Sunday, 15th December 2024

ಸರ್ವಾಂತರ್ಯಾಮಿ

ವಿಷ್ಣು ಭಟ್‌ ಹೊಸ್ಮನೆ

ಇನ್ನೇನು ಶಾಸ್ತ್ರಿಗಳು ‘ಯಾರು ನೀನು?’ ಎನ್ನುವಷ್ಟರಲ್ಲಿ ಅವಳು ಮಾತನಾಡುತ್ತಾಳೆ. ‘ನಿಮ್ಮ ಮನೆ ಇವತ್ತು ಸಿಗದು. ಬನ್ನಿ ನಮ್ಮ ಮನೆಗೆ. ನಾಳೆ ಆ ದಡ ಸೇರಬಹುದು, ನನ್ನ ಹಿಂಬಾಲಿಸಿ’ ಎನ್ನುತ್ತ ಮತ್ತೆ ನಗೆಯ ಚೆಲ್ಲುತ್ತಾಳೆ.

ಶಾಸ್ತ್ರಿಗಳು ‘ನಾನ್ಯಾಕೆ ಇವನನ್ನು ನನ್ನ ಮನೆಗೆ ಕರೆಯಬೇಕಿತ್ತು? ಆದರೂ ಕರೆದಾಗಿದೆ, ಈಗ ಬೇಡ ಎನ್ನಲ್ಲಿಕ್ಕಾಗದು. ನಾನೇ
ಕರೆದೆನಾ? ಅಥವಾ ಅವನೇ ಬಂದದ್ದಾ? ಛೆ! ಎಂಥ ಗೊಂದಲ, ನನಗೆ’ ಎಂದುಕೊಳ್ಳುತ್ತ, ‘ನೀವ್ಯಾರು ಎಂದಿರಿ?’ ಎಂದರು.

‘ನಾನು ಯಾರು ಅಂತ ನಾನು ಹೇಳಲೇ ಇಲ್ಲ. ನಾನ್ಯಾರು? ಅಥವಾ ನೀವ್ಯಾರು? ಎಂಬುದು ನನಗೂ ಗೊತ್ತಿಲ್ಲ; ನಿಮಗೂ
ಗೊತ್ತಿಲ್ಲ. ಯಾಕೆ? ಏನಾಯ್ತು?’ ‘ಏನಿಲ್ಲ, ನಿಮ್ಮ ಹೆಸರು ಮರತೆ.’ ‘ನನಗೆ ಹೆಸರೂ ಇಲ್ಲ, ಹೆಸರಿನ ಹಂಗಿಲ್ಲ. ಆದರೆ ನಾವು
ಮಾಡುವ ಕೆಲಸದಲ್ಲಿ ಚ್ಯುತಿ ಇರಬಾರದು. ಚ್ಯುತಿ ಉಂಟಾದರೆ ಹೆಸರೂ ಕೆಡುತ್ತದೆ. ಹಾಗಾಗಿ ನನ್ನನ್ನು ಯಾರೋ ಅಚ್ಯುತ
ಎಂದು ಮೊದಲು ಕರೆದರು. ಈಗ ಎಲ್ಲರೂ ಹಾಗೇ ಕರೆಯುವರು. ಕರೆದಲ್ಲಿಗೆ ಹೋ ವವ ನಾನು. ಈಗ ನಿಮ್ಮ ಜೊತೆ ಹೊರಟವ.’

‘ಛೆ! ನಾನು ಇವನನ್ನು ಕರೆದದ್ದೇ ನೆನಪಾಗುತ್ತಿಲ್ಲ. ಇರಲಿ, ಒಂದು ರಾತ್ರಿಯ ಊಟ, ಮನೆಯ ಜಗುಲಿಯ ತುದಿಯಲ್ಲಿ ಉಂಡು-ಮಲಗೆದ್ದು ನಾಳೆ ಹೋದಾನು’ ಎಂದು ಕೊಳ್ಳುತ್ತಿರುವಾಗಲೇ ಶಾಸ್ತ್ರಿಗಳಿಗೆ ಈ ಅಚ್ಯುತ ಯಾಕೋ ತೀರಾ ಆಪ್ತನಂತೆ ಕಂಡ.
ಆಕಾಶದ ತುಂಬ ಕೆಂಪು ಚೆಲ್ಲಿದ ಸೂರ್ಯ ಹೊರಟಾಗಿತ್ತು.

ಶಾಸ್ತ್ರಿಗಳು ದಾಟಿ ಹೋಗಬೇಕಾಗಿದ್ದ ಹೊಳೆಯನ್ನು ಸಮೀಪಿಸುತ್ತಿದ್ದಂತೆ, ಆಗಿನಿಂದ ಒಂದಾಗುತ್ತಿದ್ದ ಮೋಡಗಳು ಒಂದ ಕ್ಕೊಂದು ಹೊಡೆದುಕೊಳ್ಳುವ ಸದ್ದು ಇವರ ಕಿವಿಗೆ ಬಿತ್ತು. ಹೊಳೆಯಲ್ಲಿ ನೀರಿನ ಸೆಳೆತ ಹೆಚ್ಚಿತ್ತು. ಬೆಟ್ಟದಲ್ಲೆಲ್ಲೋ ಬಿದ್ದ
ಮಳೆಗೆ ಹರಿವೂ ಹೆಚ್ಚಿತ್ತು. ದೋಣಿಗಾಗಿ ಗೋವಿಂದನಿಗೆ ಕೂಗು ಹಾಕಿ, ಕಾದರು. ಮತ್ತೆ ಮತ್ತೆ ಕೂಗು ಹಾಕಿದರು. ಗೋವಿಂದನಿಗೆ
ಕೂಗು ಕೇಳಿತೋ, ಇಲ್ಲವೋ? ಅವನು ಬರಲಿಲ್ಲ.

‘ಶಾಸ್ತ್ರಿಗಳೇ ಇಷ್ಟಕ್ಕೆಲ್ಲ ಹೆದರಬೇಡಿ, ನದಿಯನ್ನು ದಾಟುವ’ ಎನ್ನುತ್ತ ಅಚ್ಯುತ ನೀರಿಗೆ ಕಾಲಿಟ್ಟ. ಅದೇ ಹೊತ್ತಿಗೆ ಛಳ್ ಎಂದು ಹೊಡೆದ ಸಿಡಿಲಿಗೆ ಕಂಗಾಲಾದ ಶಾಸ್ತ್ರಿಗಳು ಅಚ್ಯುತನ ಕೈಯನ್ನು ಗಟ್ಟಿಯಾಗಿ ಹಿಡಿದು ದಡಕ್ಕೆ ಎಳೆದುಕೊಂಡರು. ಈಗ ಮಳೆ ಬಿರುಸಾಗಿ ಸುರಿಯಿತು.

ಸ್ವಲ್ಪ ಕಾಯುವ, ಗಡಿಬಿಡಿ ಮಾಡಬೇಡಿ ಎಂದು ಸುಮ್ಮನೆ ನಿಂತರು. ಅಚ್ಯುತನೂ ಮಾತಾಡಲಿಲ್ಲ. ಹಿಂದೆ ಯಾರೋ ಬಂದು ನಿಂತ ಸದ್ದು ಕೇಳಿಸಿತು. ಇಬ್ಬರೂ ತಿರುಗಿ ನೋಡಿದರು. ಒಂದು ಹೆಣ್ಣಿನ ಆಕೃತಿ! ಶಾಸ್ತ್ರಿಗಳಿಗೆ ಸಣ್ಣಗೆ ನಡುಕ. ಅಚ್ಯುತ ಮಾತ್ರ ತಣ್ಣಗಿದ್ದ!

ಶಾಸ್ತ್ರಿಗಳು ‘ಇವಳಾರು?’ ಎಂಬಂತೆ ಅಚ್ಯುತನ ಮುಖವನ್ನು ಹುಬ್ಬೇರಿಸಿಕೊಂಡು ನೋಡುತ್ತಾರೆ. ಅಚ್ಯುತ ಶಾಸ್ತ್ರಿಗಳ ಮುಖ ವನ್ನು ತಪ್ಪಿಸಿಕೊಂಡು, ಮಾತನ್ನೂ ಆಡದೇ, ಯಾವುದೇ ಸಂಜ್ಞೆಯನ್ನೂ ಕೊಡದೆ ಸುಮ್ಮನೆ ನಿಂತು ಬಿಡುತ್ತಾನೆ. ಶಾಸ್ತ್ರಿಗಳಿಗೆ ಅಚ್ಯುತನ ಮೇಲೆ ಕೋಪ ನೆತ್ತಿಗೇರುತ್ತಿದೆ. ಇನ್ನೇನು ಶಾಸ್ತ್ರಿಗಳು ‘ಯಾರು ನೀನು?’ ಎನ್ನುವಷ್ಟರಲ್ಲಿ ಅವಳು ಮಾತನಾಡುತ್ತಾಳೆ.

‘ನಿಮ್ಮ ಮನೆ ಇವತ್ತು ಸಿಗದು. ಬನ್ನಿ ನಮ್ಮ ಮನೆಗೆ. ನಾಳೆ ಆ ದಡ ಸೇರಬಹುದು, ನನ್ನ ಹಿಂಬಾಲಿಸಿ’ ಎನ್ನುತ್ತ ಮತ್ತೆ ನಗೆಯ
ಚೆಲ್ಲುತ್ತಾಳೆ. ‘ಇಲ್ಲ, ನಾವು ಬರುವುದಿಲ್ಲ, ಎಷ್ಟೇ ಹೊತ್ತಾದರೂ ಸರಿ, ನಾವು ಆ ದಡ ಸೇರುವವರೇ, ಅಲ್ಲವೇ ಅಚ್ಯುತರೇ?’
ಎಂದರೂ ಅಚ್ಯುತ ತುಟಿಪಿಟಕ್ ಎನ್ನಲಿಲ್ಲ.

‘ಬರುವುದಾದರೇ ಬನ್ನಿ, ಈಗ ಇನ್ನೊಂದು ಬಲವಾದ ಸಿಡಿಲು ಬಡಿಯುವುದಕ್ಕಿದೆ. ಅದು ಬಡಿದರೆ ನೀವು ಈ ನದಿಯೊಳಗೆ ಅಷ್ಟೆ’ ಎಂದು ಮತ್ತೆ ನಗುತ್ತಾಳೆ. ಈಗಲೂ ಅಚ್ಯುತದ್ದು ಗಂಭೀರ ಮೌನ! ‘ನನಗೆ ಈ ಸಿಡಿಲು ಮತ್ತು ಹಾವು ಎಂದರೆ ಭಯ. ಹಾವು
ಯಾವಾಗ ಕಡಿಯುತ್ತದೆ ಮತ್ತು ಸಿಡಿಲು ಯಾವಾಗ ಬಡಿಯುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ!

ಅದಕ್ಕೇ ನನಗೆ ಇವೆರಡೂ ಎದೆನಡುಕ ಹುಟ್ಟಿಸುತ್ತವೆ’ ಎಂದು ಶಾಸ್ತ್ರಿಗಳು ಯೋಚಿಸುತ್ತಿರುವಾಗಲೇ ಅವಳು ಹೊರಟಾಗಿದೆ. ಅವಳ ಹಿಂದೆ ಸದ್ದಿಲ್ಲದೆ ಅಚ್ಯುತನೂ ನಡೆಯುತ್ತಿದ್ದ. ಶಾಸ್ತ್ರಿಗಳು ‘ನಾನು ಅಚ್ಯುತನ ಮನೆಗೆ ಹೊರಟದ್ದೋ ಅಥವಾ ಅಚ್ಯುತ ನನ್ನ ಮನೆಗೆ ಹೊರಟದ್ದೋ? ಅಷ್ಟಕ್ಕೂ ಈ ಅಚ್ಯುತ ಅವಳ ಮಾತಿಗೆ ಒಪ್ಪಿ ಮೂಗನಂತೆ ಹೊರಟಿದ್ದಾದರೂ ಯಾಕೆ? ಅಚ್ಯುತ ನಿಗೂ ಸಿಡಿಲಿನ ಭಯವಾ?’ ಎಂದುಕೊಳ್ಳುತ್ತ ಅವರ ಹಿಂದೆ ಹೆಜ್ಜೆ ಹಾಕಿದರು.

ಒಂದು ಸಣ್ಣ ಬೆಟ್ಟವನ್ನು ಹತ್ತಿ ಇಳಿದ ಬಳಿಕ ಅವಳ ಮನೆ ಕಂಡಿತು. ಶಾಸ್ತ್ರಿಗಳಿಗೆ ಒಮ್ಮೆ ಇದು ತನ್ನದೇ ಮನೆ ಎಂದೆನಿಸಿತು.  ಆದರೆ ‘ಮೂರುಸಂಜೆಯ ಸಮಯಕ್ಕೆ ತುಳಸಿಗೆ ದೀಪವಿಡದ ಮನೆ ತನ್ನದಾಗಲು ಸಾಧ್ಯವೇ ಇಲ್ಲ’ ಎಂದುಕೊಂಡರು. ಮನೆ ತಲುಪುತ್ತಿದ್ದಂತೆ ಅವಳು ಸೀದಾ ಒಳಕ್ಕೆ ಹೋದಳು.

ಅಚ್ಯುತನೂ ತಡಮಾಡದೆ ಒಳಗೆ ಸೇರಿಕೊಂಡ! ಶಾಸ್ತ್ರಿಗಳು ಮಳೆಯಲ್ಲಿಯೇ ಬರಲಿ, ಚಳಿಯಲ್ಲಿಯೇ ಬರಲಿ ಕೈ-ಕಾಲು, ಮುಖ ತೊಳೆಯದೇ ಹೊಸ್ತಿಲು ದಾಟುವವರಲ್ಲ. ಅದು ತನ್ನ ಮನೆಯಿರಲಿ ಅಥವಾ ಬೇರೆಯವರ ಮನೆ ಇರಲಿ. ‘ಕಾಲು ತೊಳೆಯುವು ದಕ್ಕೆೆ ನೀರು ಎಲ್ಲಿದೆ’ ಎಂದು ಗಟ್ಟಿಯಾಗಿ ಕೂಗಿದರು.

ಅವಳು ಒಳಗಿಂದಲೇ ‘ಇಲ್ಲಿ ಆ ಸಂಪ್ರದಾಯ ಇಲ್ಲ, ಸೀದಾ ಒಳಕ್ಕೆ ಬನ್ನಿ’ ಎಂದಳು. ‘ಛೆ! ಎಂಥಾ ದುರಾವಸ್ಥೆ ನನ್ನದು. ಇವಳು ಯಾರೋ? ಇದು ಯಾರ ಮನೆಯೋ? ಯಾವ ಕುಲವೋ? ಈ ಅಚ್ಯುತನೂ ಕುಲಗೆಟ್ಟವನಾದನಾ? ನಾನಾದರೂ ಯಾಕೆ
ಬರಬೇಕಿತ್ತು. ಸಿಡಿಲಿನ ಭಯವಾ? ಸಾವಿನ ಭಯವಾ? ಒಳ್ಳೆಯ ಸಂಕಟದಲ್ಲಿ ಸಿಕ್ಕಿಬಿದ್ದೆ. ಈ ಮನೆಯಲ್ಲಿ ಒಂದು ಲೋಟ ನೀರೂ ಕೂಡ ಬೇಡ ನನಗೆ. ಇವರಿಬ್ಬರ ಸಹವಾಸ ಸಾಕು. ಬೆಳಗ್ಗೆೆ ಇವರು ಏಳುವದಕ್ಕಿಂತ ಮೊದಲೇ ಎದ್ದು ಹೊರಟು ಬಿಡುತ್ತೇನೆ’
ಎಂದುಕೊಳ್ಳುತ್ತ ಮಾಡಿನ ತುದಿಯಲ್ಲಿ ಸಣ್ಣದಾಗಿ ಇಳಿಯುತ್ತಿದ್ದ ಮಳೆಯ ನೀರಿನಲ್ಲೇ ಕಾಲು ತೊಳೆದು, ಕಣ್ಣಿಗೆ ನೀರು ಹಚ್ಚಿಕೊಂಡು ಒಳಕ್ಕೆ ಹೊದರು.

ಜಗುಲಿಯಲ್ಲಿದ್ದ ಒಂದು ಹಳೆಯ ಕಾಲದ ಮರದ ಮಂಚದ ಮೇಲೆ ಕುಳಿತರು. ದಿನದ ಅಭ್ಯಾಸದಂತೆ ‘ಏಯ್ ಲಕ್ಷ್ಮೀ,
ಎಲ್ಲಿದ್ದಿ? ನಂಗೆ ಒಂದು ತಂಬಿಗೆ ನೀರು ತಾ..’ ಎಂದು ಹೇಳಲು ಹೊರಟವರಿಗೆ ಇದು ತಮ್ಮ ಮನೆಯಲ್ಲ ಎಂಬುದು ನೆನಪಾಗಿ
ಸುಮ್ಮನಾದರು. ಅಷ್ಟಕ್ಕೂ ತಮಗೆ ಬಾಯಾರಿಕೆಯಾಗಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡು, ಒಂದು ವೇಳೆ ಅಷ್ಟು
ಬಾಯರಿಕೆ, ಹಸಿವು ಆದರೆ ‘ಆ ಮಾಡಿನ ನೀರನ್ನು ಕುಡಿದೇನೇ ಹೊರತು ಇವಳ ಮನೆಯ ನೀರು ಬೇಡ’ ಎಂದುಕೊಂಡು
ಅಚ್ಯುತನನ್ನು ಕೂಗಿ ಕರೆದರು.

ಅಚ್ಯುತನು ‘ಶಾಸ್ತ್ರಿಗಳೇ, ಅಲ್ಲಿಯೇ ಏಕೆ ಕುಳಿತಿರಿ? ನಡುಜ ಗುಲಿಗೆ ಬನ್ನಿ, ಕುಳಿತು ಮಾತನಾಡುವ’ ಎಂದ. ಆಗ ‘ಇವಳ ಹಿಂದೆ ಹೊರಡುವಾಗ ಮಾತು ಬಾರದ ತಮಗೆ ಈಗೇನು ಮಾತು? ನಾನು ಒಳಗೆ ಬರಲಾರೆ. ಇಲ್ಲಿಗೆ ಬಂದು ಅಶುದ್ಧನಾಗಿ ಹೋದೆ’ ಎಂದರು.

‘ಸಿಟ್ಟಾಗಬೇಡಿ. ಎಲ್ಲ ಕಾಲಮಹಿಮೆ. ಅಲ್ಲಿಯ ತನಕ ಬಂದವರಿಗೆ ಇಲ್ಲಿ ಬಂದರೆ ಮಾನ ಹೋಗುವುದಾ? ಊರಿನವರಿಗೆ
ಗೊತ್ತಾಗಿ ನಾಳೆ ಪೂಜೆಗೆ ಕರೆಯುವುದಿಲ್ಲ ಎಂಬ ಭಯವಾ?’ ‘ನಾನು ಪರಿಶುದ್ಧ, ಸಂಸ್ಕಾರಿ. ಹಾಗೆಲ್ಲ ಕಂಡಕಂಡ ಕಡೆ,
ಉಂಡು- ಮಲಗುವ ಅಭ್ಯಾಸ ಇಲ್ಲ. ಹಾಗಾಗಿಯೇ ನಾನೆಂದರೆ ಎಲ್ಲರಿಗೂ ಗೌರವ. ಅದನ್ನು ಉಳಿಸಿಕೊಂಡರೆ ಮಾತ್ರ ಬದುಕು ಗೊತ್ತಾ ನಿಮಗೆ? ಯಾರೂ ನೋಡದೇ ಹೋದರೂ ಸರ್ವಾಂತರ್ಯಾಮಿಯಾದ ದೇವರು ನೋಡುತ್ತಾನೆ.’

‘ಎಂಥಾ ಪರಿಶುದ್ಧವೋ ನನಗೆ ಅರ್ಥವಾಗದು. ನಿಮಗೆ ಬದುಕು ಮತ್ತು ಸಾವಿನ ಬಗ್ಗೆ ಭಯ ಅಷ್ಟೆ. ಅದಕ್ಕೇ ಈ ನಾಟಕ. ನಿಮ್ಮ ಸರ್ವಾಂತರ್ಯಾಮಿಗೆ ಮಡಿ-ಮೈಲಿಗೆ ಇಲ್ಲ. ಎಲ್ಲಿ ಬೇಕಾದರೂ ಹೋಗುತ್ತಾನೆ, ಇರುತ್ತಾನೆ ಎನ್ನುವವರೂ ನೀವೇ, ಅವನಿಗಾಗಿ ಶುದ್ಧ ಮಾಡುವವರೂ ನೀವೇ. ಇಷ್ಟಾಗಿ ನೀವು ಈಗ ಎಲ್ಲಿಗೆ ಬಂದಿದ್ದು? ಯಾಕೆ ಬಂದಿದ್ದು ಎಂಬುದೇ ನಿಮಗೆ ಗೊತ್ತಿಲ್ಲ! ನೀವೊಬ್ಬರು ಶಾಸ್ತ್ರಿಗಳು’ ಎಂದು ನಕ್ಕ ಅಚ್ಯುತ.

‘ಹೋಯ್, ಅಚ್ಯುತರೇ ನಿಮ್ಮ ಮೇಲಿನ ಗೌರವಕ್ಕೆ ನನ್ನ ಸಿಟ್ಟನ್ನು ತಡೆದುಕೊಂಡಿರುವೆ. ಏನೆಲ್ಲ ಮಾತಾಡಬೇಡಿ. ಅವಳು
ಯಾರು? ಏನು-ಎತ್ತ? ಎಂಬುದು ತಿಳಿಯದೆ ಅವಳ ಹಿಂದೆ ಬಂದಿರಲ್ಲ, ಯಾಕೆ? ಆಕೆಯ ಚೆಲುವಿಗೆ ಸೋತಿರೋ ಹೇಗೆ? ನನ್ನ ಮನೆಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತಿದ್ದೆ ಎಂಬ ಒಂದೇ ಒಂದು ಕಾರಣಕ್ಕೆ ಸುಮ್ಮನೆ ನಿಮ್ಮಗಳ ಜೊತೆಗೆ ಬಂದೆ,
ತಿಳಿಯಿತಾ?’ ‘ಅವಳು ಕರೆಯದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು ಎಂಬುದು ನಿಮಗೂ ಗೊತ್ತು. ಈಗ ನಮ್ಮೊಳಗೆ ತರ್ಕ ಬೇಡ. ಇರಿ, ಈಗ ಬಂದೆ’ ಎನ್ನುತ್ತ ಅಚ್ಯುತ ಮತ್ತೆ ಒಳನಡೆದ.
***
ಶಾಸ್ತ್ರಿಗಳಿಗೆ ಅಲ್ಲಿಂದಲೇ ಅರ್ಧತೆರೆದ ಕೋಣೆಯ ಬಾಗಿಲು, ಸಣ್ಣ ದೀಪದ ಬೆಳಕು, ಆ ಬೆಳಕಿನಲ್ಲಿ ಅಸ್ಪಷ್ಟವಾಗಿ ಕಾಣುವ
ಎರಡು ಪಾದಗಳು, ಹೆಣ್ಣೊಬ್ಬಳ ಕೈ ಆ ಎರಡೂ ಪಾದಗಳನ್ನು ಒತ್ತುತ್ತಿರುವಂತೆ ಕಂಡಿತು. ಸದ್ದು ಮಾಡದೆ ಹೋಗಿ, ಆ ಬಾಗಿಲ
ಬಳಿ ಅಡಗಿ ನಿಂತು ಇಣುಕಿದರು. ಅವರಿಗೆ ಆ ಪಾದಗಳು ಅಚ್ಯುತನ ಪಾದಗಳಂತೆಯೂ ಹೆಣ್ಣಿನ ಕೈಗಳು ಅವಳ ಕೈಗಳಂತೆಯೂ ಕಂಡವು. ‘ಎಂಥಾ ಹೇಸಿಗೆ ಕೆಲಸ’ ಎಂದುಕೊಂಡು ಮುಖನೋಡಲೆಂದು ಇನ್ನೊಂದು ಚೂರು ಬಗ್ಗಿದರು.

ತಟ್ಟನೆ ಹಾವಿನ ಬಾಲ ಕಂಡಂತಾಗಿ ಹೆದರಿ ಹಿಂದಕ್ಕೆ ಬಂದರು. ಹೊರಗೆ ಅಚ್ಯುತ ತಾವು ಆಗ ಕುಳಿತಿದ್ದ ಮಂಚದ ಮೇಲೆ ಕುಳಿತಿರುವುದನ್ನು ನೋಡಿ ಶಾಸ್ತ್ರಿಗಳಿಗೆ ಒಮ್ಮೆ ದಿಗಿಲಾಯಿತು! ಶಾಸ್ತ್ರಿಗಳು ಅಚ್ಯುತನ ಮುಖವನ್ನು ಮತ್ತೆಮತ್ತೆ ನೋಡುತ್ತ
‘ಓಹೋ, ಹಾಗಾದರೆ ನೀವು ಅವರೇ ಎಂದಾಯಿತು’ ಎಂದರು. ‘ನಿಮಗೆ ಬರೀ ಬದುಕಿನದೇ ಕನಸು’ ಎಂದಷ್ಟೇ ಹೇಳಿ ಅಚ್ಯುತ ಎದ್ದು ಒಳಕ್ಕೆ ಹೋದ.

ಶಾಸ್ತ್ರಿಗಳು ತಾವು ಕಂಡ ಕೈ-ಕಾಲುಗಳು ಯಾರದ್ದು? ಈ ಅಚ್ಯುತ ಯಾರು? ಹಾವು ಅಲ್ಲಿ ಯಾಕಿದೆ? ಎಂಬ ಬಗ್ಗೆ ಯೋಚಿಸುತ್ತ, ನಿದ್ದೆ ಬಾರದೆ ಮುಂಜಾವಿನ ಹೊತ್ತಲ್ಲಿ ಸರಿಸುಮಾರು ಮುಕ್ಕಾಲು ದಿನ ಕಳೆದರೂ ನನಗೇಕೆ ಬಾಯರಿಕೆ, ಹಸಿವು ಆಗಲಿಲ್ಲ ಎಂಬ ಪ್ರಶ್ನೆ ಅವರನ್ನು ಕಾಡಿ, ಬೆಳಗಿನ ನಿದ್ದೆಗೂ ಕುತ್ತು ತಂದಿತು. ಬೆಳ್ಳಿ ಮೂಡಿದಂತಾಗಿ ಎದ್ದು ಹೊರಟವರಿಗೆ ಅವಳು ಅಡ್ಡಬಂದು ‘ಎಲ್ಲಿಗೆ?’ ಎಂದಳು.

‘ಆ ದಡಕ್ಕೆ’
‘ಅದು ನದಿಯಲ್ಲ, ಸಮುದ್ರ. ಸಮುದ್ರಕ್ಕೆ ಒಂದೇ ದಡ. ನೀವು ಬೆಟ್ಟ ಹತ್ತಿ, ಇಳಿದು ದಡದಾಟಿ ಬಂದಾಗಿದೆ’ ಎಂದಳು. ಅವಳ ಮಾತು ಏನೂ ಅರ್ಥವಾಗದೆ, ಇವಳ ದರ್ಶನವೇ ಅಸಹ್ಯ ಅಂದುಕೊಳ್ಳುತ್ತ ಶಾಸ್ತ್ರಿಗಳು ಕಣ್ಣುಮುಚ್ಚಿ ನಿಂತರು. ಮುಚ್ಚಿದ ಕಣ್ಣನ್ನು ತೆರೆಯಲು ರೆಪ್ಪೆಗಳು ಬಿಡಿಸಿಕೊಳ್ಳದೆ ಹೊಯ್ದಾಡಿದರು!