Sunday, 15th December 2024

ಗ್ರಹಣ ಸ್ಮಾರಕವೂ ಪ್ರವಾಸಿ ತಾಣ !

ಗ್ರಹಣ ವೀಕ್ಷಣಾ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಿದೆ ಉಗಾಂಡಾ ದೇಶ!

ಕೆ.ವಿ.ಶಶಿಧರ

ಸೂರ್ಯ ಅಥವಾ ಚಂದ್ರ ಗ್ರಹಣವಾಗಲಿ ಸಾಮಾನ್ಯವಾಗಿ ಖಗೋಳದಲ್ಲಿ ಸಂಭವಿಸುತ್ತಲೇ ಇರುತ್ತದೆ. ಇವು ಎಲ್ಲಾ ದೇಶಗ ಳಲ್ಲೂ ಇದು ಕಾಣಲೇಬೇಕೆಂಬ ನಿಯಮವಿಲ್ಲ. ಆದರೆ ವಿಶ್ವದ ಯಾವುದಾದರೂ ಒಂದು ಭಾಗದಲ್ಲಿ ಖಾತರಿ. ಗ್ರಹಣಗಳು ಪ್ರಾಕೃತಿಕವಾಗಿ ಅಸ್ಥಿರ. ಒಂದು ವರ್ಷದಲ್ಲಿ ಕನಿಷ್ಟ ಎರಡು ಸೂರ್ಯ ಗ್ರಹಣ ಮತ್ತು ಎರಡು ಚಂದ್ರ ಗ್ರಹಣ ಸಂಭವಿಸುವುದು ಶತಸಿದ್ಧ. ಕೆಲವೊಮ್ಮೆ ವರ್ಷದಲ್ಲಿ ಐದು, ಆರು, ಏಳು ಗ್ರಹಣಗಳು ಸಂಭವಿಸಬಹುದು.

ಇವೆಲ್ಲಾ ಯಾಕೆ ಹೇಳ ಹೊರಟೆ ಎಂದರೆ, ಗ್ರಹಣಗಳಿಗಾಗಿ ಆಫ್ರಿಕಾ ಖಂಡದ ಉಗಾಂಡಾ ದಲ್ಲಿ ಗ್ರಹಣ ಸ್ಮಾರಕಗಳಿವೆ. ಅದೂ ಒಂದಲ್ಲಾ ಎರಡು ಸ್ಮಾರಕಗಳು. ಇತ್ತೀಚಿನ ದಿನಗಳಲ್ಲಿ ಅಂದರೆ ೨೦೧೩ರಲ್ಲಿ ಸಂಭವಿಸಿದ ಸೂರ್ಯ ಗ್ರಹಣಕ್ಕಾಗಿ ಒಂದು ಸ್ಮಾರಕ ವಾದರೆ ಶತಮಾನಗಳಷ್ಟು ಹಿಂದೆ ಸಂಭವಿಸಿದ ಗ್ರಹಣಕ್ಕಾಗಿ ಮತ್ತೊಂದು.

೨೦೧೩ರಲ್ಲಿ ಸಂಭವಿಸಿದ ಸೂರ್ಯ ಗ್ರಹಣವನ್ನು ವೀಕ್ಷಿಸಲು ಇಡೀ ಜಗತ್ತಿನಲ್ಲಿ ಉಗಾಂಡಾದ ವಾಯುವ್ಯ ದಿಕ್ಕಿನಲ್ಲಿರುವ ಪುಟ್ಟ ಪಟ್ಟಣ ಪಾಕ್ವಾಚ್ ಅತ್ಯುತ್ತಮ ಸ್ಥಳವೆಂದು ಖಗೋಳ ಶಾಸಜ್ಞರಿಂದ ಗುರುತಿಸಲ್ಪಟ್ಟಿತು. ಅದರಲ್ಲೂ ನಿರ್ದಿಷ್ಟವಾಗಿ ಪಾಕ್ವಾಚ್‌ನ ಓವಿನಿ ಪ್ರೈಮರಿ ಸ್ಕೂಲ್ ಪ್ರಶಸ್ತ ಸ್ಥಳವೆಂದು ಪ್ರತ್ಯೇಕಿಸಿದ್ದರು.

ಗ್ರಹಣ ವೀಕ್ಷಣೆಗೆ ಮತ್ತು ಅದರ ಬಗ್ಗೆ ಅಧ್ಯಯನಕ್ಕೆ ಪ್ರಶಸ್ತ ಸ್ಥಳವೆಂದು ಗುರುತಿಸಲ್ಪಟ್ಟ ಪಾಕ್ವಾಚ್‌ಗೆ ನೂರಾರು ಖಗೋಳ ಶಾಸಜ್ಞರು ಧಾವಿಸಲು ಸಿದ್ಧರಾದಾಗ, ಉಗಾಂಡಾದ ಪ್ರವಾಸೋ ಧ್ಯಮ ಸಚಿವಾಲಯವು ಶಾಲೆಯ ಆವರಣದಲ್ಲಿ ಈ ಘಟನೆಗೆ ಸಾಕ್ಷಿಯಾಗಿ ಸ್ಮಾರಕವನ್ನು ನಿರ್ಮಿಸುವುದಾಗಿ ಘೋಷಿಸಿತು. ದೇಶ ವಿದೇಶಗಳಿಂದ ಬರುವ ವಿಜ್ಞಾನಿಗಳ ಅನುಕೂಲಕ್ಕಾಗಿ ಸ್ಮಾರಕದೊಂದಿಗೆ ಮೂಲಸೌಕರ್ಯಗಳಾದ ರಸ್ತೆ, ಕುಡಿಯುವ ನೀರು
ಸರಬರಾಜು ಮತ್ತು ಪ್ರವಾಸಿಗರ ತಂಗುದಾಣಗಳನ್ನು ಅಭಿವೃದ್ಧಿ ಪಡಿಸಲಾಯಿತು.

ಸ್ಮಾರಕದ ವಿನ್ಯಾಸದಲ್ಲಿ ಚಪ್ಪಟೆ ಕಲ್ಲಿನ ಪಿರಮಿಡ್ ತಳಹದಿಯನ್ನು ನಿರ್ಮಿಸಿ ಅದರ ಮೇಲೆ ದೊಡ್ಡ ಲೋಹದ ಗ್ರಹಣವನ್ನು ಸೂಚ್ಯವಾಗಿ ಬಿಂಬಿಸುವ ಪದಕವನ್ನು ಜೋಡಿಸಿದ್ದು ಆಕರ್ಷಣೀಯವಾಗಿದೆ. ಈ ಪದಕದ ವಿಶೇಷತೆಯಂದರೆ ಗ್ರಹಣವನ್ನು ಸೂಚಿಸುವ ಇದರಲ್ಲಿ ಎರೆಡು ವ್ಯತಿರಿಕ್ತ ಬಣ್ಣಗಳಿವೆ. ಮುಸ್ಸಂಜೆಯ ಕೆಂಪು ಮತ್ತು ಕಪ್ಪು.

ನವೆಂಬರ್ ೩, ೨೦೧೩ರಂದು ಸಂಭವಿಸಿದ ಸೂರ್ಯ ಗ್ರಹಣ ಇಲ್ಲಿ ಗೋಚರಿಸಿತು. ಗ್ರಹಣ ಅನೇಕ ತೊಂದರೆಗಳಿಗೆ ಆಹ್ವಾನ ಎನ್ನುವುದು ನಂಬಿಕೆಯಾದರೂ, ೨೦೧೩ರ ಗ್ರಹಣವು ಉಗಾಂಡದ ಈ ಪ್ರದೇಶ ಆರ್ಥಿಕ ವರವಾಗಿ ಪರಿಣಮಿಸಿತು. ಈ
ಸಂಬಂಧ ನಿರ್ಮಾಣವಾದ ಗ್ರಹಣ ಸ್ಮಾರಕ ಮಾತ್ರ ಶಾಶ್ವತ ಆಸ್ತಿಯಾಗಿದೆ.

ಮೇಲೆ ಹೇಳಿದಂತೆ ಉಗಾಂಡದಲ್ಲಿರುವುದು ಇದೊಂದೇ ಗ್ರಹಣ ಸ್ಮಾರಕವಲ್ಲ. ಇಲ್ಲಿಂದ ದಕ್ಷಿಣಕ್ಕೆ ಸುಮಾರು ೩೦೦ ಮೈಲಿಗಳಷ್ಟು ದೂರದಲ್ಲಿ ಕೊಂಚ ಪಶ್ಚಿಮಕ್ಕಿರುವ ಮಬರಾರಾದಲ್ಲಿ ಭವ್ಯವಾದ ಹಾಗೂ ಹೆಚ್ಚು ಮಹತ್ವ ಪೂರ್ಣವಾದ ಮತ್ತೊಂದು ಗ್ರಹಣ
ಸ್ಮಾರಕವಿದೆ. ೨೦೧೪ರಲ್ಲಿ ನಿರ್ಮಾಣವಾದ ಇದು ಶತಮಾನಗಳಷ್ಟು ಹಿಂದೆ ಸಂಭವಿಸಿದ ಗ್ರಹಣದ ಗೌರವಾರ್ಥವಾಗಿದೆ.

ಹಳೆಯ ಗ್ರಹಣದ ಸ್ಮಾರಕ
೧೫೨೦ರಲ್ಲಿ ಸಂಭವಿಸಿದ ಗ್ರಹಣಕ್ಕೆ ಸ್ಮಾರಕವಾದ ಇದನ್ನು ಮಬರಾರಾದ ಇಗೊಂಗೊ ಕಲ್ಚರಲ್ ಸೆಂಟರ್ ಮತ್ತು ಕಂಟ್ರಿ ಹೋಟೆಲ್ ಬಳಿ ಸ್ಥಾಪಿಸಲಾಗಿದೆ. ಪ್ರವಾಸೋದ್ಯಮವನ್ನು ಹೆಚ್ಚಿಸಲು ಇಗೊಂಗೊ ಕಲ್ಚರಲ್ ಸೆಂಟರ್ ಅನ್ನು ನವೀಕರಿಸಿ ಇದರಲ್ಲಿ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳನ್ನು ಸೇರಿಸಲಾಯಿತು. ಆದರೂ ಅವುಗಳೆಲ್ಲದ್ದಕ್ಕಿಂತಾ ಗ್ರಹಣ ಸ್ಮಾರಕವೇ ಉತ್ಕೃಷ್ಟವಾಗಿದೆ.

ಈ ಗ್ರಹಣ ಸ್ಮಾರಕವು ಕಂಟ್ರಿ ಹೋಟೆಲ್ ಬಳಿಯ ಸಣ್ಣ ಗುಡ್ಡದ ಮೇಲೆ ಸ್ಥಾಪಿಸಲಾಗಿದೆ. ಕಲಾ ವಿದ್ಯಾರ್ಥಿಯೊಬ್ಬ ಇದನ್ನು ವಿನ್ಯಾಸಗೊಳಿಸಿದ್ದು ಸ್ಮಾರಕದ ಪ್ರತಿಯೊಂದು ಮುಖಭಾಗವನ್ನೂ ಅರ್ಥಪೂರ್ಣವಾಗಿರುವಂತೆ ಸಂಯೋಜಿಸಿದ್ದಾನೆ. ಮೂರು ಕಾಲುಗಳ ಮೇಲೆ ಗೋಳವಿರುವ ಸ್ಮಾರಕ ಇದು. ಮೂರು ಕಾಲುಗಳು ಉಗಾಂಡಾ ಮೂರು, ಬ್ಯುನಿಯೊರೊ, ಬುಗಾಂಡಾ, ಮತ್ತು ನಕೊರೆ ಸಾಮ್ರಾಜ್ಯವನ್ನು ಸಂಕೇತಿಸುತ್ತದೆ. ಈ ಸ್ಮಾರಕದ ಮೇಲೆ ಈಜಿಪ್ಶಿಯನ್ ಬರವಣಿಗೆಗಳು, ಡೋಲು ಮತ್ತು
ಭರ್ಜಿಗಳ ಚಿತ್ರಣದಿಂದ ಅಲಂಕೃತಗೊಂಡಿದೆ.

ಕೇವಲ ಎರಡು ಸ್ಮಾರಕಗಳು, ಹೆಚ್ಚೇನಲ್ಲಾ. ಆದರೂ ಜಗತ್ತಿನಲ್ಲಿ ಗ್ರಹಣಕ್ಕಾಗಿ ಮೀಸಲಾದ ಸ್ಮಾರಕಗಳಿಗೆ ಉಗಾಂಡ ಹೆಸರಾಗಿದೆ. ಅವುಗಳನ್ನು ನೋಡಲು ಬರುವ ಪ್ರವಾಸಿಗರನ್ನು ಸೆಳೆಯುವ ಮೂಲಕ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಿದೆ.

ದಂತಕಥೆ
ಇದರ ಹಿಂದೊಂದು ದಂತ ಕಥೆಯಿದೆ. ಈ ಪ್ರದೇಶದಲ್ಲಿನ ಹಲವಾರು ಸಣ್ಣ ಸಣ್ಣ ಸಾಮ್ರಾಜ್ಯಗಳು ಒಂದಕ್ಕೊಂದು ಯುದ್ದದಲ್ಲಿ ತೊಡಗಿದ್ದಾಗ ಕಿಂಗ್ ಒಲಿಮಿ ಬಿಹಾರ‍್ವೆ ಗುಡ್ಡದಲ್ಲಿ ತಾನು ಕೊಳ್ಳೆ ಹೊಡೆದಿದ್ದ ಲೂಟಿಯನ್ನು ಹೊತ್ತು ಸಾಗುತ್ತಿದ್ದಾಗ ವಿಚಿತ್ರ ಘಟನೆಯೊಂದು ಸಂಭವಿಸಿತು. ಇದು ನಡೆದದ್ದು ೧೫೪೦ರಲ್ಲಿ. ಇದ್ದಕ್ಕಿದ್ದಂತೆ ಅಸ್ವಾಭಾವಿಕವಾಗಿ ಕತ್ತಲು ಆವರಿಸತೊಡಗಿತು. ಯುದ್ಧದಲ್ಲಿ ಸತ್ತವರ ಪ್ರೇತಾತ್ಮಗಳು ತಮ್ಮ ಮೇಲಿನ ಪ್ರತೀಕಾರಕ್ಕೆ ಹಿಂದಿರುಗುತ್ತಿರುವ ಸೂಚನೆ ಇದು ಎಂದು ಭಾವಿಸಿದ ಕಿಂಗ್
ಒಲಿಮಿ ಮತ್ತು ಆತನ ಸೈನಿಕರು ತಾವು ಲೂಟಿ ಮಾಡಿ ಹೊತ್ತೊಯ್ಯುತ್ತಿದ್ದ ಜಾನುವಾರು, ದವಸ ಧಾನ್ಯಗಳು, ನಗ ನಾಣ್ಯಗಳು ಮತ್ತು ಉಪಪತ್ನಿಯರನ್ನು ಅಲ್ಲೇ ಬಿಟ್ಟು ಸ್ವಯಂ ರಕ್ಷಣೆಗಾಗಿ ದೌಡಾಯಿಸಿದರು. ಅವರು ತ್ಯಜಿಸಿ ಹೋದ ವಸ್ತುಗಳನ್ನು ಸಂಗ್ರಹಿಸಿದ ಸ್ಥಳೀಯರು ಸ್ವರ್ಗದಿಂದ ಕಳುಹಿಸಲ್ಪಟ್ಟ ದನಕರುಗಳು ಎಂದು ಜೋಪಾನ ಮಾಡಿ ತಮ್ಮಲ್ಲೇ ಹಂಚಿಕೊಂಡರು. ಅಂದು ಆ ರೀತಿ ಕತ್ತಲಾಗಲಿಕ್ಕೆ ಸಂಪೂರ್ಣ ಸೂರ್ಯಗ್ರಹಣವೇ ಕಾರಣ. ಇಲ್ಲಿ ಸ್ಮಾರಕ ನಿರ್ಮಿಸಿ, ಪ್ರವಾಸೋದ್ಯಮಕ್ಕೆ ಇಂಬು ನೀಡಿದ್ದಾರೆ.