Sunday, 24th November 2024

ಮಿನಿ ಐಫೆಲ್‌ ಟವರ್‌

ಜಿ.ನಾಗೇಂದ್ರ ಕಾವೂರು

ಜೆಕ್ ಗಣರಾಜ್ಯದ ರಾಜಧಾನಿ ಪ್ರಾಗ್ (ಜೆಕ್ : ಪ್ರಾಹ) ನಗರದಲ್ಲಿರುವ ಐತಿಹಾಸಿಕ ಕಟ್ಟಡಗಳು, ಕ್ಯಾಸಲ್ ಗಳು, ಸೇತುವೆಗಳು ಹಾಗೂ ಅವುಗಳ ಮೇಲಿರುವ ಸುಂದರ ಶಿಲ್ಪಗಳು ಅಂದಿನ ಕಲೆಗೆ ಸಾಕ್ಷಿಯಾಗಿ ನಿಂತಿವೆ.

ವಾಸ್ತುಶಿಲ್ಪದ ದೃಷ್ಟಿಯಿಂದಲೂ ಹಲವಾರು ವಿಶಿಷ್ಟ ವಿನ್ಯಾಸದ ಕಟ್ಟಡಗಳು ಇಲ್ಲಿವೆ. ಹಲವು ಆಕರ್ಷಣೆಗಳಿಂದ ಕೂಡಿದ ಪ್ರಾಗ್ ನಗರವು ಪ್ರವಾಸಿಗರಿಗೆ ನಿರಾಸೆ ಉಂಟುಮಾಡುವುದಿಲ್ಲ. ಜೆಕ್ ಸಾಂಪ್ರದಾಯಿಕ ಸಿಹಿ ತಿಂಡಿಗಳು ಮತ್ತು ಉಲ್ಲೇನೀಯ ಪೇಸಿಗಳು, ಆತಿಥ್ಯ, ರುಚಿಕರವಾದ ಬಿಯರ್‌ಗೆ ಮಾರು ಹೋಗದವರಿಲ್ಲ.

ಯುರೋಪ್ ಪ್ರವಾಸದ ಸಮಯದಲ್ಲಿ ಮೂರು ದಿನಗಳ ಕಾಲ ಪ್ರಾಗ್ ನಗರದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ವೀಕ್ಷಿಸಿ ಕೊನೆಯ ದಿನ ೩೨೭ ಮೀಟರ್ ಎತ್ತರವಿರುವ ಪೆಟ್ರಿನ್ ಹಿಲ್‌ಚಾರಣ ನಡೆಸಿದೆವು. ಅಲ್ಲಿರುವ ಮಿನಿ ಐಫೆಲ್ ಟವರನ್ನೇರಿ ಹಲವು ಆಕರ್ಷಣೆಗಳನ್ನು ವೀಕ್ಷಿಸಿ ಹಿಂದಿರುಗುವಾಗ, ಫ್ಯೂನಿಕ್ಯುಲರ್ ರೈಲ್‌ನಲ್ಲಿ ಪಯಣಿಸಿ ವಿಶಿಷ್ಟ ಅನುಭವವನ್ನು ಪಡೆದೆ.

ಫ್ಯೂನಿಕ್ಯುಲರ್ ರೈಲ್
ಪೆಟ್ರಿನ್ ಹಿಲ್ ತುದಿಯಿಂದ ಪ್ರಾಗ್ ನಗರದ ಅಂದವನ್ನು ವೀಕ್ಷಿಸಬಹುದು. ೩೨೭ ಮೀಟರ್ ಎತ್ತರವಿರುವ ಪೆಟ್ರಿನ್ ಹಿಲ್‌ಗೆ ರಸ್ತೆ ಮಾರ್ಗವಾಗಿ ಹೋದಲ್ಲಿ ಸುಮಾರು ಒಂದು ಗಂಟೆ ಸಮಯ ತಗುಲುತ್ತದೆ. ನಡೆದುಕೊಂಡು ಹೋಗಲು ಆಗದವರು ಪೆಟ್ರಿನ್ ಹಿಲ್ ಕೇಬಲ್ ಕಾರ್ ಎಂದು ಕರೆಯಲಾಗುವ ಫ್ಯೂನಿಕ್ಯುಲರ್ ರೈಲ್ ಮೂಲಕ ಬೆಟ್ಟದ ತುದಿಯನ್ನು ತಲುಪ ಬಹುದು.

೧೮೯೧ ರಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಸ್ಥಾಪಿಸಲಾದ ಫ್ಯೂನಿಕ್ಯುಲರ್‌ನಲ್ಲಿ ಪಯಣಿಸುವುದು ವಿಶಿಷ್ಟ ಅನುಭವ. ಬೆಳಿಗ್ಗೆ ೯ ರಿಂದ ರಾತ್ರಿ ೧೧.೨೦ ರವರೆಗೆ ಕಾರ್ಯ ನಿರ್ವಹಿಸುವ ಫ್ಯೂನಿಕ್ಯುಲರ್ ೫೧೦ ಮೀಟರ್ ಉದ್ದದ ಟ್ರ್ಯಾಕ್ ಹೊಂದಿದ್ದು, ಪೆಟ್ರಿನ್ ಹಿಲ್ ಮೇಲ್ಭಾಗವನ್ನು ತಲುಪಲು, ಮೂರು ನಿಲ್ದಾಣಗಳನ್ನು ಕ್ರಮಿಸಲು ೧೫-೨೦ ನಿಮಿಷಗಳ ಸಮಯ ತಗುಲುತ್ತದೆ. ಪ್ರವಾಸಿಗರು ತಮಗೆ ಬೇಕಾದ ನಿಲ್ದಾಣದಲ್ಲಿ ಇಳಿದು ನಡೆದುಕೊಂಡು ಹೋಗುತ್ತಾ, ನಗರದ ಸೌಂದರ್ಯ ನೋಡುತ್ತಾ ಬೆಟ್ಟದ ತುದಿ ತಲುಪಬಹುದು.

ಬಲಿದಾನ ಮಾಡಿದವರ ಸ್ಮಾರಕ
ಅಂದಿನ ಜೆಕಸ್ಲೊವಾಕಿಯಾದಲ್ಲಿ ಸಮತಾವಾದ (ಕಮ್ಯೂನಿಸಂ) ಉತ್ತುಂಗದಲ್ಲಿದ್ದಾಗ ಕೆಲವು ರಾಜಕೀಯ ಅಪರಾಧಿಗಳು ಜೈಲಿ
ನಲ್ಲಿಯೇ ಮರಣಹೊಂದಿದರು. ಕೆಲವರು ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವಾಗ ಕೊಲ್ಲಲ್ಪಟ್ಟರು.

೧೯೪೮ ಮತ್ತು ೧೯೮೯ ರ ನಡುವೆ ನಿರಂಕುಶ ಸಮತಾವಾದಕ್ಕೆ ಬಲಿಯಾದವರ ನೆನಪಿ ಗಾಗಿ ಪೆಟ್ರಿನ್ ಹಿಲ್ ಗೆ ಹೋಗುವ ಮೆಟ್ಟಿಲು ಗಳಲ್ಲಿ ಸ್ಮಾರಕ ಶಿಲ್ಪಗಳನ್ನು ಸ್ಥಾಪಿಸಿzರೆ. ಒಂದೇ ಮುಖವನ್ನು ಹೋಲುವ ಏಳು ಬೆತ್ತಲೆ ಪುರುಷರ ಆಕೃತಿಗಳನ್ನು ನಿಲ್ಲಿಸಿದ್ದಾರೆ. ಈ ಆಕೃತಿಗಳು ನಿರಂಕುಶ ಸ್ಥಿತಿಯಲ್ಲಿ ವಾಸಿಸುವ ಮನುಷ್ಯನ ಹಂತಗಳನ್ನು ಸಂಕೇತಿಸು ತ್ತವೆ. ಹಂತ ಹಂತ ವಾಗಿ ಶಾರೀರಿಕ ಹಾಗೂ ಮಾನಸಿಕವಾಗಿ ಮಾನವೀ ಯತೆ ನಾಶ ಹೊಂದುತ್ತಿರುವುದನ್ನು ಈ ಶಿಲ್ಪಗಳು ಸೂಚಿಸುತ್ತವೆ.

ಜೆಕ್ ಪ್ರಜೆಗಳು ಸ್ಮಾರಕದ ಮುಂದೆ ಪ್ರಾರ್ಥನೆ ಸಲ್ಲಿಸುತ್ತಾರೆ. ಪಕ್ಕದಲ್ಲಿರುವ ಜೋಡಿ ಹಾವುಗಳ ಕಲಾಕೃತಿಯ ಆಂತರ್ಯ ವೇನೆಂದು ತಿಳಿಯದಿದ್ದರೂ, ಆಕರ್ಷಕವಾಗಿದೆ ಹಾಗೂ ನಿಂತಿರುವ ಪುಟ್ಟ ಮಕ್ಕಳ ಕೆಳಭಾಗದಲ್ಲಿರುವ ಕಪ್ಪೆಗಳ ಬಾಯಿಂದ ನೀರು ಹೊರ ಚಿಮ್ಮುವಂತೆ ರಚಿಸಲಾದ ಕಾರಂಜಿ ಮಕ್ಕಳನ್ನು ಆಕರ್ಷಿಸುತ್ತದೆ.

ಗೋಪುರದ ಪ್ರತಿಕೃತಿ
ಪ್ಯಾರಿಸ್‌ನಲ್ಲಿರುವ ೩೩೦ ಮೀಟರ್ ಎತ್ತರದ ಐಫೆಲ್ ಟವರ್ ವಿಶ್ವ ಪ್ರಸಿದ್ಧಿಯಾಗಿದ್ದರೆ, ಪೆಟ್ರಿಲ್ ಹಿಲ್‌ನಲ್ಲಿ ೬೩.೫ ಮೀಟರ್ ಎತ್ತರದ ಮಿನಿ ಐಫೆಲ್ ಟವರ್ ಪ್ರಾಗ್‌ನ ಪ್ರಮುಖ ಆಕರ್ಷಣೆಗಳಂದು. ಜನರಲ್ ಲ್ಯಾಂಡ್ ಸೆಂಟಿನಿಯಲ್ ಎಕ್ಸಿಬಿಷನ್‌ಗಾಗಿ
೧೮೯೧ ರಲ್ಲಿ ನಿರ್ಮಿಸಲಾದ ಈ ಗೋಪುರವನ್ನು ೧೯೫೩ ರಿಂದ ೧೯೯೨ರ ವರೆಗೂ ಟಿ.ವಿ. ಮತ್ತು ರೇಡಿಯೋ ಪ್ರಸರಣ ಗೋಪುರ ವನ್ನಾಗಿ ಉಪಯೋಗಿಸುತ್ತಿದ್ದರಂತೆ. ಪ್ರಸ್ತುತ ವೀಕ್ಷಣಾ ಗೋಪುರವನ್ನಾಗಿ ಉಪಯೋಗಿಸಲಾಗುತ್ತಿದೆ.

ಗೋಪುರದ ಎರಡು ಹಂತಗಳಲ್ಲಿ ವೀಕ್ಷಣಾ ವೇದಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ. ೨೯೯ ಸುರುಳಿಯಾಕಾರದ ಮೆಟ್ಟಿಲುಗಳ ಮೂಲಕ ಅಥವಾ ಲಿಫ್ಟ್ ಮೂಲಕ ಗೋಪುರದ ತುದಿಯನ್ನು ತಲುಪಬಹುದು. ಪೆಟ್ರಿನ್ ಹಿಲ್‌ನಲ್ಲಿ ಹಲವಾರು ಉದ್ಯಾನವನ ಗಳಿವೆ. ೧೨,೦೦೦ ವಿವಿಧ ರೀತಿಯ ಗುಲಾಬಿ ಗಿಡಗಳಿರುವ ಉದ್ಯಾನವನ ಸ್ಥಳೀಯರ ಹಾಗೂ ಪ್ರವಾಸಿಗರ ಅಚ್ಚು ಮೆಚ್ಚಿನ ಉದ್ಯಾನವನವಾಗಿದೆ.

ಮಿರರ್ ಮೇಜ್
೧೮೯೧ ರಲ್ಲಿ ನಿರ್ಮಿಸಲಾದ ಮಿರರ್ ಮೇಜ್ ಸಭಾಂಗಣವನ್ನು ಪ್ರವೇಶಿಸಿದವರು ನಗದೆ ಹೊರಬರಲಾರರು. ಸಭಾಂಗಣದ
ಹೊರಭಾಗವನ್ನು ಮಧ್ಯಕಾಲೀನ ಕೊಟೆಯನ್ನು ನೆನಪಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಹಾಗೂ ಒಳಭಾಗದಲ್ಲಿ
ಅಡ್ಡಾದಿಡ್ಡಿಯಾಗಿ ಜೋಡಿಲಾಗಿರುವ ಕನ್ನಡಿಗಳ ಚಕ್ರವ್ಯೂಹವಿದೆ. ಒಳಗೆ ಪ್ರವೇಶಿಸಿದಾಗ ನಮಗೆ ನಮ್ಮ ಹಲವಾರು ಪ್ರತಿಬಿಂಬ ಗಳು ಕಂಡುಬಂದು ಗೊಂದಲ ಮೂಡಿಸುತ್ತವೆ. ಈ ವಿನ್ಯಾಸವನ್ನು ವಿಶೇಷವಾಗಿ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ತಯಾರಿಸ ಲಾಗಿದೆ. ಜೆಕ್ ಮತ್ತು ಸ್ವೀಡನ್ನರ ನಡುವೆ ಮುವತ್ತು ವರ್ಷಗಳ ಕಾಲ ನಡೆದ ಯುದ್ಧವನ್ನು ನೆನಪಿಸುವ ಚಿತ್ರಕಲೆ ಸಭಾಂಗಣದ ನಿರ್ಗಮನ ದ್ವಾರದ ಬಳಿ ನಮ್ಮ ಗಮನಸೆಳೆಯುತ್ತದೆ.

(ಚಿತ್ರಗಳು : ಲೇಖಕರವು)

ಹಂಗರ್ ವಾಲ್
೧೩೦೦ ರ ದಶಕದಲ್ಲಿ ಈ ರಕ್ಷಣಾ ಗೋಡೆಯ ನಿರ್ಮಾಣ ಪ್ರಾರಂಭವಾಯಿತು. ೧೩೬೧ರಲ್ಲಿ ಆರ್ಥಿಕ ಕುಸಿತ ಉಂಟಾಗಿ ಬಡ ಜನರು ಹಸಿವಿನಿಂದ ನರಳತೊಡಗಿದರು. ಸಾರ್ವಜನಿಕ ಕಾರ್ಯಗಳ ಯೋಜನೆಯಡಿ ಬಡ ಜನರಿಗೆ ಉದ್ಯೋಗವನ್ನು ನೀಡಿ ಗೋಡೆಯ ನಿರ್ಮಾಣವನ್ನು ಪೂರ್ಣಗೊಳಿಸಲಾಯಿತು. ಬಡಜನರಿಗೆ ಉದ್ಯೋಗವನ್ನು ನೀಡಿ ತಮ್ಮನ್ನು ತಾವು ಪೋಷಿಸಿ ಕೊಳ್ಳಲು ನೆರವಾದ ಈ ಗೋಡೆಯನ್ನು ಹಂಗರ್ ವಾಲ್ ಎಂದು ಹೆಸರಿಸಲಾಯಿತು.