Sunday, 15th December 2024

ಊಟಿ ಎಂಬ ಬ್ಯೂಟಿ

ಡಾ.ಕೆ.ಎಸ್.ಪವಿತ್ರ

ನೀಲಗಿರಿ ಪರ್ವತಗಳ ನಡುವೆ ಇರುವ ಊಟಿಯ ನಿಜವಾದ ಸೌಂದರ್ಯವನ್ನು ಕಾಣಲು ಅಲ್ಲಿ ನಾಲ್ಕು ದಿನ ತಂಗ ಬೇಕು, ಪುಟಾಣಿ ರೈಲಿನಲ್ಲಿ ಪಯಣಿಸಬೇಕು!

‘ಊಟಿ’ ಯ ಬಗ್ಗೆ ನನ್ನ ಮೊದಲ ನೆನಪು ಬಾಲ್ಯದಲ್ಲಿ ನಾವು ತಿನ್ನುತ್ತಿದ್ದ ಚಿಕ್ಕ, ಕೆಂಪು ಬಣ್ಣದ ‘ಊಟಿ ಆಪಲ್’. ಅದು ಊಟಿ ಯಿಂದ ಬರುತ್ತಿತ್ತೋ, ಅಥವಾ ಊಟಿ ಎಂದ ತಕ್ಷಣ ಮನದಲ್ಲಿ ಮೂಡುವ ಸುಂದರ, ಚಿಕ್ಕ ತಾಣ ಎನ್ನುವ ಕಾರಣಕ್ಕೆ ಆ ಹೆಸರು ಹೊಂದಿತ್ತೋ ಗೊತ್ತಿಲ್ಲ. ಅದಾದ ಮೇಲೆ ಊಟಿಯ ಬೋರ್ಡಿಂಗ್ ಸ್ಕೂಲ್ ಬಗ್ಗೆ ಕೇಳಿದ್ದೆ. ಇದರ ನಂತರ ಸುಮಾರು ೬ನೇ ತರಗತಿಯಲ್ಲಿದ್ದಾಗ ಅಪ್ಪ ಊಟಿ-ಕೊಡೈಕೆನಾಲ್‌ಗಳಿಗೆ ಪ್ರವಾಸಕ್ಕೆ ಕರೆದೊಯ್ದಿದ್ದರು.

‘ಕೊಡೈ’ ಇನ್ನೂ ಅಷ್ಟು ಪ್ರಸಿದ್ಧವಾಗಿರದ ಕಾರಣಕ್ಕೆ ನಮಗೆ ಸ್ವಚ್ಚ -ಸುಂದರಎನಿಸಿತ್ತು. ಅದೇ ‘ಕೊಡೈ’ ಮುಗಿಸಿ ಊಟಿಗೆ ಹೋದಾಗ ಸುಸ್ತಾಗಿತ್ತೋ, ಅಥವಾ ಜನ ಜಂಗುಳಿ ಯಿಂದಲೋ ನಮಗೆ ಊಟಿ ಎಂದರೆ ಇಷ್ಟೇನಾ ಅನ್ನಿಸಿತ್ತು. ಉದಗೈ, ಊಟಕಮಂಡ್, ಉದಕಮಂಡಲಂ ಎಂಬ ಹೆಸರುಗಳಿಂದ ಕರೆಯಲ್ಪಡುವ ಊಟಿ, ಬ್ರಿಟಿಷರ ಕಾಲದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಬೇಸಿಗೆ ರಾಜಧಾನಿಯಾಗಿತ್ತು. ಇಲ್ಲಿಯ ಆದಿವಾಸಿಗಳೆಂದರೆ ತೋಡರು. ತೋಡರ ಒಂದು ಪವಿತ್ರ ಕಲ್ಲು ಇಲ್ಲಿದ್ದಿದ್ದರಿಂದ ಇಂದು ಏಕ ಶಿಲೆಯ ಗ್ರಾಮ- ‘ಒಟ್ಟ ಕಲ್ ಮಂಡು’ ಆಗಿತ್ತು. ಕ್ರಮೇಣ ಅದು ವೈವಿಧ್ಯ ರೂಪ ತಾಳಿ ಇದೀಗ ಊಟಿ ಎಂದೇ ನಮ್ಮೆಲ್ಲರ ಬಾಯಲ್ಲಿ ನಿಂತಿದೆ.

ಟಿಪ್ಪೂಸುಲ್ತಾನ ಬ್ರಿಟಿಷರಿಗೆ ಸೋತಾಗ, ಒಪ್ಪಂದವೊಂದರ ಫಲವಾಗಿ ಊಟಿಯಿರುವ ಸ್ಥಳ ಬ್ರಿಟಿಷರ ಕೈಗೆ ಬಂತು. ಊಟಿಯ ಸೌಂದರ್ಯದ ಬಗ್ಗೆ ಗಮನ ಸೆಳೆದವನು ಜಾನ್ ಸಲ್ಲಿವಾನ್ ಎಂಬ ಬ್ರಿಟಿಷ್ ಅಧಿಕಾರಿ. ಆತ ಆದಿವಾಸಿಗಳು ಮಾತ್ರ ಇದ್ದ ಅಂದಿನ ಊಟಿಗೆ ಬಂದು ನೋಡಿದಾಗ ಆತ ಥಾಮಸ್ ಮುನ್ರೋಗೆ ಬರೆದ ಮಾತುಗಳು. ‘ಈ ಜಾಗ ಸ್ವಿಟ್ಜರ್‌ಲ್ಯಾಂಡ್‌ನಂತಿದೆ.

ಯೂರೋಪ್‌ನ ಯಾವ ಊರೂ ಇದನ್ನು ಸರಿಗಟ್ಟಲಾರದು. ಬೆಟ್ಟಗಳಲ್ಲಿ ದಟ್ಟ ಅರಣ್ಯಗಳು. ಪ್ರತಿ ಕಣಿವೆಯಲ್ಲಿಯೂ ಹೊಳೆ ಯುವ, ಶುದ್ಧ ನೀರಿನ ಝರಿಗಳು’. ತೋಡರಿಂದ ಪಡೆದ ಈ ಸ್ಥಳದಲ್ಲಿ ‘ಕಲ್‌ಬಂಗ್ಲಾ’ – T|sqh ksOh ಎಂಬ ತನ್ನ ಬಂಗಲೆ ಯನ್ನು 1819ರಲ್ಲಿ ಸಲ್ಲಿವಾನ್ ನಿರ್ಮಿಸಿದ. ಬ್ರಿಟಿಷರು ಭಾರತಕ್ಕೆ ಬಂದಾಗ ಬಿಸಿಲಿನ -ಉಷ್ಣತೆಯ ಝಳವನ್ನು ತಡೆಯಲು ತಣ್ಣಗಿನ ತಾಣಗಳನ್ನು ಅವರು ಹುಡುಕಿದರು. ಶಿಮ್ಲಾ, ಡಾರ್ಜಿಲಿಂಗ್, ಪಶ್ಚಿಮ ಘಟ್ಟದ ಹಲವು ಟೀ ಎಸ್ಟೇಟ್‌ಗಳು ಇವುಗಳನ್ನು ಬೆಳೆಸಿತು. ಹಾಗಾಗಿಯೇ ಎತ್ತರದ ಸ್ಥಳಗಳಲ್ಲಿರುವ ಇಂಥ ಚಿಕ್ಕ ಊರುಗಳನ್ನು ನೋಡಿದಾಗ ಒಂದು ‘ಮಾಲ್ ರಸ್ತೆ’ ‘ಚೌಕ’, ಚಿಕ್ಕ ರೇಲ್ವೆ ನಿಲ್ದಾಣಗಳು ಸಾಮಾನ್ಯವಾಗಿ ಇರುತ್ತವೆ. ಇವುಗಳನ್ನು ಊಟಿ ಯಲ್ಲಿಯೂ ಕಾಣಬಹುದು.

ಹೆಸರುಗಳೂ ಅಷ್ಟೆ, ಬ್ರಿಟಿಷ್ ಅಧಿಕಾರಿಗಳ ಹೆಸರು, ಇಂಗ್ಲಿಷ್ ಹೆಸರುಗಳು ಅಡಿಗಡಿಗೆ ಕಾಣುತ್ತವೆ. ಆದರೆ ಜನರು ಮಾತನಾಡು ವುದು ಮಾತ್ರ ತಮಿಳನ್ನೇ! ಪ್ರವಾಸಿ ತಾಣವಾದ್ದರಿಂದ ಕನ್ನಡ-ಹಿಂದಿ-ತೆಲುಗು- ಮಲಯಾಳಂ -ಇಂಗ್ಲಿಷ್ ಎಲ್ಲವೂ ಇಲ್ಲಿ ನಡೆಯುತ್ತವೆ. ಕೋವಿಡ್ ನಂತರದ ಬಿಡುವಿನಲ್ಲಿ ನಾವು ಊಟಿಗೆ ಕಾಲಿಟ್ಟಾಗ ಅದರ ಸೌಂದರ್ಯ ‘ಅರೆ ಇಷ್ಟು ದಿನ ನಾವು ಬರಲು ತಡ ಮಾಡಿದ್ದಾದರೂ ಏಕೆ?’ ಎನ್ನುವಂತೆ ಮಾಡಿದ್ದು ಅಚ್ಚರಿಯೇನಲ್ಲ.

ಹೆಸರಿಸಲಾಗದಷ್ಟು ಜಾತಿಯ ಬಣ್ಣ ಬಣ್ಣದ ಹೂಗಳು, ಗಿಡಗಳು, ಮಧ್ಯೆ ಬಂಡೀಪುರದ ರಸ್ತೆಯಲ್ಲಿ ಮನಬಂದಂತೆ ಜಿಂಕೆಗಳು, ಆನೆಗಳನ್ನು ನೋಡಿಯೇ ನಾವು ಬೆರಗಾಗಿದ್ದೆವು. ಮಧುಮಲೈ ದಾರಿಯಲ್ಲಿ ಸಿಗುವಾಗ ಅಲ್ಲಲ್ಲಿ ಜಂಗಲ್ ರಿಸಾರ್ಟ್ಸ್‌ನ ಜೀಪುಗಳು ನಿಂತಿರುತ್ತವೆ. ಖಾಸಗಿಯವರ ವಾಹನಗಳೂ ಇರುತ್ತವೆ. ಕಾಡಿನೊಳಕ್ಕೆ ಕರೆದುಕೊಂಡು ಹೋಗಿ ಪ್ರಾಣಿಗಳನ್ನು ತೋರಿಸುವುದಾಗಿ ಹೇಳಿದ ಮೇಲೆ ನಾವು ಮರುಳಾಗದಿರುವುದುಂಟೆ? ಸರಿ, ದಢಬಢ ಎಂದು ಹಾರಿಸಿ, ಬೀಳಿಸುವ, ಗಟ್ಟಿಯಾಗಿ ಕಂಬಿಯನ್ನು ಹಿಡಿದು ಕೂರಬೇಕಾದ ಜೀಪ್ ಹತ್ತಿದೆವು.

ದೂರದಿಂದ ‘ಮಿಥುನ್ ಚಕ್ರವರ್ತಿಯ ರಿಸಾರ್ಟ್’ ತೋರಿಸಿ, ಒಂದೆರಡು ಜಿಂಕೆಗಳನ್ನು ಕಾಣಿಸಿ ಮತ್ತೆ ಊಟಿಗೆ ಹೋಗುವ ರಸ್ತೆಗೆ ನಮ್ಮನ್ನು ಮರಳಿಸಿದ. ಊಟಿಯಲ್ಲಿ ಮೊದಲು ನೋಡಬೇಕಾದ್ದು ಬೊಟಾನಿಕಲ್ ಗಾರ್ಡನ್. ೧೮೪೭ರಲ್ಲಿ ಟ್ವಿಡೇಲ್‌ನ  ಮಾರ್ಕ್ವಿಸ್ ಈ ಉದ್ಯಾನವನ್ನು ಯೋಜಿಸಿದವನು. ೨೨ ಹೆಕ್ಟೇರ್‌ಗಳಷ್ಟು ವಿಶಾಲ ಪ್ರದೇಶ. ಕಣ್ಣಿಗೆ ತಂಪೆನಿಸುವ, ಎಷ್ಟು ಹೊತ್ತು ಬೇಕಾದರೂ ಕುಳಿತಿರಬಹುದಾದ ಉದ್ಯಾನ. ದೊಡ್ಡ, ದೊಡ್ಡ ಹಸಿರು ಲಾನ್‌ಗಳು, ಆಕರ್ಷಕ ಬಣ್ಣಬಣ್ಣದ ಹೂಗಿಡಗಳು, ಮರಗಳು, ಅಲ್ಲಲ್ಲಿ ಕಲ್ಲಿನ ಬೆಂಚುಗಳು, ಇಟ್ಯಾಲಿಯನ್ ಶೈಲಿಯ ಉದ್ಯಾನದ ಅಂಚುಗಳು.

ಇವೆಲ್ಲಕ್ಕೂ ಕಲಶ ಪ್ರಾಯವೆಂಬಂತೆ ೨೦ ಮಿಲಿಯನ್ ವರ್ಷಗಳಷ್ಟು ಹಳೆಯ ಪಾಸಿಲ್ ಪಳೆಯುಳಿಕೆ. ಇದನ್ನು ‘ಮಂಕೀಸ್ ಪಜಲ್ ಟ್ರೀ’ – ಮಂಗಗಳಿಗೆ ಗೊಂದಲವುಂಟು ಮಾಡುವ, ಅವು ಹತ್ತಲಾಗದ ಮರ. ಬೊಟಾನಿಕಲ್ ಗಾರ್ಡನ್ನಿನಿಂದ ರೋಸ್ ಗಾರ್ಡನ್ನಿಗೆ ಹೋದರೆ, 10 ಎಕರೆಗಳಷ್ಟು ವಿಶಾಲವಾಗಿ ಹರಡಿಕೊಂಡಿರುವ ಈ ಉದ್ಯಾನದಲ್ಲಿ 3600 ವಿಧಗಳ ಗುಲಾಬಿ ಹೂಗಳಿವೆ. ಗುಲಾಬಿ ಉದ್ಯಾನ-ಬೊಟಾನಿಕಲ್ ಗಾರ್ಡನ್ ಎರಡನ್ನೂ ತೋಟಗಾರಿಕಾ ಇಲಾಖೆ ಕಾಯ್ದುಕೊಂಡಿರುವ ರೀತಿ ಅನುಕರಣೀಯ. ಊಟಿಯ ಎಲ್ಲೆಡೆ ಹೂಗಿಡಗಳು, ಕ್ಯಾಕ್ಟಸ್‌ಗಳು ಮಾರಾಟಕ್ಕೆ ದೊರೆಯುತ್ತವೆ.

ದೊಡ್ಡ ಬೆಟ್ಟ ಎಂಬ ತಾಣ 2623 ಮೀಟರ್ ಎತ್ತರದಲ್ಲಿದೆ. ತುದಿಯಲ್ಲಿ ಟೆಲಿಸ್ಕೋಪ್ ಹೌಸ್ ಎಂಬ ಸ್ಥಳವಿದೆ. ಇಲ್ಲಿನ ದೂರ ದರ್ಶಕದಿಂದ ಪಶ್ಚಿಮಘಟ್ಟಗಳ ಸೌಂದರ್ಯ ಕಾಣಬಹುದು. ಮೊಬೈಲ್‌ನ್ನು ಬದಿಗಿಟ್ಟು, ಕಣ್ಣುಗಳಿಂದ ನೋಡುವುದು ಸಾಧ್ಯ ವಾದರೆ, ಪ್ರಕೃತಿ ಸೌಂದರ್ಯ ಮತ್ತಷ್ಟು ಸವಿಯಾಗುತ್ತದೆ! ‘ಊಟಿ ಲೇಕ್’ ದೋಣಿ ವಿಹಾರದೊಂದಿಗೆ, ಕುದುರೆ ಸವಾರಿಯ ಮಜಾ ಕೂಡ ನೀಡುವುದು ವಿಶೇಷ. ಮಕ್ಕಳಿಗಾಗಿ ಮನರಂಜನಾ ಪಾರ್ಕ್ ಹತ್ತಿರದಲ್ಲಿದೆ. ಚಿಕ್ಕ ರೈಲು ಇಡೀ ಕೆರೆಯ ಸುತ್ತ ತಿರುಗಿ, ಎಲ್ಲ ಕೋನಗಳಿಂದ ಕೆರೆಯ ದರ್ಶನ ಮಾಡಿಸುತ್ತದೆ.

ಊಟಿಯ ‘ನೀಲಗಿರಿ ರೇಲ್ವೆ’ ಯುನೆಸ್ಕೋ ವಿಶ್ವ ಪರಂಪರೆಯ ತಾಣ. ನಿಧಾನವಾದ ರೈಲು, ಗಂಟೆಗೆ 10 ಕಿ.ಮೀ. ವೇಗದಲ್ಲಿ
ಚಲಿಸುವಂತಹದ್ದು. ಪ್ರಸಿದ್ಧ ಇಂಗ್ಲಿಷ್ ಬ್ಯಾಟ್ಸ್‌ಮನ್ ಮೈಕೇಲ್ ಕಾಲಿನ್ ಕೌಡ್ರೇ ಹುಟ್ಟಿದ್ದು ಊಟಿಯಲ್ಲಿಯೇ. ಭಾರತದ
ಅತ್ಯಂತ ಪುರಾತನ ಮಿಲಿಟರಿ ಸಂಸ್ಥೆಯಿರುವುದು ಊಟಿಯಲ್ಲಿಯೇ. ಭಾರತದಲ್ಲಿ ಚಿತ್ರೀಕರಣ ನಡೆಸಲಾಗುವ ತಾಣಗಳಲ್ಲಿ
ಊಟಿ ಪ್ರಮುಖವಾದದ್ದು. ಹಾಗೆಯೇ ಊಟಿಯ ಸುತ್ತಮುತ್ತ ಸುಮಾರು ೬೦ ಬೋರ್ಡಿಂಗ್ ಶಾಲೆಗಳಿವೆ. ಅಂತರರಾಷ್ಟ್ರೀಯ
ಶಾಲೆಗಳೂ ಇಲ್ಲಿವೆ.

ಊಟಿಯ ಸೌಂದರ್ಯ, ವಿಭಿನ್ನ ಸಂಸ್ಕೃತಿಗಳ ಮಿಶ್ರಣ, ಇಂಗ್ಲಿಷ್ ಹೆಸರುಗಳು, ತಮಿಳು ಭಾಷೆ, ಅಲ್ಲಲ್ಲಿ ಆದಿವಾಸಿಗಳ ಸಂಗ್ರಹಾಲಯ, ಉತ್ಪನ್ನಗಳು, ತಿನ್ನಲು ದೋಸೈ-ವಡೈ ಜೊತೆಗೆ ಬಿಸಿ ಬಿಸಿ ಬನ್ನು-ಕೇಕ್‌ಗಳು ನಾಲ್ಕು ದಿನಗಳಲ್ಲಿ ನನ್ನನ್ನು ಮರುಳು ಮಾಡಿದವು. ನಂತರ ನಾನಂದಿದ್ದು ‘ಯಾವ ಚಿತ್ರದಲ್ಲೂ ನಿಜವಾದ ಊಟಿಯ ಸೌಂದರ್ಯ ಇಲ್ಲಿಯವರೆಗೆ ಕಂಡೇ ಇಲ್ಲ! ಅದಕ್ಕೊಂದು ಡಾಕ್ಯುಮೆಂಟರಿ ಮಾಡುವುದೇ ಸರಿ. ‘ಊಟಿ’ಯ ಹೊರಗಿನ-ಒಳಗಿನ ‘ಬ್ಯೂಟಿ’ ಹೊರಬರಬೇಕು!”.