Sunday, 15th December 2024

ಅನ್‌ನೋನ್‌ ನಂಬರ್‌ ಕಾಲ್‌ ಬರಲೇ ಇಲ್ಲ !

ಹೊಸ ಕಥೆ

ವಿರಾಜ್ ಕೆ.ಅಣಜಿ

ಆದರೆ, ನನ್ನನ್ನು ಅಷ್ಟು ಬ್ಲೈಂಡ್ ಆಗಿ ನಂಬಿದ್ದ ಗೆಳೆಯನ ಜತೆ ನಾನಲ್ಲದೇ ಯಾರು ನಿಲ್ಲುತ್ತಾರೆ ಎಂದು ಮನಸ್ಸು ನನ್ನನ್ನೇ ಕಾಡಲು ಆರಂಭಿಸಿತ್ತು. ದುರ್ಗಕ್ಕೆ ಹೋದಾಗ ಕರೆದು ಮಾತನಾಡೋಣ, ತಿದ್ದಿದರೆ ಶಿಲಿಯಾಗದ ಕಲ್ಲು ಇಲ್ಲವೇ ಇಲ್ಲ ಎಂದು ಅನ್ನಿಸುತ್ತಿತ್ತು. ಇದಾಗಿ ನಾಲ್ಕೈದು ದಿನಗಳಿರಬಹುದು.
ಮೆಸೆಂಜರ್‌ನಲ್ಲಿ ಸುನಿಲ್ ಮೆಸೇಜ್ ಕಳಿಸಿದ್ದರು.

ನನ್ನೂರು ಚಿತ್ರದುರ್ಗ. ನಮ್ಮ ಬಡಾವಣೆಯಲ್ಲಿ ಎಲ್ಲ ಹುಡುಗರಂತೆ ನಮ್ಮದೂ ಒಂದು ಕ್ರಿಕೆಟ್ ಕ್ಲಬ್. ಎರಡು ಮೂರು ಕ್ಯಾಚ್ ಬಿಟ್ಟು, ಬೌಲಿಂಗ್‌ನಲ್ಲಿ ಮೂರ್ನಾಲ್ಕು ಸಿಕ್ಸರ್ ಚಚ್ಚಿಸಿಕೊಂಡು, ಫಸ್ಟ್ ಬಾಲ್‌ನಲ್ಲೇ ಬೌಲ್ಡ್ ಆಗುತ್ತಿದ್ದರಿಂದ ನನಗೆ ಎಲ್ಲ ಟೀಮಲ್ಲೂ ಬಹುಬೇಡಿಕೆ! ಅದಿರಲಿ, ಹಾಗೂ ಹೀಗೂ ಹತ್ತನೇ ಕ್ಲಾಸ್ ಮುಗಿಸಿ ದ್ದೆವು.

ಪಿಯುಸಿಯಲ್ಲಂತೂ ಹುಚ್ಚೆದ್ದು ಕುಣಿದು ಫೋನ್ ನಂಬರ್ ರೀತಿ ಮಾರ್ಕ್ಸ್ ತೆಗೆದು ಫೇಲ್ ಆಗಿದ್ದೂ ಆಯಿತು. ಕೊನೆಗೆ ಸಪ್ಲಿಮೆಂಟರಿಯಲ್ಲೂ ಫೇಲಾಗಿ ಮನೆಯ ಮೂಲೆ ಹಿಡಿದದ್ದಾಯಿತು. ಈ ಸಮಯದಲ್ಲೇ ಕೆಲವು ಸೂರ್ತಿ ತುಂಬುವ ಬರೆಹಗಳು, ಅಂಕಣಗಳು ನನ್ನನ್ನು ಹಿಡಿದು ಮೇಲೆತ್ತುತ್ತಿದ್ದವು. ಅದರಿಂದಾಗಿ ಮಾತು, ಚಿಂತನೆಗಳಲ್ಲಿ ಬದಲಾವಣೆ ಗೋಚರಿಸಿದ್ದವು.

ಕೋಳಿ ಜಗಳ, ಹೇ ಹೋಗಲೇ-ಬಾರಲೇ ಎಂಬೆಲ್ಲ ಕಾಡು ಹರಟೆಯವನಾಗಿದ್ದ ನನ್ನ ಮಂಡೆಯ ತುಂಬಾ ರಿಚರ್ಡ್ ಬ್ರಾನ್ಸನ್, ಸ್ಟೀವ್ ಜಾಬ್ಸ್, ಶೇಕ್ ಮೊಹಮ್ಮದ್ ಬಿನ್ ರಷೀದ್ ಮೌಕ್ತಮ್ ತುಂಬಿಕೊಂಡಿದ್ದರು. ಮಾತಿನ ದಾಟಿಯೂ ಬದಲಾಗಿತ್ತು, ಯಾರೂ ನನಗೆ ಏಕವಚನದಲ್ಲಿ ಮಾತನಾಡಿಸಬಾರದು,
ಅದಕ್ಕೆ ನಾನೇ ಮೊದಲು ಗೌರವದಿಂದ ಮಾತನಾಡಿಸೋಣ ಎಂಬೆಲ್ಲ ನಿಯಮ ಪಾಲನೆ ಮಾಡುತ್ತಿದ್ದೆ. ನನ್ನ ಈ ಹೀರೋಗಳಂತೆ ನಾನೂ ಏನಾದರೂ ಸಾಧನೆ ಮಾಡುತ್ತೇನೆ ಎಂದು ಜೋಶ್ ತುಂಬಿಕೊಳ್ಳುತ್ತಿದ್ದ ದಿನಗಳವು.

ಇದೆಲ್ಲವನ್ನು ನನಗೂ ಅರಿವಿಲ್ಲದಂತೆ ನನ್ನ ಜತೆಗಿದ್ದ ಸುನಿಲ್ ಎಂಬ ಗೆಳೆಯ ಗಮನಿಸುತ್ತಿದ್ದರು. ಇಬ್ಬರೂ ಮಾತಿಗೆ ಕುಳಿತರೆ ತಾಸುಗಳು ಉರುಳಿದ್ದೇ ಗೊತ್ತಾಗುತ್ತಿರಲಿಲ್ಲ. ನನಗಾಗ ದುರ್ಗದಿಂದ ಬೆಂಗಳೂರು ಎಷ್ಟು ಕಿಲೋಮೀಟರ್ ಎಂಬುದೂ ನೆಟ್ಟಗೆ ಗೊತ್ತಿರಲಿಲ್ಲ. ಆದರೆ, ನ್ಯೂಯಾರ್ಕ್ ಹಾಗಂತೆ, ದುಬೈ
ಹೀಗಿತ್ತಂತೆ, ಸ್ಟೀವ್ ಜಾಬ್ಸ್ ಹೀಗೆಲ್ಲ ಕಷ್ಟ ಪಟ್ಟು ಸಾಧಿಸಿದರಂತೆ, ವರ್ಜಿನ್ ಕಂಪನಿ ಹೀಗೆಲ್ಲಾ ಮಾಡ್ತಂತೆ ಎಂದು ಹೇಳುತ್ತಿದ್ದೆ. ಅದಕ್ಕೆಲ್ಲ ಸರಕು ಸೂರ್ತಿ ತುಂಬುವ ಪತ್ರಿಕಾ ಅಂಕಣಗಳು!

ಪಿಯುಸಿ ಮುಗಿಸಲು ಐದು ವರ್ಷ ತೆಗೆದುಕೊಂಡಿದ್ದೆ. ಒಂದೆಡೆ ಗೋಲ್ಡನ್ ಡೇಸ್ ಇನ್ನೊಂದೆಡೆ ಹಸಿದ ಹುಲಿಯಂಥ ಸ್ಥಿತಿ ನನ್ನದು. ನನ್ನ ಹೀರೋಗಳಂತೆ ನಾನೂ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದೆ. ಅದಕ್ಕಾಗಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಓದೋಣ ಎಂದುಕೊಂಡೆ. ದುರ್ಗದಲ್ಲಿದ್ದರೆ ನನ್ನ ಅಪ್ಪನ ಶ್ಯಾಡೋ ನನ್ನನ್ನು ಬಿಡಲ್ಲ ಎಂದು ದಾವಣಗೆರೆಗೆ ಶಿಫ್ಟ್ ಆಗೋಣ ಎಂದುಕೊಂಡು ಅಲ್ಲಿನ ಜಯದೇವ ಹಾಸ್ಟೆಲ್ ಸೇರಿಕೊಂಡೆ. ಮೂವರ ಶೇರಿಂಗ್‌ನಲ್ಲಿದ್ದ ನನ್ನ ರೂಂ ನಂಬರ್ ೭೮, ನೋಡಿದರೆ ಅಲ್ಲಿಯೂ ಸುನಿಲ್! ಇದು ಕೊ-ಇನ್ಸಿಡೆಂಟ್ ಆಗಿರಲಿಲ್ಲ. ನಾನು ಏನೇನು ಮಾಡ್ತೇನೆ ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತಿದ್ದ ಸುನಿಲ್, ನಾನು ಮಾಡಿದಂತೆಯೇ ಡಿಟ್ಟೋ ಮಾಡಿದ್ದರು.

ಅಲ್ಲಿಯವರೆಗೂ ನನಗೊಬ್ಬ ಗೆಳೆಯ ಕಂ ಫಾಲೋಯರ್ ಇದ್ದಾರೆ ಎಂಬ ಅರಿವೇ ನನಗಿರಲಿಲ್ಲ. ಸುನಿಲ್‌ರ ಪಿಯು ಅಂಕಗಳು ಅಷ್ಟಾಗಿ ಚೆನ್ನಾಗಿ ಇರದ ಕಾರಣ ನನ್ನ ಕಾಲೇಜಿನಲ್ಲಿ ಅಡ್ಮಿಷನ್ ಸಿಕ್ಕಿರಲಿಲ್ಲ, ಹೀಗಾಗಿ ಅಲ್ಲಷ್ಟೇ ನಾನು ಬಚಾವ್ ಆಗಿದ್ದೆ! ಸುನಿಲ್ ಸದಾ ಮಹತ್ವಾಕಾಂಕ್ಷಿ. ಬಹಳಷ್ಟು ನೀಟ್, ದೊಡ್ಡ ಥಿಂಕಿಂಗ್‌ ಗಳು, ವಿದೇಶದ ಬದುಕು, ಐಶಾರಾಮಿ ಜೀವನ ತನ್ನದಾಗಬೇಕು ಎಂಬುದನ್ನು ಸದಾ ಹಂಚಿಕೊಳ್ಳುತ್ತಿದ್ದರು. ತನ್ನ ಉಗುರಿನಲ್ಲಿ ಸಣ್ಣ ಕೊಳೆಯೂ ಇರಬಾರದು, ಹಿಮ್ಮಡಿ ಕೂಡ ಒಂದಷ್ಟು ಒಡೆದಿರಬಾರದು, ಹಾಕುವ ಚಪ್ಪಲಿ ಸಣ್ಣ ಧೂಳೂ ಆಗಿರಬಾರದು, ಶರ್ಟ್, ಪ್ಯಾಂಟ್ ಎಲ್ಲದರ ಬಗ್ಗೆ ಬಹಳಷ್ಟು ಪರ್ಟಿಕುಲ್ಯರ್ ಆಗಿದ್ದಂತಹ ವ್ಯಕ್ತಿ.

ನನ್ನದೇ ರೂಂ ಮೇಟ್ ಆಗಿದ್ದ ಕಾರಣ, ಓದಿನಲ್ಲಿ ಬಿಟ್ಟರೆ ಬೇರೆಲ್ಲದರ ಬಗ್ಗೆ ಸುನಿಲ್ ಗಮನ ಹೆಚ್ಚಾಗುತ್ತಿದೆ ಎಂದು ನನಗನಿಸುತ್ತಿತ್ತು. ಓದುವ ಸಮಯ ಬಿಟ್ಟು ಇನ್ನೆಲ್ಲ ಕಡೆಯೂ ನನಗೆ ಅಂಟಿಕೊಂಡೇ ಇರುತ್ತಿದ್ದರು. ಅವರ ಕೆಲ ಪರ್ಟಿಕ್ಯುಲರ್ ವಿಷಯಗಳು ನನಗೆಂದೂ ತೊಂದರೆ ಕೊಡುತ್ತಿರಲಿಲ್ಲ. ತನಗೆ ಏನು ಬೇಕು ಎನಿಸುತ್ತಿತ್ತೋ ಅದನ್ನು ಮುಚ್ಚು ಮರೆಯಿಲ್ಲದೇ ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಡ್ರಿಂಕ್ಸ್ ಮಾಡುವುದು ಅಫೀಷಿಯಲ್ ಮತ್ತು ಸ್ಟಾಂಡರ್ಡ್ ಜನರ ಅಭ್ಯಾಸ ಎಂಬುದನ್ನು ನಂಬಿ ಕೊಂಡಿದ್ದರು. ಮೊದಲ ಮೂರ‍್ನಾಲ್ಕು ತಿಂಗಳು ಎಲ್ಲವೂ ಚೆನ್ನಾಗಿಯೇ ಇತ್ತು.

ಆದರೆ, ಕ್ರಮೇಣ ನನ್ನ ಗಮನ ಅವರ ಗಮನ ವಿರುದ್ಧ ದಿಕ್ಕಿನಲ್ಲಿ ಸಾಗಲು ಆರಂಭಿಸಿತು. ಇದೆಲ್ಲದರ ಫಲವು ಡಿಗ್ರಿಯ ಮೊದಲ ಸೆಮಿಸ್ಟರ್‌ನಲ್ಲಿಯೇ ಕಾಣಲು ಆರಂಭಿಸಿತು. ರಿಸಲ್ಟ್ ಬಂದಾಗ ಮೂರ‍್ನಾಲ್ಕು ಸಬ್ಜೆಕ್ಟ್ ಗಳಲ್ಲಿ ಫೇಲ್ ಆಗಿದ್ದರು. ‘ಓದಿನ ಕಡೆ ಗಮನ ಕೊಡಿ’ ಎಂದು ನಾನು ಹೇಳಿದಾಗ, ಅದುವರೆಗೆ ಒಂದು ತಾಸು ಜತೆಯಲ್ಲಿ ಇರುತ್ತಿದ್ದ ಸುನಿಲ್ ಕುಡಿತದ ಚಟಕ್ಕೆ ಬಿದ್ದಿದ್ದರು. ಇದು ನನಗೆ ಗೊತ್ತಾದಾಗ, ‘ಇದೆಲ್ಲ ಈಗಲೇ ಬೇಡ. ಆರೋಗ್ಯಕ್ಕೂ ಒಳ್ಳೆಯದಲ್ಲ. ಅಪ್ಪ-ಅಮ್ಮ ದುಡಿದು ಕೊಟ್ಟ ಹಣದಲ್ಲಿ ಬೇಡ.

ಅಷ್ಟಾಗಿಯೂ ಅದು ನಿಮ್ಮ ಲೈಫ್ ಸ್ಟೈಲ್ ಆಗಬೇಕು ಎಂದಿದ್ದರೆ, ದುಡಿಯುವ ಹಂತಕ್ಕೆ ಹೋದ ನಂತರ ಖಂಡಿತ ಮಾಡಿಕೊಳ್ಳಿ’ ಎಂದು ಖಡಕ್ ಆಗಿಯೇ ಹೇಳಿದ್ದೆ. ಅಂದು ಎರಡು ದಿನ ಸುಮ್ಮನಿದ್ದು ಮತ್ತೆ ಅದೇ ಅಭ್ಯಾಸ ಮುಂದುವರಿದಿತ್ತು. ಈ ಬಗ್ಗೆ ನಾನು ಮತ್ತೆ ಒಂದೆರಡು ಬಾರಿ ಹೇಳಿದ್ದರೂ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ನನಗೂ ಅಸಮಾಧಾನ ಮೂಡಿತ್ತು. ನಮ್ಮಿಬ್ಬರ ಮಧ್ಯೆ ಮಾತುಗಳು ಬರಗಾಲದಲ್ಲಿ ಬರುವ ಹನಿಗಳಂತಾಗಿದ್ದವು. ಸುತ್ತಮುತ್ತ ಏನೇ ನಡೆಯುತ್ತಿದ್ದರೂ ನನಗೆ ನನ್ನ ಉದ್ದೇಶದ ಬಗ್ಗೆ ಸ್ಪಷ್ಟತೆಯಿತ್ತು. ಓದಿನ ಬಗ್ಗೆ ಗಮನ ಆಚೀಚೆ ಆಗಲಿಲ್ಲ.

ದಿನಗಳು ಉರುಳಿ ದ್ವಿತೀಯ ಸೆಮಿಸ್ಟರ್ ಮುಗಿದು ರಿಸಲ್ಟ್ ಬಂದಾಗ ಸುನಿಲ್‌ರದ್ದು ಮತ್ತೆ ನಾಲ್ಕು ಸಬ್ಜೆಕ್ಟ್ ಫೇಲ್. ನನಗೆ ಈ ಶೇರಿಂಗ್ ರೂಂ ಸಹವಾಸವೇ ಬೇಡ ಎನಿಸುತ್ತಿತ್ತು. ಹಾಸ್ಟೆಲ್ ವಾರ್ಡ್‌ನ್‌ಗೆ ಮೊದಲೇ ಹೇಳಿಟ್ಟಂತೆ ಎರಡನೇ ವರ್ಷಕ್ಕೆ ಸಿಂಗಲ್ ರೂಂಗೆ ಶಿಫ್ಟ್ ಆಗಿದ್ದೆ. ಸುನಿಲ್ ಬೇರೆಂದು ರೂಂನಲ್ಲಿದ್ದರು.
ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ಮುಗಿದವು. ಅವರದ್ದು ಬರೋಬ್ಬರಿ ಹದಿನಾಲ್ಕು ಸಬ್ಜೆಕ್ಟ್ ಬ್ಯಾಕ್‌ಲ್ಯಾಗ್ ಆಗಿದ್ದರಿಂದ ಐದನೇ ಸೆಮಿಸ್ಟರ್‌ಗೆ ಅಡ್ಮಿಷನ್ ಸಿಗಲಿಲ್ಲ. ಜತೆಗೆ ಹಾಸ್ಟೆಲ್‌ನಲ್ಲೂ ಪ್ರವೇಶವಿಲ್ಲ ಎಂದು ಹೇಳಲಾಯಿತು. ಅಲ್ಲಿಗೆ ನನ್ನ ಮತ್ತು ಸುನಿಲ್ ಒಡನಾಟಕ್ಕೆ ಒಂದು ಫುಲ್‌ಸ್ಟಾಪ್ ಬಿದ್ದಿತ್ತು.

ಮುಂದೆ ನನ್ನ ಜೀವನದಲ್ಲಿ ಹಲವು ತಿರುವುಗಳು ಬಂದವು. ಬೆಂಗಳೂರು ಸೇರಿಕೊಂಡೆ, ಪತ್ರಿಕೋದ್ಯಮ ಅಭ್ಯಾಸ ಮಾಡಿದೆ, ನಾನು ಇಷ್ಟ ಪಟ್ಟ ಸಂಪಾದಕರ ಜತೆ ಕೆಲಸ ಮಾಡುವ ಸುದೈವವೂ ನನ್ನ ಪಾಲಿಗೆ ಬಂತು. ನಾನು ನನ್ನ ಜೀವನ ಯಾನದ ನಿರ್ಮಾಣ ಹಾದಿಯಲ್ಲಿದ್ದೆ. ಆಗೊಂದು ದಿನ ಮೆಸೆಂಜರ್‌ನಲ್ಲಿ ಸುನಿಲ್
ಮೆಸೇಜ್ ಮಾಡಿದ್ದರು. ಸರಿಸುಮಾರು ನಾಲ್ಕೈದು ವರ್ಷದ ನಂತರ ಸುನಿಲ್ ನನಗೆ ನೆನಪಾಗಿದ್ದರು. ‘ನಿಮ್ಮ ಫೋನ್ ನಂಬರ್ ಗೆ ತುಂಬಾ ಟ್ರೈ ಮಾಡಿದೆ, ಎಲ್ಲಿಯೂ ಸಿಗಲಿಲ್ಲ. ಯಾರಿಂದಲೂ ಮಾಹಿತಿ ಸಿಗಲಿಲ್ಲ.

ಕೊನೆಗೆ ಫೇಸ್‌ಬುಕ್‌ನಲ್ಲಿ ನಿಮ್ಮ ಹೆಸರನ್ನು ಹುಡುಕಿ ಮೆಸೇಜ್ ಮಾಡುತ್ತಿದ್ದೇನೆ, ನಂಬರ್ ಕೊಡಿ ಪ್ಲೀಸ್’ ಎಂದಿದ್ದರು. ನಂಬರ್ ಕೊಡ್ಲ ಎಂದು ಒಂದು ಕ್ಷಣ ತಡೆದರೂ ಶೇರ್ ಮಾಡಿದೆ. ನಂತರ ಕಾಲ್ ಬಂತು, ಬಹಳಷ್ಟು ದಿನದ ನಂತರ ಮಾತನಾಡಿದ್ದೆವು. ‘ದುರ್ಗದಲ್ಲಿ ಸಿಗುತ್ತೀರಾ?’ ಎಂದರು. ‘ಈಗ ಅಲ್ಲಿಲ್ಲ.
ಬಂದಾಗ ಖಂಡಿತ ಸಿಗುವೆ’ ಎಂದು ಹೇಳಿದ್ದೆ. ಅದರಂತೆ ದುರ್ಗಕ್ಕೆ ಹೋದಾಗ ನಾನೇ ಕಾಲ್ ಮಾಡಿ ಕರೆದು ನಮ್ಮ ಹಳೆಯ ಟೀ ಅಡ್ಡದಲ್ಲಿ ಕುಳಿತು ದಿನಗಟ್ಟಲೇ ಮಾತನಾಡಿದ್ದೆವು. ‘ನೀವು ಹೇಳಿದಂತೆ ನಾನು ಕೇಳಲಿಲ್ಲ, ಅಮಲಿಗೆ ಬಿದ್ದು ಅಭ್ಯಾಸ ಹಾಳುಮಾಡಿಕೊಂಡೆ, ನನ್ನ ಡಿಗ್ರಿ ಈಗಲೂ ಅಷ್ಟಕ್ಕೇ ನಿಂತಿತು.

ನಾನು ಅಂದುಕೊಂಡ ಏನನ್ನೂ ಮಾಡಲಾಗಲಿಲ್ಲ. ನಿಮ್ಮನ್ನು ನೋಡಿ ತುಂಬಾ ಪ್ರೌಡ್ ಫೀಲ್ ಆಗುತ್ತಿದ್ದೆ. ಅಂದು ನಿಮ್ಮ ದಾರಿಯನ್ನು ನಾನು ಬಿಡಬಾರದಿತ್ತು’ ಎಂದು ಹೇಳಿಕೊಂಡು ಸುನಿಲ್ ಮನಪೂರ್ತಿ ಬಿಕ್ಕಿದ್ದರು. ‘ಆದದ್ದಾಯಿತು, ಈಗ ಏನು ಮಾಡುತ್ತಿದ್ದೀರೋ ಅದನ್ನೇ ಪ್ರಾಮಾಣಿಕವಾಗಿ ಮಾಡಿ’ ಎಂದು
ಸಮಾಧಾನಿಸಿದ್ದೆ. ಅದಾಗಿ ಐದಾರು ತಿಂಗಳು ಸಂಪರ್ಕವಿತ್ತು. ಈ ನಡುವೆ, ಒಂದಷ್ಟು ಹಣ ಬೇಕು ಎಂದಾಗ ಕೈಲಾದ್ದಷ್ಟು ಕೊಟ್ಟಿದ್ದೆ. ಆದರೆ, ಆ ಹಿಂದಿನ ಅಭ್ಯಾಸವನ್ನು ಅವರಿನ್ನೂ ಬಿಟ್ಟಿಲ್ಲ, ಅಮಲಿನ ಚಟವಿನ್ನೂ ಹೋಗಿಲ್ಲ ಎಂಬುದನ್ನು ತಿಳಿದು ಕೋಪ ನೆತ್ತಿಗೇರಿತ್ತು.

ಮತ್ತೆ ಮಾತನಾಡಿಸಬೇಕು ಎನಿಸಲಿಲ್ಲ. ಏನೇ ಮೆಸೇಜ್ ಬಂದರೂ ರಿಪ್ಲೈ ಮಾಡುವ ಮನಸಾಗುತ್ತಿರಲಿಲ್ಲ. ಆದರೆ, ನನ್ನನ್ನು ಅಷ್ಟು ಬ್ಲೈಂಡ್ ಆಗಿ ನಂಬಿದ್ದ ಗೆಳೆಯನ ಜತೆ ನಾನಲ್ಲದೇ ಯಾರು ನಿಲ್ಲುತ್ತಾರೆ ಎಂದು ಮನಸ್ಸು ನನ್ನನ್ನೇ ಕಾಡಲು ಆರಂಭಿಸಿತ್ತು. ದುರ್ಗಕ್ಕೆ ಹೋದಾಗ ಕರೆದು ಮಾತನಾಡೋಣ, ತಿದ್ದಿದರೆ ಶಿಲಿಯಾಗದ ಕಲ್ಲು ಇಲ್ಲವೇ ಇಲ್ಲ ಎಂದು ಅನ್ನಿಸುತ್ತಿತ್ತು. ಇದಾಗಿ ನಾಲ್ಕೈದು ದಿನಗಳಿರಬಹುದು. ಮೆಸೆಂಜರ್‌ನಲ್ಲಿ ಸುನಿಲ್ ಮೆಸೇಜ್ ಕಳಿಸಿದ್ದರು. ‘ಎಲ್ಲವನ್ನೂ
ಕಳೆದುಕೊಂಡಿದ್ದೇನೆ. ನಿಮ್ಮ ಸಹಾಯ ಬೇಕು, ಮತ್ತೆ ನಾನು ದುಡ್ಡು ಕೇಳುತ್ತಿಲ್ಲ. ನನಗೆ ನಿಮ್ಮ ಮೋಟಿವೇಷನ್ ಬೇಕು.

ಅಡ್ವೈಸ್ ಬೇಕು, ನನ್ನ ತಂದೆ ತಾಯಿಗಿಂತಲೂ ಹೆಚ್ಚು ನಿಮ್ಮನ್ನು ನಂಬಿದ್ದೇನೆ, ಅನ್‌ಕೋನ್ ನಂಬರ್‌ನಿಂದ ಕಾಲ್ ಮಾಡುತ್ತೇನೆ, ಬೈ’ ಎಂದಿದ್ದರು. ನಾನಿನ್ನೂ ರಿಪ್ಲೈ ಕೂಡ ಮಾಡಿರಲಿಲ್ಲ. ಯಾರದ್ದೋ ವಾಟ್ಸಾಪ್‌ನಲ್ಲಿ ‘ರೆಸ್ಟ್ ಇನ್ ಪೀಸ್ ಸುನಿಲ್’ ಎಂಬ ಸ್ಟೇಟಸ್ ನೋಡಿದಾಗ ಕತ್ತಲು ಕವಿದಂತಾಯಿತು. ವಿಪರೀತ ಕುಡಿತದ ಅನಾರೋಗ್ಯದಿಂದ ಸುನಿಲ್ ಉಸಿರು ನಿಂತಿತ್ತು. ಅನ್‌ನೋನ್ ನಂಬರ್‌ನಿಂದ ಕಾಲ್ ಮಾಡುತ್ತೇನೆ ಎಂದಿದ್ದ ಸುನಿಲ್ ಕೊನೆಗೂ ಕಾಲ್ ಮಾಡಲೇ ಇಲ್ಲ,

ಮಾಡುವುದೂ ಇಲ್ಲ. ಆದರೆ, ಸುನಿಲ್ ಬಳಿ ನಾನು ಹೇಳಬೇಕು ಎಂದುಕೊಂಡ ಎಷ್ಟೋ ಮಾತುಗಳು ಹಾಗೇ ಇಂಗಿಹೋಗಿವೆ, ಮನಸಿನಲ್ಲೇ ಅಳಿದು ಹೋಗಿವೆ. ನಾನು ಮಾಡಿದ್ದು ಸರಿಯೋ ತಪ್ಪೋ ಎಂಬ ಹೊಯ್ದಾಟ ಆಗಾಗ ಕಾಡುತ್ತಲೇ ಇರುತ್ತದೆ. ‘ಮೈ ಡಿಯರ್ ಫ್ರೆಂಡ್ ಸುನಿಲ್, ನಾನೆಂದಿಗೂ ನಿಮ್ಮನ್ನು ಜಡ್ಜ್
ಮಾಡಲಿಲ್ಲ, ಬೇಕೆಂತಲೇ ದೂರವಿಡಲಿಲ್ಲ. ಈಗಲೂ ನನ್ನಿಂದ ನೀವು ದೂರವಿಲ್ಲ. ಬಟ್ ಐ ಮಿಸ್ ಯೂ’.

ಜೀವನವನ್ನು ಸರಿದಾರಿಗೆ ತಂದುಕೊಳ್ಳಿ ಎಂದು ನಾನು ಅವರಿಗೆ ನೀಡಿದ ಸಲಹೆಯೇ ತಪ್ಪಾಯಿತಾ? ಅವರ ಜೀವನ ಹಳಿ ತಪ್ಪಿದ್ದಾದರೂ ಎಲ್ಲಿ?