Thursday, 12th December 2024

ಆಣೆ

ಟಿ.ಎಸ್‌.ಶ್ರವಣ ಕುಮಾರಿ

ಕೈಮುಗಿದು ನಿಂತ ಮೂಕಾಂಬೆಗೆ ಏನು ಮಾತಾಡಬೇಕು? ಏಕೆ ಮಾತಾಡಬೇಕು ? ಎಂದು ಅರ್ಥವಾಗದೆ ಹಾಗೆಯೇ ಯೋಚನೆಯಲ್ಲಿ ಮುಳುಗಿಹೋದಳು.

ಮೂಕಾಂಬ ಮೊದಲು ಹೀಗಿರಲಿಲ್ಲ. ಅವಳು ಇದ್ದ ಕಡೆಯೆ ನಗು, ಕುಶಾಲು, ಮಾತು, ಮಾತು ಕಲ್ಲನ್ನಾದರೂ ಮಾತಾಡಿಸಿಕೊಂಡು ಬರುವ ವಾಚಾಳಿ. ಮದುವೆ,
ಮುಂಜಿ, ಸಮಾರಂಭಗಳಲ್ಲಿ ಅವಳು ಬಂದಳೆಂದರೆ ಸಾಕು ಒಂದು ದೊಡ್ಡ ಸಂಭ್ರಮ. ಹತ್ತೂರಿನ ವಿಷಯವನ್ನು ಈಗಷ್ಟೇ, ತಾನೇ ನೋಡಿಬಂದಷ್ಟು ಸಡಗರ ದಿಂದ, ಉತ್ಸಾಹದಿಂದ ಕತೆಕತೆಯಾಗಿ ಹೇಳತೊಡಗುತ್ತಿದ್ದಳು.

ಹಿಗ್ಗಿನ ಮೂಟೆಯಂತಿದ್ದ ಅವಳ ಆಗಮನದಿಂದ ಎಲ್ಲರೂ ಖುಷಿಪಡುವವರೇ ಆಗಿದ್ದರು. ಮನೆಯದರೂ ಅಷ್ಟೇ ಅವಳು ಎದ್ದಿರುವಷ್ಟು ಹೊತ್ತೂ ಏನೋ ಮಾತು, ಹರಟೆ, ಬೈಗುಳ ಕಡೆಗೆ ಏನೂ ಇಲ್ಲದಿದ್ದರೆ ತನಗೆ ಬಂದ ರೀತಿಯಲ್ಲಿ ಹಾಡಿನ ಗುನುಗು ತುಂಬಿದ ಮನೆಯಲ್ಲಿ ಎಲ್ಲರಿಗೂ ಇದು ಅದೆಷ್ಟು ಒಗ್ಗಿಹೋಗಿತ್ತು ಅಂದರೆ ಒಂದಷ್ಟು ಹೊತ್ತು ನಿಶ್ಯಬ್ದವಾಗಿದ್ದರೆ ಅವಳು ಮನೆಯಲ್ಲಿಲ್ಲ, ಎಲ್ಲಿಗೋ ಹೋಗಿದ್ದಾಳೆ ಎನ್ನುವ ತೀರ್ಮಾನಕ್ಕೆ ಬಂದಿರುತ್ತಿದ್ದರು. ಪುಣ್ಯಕ್ಕೆ ನಿದ್ರೆಯಲ್ಲಿ ಕನವರಿಸುವ ಅಭ್ಯಾಸವೊಂದು ಅವಳಿಗಿರಲಿಲ್ಲ. ಹಾಗಾಗಿ ರಾತ್ರಿಯ ನಿದ್ರೆಗೆ ಅವಳಿಂದ ಭಂಗವಿರಲಿಲ್ಲ. ಕೂಡುಕುಟುಂಬದ ದೊಡ್ಡ ಸೊಸೆಯಾಗಿದ್ದು ಮೈದುನ, ವಾರಗಿತ್ತಿ
ಯರು, ಮದುವೆಯಾಗದ ನಾದಿನಿ, ತನ್ನೆರಡು ಗಂಡು ಮಕ್ಕಳು, ಒಬ್ಬ ಮಗಳು, ಇವರೆಲ್ಲರ ಜೊತೆಗೆ ಮನೆಕೆಲಸದವರು, ಆಳು ಕಾಳು ಎಲ್ಲರೂ ಇವಳ ಮಾತಿನ ಮಂತ್ರದಂಡಕ್ಕೆ ಒಳಗಾಗಿದ್ದವರೆ!

ಏನೆಂದರೆ ಕುಹಕ, ಮತ್ಸರದ ಬುದ್ಧಿಯಿಲ್ಲದೆ ನೇರ ಮಾತು. ಹಾಗಾಗಿ ಅವಳಿಗೆ ಎದುರಾಡಲು ಯಾರಿಗೂ ಏನೂ ಇರುತ್ತಿರಲಿಲ್ಲ. ಆದರೂ ಯಾರಾದರೊಬ್ಬಳು ಸೊಸೆ ಹೀಗೆ ಪ್ರಾತಿನಿಧ್ಯವನ್ನು ಸ್ಥಾಪಿಸಿಕೊಂಡರೆ ಉಳಿದ ಸೊಸೆಯರಿಗೆ ಅದು ಪಥ್ಯವಾಗುತ್ತೆಯೇ? ಸಹಜವಾಗೇ ಒಳಗೊಳಗೇ ಸಣ್ಣಪುಟ್ಟ ಕಿಸುರುಗಳು
ಆಗಾಗ ಕಿಡಿಕಾರಿ ಅವರ ಗಂಡಂದಿರನ್ನೂ ತಲುಪಿದರೂ ಹಾಗೇ ತಣ್ಣಗಾಗುತ್ತಿದ್ದವು. ಗಂಡ ವಿಶ್ವೇಶ್ವರ ಭಟ್ಟರು ಕಾಶಿ ವಿಶ್ವನಾಥನ ಅನುಗ್ರಹದಿಂದ
ಹುಟ್ಟಿದ್ದಂತೆ. ಮದುವೆಯಾಗಿ ಐದಾರು ವರ್ಷ ಕಳೆದರೂ ಮಕ್ಕಳಾಗದಿದ್ದಾಗ ತಂದೆ ಕಾಶೀನಾಥ ಭಟ್ಟರು ವಿಶ್ವೇಶ್ವರನಿಗೆ ಹರಕೆ ಹೊತ್ತ ತಿಂಗಳಿಗೇ ಅಂಬಮ್ಮ ಬಸಿರಾಗಿ ಗಂಡುಕೂಸನ್ನು ಹಡೆದಾಗ ಇದು ಅವನ ಅನುಗ್ರಹವಲ್ಲದೆ ಮತ್ತೇನು!

ಹಾಗಾಗಿ ಹುಟ್ಟಿದ ಮಗು ವಿಶ್ವೇಶ್ವರನ ಹೆಸರಿಟ್ಟುಕೊಂಡೇ ಹುಟ್ಟಿದ. ಹಿಂದೆಯೇ ಎರಡೆರಡು ವರ್ಷಗಳ ಅಂತರದಲ್ಲಿ ಶ್ರೀನಿವಾಸ, ವಾಸುದೇವ, ವಾರಿಧಿ, ಚಂದ್ರಶೇಖರ ಎಲ್ಲರೂ ಒಬ್ಬೊಬ್ಬರಾಗಿ ಬಂದು ಮಕ್ಕಳೇ ಇಲ್ಲದ ಮನೆಯನ್ನು ಸಂಪೂರ್ಣವಾಗಿ ತುಂಬಿದರು. ಇತ್ತ ಪಕ್ಕದ ಹೊಸಳ್ಳಿಯಲ್ಲಿದ್ದ ನೀಲಕಂಠ ಜೋಯಿಸರಿಗೆ ಇಬ್ಬರು ಗಂಡು ಮಕ್ಕಳಾದ ಮೇಲೆ ಹುಟ್ಟಿದವಳು ಮೂಕಾಂಬ. ಹುಟ್ಟಿದಾಗ ರತ್ನ ಎಂದು ಹೆಸರಿಟ್ಟಿದ್ದರಂತೆ. ಮಗು ಎರಡು ವರ್ಷವಾದರೂ
ಮಾತೇ ಆಡದಾದಾಗ ಕೊಲ್ಲೂರು ಮೂಕಾಂಬೆಗೆ ‘ಮಾತು ಕರುಣಿಸು ತಾಯೆ, ನಿನ್ನ ಹೆಸರಿಂದಲೇ ಕರೀತೀವಿ’ ಎಂದು ಹರಸಿಕೊಂಡ ತಿಂಗಳಿಗೇ ಮಣಿಮಣಿ ಯಾಗಿ ಮಾತನಾಡಲು ಶುರುಮಾಡಬೇಕೆ! ಇಂತ ದೇವಿಯ ಅನುಗ್ರಹದಿಂದ ಮಾತು ತಂದುಕೊಂಡ ಮೂಕಾಂಬೆಗೂ, ವಿಶ್ವನಾಥನ ದಯದಿಂದ ಹುಟ್ಟಿದ ವಿಶ್ವೇಶ್ವರನಿಗೂ ವಿವಾಹದ ಯೋಗವಿದ್ದುದು ದೈವಸಂಕಲ್ಪವೇ ತಾನೆ!

ಹಾಗೆ ಮನೆ ತುಂಬಿದ ಮೂಕಾಂಬೆ ಮನೆಯ ಎಲ್ಲರ ಅಚ್ಚುಮೆಚ್ಚಿನ ಸೊಸೆಯಾದದ್ದೂ ಅಚ್ಚರಿಯೇನಿಲ್ಲ. ಅತ್ತೆ, ಮಾವ  ತೀರಿಕೊಂಡ ಮೇಲೂ ಸಮರ್ಥವಾಗಿ ಮನೆವಾರ್ತೆಯನ್ನು ತೂಗಿಸಿಕೊಂಡು ಹೋಗುತ್ತಾ ಸೈಯೆನಿಸಿಕೊಂಡಿದ್ದಳು. ಗಂಡಹೆಂಡಿರಿಬ್ಬರೂ ಒಳ್ಳೆಯವರು, ಅನ್ಯೋನ್ಯವಾಗಿದ್ದರು. ಕಾಲಕ್ರಮದಲ್ಲಿ ಎರಡು ಗಂಡು, ಒಂದು ಹೆಣ್ಣು ಮಕ್ಕಳಾದರು, ಇಡೀ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡಿದ್ದರು ಎಂದರೆ ಅಲ್ಲಿ ಕತೆಗೆ ಅವಕಾಶವೆಲ್ಲಿ? ಊರಿನ ಗಣ್ಯವ್ಯಕ್ತಿಗಳಲ್ಲಿ ಒಬ್ಬರು
ಎನ್ನಿಸಿಕೊಂಡು, ಸಹಾಯ ಮಾಡುವ ಬುದ್ಧಿಯೂ ಇದ್ದ ವಿಶ್ವೇಶ್ವರ ಭಟ್ಟರಲ್ಲಿ ಆಗೀಗ ಎಲ್ಲ ತರಹದ ಸಹಾಯಗಳನ್ನು ಕೇಳಿಕೊಂಡು ಬರುವ ಜನರೂ ಸಾಕಷ್ಟಿ
ದ್ದರು. ವ್ಯವಹಾರದಲ್ಲಿ ಭಟ್ಟರಿಗೆ ಸ್ವಲ್ಪ ಭೋಳೆ ಸ್ವಭಾವ. ಮೂಕಾಂಬೆ ಚತುರಮತಿ.

ಗಂಡನೇನಾದರೂ ಹಳ್ಳಕ್ಕೆ ಬೀಳುತ್ತಿದ್ದಾನೆಂದು ಅನ್ನಿಸಿದರೆ ಸಾಕು, ತಾನು ವ್ಯವಹಾರದಲ್ಲಿ ಬಾಯಿಹಾಕಿ ಕಾಪಾಡಿಕೊಳ್ಳುತ್ತಿದ್ದಳು. ಅಂತಹ ಸಂದರ್ಭಗಳಲ್ಲಿ ಭಟ್ಟರಿಗೆ ಸ್ವಲ್ಪ ಅಸಮಾಧಾನವಾದರೂ ಬಂದವರೆದುರಲ್ಲಿ ತೋರಗೊಡದೆ ಅಡ್ಡಗೋಡೆಯ ಮೇಲೆ ದೀಪವಿಟ್ಟು ಕಳುಹಿಸುತ್ತಿದ್ದರು. ಬಂದವರಿಗೂ ‘ಬಂದ
ದಾರಿಗೆ ಸುಂಕವಿಲ್ಲ’ ಅನ್ನುವುದು ಅರ್ಥವಾಗಿ ಹೋಗುತ್ತಿತ್ತು.
***

ಹೀಗೇ ಮೂಕಾಂಬೆ ಒಂದು ಕಾರ್ತಿಕ ಸೋಮವಾರದ ಬೆಳಗು ಉಪವಾಸವಿದ್ದು ಊರಿನ ಸೋಮೇಶ್ವರನ ಗುಡಿಗೆ ಹೋಗಿಬರುತ್ತಿರುವಾಗ ದಾರಿಯಲ್ಲಿ ತಿಪ್ಪನ ಹೆಂಡತಿ ಶಂಕರಿ ಬುಟ್ಟಿ ಹೆಣೆಯುತ್ತಾ ಕುಳಿತಿದ್ದವಳು ಮಾತಿಗೆ ಎಳೆದಳು. ಸಂಸಾರದ ಕಷ್ಟಸುಖ ಹೇಳಿಕೊಳ್ಳುತ್ತಾ ‘ಈಚ್ಗೆ ತಿಪ್ಪ ದಿನ್ವೂ ಚಂಜ್ಗೆ ಪರಮಣ್ಣನ
ಗಡಂಗಿಗೆ ಓಗಕ್ಕೆ ಸುರುಮಾಡವ್ನೆ, ಒತಾರೆ ಒಟ್ಟೆಗಿಸ್ಟು ಆಕ್ಕೊಂಡು ಜಾಗ ಬಿಟ್ರೆ ಅಕಟ್ಟೆ ತಾವ ಕೆಲಸಿಲ್ದೆ ಕೂತಿರೋ ಮೂಸಂಡಿ ಗೋಳ್ ಜತಿಗೆ ಬೀಡಿ ಸೇದ್ಕಂಡು, ಇಸ್ಪೀಟಾಡ್ತಾ ಕುಂತ್ಕೊಂತನೆ.

ರವಷ್ಟೂ ಮನೆನಿಗಾ ನೋಡಾಕಿಲ್ಲ. ದಿನದಾಗೆ ಒಂದು ಬುಟ್ಟೀನೂ ಎಣ್ಯಲ್ಲ. ಚಂಜಿಗೆ ಮಾತ್ರಾ ಕುಡಿಯಕ್ಕೆ ಕೈಯಾಗೆ ಕಾಸಿಕ್ಬೇಕು’ ಎಂದಳು. ‘ನೋಡು ಹೆಂಗಸ್ರು ಸ್ವಲ್ಪ ಬಿಗಿಯಾಗಿರ್ಬೇಕು; ಇಲ್ದಿದ್ರೆ ಹಿಂಗೆಯಾ. ದುಡೀದಿದ್ ಮೇಲೆ ನೀನು ಕಾಸ್ಯಾಕೆ ಕೊಡ್ತಿ? ಮುಚ್ಚಿಡು. ಕೊಡಲ್ಲ ಅಂತ ಜೋರ್ಮಾಡು’ ಎಂದು ಮೂಕಾಂಬ
ಒಂದಷ್ಟು ಹಿತೋಪದೇಶ ಮಾಡಿದಳು. ‘ಅಯ್ಯೋ ಸಿವ್ನೆ, ಕೊಡ್ದಿದ್ರೆ ಬಿಟ್ಟಾನ. ಆಕಾಸ ಭೂಮಿ ವಂದ್ಮಾಡ್ಕೊಂಡು ಯಕ್ಸಗಾನ ಆಡ್ತನೆ. ಅಂಗೂ ಅಟ ಇಡಿದ್ರೆ ಬಡ್ದಾದ್ರೂ ಕಿತ್ಕೊಂಡೋಯ್ತಾನೆ.

ಅದೆಲ್ಲಿ ಮುಚ್ಚಿಡಾದು; ಸೀರೆ ಗಂಟ್ನಾಗೆ ಮಡಿಕ್ಕಂಡಿದ್ರೂ, ಬೆತ್ಲೆ ನಿಲ್ಸಿ ಸೀರೆ ಕೊಡವಿ ಉಡಿಕ್ಕೊಂತಾನೆ ಕಣವ್ವಾ. ನೀವಾದ್ರೂ ಅವ್ನಿಗೆ ವಸಿ ಬುದ್ದಿ ಯೋಳಿ’ ಎಂದು ಕಣ್ಣೀರು ಹಾಕಿಕೊಂಡಳು. ‘ನಂಕಂಡ್ರೆ ಖಂಡಿತಾ ನಾಕು ಮಾತು ಹೇಳ್ತೀನಿ. ಕಣ್ಣೀರಾಕ್ಬೇಡ. ತಗಾ ಪ್ರಸಾದ’ ಎಂದು ದೊನ್ನೆಯಲ್ಲಿದ್ದ ರಸಾಯನವನ್ನು ಕೈಗಷ್ಟು
ಹಾಕಿ, ಅವನು ಸಿಕ್ಕರೆ ತರಾಟೆಗೆ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಲೇ ಮನೆಗೆ ಬಂದಳು.

ಹುಡುಕುತ್ತಿರುವವನು ಎದುರಿಗೇ ಬಂದಹಾಗೆ, ತಿಪ್ಪ ಜಗುಲಿಯಲ್ಲಿ ಕುಳಿತಿದ್ದ ಭಟ್ಟರ ಎದುರು ಕೈಮುಗಿದುಕೊಂಡು ಏನೋ ಹೇಳಿಕೊಂಡು ನಿಂತಿದ್ದದ್ದು ಮೂಕಾಂಬೆಗೆ ಅಷ್ಟು ದೂರದಿಂದಲೇ ಕಂಡಿತು. ಬೆಳಗಿಂದ ಉಪವಾಸವಿದ್ದವಳ ಸಿಟ್ಟು ನೆತ್ತಿಗೇರಿತು. ಭಟ್ಟರು ಮನೆಯೊಳಗೆ ಹೋದರು. ಅವನು ಬಾಗಿಲ ಕಡೆಗೇ ನೋಡುತ್ತಾ ನಿಂತಿದ್ದ. ದಣಪೆ ದಾಟಿ ಒಳ ಬಂದ ಮೂಕಾಂಬೆಯನ್ನು ಕಂಡವನೇ ‘ಅಡ್ಡಬಿದ್ದೆ’ ಎಂದು ಕೈಮುಗಿದ.

‘ಏನಕ್ಕೆ ಬಂದ್ಯೋ’ ಎಂದು ಕೇಳುತ್ತಿರುವಾಗಲೇ ಒಳಗಿಂದ ಬಂದ ಭಟ್ಟರು ‘ಇಕಾ, ತಗೋ. ಮದ್ಲು ಅವಳ್ನ ಪ್ಯಾಟೆ ಆಸ್ಪತ್ರೆಗೆ ಕರ್ಕೊಂಡೋಗಿ ತೋರಿಸ್ಕಂಡ್ಬಾ’ ಎನ್ನುತ್ತಾ ದುಡ್ಡನ್ನು ಮುಂದುಮಾಡಿದರು. ರಪಕ್ಕನೆ ಅವರ ಕೈಯಿಂದ ಆ ದುಡ್ಡನ್ನು ಕಿತ್ತುಕೊಂಡ ಮೂಕಾಂಬೆ ‘ಎಂತಕ್ಕೆ ನೀವವಂಗೆ ದುಡ್ಡು ಕೊಡ್ತಿರೋದು?’ ಎಂದಳು. ‘ಶಂಕ್ರಿಗೇನೋ ಆರಾಮಿಲ್ಲಂತೆಯಾ. ನಾಕ್ದಿನದಿಂದ ತಿಂದೊಂದಗಳೂ ದಕ್ತಿಲ್ವಂತೆ. ಅಪ್ಪಣ್ಣ ಡಾಕ್ಟ್ರು ಪ್ಯಾಟೆ ಆಸ್ಪತ್ರೆಗೆ ಕರ್ಕಂಡೋಗಿ ಡ್ರಿಪ್ ಹಾಕ್ಸು ಅಂದಿದಾರಂತೆಯಾ. ಅದ್ಕೆ ಎರ್ಡು ಸಾವ್ರ ಬೇಕೂಂದ. ಪಾಪ ಶಂಕ್ರಿ ಅಲ್ವನಾ. ಸಮಯಾಂದ್ರೆ ಬಂದು ಮನೇಲಿ ಎಷ್ಟು ಗೇಯ್ತ್ಲು’ ಎನ್ನುತ್ತಾ ಅವಳ ಕೈಯಿಂದ ದುಡ್ಡನ್ನು ವಾಪಸ್ಸು ತೆಗೆದುಕೊಳ್ಳಲು ಕೈಚಾಚಿದರು.

ಮೂಕಾಂಬೆಯ ಮೇಲೆ ದೇವಿಯೇ ಬಂದುಹೋಯ್ತು. ‘ಅವ ಹೇಳ್ದ, ನೀವು ನಂಬಿದ್ರಿ. ಇಲ್ಕಾಣಿ, ಇವ್ನು ದುಡ್ಡು ಕೇಳಿದ್ದು ಅವ್ಳ ಇಲಾಜಿಗಲ್ಲ; ಕುಡಿದು ಇಸ್ಪೀಟಾಡಕ್ಕೆ. ಈ ಕ್ಷಣ ದೇವಸ್ಥಾನದಿಂದ ಬರ್ತಾ ನಾನೇ ಶಂಕ್ರಿಯನ್ನು ಮಾತಾಡ್ಸಿ ಬಂದಿದ್ದಲ್ವಾ. ಇವ್ನ ಆಟವೆ ಹೇಳಿ  ‘ಅವಂಗೆ ಬುದ್ದಿ ಹೇಳಿ ಅಮ್ಮಾ’ ಅಂತ ಅವ್ಳು ಬೇಡ್ಕೊಂಡಿ ದ್ದಲ್ವಾ. ನಿಮ್ಮಂತ ಭೋಳೆ ಜನ ಸಿಕ್ರೆ ಯಾರೂ ಕತೆಕಟ್ತಾರೆ. ಇವಂಗೆ ಒಂದು ಕಾಸೂ ಕೊಡುಕ್ಕಾಗ’ ಎಂದವಳೇ ಅದೇ ರೋಷದಿಂದ ಅವನ ಕಡೆ ತಿರುಗಿದಳು. ‘ಅವ್ಳತ್ರ ಹೊಡ್ದೂ, ಬಡ್ದೂ ಕಿತ್ಕಳಾದಲ್ದೆ, ಕಂಡೋರತ್ರ ಕತೆಕಟ್ಟಿ ನಿನ್ತೆವ್ಲಿಗೆ ದುಡ್ಡು ಕೇಳ್ತಿಯ, ನಿನ್ಜನ್ಮಕ್ಕಿಷ್ಟು ಬೆಂಕಿಹಾಕ.

ಸುಳ್ಳು ಹೇಳೋ ಹೊಸಾ ಆಟ ಕಂಡ್ಕಂಡ್ಯಾ. ಮೊದ್ಲು ಕಟ್ಕಂಡ ಹೆಣ್ಣನ್ನ ನೆಟ್ಟಗ್ ಬಾಳ್ಸು’ ಎಂದು ಪುಂಖಾನುಪುಂಖವಾಗಿ ಬೈಗಳ ಮಳೆಯನ್ನು ಹರಿಸೇ ಹರಿಸಿದಳು. ಜೊತೆಜೊತೆಗೇ ಭಟ್ಟರನ್ನೂ ಎಂತವರನ್ನೂ ನಂಬುವ ಅಮಾಯಕತೆಯನ್ನೂ ಹೀಯಾಳಿಸಿದಳು. ಜಗಲಿಯಲ್ಲಿ ನಡೆಯುತ್ತಿದ್ದ ಈ ನಾಟಕವನ್ನು
ನೋಡಲು ಮನೆಯ ಜನರೆ ಈಚೆಗೆ ಬಂದರು. ಆಚೀಚಿನ ಮನೆಯವರೂ ಹೊರಬಂದು ‘ಎಂತ ನಡೀತಿದೆ’ ಎನ್ನುವ ಹಾಗೆ ಇತ್ತಲೇ ನೋಡತೊಡಗಿದರು.

ಒಂದು ಸಣ್ಣವಿಷಯ ಎಷ್ಟೋ ಹೊತ್ತು ದೊಡ್ಡ ರಾದ್ಧಾಂತವಾಗಿ ಇಷ್ಟೆ ಜನರ ಮುಂದೆ ಅವನೊಂದಿಗೆ ತಮ್ಮನ್ನೂ ಸೇರಿಸಿ ಅವಮಾನವಾಗಿದ್ದು, ಅಷ್ಟೊಂದು ಸಮಾಧಾನಿಯಾದ ಭಟ್ಟರನ್ನೂ ಕೆರಳಿಸಿತು. ‘ಮೂಕೀ, ನೀನು ಇನ್ನೊಂದು ಮಾತು ಆಡೂಕಾಗ, ಬಾಯ್ಮುಚ್ಚು. ಹೆಣ್ಣಿಗೆ ಇಷ್ಟು ಬಾಯಿರ್ಬಾರ್ದು. ಇನ್ನೊಂದಕ್ಷರ ನಿನ್ನ ಬಾಯಿಂದ ಬಂದರೆ ಆ ಮಂಜುನಾಥನಾಣೆ!’ ಕಣ್ಣಿಂದ ಕೆಂಡಕಾರುತ್ತಾ, ಅವಳನ್ನು ಹೊಡೆಯಲೆಂಬಂತೆ ಕೈಯೆತ್ತಿ ಕಿರುಚುತ್ತಾ ಥರಥರ ನಡುಗಿದರು.

ಇದನ್ನು ನಿರೀಕ್ಷಿಸದಿದ್ದ ಮೂಕಾಂಬೆಯ ಬಾಯಿ ಒಮ್ಮೆಲೇ ಬಂದಾಯಿತು. ಗಾಬರಿಯಿಂದ ಗಂಡನನ್ನೇ ನೋಡುತ್ತಾ ಎರಡುಕ್ಷಣ ನಿಂತಿದ್ದವಳು ದುಡ್ಡನ್ನು ಅ ಎಸೆದು ಒಳಗೋಡುವಾಗ ಪಕ್ಕದ ಜಗಲಿಯ ಮೇಲಿಟ್ಟಿದ್ದ ದೇವಸ್ಥಾನದ ಬುಟ್ಟಿ ಕೈತಗುಲಿ ಕೆಳಗೆ ಬಿದ್ದು ಹಣ್ಣು-ಹೂವು-ತೆಂಗಿನಕಾಯಿ ಹೋಳು ಉರುಳಾಡಿ, ದೊನ್ನೆಯ ಲ್ಲಿದ್ದ ರಸಾಯನ ದಾರಿಯುದ್ದಕ್ಕೂ ಚೆಲ್ಲಿಹೋಯಿತು. ದೇವರಕೋಣೆಗೆ ಹೋದವಳೇ ಮೂಕಾಂಬ ಉರುಳಿಬಿದ್ದಳು. ಒಂದಷ್ಟು ಹೊತ್ತು ಎಲ್ಲರೂ ಗರಬಡಿದವರಂತೆ ನಿಂತಿದ್ದರು.

ತಿಪ್ಪ ತಲೆತಗ್ಗಿಸಿ ಅಲ್ಲಿಂದ ಹೊರಟ. ಭಟ್ಟರು ಮೈಲಿಗೆಯಾಯಿತೆಂಬಂತೆ ಸೀದಾ ಹಿಂದಿನ ಭಾವಿಗೆ ಹೋದವರೆ ಉಟ್ಟಬಟ್ಟೆಯ ಮೇಲೇ ನೀರು ಸೇದಿ ಸೇದಿ ತಲೆಗೆ ಸುರಿದುಕೊಳ್ಳುತ್ತಿರುವಾಗ ಚಂದ್ರಶೇಖರ ಬಂದು ತಡೆದು ಅವರನ್ನು ಒಳಗೆ ಕರೆದುಕೊಂಡು ಹೋದ.
***

ಇದೆ ಆಗಿ ಈಗ ಇಪ್ಪತ್ತು ವರ್ಷಗಳೇ ಕಳೆದುಹೋಗಿದೆ. ಯಾರಿಗೂ ಇದು ಇಷ್ಟು ವಿಪರೀತಕ್ಕಿಟ್ಟುಕೊಳ್ಳುತ್ತದೆ ಎನ್ನುವ ಅಂದಾಜಿರಲಿಲ್ಲ. ಮೂಕಾಂಬ ಅಂದು ಮುಚ್ಚಿದ ಬಾಯನ್ನು ಇಂದಿಗೂ ತೆರೆದಿಲ್ಲ. ಒಂದಷ್ಟು ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರೂ, ಮಾತನಾಡಿಸಲು
ಸ್ವಂತ ಮಕ್ಕಳಿಂದಲೂ ಸಾಧ್ಯವಾಗಿಲ್ಲ. ಸುರುವಿನಲ್ಲಿ ವಾರಗಿತ್ತಿಯರಿಗೆ ಒಳಗೊಳಗೇ ಸಂತೋಷವಾಗಿದ್ದರೂ, ಒಂದಷ್ಟು ದಿನ ಸರಿದ ಹಾಗೆ ಅವರಿಗೂ ಶೂನ್ಯತೆಯ ಭಾವ ಅಡರಿದೆ.

ಮೂಕಾಂಬೆ ಮೊದಲಿನ ಹಾಗೇ ದನಕರ ಕರೆಯುತ್ತಾಳೆ, ಅಡುಗೆ ಮಾಡಿ ಬಡಿಸುತ್ತಾಳೆ, ಪೂಜೆ ಮಾಡುತ್ತಾಳೆ, ದೇವಸ್ಥಾನಕ್ಕೆ ಹೋಗುತ್ತಾಳೆ, ನೀರು ಸೇದುತ್ತಾಳೆ ಎಲ್ಲವೂ.. ಮಾತೊಂದನ್ನು ಬಿಟ್ಟು. ಒಬ್ಬ ಮಗನ, ಮಗಳ ಮದುವೆಯೂ ಆಗಿದೆ. ಎಲ್ಲ ಕೆಲಸವೂ ಇಷ್ಟು ಸರಾಗವಾಗಿ ನಡೆಯುತ್ತಿರುವಾಗ ಅವಳಿಗೇ ಅಚ್ಚರಿ ಯೆನಿಸುತ್ತದೆ, ಅಷ್ಟುವರ್ಷ ತಾನು ಮಾತಾಡಿ, ಮಾತಾಡಿ ಸಾಧಿಸಿದ್ದೇನು! ಮಾತಿಲ್ಲದೆಯೂ ಎಲ್ಲವೂ ನಡೆಯುತ್ತಲೆ ಇದೆಯಲ್ಲ. ಮಾತೊಂದೇ ಏನು, ತಾನೇ ಇಲ್ಲದಿದ್ದರೂ ನಡೆಯುವುದೆ ಹೀಗೇ ನಡೆಯುತ್ತಿರುತ್ತದೆ. ಅಲ್ಲಿಗೆ ಮಾತಾಡುವ ಅವಶ್ಯಕತೆಯಾದರೂ ಏನಿದೆ.

ಮೊದಲಿಗೆ ಬೇರೆಯವರ ಮಾತು ಕಿವಿಯ ಮೇಲೆ ಮಾತ್ರಾ ಬೀಳುತ್ತಿತ್ತು; ಈಗ ಅವರ ಮಾತು, ಅದರ ಹಿಂದಿನ ಭಾವ ಎದೆಗೇ ಇಳಿಯುತ್ತಿದೆ; ಸುತ್ತಲಿನ ಜಗತ್ತು
ಹೆಚ್ಚೆಚ್ಚು ಅರ್ಥವಾಗುತ್ತಿದೆ. ಇದೇ ಒಂದುರೀತಿ ಚೆನ್ನಾಗಿದೆ ಅನ್ನಿಸತೊಡಗಿದೆ ಆದರಿದು ಮನೆಯವರಿಗೆ ಇಷ್ಟವಿಲ್ಲದ ಸಂಗತಿ. ಎಲ್ಲರೂ ಅವಳು ಮೊದಲಿನಂತೆ ಮಾತಾಡಬೇಕೆಂದು ಸಾಕಷ್ಟು ಸಲ ಬೇಡಿಕೊಂಡಿzರೆ, ಅನುನಯಿಸಿದ್ದಾರೆ, ಗದರಿಕೊಂಡಿದ್ದಾರೆ, ಹೇಳಿದ್ದಾರೆ, ಹೇಳಿಸಿದ್ದಾರೆ, ಏನೇನೋ ಪ್ರಯತ್ನ ಪಟ್ಟಿದ್ದಾರೆ
ಉಹುಂ ಯಾವುದಕ್ಕೂ ಅವಳು ಬಗ್ಗಿಲ್ಲ. ಸ್ವತಃ ಭಟ್ಟರೇ ಆಗೀಗ ‘ಅಂದದ್ದು ತಪ್ಪಾಯಿತು. ಮೊದಲಿನಂತೆ ಮಾತಾಡಾ.

ನಂಗೊಬ್ಬನಿಗೇ ಅಲ್ಲ; ಎಲ್ಲರಿಗೂ ಬೇಸರವಾಗಿದೆ’ ಎಂದು ಕೇಳಿಕೊಂಡಿದ್ದಾರೆ. ಜಪ್ಪಯ್ಯ ಅಂದಿಲ್ಲ ಆ ಹೆಣ್ಣು. ಹೀಗೇ ಊರಿನವರೆ ಸೇರಿ ಉಮೇದಿನಲ್ಲಿ ಒಂದು ಬಸ್ಸು ಮಾಡಿಕೊಂಡು ಶ್ರಿಂಗೇರಿ-ಉಡುಪಿ- ಧರ್ಮಸ್ಥಳ-ಸುಬ್ರಹ್ಮಣ್ಯ ಸುತ್ತಮುತ್ತಲ ದೇವಸ್ಥಾನಗಳಿಗೆ ಯಾತ್ರೆಯ ಕಾರ್ಯಕ್ರಮ ಹಾಕಿಕೊಂಡರು. ತಮ್ಮ ಶ್ರೀನಿವಾಸನಿಗೆ ಒಂದುಪಾಯ ಹೊಳೆಯಿತು. ಮನೆಯವರೆಲ್ಲರೂ ಊರಿನವರೊಟ್ಟಿಗೆ ಯಾತ್ರೆಗೆ ಹೋಗುವುದು. ಧರ್ಮಸ್ಥಳದಲ್ಲಿ ಮಂಜುನಾಥನಲ್ಲಿ ಬೇಡಿ ಕೊಂಡು, ‘ಸಿಟ್ಟಿನಲ್ಲಿ ಆಡಿದಮಾತು ತಪ್ಪಾಯಿತು; ತಪ್ಪೊಪ್ಪುಗೆ ಮಾಡಿಕೊಳ್ಳುತ್ತಿದ್ದೇನೆ. ಕ್ಷಮಿಸು. ಮೂಕಾಂಬೆ ಮಾತನಾಡಲು ಒಪ್ಪಿಗೆಕೊಡು ಎಂದು ಹಾಕಿದ ಆಣೆಗೆ ಅವನ ಕ್ಷಮೆಕೇಳಿಕೊಳ್ಳುವುದು’ ಮನೆಯವರನ್ನೆ ಸೇರಿಸಿಕೊಂಡು ಹೀಗೆ ಮಾತನಾಡಿದ.

ವಿಚಾರ ಎಲ್ಲರಿಗೂ ಸಮ್ಮತವೆನಿಸಿತು. ‘ಅತ್ತಿಗೆ ನೀವೇನೆನ್ನುತ್ತೀರಿ?’ ಎಂದರೆ ಮೂಕಾಂಬೆ ಕೈಮುಗಿದಳು. ಸರಿ, ಮನೆಮಂದಿಯೆ ಯಾತ್ರೆಗೆ ಹೊರಟರು. ಧರ್ಮಸ್ಥಳಕ್ಕೂ ಬಂದು ಊರವರೆಲ್ಲರೆದುರಲ್ಲಿ ಭಟ್ಟರು ಮಂಜುನಾಥನಿಗೆ ಕೈಮುಗಿದು ‘ಮಾತಿಗೆ ಮಂಜುನಾಥ ನೀನು. ಯಾವುದೋ ಕೆಟ್ಟ ಘಳಿಗೆಯಲ್ಲಿ ನಿನ್ನ ಹೆಸರಲ್ಲಿ ಹಾಕಿದ ಆಣೆಗೆ ಮೂಕಾಂಬೆ ಇಷ್ಟು ವರ್ಷವೂ ಮಾತಿಲ್ಲದೆ ನಡೆದುಕೊಂಡಿzಳೆ. ತಪ್ಪೊಪ್ಪಿಗೆಯಾಗಿ ಕಾಣಿಕೆ ಸಲ್ಲಿಸುತ್ತಿದ್ದೇನೆ. ಅವಳು ಮತ್ತೆ ಮಾತಾಡಲು ಅನುಮತಿ ಬೇಡುತ್ತಿದ್ದೇನೆ. ಕರುಣಿಸು ಮಂಜುನಾಥ ಕರುಣಿಸು’ ಎಂದು ಕಣ್ಣೀರುಸುರಿಸುತ್ತಾ, ಕೈಮುಗಿದು ನಿಂತರು.

ಸಮ್ಮತಿಯೋ ಎಂಬಂತೆ ದೇವರ ಗಂಟೆಯ ಸದ್ದು ಆರಂಭವಾಯಿತು. ಸುತ್ತ ಇದ್ದವರೆಲ್ಲ ‘ದೇವರನ್ನು ಬೇಡಿಕೋ. ಏನಾದರೂ ಮಾತಾಡು ಮಾತಾಡು’ ಎಂದು ಅವಳನ್ನು ಒತ್ತಾಯಿಸತೊಡಗಿದರು. ದೇವರನ್ನು ಕಣ್ತುಂಬ ತುಂಬಿಕೊಂಡು, ಕೈಮುಗಿದು ನಿಂತ ಮೂಕಾಂಬೆಗೆ ಏನು ಮಾತಾಡಬೇಕು? ಏಕೆ ಮಾತಾಡಬೇಕು ಅರ್ಥವಾಗದೆ ಹಾಗೆಯೇ ಯೋಚನೆಯಲ್ಲಿ ಮುಳುಗಿ ಹೋದಳು.