Thursday, 12th December 2024

ವಿಶಾಲ ನಗರದ ನಡುವೆಯೇ ಕೃಷಿ

ಇಲ್ಲಿ ತರಕಾರಿ ಬೆಳೆಯುತ್ತಾರೆ, ಕೊತ್ತುಂಬರಿ ಸೊಪ್ಪು ಬೆಳೆಯುತ್ತಾರೆ. ನಗರ ನಡುವಿನ ಈ ತಾಣದಲ್ಲಿ, ತಾಜಾ ತರಕಾರಿ ಸಹ ಲಭ್ಯ! ಜತೆಗೆ, ಮಕ್ಕಳು ಸಹ ಕೃಷಿ ಚಟುವಟಿಕೆಯನ್ನು ನೋಡಬಹುದು, ಹಕ್ಕಿ ಗೂಡನ್ನು ನೋಡಿ ಕಲಿಯ ಬಹುದು, ನಲಿಯಬಹುದು!

ಮಂಜುನಾಥ ಡಿ. ಎಸ್.

ಅಮೆರಿಕ ಸಂಯುಕ್ತ ಸಂಸ್ಥಾನಗಳ ಕ್ಯಾಲಿಫೋರ್ನಿಯ ರಾಜ್ಯದ ದಕ್ಷಿಣ ದಲ್ಲಿರುವ ‘ಅರ್ವೈನ್’, ಹಸಿರು ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಲವು ದಶಕಗಳ ಹಿಂದೆ ಈ ಪ್ರದೇಶದಲ್ಲಿ ವ್ಯವಸಾಯವೇ ಪ್ರಧಾನವಾಗಿತ್ತು. ಇದರ ಪರಿಣಾಮವಾಗಿ, ಈ ನಗರದ ನಡುವಿನಲ್ಲಿ ಈಗಲೂ ಕೃಷಿ ಚಟುವಟಿಕೆಗಳು ಕಂಡುಬರುತ್ತವೆ.

ಮುಖ್ಯ ರಸ್ತೆಗಳ ಬದಿಯಲ್ಲಿ ಕಂಡುಬರುವ ಮೈಲುಗಟ್ಟಲೆ ಉದ್ದದ ತೋಟಗ ಳಲ್ಲಿ ಬೆಳೆದ ಬೆಳೆಗಳು ಕಣ್ಮನಸೆಳೆಯುತ್ತವೆ. ವಿಶೇಷವೆಂದರೆ, ನಗರದ ನಡುವೆಯೂ ಇಲ್ಲಿ ಫಾರ್ಮ್‌ಗಳು ಕಾಣಸಿಗುತ್ತವೆ, ಕೃಷಿ ಚಟುವಟಿಕೆ ನಡೆಯುತ್ತವೆ.

ಕುಟುಂಬ ಕೃಷಿಯ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ಮೂಲ ‘ಮನಸ್ಸೇರೋ ಫಾರ್ಮ್’ ಇಂತಹ ಕೆಲವು ತೋಟಗಳನ್ನು ಹೊಂದಿದೆ. ಈ ಕುಟುಂಬದ ಮೂರನೆಯ ತಲೆಮಾರಿನವರಾದ ಕೃಷಿಕ ಡಾನ್ ಮನಸ್ಸೇರೋ, ಆರಂಜ್ ಕೌಂಟಿಯ ನಾಲ್ಕು ಸ್ಥಳಗಳಲ್ಲಿ ಕೃಷಿಕೇಂದ್ರಗಳನ್ನು ಹೊಂದಿದ್ದಾರೆ. ಇವರ ತಾತ ಯೋಬಾರ್ ಲಿಂಡ 1922ರಲ್ಲಿ ಕ್ಯಾಲಿ ಫೋರ್ನಿಯದಲ್ಲಿ ವ್ಯವಸಾಯ ಆರಂಭಿಸಿದರು. ತಾತ, ತಂದೆ, ಹಾಗು ತಂದೆಯ ಸೋದರರ ಮಾರ್ಗ ದರ್ಶನ ಹಾಗು ದಶಕಗಳ ಸ್ವಂತ ಶ್ರಮದಿಂದ ಡಾನ್ ಆರೆಂಜ್ ಕೌಂಟಿಯ ದೃಢೀಕೃತ ಸಾವಯವ ಹಾಗು ಸಾಂಪ್ರದಾಯಿಕ ಕೃಷಿಕರಲ್ಲಿ ಒಬ್ಬರಾದರು.

ಸರಕಾರದ ಕಾನೂನುಗಳು, ಶ್ರಮಿಕರ ಲಭ್ಯತೆ, ವ್ಯಾಪಾರ ವಹಿವಾಟು, ಬೃಹತ್ ವಾಣಿಜ್ಯ ಬೆಳೆಗಾರರು, ಮತ್ತು ದೊಡ್ಡ ಮಳಿಗೆ ಗಳು ನಗರದಲ್ಲಿ ಕೃಷಿಯ ಮೇಲೆ ಉಂಟುಮಾಡಿದ ಪ್ರಭಾವ ಮತ್ತು ಪರಿಣಾಮಗಳನ್ನು ಕಣ್ಣಾರೆ ಕಂಡು ಸ್ವತಃ ಅನುಭವಿಸಿ ದವರು ಡಾನ್ ಮತ್ತು ಇವರ ಪತ್ನಿ ಅನ್ನೆ. ಹಾಗಾಗಿ ಡಾನ್ ದಂಪತಿ ಈ ಬದಲಾದ ಜೀವನಕ್ರಮಕ್ಕೆ ಹೊಂದಿ ಕೊಳ್ಳಬೇಕಾದ ಅನಿವಾರ್ಯತೆಯನ್ನು ಅರಿತು ಕೊಂಡು ಅದಕ್ಕೆ ತಕ್ಕಂತೆ ಕಾರ್ಯಪ್ರವೃತ್ತರಾದರು.

ತೋಟದಲ್ಲೇ ಅಂಗಡಿ
ಈ ದಂಪತಿ ಆರಂಜ್ ಕೌಂಟಿಯ ‘ಅರ್ವೈನ್’ ನಗರದಲ್ಲಿ 1976ರಲ್ಲಿ ರಸ್ತೆ ಬದಿಯ ತೋಟದ ನಡುವೆ ಹೊಸ ಕಿರು ಮಳಿಗೆ ಆರಂಭಿಸಿದರು. ತಾಜಾ ಕೃಷಿ ಉತ್ಪನ್ನಗಳ ದಾಸ್ತಾನಿನ ಜಾಗದೊಡನೆ ವಿಶೇಷ ಕಾರ್ಯ ಕ್ರಮಗಳ ಆಯೋಜನೆಗೆ ಚಿಕ್ಕ ಸಭಾಂಗಣ ಮತ್ತು ಉಡುಗೊರೆಗಳ ಪುಟ್ಟ ಅಂಗಡಿಯೂ ಇಲ್ಲಿವೆ. ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನೂ ಇಲ್ಲಿ ವಿಕ್ರಯಿಸಲಾಗುತ್ತದೆ. ಆಹಾರ ತಯಾರಿಕೆಯಲ್ಲಿ ಬಳಸುವ ಪುದೀನ, ಕೊತ್ತಂಬರಿ, ಮುಂತಾದ ಸೊಪ್ಪುಗಳನ್ನು ಮಳಿಗೆಯ ಆವರಣದಲ್ಲಿಯೇ ಬೆಳೆಯುತ್ತಾರೆ.

ಇವುಗಳನ್ನು ಬೇಕೆಂದಾಗ ಕೊಯ್ದು ಮಾರುತ್ತಾರೆ. ಸ್ಟ್ರಾಬೆರಿ ಬೆಳೆಯುವ ಕಾಲದಲ್ಲಿ ಗ್ರಾಹಕರು ತೋಟದಿಂದಲೇ ಹಣ್ಣು ಕೊಯ್ದುಕೊಳ್ಳಲು ಅವಕಾಶವಿದೆ. ಕೃಷಿ ಯಂತ್ರೋ ಪಕರಣಗಳು ತಮ್ಮ ದೈನಂದಿನ ಕೆಲಸ ಮುಗಿಸಿದ ಮೇಲೆ ಈ ಮಳಿಗೆಯ ಆಸುಪಾಸಿ ನಲ್ಲಿಯೇ ವಿರಮಿಸುತ್ತವೆ. ಈ ಮಳಿಗೆ ಕೇವಲ ಕೃಷಿ ಉತ್ಪನ್ನಗಳ ವಿಕ್ರಯಕ್ಕೆ ಸೀಮಿತ ವಾಗಿರದೆ ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಕೇಂದ್ರವೂ ಆಗಿರುವುದು ವಿಶೇಷ. ಚಿಕ್ಕದಾದರೂ ಅಚ್ಚುಕಟ್ಟಾದ ಹಸಿರು ಹಾಸಿನ ಮೈದಾನ ಇಲ್ಲಿದೆ. ಈ ಮೈದಾನದಲ್ಲಿ ಮಕ್ಕಳು ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಮಾದರಿ ಆಟಿಕೆಗಳಲ್ಲಿ ಕುಳಿತು ಆಟವಾಡಬಹುದು.

ಇವುಗಳಿಗಾಗಿಯೇ ಮೀಸಲಾದ ಟ್ರಕ್ ಟರ್ಮಿನಲ ಸಹ ಇಲ್ಲಿದೆ! ನೈಜವೆನಿಸುವಂತೆ ತಯಾರಿಸಿರುವ ಆಟಿಗೆಯ ಹಣ್ಣುಗಳು, ತರಕಾರಿಗಳ ಬುಟ್ಟಿಗಳನ್ನು ಇಲ್ಲಿನ ಪುಟ್ಟ ಮಳಿಗೆಯಲ್ಲಿ ಜೋಡಿಸಿಟ್ಟು ಮಾರಾಟ ಮಾಡುವ ಆಟವನ್ನೂ ಮಕ್ಕಳು ಅಡಿ
ಆನಂದಿಸಬಹುದು.

ಕುಂಬಳಕಾಯಿಗೆ ಡಿಮಾಂಡ್!
ಹ್ಯಾಲೋವೀನ್ ಹಬ್ಬದ ಹತ್ತಿರವಾಗುತ್ತಿರುವುದರಿಂದ, ಅಮೆರಿಕದ ಈ ಕೃಷಿ ಮಳಿಗೆಗೆ ನಾವು ಭೇಟಿ ಕೊಟ್ಟಾಗ ಎಡೆ ವಿವಿಧ ಗಾತ್ರಗಳ ಕುಂಬಳಕಾಯಿಗಳೇ ಕಂಡುಬಂದವು. ನಮ್ಮಲ್ಲಿ ಆಯುಧ ಪೂಜೆಯಲ್ಲಿ ಬೂದುಗುಂಬಳ ಕಾಯಿಗೆ ಇರುವಂತೆ ಹ್ಯಾಲೋವೀನ್ ಹಬ್ಬದಲ್ಲಿ ಕುಂಬಳಕಾಯಿಗೆ ಪ್ರಾಧಾನ್ಯತೆ ಇದೆ. ಕುಂಬಳಕಾಯಿ ಕೊಳ್ಳಲೆಂದೇ ಅನೇಕರು ಅಂಗಡಿಗೆ ಬಂದಿದ್ದರು.

ಮಕ್ಕಳಿಗೆ ಕುತೂಹಲದ ತಾಣ
ತರಕಾರಿ, ಸೊಪ್ಪು, ತರಕಾರಿ ಪ್ರದರ್ಶನದ ಆಕರ್ಷಣೆಯಿಂದಲೇ ಹಲವಾರು ಗ್ರಾಹಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆತರುತ್ತಾರೆ. ಮರ ಗಿಡ ಬಳ್ಳಿ ತರಕಾರಿ ಸೊಪ್ಪು ಹೂವುಗಳನ್ನು ನೋಡುತ್ತಾ, ಅವಕಾಶವಿದ್ದಾಗ ಕೊಯ್ಯುತ್ತಾ, ಆಟವಾಡುವ ಮೂಲಕ ಮಕ್ಕಳು ಕೃಷಿಯ ಪ್ರಾಥಮಿಕ ಪಾಠವನ್ನೂ ಪಡೆಯುತ್ತಾರೆ. ಇಲ್ಲಿ ಮರವೊಂದರ ಮೇಲೆ ಹಕ್ಕಿಗೆಂದು ಪುಟ್ಟ ಮನೆಯನ್ನು ಮತ್ತು
ಅದರ ಪಕ್ಕದಲ್ಲಿ ‘ನಿಶ್ಯಬ್ದವಾಗಿರಿ, ಪಕ್ಷಿಗಳು ಗೂಡು ಕಟ್ಟುತ್ತಿವೆ’ ಎಂಬ ಎಚ್ಚರಿಕೆಯ ಫಲಕವನ್ನು ತೂಗುಹಾಕಿ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕಾರ್ಯವನ್ನೂ ಮಾಡಿದ್ದಾರೆ.

ಶೈಕ್ಷಣಿಕ ಕೃಷಿ ಪ್ರವಾಸ ಮತ್ತು ಅಡುಗೆ ತರಬೇತಿಯ ತರಗತಿಗಳನ್ನು ಸಹ ಮನಸ್ಸೇರೋ ಫಾರ್ಮ್ ಆಯೋಜಿಸುತ್ತದೆ. ಬೇರೆಡೆಗೆ ಹೋಲಿಸಿದರೆ ಉತ್ಪನ್ನಗಳ ಬೆಲೆ ತುಸು ಹೆಚ್ಚು. ಆದರೂ ನಿಷ್ಠ ಗ್ರಾಹಕರು ತಮ್ಮ ಅಗತ್ಯಗಳ ಪೂರೈಕೆಗೆ ಇಲ್ಲಿಗೇ ಬರುತ್ತಾರೆ. ಈ ಅಂಗಡಿಯಲ್ಲಿ ನಗದು ಸ್ವೀಕರಿಸುವುದಿಲ್ಲ. ಆದ್ದರಿಂದ ಇಲ್ಲಿ ವಸ್ತುಗಳನ್ನು ಖರೀದಿಸಲು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್
ಇರಬೇಕಾಗುತ್ತದೆ. ಬೆಳಗಿನ ಒಂಬತ್ತರಿಂದ ಸಂಜೆ ಐದು ಗಂಟೆಯ ವರೆಗೆ ಮಾತ್ರ ಈ ಮಳಿಗೆ ವಹಿವಾಟು ನಡೆಸುತ್ತದೆ. ಭಾನುವಾರ ಗಳಂದು ಈ ಅವಧಿ ಇನ್ನೂ ಒಂದು ಗಂಟೆ ಕಡಿಮೆ.