ ವಚನ ಸಂಪುಟಗಳ ಮರುಮುದ್ರಣ ಮಾಡುವ ವಿಚಾರ ಪುನಃ ಮೊಳತದ್ದೇ ಆಗ. ತದನಂತರ ಅದನ್ನು ಪೂರೈಸಿಯೂ ಆಯ್ತು. ಈ ಹೊತ್ತಿನಲಿ ನಡೆದ ಒಂದು ಪ್ರಸಂಗ ಈಗಲೂ ನನಗೆ ನೆನಪಿದೆ. ನಮ್ಮ ಇಲಾಖೆಯ ಕಾರ್ಯ ಕ್ರಮವೊಂದಕ್ಕೆ ಈ ಕವಿಗಳನ್ನು ಆಹ್ವಾನಿಸಿದ್ದೆವು. ಅದಕ್ಕಾಗಿ ಅವರಿಗೆ ಗೌರವಧನ ಮತ್ತು ಪ್ರಯಾಣ ಭತ್ಯೆ ಕೊಡಲಾಗಿತ್ತು.

2-3 ದಿನ ಬಿಟ್ಟು ನನ್ನ ಛೇಂಬರಿಗೆ ಬಂದ ಕವಿಗಳು ನಾವು ನೀಡಿದ ಅಂದಾಜು ಆರು ಸಾವಿರ ರೂಪಾಯಿಗಳನ್ನು ತಿರುಗಿ ಕೊಟ್ಟೇಬಿಟ್ಟರು. ಈ ಘಟನೆ ಸಣ್ಣದೆನಿಸಿದರೂ ಪರಿಶುದ್ಧತೆ ಕಾಯ್ದುಕೊಳ್ಳುವಲ್ಲಿ, ಅದೂ ಯಾರೂ ಗಮನಿಸದೇ ಇದ್ದಾಗ್ಯೂ, ಬಹು ಮುಖ್ಯವೆಂಬುದು ನನ್ನ ಅನಿಸಿಕೆ. ಪ್ರಖರ ವೈಚಾರಿಕತೆ ಹೊಂದಿದ್ದ ಸಿದ್ಧಲಿಂಗಯ್ಯನವರು ತಮ್ಮ ಬದುಕಿನ ಪ್ರಸಂಗ ಗಳನ್ನೇ ಹಾಸ್ಯಮಯವಾಗಿ ವರ್ಣಿಸುವದನ್ನು ಕರಗತ ಮಾಡಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಮಾಡಿದ ನೇಪಾಳದಲ್ಲಿ, ಆಮೇಲೆ ಬಹರೇನ್ ದೇಶಗಳಲ್ಲಿನ ಸಾಹಿತ್ಯ ಸಮ್ಮೇಳನ ಮತ್ತು ಕಾರ್ಯಕ್ರಮಗಳಲ್ಲಿ ಅವರು ನೀಡಿದ ವಿದ್ವತ್ಪೂರ್ಣ ಉಪನ್ಯಾಸ ಗಳಲ್ಲಿಯೂ ಪಾಯಸದಲ್ಲಿನ ಏಲಕ್ಕಿಯಂತೆ, ಸಿಹಿ ಹಾಲಿನಲ್ಲಿಯ ಕೇಸರಿಯಂತೆ ಕಂಗೊಳಿಸುತ್ತಿತ್ತು ಅವರ ಹಾಸ್ಯ ಲೇಪಿತ ಮಾತು ಗಳು.

ಗಹನ ವಿಷಯಗಳನ್ನು ಹೇಗೆ ಜನಸಾಮಾನ್ಯರಿಗೂ ಮುಟ್ಟಿಸಬೇಕೆಂಬುದಕ್ಕೆ ಇವರೊಂದು ಯಶಸ್ವಿ ಮಾದರಿ. ಬಹರೇನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಮತ್ತು ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಅವರ ಮಾತುಗಳನ್ನು ನೆನೆದು ಪುಳಕಿತ ರಾಗುತ್ತಿದ್ದರು. ಹಿರಿಯ ಕವಿ ಹೆಚ್. ಎಸ್. ವೆಂಕಟೇಶಮೂರ್ತಿಯವರು ನನಗೆ ದೂರವಾಣಿ ಕರೆ ಮಾಡಿ ನಮ್ಮ ನೇಪಾಳ ಪ್ರವಾಸದ ನೆನಪು ಮಾಡಿಕೊಂಡು, ದೇವರು ದೊಡ್ಡ ಅನ್ಯಾಯ ಮಾಡಿದನೆಂದೆನಿಸುತ್ತದೆ, ಈ ಕವಿಯನ್ನು ಇಷ್ಟು ಬೇಗ
ಕರೆಸಿಕೊಂಡು, ಎಂದು ಸಂತಾಪ ವ್ಯಕ್ತಪಡಿಸಿದರು.

ಯಾರ ಬಗ್ಗೆ ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ ಸಿದ್ಧಲಿಂಗಯ್ಯನವರು ಎಂದೂ ನಂಜಿನ ಮನೋಧರ್ಮದವರಾಗಿರಲಿಲ್ಲ. ಅವರದು ಚಿಕಿತ್ಸಕ ಗುಣ, ಔಷಧಿಯಂತೆ,  ಅಧರಕ್ಕೆ ಕಹಿ, ಉದರಕ್ಕೆ ಸಿಹಿ. ಅವರ ಪ್ರಾರಂಭಿಕ ಕವನಗಳಲ್ಲಿ ರೋಷ, ಆವೇಶ, ಪ್ರತಿಭಟನೆ ಜತೆ ‘ಇಕ್ರಲಾ ಒದೀರ‍್ಲಾ..’ ಎಂಬ ರಚನೆಗಳು ಬಂದಿದ್ದು ಸಹಜವಾದರೂ, ಅವರ ಒಟ್ಟಾರೆ ಸಾಹಿತ್ಯ ಮೂಲತಃ ಮಾನವೀಯತೆ ಮತ್ತು ಸಮಾನತೆ ಒಟ್ಟಾಗಿಸಿಕೊಂಡೇ ಹೊರಬಂದಿದೆ. ಅದು ನೋವುಂಡವರ, ತುಳಿತಕ್ಕೊಳಗಾದವರ, ಶೋಷಿತರ, ಅವಮಾನಿತರ ನಿಜಧ್ವನಿ.

ಅವರ ನಡತೆಯೂ ಅಷ್ಟೇ, ಒಬ್ಬನನ್ನು ಟೀಕೆ ಮಾಡುತ್ತಿರುವಾಗಲೂ, ಅವರ ಒಳ್ಳೆಯ ಗುಣಗಳನ್ನು ಮನಸಾರೆ ಹೊಗಳುತ್ತಿದ್ದರು. ಉಪಕಾರ ಸ್ಮರಣೆ ಅವರ ಇನ್ನೊಂದು ದೊಡ್ಡಗುಣ, ರಾಜಕೀಯದಲಿ ತಮ್ಮ ಗಾಡ್ ಫಾದರ್ ರಾಮಕೃಷ್ಣ ಹೆಗಡೆ, ಕರೆದು ನೌಕರಿಕೊಟ್ಟ ಜಿ.  ಸ್. ಶಿವರುದ್ರಪ್ಪ, ಕಠಿಣ ಸಮಯದಲ್ಲಿ ಸಹಾಯ ನೀಡಿ ಬರಗೂರು, ಚಂದ್ರಶೇಖರ ಕಂಬಾರ, ಸುಮತೀಂದ್ರ ನಾಡಿಗ್ ಮುಂತಾದವರನ್ನು ನಮ್ಮೆದುರು ನೆನೆಸುತ್ತಲೇ ಇದ್ದರು. ಈಗ ಈ ಕವಿಶ್ರೇಷ್ಠರು ನಮ್ಮ ನಡುವೆ ಇಲ್ಲವಲ್ಲ ಎಂಬುದನ್ನು
ಅರಗಿಸಿಕೊಳ್ಳಲೂ ಆಗದ ಅನೇಕ ದುಃಖ ದುಮ್ಮಾನಿತರಲ್ಲಿ ನಾನೂ ಒಬ್ಬನಾಗಿದ್ದೇನೆ.