Sunday, 24th November 2024

ಕಾಶಿ ಯಾತ್ರೆಗೆ ಸಹಾಯಧನ !

ಡಿ.ಎಸ್.ರಾಮಸ್ವಾಮಿ

ಶೀರ್ಷಿಕೆ ನೋಡಿ ಆಶ್ಚರ್ಯ ಪಡುವ ಅಗತ್ಯತೆ ಇಲ್ಲವೆ ಇಲ್ಲ. ಕರ್ನಾಟಕ ರಾಜ್ಯ ಸರ್ಕಾರ ಇದೀಗ ಕಾಶಿ ಸಂದರ್ಶಿಸಿ ಬಂದವರಿಗೆ ರು.೫೦೦೦/- ಪ್ರೋತ್ಸಾಹ ಧನ ಕೊಡುತ್ತಿದೆ. ಸದ್ಯದಲ್ಲೇ ಮುಜರಾಯಿ ಇಲಾಖೆಯ ಸುಪರ್ದಿನಲ್ಲಿ ಬೆಂಗಳೂರಿಂದ ಕಾಶಿಗೆ ಹೊಸ
ಪ್ರವಾಸೀ ರೈಲೊಂದು ಸಂಚರಿಸಲಿದೆ.

ಯಾತ್ರಾರ್ಥಿಗಳನ್ನು ಎಸಿ ಬೋಗಿಗಳಲ್ಲಿ ಕಾಶಿಗೆ ಕರೆದೊಯ್ಯುವ ಆ ರೈಲಿನಲ್ಲಿ ಪ್ರಯಾಣ ದುದ್ದಕ್ಕೂ ಆಹಾರವೂ ದೊರೆಯಲಿದೆ. ಅಯೋಧ್ಯೆ ಮತ್ತು ಪ್ರಯಾಗ ರಾಜ್ ಭೇಟಿಯ ವ್ಯವಸ್ಥೆಯೂ ಇದೆ. ತಲಾ ರು.೧೫೦೦೦/- ದಲ್ಲಿ ಈ ಪ್ರವಾಸೀ ರೈಲು ಎಂಟು ದಿನಗಳ ಒಟ್ಟೂ ಪ್ರಯಾಣ ಮಾಡಲಿದೆ. ಈ ರೈಲಿನಲ್ಲಿ ಪ್ರಯಾಣ ಮಾಡಿದರೆ ಪ್ರೋತ್ಸಾಹ ಧನದ ರು.೫೦೦೦/- ದೊರೆಂiಲಿದೆ. ಇದು ಬಿಟ್ಟರೆ ಬೆಂಗಳೂರಿಂದ ಕಾಶಿಗೆ ವಾರಕ್ಕೆ ರೈಲು ಗಳಲ್ಲದೇ ನಿತ್ಯವೂ ಒಂದು ರೈಲಿದೆ.

ಸಾಮಾನ್ಯ ದರ್ಜೆಯ ಸ್ಲೀಪರ್ ?೯೦೦ ಕ್ಕೆ ಲಭ್ಯವಿದೆ. ಇನ್ನು ಎರಡು ಮೂರು ದಿನ ಕಾಶಿಯಲ್ಲಿ ಸಾಮಾನ್ಯ ದರ್ಜೆಯ ವಸತಿಯಲ್ಲಿ ತಂಗಿದರೆ ದಿನಕ್ಕೆ ?೩೦೦ರಿಂದ ೫೦೦/- ರಲ್ಲಿ ಲಭ್ಯ. ಕಾಶಿಯಲ್ಲಿ ಆಹಾರ ತೀರ ಕಡಿಮೆ ಬೆಲೆಗೆ ಸಿಗುತ್ತವೆ., ರುಚಿಯಾಗಿಯೂ ಇರುತ್ತವೆ. ಹಾಗಾಗಿ ಸರ್ಕಾರದ ಪ್ರೋತ್ಸಾಹ ಧನದ ಕಾಶಿಯ ಪ್ರವಾಸ ಸಾಧ್ಯ ಇದೆ.

ಜಂಗಮವಾಡಿ ಮಠ
ಕಾಶಿ ವಿಶ್ವನಾಥ ದೇಗುಲದ ಸಮೀಪದ ಇರುವ ಜಂಗಮವಾಡಿ ಮಠದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ರೂಮುಗಳೂ, ಡಾರ್ಮಿಟರಿ ವಸತಿಯೂ ಲಭ್ಯವಿದೆ. ಮಠದಲ್ಲಿ ಉಚಿತ ಪ್ರಸಾದವೂ ಲಭ್ಯ.ಇಲ್ಲಿಂದ ಕಾಲ್ನಡಿಗೆ ಅಂತರದಲ್ಲಿ ಕಾಶಿ ವಿಶ್ವನಾಥ ದೇಗುಲವಿದೆ.
ಹತ್ತಿರದಲ್ಲೇ ಕರ್ನಾಟಕದ ಇತರ ಮಠಗಳ ಶಾಖೆಗಳೂ ಇವೆ.

ಕಾಶಿಯು ಸಣ್ಣ ಪುಟ್ಟ ಗಲ್ಲಿಗಳಿಂದಲೇ ತುಂಬಿರುವ ಟುಕ್ ಟುಕ್ ಆಟೋ ಎಂಬ ಐದಾರು ಜನ ಕುಳಿತುಕೊಳ್ಳುವ ಶೇರ್ ಆಟೋ ಇಲ್ಲಿ ಸಾಮಾನ್ಯ. ತೆಲೆಗೆ ? ೨೦೦ ರಿಂದ ೩೫೦ಕ್ಕೆ ಇಡೀ ಕಾಶಿ ನಗರದ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಒಂದೇ ದಿನದಲ್ಲಿ ಸುತ್ತಿಸಿ ಕರೆ ತಂದು ಬಿಡುತ್ತಾರೆ. ದಶಾಶ್ವಮೇಧ ಘಾಟಿನ ತಟದಲ್ಲಿ ನಿತ್ಯವೂ ಸಂಜೆ ೭ ಗಂಟೆಗೆ ಗಂಗಾ ಆರತಿ ನಡೆಯುತ್ತದೆ. ಈ ಕಾರ್ಯ ಕ್ರಮ ನೋಡದೇ ಕಾಶಿಯಿಂದ ಮರಳಬಾರದು.

ಕಾರಿಡಾರ್‌ನ ನೇರ ದಾರಿ
ಸಣ್ಣ ಪುಟ್ಟ ಗಲ್ಲಿಗಳಿಂದಲೂ, ಹೆಜ್ಜೆ ಹೆಜ್ಜೆಗೆ ಇದ್ದ ಸಣ್ಣ ಪುಟ್ಟ ದೇಗುಲಗಳಿಂದಲೂ ವಿಶ್ವನಾಥ ದೇಗುಲಕ್ಕೂ ಗಂಗಾ ತಟಕ್ಕೂ ಒಂದು ಕಾಲದಲ್ಲಿ ಇದ್ದಿರಬಹುದಾದ ನೇರ ದಾರಿ ಮುಚ್ಚಿಹೋಗಿತ್ತು. ಸುತ್ತು ಬಳಸಿ ತಲುಪಬೇಕಿದ್ದ ಈ ಹಾದಿ ಈಗ ನೇರ್ಪಾಗಿದೆ.

ಕಾಶಿ ವಿಶ್ವನಾಥ ಕಾರಿಡಾರ್ ಎಂದೇ ಕರೆಯಲಾದ ಈ ಯೋಜನೆಯಲ್ಲಿ ಗಂಗಾ ನದಿಯ ತಟದಿಂದ ನೇರವಾಗಿ ಕಾಶಿ ವಿಶ್ವನಾಥ
ದೇಗುಲಕ್ಕೆ ಸುಮಾರು ೪೦೦ ಮೀಟರ್ ಉದ್ದದ ವಿಶಾಲ ರಸ್ತೆಯನ್ನು ನಿರ್ಮಿಸಲಾಗಿದೆ. ಗಂಗೆಯಲ್ಲಿ ಮಿಂದೆದ್ದು ಸುಮಾರು ೫೦ ಪಾವಟಿಗೆಗಳನ್ನೇರಿದರೆ ಈ ರಸ್ತೆ ಸಿಕ್ಕುತ್ತದೆ. ತಟದಿಂದ ಕಾಶಿ ವಿಶ್ವನಾಥ ದೇಗುಲದ ಕಳಸ ಕಾಣುತ್ತದೆ.

ಇಷ್ಟು ದೂರದಿಂದ ಬರೀ ಕಾಶಿಗಷ್ಟೇ ಹೋಗಿಬರುವುದಕ್ಕಿಂತ ಕಾಶಿ ಸುತ್ತ ಮುತ್ತ ಇರುವ ಪ್ರಯಾಗ, ಅಯೋಧ್ಯೆ ಮತ್ತು ಗಯಾ
ಬುದ್ಧಗಯಗಳಿಗೂ ಹೋಗಿ ಬರುವುದು ಸೂಕ್ತ. ಗೋಲ್ಡನ್ ಟ್ರಯಾಂಗಲ್ ಎಂದು ಕರೆಯಲಾಗುವ ಈ ಪ್ರವಾಸವನ್ನು ಕಾಶಿಯಲ್ಲಿ ಹೆಜ್ಜೆ ಹೆಜ್ಜೆಗೂ ಇರುವ ಹಲವು ಪ್ರವಾಸೀ ಸಂಸ್ಥೆಗಳು ನಡೆಸಿಕೊಡುತ್ತವೆ. ನಿಮ್ಮ ಜೇಬಿಗೆ ಎಟಕುವ ದರದ ಚೌಕಾಶಿ ಮಾಡಿ ಈ ಪ್ರವಾಸ ಮಾಡಬಹುದು. ಅದೆಲ್ಲ ಉಸಾಬರಿ ಬೇಡವೆಂದರೆ ಮುಜರಾಯಿ ಇಲಾಖೆ ಸದ್ಯದ ಏರ್ಪಡಿಸುವ ಐಆರ್‌ಟಿಸಿ ಸಹಯೋಗದ ಭಾರತ್ ಗೌರವ್ ರೈಲಿಗೆ ಕಾಯುವುದು ಒಳ್ಳೆಯದು.