Sunday, 15th December 2024

ಗುರುವಿನ ಮುಂದೆ ಲಘುವಾಗು !

ಕಲಬುರಗಿ ಜಿಲ್ಲೆಯಲ್ಲಿರುವ ಎರಡು ಗುರು ಸ್ಥಾನಗಳ ಭೇಟಿ ಎಂದರೆ ಅದೊಂದು ಅಪರೂಪದ ಅನುಭವ.

ಮಾಲಿನಿ ಹೆಗಡೆ

ಮುಂದೆ ಗುರಿ, ಹಿಂದೆ ಗುರು ಇದ್ದರೆ ಸಾಕು, ಏನನ್ನಾದರೂ ಸಾಧಿಸಬಹುದು ಅನ್ನೋದು ಎಲ್ಲಾ ಕಾಲಕ್ಕೂ ಸಲ್ಲುವ ಮಾತು. ಅಂತಹ ಎರಡು ಪ್ರಬಲ ಗುರು ಸ್ಥಾನ ಇರೋದು, ಕಲಬುರಗಿ ಜಿಯಲ್ಲಿ. ಒಂದು ಸದ್ಗುರು ಶ್ರೀಧರ ಸ್ವಾಮಿಗಳ ಜನ್ಮಸ್ಥಳ ಲಾಡ್ ಚಿಂಚೋಳ್ಳಿ. ಇನ್ನೊಂದು, ಗುರು ದತ್ತ ಕ್ಷೇತ್ರ ಗಾಣಗಾಪುರ. ಅಲ್ಲಿಗೆ ನಾವು ಪ್ರವಾಸಕ್ಕೆ ಹೊರಟಿದ್ದು ಯೋಗಾ ಯೋಗವೇ ಸರಿ.

‘ಸ್ಟಾರ್ ಏರ್‌ವೇಸ್’ ಅನ್ನೋ ಪುಟ್ಟ ವಿಮಾನ ನಮ್ಮನ್ನು ಸರಿಯಾಗಿ ಒಂದು ತಾಸಿನ ಪಯಣದ ನಂತರ, ಕಲಬುರಗಿದ ಪುಟಾಣಿ ವಿಮಾನ ನಿಲ್ದಾಣದಲ್ಲಿ ಇಳಿಸಿತು. ಬೆಂಗಳೂರಿನ 21 ಡಿಗ್ರಿ ತಂಪಿನ ವಾತಾವರಣದಿಂದ ಬಂದಿದ್ದ ನಮಗೆ ಮೊದಲು ಸ್ವಾಗತ ಕೋರಿದ್ದು, ಕಲಬುರಗಿಯ 31 ಡಿಗ್ರಿ ಬಿಸಿಲು. ಸಧ್ಯ ಮೇ ತಿಂಗಳ ಬಿರುಬೇಸಗೆಯಲ್ಲಿ ಬಂದಿಲ್ಲವ ಅನ್ನೋ ಸಮಾಧಾನದಲ್ಲಿ ಹೊರಗೆ ಬಂದಾಗ ನಮಗೋಸ್ಕರ ಅಣ್ಣನ ಮಗನ ಗೆಳೆಯ ತನ್ನ ಕಾರ್‌ನೊಂದಿಗೆ ಕಾಯುತ್ತಾ ಇದ್ದ.

ನಾವು ಹೋಗಿ ಚೆಕ್ ಇನ್ ಆಗಿದ್ದು ಹೆರಿಟೇಜ್ ಇನ್‌ಗೆ. ಇದು ಗುಲ್ಬರ್ಗ ನಗರದ ಮೈನ್ ಲೋಕೇಶನ್ ಅಲ್ಲಿ ಇರುವ ಕಾರಣ ಎಲ್ಲದಕ್ಕೂ ಸೂಕ್ತ. ಶುಚಿಯಾದ ಹೋಟೆಲ್, ಉತ್ತಮ ಊಟ. ನಂತರ ತಿರುಗಲು ಹೊರಟೆವು. ಮೊದಲು ನೋಡಿದ್ದು ಬುದ್ಧ ವಿಹಾರ. ಕೊಡಗಿನ ಬೈಲಕುಪ್ಪೆಯಷ್ಟು ದೊಡ್ಡದಲ್ಲದಿದ್ದರೂ, ಚೆಂದವಾಗಿ ಕಟ್ಟಿಸಿದ ಈ ವಿಹಾರ ನೋಡಲೇಬೇಕಾದ ಸ್ಥಳ. ದೊಡ್ಡದಾದ ಧ್ಯಾನ ಮಂದಿರ, ಎಲ್ಲಿ ನೋಡಿದರೂ ಶಾಂತತೆ, ಮನಸ್ಸಿಗೆ ತುಂಬಾ ಮುದ ಕೊಡುತ್ತೆ. ಅಲ್ಲಿಗೆ ಬಂದ ಬೌದ್ಧ ಬಿಕ್ಷು ಒಬ್ಬರು, ನಮ್ಮನ್ನು ಕೂಡ್ರಿಸಿ, ಮಂತ್ರದ ಮೂಲಕ ಆಶೀರ್ವಾದ ಮಾಡಿದರು.

ಔದುಂಬರ ವೃಕ್ಷ: ನಂತರದ ಪ್ರಯಾಣ ಲಾಡ್ ಚಿಂಚೋಳ್ಳಿ. ಯೋಗಿಯಾಗಿ, ಗುರುವಾಗಿ, ಸದಾ ಕಾಲ ನಮ್ಮಂಥವರ ಮನಸ್ಸಿನಲ್ಲಿ ನೆಲೆ ನಿಂತಿರುವ ಸದ್ಗುರು ಶ್ರೀಧರ ಸ್ವಾಮಿಗಳ ಜನ್ಮಭೂಮಿ ಈ ಸ್ಥಳ. 7.12.1908ರಂದು ಶ್ರೀಧರಸ್ವಾಮಿಗಳು ಇಲ್ಲೇ ಜನಿಸಿದರು. ಮಠದ ಅಂಗಳದ ಇರುವ ಔದುಂಬರ ವೃಕ್ಷ ಗುರುವಿನ ನೆಲೆಯನ್ನು ಸಾರುತ್ತೆ. ಹಾಗೂ ಮಠದ ಹಿಂದಿನ ಬಾಗಿಲಿನಲ್ಲಿ ಅಂದಿನ ಕಾಲದಲ್ಲಿ ಗುರುಗಳು ಉಪಯೋಗಿಸಿದ ವಸ್ತುಗಳು, ವಾಸವಿದ್ದ ಪುಟ್ಟ ಜಾಗ, ಎಲ್ಲಾ ಕಾಣುತ್ತೆ. ಈಗ ಅದೊಂದು ನೆನಪು ಮಾತ್ರ.

ಅಲ್ಲಿ ಗುರು ಶ್ರೀಧರರಿಗೆ ನಮಸ್ಕರಿಸಿ, ಹೊರಟಿದ್ದು ಶರಣು ಬಸವೇಶ್ವರ ದೇವಸ್ಥಾನಕ್ಕೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣ ಅಭಿವೃದ್ಧಿಗೆ ಶರಣ ಬಸವೇಶ್ವರ ಸಂಸ್ಥಾ ನದ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರ ಕೊಡುಗೆ ಅಮೋಘ. ಇಡೀ ಕಲಬುರಗಿ ದ ಹೆಚ್ಚಿನ ವಿದ್ಯಾ ಸಂಸ್ಥೆಗಳು ಇವರ ಹೆಸರನ್ನೇ ಹೊಂದಿವೆ. ಶರಣು ಹೇಳಿ ನಡೆದಿದ್ದು ಕಲಬುರಗಿ ಪೇಟೆ ಸುತ್ತಲು. ಈ ಕಲರ್ ಅಲ್ಲಿ ಬೇರೆ ಡಿಸೈನ್, ಈ ಡಿಸೈನ್ ಅಲ್ಲಿ ಬೇರೆ ಕಲರ್ ಅನ್ನುತ್ತಾ ಎರಡು ತಾಸು ಶಾಪಿಂಗ್ ಮಾಡಿ, ಹೋಟೆಲ್‌ಗೆ ಮರಳಿದ್ದು ರಾತ್ರೆ ೮ ಘಂಟೆಗೆ.

ಎರಡನೇ ದಿನ: ಬೆಳಿಗ್ಗೆ 6.45 ಕ್ಕೆ ಹೊರಟು, ಕಾಮತ್ ಹೊಟೇಲ್‌ನಲ್ಲಿ ಮಸಾಲೆ ದೋಸೆ ತಿಂದು, ಗಾಣಗಾಪುರಕ್ಕೆ ಹೊರಟೆವು. ಇದು ತ್ರಿಮೂರ್ತಿ ರೂಪ ದತ್ತಾತ್ರೇಯ ನೆಲೆಸಿದ ಪುಣ್ಯಭೂಮಿ. ‘ಹರ ಮುನಿದರೂ ಗುರು ಕಾಯುವ’ ಅನ್ನುವ ಉಕ್ತಿಗೆ ಪ್ರಸಿದ್ಧ ಸ್ಥಳ ಈ ಗಾಣಗಾಪುರ. ಭೀಮಾ ಅಮರಜಾ ಸಂಗಮದಲ್ಲಿ ನೀರು ರಾಡಿಯ ಆಗಿತ್ತು. ಇಲ್ಲೂ ಗಂಗಾ ನದಿಯ ರೀತಿಯೇ ಶುದ್ಧೀಕರಣದ
ಅಗತ್ಯವಿದೆ ಎನಿಸಿತು. ಅಲ್ಲಿಂದ ಹೊರಟು, ಗಾಣಗಾಪುರ ದತ್ತ ಸನ್ನಿಧಿಗೆ ಬಂದಾಗ, ಅದೇನೋ ನೆಮ್ಮದಿ, ಖುಷಿ ಅನಿಸಿತು. ಅಭಿಷೇಕವನ್ನು ನಮ್ಮ ಕೈಯಿಂದಲೇ ಮಾಡಿಸುತ್ತಾರೆ. ಅದೊಂದು ಸಂಭ್ರಮದ ಕ್ಷಣ.

ಆಮೆಯ ಮೂರ್ತಿ: ದತ್ತ ಸನ್ನಿಧಿಗೆ ಬಂದವರು, ಹತ್ತಿರದಲ್ಲಿರುವ ಕಶ್ವರ ಶನಿ ದೇವಸ್ಥಾನಕ್ಕೆ ಹೋಗಿ ಬರುವುದು ಸಂಪ್ರದಾಯ. ಅಲ್ಲಿಗೆ ಹೋಗಿ, ದರ್ಶನ ತೆಗೆದುಕೊಂಡು, ಎಳ್ಳೆಣ್ಣೆ ಅಭಿಷೇಕ ಮಾಡಿ ಬರುವಾಗ ಕಂಡಿದ್ದು, ಬಾಗಿಲ ಇರುವ ಒಂದು ಆಮೆಯ ಮೂರ್ತಿ. ಈ ಆಮೆಯ ಮೂರ್ತಿ ಯಾಕೆ ಇಲ್ಲಿದೆ ಎಂದು ಗೊತ್ತಾಗಲಿಲ್ಲ. ಆ ಆಮೆಗೆ ಹೂವು ಹಾಕಿ ಪೂಜೆ ಮಾಡಿದ್ದರು.  ಸಾಮಾನ್ಯವಾಗಿ ಆಮೆ ಇರೋದು ಲಕ್ಷಿ ಸನ್ನಿಧಾನದಲ್ಲಿ. ಇಲ್ಲಿ ಮಾತ್ರ ಶಿವನ ಮುಂದೆ ಇದೆ. ಸಂಜೆಯ ಸಮಯದಲ್ಲಿ ಖಾಜ್ ಬಂದೇನವಾಜ್ ದರ್ಗಾ ಮತ್ತು ಕಲಬುರಗಿ ಕೋಟೆ ನೋಡಲು ಹೊರಟೆವು. ಕೋಟೆಯ ಒಳಗೆ ಒಂದು ಮಸೀದಿ ಇದೆ. ಕೋಟೆಯ ಇನ್ನೊಂದು ಭಾಗಕ್ಕೆ ಪ್ರವೇಶ ಇ. ತುಂಬಾ ದೊಡ್ಡದಾದ ಈ ಕೋಟೆಯನ್ನು ಚೆನ್ನಾಗಿ ಅಭಿವೃದ್ಧಿ ಮಾಡಬಹುದಿತ್ತು ಅನಿಸಿತು.