ಮಂಜುಳಾ ಡಿ.
ಈ ಕುಡಿತ ಎಂಬುದೊಂದು ನಮ್ಮ ರಾಜ್ಯದಲ್ಲಿ ಇರದೇ ಹೋಗಿದ್ದರೆ ನನ್ನ ಬದುಕು ಬೇರೆಯೇ ಆಗಿರುತ್ತಿತ್ತು ಎಂದ ಆ ಗಾರ್ಮೆಂಟ್ ಉದ್ಯೋಗಿ ಮಹಿಳೆಯ ಮಾತಿನಲ್ಲಿ ಅದೆಷ್ಟು ನೋವು!
ಕುರಳಿ, ಶುಭಾ ಕಾಯುತ್ತಿದ್ದರು. ನಾನು ತಲುಪುವುದೇ ತಡವಾಗಿತ್ತು. ಐದಾರು ನಿಮಿಷ ಉಭಯ ಕುಶಲೋಪರಿಯ ನಂತರ ‘ನೀನು ಇಷ್ಟು ಐಟಮ್ಸ್ ಆರ್ಡರ್ ಮಾಡು…’ ಎಂದು ಪಟ್ಟಿ ಹೇಳಿ ಅವರಿಬ್ಬರೂ ವಾಶ್ ರೂಂಗೆ ನಡೆದರು.
ಅಗಲವಾದ ದುಬಾರಿ ಟ್ರೇಯಲ್ಲಿ ಮೂರು ಲೋಟ ನೀರು ಜೋಡಿಸಿಕೊಂಡು ಬಂದ ವೇಟರ್‌ನನ್ನು ನೋಡಿದಾಗ ಅದೇಕೋ ಮಾತಾಡಿಸಬೇಕು ಅನ್ನಿಸಿತು. ತುಸು ಪ್ರಯಾಸದಿಂದ ಇಂಗ್ಲಿಷ್ ಕಲಿತಿರುವ ಆತ ಹೈದ್ರಾಬಾದ್ ಕರ್ನಾಟಕ ಭಾಗದವ ಎಂದು ಅಂದಾಜಿಗೆ ಸಿಕ್ಕಿತು. ಅವನ ಮಾತಿನ ಸಾರ ಹೀಗಿತ್ತು. ಮನೆಯಲ್ಲಿ ಕುಡಿತಕ್ಕೆ ಬಿದ್ದ ತಂದೆ, ಎಲ್ಲಾ ನಿಭಾಯಿಸಲು ಹೆಣಗುತ್ತಿದ್ದ ಅಮ್ಮ. ಅವನಿಗೋ ಇನ್ನೂ ವಯಸು ಚಿಕ್ಕದು, ಓದುವ ಹುಚ್ಚು ಹೆಚ್ಚಾಗಿ ಊರು ಬಿಟ್ಟು ಬಂದು, ಹೀಗೆ ಕೆಲಸ ಮಾಡಿಕೊಂಡು ಓದು ಮುಂದುವರೆಸಿದ್ದ.
ಮನೆಯಲ್ಲಿ ಕುಡಿತಕ್ಕೆ ಬಿದ್ದ ಅವನ ಅಪ್ಪನಿಂದ ಅವನ ಮತ್ತು ಉಳಿದ ಮಕ್ಕಳ ಭವಿಷ್ಯ ಆಕೆಯ ಅಮ್ಮನನ್ನ ಸಾಕಷ್ಟು ಹಿಂಸಿಸಿತ್ತು. ಊಟ ಮುಗಿಸಿ ‘ನೀವು ಕ್ಯಾಬ್ ಹಿಡಿದು ಹೋಗಿ ನನಗೆ ಇಲ್ಲಿಂದ ಸಿಟಿ ಬಸ್ ರೂಟ್ ಸುಲಭ…’ ಎಂದು ಗೆಳತಿಯರನ್ನು ಬೀಳ್ಕೊಟ್ಟು ಬಸ್ ಹತ್ತಿದೆ. ಪಕ್ಕಾದಾಕೆ ತೂಕಡಿಕೆಯಲ್ಲಿದ್ದಳು. ಒಂದೆರಡು ಸ್ಟಾಪ್ ದಾಟಿರಬೇಕು. ಧಿಗ್ಗನೇ ಎದ್ದವಳೇ ‘ಟೋಲ್‌ಗೇಟ್ ಸ್ಟಾಪ್ ಹೋಯ್ತಾ ಅಂದಳು…’ ‘ನಿಮ್ಮ ಸ್ಟಾಪ್ ಇನ್ನೂ ಬಹಳ ದೂರ ಇದೆ ಆರಾಮ ಮಲಗಿ’ ಅಂದೆ.
ಹೀಗೆ ಪರಿಚಯ ಸಾಗಿ, ಮಾತುಗಳು ಮುಗಿಯಲಿಲ್ಲ. ಆಕೆಯ ಸ್ಟಾಪ್ ಬಂದಾಗ ಅತೀ ಪರಿಚಯದವರನ್ನು ಬೀಳ್ಕೊಟ್ಟ ಹಾಗೆ ಕಣ್ಣೊರೆಸಿಕೊಳ್ಳುತ್ತಾ ಇಳಿದು ಹೋದಳು. ಆಕೆಯ ಹೆಸರು ಶ್ರೀಕಲಾ. ಮದುವೆಯಾದ ಮೂರ್ನಾಲ್ಕು ವರ್ಷಕ್ಕೆ ಗಂಡನ ಕುಡಿತದ ಕಾಟ ತಾಳಲಾರದೇ ಮನೆ ಬಿಟ್ಟು ಗಾರ್ಮೆಂಟ್ಸ್ ಸೇರಿ ತನ್ನ ಎರಡು ಮಕ್ಕಳನ್ನು ಬೆಳೆಸಿದ್ದಾಳೆ.
ಈಗಾಗಲೇ ಮಗಳಿಗೆ ಮದುವೆ ಮಾಡಿ ಮೊಮ್ಮಗಳನ್ನೂ ನೋಡಿದ್ದಾಳೆ. ನಲವತ್ತರ ವಯಸ್ಸಿಗಾಗಲೇ ಆಕೆಯ ಜೀವನದಲ್ಲಿ ಇಷ್ಟೆಲ್ಲಾ ಘಟಿಸಿತ್ತು. ಆಕೆಗೆ ತನ್ನ ಪಾಡಿಗೆ ತಾನು ಬದುಕಬೇಕು ಎನ್ನುವ ಮನಸಿದೆ ಆದರೆ ಸಮಾಜ….ಇತ್ಯಾದಿ ರಗಳೆಗಳು.
‘ಎಷ್ಟೋ ಜನರ ಬದುಕು ನಲವತ್ತರ ನಂತರವೇ ಆರಂಭವಾಗೋದು, ನಿಮಗೆ ಇಚ್ಛೆಯಿದ್ದರೆ ನಿಮ್ಮ ಬದುಕು ನೀವು ಕಟ್ಟಿಕೊಳ್ಳಿ’ ಎನ್ನುವ ಚರ್ಚೆ ಮಾಡುತ್ತಾ ಬಂದೆ.
ಕುಡಿತ ಇಲ್ಲದಿರುವ ಬದುಕು
ಮಾತಿನ ಮಧ್ಯೆ ಆಕೆಯ ಬಾಯಿಂದ ಹಲವು ಬಾರಿ ಬಂದ ಒಂದೇ ಮಾತು ‘ಈ ಕುಡಿತ ಎಂಬುದೊಂದು ನಮ್ಮ ರಾಜ್ಯದಲ್ಲಿ ಇರದೇ ಹೋಗಿದ್ದರೆ ನನ್ನ ಬದುಕು ಬೇರೆಯೇ ಆಗಿರುತ್ತಿತ್ತು.’ ಇಲ್ಲಿ ಶ್ರೀಕಲಾ ನಮ್ಮ ದೇಶದ ಅತೀ ದೊಡ್ಡ ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾಳೆ. ಕೆಲಸದ ಜಯಮ್ಮ, ಪದ್ಮಕ್ಕ .. ಹೀಗೆ ಇವರ ಗಂಡಂದಿರದ್ದೆಲ್ಲಾ ಕುಡಿತಕ್ಕಾಗಿಯೇ ಬದುಕು ಎಂಬಂತಿದೆ.
ಸಾಲದ್ದಕ್ಕೆ ಇವರ ದುಡಿತದ ಒಂದು ಭಾಗವನ್ನು ಕೂಡ ಕಿತ್ತು ಒಯ್ಯುವವರೇ. ಇಂಥ ಎಷ್ಟೋ ಹೆಂಗಸರ ಬದುಕಿಗೆ ಆಧಾರ ಗಾರ್ಮೆಂಟ್ಸ್. ಸಂಜೆ ಆರರ ವೇಳೆ ಎಷ್ಟೋ ಹೆಂಗಸರು ಗಾಮೆಂಟ್ಸ್‌ನಿಂದ ಹೊರಬೀಳುತ್ತಿದ್ದರೆ ಅವರ ಹಿಂದೆ ಎಷ್ಟೋ ಕೂಸುಗಳ ಬೆಳವಣಿಗೆ ಒಂದೇ ಕೈಯಿಂದ ಸಾಗುತ್ತಿರುತ್ತದೆ. ಶ್ರೀಕಲಾರಂತಹ ಹಲವು ಹೆಂಗಸರು ತಮ್ಮನ್ನು ಕಟ್ಟಿಕೊಂಡವನ ಕುಡಿತ ಮತ್ತು
ಕುಡಿದಾಗ ಬೀಳುವ ಹೊಡೆತ – ಪೆಟ್ಟುಗಳನ್ನು ಸಹಿಸುತ್ತಲೇ, ಆತ ಕುಡಿದು ಬಿದ್ದಾಗ ಆತನ ಎಲ್ಲಾ ಬಾಚುತ್ತಾ, ಆತ ಕುಡಿತದ ಚಟ ಬಿಡಲಿ ಎಂದು ಹರಕೆ ಕಟ್ಟುತ್ತಲೇ ಬದುಕುತ್ತಿರುವ ನತದೃಷ್ಟರು. ದೇಶದ ದೊಡ್ಡ ಆದಾಯ ನಿಜಕ್ಕೂ ‘ಮದ್ಯ’, ನಿಜ. ಆದರೆ ಹಲವು ಸಹಸ್ರ ಲಕ್ಷ ಹೆಣ್ಣು ಮಕ್ಕಳನ್ನು ಒಬ್ಬಂಟಿಯಾಗಿ ಬದುಕು ಎದುರಿಸುವಂತೆ ಮಾಡಿ ಯಾತನೆಗೆ ದೂಡಿರುವುದೂ ಈ ಕುಡಿತವೇ.
ಲಕ್ಷಗಟ್ಟಲೆ ಉದ್ಯೋಗಿಗಳು
ನಮ್ಮ ರಾಜ್ಯದ ರಾಜಧಾನಿಯಲ್ಲಿ ಮುಖ್ಯವಾಗಿ ಹೊಸೂರು ರಸ್ತೆ, ಕನಕಪುರ ರಸ್ತೆ ಮತ್ತು ಮೈಸೂರು ರಸ್ತೆಗಳಲ್ಲಿ ಸುಮಾರು 800 ಕ್ಕೂ ಹೆಚ್ಚು ಗಾರ್ಮೆಂಟ್ಸ್ ಫ್ಯಾಕ್ಟರಿಗಳಿವೆ. ಈ ಫ್ಯಾಕ್ಟರಿಗಳಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದರೆ ಅಚ್ಚರಿಯೆ!
ಪೀಟರ್ ಇಂಗ್ಲೆಂಡ್, ಆಲನ್ ಸೋಲಿ, ಟಾಮಿ, ಹಿಲ್ ಫಿಗರ್, ನೈಕಿ…ಇತ್ಯಾದಿ ಅಂತಾರಾಷ್ಟ್ರೀಯ ಬ್ರಾಂಡ್‌ಗಳು ಬೆಂಗಳೂರಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ತಯಾರಾಗುತ್ತಿದ್ದು ಈ ಉತ್ಪನ್ನಗಳಿಗೆ ಅತೀವ ಬೇಡಿಕೆಯಿದೆ. ನಮ್ಮಲ್ಲಿ ಗಾರ್ಮೆಂಟ್ಸ್ ಎಷ್ಟರ ಮಟ್ಟಿಗೆ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದರೆ ನಮ್ಮ ರಾಜ್ಯವು, ಇಡೀ ದೇಶದ ಜವಳಿ ಉದ್ಯಮಕ್ಕೆ ಶೇ.20 ರಷ್ಟು ಕೊಡುಗೆ ನೀಡುತ್ತಿದೆ.
ಆದರೆ ಇಂಥ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸಂಕಟಗಳಿಗೆ ಧ್ವನಿಯಾಗುವ ಪೂರಕ ವಾತಾವರಣ ಸೃಷ್ಟಿಸಿ ಕೊಡುವ ಬಗ್ಗೆ ಗಮನ ಹರಿಸುವ ತುರ್ತು ಅಗತ್ಯ. ಶ್ರೀಕಲಾರಂತಹ ಹಲವರನ್ನು ಮಾತಾಡಿಸಿದೆ. ಆಗ ತಿಳಿದು ಬಂದ ಮುಖ್ಯ ಅಂಶ. 1970ರಿಂದಲೂ ಈ ಗಾರ್ಮೆಂಟ್ಸ್ ಫ್ಯಾಕ್ಟರಿ ಸದಾ ಕಾರ್ಯನಿರ್ವಹಿಸುತ್ತಿದ್ದು ಪ್ರತೀ ಬಾರಿ ಕನಿಷ್ಠ ವೇತನ ಜಾರಿಯು, ದೊಡ್ಡ ಹೋರಾಟಗಳ ಮುಖೇನವೇ ಸಾಗಿದೆ. ಇತ್ತೀಚೆಗಷ್ಟೇ ಮಾರ್ಚ್‌ನಲ್ಲಿ ಬಿ.ಎಂ.ಓ.ಸಿ. ಬಸ್‌ನಲ್ಲಿ ಗಾರ್ಮೆಂಟ್ಸ್ ಮಹಿಳೆಯರಿಗೆ ನೂರು ರೂಪಾಯಿಗಳಿಗೆ ಬಸ್ ಪಾಸ್ ಯೋಜನೆ ಜಾರಿಗೊಳಿಸಲಾಗಿದೆ.
ಕುಟುಂಬದ ಜವಾಬ್ದಾರಿ
ಇಂಥ ಗಾರ್ಮೆಂಟ್ಸ್ ಮಹಿಳೆಯರ ಹಿಂದೆ ಒಂದು ಇಡೀ ಕುಟುಂಬದ ಜವಾಬ್ದಾರಿಯ ಹೊರೆ ಇರುವ ಕಾರಣ ಇಂಥ ಮಹಿಳೆಯ ರಿಗೆ ಪೂರಕ ವಾತಾವರಣ ಕಲ್ಪಿಸುವ ಅತ್ಯಗತೆ ಕಾಣುತ್ತದೆ. ಸ್ಟಾಪ್ ಇಳಿದು ಒಂದೆರಡು ಫರ್ಲಾಂಗ್ ನಡೆಯುತ್ತ ಹೆಜ್ಜೆ ಹಾಕಿದೆ. ಆಗಷ್ಟೇ ಬಿದ್ದ ಸೋನೆ ಸಂಜೆಯ ತುಸು ಕೇಸರಿ ಬಣ್ಣ ರಸ್ತೆಯ ಟಾರಿಗೆ ರಂಗು ಹಚ್ಚಿತ್ತು. ಹೋಟೇಲಿನ ವೇಟರ್ ಹುಡುಗ, ಶ್ರಿಕಲಾ ರಂತಹ ಹೆಣ್ಣುಮಕ್ಕಳ ಬದುಕು ಕಸಿಯುವ ಕುಡಿತ ಎಲ್ಲಾ ಸೇರಿ ಮನದ ತುಂಬಾ ಕೆಸರು ತುಂಬಿತ್ತು. ಅಲ್ಲೇ ತುಸು ದೂರದಲ್ಲಿ ಪುಟ್ ಪಾತ್ ಮೇಲೆ ಹೂ ತರಕಾರಿ ಗುಡ್ಡೆ ಹಾಕಿಕೊಂಡಾಕೆಯ ಪಕ್ಕದಲ್ಲೇ, ಆಕೆಯ ಮಗಳು ಬೀದಿ ದೀಪದಡಿ ಒಂದೆರಡು ಹಾಳೆ ಹರವಿಕೊಂಡು ತನ್ನ ಕ್ಲಾಸಿನ ಪಾಠವನ್ನೋ ಏನೋ, ಬರೆಯೋ ಯತ್ನದಲ್ಲಿದ್ದಳು.
ಆಗ ತಾನೆ ಗಾರ್ಮೆಂಟ್ಸ್ ಬಿಟ್ಟಿರಬೇಕು, ಹೆಂಗಸರು ಗಲಗಲಾ ಅನ್ನುತ್ತಾ ತರಕಾರಿ, ಹೂ ಕೊಳ್ಳುತ್ತಾ ಸಾಗುತ್ತಿದ್ದರು. ನಗು ನಗುತ್ತಾ, ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಂಡು ದುಡಿಯುವ ಆ ಮಹಿಳೆಯರ ನೆಮ್ಮದಿಯನ್ನು ಕಂಡರೆ ಖುಷಿ ಎನಿಸಿತು. ಆ ಬೀದಿ ಬದಿಯ ತರಕಾರಿ ಮಾರುವ ಹೆಂಗಸಿನ, ಪ್ಲಾಸ್ಟಿಕ್ ಚಪ್ಪಲಿ ಮಾರುವ ವ್ಯಕ್ತಿಯ ದಿನದ ವ್ಯಾಪಾರವು ಈ ಗಾರ್ಮೆಂಟ್ಸ್ ಉದ್ಯೋಗಿ ಗಳ ಖರೀದಿಯ ಮೇಲೆ ಅವಲಂಬಿಸಿತ್ತು. ಪೀಟರ್ ಇಂಗ್ಲೆಂಡ್ ಬಟ್ಟೆ ತಯಾರಿಸುವವರ ಈ ಹೆಂಗಸರ ಬದುಕೇ ಅತಂತ್ರ ಎನಿಸಿತು, ಗಾಳಿಗೆ ಮೇಲೇರುತ್ತಾ ತೂರಾಡುವ ಗಾಳಿಪಟದ ರೀತಿ.