Thursday, 12th December 2024

ಬಹು ಸುಂದರ ಭೂ ದೃಶ್ಯ

ಪವನ್ ಕುಮಾರ್ ಆಚಾರ್ಯ

ಬೆಳ್ತಂಗಡಿಗೆ ತುಂಬಾ ಹತ್ತಿರವಿರುವ ಗಡಾಯಿಕಲ್ಲಿನ ಚಾರಣ ಒಂದು ಸುಂದರ ಅನುಭವ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪವಿರುವ ಗಡಾಯಿಕಲ್ಲು ಚಾರಣಕ್ಕೆ ಸೂಕ್ತ. ಅದನ್ನು ಜಮಲಾಬಾದ್ ಕೋಟೆ ಅಥವಾ ನರಸಿಂಹ ಘಡ ಅಂತಾನೂ ಕರೆಯುತ್ತಾರೆ. ಕುದುರೆ ಮುಖ ಪರ್ವತ ಶ್ರೇಣಿ (ಪಶ್ಚಿಮ ಘಟ್ಟ) ದಲ್ಲಿ ಬರುವ ಗಡಾಯಿ ಕಲ್ಲು ಪರ್ವತವು ೧,೭೦೦ ಅಡಿ ಎತ್ತರದಲ್ಲಿದ್ದು ಅದರ ತುದಿಯಿಂದ ಕುದುರೆಮುಖ ಪರ್ವತ ಶ್ರೇಣಿಯ ಅದ್ಭುತ ನೋಟ ಲಭ್ಯ.

ಈ ಸುಂದರ ತಾಣಕ್ಕೆ ತುದಿಯ ತನಕವೂ ಕಲ್ಲಿನ ಮೆಟ್ಟಿಲುಗಳು ಇರುವುದರಿಂದಾಗಿ, ಈ ಚಾರಣ ಅಷ್ಟೊಂದು ಕಠಿಣವೇನೂ ಇಲ್ಲ. ಶಾಲಾ ದಿನಗಳಲ್ಲಿ ಸ್ಕೌಟ್ ಆಂಡ್ ಗೈಡ್ಸ್‌ನಲ್ಲಿದ್ದ ನಾನು ೭ ನೇ ತರಗತಿ ಯಲ್ಲಿರುವಾಗಲೇ ಇಲ್ಲಿಗೆ ಚಾರಣಕ್ಕಾಗಿ ಹೋಗಿದ್ದೆ. ಇದನ್ನು ಏರಲು ಸುಮಾರು ೧೮೦೦ ಮೆಟ್ಟಿಲುಗಳಿವೆ. ಆ ಮೆಟ್ಟಿಲುಗಳನ್ನು ಬಂಡೆಯ ಒಂದು ಮಗ್ಗುಲಿನಲ್ಲಿ ಒಪ್ಪವಾಗಿ ಕೆತ್ತಿದ್ದಾರೆ. ಮಳೆಗಾಲದಲ್ಲಿ ಪಾಚಿ ಬೆಳೆಯುವುದರಿಂದ ಈ ಚಾರಣ ಅಪಾಯಕಾ ರಿಯೇ ಸರಿ. ಆದರೆ ಬೇಸಿಗೆಯಲ್ಲಿ ಆರಾಮವಾಗಿ ಈ ಚಾರಣವನ್ನು ಮಾಡಬಹುದು. ಬೆಳ್ತಂಗಡಿಯಿಂದ ಮಂಜೊಟ್ಟಿ ಗ್ರಾಮಕ್ಕೆ ಹೋಗುವ ಬಸ್ ಹತ್ತಿದರೆ ಗಡಾಯಿಕಲ್ಲು ಬುಡವನ್ನು ಪ್ರದೇಶವನ್ನು ಸೇರಬಹುದು.

ಬೆಳಗ್ಗೆ ೬ ರಿಂದ ಸಾಯಂಕಾಲ ೪ ತನಕ ಇಲ್ಲಿ ಪ್ರವೇಶವಿರುತ್ತದೆ. ರಾತ್ರಿ ಕಾಲದಲ್ಲಿ ಉಳಿಯಲು ಸಾಧ್ಯವಿಲ್ಲ. ಚಾರಣ ಶುಲ್ಕ ವಿರುತ್ತದೆ. ಡಿಸೆಂಬರ್‌ನಿಂದ ಮೇ ತನಕ ಚಾರಣ ಮಾಡಲು ಉತ್ತಮ ಸಮಯ. ಗಡಾಯಿಕಲ್ಲು ಅಥವಾ ನರಸಿಂಹ ಗಡ ಕೋಟೆ ಯು ಬಹಳ ಹಿಂದಿನಿಂದಲೇ ಇಲ್ಲಿ ಇತ್ತು. ಇದನ್ನು ಟಿಪ್ಪು ಸುಲ್ತಾನನು ೧೭೯೪ ರಲ್ಲಿ ಮರು ನಿರ್ಮಾಣ ಮಾಡಿ, ಬುರುಜು ಗಳನ್ನು ಕಟ್ಟಿಸಿದನು, ತುದಿಯಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಲು ಮತ್ತು ಕೊಠಡಿ, ಕಾವಲ್ತಗಾರರ ಕೊಠಡಿ ಯನ್ನು ನಿರ್ಮಿಸಿದನು.

ಇಲ್ಲಿಂದ ಬಹು ದೂರದ ಜನರ ಆಗಮನ, ನಿರ್ಗಮನವನ್ನು ನೋಡಬಹುದು, ಆದ್ದರಿಂದ ವೀಕ್ಷಣಾ ಕೇಂದ್ರವನ್ನಾಗಿ ಉಪಯೋಗಿಸಲಾಗಿತ್ತು. ಗಡಾಯಿಕಲ್ಲು ಬುಡದಲ್ಲಿ ಸಾಕಷ್ಟು ಕಾಡು ಇದೆ. ಬೆಟ್ಟ ಏರುವ ದಾರಿಯುದ್ದಕ್ಕೂ ಮರ ಗಿಡಗಳು, ಕುರುಚಲು ಕಾಡು ಇದೆ. ಕಡಿದಾದ ಬಂಡೆಯನ್ನೇರುವಾಗ, ನಿರಂತರವಾಗಿ ಮೆಟ್ಟಿಲುಗಳನ್ನು ಹತ್ತಿ ಕಾಲು ನೋವು ಬರುವು ದಂತೂ ನಿಜ.

ಬೆಳ್ತಂಗಡಿ ಮತ್ತು ಉಜಿರೆಯ ದಾರಿಯಲ್ಲಿ ಬಸ್ ಮೂಲಕ ಹೋಗುವವರಿಗೆ ಉತ್ತರ ದಿಕ್ಕಿನಲ್ಲಿ ಗಡಾಯಿಕಲ್ಲು ಬಹು ಸುಂದರ ವಾಗಿ ಕಾಣಿಸುವುದಂತೂ ನಿಜ. ದೂರದಿಂದ ಕಂಡ ಈ ಕಲ್ಲನ್ನು ಏರಬೇಕೆಂದು ನಿಮಗೆ ಅನಿಸಿದರೆ, ಇನ್ನೇಕೆ ತಡ, ಮಂಜೊಟ್ಟಿ
ಗ್ರಾಮಕ್ಕೆ ಹೋಗಿ, ಬೆಟ್ಟವೇರಲು ಆರಂಭಿಸಿ. ಗಡಾಯಿಕಲ್ಲು ತುದಿಯಿಂದ ಕಾಣಿಸುವ ಕುದುರೆ ಮುಖ ಶ್ರೇಣಿಯ ಬೆಟ್ಟಗಳ ನೋಟವಂತೂ, ದಕ್ಷಿಣ ಕನ್ನಡದ ಒಂದು ಅದ್ಭುತ ದೃಶ್ಯ!