Wednesday, 11th December 2024

ಚಂದ್ರವಳ್ಳಿಯ ರಹಸ್ಯ

ಚಿತ್ರದುರ್ಗ ಪಟ್ಟಣಕ್ಕೆ ತಾಗಿಕೊಂಡಿರುವ ಚಂದ್ರವಳ್ಳಿಯಲ್ಲಿರುವ ಗುಹೆ ಮತ್ತು ಸುರಂಗಗಳು ಕುತೂಹಲಕಾರಿ. ಗ್ರೀಕ್ ರಾಜ ಆಗಸ್ಟ್‌ಸ್ ಸೀಸರನ ಕಾಲದ ನಾಣ್ಯಗಳು ಇಲ್ಲಿ ದೊರೆತಿವೆ.

ಜಿ.ನಾಗೇಂದ್ರ ಕಾವೂರು

ಬಯಲು ಸೀಮೆಯ ಪ್ರದೇಶವಾಗಿರುವ ಚಿತ್ರದುರ್ಗ ನಗರ ಐತಿಹಾಸಿಕ ಪ್ರಸಿದ್ಧ. ಬೃಹತ್ ಗಾತ್ರದ ಶಿಲೆಗಳ ಮೇಲೆ ಕಲ್ಲಿನ ಗೋಡೆಗಳಿಂದ ನಿರ್ಮಿಸ ಲಾಗಿರುವ ಕೋಟೆ, ಏಳು ಸುತ್ತಿನ ಕೋಟೆ ಎಂದೇ ಪ್ರಖ್ಯಾತಿ ಪಡೆದಿದೆ. ಚಿತ್ರದುರ್ಗದ ನಾಯಕರ ಹಾಗೂ ಹೈದರಾಲಿಯ ನಡುವೆ ಜರುಗಿದ ಯುದ್ಧ ಹಾಗೂ ಆ ಸಂದರ್ಭದಲ್ಲಿ ಒನಕೆ ಓಬವ್ವ ಎಂಬಾಕೆ ತೋರಿದ ಸಾಹಸದ ಬಗ್ಗೆ ತಿಳಿಯದ ಕನ್ನಡಿಗರಿಲ್ಲ.

ಚಿತ್ರದುರ್ಗ ಕೋಟೆ ಪ್ರವಾಸಿಗರ ಗಮನ ಸೆಳೆಯುವಂತೆ, ಸಮೀಪದ ಇರುವ ಚಂದ್ರವಳ್ಳಿ ಗುಹೆಗಳು ಸಹ ಗಮನ ಸೆಳೆಯುತ್ತವೆ. ಕುಂತಲದ ರಾಜ ಚಂದ್ರಹಾಸ ಆಳುತ್ತಿದ್ದ ಪ್ರದೇಶವು ಚಂದ್ರನ ಆಕಾರದಲ್ಲಿರುವು ದರಿಂದಭಿ ಚಂದ್ರವಲ್ಲಿ(ಳ್ಳಿ) ಎಂದು ಹೆಸರು ಬಂದಿದೆಯಂತೆ. ‘ಚಂದನಾವತಿ’ ಎಂಬ ಹೆಸರೂ ಸಹ ಈ ಪ್ರದೇಶಕ್ಕಿದೆ. ಚಂದ್ರವಳ್ಳಿ ಪ್ರದೇಶದಲ್ಲಿ ವಿಶಾಲವಾದ, ಪುರಾತನ ಕೆರೆಯಿದೆ. ಹುಲೇಗೊಂದಿ ಸಿದ್ದೇಶ್ವರ ದೇವಾಲಯದ ಪಕ್ಕದಲ್ಲಿರುವ ಬೃಹದಾಕಾರದ ಬಂಡೆಯ ಮೇಲೆ ಸಂಸ್ಕೃತ ಭಾಷೆಯಲ್ಲಿ ಕೆತ್ತಲಾಗಿರುವ ಮೂರು ಸಾಲಿನ ಶಾಸನದ ಪ್ರಕಾರ, ದೂರದಲ್ಲಿ ವಿಶಿಷ್ಟ ಆಕೃತಿಯ ದವಳಪ್ಪನ ಗುಡ್ಡವಿದ್ದು ರಾಜಾ ಮಯೂರ ವರ್ಮ ತನ್ನ ಸೈನ್ಯವನ್ನು ಅಲ್ಲಿ ಇಲ್ಲಿಡುತ್ತಿದ್ದನಂತೆ.

ಕಗ್ಗತ್ತಲ ಗುಹೆ
ಚಂದ್ರವಳ್ಳಿಯ ಮೊದಲ ನೋಟವೆಂದರೆ ಬೃಹತ್ ಗಾತ್ರದ ಕಲ್ಲುಗಳು. ಆ ಕಲ್ಲುಗಳ ಅಡಿಯಲ್ಲಿರುವ ಗುಹೆ ಕುತೂಹಲಕಾರಿ. ಮುಖ್ಯರಸ್ತೆಯಿಂದ ಸುಮಾರು ಒಂದು ಕಿ.ಮೀ ದೂರ ಕ್ರಮಿಸಿ, ಬಲಭಾಗದಲ್ಲಿರುವ ಮೆಟ್ಟಿಲುಗಳನ್ನು ಹತ್ತಿಹೋದಲ್ಲಿ ದೇವಾಲಯ ಹಾಗೂ ಗುಹೆ ಕಾಣಸಿಗುತ್ತವೆ. ಚಂದ್ರ ವಳ್ಳಿ ಪ್ರದೇಶವು ಪುರಾತತ್ವ ಸ್ಥಳವಾಗಿದ್ದು, ಪ್ರಾಗೈತಿಹಾಸಿಕ ಕಾಲದಿಂದಲೇ ಇಲ್ಲಿ ಮನುಷ್ಯನ ಚಟುವಟಿಕೆ ಇತ್ತು. ಇದು ಮೂರು ಬೆಟ್ಟಗಳ ನಡುವೆ ಇರುವ ಕಣಿವೆಯಾಗಿದೆ. ಬೃಹತ್ತಾದ ಎರಡು ಏಕಶಿಲಾ ಬಂಡೆಗಳ ನಡುವೆಯಿರುವ ಗುಹೆ ಹಾಗೂ ಪಾಂಡವರುಸ್ಥಾಪಿಸಿ ಪೂಜಿಸಿದರೆಂದು
ಹೇಳಲಾ ಗುವ ಪಂಚಲಿಂಗೇಶ್ವರ ದೇವಾಲಯ ಇಲ್ಲಿನ ವಿಶೇಷತೆಗಳು.

ಬೆಳಗಾವಿಯ ಅಂಕಲಗಿಯಿಂದ ಬಂದ ಸಂತರು ಇಲ್ಲಿ ಧ್ಯಾನ ಮಾಡುತ್ತಿದ್ದರಂತೆ. ಹಾಗಾಗಿ ಈ ಮಠವನ್ನು ಅಂಕಲಗಿ ಮಠವೆಂದೂ ಸಹ ಕರೆಯುತ್ತಾರೆ. ಸನಿಹದಲ್ಲಿರುವ ಪಂಚಲಿಂಗೇಶ್ವರ ದೇವಾಲಯದ ಬಲಭಾಗದಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ದೊಡ್ಡ ತೊಟ್ಟಿಯಿದೆ ಇದರಲ್ಲಿರುವ ನೀರಿನಿಂದ ಭಕ್ತರು ತಮ್ಮ ಕಾಲುಗಳನ್ನು ತೊಳೆದುಕೊಂಡು ದೇವಾಲಯವನ್ನು ಪ್ರವೇಶಿಸಬೇಕು. ಒಳಗೆ ಹೋಗುತ್ತಿದ್ದಂತೆ ಎದುರು ಭಾಗದಲ್ಲಿ ದೊಡ್ಡ ಗಾತ್ರದ ಎರಡು ಲಿಂಗಗಳಿದ್ದು ಇವುಗಳನ್ನು ಧರ್ಮರಾಯ ಹಾಗೂ ಭೀಮ ಸ್ಥಾಪಿಸಿದರೆಂದು ಹೇಳಲಾಗಿದ್ದು ಈ ಲಿಂಗಗಳು ಗಾತ್ರದಲ್ಲಿ ಇತರೆ ಲಿಂಗಗಳಿಗಿಂತಲೂ ದೊಡ್ಡವಾಗಿವೆ. ಈ ಲಿಂಗಗಳ ಬಲಕ್ಕೆ ಸ್ವಲ್ಪ ಚಿಕ್ಕ ಗಾತ್ರದ ಮೂರು ಲಿಂಗಗಳನ್ನು ಕ್ರಮವಾಗಿ ಅರ್ಜುನ, ನಕುಲ ಹಾಗೂ ಸಹದೇವ ಪ್ರತಿಷ್ಟಾಪಿಸಿದರೆಂದು ಹೇಳಲಾಗುತ್ತಿದೆ.

೧೫ ನೇ ಶತಮಾನದಲ್ಲಿ ನದಿಯಲ್ಲಿ ದೊರೆತ ನಾಲ್ಕು ಲಿಂಗಗಳನ್ನು ದೇವಾಲಯದ ಒಂದು ಭಾಗದಲ್ಲಿ ಪ್ರತಿ ಷ್ಠಾಪಿಸಲಾಗಿದೆ. ಆಳೆತ್ತರದ ಶಿಲಾ ಶಾಸನವೂ ಸಹ ಪಂಚಲಿಂಗೇಶ್ವರ ದೇವಾಲಯದಲ್ಲಿದೆ.

ಎಂಬತ್ತು ಅಡಿ ಆಳದ ಗುಹೆ 
ಪಂಚಲಿಂಗೇಶ್ವರ ದೇವಾಲಯದ ಬಲಭಾಗದಲ್ಲಿ ಮತ್ತೊಂದು ಬೃಹದಾಕಾರದ ಬಂಡೆಯ ಕೆಳಗೆ ಗುಹೆ ಯೊಂದನ್ನು ನಿರ್ಮಿಸಲಾಗಿದೆ. ಕರ್ನಾಟಕದ ಪ್ರಪ್ರಥಮ ರಾಜ ಕದಂಬ ವಂಶಸ್ಥನಾದ ಮಯೂರ ವರ್ಮ ಗುಪ್ತ ಸಮಾಲೋಜನೆ ನಡೆಸಲು ಈ ಗುಹೆಯನ್ನು ನಿರ್ಮಿಸಿದನಂತೆ. ೮೦ ಅಡಿಗಳಷ್ಟು ಆಳವಿರುವ ಈ ಗುಹೆ ಅಚ್ಚರಿ ಮೂಡಿಸುತ್ತದೆ. ಮಾನವ ನಿರ್ಮಿತ ಗುಹೆಯ ಪ್ರವೇಶ ದ್ವಾರವನ್ನು ನಂದಿ ದ್ವಾರವೆಂದು ಕರೆಯಲಾಗುತ್ತದೆ. ಈ ದ್ವಾರದತ್ತ ಸಾಗುವ ಕಲ್ಲಿನ ಮೆಟ್ಟಿಲುಗಳು ಎತ್ತರದಲ್ಲಿ ಅಸಮವಾಗಿವೆ. ಈ ಮೆಟ್ಟಿಲುಗಳ ಮೂಲಕ ಆಗಂತುಕರು ಸಿಂಹದ್ವಾರದ ಕಡೆ ಸಾಗುವಾಗ ಆಯತಪ್ಪಿ ಬೀಳುವಂತಾಗುತ್ತದೆ. ಆಗಂತುಕರು ಬಂದಿರುವುದು ಒಳಗಿರುವವರಿಗೆ ತಿಳಿಯಲೆಂದು ಈ ರೀತಿಯ ಮೆಟ್ಟಿಲುಗಳನ್ನು ಮಾಡಿದ್ದಾರಂತೆ.

ಟಾರ್ಚ್ ಲೈಟ್ ಹಿಡಿದು ನಂದಿದ್ವಾರದ ಮೂಲಕ ಒಳಗೆ ಸಾಗುತ್ತಿದ್ದಂತೆ ಸಂಪೂರ್ಣವಾಗಿ ಕತ್ತಲೆಯಿಂದ ಕೂಡಿದ ಕೋಣೆ ನಮ್ಮನ್ನು ಸ್ವಾಗತಿಸುತ್ತದೆ. ಕೆಲವರಿಗೆ ಇಲ್ಲಿ ಯಾರೋ ಕರೆದಂತೆ, ಮೈ ಮುಟ್ಟಿದಂತೆ ಭಾಸವಾಗುತ್ತದೆ ಎಂಬ ಪ್ರತೀತಿ. ಆದರೆ, ಇಂತಹ ಯಾವ ಅನುಭವವೂ ನಮ್ಮ ತಂಡಕ್ಕೆ ಆಗಲಿಲ್ಲ . ಪ್ರಾರಂಭದಲ್ಲಿ ಒಂದು ಕಲ್ಲಿನ ಮಂಚವಿದ್ದು, ಸೈನಿಕ ಇದರ ಮೇಲೆ ಕುಳಿತು ದ್ವಾರವನ್ನು ಕಾಯುತ್ತಿದ್ದನಂತೆ. ಮುಂದೆ ಸಾಗುತ್ತಿದ್ದಂತೆ ಗಜ ದ್ವಾರ ಎದುರಾಗುತ್ತದೆ. ಇಲ್ಲಿ ಪೂರ್ಣ ಕುಂಭಗಳು ಹಾಗೂ ಆನೆಗಳ ಶಿಲ್ಪಗಳನ್ನು ಕೆತ್ತಲಾಗಿದೆ. ವಿಶಾಲವಾದ ಅಂಗಳದಲ್ಲಿ ಧ್ಯಾನಪೀಠವಿದ್ದು, ಭಿತ್ತಿ ಯಲ್ಲಿ ದೀಪಗಳನ್ನಿಡಲು ಗೂಡುಗಳನ್ನು ಕೊರೆಯಲಾಗಿದೆ. ಸಾಧಾರಣ ಗಾತ್ರದ ಶಿವಲಿಂಗವಿದ್ದು ಸಮೀಪದ ಪೂಜಾ ಸಾಮಾಗ್ರಿಗಳನ್ನಿಡಲು ಒಂದು ಪುಟ್ಟ ಕೋಣೆಯೂ ಸಹ ಇದೆ.

ಸಮೀಪದ ಸ್ನಾನ ಗೃಹವಿದ್ದು, ತೊಟ್ಟಿಗೆ ಹೊರಗಿನಿಂದ ನೀರು ಒದಗಿಸುವ ವ್ಯವಸ್ಥೆ ಅಚ್ಚರಿ ಮೂಡಿಸುತ್ತದೆ. ಇಲ್ಲಿ ಮೂರು ಗುಪ್ತ ದ್ವಾರಗಳಿದ್ದು ಬಾಬಾ ಬುಡನ್ ಗಿರಿ, ಉಚ್ಚಂಗಿ ದುರ್ಗ ಹಾಗೂ ಶ್ರೀರಂಗ ಪಟ್ಟಣಕ್ಕೆ ಹೋಗುವ ದಾರಿಯಿತ್ತಂತೆ. ಮೇಲ್ಛಾವಣಿಯನ್ನು ಪುಟ್ಟ ಕಲ್ಲುಗಳು ಹಾಗೂ ಗಾರೆಯನ್ನು ಬಳಸಿ ನಿರ್ಮಿಸಲಾಗಿದೆ. ಮುಂದೆ ಸಾಗುತ್ತಿದ್ದಂತೆ ಇರುವ ಹಜಾರದ ಗೋಡೆಗಳಿಗೆ ನಯವಾದ ಗಾರೆಯ ಲೇಪನ ಮಾಡಲಾಗಿದೆ. ನೈಸರ್ಗಿಕವಾಗಿ ತಯಾರಿಸಲಾದ ಬಣ್ಣಗಳನ್ನು ಮಿಶ್ರ ಮಾಡಲು ಕಲಾತ್ಮಕವಾದ ಪುಟ್ಟ ತೊಟ್ಟಿಗಳಿದ್ದು, ಇವುಗಳ ಕಲಾತ್ಮಕ ರಚನೆ ಅಚ್ಚರಿ ಮೂಡಿಸುತ್ತದೆ. ವಿಶಾಲವಾದ ಪ್ರದೇಶದ ಭಿತ್ತಿಗಳಲ್ಲಿ ಹಲವು ರೀತಿಯ ಚಿತ್ರಗಳನ್ನು ರಚಿಸಲಾಗಿರುವುದನ್ನು ಇಂದಿಗೂ ಸಹ ಕಾಣಬಹುದಾಗಿದೆ ಗುಹೆಯಿಂದ
ಮೇಲ್ಭಾಗದವರೆಗೂ ಕಿಂಡಿಯೊಂದನ್ನು ಕೊರೆಯಲಾಗಿದ್ದು, ಶತೃಗಳು ಬರುವುದನ್ನು ವೀಕ್ಷಿಸಲು ಅನುಕೂಲ ಎನಿಸಿದೆ. ಗುಹೆಯಲ್ಲಿ ಮುಂದೆ ಸಾಗುತ್ತಿದ್ದಂತೆ ಧ್ಯಾನಪೀಠ ಸಿಗುತ್ತದೆ. ಇಲ್ಲಿರುವ ರಚನೆಗಳಿಗೆ ನೈಸರ್ಗಿಕವಾಗಿ ಲಭ್ಯವಿರುವ ವಸ್ತುಗಳಿಂದ ತಯಾರಿಸಲಾದ ಬಣ್ಣಗಳನ್ನು ಬಳಿಯ ಲಾಗಿದೆ.

ಶಿವ, ಪಾರ್ವತಿ ಹಾಗೂ ದಕ್ಷ ಬ್ರಹ್ಮನ ಉಬ್ಬು ಶಿಲ್ಪಗಳಿದ್ದು ಸುತ್ತಲೂ ಕುಸುರಿ ಕೆಲಸದ ಆಕರ್ಷಕ ಚಿತ್ತಾರಗಳಿವೆ. ಯಾರೋ ವಿಗ್ರಹಗಳನ್ನು ಭಾಗಶಃ ಹಾಳು ಮಾಡಿದ್ದಾರೆ. ಮುಂದೆ ಸಿಗುವುದೇ ಮೂರನೇ ದ್ವಾರ ಸಿಂಹ ದ್ವಾರ. ಈ ದ್ವಾರದಿಂದ ತೆವಳಿಕೊಂಡೇ ಹೋಗಬೇಕು ಅಥವಾ ಎದುರಿಗಿರುವ ಮತ್ತೊಂದು ದೊಡ್ಡ ದ್ವಾರದ ಮೂಲಕ ಬಗ್ಗಿಕೊಂಡು ಹೊರಗೆ ಹೋಗಬಹುದು. ಗುಹೆಯೊಳಗೆ ಸುಮಾರು ೮೦ ಅಡಿಗಳಷ್ಟು ಕೆಳಗೆ ಹೋದಲ್ಲಿ ರಾಜರು ಗುಪ್ತ ಸಮಾಲೋಚನೆ ನಡೆಸುತ್ತಿದ್ದ ಪ್ರದೇಶ ಸಿಗುತ್ತದೆ. ಇಲ್ಲಿ ಕುಳಿತುಕೊಳ್ಳಲು ಆಸನಗಳು ಹಾಗೂ ಗೋಡೆಗಳಲ್ಲಿ ದೀಪಗಳನ್ನಿಡಲು ಗೂಡುಗಳನ್ನು ರಚಿಸಲಾಗಿದೆ.

ಗುಹೆಯ ಹಿಂಭಾಗದಲ್ಲಿ ಸೀಳಿರುವ ದೊಡ್ಡ ಬಂಡೆಯಿದ್ದು, ಈ ಬಂಡೆಯನ್ನು ಗರುಡ, ನಾಗಲಿಂಗೇಶ್ವರ ಕಲ್ಲು ಎಂದು ಕರೆಯುತ್ತಾರೆ. ಶಿವ ಲಿಂಗದ ಹಿಂದೆ ನಾಗರ ಹಾವಿದ್ದಂತೆ ಕಾಣುತ್ತದೆ ಹಾಗೂ ಹಾವಿನ ಹಿಂಭಾಗದಿಂದ ನೋಡಿದರೆ, ಗರುಡನಂತೆ ಕಾಣುವುದು ವಿಶೇಷ.

ಗುಹೆಯಲ್ಲೇ ಪಾಠಶಾಲೆ
ರಾಜಕುಮಾರರಿಗೆ ಪಾಠ ಹೇಳಿಕೊಡುವ ಕೋಣೆಯೂ ಸಹ ಇಲ್ಲಿದೆ. ನವರತ್ನಗಳನ್ನು ಸಂಗ್ರಹಿಸಿಡಲು ವ್ಯವಸ್ಥೆಯನ್ನು ಮಾಡಲಾಗಿದೆ. ದ್ವಾರದ ಇಕ್ಕೆಲಗಳಲ್ಲಿ ಕ್ರಮವಾಗಿ ಹಂಸ ಹಾಗೂ ನವಿಲಿನ ಉಬ್ಬು ಶಿಲ್ಪಗಳಿದ್ದು ಈ ಪ್ರದೇಶವನ್ನು ಸುಬ್ರಹ್ಮಣ್ಯ ಸ್ವಾಮಿ ದೇವಾಲಯವೆಂದು ಕರೆಯುತ್ತಾರೆ. ಅನಾರೋಗ್ಯವುಂಟಾದಾಗ ಚಿಕಿತ್ಸೆ ಮಾಡಲು ಮೂಲಿಕೆಗಳನ್ನು ಅರೆಯುವ ಕಲಾಬತ್ತು ಸಹ ಇಲ್ಲಿದೆ. ಮುಖ ಮಂಟಪ, ನವರಂಗ, ಗರ್ಭಗುಡಿ ಇದೆ. ಛಾವಣಿಯಲ್ಲಿ ವಿಧವಿಧವಾದ ಕೆತ್ತನೆಗಳಿವೆ. ಮುಂದೆ ಆನೆ ದ್ವಾರ ಸಿಗುತ್ತದೆ. ಇಲ್ಲಿಂದ ಹೊರ ಬರುತ್ತಿದ್ದಂತೆ ದವಸ, ಧಾನ್ಯಗಳನ್ನು ಸಂಗ್ರಹಿಸಿಡುವ ಕೋಣೆ ಸಿಗುತ್ತದೆ.

೨,೦೦೦ ವರ್ಷ ಹಿಂದಿನ ನಾಣ್ಯಗಳು
ಚಂದ್ರವಳ್ಳಿ ಪ್ರದೇಶದಲ್ಲಿ ಉತ್ಖನನ ನಡೆಸಿದಾಗ ಶಿಲಾಯುಗದ ಕಾಲದಲ್ಲೇ ಇಲ್ಲಿ ಜನವಸತಿ ಇರುವ ವಿಚಾರ ಗೊತ್ತಾಗಿದೆ. ಪುರಾತನ ಕಾಲದ ಮಣ್ಣಿನ
ಮಡಕೆಗಳು, ಬಣ್ಣ ಬಣ್ಣದ ಬಟ್ಟಲುಗಳು ಹಾಗೂ ಕೆಲವು ನಾಣ್ಯ ಇಲ್ಲಿ ದೊರೆತಿವೆ. ಗ್ರೀಕ್ ರಾಜ ಸೀಸರನ ಕಾಲದ (ಕ್ರಿ.ಪೂ. ಒಂದನೆಯ ಶತಮಾನ)
ಮತ್ತು ಹೂಣರ ಕಾಲದ ವಿದೇಶಿ ನಾಣ್ಯಗಳು ಇಲ್ಲಿ ದೊರೆತಿರುವುದು ವಿಶೇಷ. ಅಸ್ಥಿಪಂಜರವನ್ನು ಹೊಂದಿರುವ ಸಿಸ್ಟ್, ಪ್ರಾಣಿಗಳ ಮೂಳೆಗಳು ಮತ್ತು
ಹಲ್ಲುಗಳನ್ನು ಹೊಂದಿರುವ ಮಡಕೆಗಳೂ ಸಹ ದೊರೆತಿವೆ.

*

ಚಿತ್ರದುರ್ಗದಿಂದ ಕೇವಲ ಕಿ.ಮೀ. ದೂರದಲ್ಲಿದೆ. ಕತ್ತಲಮಯವಾಗಿರುವ ಗುಹೆಯೊಳಗೆ ಅತ್ಯವಶ್ಯಕವಾಗಿ ಟಾರ್ಚ್ ಹಿಡಿದು ಹೋಗಬೇಕು. ಚಂದ್ರ ವಳ್ಳಿಗೆ ಸಾರ್ವಜನಿಕ ಬಸ್ಸುಗಳ ಸೌಕರ್ಯ ಇಲ್ಲ; ಆಟೋಗಳ ಸೌಲಭ್ಯವಿದೆ. ಕೋತಿಗಳ ಸಂಖ್ಯೆ ಅಽಕವಾಗಿರುವುದರಿಂದ ಪ್ರವಾಸಿಗರು ಜಾಗ್ರತೆ ವಹಿಸಬೇಕು.ಂ