Sunday, 15th December 2024

ಅಣಶಿಯಲ್ಲಿ ಮಂಗಟ್ಟೆ ವೀಕ್ಷಣೆ

ಸತ್ಕುಲ ಪ್ರಸೂತ

ಉದ್ಯಾನವನವನ್ನು ನೋಡುವುದಕ್ಕೆ ಅಲ್ಲಿಯವರೆಗೆ ಹೋಗಬೇಕಾ? ಹೇಗಂದ್ರೂ ಮನೆಯ ಅಟ್ಟದಲ್ಲಿ ಕುಳಿತು, ರಾತ್ರಿ ಸಮಯ ಹೊರಗೆ ಟಾರ್ಚ್ ಬಿಟ್ಟರೆ ಕಾಡುಹಂದಿ, ಕಾಡೆಮ್ಮೆ, ಹುಲಿಗುರಕೆ ಎಲ್ಲವೂ ಕಾಣುತ್ತೆ. ಇದರಲ್ಲೇನೂ ವಿಶೇಷ ಇಲ್ಲ ಅಂತ ಸಾಮಾನ್ಯವಾಗಿ ಮಲೆನಾಡಿನವರು ಭಾವಿಸುತ್ತಾರೆ. ಆದರೆ ಇದಕ್ಕಿಂತ ವಿಭಿನ್ನ ಅನುಭವ ಪಡೆಯಲು ದಾಂಡೇಲಿ ಸನಿಹದ ಅಣಶಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು.

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಣಶಿ ರಾಷ್ಟ್ರೀಯ ಉದ್ಯಾನವನವು ದಾಂಡೇಲಿ ವನ್ಯ ಜೀವಿ ಅಭಯಾರಣ್ಯದ ಭಾಗವಾಗಿದ್ದು ಕಾಳಿ ನದಿಯ ಅಂಚಿನಲ್ಲಿದೆ. ಯಾವುದೇ ಹೊಸ ಜಾಗಕ್ಕೆ ಹೋಗುವ ಮೊದಲು ಕೆಲವು ಮಾಹಿತಿಗಳನ್ನು ಕಲೆ ಹಾಕಿ ಹೋಗು ವುದು ತುಂಬಾ ಸೂಕ್ತ. ನೀವೇನಾದರೂ ಅಲ್ಲಿ ಉಳಿಯುವ ವಿಚಾರದಲ್ಲಿದ್ದರೆ ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳ ಅನುಮತಿ ಪತ್ರವನ್ನು ಹೊಂದಿರಬೇಕು.

ಜಂಗಲ್ ಸಫಾರಿ
ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಅವಕಾಶವಿದೆ. ಇಲ್ಲಿ ನಿಮ್ಮದೇ ವಾಹನ ಗಳನ್ನು ತೆಗೆದುಕೊಂಡು ಹೋಗುವ ಅವಕಾಶವಿದ್ದು ನಿಮ್ಮ ಜಾಗರೂಕತೆಯಲ್ಲಿ ನೀವಿರು ವುದು ಅನಿವಾರ್ಯ.

ಟ್ರೆಕಿಂಗ್
ಇಲ್ಲಿ ನಾಲ್ಕು ರೀತಿಯ ಟ್ರೆಕಿಂಗ್‌ಗೆ ಅವಕಾಶವಿದ್ದು ಮೊದಲನೆಯದು ನೇಚರ್ ಕ್ಯಾಂಪ್‌ನಿಂದ ಪ್ರಾರಂಭವಾಗಿ ಮೈಗಾನಿ ದಾಟಿ, ಉಳವಿಯ ಮೂಲಕ ಮತ್ತೆ ನೇಚರ್ ಕ್ಯಾಂಪ್‌ಗೆ ಹಿಂದಿರುಗುವುದು. ಇನ್ನೊಂದು ನೇಚರ್ ಕ್ಯಾಂಪ್‌ನಿಂದ ಟೈಗರ್ ಟ್ಯಾಂಕ್ ಮತ್ತು ನೇಸರ್ ಥಾಮ್‌ಗೆ ಹೋಗಿ ಬರುವುದು. ಮೂರನೆಯ ಟ್ರೆಕಿಂಗ್ ಇಡೀ ಅರಣ್ಯದ ಪರಿಚಯವನ್ನು ಮಾಡಿಕೊಡುತ್ತದೆ. ಇದು ಮಟಗಾಂವ್, ಕೈಲ್ವಾಡ, ಚಂದ್ಕುಣಗಿ, ವಾಕಿ ರಸ್ತೆ, ಮರ್ಡಿ, ಕದ್ರಾ ವ್ಯೂ ಪಾಯಿಂಟ್. ಈ ಟ್ರಕಿಂಗ್‌ನಲ್ಲಿ ನಾವು ಸುಮಾರು ೨೦ ಕಿಲೋಮೀಟರ್‌ಗಳಷ್ಟು ನಡೆಯಬೇಕಾಗುತ್ತದೆ. ಕೊನೆಯ ಟ್ರೆಕಿಂಗ್ ನೇಚರ್ ಕ್ಯಾಂಪ್‌ನಿಂದ ವಕಿ ಹಳ್ಳಕ್ಕೆ ಕರೆದೊಯ್ದು ನಂತರ ಕೊಡಗಲಿಗೆ ಹೋಬೇಕಾಗುತ್ತದೆ. ಇಲ್ಲಿ ಸುಮಾರು ೧೫ ಕಿಲೋಮೀಟರ್ ಗಳಷ್ಟು ನಡೆಯುವುದು ಅನಿವಾರ್ಯ. ಇವೆಲ್ಲವಕ್ಕೂ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಅಗತ್ಯ.

ಮಂಗಟ್ಟೆ ಹಕ್ಕಿ
ಚಾರಣದ ದಾರಿಯುದ್ದಕ್ಕೂ ವಿವಿಧ ರೀತಿಯ ಹಕ್ಕಿಗಳು ಕಾಣಸಿಗುತ್ತವೆ. ಈ ಪ್ರದೇಶದಲ್ಲಿರುವ ಮಂಗಟ್ಟೆ ಹಕ್ಕಿಯನ್ನು ನೋಡುವ ಅನುಭವವೇ ವಿಭಿನ್ನ, ವಿಶಿಷ್ಟ. ನಮ್ಮ ದೇಶದ ಅಪರೂಪದ ಹಕ್ಕಿಯಾಗಿರುವ ದೊಡ್ಡ ಮಂಗಟ್ಟೆ ಅಥವಾ ಗ್ರೇಟ್ ಹಾರ್ನ್‌ಬಿಲ್ ಹಕ್ಕಿಯು ಈ ಪ್ರದೇಶದಲ್ಲಿ, ದಾಂಡೇಲಿಯ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ, ಅಣಶಿಯ ಪ್ರಮುಖ ಆಕರ್ಷಣೆಯೇ ಮಂಗಟ್ಟೆ ಹಕ್ಕಿ ಎನ್ನಬಹುದು.

ಈ ಭಾಗದ ಪರಿಸರ ಸೌಂದರ್ಯಕ್ಕೆ ಯಾವುದೇ ಕೊನೆಯಿಲ್ಲ. ಎಲ್ಲಿಂದ ಪ್ರಾರಂಭಿಸಿ ದರೂ ಸುತ್ತ ಕಾಣುವುದು ಸೃಷ್ಟಿಕರ್ತ ಸಮಯವನ್ನಿಟ್ಟುಕೊಂಡು ಮಾಡಿದ ಜಾಗಗಳೇ… ಸುಂದರ ತಾಣಗಳೇ. ಅಣಶಿ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರವಿರುವ ನೋಡಬಹುದಾದ ಕೆಲವು ತಾಣಗಳು, ದುಡ್ಗಳಿ, ಬರ್ಪಲಿ ವ್ಯೂ ಪಾಯಿಂಟ್ ಇತ್ಯಾದಿ.

ಅಂಕಿ ಅಂಶ: ಅಂಶಿ ಅಥವಾ ಅಣಶಿ ರಾಷ್ಟ್ರೀಯ ಉದ್ಯಾನ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ 339.866 ಚ. ಕಿ.ಮೀ.ಪ್ರದೇಶದಲ್ಲಿ ಹರಡಿಕೊಂಡಿದೆ. ದಾಂಡೇಲಿ ವನ್ಯಜೀವಿ ಅಭಯಾರಣ್ಯದೊಂದಿಗೆ ಪರಸ್ಪರ ಗಡಿ ಹೊಂದಿದೆ. ಅಂಶಿ ರಾಷ್ಟ್ರೀಯ ಉದ್ಯಾನ ಮತ್ತು ದಾಂಡೇಲಿ ವನ್ಯಜೀವಿ ಅಭಯಾರಣ್ಯ ಎರಡನ್ನೂ ಜತೆಯಾಗಿ, ದಾಂಡೇಲಿ-ಅಂಶಿ ಹುಲಿ ಮೀಸಲು ಪ್ರದೇಶ ಎಂದು ಘೋಷಿಸಲಾಗಿದೆ. ಹುಲಿಯನ್ನು ರಕ್ಷಿಸಿದರೆ, ಒಟ್ಟೂ ಪರಿಸರವನ್ನೇ ರಕ್ಷಿಸಿದಂತಾಗುತ್ತದೆ ಎಂಬ ಉದ್ದೇಶ. ಈ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿವಿಧ ಪ್ರಭೇದದ ಮಂಗಟ್ಟೆ ಹಕ್ಕಿಗಳು ವಾಸಿಸುತ್ತವೆ, ನೋಡ ಸಿಗುತ್ತವೆ.