Sunday, 15th December 2024

ಪುರಾತನ ಗುಹೆಗಳ ಪ್ರಾಚೀನ ಚಿತ್ರಗಳು

ಶಶಾಂಕ್ ಮುದೂರಿ

ನಮ್ಮ ದೇಶದ ಅತಿ ಪುರಾತನ ಜನವಸತಿ ಸಂಕೀರ್ಣ ಎಂದರೆ ಭೀಮ್‌ಬೆಟ್ಕ್ ಗುಹೆಗಳು. ಇಲ್ಲಿರುವ ಸುಮಾರು ೭೫೪ ಗುಹೆಗಳಲ್ಲಿ ಪುರಾತನ ಮಾನವನು ವಾಸಿಸಿದ್ದು, ನೂರಾರು ಚಿತ್ರಗಳನ್ನೂ ರಚಿಸಿದ್ದಾನೆ.

ವಿಶ್ವ ಪರಂಪರೆಯ ತಾಣ ಎನಿಸಿರುವ ಭೀಮ್‌ಬೆಟ್ಕ ಗುಹೆ ಮತ್ತು ಶಿಲಾ ಆಶ್ರಯ ತಾಣಗಳು ಮಧ್ಯಪ್ರದೇಶದ ರೈಸೆನ್ ಜಿಲ್ಲೆಯಲ್ಲಿವೆ. ಇಲ್ಲಿ ಪ್ರವಾಸ ಮಾಡಿದಾಗ, ಹಲವು ವಿಸ್ಮಯ ಹುಟ್ಟಿಸುವ ವಿಚಾರಗಳು ಗಮನಕ್ಕೆ ಬರುತ್ತವೆ. ಅವುಗಳಲ್ಲಿ ಹೆಚ್ಚು ವಿಸ್ಮಯಕ್ಕೆ ಒಳಪಡಿಸುವ ಅಂಶವೆಂದರೆ, ಇಲ್ಲಿನ ಕೆಲವು ಗುಹೆಗಳಲ್ಲಿ 100000 ವರ್ಷಗಳಿಗೂ ಮುಂಚೆಯೇ ಪುರಾತನ ಮನುಷ್ಯನು ವಾಸಿಸಿದ್ದನಂತೆ!

ಅದೇನಿದ್ದರೂ, ಭೀಮ್‌ಬೆಟ್ಕದ ಹೆಗ್ಗುರುತು ಎಂದರೆ ಇಲ್ಲಿನ ನೂರಾರು ಚಿತ್ರಗಳು. ಹಲವು ಗುಹೆ ಮತ್ತು ಶಿಲಾ ಆಶ್ರಯತಾಣ ಗಳಲ್ಲಿ ಸಾಕಷ್ಟು ಚಿತ್ರಗಳು ಕಂಡುಬಂದಿದ್ದು, ಇವುಗಳಲ್ಲಿ ಕೆಲವು ಚಿತ್ರಗಳು 10000 ವರ್ಷಕ್ಕೂ ಹಿಂದಿ ನವು. ನಮ್ಮ ದೇಶದ ಅತಿ ಪುರಾತನ ಶಿಲಾ ಚಿತ್ರ ಗಳನ್ನು ಇಲ್ಲಿ ಕಾಣಬಹುದು. ಜತೆಗೆ, ಭೀಮ್‌ಬೆಟ್ಕ ಸಂಕೀರ್ಣವು ಅತಿ ದೊಡ್ಡ ಪ್ರಾಗೈತಿಹಾಸಿಕ ತಾಣವೂ ಎನಿಸಿದೆ.

ಸ್ಥಳೀಯ ಆದಿವಾಸಿಗಳ ಮಾಹಿತಿಯಂತೆ, 1888ರಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ತನ್ನ ವರದಿಯಲ್ಲಿ ಇಲ್ಲಿನ ಗುಹೆಗಳ ಪ್ರಸ್ತಾಪ ಮಾಡಿದ್ದ. ಆದರೆ ಈ ಗುಹೆಗಳ ಪ್ರಾಗೈತಿಹಾಸಿಕ ಪ್ರಾಮುಖ್ಯತೆಯನ್ನು ಮೊದಲು ಗುರುತಿಸಿ, ಅಧ್ಯಯನಕ್ಕೆ ಒಳಪಡಿಸಿದವರು ವಿ.ಎಸ್.ವಾಕನ್‌ಕರ್ ಎಂಬ ಪುರಾತತ್ವ ತಜ್ಞರು. 1957ರ ಸಮಯದಲ್ಲಿ ಭೀಮ್‌ಬೆಟ್ಕ ಗುಹೆಗಳಿಗೆ ಭೇಟಿ ನೀಡಿದ ಇವರು, ಪ್ರಾಥಮಿಕ ಅಧ್ಯಯನ ನಡೆಸಿ, ಇಲ್ಲಿನ ಪುರಾತನ ಚಿತ್ರಗಳ ಪ್ರಾಮುಖ್ಯತೆ ಯನ್ನು ಹೊರಜಗತ್ತಿಗೆ ತಿಳಿಸಿದರು. ಫ್ರಾನ್ಸ್‌ನಲ್ಲಿರುವ ಪ್ರಾಚೀನ ಗುಹಾಕಲೆಗೆ ಇವುಗಳನ್ನು ಮೊದಲು ಸಮೀಕರಿಸಿದವರು ವಾಕನ್‌ಕರ್. ಪ್ರಾಗೈತಿಹಾಸಿಕ ಕಾಲದಿಂದ ಇಲ್ಲಿನ ಗುಹೆಗಳಲ್ಲಿ ನಿರಂತರವಾಗಿ ಜನವಸತಿ ಇತ್ತು ಎಂದು ಈಗ ಕಂಡುಕೊಳ್ಳಲಾಗಿದೆ.

ಮಧ್ಯಪ್ರದೇಶದಲ್ಲಿ ಒಟ್ಟು ಸುಮಾರು 750 ಗುಹೆ ಮತ್ತು ಶಿಲಾ ಆಶ್ರಯತಾಣ ಗಳನ್ನು ಈಗ ಗುರುತಿಸಲಾಗಿದೆ. ಅವುಗಳಲ್ಲಿ ಸುಮಾರು 243 ಗುಹೆಗಳು ಭೀಮ್‌ಬೆಟ್ಕ್ ಗುಂಪಿಗೆ ಸೇರಿವೆ. ಸನಿಹದ ಲಖಾ ಜೌರ್ ಗುಂಪಿಗೆ 178 ಗುಹೆಗಳು ಸೇರಿವೆ. 1892 ಹೆಕ್ಟೇರ್ ವಿಸ್ತೀರ್ಣದ ಜಾಗವನ್ನು ರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದ್ದು, ೨೦೦೩ರಿಂದ ಇದನ್ನು ವಿಶ್ವಪರಂಪರಾ ತಾಣ ಎಂದು ಗುರುತಿಸಲಾಗಿದೆ.

ಸಭಾಂಗಣ ಗುಹೆ!: ಈ ಪ್ರದೇಶದಲ್ಲಿರುವ ಒಂದು ವಿಶಾಲ ಗುಹೆಯನ್ನು ಸಭಾಂಗಣ ಗುಹೆ ಎಂದೇ ಗುರುತಿಸಲಾಗಿದೆ. ಹತ್ತಾರು ಕಿ.ಮೀ. ದೂರದಿಂದ ಕಾಣಿಸುವ ಬೃಹತ್ ಕಲ್ಲುಗಳಿಂದ ಆವೃತವಾಗಿರುವ ಈ ಗುಹೆಯು, ಬಹುದೂರದಿಂದಲೇ ಕಾಣಿಸುತ್ತಿದ್ದು,

ಪುರಾತನ ಮಾನವರು ಇಲ್ಲಿ ಸೇರುತ್ತಿದ್ದರು ಎಂದು ಸಕಾರಣವಾಗಿಯೇ ತಜ್ಞರು ಗುರುತಿಸಿದ್ದಾರೆ. ನೂರಾರು ಜನರು  ಕುಳಿತು ಕೊಳ್ಳಬಲ್ಲ ವಿಶಾಲವಾದ ಜಾಗ, ನಾಲ್ಕು ದಿಕ್ಕಿನಿಂದ ಪ್ರವೇಶಿಸುವ ಅವಕಾಶ ಈ ಗುಹೆಯ ವಿಶೇಷತೆ.

ಮುಖ್ಯದ್ವಾರವು ಪೂರ್ವದಿಕ್ಕಿಗೆ ತೆರೆದುಕೊಂಡಿರುವುದು ಸಹ ಹಲವರ ಗಮನ ಸೆಳೆದಿದೆ. ಇಲ್ಲಿ ಯಾವುದೇ ಧಾರ್ಮಿಕ ಎನಿಸುವ ಕಾರ್ಯಗಳು ನಡೆದ ಕುರುಹು ಗಳು ದೊರಕಿಲ್ಲ. ಆದರೆ, ಇದೊಂದು ಪ್ರಮುಖ ಗುಹೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಶಿಲಾ ಚಿತ್ರಗಳು: ಇಂದು ಎಲ್ಲಾ ಗುಹೆಗಳನ್ನು ಪ್ರವಾಸಿಗರು ನೋಡುವ ಅವಕಾಶವಿಲ್ಲ. ಆದರೆ ತಜ್ಞರು ಹಲವು ಗುಹೆಗಳಲ್ಲಿ ಸಂಶೊಧನೆ ನಡೆಸಿದ್ದು, ಇಲ್ಲಿನ ಸುಮಾರು 500 ಗುಹೆ ಮತ್ತು ಶಿಲಾ ಆಶ್ರಯತಾಣಗಳಲ್ಲಿ ರೇಖಾ ಚಿತ್ರಗಳು ಮತ್ತು ಬಣ್ಣದ ಚಿತ್ರಗಳು ದೊರೆತಿವೆ! ಕೆಲವು ಚಿತ್ರಗಳು 10000 ವರ್ಷಗಳಿಗೂ ಮೊದಲಿನವು. ಆದರೆ ಮಧ್ಯಯುಗೀನ ಚಿತ್ರಗಳೂ ಸಾಕಷ್ಟು ಸಂಖ್ಯೆ ಯಲ್ಲಿವೆ. ಸಸ್ಯ ಮೂಲದ ಬಣ್ಣಗಳನ್ನು ಇಲ್ಲಿನ ಚಿತ್ರಗಳಲ್ಲಿ ಉಪಯೋಗಿಸಲಾಗಿದೆ.

ಮೃಗಾಲಯದ ಶಿಲೆ: ಒಂದು ಕಲ್ಲಿನ ಮೇಲೆ ಪ್ರಾಚೀನ ಮಾನವನು ರಚಿಸಿದ ಹಲವು ಚಿತ್ರಗಳನ್ನು ಕಂಡು, ಇದನ್ನು ‘ಮೃಗಾ ಲಯ ಶಿಲೆ’ ಎಂದು ಪ್ರವಾಸಿಗರ ದೃಷ್ಟಿಯಲ್ಲಿ ಕರೆಯಲಾಗಿದೆ. ಈ ಶಿಲೆಯ ಮೇಲೆ ಆನೆ, ಜಿಂಕೆ, ಕಾಡುಕೋಣ ಮತ್ತು ಬಾರಾಸಿಂಗ ಜಿಂಕೆಗಳನ್ನು ಚಿತ್ರಿಸಲಾಗಿದೆ. ಇನ್ನೊಂದು ಕಲ್ಲಿನ ಮೇಲೆ ನವಿಲು, ಹಾವು, ಜಿಂಕೆ ಮತ್ತು ಸೂರ್ಯನನ್ನು ಚಿತ್ರಿಸಲಾಗಿದೆ. ಆನೆಗಳ ದಂತಕ್ಕೆ ಬಣ್ಣವನ್ನು ಬಳಿದಿರುವುದು ವಿಶೇಷ.

ಬೇಟೆಯ ದೃಶ್ಯಗಳು: ಭೀಮ್‌ಬೆಟ್ಕ ಗುಹೆಗಳ ಹಲವು ಚಿತ್ರಗಳಲ್ಲಿ ಪುರಾತನ ಮಾನ ವನು ಬೇಟೆಯಾಡುವ ಸನ್ನಿವೇಶಗಳನ್ನು ಚಿತ್ರಿಸಿರುವುದು ಕುತೂಹಲಕಾರಿ. ಕಾಡು ಕೋಣವನ್ನು ಮನುಷ್ಯನೊಬ್ಬ ಅಟ್ಟಿಸಿಕೊಂಡು ಹೋಗುವ ಚಿತ್ರದಲ್ಲಿ, ಇನ್ನಿಬ್ಬರು
ನೋಡುತ್ತಾ ನಿಂತಿರುವ ಸನ್ನಿವೇಶವಿದೆ. ಇತ್ತೀಚೆಗಿನ ಕೆಲವು ಚಿತ್ರಗಳಲ್ಲಿ ಕುದುರೆಯ ಮೇಲೆ ಒಬ್ಬ ಸವಾರನು ಚಲಿಸುತ್ತಿದ್ದು, ಅವನ ಜತೆಗಾರರೂ ಇದ್ದಾರೆ. ಅವರೆಲ್ಲರೂ ಬೇಟೆಗೆ ಹೊರಟ ಸನ್ನಿವೇಶವನ್ನು ಅಲ್ಲಿ ಚಿತ್ರಿಸಲಾಗಿದೆ.

ಅತಿ ಪುರಾತನ ಕಲೆ
ಭೀಮ್‌ಬೆಟ್ಕದ ಕೆಲವು ಗುಹೆಗಳಲ್ಲಿ ಕಂಡು ಬಂದಿರುವ ಕಲೆಯನ್ನು ಜಗತ್ತಿನ ಅತಿ ಪುರಾತನ ಕಲೆಗೆ ಸಮೀಕರಿಸಲಾಗಿದೆ. ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ಗುಹೆಗಳಲ್ಲಿ ಕಂಡುಬಂದಿರುವ ಪ್ರಾಚೀನ ಕಲೆಯ ಕಾಲಮಾನಕ್ಕೆ ಇದನ್ನು ಹೋಲಿಸಲಾಗಿದೆ. ಫ್ರಾನ್ಸ್‌ನ ಲಾಸ್‌ಕಾಕ್ಸ್ ಗುಹಾ ಚಿತ್ರಗಳು 17000 ವರ್ಷದ ಹಿಂದಿನದು ಎನಿಸಿದ್ದು, ಭೀಮ್‌ಬೆಟ್ಕ ಗುಹಾಚಿತ್ರಗಳು ಸಹ ಅದೇ ಕಾಲದ ರಚನೆಗಳು ಎಂದು ತಿಳಿಯಲಾಗಿದೆ. ಸಂಪೂರ್ಣ ಅಧ್ಯಯನವಾಗಿಲ್ಲ!

ಭೀಮ್‌ಬೆಟ್ಕದಲ್ಲಿ ಸುಮಾರು 750 ಗುಹೆ ಮತ್ತು ಶಿಲಾಆಶ್ರಯ ತಾಣಕಗಳಿವೆ. ಆದರೆ, ಇವುಗಳ ಸಂಪೂರ್ಣ ಅಧ್ಯಯನ, ಸಂಶೋಧನೆ, ದಾಖಲೀಕರಣ ಇನ್ನೂ ಆಗಿಲ್ಲ. ಪುರಾತತ್ವ ಇಲಾಖೆಯು ಇವುಗಳ ರಕ್ಷಣೆಯನ್ನು ಮಾಡಿದ್ದು, ಅಧ್ಯಯನವು ಪ್ರಗತಿಯಲ್ಲಿದೆ. 12 ರಿಂದ 15 ಗುಹೆಗಳು ಮಾತ್ರ ಸಾರ್ವಜನಿಕರ, ಪ್ರವಾಸಿಗರ ವೀಕ್ಷಣೆಗೆ ಲಭ್ಯ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 46 ಕಿ.ಮೀ. ದೂರದಲ್ಲಿರುವ ಭೀಮ್‌ಬೆಟ್ಕಕ್ಕೆ ರಸ್ತೆ ಸೌಲಭ್ಯವಿದೆ. ಟ್ಯಾಕ್ಸಿ ಉತ್ತಮ ಸಂವಹನ ಮಾಧ್ಯಮ.