Thursday, 12th December 2024

ಬಾಗಳಿ ನೋಡಲು ಬಾ ಓ ಪ್ರವಾಸಿ !

ರಘುನಾಥವಾರ್‌ ತಾಪ್ಸೆ

ವೈವಿಧ್ಯಮಯ ಸಂಸ್ಕೃತಿ, ವಾಸ್ತುಶಿಲ್ಪ ಕಲೆಗಳ ಬೀಡೆಂದು ಕರ್ನಾಟಕ ಖ್ಯಾತಿ ಪಡೆದಿದ್ದರೂ, ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿರುವ ದೇವಾಲಯಗಳಲ್ಲಿ ವಿಜಯನಗರ ಜಿಯ ಹರಪನಹಳ್ಳಿ ತಾಲ್ಲೂಕಿನಲ್ಲಿರುವ ಬಾಗಳಿ ಗ್ರಾಮದ ಕಶ್ವರ ದೇವಾಲಯವೂ ಒಂದು.

ಈ ಪ್ರಾಚೀನ ದೇಗುಲದ ಇತಿಹಾಸ ಪುಟಗಳನ್ನು ಗಮನಿಸಿದರೆ, ಸಾಕಷ್ಟು ಕುತೂಹಲ ಕಾರಿ ಮತ್ತು ವಿಶಿಷ್ಟ ವಿಚಾರಗಳು ಗಮನಕ್ಕೆ ಬರುತ್ತವೆ. ಬಾಗಳಿಯ ಕಲಿದೇವ ಎಂದು ಕರೆಯಲ್ಪಡುವ ಕಶ್ವರದೇವಾಲಯವು ಕಲ್ಯಾಣ ಚಾಲುಕ್ಯ ದೊರೆ ಅಹವಮಲ್ಲನ
ಕಾಲದಲ್ಲಿ ಕ್ರಿ.ಶ.೯೮೭ ರಲ್ಲಿ ತಲೆಎತ್ತಿತು. ಇದನ್ನು ಕಟ್ಟಿಸುವ ಜವಾಬ್ದಾರಿ ಹೊತ್ತವನು ದುಗ್ಗಿಮಯ್ಯ ಎಂಬಾತ.

ಮೂರು ಶೈಲಿಯ ಸಮ್ಮಿಲನ: ಮೂರು ಶೈಲಿಗಳಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಗರ್ಭಗುಡಿ ರಾಷ್ಟ್ರಕೂಟರ ಶೈಲಿಯಲ್ಲಿದ್ದರೆ, ನವರಂಗ ಚಾಲುಕ್ಯರ ಶೈಲಿಯಲ್ಲಿ, ಸುಖನಾಸಿ ಹೊಯ್ಸಳರ ಶೈಲಿಯಲ್ಲಿದೆ. ಇನ್ನೂ ಈಚಿನ ಇತಿಹಾಸಕ್ಕೆ ಬಂದರೆ, ದೇವಾಲಯದ ಗೋಪುರ ವಿಜಯನಗರ ಶೈಲಿಯಲ್ಲಿ ನಿರ್ಮಾಣ ಗೊಂಡಿರು ವುದು ವಿಶೇಷ.

ಈ ದೇಗುಲವು ತಲ ವಿನ್ಯಾಸದಲ್ಲಿ ಗರ್ಭಗೃಹ ಅಂತರಾಳ ಅದಕ್ಕೆ ಹೊಂದಿ ಕೊಂಡಂತಿದೆ. ದಕ್ಷಿಣದಲ್ಲಿರುವ ಪ್ರವೇಶ ದ್ವಾರದ ಚೌಕಟ್ಟನ್ನು ಅತ್ಯಂತ ಕಲಾತ್ಮಕವಾಗಿ ಹಾಗೂ ಆಕರ್ಷಣಿಯವಾಗಿ ನಿರ್ಮಿಸಿ ದ್ದಾರೆ. ಶಿವನೇ ಇಲ್ಲಿನ ಆರಾಧ್ಯ ದೈವ.  ಲಿಂಗರೂಪಿಯಾಗಿ ಗರ್ಭಗುಡಿಯಲ್ಲಿ ಪೂರ್ವಭಿಮುಖವಾಗಿ ನೆಲೆಸಿದ್ದು ಕಶ್ವರನೆಂದು ಖ್ಯಾತಿ ಹೊಂದಿದೆ. ಕಶ್ವರನಿಗೆ ಈಗಲೂ ಪ್ರತಿದಿನ ಪೂಜೆ ಮತ್ತು ಹಬ್ಬ ಹರಿದಿನಗಳಲ್ಲಿ ವಿಶೇಷ ನಡೆಯುತ್ತಿದೆ.

ದೇವಾಲಯದ ಪ್ರಾಂಗಣದಲ್ಲಿ ಹಲವು ಉಪ ದೇವಾಲಯಗಳೂ ಇವೆ. ಪಶ್ಚಿಮದಲ್ಲಿ ಸೂರ್ಯ ನಾರಾಯಣನ, ಹಾಗೂ ಉತ್ತರದಲ್ಲಿ ವಿಷ್ಣುವಿನ ಒಂದು ರೂಪ ಉಗ್ರನರಸಿಂಹನ ಸಣ್ಣ ದೇಗುಲ ಗಳಿವೆ. ವಿಶಿಷ್ಟ ಕಲಾಕೃತಿಗಳಿಂದ ಸಪ್ತ ಶಾಖೆಗಳ ಬಾಗಿಲವಾಡಗಳ ವಜ್ರ, ನಾಗ, ವಾಧ್ಯ, ಕಂಭ, ವಜ್ರ, ನಾಗ, ವಾಧ್ಯ, ಬಳ್ಳಿ, ನಾಟ್ಯ, ಜಾಲಂಧ್ರಶಾಖೆ ಎಂದು ಎಡ ಬಲಭಾಗದ ಚೌಕಟ್ಟಿನಲ್ಲಿ ಪುಟ್ಟ ಪುಟ್ಟ ಆಕರ್ಷಕ ಕಲಾಕೃತಿಗಳ ಕೆತ್ತನೆಗಳಿದ್ದರೆ, ಮೇಲ್ಭಾಗದಲ್ಲಿ ಗಜಲಕ್ಷ್ಮಿಯ ಸುಂದರ ಕೆತ್ತನೆಯನ್ನು ಮತ್ತು ಅದರ ಮೇಲ್ಗಡೆ ದೇವಾನುದೇವತೆಗಳ ಋಷಿ ಮುನಿಗಳ ಸೂಕ್ಷ್ಮ ಕೆತ್ತನೆಗಳಿವೆ.

ಕೆಳಗಡೆ ದ್ವಾರಪಾಲಕ(ಕೆ)ಯರ ಕೆತ್ತನೆಗಳು, ರತಿಮನ್ಮಥರ ಸುಂದರವಾದ ಆಕರ್ಷಕ ಕಲಾಕೃತಿ ಗಳಿವೆ. ಇಲ್ಲಿನ ಲೈಂಕಿಗ ಶಿಲ್ಪಗಳು ಅಂದಿನ ಜನರಿಗೆ ಪರೋಕ್ಷ ಶಿಕ್ಷಣವನ್ನೂ ನೀಡುತ್ತಿದ್ದಿರಬಹುದು!

ವಿಶಾಲವಾದ ಸಭಾಮಂಟಪ ಪ್ರವೇಶಿಸು ತ್ತಿದ್ದಂತೆ, ಮೂರು ಅಡಿ ಎತ್ತರದ ಸುಂದರ ನಂದಿ ವಿಗ್ರಹ, ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಆಕರ್ಷಕ ಉಬ್ಬು ಶಿಲ್ಪಗಳಿವೆ. ನೃತ್ಯ ಮಂಟಪದಲ್ಲಿ ಕಕ್ಷಾಸನ ಒಳಗೊಂಡಿರುವುದರೊಂದಿಗೆ ಕಲಾತ್ಮಕವಾಗಿ ವಿವಿಧ ಕೋನಾಕೃತಿಯಲ್ಲಿ ಕೆತ್ತಲಾದ ಸುಮಾರು 8 ಅಡಿಗಳ ಎತ್ತರದ 64 ಕಂಬಗಳು ಒಂದೆ ರೀತಿಯಲ್ಲಿ ಕಂಡರೂ, ಅವುಗಳಲ್ಲಿ ವೈವಿಧ್ಯತೆ ಇದೆ.

ನಕ್ಷತ್ರಾಕಾರದ, ವರ್ತುಲಾಕಾರದ, ಷಟ್ಕೋಣಾಕಾರದ, ಚೌಕಕಾರದ ಹೀಗೆ ವಿವಿಧಾಕಾರದಲ್ಲಿ ಬಳಪದ ಕಲ್ಲಿನ ಕಂಬಗಳು ನುಣುಪಾಗಿ ಕೆತ್ತಲಾಗಿದ್ದು ವಿಭಿನ್ನತೆಯಿಂದ ಕೂಡಿದ್ದು, ಆಧುನಿಕ ಪರಿಕರಗಳಿಲ್ಲದ ಅಂದಿನ ದಿನಗಳಲ್ಲಿ ಇಂತಹ ಕಂಬಗಳನ್ನು ಕೆತ್ತಿರುವುದು ಶಿಲ್ಪಿಗಳ ಕಲಾಪ್ರೌಢಿಮೆಗೆ ಸಾಕ್ಷಿಯಾಗಿ ನಿಲ್ಲುತ್ತವೆ..

ಇವುಗಳಲ್ಲಿ ನೃತ್ಯ ಮಂಟಪದ ೪ ಕಂಬಗಳ ಕೆಳಭಾಗದಲ್ಲಿ ಪ್ರಭಾವಳಿಯೊಂದಿಗೆ ನರ್ತಿಸುತ್ತಿ ರುವ ಲತಾಂಗಿಯರು, ಬೇಲೂರಿನ ದೇಗುಲದಲ್ಲಿರುವಂತಹ ಶಿಲಾಬಾಲಕಿಯರ, ರತಿಮನ್ಮಥ, ನೃತ್ಯಾಂಗನೆ, ಮಹಿಷಾಸುರಮರ್ದಿನಿ, ಉಗ್ರನರಸಿಂಹಸ್ವಾಮಿ, ಉಮಾಮಹೇಶ್ವರಿ, ಶಾರದಾಂಬೆ ಮುಂತಾದ ವೈವಿಧ್ಯಮಯ ಕೆತ್ತನೆಗಳು ನಯನ ಮನೋಹರವಾಗಿವೆ.

ಯುಗಾದಿಯ ಹೊಸವರ್ಷದ ಶುಭದಿನದಂದು ಸೂರ್ಯನ ಕಿರಣಗಳು ಕಶ್ವರ ಪಾದಗಳನ್ನು ಸ್ಪರ್ಶಿಸುವ ಅದ್ಭುತವನ್ನು ವೀಕ್ಷಿಸಲು, ಬಹಳಷ್ಟು ಜನರು ಇಲ್ಲಿ ಸೇರುತ್ತಾರೆಂದು ಅರ್ಚಕರಾದ ಬಸವರಾಜು ಹೇಳುತ್ತಾರೆ. ಮುಖ್ಯ ದೇಗುಲದ ಸುತ್ತಲೂ ಎಂಟು ಸಣ್ಣಪುಟ್ಟ ದೇವಾಲಯಗಳಿವೆ. ಕಶ್ವರ ಮಂದಿರದ ಸುತ್ತು ಹಾಕುವಾಗ ಗರ್ಭಗುಡಿಯ ಹೊರಭಾಗದ ಕಲ್ಲಿನ ಗೋಡೆ ಮೇಲೆ ಕಾಮಸೂತ್ರದ ಹಲವಾರು ಭಂಗಿಯಲ್ಲಿರುವ ಸ್ತ್ರೀ ಪುರುಷರ ಹಾಗು ಪ್ರಾಣಿಗಳ ಸಮಾಗಮದ ನಗ್ನ ಶಿಲ್ಪ (ಮಿಥುನ ಶಿಲ್ಪ) ಕಲಾಕೃತಿಗಳನ್ನು ನೋಡಿದರೆ ಮಡಿವಂತರೂ… ಬೆಚ್ಚಿ ಬೀಳಿಸು ವಂತಿರುವುದರಿಂದ ’ಬಾಗಳಿ ಕ್ಲಲೇಶ್ವರ’ ದೇವಾಲಯವನ್ನು ಕರ್ನಾಟಕದ ಖಜುರಾಹೊ ಎಂದೂ ಕರೆಯುವವರಿದ್ದಾರೆ.

ದೇವಾಲಯದ ಸಮೀಪ ಉತ್ಖನನ ನಡೆಸುತ್ತಿರುವಾಗ ಸಿಕ್ಕಿರುವ ಎಲ್ಲಾ ಶಾಸನಗಳು, ವೀರಗಲ್ಲು, ಸುಂದರವಾದ ಮೂರ್ತಿ ಗಳನ್ನು ಬಾಗಳಿ ಗ್ರಾಮದಲ್ಲಿರುವ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದಲ್ಲಿ ರಕ್ಷಸಿ ಇಡಲಾಗಿದೆ. ದೇಗುಲದ ಅನತಿ ದೂರದಲ್ಲಿಈ ಮ್ಯೂಸಿಯಂ ಇದ್ದು ಅಲ್ಲಿಯೂ ಸಾಕಷ್ಟು ಪುರಾತನ ಅವಶೇಷಗಳು, ಮಹಾಸತಿಕಲ್ಲು ಸುಂದರ ವೀರಗಲ್ಲು ಗಳನ್ನು ಇಲ್ಲಿ ವೀಕ್ಷಿಸಬಹುದು. ದೇವಾಲಯವನ್ನು ತಲುಪಲು ಗ್ರಾಮದ ವಿಶಾಲವಾದ ಕೆರೆಯ ಉತ್ತರ ಭಾಗದ ದಿಬ್ಬದ ಮೆಟ್ಟಿಲುಗಳ ಮೂಲಕವೇ ಸಾಗಬೇಕು.

ಬಾಗಳಿಗೆ ಏನು ಬೇಕು?
ಹತ್ತನೇ ಶತಮಾನದ ಅಪರೂಪದ ಪುರಾತನ ದೇಗುಲ ಇಲ್ಲಿದ್ದರೂ, ಬಾಗಳಿಯನ್ನು ನೋಡಲು ಬಯಸುವ ಪ್ರವಾಸಿಗರಿಗೆ ಇಲ್ಲಿನ ಮಾಹಿತಿಯ ಕೊರತೆ ಇದೆ. ಇಂದು ಈ ವಾಸ್ತು ನಿರ್ಮಿತಿಯು ಪುರಾತತ್ವ ಇಲಾಖೆಯ ಸುಪರ್ದಿನಲ್ಲಿದ್ದರೂ, ಈ ದೇಗುಲವನ್ನು ನೋಡಿದವರಿಗೆ, ಇದೊಂದು ನಿರ್ಲಕ್ಷಿತ ಪ್ರದೇಶ ಎಂಬ ಭಾವನೆಯುಂಟಾಗುತ್ತದೆ.

ಈ ಪ್ರೇಕ್ಷಣೀಯ ಸ್ಥಳವು ಬಾಗಳಿ ಹಳ್ಳಿಯಿಂದ ತುಸು ಹೊರಗಿರುವುದೂ ಇದಕ್ಕೆ ಕಾರಣ ಇರಬಹುದು. ದೇಗುಲದ ಸನಿಹದಲ್ಲಿ ವಾಹನ ನಿಲುಗಡೆಗೆ ಸೂಕ್ತ ಅವಕಾಶ ಮಾಡಿಕೊಟ್ಟು, ಸಣ್ಣ ಪುಟ್ಟ ಅಂಗಡಿ ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟು, ಇಲ್ಲಿನ ವಿಶೇಷಗಳನ್ನು ಬಿಂಬಿಸುವ ಫಲಕಗಳನ್ನು ಹಾಕಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಬಹುದು.

ಪ್ರವಾಸಿ ಸೌಲಭ್ಯಗಳಿಲ್ಲದ ಬಾಗಳಿ
ನಿಜ ಹೇಳಬೇಕೆಂದರೆ, ಇಲ್ಲಿನ ಅಪರೂಪದ ವಾಸ್ತುವಿಶೇಷವು ಈಗಾಗಲೇ ಸಾಕಷ್ಟು ಪ್ರಚಾರವಾಗಬೇಕಿತ್ತು, ಪ್ರವಾಸೋದ್ಯಮದ ನಕ್ಷೆಯಲ್ಲಿ ಬಾಗಳಿ ಯು ಸ್ಥಾನ ಪಡೆಯಬೇಕಿತ್ತು. ಕೆರೆಯ ಸನಿಹವೇ ಇರುವ ಈ ವಾಸ್ತುನಿರ್ಮಿತಿಗೆ ಸಾಕಷ್ಟು ಪ್ರವಾಸಿಗರನ್ನು ಸೆಳೆಯುವ ತಾಕತ್ತು ಇದೆ. ಕರ್ನಾಟಕದ ಖುಜುರಾಹೋ ಎಂಬ ವಿಶೇಷಣವನ್ನೂ ಬಾಗಳಿಗೆ ಅಂಟಿಸುವವರಿದ್ದಾರೆ.

ಆದರೆ, ಈ ಹಳ್ಳಿಯು ಪ್ರವಾಸಿ ನಕ್ಷೆಯಿಂದ ದೂರ ಉಳಿದಿದೆ. ಬಾಗಳಿಯು ಇಂದು ಸಣ್ಣ ಹಳ್ಳಿಯಾಗಿರುವುದರಿಂದಾಗಿ ಇಲ್ಲಿ ಉತ್ತಮ ಹೊಟೇಲ್‌ಗಳಿಲ್ಲ. ಈ ವಾಸ್ತು ನಿರ್ಮಿತಿ ಯನ್ನು ನೋಡಲು ಬರುವ ಪ್ರವಾಸಿಗರು, ಹರಪನಹಳ್ಳಿಯಿಂದ ತಿಂಡಿ ತಿನಿಸು ಪ್ಯಾಕ್ ಮಾಡಿಸಿಕೊಂಡು ಬರುವುದು ಉತ್ತಮ.

***

ಹರಿಹರದ ಮೂಲಕ ಹರಪನಹಳ್ಳಿಗೆ ಬಂದು ಅಲ್ಲಿಂದ ಹೊಸಪೇಟೆಗೆ ಹೋಗುವ (ರಾಜ್ಯ ಹೆದ್ದಾರಿಯ ರಸ್ತೆ ೨೫) ಹೆದ್ದಾರಿಯಲ್ಲಿ ಬಾಗಳಿ ಗ್ರಾಮ ಎಂಟು ಕಿ.ಮೀ.ದೂರವಿದೆ. ಹರಪನ ಹಳ್ಳಿ ತನಕ ಬಸ್ ಸೌಕರ್ಯವಿದ್ದು, ಅಲ್ಲಿಂದ ಆಟೊರಿಕ್ಷಾದಲ್ಲಿ ಬಾಗಳಿ ತಲುಪಬಹುದು.