Saturday, 14th December 2024

ಬೆಟ್ಟದ ಮೇಲೆ ಕೊಳಲಿನ ಕೆರೆ

ಶ್ರೀರಂಜನಿ ಅಡಿಗ

ಸದಾ ಬೀಸುವ ತಂಗಾಳಿ, ಬೆಟ್ಟದ ಮೇಲೆಲ್ಲಾ ಹಸಿರಿನ ಸಿರಿ, ದೂರದಲ್ಲಿ ಪರ್ವತಗಳು, ಹುಲ್ಲುಗಾವಲಿನ ಇಳಿಜಾರು, ಅಲ್ಲಿ ಮೇಯುವ ಆನೆಗಳ ಹಿಂಡು! ಇಂತಹದೊಂದು ನೋಟವನ್ನು ಕಣ್ತುಂಬಿಕೊಳ್ಳಲು ಬನ್ನಿ ಈ ಬೆಟ್ಟ ಶ್ರೇಣಿಗೆ!

ಎತ್ತ ನೋಡಿದರತ್ತ ಗಿರಿಶೃಂಗಗಳು, ಆ ಗಿರಿಶೃಂಗಗಳನ್ನು ಚುಂಬಿಸುವ ಪೈಪೋಟಿಯಲ್ಲಿ ನಿರತ ಮೇಘಗಳು, ಹಲ್ಲು ಕಟಕಟ ವೆನಿಸುವ ಕುಳಿರ್ಗಾಳಿ, ದೂರದಲ್ಲಿ ಮೇಯುವ ಆನೆಗಳ ಹಿಂಡು, ಸಮಸ್ತ ಸೌಂದರ್ಯವೂ ಕಾಲಡಿ ಕೆಡವಿಕೊಂಡಿರುವ ಪ್ರಕೃತಿ, ಹುಡುಕಿದರೂ ಸಿಗದ ಒಂದೇ ಒಂದು ಕಸ, ಪ್ಲಾಸ್ಟಿಕ್ ಕೊಟ್ಟೆ, ಬಾಟಲಿಗಳು, ನಾವು ಪ್ರಕೃತಿಯೊಳಗೋ? ನಮ್ಮೊಳು ಪ್ರಕೃತಿಯೋ ಎನಿಸುವ ಅಭೂತ ವಿಲೀನತೆ -ಇದೆ ನೋಡಲು ದೂರ ದೇಶ ಕ್ಕೋ,ರಾಜ್ಯಕ್ಕೋ ಹೋಗಬೇಕಿಲ್ಲ. ಈ ನಿಸರ್ಗರಮಣೀಯ ಸ್ಥಳ ವಿರುವುದು ನಮ್ಮ ರಾಜ್ಯದ ಚಾಮರಾಜನಗರ ಜಿಲ್ಲೆ ಹಿಮವದ್ ಗೋಪಾಲ ಸ್ವಾಮಿ ಬೆಟ್ಟದ ಮಡಿಲಲ್ಲಿ.

ಊಟಿ ಅಥವಾ ಯಾವುದೇ ಈಶಾನ್ಯ ರಾಜ್ಯಗಳ ಸೌಂದರ್ಯಕ್ಕೆ ಸರಿಸಮವಾಗಿ ನಿಲ್ಲುವ ಈ ಬೆಟ್ಟ ಮೈಸೂರಿನಿಂದ 80 ಕಿ.ಮೀ. ದೂರ – ಊಟಿ ಹೆದ್ದಾರಿಯಲ್ಲಿದೆ. ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಹೀಗಾಗಿ ಬೆಟ್ಟದ ಪ್ರವೇಶ ದ್ವಾರದಲ್ಲಿ ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸಿ, ಸರಕಾರಿ ಬಸ್ಸಿನಲ್ಲಿ ಪ್ರಯಾಣವನ್ನು ಮುಂದುವರಿಸಬೇಕು. ಸೂಕ್ಷ್ಮ ಜೀವಿ, ಕಾಡುಪ್ರಾಣಿಗಳ ಆವಾಸಸ್ಥಾನವಾದ್ದರಿಂದ ಸರಕಾರ ಈ ವ್ಯವಸ್ಥೆ ಮಾಡಿದೆ. ಸಂಜೆ ನಾಲ್ಕು ಗಂಟೆಯ ಮೇಲೆ ಬೆಟ್ಟಕ್ಕೆ ಪ್ರವೇಶವಿಲ್ಲ.

ಅಂಕುಡೊಂಕಿನ ರಸ್ತೆಯಲ್ಲಿ ರಮಣೀಯ ದೃಶ್ಯವನ್ನು ಆಸ್ವಾದಿಸುತ್ತಾ ಸಾಗುವ ಹಾದಿ ಯಲ್ಲಿ ಆನೆಗಳ ಸಂಚಾರ ಸಾಮಾನ್ಯ. ನಮಗೂ ಗಜರಾಜನೊಬ್ಬ ದರ್ಶನಕೊಟ್ಟು ಬಂಡೀಪುರ ಮಿನಿ ಸಫಾರಿಯೇನೋ ಎಂಬಂತೆ ಭಾಸವಾಯಿತು. ಬೆಟ್ಟದ ತುದಿ ಹತ್ತಿರವಾ ದಂತೆ ಅಲ್ಲಿಯವರೆಗಿದ್ದ ಸೆಕೆ ಕಡಿಮೆಯಾಗಿ ಚಳಿ ಏರುತ್ತಿತ್ತು. ಅನಂತ ದಿಗಂತದವರೆಗೂ ಮುಸುಕಿದ ಮೋಡಗಳು ನಾಟ್ಯಕೃಷ್ನನ ಕೊಳಲಿನ ದನಿಗೆ ತೊನೆದಾಡುವಂತೆ ಭಾಸವಾಗ ತೊಡಗಿತು.

ಕೊಳಲಿನ ಕರೆಯಿಂದ ಕೃಷ್ಣ ಭಕ್ತರನ್ನು ಸಮ್ಮೋಹನಗೊಳಿಸುವಂತೆ ಇಲ್ಲಿನ ಪ್ರಕೃತಿಯ ದೈವಿಕ ಶಕ್ತಿ ಮನೆಮಾಡಿದೆ. ಎಂಥ ನಾಸ್ತಿಕ ಕೂಡ ಇಲ್ಲಿನ ಸೌಂದರ್ಯಕ್ಕೆ ತಲೆಬಾಗದೇ ಇರಲಾರ. ಅಗಸ್ತ್ಯ ಮುನಿಗಳು ನಿರ್ಮಿಸಿದರು ಎನ್ನಲಾದ ಈ ದೇವಸ್ಥಾನದಲ್ಲಿ ನೃತ್ಯದ ಭಂಗಿಯ ಕೃಷ್ಣ ಮುಖ್ಯ ಆಕರ್ಷಣೆ. ಸದಾ ಗರ್ಭಗುಡಿಯ ದ್ವಾರದಲ್ಲಿ ಹಿಮದ ನೀರು ಜಿನುಗುತ್ತಿರುವುದರಿಂದ ಈ ಹೆಸರು ಬಂದಿದೆ. ಅರ್ಚಕರು ಈ ನೀರನ್ನು ಭಕ್ತಾದಿಗಳ ಮೇಲೆ ಪ್ರೋಕ್ಷಣೆಗೈದು ಧನ್ಯರಾಗುವಂತೆ ಮಾಡುತ್ತಾರೆ. ದೇವಳದ ಸುತ್ತಲೂ ಸುಮಾರು ೭೭ ಕೆರೆಗಳಿವೆ. ಪೌರಾಣಿಕ ಕತೆಯ ಪ್ರಕಾರ ಕಾಗೆಯೊಂದು ಇಲ್ಲಿನ ಕೆರೆಯೊಂದರಲ್ಲಿ ಮುಳುಗಿ ಎದ್ದ ಮೇಲೆ ಹಂಸವಾಗಿ ಹಾರಿಹೋಯಿತಂತೆ. ಹೀಗಾಗಿ ಇಲ್ಲೂ ಕಾಗೆಗಳು ಕಂಡು ಬರುವು ದಿಲ್ಲ. ಇಂಥ ಸ್ಥಳವಿಶೇಷತೆಗಳನ್ನು ಪ್ರವಾಸಿಗರಿಗೆ ಅರ್ಚಕರು ಬಹು ಆಸಕ್ತಿಯಿಂದ ವಿವರಿಸುತ್ತಾರೆ.

ಹೆಚ್ಚಾಗಿ ಪ್ರವಾಸಿ ಸ್ಥಳಗಳೆಂದರೆ ಕಸದ ರಾಶಿಯಾಗಿ ಬದಲಾಗಿಬಿಟ್ಟಿರುತ್ತವೆ. ಈ ನಿಟ್ಟಿನಲ್ಲಿ ಈ ಬೆಟ್ಟ ಅಪವಾದ. ಬೆಟ್ಟವೇರುವ ಮುನ್ನ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ಕಟ್ಟುನಿಟ್ಟು ಮಾಡಿರುವುದರಿಂದ ಬೆಟ್ಟ ನೈರ್ಮಲ್ಯ ದಿಂದ ಕೂಡಿದೆ ಹಾಗೂ ಅದರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.