Sunday, 24th November 2024

ಕುವೆಂಪು ನೆನಪಲ್ಲಿ ಸೋಂಕು ರೋಗ

ಡಾ.ಜಿ.ಎನ್‌.ಉಪಾಧ್ಯ

ಕುವೆಂಪು ಅವರ ಬಾಲ್ಯದಲ್ಲಿ ಹಲವರನ್ನು ಕಾಡಿದ ಸೋಂಕುರೋಗವೊಂದು ನಮ್ಮ ನಾಡಿನಲ್ಲಿ ಹರಡಿತ್ತು. ಅದನ್ನು ಅವರು ನೆನಪಿಸಿಕೊಂಡ ಪರಿ, ಇಂದಿನ ಕೋವಿಡ್ 19 ಸೋಂಕಿನ ನೆನಪನ್ನು ಮೂಡಿಸುತ್ತದೆ. 

ಕೋವಿಡ್ 19 ಮಹಾಮಾರಿ ಇಡೀ ಜಗತ್ತನ್ನು ಹೈರಾಣಗೊಳಿಸಿದೆ. ಈ ಹಿಂದೆಯೂ ಮನುಕುಲ ಅದೆಷ್ಟೋ ಸಂಕಷ್ಟಗಳನ್ನು ಹಾದು ಬಂದಿದೆ ಎಂದು ಇತಿಹಾಸ
ಹೇಳುತ್ತದೆ. ಕುವೆಂಪು ಅವರ ಆತ್ಮಕಥೆ ‘ನೆನಪಿನ ದೋಣಿಯಲ್ಲಿ’ಯೂ ಇಂಥದ್ದೇ ಭಯಾನಕ ದಿನಮಾನಗಳ ಚಿತ್ರಣವಿದೆ.

ಕರೋನಾ ಮಹಾಮಾರಿಗೆ ಮನುಕುಲ ತತ್ತರಿಸಿ ಹೋಗಿದೆ. ಜನಸಾಮಾನ್ಯರ ಬಾಳು ಮೂರಾಬಟ್ಟೆಯಾಗಿದೆ. ದೇಶಕ್ಕೆ ದೇಶವೇ ನಾಡಿಗೇ ನಾಡೇ ಅನಾರೋಗ್ಯ ದಿಂದ ಮಲಗಿದೆ. ಮೊನ್ನೆ ಮೊನ್ನೆ ಸುನಾಮಿಯಂತೆ ಬಂದೊದಗಿದ ಎರಡನೆಯ ಅಲೆ ಉಂಟು ಮಾಡಿದ ತಲ್ಲಣ, ಸಾವು ನೋವು ತೀರಾ ಆತಂಕವನ್ನು ಸೃಷ್ಟಿಸಿದೆ. ಕರೋನಾ ಶಬ್ದ ಬಾಯಿಂದ ಹೊರಬಿದ್ದರೆ ಸಾಕು ಜನ ಬಾಂಬ್ ಸಿಡಿದಂತೆ ಓಡಿ ಹೋಗುವ ಪರಿಸ್ಥಿತಿಯನ್ನು ದೃಶ್ಯ ಮಾಧ್ಯಮಗಳು ಹುಟ್ಟು ಹಾಕಿವೆ.

ಈಗ ಮೂರನೆಯ ಅಲೆಯ ಭೀತಿ ಶುರುವಾಗಿದೆ. ಕೋವಿಡ್‌ನಿಂದ ಉಂಟಾಗುತ್ತಿರುವ ಸವಾಲು ಮತ್ತು ಬೆದರಿಕೆಯನ್ನು ಎದುರಿಸಲು ನಾವಿನ್ನೂ ಸರಿಯಾಗಿ ಸಜ್ಜಾಗಿಲ್ಲ. ಮನುಷ್ಯ ಮನುಷ್ಯನಿಗೆ ತೋರಬಹುದಾದ ಕ್ರೌರ್ಯಗಳೆಲ್ಲಾ ಈ ನಡುವೆ ನಡೆಯುತ್ತಿರುವುದು ಭಯಾನಕ ಸತ್ಯ. ಇಪ್ಪತ್ತನೆಯ ಶತಮಾನದ ಆದಿಯಲ್ಲೂ ಇಂಥದೇ ಪರಿಸ್ಥಿತಿ ಬಂದೊದಗಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.

‘ನೆನಪಿನ ದೋಣಿಯಲ್ಲಿ’ ಇದು ಕುವೆಂಪು ಅವರ ಆತ್ಮಕಥೆ. 1980ರಲ್ಲಿ ಬೆಳಕು ಕಂಡ ಈ ಮಹಾಕಥನ ಹತ್ತಾರು ಬಾರಿ ಪುನರ್ ಮುದ್ರಣವಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಇಪ್ಪತ್ತನೆಯ ಶತಮಾನದ ನಾನಾ ಬಗೆಯ ವಿದ್ಯಮಾನಗಳನ್ನು ತಮ್ಮ ಜೀವನಗಾಥೆಯನ್ನು ಕುವೆಂಪು ಅವರು 1800 ಪುಟಗಳಲ್ಲಿ ಎರಡು ಸಂಪುಟಗಳಲ್ಲಿ ಬಹು ಹೃದ್ಯವಾಗಿ ಎರಕ ಹೊಯ್ದಿ ದ್ದಾರೆ. ಕುಪ್ಪಳಿಯ, ಮಲೆನಾಡಿನ, ಮೈಸೂರಿನ, ಕರ್ನಾಟಕದ, ಭಾರತದ ಜಗತ್ತಿನ ನಾನಾ ರೋಚಕ ಘಟನೆಗಳ ಮೇಲೆ ಬೆಳಕು ಚೆಲ್ಲುವ ಈ ಕಥನ ಬಹುರಮ್ಯವಾಗಿ ಮೂಡಿಬಂದಿದೆ. ಇಪ್ಪತ್ತನೆಯ ಶತಮಾನದ ಸಾಂಸ್ಕೃತಿಕ ಚಲನೆಯನ್ನು, ಜೀವನಗತಿಯನ್ನು ಅರ್ಥಮಾಡಿಕೊಳ್ಳಲು ಈ ಕೃತಿ ನಮ್ಮ ನೆರವಿಗೆ ಬರುತ್ತದೆ.

‘ಕನ್ನಡದ ಆತ್ಮಚರಿತ್ರೆಗಳಲ್ಲಿಯೇ ಅತ್ಯಂತ ದೊಡ್ಡದು ಮತ್ತು ಉತ್ಕೃಷ್ಟವಾದುದು; ಕುವೆಂಪು ಅವರನ್ನು ಅಭ್ಯಾಸ ಮಾಡಬೇಕು, ತಿಳಿದುಕೊಳ್ಳಬೇಕೆಂಬವರಿಗೆ ಇದು ಕೈಪಿಡಿಯಂತಿದೆ’ ಎಂದು ಕೊಂಡಾಟಕ್ಕೂ ಈ ಕೃತಿ ಪಾತ್ರವಾಗಿದೆ. ಕುವೆಂಪು ಅವರ ನೆನಪಿನ ಶಕ್ತಿ ದೊಡ್ಡದು. ತಮ್ಮ ಬಾಲ್ಯದ ದಿನಗಳನ್ನು ಇನ್ನೂರಕ್ಕೂ ಹೆಚ್ಚು ಪುಟಗಳಲ್ಲಿ ಬಹು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಕಾಲಬದಲಾದಂತೆ ಇತಿಹಾಸ ಮರುಕಳಿಸುತ್ತದೆ ಎಂಬುದು ಬಲ್ಲವರ ಮಾತು. ಇದರಲ್ಲಿ ತಥ್ಯವಿದೆ. ನಾವಿಂದು ಕರೋನಾ ದುರಿತ ಕಾಲದಲ್ಲಿ ಇದ್ದೇವೆ. ಹಿಂದೆಯೂ ಇದೇ ಬಗೆಯ ಭಯಾನಕ ರೋಗಗಳಿದ್ದವು ಎಂಬುದನ್ನು ‘ನೆನಪಿನ ದೋಣಿ’ ಕೃತಿ ನಮ್ಮ ಗಮನಕ್ಕೆ ತರುತ್ತದೆ. ‘ಮೊದಲನೆಯ ಮಹಾಯುದ್ಧದ ಭಯಂಕರತೆ, ರಭಸದ ಕ್ಲೇಶ ಮಲೆನಾಡಿನ ಮೂಲೆಗೂ ತಟ್ಟಿತು. ಒಂದು ಸಂಜೆ ಮೈದಾನದಲ್ಲಿ ಚೆಂಡಾಟ ಮುಗಿಸಿ ಹುಡುಗರೆಲ್ಲ ಗುಂಪು ಕುಳಿತು ಹರಟೆ ಹೊಡೆಯುತ್ತಿದ್ದಾಗ ಒಬ್ಬ (ಅವನು ಡಾಕ್ಟರ್ ಮಗನಿರಬಹುದು) ಹೇಳಿದ. ‘ಅಲ್ಲೋ ಇಲ್ಲಿ ಕೇಳಿ, ಜರ್ಮನಿಯಿಂದ ಒಂದು ಕಾಯಿಲೆ ಬಂದಿದೆಯಂತೆ. ಅವರೇ
ಇಂಗ್ಲೀಷರ ಮೇಲೆ ಕಳಿಸಿದ್ದಂತೋ! ಬೀಸು ಬಡಿಗೇ ಜ್ವರ ಅಂತಾರೆ. ಬೀಸಿ ಬಡಿಗೆ ಹೊಡೆದರೆ ಹೆಂಗೆ ಸಾಯ್ತಾರೋ ಹಂಗೆ ಸಾಯ್ತಾರಂತೆ ಅದು ಬಂದ್ರೆ ಜನ!

ಆದರೆ ದೊಡ್ಡೋರಿಗೆ ಅಂತೆ ಕಣೋ ಅದು ಹೆಚ್ಚಾಗಿ ಬಡಿಯೋದು. ನಮ್ಮ ಹಾಂಗಿರುವ ಹುಡುಗರಿಗೆ ಬೆಳಿಗ್ಗೆ ಜ್ವರ ಬಂದು ಒಂದು ದಿನ ಇದ್ದು ಬಿಟ್ಟು ಹೋಗ್ತದಂತೆ ಮಕ್ಕಳೆಂದರೆ ಎಲ್ಲರಿಗೂ ಅಕ್ಕರೆ ತಾನೆ!’ ಅದರ ನಿಜಾಂಶ ಏನೇ ಇರಲಿ, ನಮಗಂತೂ ಹಾಗೇ ಆಯ್ತು. ನಮ್ಮ ಗುಂಪಿನ ಹುಡುಗರಿಗೆ ಆ ಇನ್‌ಪ್ಲೂಯೆನ್ ಜಾ ಜ್ವರ ಬಂದು ಹೆಚ್ಚು ತೊಂದರೆ ಕೊಡದೆ, ಬಿಟ್ಟೆ ಹೋಯಿತು. ಆದರೆ ನಾಡಿಗಾದ ಗತಿಯೇ ಬೇರೆ! ಆ ಮಹಾರೋಗದ ದೆಸೆಯಿಂದ ಮನೆ ಮನೆಗಳೇ ನಾಶವಾದವು.
ಇಡೀ ಸಂಸಾರಗಳೇ ಸತ್ತು ಹೋದವು! ಶಾಲೆಗಳಿಗೆಲ್ಲ ರಜೆ ಘೋಷಿಸಿದರು. ನಾವು ಪೇಟೆಯಿಂದ ಕುಪ್ಪಳಿಗೆ ಹೋದೆವು.

ಪ್ಲೇಗು, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳ ಹೆಸರನ್ನು ಮಾತ್ರ ಕೇಳಿದ್ದರು ಅತ್ತ ಕಡೆಯ ಜನರು. ಆ ರೋಗಗಳೆಲ್ಲ ದೊಡ್ಡ ದೊಡ್ಡ ನಗರಗಳಿಗೇ ಮೀಸಲು. ನಮ್ಮತ್ತ ಕಡೆ ತಲೆಹಾಕುವುದೇ ಇಲ್ಲ ಎಂಬುದು ನಮ್ಮ ನಂಬುಗೆಯಾಗಿತ್ತು. ಆದರೆ ಈ ಹೊಸ ರೀತಿಯ ಸಾಂಕ್ರಾಮಿಕದಿಂದ ಜನ ಕೆಂಗಟ್ಟು ಹೋದರು. ಕುಪ್ಪಳಿಯ ಮನೆ ಒಂದು ರೀತಿಯ ಆಸ್ಪತ್ರೆಯಂತೆ ತೋರುತಿತ್ತು. ಹಳ್ಳಿಗಳಿಂದ ಏಳೆಂಟು ಮೈಲಿ ದೂರದ ತೀರ್ಥಳ್ಳಿಗೆ ರೋಗಿಗಳು ಆಸ್ಪತ್ರೆಗಳಿಗೆ ಬರುವುದು ಸಾಧ್ಯವಿರಲಿಲ್ಲವಾದ್ದರಿಂದ ಹಳ್ಳಿಗಳ ಪ್ರತಿಷ್ಠಿತ ಮನೆಗಳಿಗೆ ಔಷಽಗಳನ್ನು ಹಂಡೆಗಟ್ಟಲೆ ಸರಬರಾಜು ಮಾಡುತ್ತಿದ್ದರು. ಆ ಮನೆಗಳಲ್ಲಿದ್ದ ತುಸು
ವಿದ್ಯಾವಂತರಾದ ಸೇವಾ ಮನೋಧರ್ಮದ ಯುವಕರು ಆ ಜಾಪಥಗಳನ್ನೂ ತಮ್ಮ ಮನೆಯಲ್ಲಿಯೇ ತಯಾರಿಸಿದ ಅನ್ನ, ಗಂಜಿ ಮುಂತಾದ ಪಥ್ಯಗಳನ್ನೂ ಹೊತ್ತುಕೊಂಡು ಹೋಗಿ ಡಾಕ್ಟರ್ ತಿಳಿಸಿದ ಕ್ರಮದಲ್ಲಿ ರೋಗಿಗಳಿಗೆ ನೀಡುತ್ತಿದ್ದರು.

ಕೊನೆ ಕೊನೆಗೆ ಹೆಣಗಳನ್ನು ಹೊತ್ತು ಅವರವರ ಜಾತಿಯ ರೂಢಿಯಂತೆ ಸುಡುವವರನ್ನು ಸುಟ್ಟು, ಹೂಳುವವರನ್ನು ಹೂಳಿಯೂ ಬರಬೇಕಾಯಿತು. ಕೆಲವೆಡೆ ಒಂದು ಸಂಸಾರದಲ್ಲಿ ಒಬ್ಬರೂ ಉಳಿಯದಂತೆ ಖಾಲಿಯಾದುದೂ ಉಂಟು. ಕೆಲವು ಮನೆತನಗಳಲ್ಲಿ ದುಡಿಯುವವರೆಲ್ಲ ಸತ್ತು ಮಕ್ಕಳು, ಮುದುಕರು ಮಾತ್ರ ಉಳಿದು ಅವರ ತರುವಾಯದ ರಕ್ಷಣೆಯ ಮತ್ತು ಆರೈಕೆಯ ಹೊಣೆಗೂ ಇವರು ಭಾಜನರಾಗಬೇಕಾಗಿ ಬಂದಿ ತಂತೆ’ (೨೩, ಪುಟ ೯೧-೯೩). ಇದು ವರ್ತಮಾನದ ಕೋವಿಡ್ ೧೯ ಉಂಟು ಮಾಡಿದ ಭಯಾನಕ ದೃಶ್ಯವನ್ನು ನೆನಪಿಸುವಂತಿದೆ. ಹೀಗೆ ನಿನ್ನೆ ಮೊನ್ನೆಯ ೨೦ನೆಯ ಶತಮಾನದ ವಾಸ್ತವ
ಸಂಗತಿಗಳನ್ನು, ಸಾಮಾಜಿಕ ಇತಿಹಾಸವನ್ನು ಕುವೆಂಪು ಅವರು ಈ ಕೃತಿಯಲ್ಲಿ ನಿರುದ್ವಿಗ್ನವಾಗಿ ಕಂಡರಿಸಿದ್ದಾರೆ. ವರ್ತಮಾನದ ಅರಿವಿಗೆ ಪೂರ್ವಸ್ಮೃತಿ ಅವಶ್ಯಕ ಎಂಬ ಅಂಶ ಇಲ್ಲಿ ಗೊತ್ತಾಗುತ್ತದೆ.