ಸ್ವಾತಂತ್ರ್ಯದ ಆ ಕ್ಷಣಗಳು (ಭಾಗ – ೨೮)
ಡಾ.ಉಮೇಶ್ ಪುತ್ರನ್
ಹತ್ತೊಂಬತ್ತನೇ ಶತಮಾನದ ಅಂತ್ಯದ ಭಾಗದಲ್ಲಿದ್ದ ಸರ್ ಸಯ್ಯದ್ ಅಹಮದ್ ಖಾನ್, ಇಂಗ್ಲೆಂಡಿನಲ್ಲಿ ಶಿಕ್ಷಣ ಮುಗಿಸಿ ಬಂದಿದ್ದರು ಮತ್ತು ಇವರಿಗೆ ಮುಸ್ಲಿಂ ಜನರು ವಿದ್ಯಾವಂತರಾಗಬೇಕೆಂಬ ಬಯಕೆ ಇತ್ತು. ಇವರು 1886 ರಲ್ಲಿ ಢಾಕಾದಲ್ಲಿ ಮಹಮ್ಮಡನ್ ಶಿಕ್ಷಣ ಸಮ್ಮೇಳನವನ್ನು ಏರ್ಪಡಿಸಿದರು. ಅಲ್ಲಿ ರಾಜಕೀಯ ವಿಚಾರಗಳಿಗೆ ನಿಷೇಧ ಇದ್ದಿತ್ತು.
ಇದೇ ರೀತಿ ಪ್ರತಿ ವರ್ಷ ನಡೆದ ಶೈಕ್ಷಣಿಕ ಸಮ್ಮೇಳನವು ಶೈಕ್ಷಣಿಕ ಚಳುವಳಿಯಾಗಿ, ಮುಂದೆ ಅಲಿಗಡ್ ಮುಸ್ಲಿಂ ಯುನಿವರ್ಸಿಟಿ ಸ್ಥಾಪನೆಗೆ ನಾಂದಿ ಯಾಯಿತು. 1898ರಲ್ಲಿ ಸರ್ ಸಯ್ಯದ್ ಅಹಮದ್ ಖಾನ್ ತೀರಿಹೋದ ನಂತರ, 1906 ರಲ್ಲಿ ಡಾಕಾದ ನಾಲ್ಕನೇ ನವಾಬ ಸರ್ ಕ್ವಾಜಾ ಸಲಿಮು ನವಾಬ್ ಅವರ ಢಾಕಾದ ಅರಮನೆಯಲ್ಲಿ ಮುಸ್ಲಿಮ್ ಲೀಗ್ ಅಧಿಕೃತವಾಗಿ ಪ್ರಾರಂಭಗೊಂಡಿತು.
ಮುಸ್ಲಿಂ ಲೀಗ್ ಪ್ರಾರಂಭವಾದ ನಂತರ ಅದರ ನಾಯಕರು ಮಾಡಿದ ಪ್ರಥಮ ಕೆಲಸ ಏನೆಂದರೆ, ಮುಸ್ಲಿಮರಿ ಗಾಗಿ ಪ್ರತ್ಯೇಕ ಮತದಾನಕ್ಕೆ ಬ್ರಿಟಿಷ್ ಸರಕಾರವನ್ನು ಒತ್ತಾಯಿಸಿದರು. ಪ್ರತ್ಯೇಕ ಮತದಾನ ಎಂದರೆ ಚುನಾವಣೆ ಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಮುಸ್ಲಿಂ ಮತದಾರರೇ ಆರಿಸುವುದು. ಇದರಿಂದಾಗಿ ಸರಕಾರದಲ್ಲಿ ಮುಸ್ಲಿಂ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರುತ್ತಾರೆ.
1908, ಫೆಬ್ರುವರಿ 23ರಂದು ಇಂಗ್ಲೆಂಡಿನ ಹೌಸ್ ಆಫ್ ಲಾರ್ಡ್ಸ್ನಲ್ಲಿ ಭಾರತಕ್ಕೆ ಆಗಿನ ರಾಜ್ಯ ಕಾರ್ಯದರ್ಶಿ ಯಾಗಿರುವ ಜಾನ್ ಮಾರ್ಲೆ ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಗೆ ಒತ್ತಾಯಿಸಿದರು. ಅದಕ್ಕೆ ಅನು ಮೋದನೆಯನ್ನು ಕೂಡ ಪಡೆದುಕೊಂಡು ಬಂದರು. ಮುಸ್ಲಿಂ ಲೀಗ್ಗೆ ಸಿಕ್ಕಿದ ಪ್ರಥಮ ವಿಜಯ ಇದಾಗಿತ್ತು.
ಮುಸ್ಲಿಂ ಲೀಗ್ ಪ್ರಮುಖವಾಗಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆಯನ್ನು ಪ್ರತಿಪಾದಿಸುತ್ತ ಬಂದಿತ್ತು. ಮುಸ್ಲಿಮರ ಆಚಾರ-ವಿಚಾರ, ಸಂಸ್ಕೃತಿ, ಕಾನೂನು ಕಟ್ಟಳೆಗಳು ಹಿಂದೂಗಳಿಗಿಂತ ಭಿನ್ನವಾಗಿರುವುದರಿಂದ ನಮಗೆ ಪ್ರತ್ಯೇಕ ರಾಷ್ಟ್ರ ಬೇಕು, ಹಾಗೆಯೇ ಆ ರಾಷ್ಟ್ರದ ಪ್ರಮುಖ ಧರ್ಮ ಇಸ್ಲಾಂ ಆಗಿರಬೇಕು ಎನ್ನುವುದು ಅವರ ಬೇಡಿಕೆಯಾಗಿತ್ತು. ಹಾಗೆಯೇ ಹಿಂದೂಗಳ ನಾಡಿನಲ್ಲಿ ಮುಸ್ಲಿಮರು ದ್ವಿತೀಯ ದರ್ಜೆಯ ಪ್ರಜೆಯಾಗಿ ಇರಬೇಕಾಗುತ್ತದೆ, ಅವರಿಗೆ ಬದುಕಲು ಕಷ್ಟವಾಗುತ್ತದೆ ಎನ್ನುವ ವಿಚಾರಗಳನ್ನು ಒತ್ತಿ ಹೇಳಲಾಯಿತು.
ಮಹಮ್ಮದ್ ಅಲಿ ಜಿನ್ನಾ ಮತ್ತಿತರ ಅನೇಕ ವಿದ್ಯಾವಂತ ಮುಸ್ಲಿಮರು ಮುಸ್ಲಿಮ್ ಲೀಗನ್ನು ಸೇರಿಕೊಂಡರು. ಒಂದನೇ ಮಹಾಯುದ್ಧದಲ್ಲಿ ಒಟ್ಟೋ ಮಾನ್ ಸಾಮ್ರಾಜ್ಯವು ಜರ್ಮನಿಯನ್ನು ಸೇರಿಕೊಂಡಿತ್ತು. ಇದರಿಂದಾಗಿ ಬ್ರಿಟಿಷ್ ಮಿತ್ರಪಡೆಗಳು ಒಟ್ಟೋಮಾನ್ನ ರಾಜಧಾನಿ ಕಾನ್ಸ್ಟಾಂಟಿ ನೋಪಲ್ ನ್ನು ವಶಪಡಿಸಿಕೊಂಡವು. ಅಲ್ಲಿಯ ಸುಲ್ತಾನ ಖಲೀ-ನನ್ನು ಓಡಿಸಲಾಯಿತು. ಅವನು ಇಸ್ಲಾಂ ಜಗತ್ತಿನ ಸುನ್ನಿ ಧಾರ್ಮಿಕ ನಾಯಕ ಕೂಡ ಆಗಿದ್ದ. ಒಂದನೇ ಮಹಾಯುದ್ಧ ಮುಗಿದ ಮೇಲೆ ಪುನಃ ಆತನಿಗೆ ಖಲೀಫ್ ಪಟ್ಟ ನೀಡಬೇಕು ಎಂದು ಭಾರತದಲ್ಲಿ ಬ್ರಿಟಿಷರ ವಿರುದ್ಧ ಖಿಲಾಫತ್ ಚಳುವಳಿ 1919- 1924 ರ ಮಧ್ಯ ನಡೆಯಿತು. ಇದರಲ್ಲಿ ಮುಸ್ಲಿಂ ಲೀಗ್ ಪ್ರಮುಖ ಪಾತ್ರ ವಹಿಸಿತು.
ನಂತರದ ದಿನಗಳಲ್ಲಿ ಹಿಂದೂ-ಮುಸ್ಲಿಂ ಗಲಭೆ ಹೆಚ್ಚುತ್ತ ಹೋಯಿತು. ಉತ್ತರ ಪ್ರದೇಶ ಒಂದರ 1923-1927 ರ ಮಧ್ಯ ಸುಮಾರು 91 ಬಾರಿ ಹಿಂದೂ-ಮುಸ್ಲಿಂ ಕೋಮು ಗಲಭೆಗಳು ನಡೆದವು. ಕೇರಳದಲ್ಲೂ ಇಂತಹ ಗಲಭೇ ನಡೆಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ, ಅಂದರೆ ಆಗಸ್ಟ್ 14, 1947 ರಲ್ಲಿ ಪ್ರತ್ಯೇಕ ರಾಷ್ಟ್ರದ ಕಲ್ಪನೆ ಸಾಕಾರಗೊಂಡಾಗ, ಮುಸ್ಲಿಂ ಲೀಗ್ನ್ನು ವಿಸರ್ಜಿಸಲಾಯಿತು. ನಂತರ ಇದು ಭಾರತದಲ್ಲಿ ಇಂಡಿಯನ್ ಯೂನಿ ಯನ್ ಆಫ್ ಮುಸ್ಲಿಂ ಲೀಗ್, ಪಾಕಿಸ್ತಾನದಲ್ಲಿ ಮುಸ್ಲಿಂ ಲೀಗ್ ಆಫ್ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ ಆಗಿ ಮುಂದುವರಿಯಿತು.
ಕೇರಳದಲ್ಲಿ ರಾಜಕೀಯ ಪಕ್ಷವಾಗಿ ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್ ಆಗಿ ಇನ್ನೂ ಮುಂದುವರಿಯುತ್ತಿದೆ. ಘೋಷ್ ಸಹೋದರರು
ಅರಬಿಂದೋ ಘೋಷ್ ಹೆಸರನ್ನು ತಾವೆಲ್ಲ ಕೇಳಿರಬಹುದು. ಇವರು ಯೋಗ ಪಟು, ಗುರು, ತತ್ವಜ್ಞಾನಿ, ಆಧ್ಯಾತ್ಮಿಕ ಚಿಂತಕ ಹಾಗೂ ರಾಷ್ಟ್ರಪ್ರೇಮಿ. ದಕ್ಷಿಣ ಭಾರತದ ಪಾಂಡಿಚೇರಿಯಲ್ಲಿ ಇವರ ಆಶ್ರಮ ಇದೆ. ಇವರು ಇಂಡಿಯನ್ ಸಿವಿಲ್ ಸರ್ವಿಸ್ಗೆ ಆಯ್ಕೆಯಾಗಿದ್ದು, ಆ ಒಂದು ಆಕರ್ಷಕ ಸಂಬಳದ ಹುದ್ದೆಯನ್ನು ತೊರೆದು ಬಾಲಗಂಗಾಧರ ತಿಲಕರ ಸಂಪರ್ಕಕ್ಕೆ ಬಂದರು. ತನ್ನ ತಮ್ಮ ಬರೀಂದ್ರ ಕುಮಾರ್ ಘೋಷ್ ಹಾಗೂ ಇತರರೊಂದಿಗೆ ಸೇರಿ ‘ಅನುಶೀಲನ ಸಮಿತಿ’ ಎನ್ನುವ ಒಂದು ಸಂಘಟನೆಯನ್ನು ತೆರೆದರು.
ಇವರ ಬಂಗಾಳಿ ಪತ್ರಿಕೆ ‘ಯುಗಾಂತರ್’ ಹಾಗೂ ಇದರ ಇಂಗ್ಲೀಷ್ ಅವತರಣಿಕೆ ‘ಬಂದೇ ಮಾತರಂ’ (ವಂದೇಮಾತರಂ) ಪತ್ರಿಕೆಗಳು ಜನರಲ್ಲಿ ರಾಷ್ಟ್ರ ಪ್ರೇಮವನ್ನು ಪುಟಿದೇಳಿಸಿದವು. ಬರೀಂದ್ರ ಕುಮಾರ್ ಘೊಷ್ ೧೯೦೨ ರಲ್ಲಿ ಹೇಮಚಂದ್ರ ದಾಸ್ ಎನ್ನುವವನನ್ನು ಪ್ಯಾರಿಸ್ಸಿಗೆ ಕಳುಹಿಸಿದರು. ಅಲ್ಲಿ ರಷ್ಯಾದ ಕ್ರಾಂತಿಕಾರಿ ನಿಕೊಲಾಸ್ ಸಫ್ರಾಂಸ್ಕಿ ಎನ್ನುವವನಿಂದ ಬಾಂಬ್ ತಯಾರಿಸುವ ಕಲೆಯನ್ನು ಕರಗತ ಮಾಡಿಸಿದ. ಇವನ ಮುಂದಿನ ಗುರಿ
ಮುಝಾಫರ್ ಪುರದ ಮುಖ್ಯ ಮೆಜಿಸ್ಟ್ರೇಟ್ ಡಗ್ಲಾಸ್ ಕಿಂಗ್ಸ್ ಫೋರ್ಡ್. ಇದಕ್ಕೆ ಕಾರಣ ಏನೆಂದರೆ ಈತ ಅನುಶೀಲನ ಸಮಿತಿಯ ಅನೇಕರಿಗೆ ಕಠಿಣವಾದ
ಜೀವಾವಧಿ ಶಿಕ್ಷೆಯನ್ನು ಈ ಹಿಂದೆ ಜಾರಿ ಮಾಡಿದ್ದ.
(ಮುಂದುವರಿಯುವುದು)