Sunday, 24th November 2024

ಅಂಬೋಲಿಯೆಂಬ ಸ್ವರ್ಗದ ಬಾಗಿಲು

ಮಳೆ ಬಂದ ಕೂಡಲೆ ಜಲಪಾತಗಳು ಅಪೂರ್ವ ಸೌಂದರ್ಯದೊಂದಿಗೆ ಮೈದುಂಬಿಕೊಳ್ಳುತ್ತವೆ. ಬೆಳಗಾವಿಯ ಹತ್ತಿರ ದಲ್ಲಿರುವ ಅಂಬೋಲಿಯು ಅಂತಹ ಜಲಪಾತಗಳಲ್ಲಿ ಒಂದು.

ವಿನೋದ ರಾ ಪಾಟೀಲ

ಒಂದೇ ಸವನೆ ಸುರಿಯುತ್ತಿರುವ ಮಳೆ, ಅದು ನಿಂತ ಕೂಡಲೇ ಆವರಿಸಿಕೊಳ್ಳುವ ಮೋಡ, ಚಪ್ಪರದಂತೆ ಕಾಣುವ ಹಸಿರಿನ ವಿಶಾಲವಾದ ಪಕೃತಿ – ಪಶ್ಚಿಮ ಘಟ್ಟಗಳೇ ಹಾಗೆ. ಮಳೆಗಾಲಕ್ಕೆ ಮೇಘರಾಜ ಅಷ್ಟು ದಿನ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡು ಸುರಿಯುವ ಹನಿಗಳಿಗೆ ಭೂಮಿ ಒದ್ದೆಯಾಗಿ ಮೊಳಕೆ ಯೊಡೆಯುವದು.

ಇಡೀ ಮಳೆಗಾಲಕ್ಕೆ ಕಾರ್ಯತತ್ಪರವಾಗುವ ಈ ಪಕೃತಿ ಹಸಿರು ತುಂಬಿಕೊಳ್ಳುವ ಕಾಲ. ರಸ್ತೆಯಲ್ಲಿ ಸಂಚರಿಸುತ್ತಿದ್ದರೆ, ಮಳೆಯ ನಡುವೆಯೇ ನಾಟಿ ಮಾಡುವ ರೈತರು, ದೂರದಲ್ಲಿ ಪಶ್ಚಿಮಘಟ್ಟಗಳ ಸಾಲು, ಅಲ್ಲಲ್ಲಿ ತೊರೆ, ಹಳ್ಳ, ನದಿಗಳು. ಇವುಗಳ ನಡುವೆ ಮೋಡಗಳ ಮೋಹಕ ಕಣ್ಣುಮುಚ್ಚಾಲೆಯಾಟ.

ಇಂತಹ ಮಳೆಗಾಲದಲ್ಲಿ ಅಂಬೋಲಿ ಘಾಟ್‌ನಲ್ಲಿ ಸಂಚರಿಸಿದರೆ ನಮಗೆ ಎದುರಾಗುವುದು ಒಂದು ಭೋರ್ಗರೆವ ಜಲಪಾತ. ಅದೇ ಅಂಬೋಲಿ ಫಾಲ್ಸ್! ಬೆಳಗಾವಿಯಿಂದ ಸುಮಾರು ೭೦ ಕಿ.ಮೀ. ದೂರದಲ್ಲಿರುವ ಅಂಬೋಲಿ ಜಲಪಾತವು ಮಳೆಗಾಲದಲ್ಲಿ ನೀರಿನಿಂದ ತುಂಬಿ, ಸುಂದರವಾಗಿ ಕಾಣಿಸುತ್ತಿದೆ.

ಅಂಬೋಲಿ ಗ್ರಾಮದ ಪರಿಸರದಲ್ಲಿ ಸಿಗುವ ಚಹ, ವಡಾಪಾವ್ ತಂಪಿನ ಹಿತಕ್ಕೆ ಬೆಚ್ಚಗಿನ ಅನುಭವ ನೀಡುತ್ತವೆ. ಸಮುದ್ರ ಮಟ್ಟದಿಂದ ೨೦೦೦ ಅಡಿ ಎತ್ತರದಲ್ಲಿರುವ ಈ ಪ್ರದೇಶ ದಲ್ಲಿನ ಪ್ರಕೃತಿ ಸೌಂದರ್ಯ ಅನುಪಮ. ಸನಿಹದ ಅಂಬೋಲಿಯಲ್ಲಿ ವಾಸ್ತವ್ಯಕ್ಕೆ ವಸತಿಗೃಹಗಳ ವ್ಯವಸ್ಥೆ ಇದೆ.

ಎತ್ತರದ ಬೆಟ್ಟದ ತುದಿಯಿಂದ ಬೀಳುವಾಗ ಡಬ್ ಡಬ್ ಎನ್ನುವ ಶಬ್ದದೊಂದಿಗೆ ಬೀಳುವ ನೀರು, ತನ್ನ ಮೈಯುದ್ದಕ್ಕೂ ಬಿಳಿನೊರೆಯನ್ನೇ ತುಂಬಿಕೊಂಡಿದೆ. ಮಳೆಗಾಲದ ಲ್ಲಂತೂ ನೀರಿನ ರಭಸ ಅತ್ಯಧಿಕ. ಜಲಪಾತದ ಹತ್ತಿರ ಹೋಗಲು ಮೆಟ್ಟಿಲು ಗಳ ವ್ಯವಸ್ಥೆ ಇದೆ. ಮೇಲಿಂದ ಬೀಳುವ ಆ ಜಲಪಾತಕ್ಕೆ ಮೈಯೊಡ್ಡಿ ನಿಂತರೆ ಪ್ರಯಾಣದ ಆಯಾಸ ವೆಲ್ಲ ಮಾಯ ವಾಗುತ್ತದೆ. ಮಳೆಗಾಲದಲ್ಲಿ ಈ ಜಲಪಾತವನ್ನು ನೋಡಲು ನೂರಾರು ಜನರು ಬರುವುದು ವಿಶೇಷ.

ಹಿರಣ್ಯಕೇಶಿ ನದಿ ಉಗಮ: ಅಂಬೋಲಿ ತಲುಪುವ ೫ ಕಿ.ಮೀ. ಮೊದಲು ಗಿರಿಕಂದರಗಳ ತಪ್ಪಲಲ್ಲಿ ಹಾಲಿನ ನೊರೆಯಂತೆ ಹರಿಯುವ ಹಿರಣ್ಯಕೇಶಿ ಎಂಬ ನದಿಯ ಉಗಮದ ಸ್ಥಾನವಿದೆ. ಬೆಟ್ಟಗಳ ಮಧ್ಯದಲ್ಲಿ ಹರಿದು ಬರುವ ಈ ನದಿಗೆ ಸುಂದರ ಐತಿಹಾಸಿಕ ಹಿನ್ನೆಲೆಯಿದೆ. ಮಹಾರಾಷ್ಟ್ರ, ಗೋವಾ, ಕರ್ನಾಟಕ ಗಡಿಯಲ್ಲಿರುವ ಈ ತಾಣಕ್ಕೆ ಮೂರೂ ರಾಜ್ಯದ ಪ್ರವಾಸಿಗರು ಬರುತ್ತಾರೆ.