Sunday, 15th December 2024

ಆ ಕಾಡಿನ ಸಂತ ಎಲ್ಲೂ ಹೋಗಿಲ್ಲ, ಮಾಳದ ಹಸಿರಲ್ಲೇ ಚಿಗುರಾಗಿದ್ದಾರೆ

ಶಂಕರ ಜೋಶಿಯವರು ನಮ್ಮನ್ನೆಲ್ಲಾ ಬಿಟ್ಟು ಹೋಗಲಿಲ್ಲ, ನಮ್ಮ ಪೀಳಿಗೆಗೆ ಬೇಕಾದದ್ದನ್ನೆಲ್ಲಾ ಕೊಟ್ಟು ಹೋದರು. ಕಾಡಿನ ಪಾಠವನ್ನು ಕಲಿಸಿ ಹೋದರು. ಅವರು ಬೇರೆಲ್ಲಿಯೂ ಹೋಗಿಲ್ಲ, ಮಾಳದ ಕಾಡಲ್ಲಿಯೇ ಮಣ್ಣಾಗಿದ್ದಾರಷ್ಟೇ. ಮಣ್ಣಲ್ಲಿ ಬೀಜವಾಗಿ ಮೊಳೆತು, ಚಿಗುರಾಗಿ, ಮರವಾಗಿ ಮತ್ತೆ ನಮಗೇ ನೆರಳಾಗುತ್ತಾರೆ ಅನ್ನೋ ಭಾವನೆಯೇ ಸಾಕು ನಮಗೆ ಹುರುಪಿನಿಂದ ಬದುಕಲಿಕ್ಕೆ.

ಪ್ರಸಾದ್‌ ಶೆಣೈ ಆರ್‌.ಕೆ.

ಈ ವರ್ಷದ ಮಳೆಗಾಲದಲ್ಲಿ ಮಳೆ ಜೋರಾಗಿ ಸುರಿಯುತ್ತಿದ್ದಾಗ, ಶ್ರಾವಣದ ಹೂವು ಆಗಲೇ ಅರಳಿಕೊಂಡು ಅಂಗಳದ ತುಂಬಾ ಮಿಂಚುತ್ತಿರುವಾಗ ಮಾಳದ ಆತ್ಮದಂತಿದ್ದ, ಮಾಳ ಕಾಡಿನ ಜೀವವೇ ಆಗಿದ್ದ ಶಂಕರ ಜೋಶಿಯವರು ತೀರಿಕೊಂಡ ಸುದ್ದಿ ಕೇಳಿ
ಮನದ ಕಾಡಲ್ಲೊಂದು ಭಯಂಕರ ಮಿಂಚು ಮೂಡಿದಂತಾಯಿತು.

ನಾವೆಲ್ಲ ಮಾಳವನ್ನು ಜಾಸ್ತಿ ಪ್ರೀತಿಸಲು, ಆರಾಧಿಸಲು ಶುರುಮಾಡಿದ್ದೇ ಶಂಕರ ಜೋಶಿಯವರ ಕತೆಗಳಿಂದ. ಅವರ ಸಾಹಸ, ಜೀವನ ಪ್ರೀತಿ, ತಮ್ಮ ಕಣ್ಣಲ್ಲಿ ಮೂಡುತ್ತಿದ್ದ ಕಾಡಿನ ಚಿತ್ರವನ್ನು ನಮ್ಮ ಕಣ್ಣಲ್ಲೂ ಕಾಣಿಸುತ್ತ, ಕುರಿಂಗೆಲ್ ಬೆಟ್ಟದ ನೆತ್ತಿಯಲ್ಲೇ ಎಳೆದೊಯ್ದು ಬಿಡುವ ಅವರ ಬಣ್ಣನೆ, ಕಾಡನ್ನು ಮನರಂಜನೆಯನ್ನಾಗಿ ನೋಡದೇ, ಬದುಕುವ ದಾರಿಯಾಗಿ ನೋಡಿ, ಮಾಳದ ಕಾಡಿನಲ್ಲೇ ಪುಟ್ಟ ಮನೆ ಮಾಡಿ, ತೋಟ ಮಾಡಿ, ಪ್ರಕೃತಿಯನ್ನೂ, ಹಸಿರನ್ನೂ ಪ್ರೀತಿಸುತ್ತಾ ಕಾಡಿನ ಇಂಚಿಂಚನ್ನೂ ಬಲ್ಲವ ರಾಗಿದ್ದ ಶಂಕರ ಜೋಶಿಯವರು ಈ ಲೋಕ ಬಿಟ್ಟು ಹೋದ ಸುದ್ದಿ ಆಘಾತ ತಂದರೂ, ಅವರು ನಮಗೆ ಮಾಳದಲ್ಲಿ ಹೇಳಿದ ಕತೆಗಳು, ದೂರದ ಕಾಡು ತೋರಿಸಿ ಏನನ್ನೋ ಹೇಳಲು ತಹತಹಿಸುತ್ತಿದ್ದ ಅವರ ಮುಗ್ಧ ಭಂಗಿಗಳು ವಿಪರೀತವಾಗಿ ನೆನಪಾಗ ತೊಡಗಿತು. ಆ ಕತೆಗಳೆಲ್ಲಾ ಅವರು ಇನ್ನೂ ಇದ್ದಾರೆ ಅಂತಲೇ ನನಗೆ ಧೈರ್ಯ ಕೊಡುತ್ತಿತ್ತು.

ನನಗಿನ್ನೂ ನೆನಪಿದೆ, ಬಿಸಿಲುಗಾಲದ ಒಂದು ಸಂಜೆ. ಶಂಕರ ಜೋಶಿಯವರ ಮಗ ರಾಧಾಕೃಷ್ಣ ಜೋಶಿಯವರ ಗದ್ದೆಮನೆಗೆ ಹೋಗಿ ಮಾಳದ ಹಸಿರ ಬೆಟ್ಟಗಳ ಅಂಚಿನಲ್ಲಿ ಕಾರ್ಕಳದ ಬಾಹುಬಲಿಯನ್ನು ಸಂಭ್ರಮದಿಂದ ನೋಡುತ್ತ ನಿಂತಾಗ, ರಾಧಾ ಕೃಷ್ಣ ಜೋಶಿಯವರು ತಮ್ಮ ತಂದೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆ ಸಂಜೆ ಶಂಕರ ಜೋಶಿಯವರನ್ನು ನಮ್ಮಲ್ಲಿ ಕಾಡಿಸಿ, ‘ನೀವು ಆದಷ್ಟು ಬೇಗನೇ ಅವರಲ್ಲಿ ಮಾತಾಡಿ, ಖಂಡಿತಾ ನಿಮಗೆ ಚಂದ ಚಂದ ಕತೆಗಳು ಸಿಕ್ಕುತ್ತವೆ’ ಎಂದು ಅಭಯ ನೀಡುತ್ತ ಆಸೆ ಹುಟ್ಟಿಸಿದ್ದರು.

ಅವರಿಗೆ ಸುಮಾರು 85 ವರ್ಷ ಪ್ರಾಯವಾಗಿದೆ ಅಂತ ಅವರು ಹೇಳಿದಾಗ ನಂಗೆ ತಲೆಬಿಸಿ ಯಾಗಲು ಶುರುವಾಗಿತ್ತು. ಅವರೊಳಗೆ ಎಷ್ಟೊಂದು ಕತೆಗಳಿರಬಹುದು? ಅವನ್ನು ಈ ಪೀಳಿಗೆಗೆ ದಾಟಿಸಬೇಕು ಅಂತ ಎಷ್ಟೊ೦ದು ಹಂಬಲವಿರಬಹುದು? ಛೇ, ನಾವು ಯಾವಾಗಲೋ ಅವರಲ್ಲಿಗೆ ಹೋಗಬೇಕಿತ್ತು, ಅವರ ಭಾವಗಳಿಗೆ ಸ್ಪಂದಿಸಬೇಕಿತ್ತು, ಕಾಲ ನಿಲ್ಲುವುದಿಲ್ಲ, ಇಷ್ಟೊಂದು ವಯಸ್ಸಾದ ಮೇಲೆ ಜೀವ ಅನ್ನೋದು ಕ್ಷಣ ಕ್ಷಣವೂ ವಿಲ ವಿಲ ಅನ್ನುತ್ತಿರುತ್ತದೆ, ಯಾವಾಗ ಅದು ಯಾವ ನಿಲ್ದಾಣದಲ್ಲಿ ನಿಂತು ಬಿಡುತ್ತೋ? ಯಾವಾಗ ಮಣ್ಣಲ್ಲಿ ಲೀನವಾಗಿ ಬಿಡುತ್ತೋ ಹೇಳೋಕೆ ಹೇಗೆ ಸಾಧ್ಯ? ಅಂತೆಲ್ಲಾ ನಾನು ಶಂಕರ ಜೋಶಿಯವರ ಬಗ್ಗೆ ಯೋಚಿ ಸುತ್ತ, ಆದಷ್ಟು ಬೇಗನೇ ಅವರನ್ನು ಕಾಣಬೇಕೆಂದೂ, ಆ ಹಿರಿಯ ಜೀವದ ಸಂವೇದನೆಗಳಲ್ಲಿ ಕಳೆದುಹೋಗಬೇಕೆಂದೂ, ಅವರ ಕಣ್ಣ ಕಾನನದಲ್ಲಿ ಜಲಪಾತದಂತೆ ಜಾರಿಹೋಗಬೇಕೆಂದೂ ಆಸೆಪಡುತ್ತಿದ್ದೆ.

ಶಂಕರ ಜೋಶಿಯವರು ಹೇಳಿದ ‘ಮಾಳಕ್ಕೆ ಬಸ್ಸು ಬಂದ ಕತೆ’ಯನ್ನು ನಾನು ಈಗಾಗಲೇ ಮಾಳ ಕಾಡಿನ ಕಥಾನಕದಲ್ಲಿ ಬರೆದಿರುವೆ. ಆದರೆ ಅವರು ಹೇಳಿದ ಇನ್ನಷ್ಟು ಕತೆಗಳು ಕೆಲವೊಮ್ಮೆ ಕನಸಿನಲ್ಲಿಯೂ ಜಿಗ್ಗೆಂದು ಬಂದುಬಿಡುತ್ತದೆ. ಅಪರಾತ್ರಿ ಯಲ್ಲಿ ಕತ್ತಲೆಯನ್ನು ದಿಟ್ಟಿಸುವಾಗ, ಬಿಮ್ಮೆಂದು ಒಂದೇ ಸಮನೆ ಮಳೆ ಹೊಯ್ಯುವಾಗ, ಕಾಡ ಇರುಳಲ್ಲಿ ಜೀರುಂಡೆಯ ಸದ್ದೇ ಪ್ರತಿಧ್ವನಿಸಿದಾಗ ಕಣ್ಣಲ್ಲೊಮ್ಮೆ ಜೋಶಿಯವರ ನೆನಪು ಮಿಂಚಾಡುತ್ತದೆ.

ಇಷ್ಟು ಜೋರಾದ ಮಳೆ ಹೊಯ್ಯುವ ಪೂರ್ವದಲ್ಲಿ ಒಂದು ತರದ ಬಿಸಿಲು ಮಾಳ ಕಾಡಿನ ದಾರಿಯಲ್ಲೆಲ್ಲಾ ಚೆಲ್ಲಿದ್ದ ಹೊತ್ತು, ದೂರದಲ್ಲಿ ಬಿಸಿಲು ಬಿದ್ದ ಬೆಟ್ಟಗಳಲ್ಲಿ ಸಂಜೆಗೆಂಪಿನ ಮೋಡಗಳು ಜಿಗ್ಗನೆದ್ದು ಕೂತಿದ್ದವು. ಅದರಾಚೆಗೆ ಹೊಳೆಯುತ್ತಿದ್ದ ಸ್ವರ್ಣ ನದಿಯ ಕಿಲ ಕಿಲ ಸದ್ದು ಸುತ್ತಲಿನ ಪರಿಸರವನ್ನು ಮತ್ತಷ್ಟು ರಮ್ಯವಾಗಿಸುತ್ತ ಸಾಗುತ್ತಿತ್ತು. ನಾವು ಮಾಳ ಜಲಪಾತದಲ್ಲಿ ಒಂದಷ್ಟು ಹೊತ್ತು ಕಳೆದು ಶಂಕರ ಜೋಶಿಯವರ ‘ನವೇದರ ಮೂಲಮನೆ’ಯ ದಾರಿ ಹಿಡಿದಾಗ ಇರುಳು ಇನ್ನೇನು ಕವಿಯುತ್ತಿತ್ತು.

ಇರುಳ ಇಷ್ಟಿಷ್ಟೇ ಬೆಳಕಿನಲ್ಲಿ ನವೇದರ ಮೂಲಮನೆ ದೂರದಿಂದಲೇ ವಿಶೇಷವಾಗಿ ಸೆಳೆಯುತ್ತಿತ್ತು. ಹಳೆಕಾಲದ ಹಂಚಿನ ಮನೆ, ಮನೆ ಜಗುಲಿಯಲ್ಲಿ ಅಡಿಕೆ ಬುಟ್ಟಿಗಳು, ಕಿಟಕಿ ಜಂತಿಗಳ ನಡುವೆ ಇಡೀ ಮನೆ ಒಂಥರ ಚಂದವಾಗಿ ಕಂಡು ಮನೆಯೆಂದರೆ ಹೀಗೇ ಇರಬೇಕು ಎನ್ನುವಂತೆ ಆಕರ್ಷಿಸುತ್ತಿತ್ತು. ಶಂಕರ ಜೋಶಿಯವರ ಮೊಮ್ಮಗ, ಅಜ್ಜನನ್ನು ನಮಗೆ ಪರಿಚಯ ಮಾಡಿಸಿ, ತಾವೂ ಕತೆ ಕೇಳಲು ಕುಳಿತರು. ನಮ್ಮ ಕಾಡಿನ ಆಸಕ್ತಿ ಕಂಡು ಜೋಶಿಯವರು ಕಣ್ಣನ್ನು ಸಣ್ಣಗೆ ಮಾಡಿ, ಮನಸ್ಸಿನಲ್ಲೇ ರಾ ಹಿಂದಕ್ಕೆ ಹೋಗಿ ಏನೇನೋ ಯೋಚಿಸುತ್ತ, ಹುಗುರನೇ ಮಾತಲ್ಲೇ ಮಾಳದ ಕಾಡ ದಾರಿಯಿಂದ ಕುದುರೆಮುಖ, ಪಶ್ಚಿಮಘಟ್ಟ, ಸ್ವರ್ಣ ನದಿ, ಕುರಿಂಜೆಲ್ ಬೆಟ್ಟ ಸುತ್ತಿಸುತ್ತ, ಸುತ್ತಿಸುತ್ತ ಮತ್ತೆೆ ಮನೆಯ ಜಗಲಿಗೆ ತಂದು ಮುಟ್ಟಿಸುತ್ತಿದ್ದರು.

ಹಾಗೇ ಮತ್ತೂ ಏನೋ ಯೋಚಿಸುತ್ತ, ಫಕ್ಕನೇ ಹೊಳೆಯಿತೆಂಬಂತೆ ಒಂದು ಕತೆ ಶುರುಮಾಡಿದರು. ನಾವು ಪುಟ್ಟ ಮಕ್ಕಳಂತೆ ಕತೆ ಕೇಳಲು ಬೆರಗಾದೆವು. ಜೇನು ತೆಗೆಯಲು ಲಿಂಬೆಹಣ್ಣು ನಾನಾಗ ನಿಮ್ಮಂತೆಯೇ ತರುಣನಾಗಿದ್ದೆ. ಏನಾದರೂ ಮಾಡಿ ಬದುಕಿ ಯೇವು ಎನ್ನುವ ವಯಸ್ಸು, ಅಷ್ಟೇ ಹುಮ್ಮಸ್ಸು. ಇಲ್ಲೇ ಒಂದು ದೊಡ್ಡ ಗಾಂಜಿರ ಜಾತಿಯ ಮರವಿತ್ತು.

ಅದರಲ್ಲೊಂದು ಹೆಜ್ಜೇನು ಗೂಡುಕಟ್ಟಿತ್ತು. ಆದರೆ ಅದು ದೊಡ್ಡ ಮರ ನೋಡಿ, ಅದರಿಂದ ಜೇನು ತೆಗೆಯಲು ಅಷ್ಟು ಸುಲಭ ವಿರಲಿಲ್ಲ, ಎಲ್ಲರೂ ಇದರ ಗೋಜೇ ಬೇಡ ಎಂದು ಸುಮ್ಮನಿದ್ದರು. ಅದಲ್ಲದೇ ಆ ಮರ ಬೇರೆ ಮರಗಳಿಗಿಂತ ಭಯಾನಕವಾಗಿದೆ, ಅಲ್ಲಿ ಭಯಾನಕ ಅನುಭವಗಳಾಗುತ್ತವೆ ಅಂತ ಯಾರೂ ಅದರ ಹತ್ರ ಹೋಗ್ತಾನೇ ಇರ್ಲಿಲ್ಲ. ಆದ್ರೂ ನಾವೆಲ್ಲ ಜೇನು ಸಂಗ್ರಹಿಸುವ ಉದ್ದೇಶದಿಂದ ನಮ್ಮ ಜೇನು ತಂಡದ ನುರಿತ ಸದಸ್ಯರನ್ನು ಒಟ್ಟು ಹಾಕಿ, ಒಂದು ರಾತ್ರಿ ಆ ಮರ ಹತ್ತುವುದೆಂದೂ, ಸಾಧ್ಯವಾದಷ್ಟು ಜೇನು ತೆಗೆಯುವುದೆಂದೂ ತಯಾರಾದೆವು.

ಒಂದು ರಾತ್ರಿ ಜೇನುಹುಳಗಳನ್ನು ಹೊಗೆ ಹಾಕಿ ದೂರ ಓಡಿಸಿದರೆ ಅವು ಕಣ್ಣು ಕಾಣಿಸದೇ ಗೂಡಿನೆಡೆಗೆ ಬೇಗ ಬರಲಾರವು ಎಂದು ತೀರ್ಮಾನಿಸಿದೆವು. ಆದ್ರೆ ಬೇರೆ ಮರದಲ್ಲಿ ಜೇನು ತೆಗೆದಂತೆ ಈ ಮರದಲ್ಲಿ ತೆಗೆಯೋದು ಹೇಗೆ ಹೇಳಿ? ಇದು ಭಯಾನಕ ಮರ, ಒಟ್ಟಾರೆ ಮರ ಹತ್ತುವುದು ಹೇಗೆ? ಸಾಧ್ಯವೇ ಇಲ್ಲ ಎಂದು ಭಟ್ರು, ದುಷ್ಟ ಶಕ್ತಿಗಳ ದಿಗ್ಬಂಧನಕ್ಕೆೆ ಬೇಕಾದ ದರ್ಭೆ, ಸೂಟೆ,
ಲಿಂಬೆಹಣ್ಣು ಮೊದಲಾದ ವಸ್ತುಗಳನ್ನು ಕೊಟ್ಟರು. ಅವನ್ನು ಹಿಡಿದುಕೊಂಡೇ ನುರಿತ ವ್ಯಕ್ತಿಗಳಿಬ್ಬರು ಮರವೇರಿದರು.

ಜೇನುಗೂಡಿನ ಬಳಿ ಮಡಲ ಸೂಟೆಗಳನ್ನು ಉರಿಸಿ, ಹೊಗೆಯೆಬ್ಬಿಸಿದಾಗ ಜೇನುಹುಳಗಳು ಓಡಲು ಶುರುವಿಟ್ಟವು. ಜೇನುಹುಟ್ಟನ್ನು ಕತ್ತರಿಸಲು ರುದ್ರಯ್ಯ ಗೌಡ ಎನ್ನುವವನು ಕಿರುಗತ್ತಿ ತೆಗೆದ. ವೆಂಕಟೇಶ ಜೋಶಿಯವರು ಪಾತ್ರೆಯನ್ನು
ಮರದ ರೆಂಬೆಗೆ ತೂಗುಹಾಕಿ ರುದ್ರಯ್ಯ ಗೌಡ ಕೊಡುವ ಜೇನುಹುಟ್ಟಿನ ತುಂಡುಗಳನ್ನು ಪಾತ್ರೆಯೊಳಗೆ ಹಾಕಲು  ಶುರುಮಾಡಿದರು.

ಹೀಗೆ ಜೇನು ತೆಗೆಯಬೇಕಾದಾಗ ದೊಡ್ಡ ಅಟ್ಟಿಯ ಭಾಗದಲ್ಲಿರುವ ಬರ್ಗವನ್ನು ಕತ್ತರಿಸಿ ತೆಗೆಯುವುದು ರೂಢಿ. ಅದರಲ್ಲಿ ಜೇನುಹುಳದ ತತ್ತಿ ಮತ್ತು ಜೇನು ಅರಶಿನ ಇರುತ್ತದೆ. ಬಳಿಕ ಜೇನು ತುಂಬಿರುವ ಭಾಗವನ್ನು ತೆಗೆಯುವುದು ಮಾಮೂಲು ಕ್ರಮ. ಈ ರುದ್ರಯ್ಯಗೌಡ ಕೂಡ ಜೇನುತಟ್ಟಿಯ ಬರ್ಗವನ್ನು ಕತ್ತಲೆಯಲ್ಲಿಯೇ ಕತ್ತರಿಸಿ ವೆಂಕಟೇಶ ಜೋಶಿಯವರ ಕೈಗೆ ಕೊಡ್ತಾನೇ ಹೋದ. ಈಗ ಬರ್ಗದ ಭಾಗ ಖಾಲಿಯಾಯ್ತು.

ಅಷ್ಟರಲ್ಲಿ ವೆಂಕಟೇಶ ಜೋಶಿಯವರು ‘ಎಂತ ರುದ್ರಯ್ಯ ಇನ್ನೂ ಆಗಲಿಲ್ಲವಾ? ಎಲ್ಲುಂಟು ಬರ್ಗ? ಇನ್ನು ಎಷ್ಟೊತ್ತು
ಕಾಯ್ಬೇಕು ಮಾರಾಯ? ಎಂತ ಮಾಡ್ತಿದ್ದಿ ಇಷ್ಟೊತ್ತನಕ? ಸುದ್ದಿಯೇ ಇಲ್ಲ ನಿಂದು’ ಅಂತಂದಾಗ ರುದ್ರಯ್ಯನಿಗೆ ಅಚ್ಚರಿ.
‘ಭಟ್ರೆ, ಆಗದಿಂದ ಬರ್ಗ ಕೊಡ್ತಾನೆ ಇದ್ದಿನಲ್ಲ, ತಮಾಷೆ ಮಾಡ್ತೀರ ನೀವು? ತುಂಡುಗಳನ್ನು ತಗೊಂಡು ಪಾತ್ರೆಗೆ ಹಾಕ್ತಾ, ಮತ್ತೆ ತಗೊಳ್ತಾ ಇದ್ರಲ್ವಾ ನೀವು?’ ಅಂತ ರುಕ್ಕಯ್ಯ ವಾದ ಮಾಡಿದ. ]

ಕೊನೆಗೆ ಸ್ವಲ್ಪ ಯೋಚಿಸಿ, ‘ಹಾಗಾದ್ರೆ ನಾನಿಷ್ಟೊತ್ತು ಕೊಟ್ಟ ತುಂಡುಗಳನ್ನು ತಗೊಳ್ತಾ ಇದ್ದ ಕೈ ಯಾವುದು?’ ರುದ್ರಯ್ಯ ಅಂತ ಹೌಹಾರಿದ. ಆ ಮರದಲ್ಲಿ ಅವರಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ವೆಂಕಟೇಶ ಜೋಶಿಗಳೂ ಬೆಚ್ಚಿ ದರು. ವರಿಬ್ಬರಿಗೂ ಸಣ್ಣಗೆ ಭಯ ಶುರುವಾಯಿತು. ಈ ಸುದ್ದಿ ಮರದಿಂದ ದೂರದಲ್ಲಿ ಕೆಳಗೆ ನಿಂತಿದ್ದ ಕೃಷ್ಣ ಜೋಶಿಯವರಿಗೆ ಮುಟ್ಟಿತು. ಅವರು
‘ಹೆದರಬೇಡಿ, ಕೆಲಸ ಮುಂದುವರೆಸಿ, ನಾನಿದ್ದೇನೆ’ ಎಂದು ಗಟ್ಟಿಯಾಗಿ ಮಂತ್ರ ಹೇಳುತ್ತ ತಮ್ಮದೇ ರೀತಿಯ ತಾಂತ್ರಿಕ ವಿಧಿ
ಶುರು ಮಾಡಿದರರು.

ಈಗ ವೆಂಕಟೇಶ ಜೋಶಿ ಅವರು ಕತ್ತಲಲ್ಲೇ ತುಸು ಸರಿದು, ರುದ್ರಯ್ಯನಿಗೆ ನಸುಕಾಗಿ ಕಾಣಿಸುವಂತೆ ಅವನ ಹತ್ತಿರದಲ್ಲಿ ನಿಂತರು. ರುದ್ರಯ್ಯ ಜೇನು ತುಂಬಿದ ಹುಟ್ಟಿನ ತುಂಡುಗಳನ್ನು ಅವರ ಕೈಗೆ ಕೊಡುತ್ತ ಹೋದಂತೆ ಜೋಶಿಯವರು ಅದನ್ನು ಹಗ್ಗದಿಂದ ತೂಗುತ್ತಿದ್ದ ಪಾತ್ರೆಗೆ ಇಳಿಸಿದರು. ಹೀಗೆ ತುಂಬಿಸಿ ತುಂಬಿಸಿ ಅದನ್ನು ಮರದ ಕೆಳಗಿರುವವರಿಗೆ ಕರೆದು ತೆಗೆದುಕೊಳ್ಳುವಂತೆ ಹೇಳಿ ಮರದಿಂದಿಳಿದರು.

ಎಲ್ಲರೂ ‘ಅಂತೂ ಜೇನು ಸಿಕ್ಕಿತಲ್ಲ!’ ಎಂದು ಖುಷಿಯಾಗಿ ಸೂಟೆಯ ಬೆಳಕಿನಲ್ಲಿ ಪಾತ್ರೆಯತ್ತ ನೋಡುತ್ತಾರೆ. ಅಬ್ಬಾ ಎಂತ
ನೊಡೋದು? ಅಲ್ಲಿ ಜೇನೇ ಇರಲಿಲ್ಲ. ಎಲ್ಲರೂ ಹೌಹಾರಿದರು. ಅದರಲ್ಲಿ ಅರ್ಧ ತಿಂದು ಉಳಿದ ಮೇಣದ ಅಲ್ಪ ಸ್ವಲ್ಪ ಮುದ್ದೆಗಳಿದ್ದವು. ಅಷ್ಟು ಹೊತ್ತು ತೆಗೆದ ಜೇನು ಎಲ್ಲಿ ಮಾಯವಾಯಿತು? ಆ ಘಟನೆಯಿಂದ ಎಲ್ಲರಿಗೂ ಭಯವಾಗಲು ಶುರುವಾಯಿತು. ಸೂಟೆ ಹಿಡಿದು ಮತ್ತೆ ಆ ಮರದ ಕಡೆ ಮುಖ ಮಾಡದೇ ನಾವು ಸೀದಾ ಮನೆಯತ್ತ ಸಾಗಿದೆವು.

ಜೇನು ಖಾಲಿಯಾಗಿದ್ದು ಹೇಗೆ? ಜೇನು ಸ್ವೀಕರಿಸಿದ ಆ ಕೈ ಯಾವುದು? ಜನಗಳು ಆ ಮರದಲ್ಲಿ ಜೇನು ತೆಗೆಯಲು ಹಿಂಜರಿಯುತ್ತಿದ್ದುದು ಯಾಕೆ? ಅಂತೆಲ್ಲಾ ಪ್ರಶ್ನೆಗಳು ನಂಗೆ ಕಾಡ್ತಾನೇ ಇರುತ್ತವೆ. ಆದರೆ ಒಂದಂತೂ ಸತ್ಯ, ಆ ಮರದಲ್ಲಿ
ಬೇರೆ ಮನುಷ್ಯರು ಇರಲು ಸಾಧ್ಯವೇ ಇಲ್ಲ. ಮತ್ತೇನಿರಬಹುದು ಎನ್ನುವುದಕ್ಕೆೆ ಉತ್ತರಗಳಿಲ್ಲ’ ಅಂತ ಶಂಕರ ಜೋಶಿಯವರು ಗಾಢ ನಿಟ್ಟುಸಿರೆಳೆದುಕೊಂಡು ಗತದಿನದ ಇರುಳಿನ ನೆನಪಲ್ಲಿ ಕಳೆದೇ ಹೋದರು. ನಾವು ಕತೆ ಕೇಳುತ್ತ, ಕೇಳುತ್ತ ಆ ದೊಡ್ಡ ಮರದ ರೆಂಬೆಗಳಲ್ಲಿ ಓಲಾಡಿದ ಹಾಗೇ, ಆ ಸೂಟೆಯ ಬೆಳಕಲ್ಲಿ ಜೇನುಗೂಡು ಕಂಡ ಹಾಗೇ ಉತ್ತೇಜಿತರಾದೆವು.

ಕಾಡಿನ ಬಗಲಿನ ಕತೆ
ಆ ಕತೆಯ ಸತ್ಯಾಸತ್ಯತೆ ನಮಗೆ ಬೇಕಿರಲಿಲ್ಲ. ಆ ಸತ್ಯ ನಿಗೂಢವಾಗಿಯೇ ಇರಲಿ. ಆದರೆ ಜೋಶಿಯವರು ಕತೆ ಹೇಳಿದ ಆ ಕ್ಷಣ, ಆ ಇರುಳು, ಕಾಡೇ ನಮಗೆ ತನ್ನ ಬಗಲಲ್ಲಿ ಕೂರಿಸಿ ಕತೆ ಹೇಳಿದಂತಿತ್ತು. ಅವರ ಆ ಕತೆ ಸಾವಿರಾರು ಕಲ್ಪನೆಗಳಿಗೆ ಇಂಬು ಕೊಟ್ಟವು. ಬಾಳಿನ ಕೊನೆಗಾಲದಲ್ಲಿ ಈ ಪೀಳಿಗೆಯ ಹುಡುಗರಿಗೆ ಏನೋ ದಾಟಿಸಿದೆ ಎನ್ನುವ ಸಂಭ್ರಮ, ಕತೆ ಹೇಳಿ ಮುಗಿಸಿದ ಬಳಿಕ ಅವರ ಮುಖದಲ್ಲಿ ಹೊಳೆಯುತ್ತಿತ್ತು. ಆ ಇರುಳು ಅವರನ್ನು ಬೀಳ್ಕೊಡುವಾಗ ಯಾಕೋ ಅವರು ನಡೆದ, ಎಷ್ಟೋ ಹೆಜ್ಜೆಗಳನ್ನು ನಡೆಸಿದ, ಹಸಿರ ಮೆಟ್ಟಿದ, ಅವರ ಪಾದ ಮುಟ್ಟಬೇಕು ಅನ್ನಿಸಿತು.

ಕಾಡಿನ ಹೂವೊಂದನ್ನು ಸಹಜವಾಗಿ ಸಂಭ್ರಮದಿಂದ ಮುಟ್ಟುವ ಹಾಗೇ ಅವರ ಪಾದ ಮುಟ್ಟಿ ನಮಸ್ಕರಿಸಿದ್ದು ಈಗಲೂ ಎಷ್ಟೊಂದು ರೋಚಕ ಅನ್ನಿಸುತ್ತದೆ ನಂಗೆ. ಈಗಿನ ಪೀಳಿಗೆಗೆ, ನಮ್ಮಂತ ಹುಡುಗರಿಗೆ ಶಂಕರ ಜೋಶಿಯಂತವರೇ ನಿಜವಾದ ಸೆಲೆಬ್ರಿಟಿಗಳು. ಇಂತವರನ್ನು ಕಳೆದುಕೊಂಡಾಗೆಲ್ಲ ಒಂದು ಕಾಲದ ಭವ್ಯ ಸಂಪ್ರದಾಯವನ್ನೇ, ಆತ್ಮವನ್ನೇ ಕಳೆದುಕೊಂಡ ಹಾಗಾಗಿ ಎದೆ ಇನ್ನಷ್ಟು ಭಾರವಾಗುತ್ತದೆ.

ಬದುಕನ್ನು ಧೀರವಾಗಿ ಎದುರಿಸುತ್ತ ಬಾಳಿದ ಇಂತಹ ಹಿರಿ ಜೀವಗಳು ಕಾಲವಾಗುವ ಮೊದಲೇ ಅವರ ಕತೆಗಳನ್ನು ನಾವು
ಕೇಳದಿದ್ದರೆ, ಅವರಿಗೆ ಕಿವಿಯಾಗದಿದ್ದರೆ, ಅವರ ಕೊನೆಗಾಲದ ನಗುವಿನಲ್ಲಿ ಭಾಗಿಯಾಗದಿದ್ದರೆ, ಅವರ ಪಾದ ಸ್ಪರ್ಶವನ್ನೊಮ್ಮೆ ಮಾಡದಿದ್ದರೆ ಅದಕ್ಕಿಂತ ದುರಾದೃಷ್ಟ ಬೇರೆ ಇಲ್ಲ ಅನ್ನಿಸುತ್ತದೆ. ಶಂಕರ ಜೋಶಿ ಅನ್ನೋ ಕಾಡುವ ವ್ಯಕ್ತಿಯ ಜೊತೆಗೆ ಕಾಡು
ಸುತ್ತಬೇಕಿತ್ತು, ಬೆಟ್ಟದ ನೆತ್ತಿಗೆ ಹೋಗಬೇಕಿತ್ತು, ನಾವು ಹುಡುಗರಾಗಿ ಅವರ ಮಾತುಗಳಿಗೆ ಇನ್ನಷ್ಟು ಸ್ಪಂದನೆ ನೀಡಬೇಕಿತ್ತು ಅನ್ನಿಸುತ್ತಿದೆ ಈಗ.

ಕಾಡು ಉಳಿಸಬೇಕು, ಕಾಡಿನ ಅರಿವು ನಮ್ಮೂರಿನ ಯುವ ಜನತೆಗಾಗಬೇಕು ಅನ್ನುವ ಅವರ ಆಶಯವನ್ನು ನಾವೊಂದಿಷ್ಟು ಹುಡುಗರು ಖಂಡಿತ ಪಾಲಿಸುತ್ತೇವೆ, ಅವರ ನೆನಪಿನಲ್ಲಿಯೇ ಕಾಡಿನ ಪಾಠ ಮಾಡುತ್ತೇವೆ. ಹಸಿರನ್ನು ಇನ್ನಷ್ಟು ಪ್ರೀತಿಸುತ್ತೇವೆ. ಶಂಕರ ಜೋಶಿಯವರು ನಮ್ಮನ್ನೆಲ್ಲಾ ಬಿಟ್ಟು ಹೋಗಲಿಲ್ಲ, ನಮ್ಮ ಪೀಳಿಗೆಗೆ ಬೇಕಾದದ್ದನ್ನೆಲ್ಲಾ ಕೊಟ್ಟು ಹೋದರು. ಕಾಡಿನ
ಪಾಠವನ್ನು ಕಲಿಸಿಹೋದರು. ಅವರು ಬೇರೆಲ್ಲಿಯೂ ಹೋಗಿಲ್ಲ, ಮಾಳದ ಕಾಡಲ್ಲಿಯೇ ಮಣ್ಣಾಗಿದ್ದಾರಷ್ಟೇ. ಮಣ್ಣಲ್ಲಿ ಬೀಜವಾಗಿ ಮೊಳೆತು, ಚಿಗುರಾಗಿ, ಮರವಾಗಿ ಮತ್ತೆ ನಮಗೇ ನೆರಳಾಗುತ್ತಾರೆ ಅನ್ನೋ ಭಾವನೆಯೇ ಸಾಕು ನಮಗೆ ಹುರುಪಿನಿಂದ ಬದುಕಲಿಕ್ಕೆ

ಮಾಳವನ್ನೇ ಧ್ಯಾನಿಸುವ ಪುಸ್ತಕ
ಪಶ್ಚಿಮ ಘಟ್ಟ ಶ್ರೇಣಿಯ ದಟ್ಟ ಅರಣ್ಯದ ಅಂಚಿನಲ್ಲಿ, ಕುದುರೆಮುಖ ಅಭಯಾರಣ್ಯಕ್ಕೆ ತಾಗಿಕೊಂಡು, ಗಂಗಾಮೂಲದ ಹತ್ತಿರ ಇರುವ ಹಳ್ಳಿ ‘ಮಾಳ’. ಕಾಡು ಇಲ್ಲಿ ಸದಾ ಹಾಡುತ್ತಿರುತ್ತದೆ. ಮಳೆ ಇಲ್ಲಿ ಧೋ ಎಂದು ದೊಡ್ಡ ದನಿಯಲ್ಲಿ ಮಾತನಾಡುತ್ತದೆ. ಕಪ್ಪು ಬಿಳಿ ಮೋಡಗಳು ಕುದುರೆಮುಖ ಪರ್ವತಗಳನ್ನು ಮುತ್ತಿಕ್ಕಿ ಬಂದು, ರಾತ್ರಿ  ಇಲ್ಲೇ ತಂಗುತ್ತವೆ, ಇಬ್ಬನಿಯಾಗಿ ಸುಗುಡುತ್ತವೆ. ‘ಹಸಿರು ಸಿರಿ’ ಎಂಬ ಪದ ಇಲ್ಲಿ ಕ್ಲೀಷೆ.

ಇಪ್ಪತ್ತೊಂದನೆಯ ಶತಮಾನದ ಸೌಲಭ್ಯಗಳಿಂದ ದೂರವಿರುವುದರಿಂದಲೋ ಏನೋ, ಶತ ಶತಮಾನಗಳಿಂದ ವಾಸಿಸುತ್ತಿದ್ದ ಇಲ್ಲಿನ ಕುಟುಂಬಗಳು ಒಂದೊಂದಾಗಿ ನಗರದತ್ತ ಮುಖ ಮಾಡುತ್ತಿವೆ. ಮಾಳ ಎಂಬ ಹಸಿರು ಸಂಸ್ಕೃತಿಯ ಹಳ್ಳಿ ನಿಧಾನವಾಗಿ ಕರಗುತ್ತಿದೆ. ಆ ಸಂಸ್ಕೃತಿಯ ಪ್ರತಿನಿಧಿಯೊಬ್ಬರು ಈಚೆಗೆ ತೀರಿಕೊಂಡರು. ಕಾರ್ಕಳದ ಪ್ರಸಾದ್ ಶೈಣೈ ಟಿ.ಆರ್. ಆ ಹಿರಿಯ ಅಜ್ಜನನ್ನು ಆಪ್ತವಾಗಿ ಇಲ್ಲಿ ನೆನಪಿಸಿಕೊಂಡಿದ್ದಾರೆ.

ಮಾಳ ಊರಿನ ಕುರಿತು, ಅಲ್ಲಿನ ಕಾಡಿನ ಕುರಿತು ಹತ್ತಾರು ಬರಹಗಳನ್ನು ಬರೆದಿರುವ ಪ್ರಸಾದ್ ಶೆಣೈ, ಆ ಬರಹಗಳನ್ನೆಲ್ಲ ‘ಒಂದು ಕಾಡಿನ ಪುಷ್ಪಕ ವಿಮಾನ’ ಎಂಬ ಪುಸ್ತಕದಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. ಹಳ್ಳಿಯೊಂದನ್ನು, ಅಲ್ಲಿನ ಮರ, ಗಿಡ, ಬಳ್ಳಿ,  ತೊರೆಗಳನ್ನೇ ಮತ್ತೆ ಮತ್ತೆ ಧ್ಯಾನಿಸಿ ಬರೆದಿರುವ ಇಲ್ಲಿನ ಬರಹಗಳು ಪರಿಸರ ಪ್ರೇಮಿಗಳಿಗೆ ತುಂಬಾ  ಅಪ್ಯಾಯಮಾನ ವಾಗಬಲ್ಲವು.