Sunday, 15th December 2024

ಕೀಚಕನ ಸಂಹಾರಕ್ಕೆ ಮುನ್ನುಡಿ

(ಕಳೆದ ವಾರಗಳಲ್ಲಿ : ಅಜ್ಞಾತವಾಸವನ್ನು ಪೂರೈಸಲು ಹೊರಟ ಪಾಂಡವರು ಮಾರುವೇಷಗಳಲ್ಲಿ ವಿರಾಟನ ಅರಮನೆಯ ಊಳಿಗದಲ್ಲಿ ಸೇರಿಕೊಂಡರು. ದ್ರೌಪದಿಯು ವಿರಾಟನ ಪತ್ನಿಯ ಬಳಿ ಸೈರಂದ್ರಿಯಾಗಿ ಪ್ರಸಾಧನ ಕಾರ್ಯವನ್ನು ಕೈಗೊಂಡಿದ್ದ ಸಮಯದಲ್ಲಿ ರಾಣಿಯ ತಮ್ಮನೂ ವಿರಾಟನ ಸೇನಾಧಿಪತಿಯೂ ಆದಂತಹ ಕೀಚಕನು ಅವಳ ಸೌಂದರ್ಯಕ್ಕೆ ಮರುಳುಗೊಂಡು ಕಾಮಾತುರನಾಗಿ ಅವಳನ್ನು ವಶಪಡಿಸಿಕೊಳ್ಳಲೆಂದು ಪೀಡಿಸಿದ. ಅವನ ಕಾಟವನ್ನು ತಡೆಯಲಾಗದೆ ಸೈರಂದ್ರಿಯು ಭೀಮನಲ್ಲಿ ದೂರಿದಳು)

 

ಅಂದಿನಿರುಳು ದ್ರೌಪದಿಯು ಹೆದರುತಲಿ ಹೊರಟಳು ಕತ್ತಲ ಸಮಯದಲಿ
ಅಂದು ತನಗೆ ಒದಗಿದ ಸಂಕಷ್ಟವ ಹೇಳಿಕೊಳಲು ಬಲಭೀಮನಲಿ
ಭೀಮನು ನಿದ್ದೆಯು ಬಾರದೆ ಹೊರಳುತಲಿದ್ದನು ಪಾಕಶಾಲೆಯಲಿ
ಮೆಲ್ಲಗೆ ಅವನನು ತಟ್ಟಿ ಎಬ್ಬಿಸುತ ತಿಳಿಸಿದ್ದಳು ಮೆಲುದನಿಯಲ್ಲಿ
ಪಾಪಿ ಕೀಚಕನ ಪೀಡೆಯ ಕಳೆಯಲು ಬೇಡಿಕೆಯಿಟ್ಟಳು ಅವನಲ್ಲಿ
ಭೀಮನು ಹೇಳಿದ- `ನಾಳೆಯ ರಾತ್ರಿಗೆ ಬರಲಿ ಗರಡಿಮನೆ ಬಳಿಯಲ್ಲಿ
ಅಲ್ಲಿಯೆ ಅವನಿಗೆ ಬುದ್ಧಿಯ ಕಲಿಸುವೆ ಮತ್ತೆ ಹತ್ತಿರಕೆ ಬರದಂತೆ
ಎಲ್ಲವನ್ನೂ ನಾನು ನೋಡಿಕೊಳ್ಳುವೆನು ಮರಳಿರು ಚಿಂತೆಯು ಇರದಂತೆ’
ಭೀಮನ ಮಾತಲಿ ನಂಬಿಕೆಯಿರಿಸಿದ ದ್ರೌಪದಿ ಹೊರಟಳು ಮುದದಿಂದ
ನಾಳೆಯೆ ಅವನಿಗೆ ಮೂಡಿಹುದೆಂದಳು ಮಲ್ಲನು ಭೀಮನ ದಯೆಯಿಂದ||

ಮರುದಿನ ಕೀಚಕ ಮತ್ತೆ ಬಂದವನು ಅವಳನು ಕಾಡಲು ತೊಡಗಿದ್ದ
ನನ್ನ ಆಸೆಯನು ತೀರಿಸದಿದ್ದರೆ ನಿನ್ನ ಬಿಡೆನು ಬಡಬಡಿಸಿದ್ದ
ದ್ರೌಪದಿ ಮೆಲ್ಲಗೆ ನುಡಿದಳು ಅವನಿಗೆ- `ರಾತ್ರಿಯೆಲ್ಲ ಯೋಚನೆ ಮಾಡಿ
ನಿನ್ನ ಹೊಂದುವುದೆ ಸರಿಯೆಂದೆನಿಸಿತು ಎಲ್ಲವನ್ನು ದೂರಕೆ ದೂಡಿ
ನಾನು ಸಿಗಲಿಲ್ಲ ಎಂಬ ನಿರಾಶೆಯ ಮನಸಿನಿಂದ ದೂರಕೆ ದೂಡು
ಇಂದು ರಾತ್ರಿಯಲಿ ಗರಡಿಮನೆಯ ಬಳಿ ಬಂದು ನನ್ನನ್ನು ಜೊತೆಗೂಡು’
ಹನ್ನೊಂದು ತಿಂಗಳು ಆಗಲೇ ಮುಗಿದು ಇನ್ನೊಂದು ತಿಂಗಳು ಉಳಿದಿತ್ತು
ಅಜ್ಞಾತವಾಸದ ಅಂತ್ಯವು ಬರುತಿದೆ ಎನ್ನುವಾಗ ಇದು ನಡೆದಿತ್ತು||

ಕೀಚಕ ಕಾಟವ ತಡೆಯಲು ಆಗದೆ ದ್ರೌಪದಿ ದೂರಲು ಭೀಮನಿಗೆ
ಭೀಮನ ಸೂಚನೆ ಮೇರೆಗೆ ಮಡದಿಯು ಹೊರಸೂಸುತ್ತಲಿ ಮುಗುಳುನಗೆ
ದುಷ್ಟ ಕೀಚಕನ ಬರಹೇಳಿದ್ದಳು ಅಂದು ರಾತ್ರಿ ಗರಡಿಯಮನೆಗೆ
ಕೀಚಕನಿಗೆ ಬಲು ಸಂತಸವಾಯಿತು ಒಲಿದಳೆಂದು ಚೆಲುವೆಯು ತನಗೆ
ಕೃಷ್ಣಸುಂದರಿಯು ಇಷ್ಟು ಬೇಗ ತನಗೊಲಿವಳೆಂದು ಬಗೆದಿರಲಿಲ್ಲ
ಇಷ್ಟಪಟ್ಟವಳ ದೊರಕಿಸಿಕೊಳುವುದು ಎಷ್ಟು ಕಷ್ಟ ಅವನೇ ಬಲ್ಲ
ತನ್ನಯ ಪಾಲಿನ ಮೃತ್ಯುದೇವತೆಯು ಎಂಬುದವನು ತಿಳಿದಿರಲಿಲ್ಲ
ನಾರಿಯು ತನ್ನಯ ಕೊರಳನು ಕೊಯ್ಯುವ ಚೂರಿಯೆಂಬ ಅರಿವಿರಲಿಲ್ಲ
ಹಿಗ್ಗಿನಿಂದ ಅಂದೊಂದು ಹಗಲನ್ನು ಕಳೆದನೊಂದು ತಿಂಗಳಿನಂತೆ
ರಾತ್ರಿಯಾಗುವುದು ಎಂದಿಗೋ ಎಂದು ಒಂದೇ ಅವನೆದುರಿನ ಚಿಂತೆ
ಸಂಜೆಯಾಗುತಿರೆ ಸುಗಂಧದ್ರವ್ಯವ ಪೂಸಿಕೊಂಡು ಮೈ ಕೈಗೆಲ್ಲ
ಶುಭ್ರ ವಸ್ತ್ರ ಆಭರಣ ಧರಿಸಿದನು ಪುಳಕಗೊಂಡು ತನುಮನವೆಲ್ಲ
ತನ್ನ ರೂಪವನು ನೋಡಿಕೊಂಡನವ ಮನವು ಅರಳಿರಲು ಸೊಗಸಾಗಿ
ನಂದಿಹೋಗುತಿಹÀ ದೀಪದಂಥವನು ಬೆಳಗತೊಡಗಿದನು ದಿವಿನಾಗಿ||

ಕೋಮಲದೇಹದ ಭಾಮಿನಿ ಬಾಳಲಿ ಬಂದರೆ ಬದುಕೇ ಸುಂದರವು
ಭಾಮಿನಿ ಬಳುಕುತ ನಡೆಯುತಲಿದ್ದರೆ ನಯನಮನೋಹರ ಬಂಧುರವು
ಕೋಮಲೆ ಕನಸಿನ ಕನ್ನಿಕೆಯಾಗುತ ಕೋರಿಕೆ ತೀರಿಸೆ ಸುಮಧುರವು
ಕಾಮನೆ ಕರಗದೆ ಕೆರಳುತಲಿರುವುದು ಬಯಸುತಲಿರುವುದು ಅನುದಿನವು||

ಇತ್ತ ಭೀಮ ಉತ್ಸಾಹವ ಹೊಂದುತ ಗರಡಿಮನೆಯೆಡೆಗೆ ಬಂದಿದ್ದ
ಕತ್ತಲಾಗುತಿರೆ ಮೆತ್ತಗೆ ಬಂದವ ಮನೆಯ ಒಳಗಡೆಗೆ ಹೊಕ್ಕಿದ್ದ
ಸುಗಂಧದ್ರವ್ಯವ ಮೈಗೆ ಬಳಿದವನು ಸೀರೆಯೊಂದನ್ನು ಹೊದ್ದಿದ್ದ
ದೇಹಕಿಂದು ಕಸರತ್ತು ದೊರೆಯುವುದು ಎಂದು ಬಹಳ ಮುದಗೊಂಡಿದ್ದ
ಕತ್ತಲು ತುಂಬಿದ ಮೂಲೆಯೊಂದರಲಿ ಕುಳಿತ ಹಸಿದ ಹುಲಿ ತೆರದಲ್ಲಿ
ಸತ್ವತುಂಬಿರುವ ಬೇಟೆಯೊಂದು ತನಗಂದು ದಕ್ಕುತಿಹ ಖುಷಿಯಲ್ಲಿ
ಹಿಡಿಂಬಾಸುರನ, ಬಕನ ಕೊಂದಾಗ ತನ್ನ ದೇಹಕ್ಕೆ ವ್ಯಾಯಾಮ
ಬಹಳ ದಿನವು ಕಳೆದಾದ ನಂತರದಿ ದೊರಕಿತೆಂದುಕೊಂಡನು ಭೀಮ
ತನ್ನ ಭುಜಗಳನು ನೋಡಿಕೊಂಡನವ ಹೆಮ್ಮೆಯಿಂದ ಬಲು ಬೀಗುತ್ತ
ಮೆಲ್ಲನೆ ತೋಳನು ತಟ್ಟಿಕೊಂಡನವ ಮಾಂಸಖಂಡ ಹುರಿಗೊಳಿಸುತ್ತ
ಕೀಚಕ ಮೆಲ್ಲಗೆ ಶಿಳ್ಳೆಯ ಹಾಕುತ ಬಂದನು ಗರಡಿಯಮನೆಯೊಳಗೆ
ಮಬ್ಬುಗತ್ತಲಲಿ ಕುಳಿತಿದ್ದಂತಹ ಆಕೃತಿ ಕಂಡನು ಅದರೊಳಗೆ
ಘಮ್ಮನೆಂಬ ಸೌಗಂಧವು ಹೊಮ್ಮಿತು ಕುಳಿತ ಆಕೃತಿಯ ಕಡೆಯಿಂದ
ಹೆಮ್ಮೆಯಿಂದ ಅವನೊಮ್ಮೆ ನೋಡಿದನು ತನ್ನದೆಂಬ ನಿರ್ಭಿಡೆಯಿಂದ
ಸೈರಂದ್ರಿಯು ತನಗಿಂತಲೂ ಮೊದಲೆ ಬಂದು ಕಾದಿಹಳು ಎನ್ನುತ್ತ
ಹಿಂದಿನಿಂದ ಬಹುಮೆಲ್ಲಗೆ ನಡೆದನು ಸವಿ ತಾಂಬೂಲವ ಮೆಲ್ಲುತ್ತ
ಹತ್ತಿರಾದವನು ಬಾಚಿ ತಬ್ಬಿದನು ಕತ್ತಲಲ್ಲಿ ಆಕೃತಿಯನ್ನು
ಮತ್ತೆ ಬೆಚ್ಚಿದನು ಗಟ್ಟಿದೇಹವನು ಮುಟ್ಟಿನೋಡಿದನು ಒರಟನ್ನು
ಭೀಮನು ಥಟ್ಟನೆ ಎದ್ದುನಿಂತವನು ಅವನ ಕೈಗಳನು ಬಿಗಿಹಿಡಿದು
ಎಳೆದು ಕೆಡವಿದನು ಮೈಯ ತಡವಿದನು ದುಷ್ಟ ಕಾಮುಕನ ಸದೆಬಡಿದು
ಅನಿರೀಕ್ಷಿತ ದಾಳಿಗೆ ಬೆಬ್ಬಳಿಸುತ ಕೀಚಕ ಎದ್ದನು ತಡಬಡಿಸಿ
ಎದುರಲಿ ಭೀಮಾಕೃತಿಯನು ಕಂಡವ ಮುಂದಿನ ಕ್ಷಣದಲಿ ಚೇತರಿಸಿ
ಸೈರಂದ್ರಿಯ ಗಂಧರ್ವನು ಇವನೇ ಎಂದುಕೊಂಡು ತೋಳ್ತಟ್ಟಿದನು
ಭೀಮಸೇನನೂ ಅವನಿಗೆದುರಾಗಿ ತನ್ನ ತೊಡೆಯನ್ನು ತಟ್ಟಿದನು
ಕೀಚಕನೆಂದರೆ ಸಾಮಾನ್ಯನಲ್ಲ ಎಂಬುದು ಅವನಿಗೆ ಗೊತ್ತಿತ್ತು
ವಿರಾಟರಾಯನ ಸೈನ್ಯಾಧಿಪತಿ ಎಂಬುದು ಮೊದಲೇ ತಿಳಿದಿತ್ತು
ಹಿಡಿಂಬ ಬಕರÀನು ಕೊಂದದ್ದಾದರೂ ಮಾಡಿ ಒರಟು ಹೋರಾಟವನು
ಆದರೆ ಕೀಚಕ ಅಂಥವನಲ್ಲದೆ ಯುದ್ಧವಿದ್ಯೆಗಳ ಅರಿತವನು
ಭೀಮನು ಕ್ಷಣದಲಿ ಲೆಕ್ಕಾಚಾರವ ಹಾಕಿದ ತನ್ನಯ ಮನದಲ್ಲಿ
ಚಾಕಚಕ್ಯತೆಯ ಹೋರಾಟವನೇ ಮಾಡಬೇಕು ಇವನೆದುರಲ್ಲಿ||