Saturday, 14th December 2024

ಪೈದಲ್‌ ಮಲೆ – ಇದು ಸಾಹಸಗಾಥೆಯ ಮಾಲೆ

ಪವನ್ ಆಚಾರ್ಯ

ಅನಿರೀಕ್ಷಿತವಾಗಿ ನಡೆದ ಪ್ರವಾಸ ಕಥನಗಳು ಎಂದಿಗೂ ಸ್ಮೃತಿ ಪಟಲದಲ್ಲಿ ಉಳಿಯುತ್ತದೆ ಎನ್ನುವುದು ಸುಳ್ಳಲ್ಲ. ಅದರಲ್ಲಿಯೂ ಪಶ್ಚಿಮ ಘಟ್ಟದ ಚಾರಣವಂತೂ ಸಾಹಸ ಪ್ರಿಯರಿಗೆ ಹತ್ತಿರವೆನಿಸುವಂತಹವು. ಅದರಲ್ಲಿನ ಕೆಲವು ಸ್ವಾರಸ್ಯ ಭಾಗಗಳು ಇಲ್ಲಿವೆ.

ಇದು ಅನಿರೀಕ್ಷಿತ ಪ್ರವಾಸದಿಂದ ವಿಭಿನ್ನ ಅನುಭವಗಳಾದ ಪ್ರದೇಶದ ಕಥೆ. ಆ ಸ್ಥಳದ ಹೆಸರು ನಮ್ಮ ಮನಸಲ್ಲಿ ಹುಟ್ಟಿಕೊಳ್ಳಲು ಕಾರಣ ಒಂದು ಹುಡುಗಿ. ಯಾರೋ ಒಬ್ಬಳು ಒಬ್ಬನನ್ನು ಬೋಳಿಸಿ ಬಿಟ್ಟಿದ್ದಾಳೆ ಅಂತ ತುಂಬಾ ಗೌರವಯುತವಾದ ಚರ್ಚೆ ನಮ್ಮ ಗೆಳೆಯರ ಬಳಗದಲ್ಲಿ ತಡಾರಾತ್ರಿ ನಡೆಯುತ್ತಿತ್ತು.

ಅದರಲ್ಲೊಬ್ಬ ಆಕ್ರೋಶದಿಂದ, ಅವಳು ಅವನ ರಕ್ತ ಹೀರಿ ಬಿಟ್ಟಳು ಎಂದು ಉದಾಹರಣೆ ಯೊಂದಿಗೆ ಹೇಳಿಬಿಟ್ಟ. ಹೇಳಿ ಕೇಳಿ ನಮ್ಮದು ಕಾಸರಗೋಡು. ಮಲಯಾಲಂ ಭಾಷೆಗೆ ಹೆಚ್ಚು ಪ್ರಾಧಾನ್ಯ ಕೊಡುವ ಹಾಗೆ ಆತ ಹೇಳಿದ ಉದಾಹರಣೆ, ರಕ್ತ ಹೀರಿವ ಪ್ರಾಣಿ ‘ಅಟ್ಟ’ ಎಂಬುದರ ಬಗ್ಗೆ. ಆ ಪ್ರಾಣಿ ಹೆಚ್ಚಾಗಿ ಗುಡ್ಡಗಳಲ್ಲಿ ಇರುವ ಕಾರಣ ಆ ಚರ್ಚೆ ಒಂದು ಪ್ರವಾಸದ ಕಡೆ ಮುಖ ಮಾಡಿತು. ಅಂತು ಅವತ್ತು ರಾತ್ರಿ ಒಂದು ಟ್ರಕ್ಕಿಂಗ್ ತಯಾರಿಯಾಯಿತು.

‘ಪೈದಲ್ ಮಲೆ’ ಆ ಪರ್ವತ ಶ್ರೇಣಿಗಳ ಹೆಸರು. ಕಣ್ಣೂರು ಜಿಲ್ಲೆಯ ಪೊಟ್ಟನ್ ಪ್ಲಾವೇ ಗ್ರಾಮದಲ್ಲಿದೆ. ಸಮುದ್ರಮಟ್ಟದಿಂದ ೧೩೭೨ ಮೀ. ಎತ್ತರದಲ್ಲಿ ತಲೆ ಎತ್ತಿ ನಿಂತಿರುವ ಪೈದಲ್ ಮಲೆ ಪಶ್ಚಿಮ ಘಟ್ಟದ ಒಂದು ಭಾಗವಾಗಿದೆ. ಕೊಡಗು ಕಾಡಿನ ಹತ್ತಿರ ಕೇರಳ, ಕರ್ನಾಟಕ ಬಾರ್ಡರ್‌ನಲ್ಲಿ ಕಾಣಸಿಗುತ್ತದೆ.

ಅಲ್ಲಿಗೆ ಹೋಗುವುದೇ ದೊಡ್ಡ ಸಾಹಸ: ಇವರೆನ್ನೆಲ್ಲಾ ಕಟ್ಟಿಕೊಂಡು ಅಷ್ಟು ದೂರ ಹೋಗುವುದೆಂದರೆ ಸುಲಭದ ಮಾತಲ್ಲ. ಆದರೆ ಈ ಯೋಜನೆ ಅನಿರೀಕ್ಷಿತವಾಗಿ ಬಂತು. ತುಂಬಾ ಗಡಿಬಿಡಿಯಲ್ಲಿ ತಯಾರಿಗಳು ನಡೆಯಬೇಕಿತ್ತು, ಎಲ್ಲದರ ಉಸ್ತುವಾರಿ ಯನ್ನು ನಾವೇ ೨-೩ ಮಂದಿ ವಹಿಸಿದ್ದೆವು. ಕ್ರಿಕೆಟ್ ಮಧ್ಯೆ ಬರುವ ಜಾಹಿರಾತಿನಲ್ಲಿ ಕಣ ಕಣದಲ್ಲೂ ಕೇಸರಿಯ ಸ್ವಾದ ಹೇಗೋ ಹಾಗೆ ನಮ್ಮವರಿಗೆ ಪ್ರವಾಸದ ವೇಳೆ ಕ್ಷಣ ಕ್ಷಣಕ್ಕೂ ಮನರಂಜನೆ ಬೇಕು. ಹೋಗುವಾಗ ಬರುವಾಗ ಬಸ್ಸಿನಲ್ಲಿ ಡಿಜೆ ಕುಣಿತ, ಸಿನೆಮಾ, ಎಲ್ಲಾ ಬೇಕು.

ಪ್ರಸಿದ್ಧ ದೇವಸ್ಥಾನಗಳ ದರ್ಶನ: ಗುರಿ ಪೈದಲ್ ಮಲೆಯಾದರೂ ಧರ್ಮ ಆಧರಿತ ಕೆಲಸ ಮಾಡುವ ಹುಡುಗರಾದ್ದರಿಂದ ದಾರಿಯಲ್ಲಿ ಸಿಗುವ ಎಲ್ಲಾ ಪ್ರಸಿದ್ಧ ಕ್ಷೇತ್ರಗಳಿಗೆ ಕಾಲಿಟ್ಟೇ ಮುಂದುವರಿಯುವುದು ವಾಡಿಕೆ. ಹಾಗೆ ಅಂದು ಮೊದಲು ಸಮೀಪ ದಲ್ಲಿರುವ ಪರಶಿನಿ ಕಡವು ಮುತ್ತಪ್ಪ ದೇವಸ್ಥಾನಕ್ಕೆ ತಲುಪಿದೆವು. ಅಷ್ಟಕ್ಕೂ ಆರಂಭದಲ್ಲಿ ದೇವರ ಅನುಗ್ರಹ ಒಂದಿದ್ದರೆ ಸಾಕಲ್ವ ಎಲ್ಲವೂ ಸುಸೂತ್ರವಾಗಿ ನಡೆಯಬಹುದು ಎಂಬ ಭಾವನೆ.

ದಾರಿ ಕಾಣದಾಗಿದೆ ಅಂತಿಮ ಗುರಿಗೆ: ಪೈದಲ್ ಮಲ ಪ್ರವಾಸ ತಾಣದ ಪ್ರಸಿದ್ಧವಾದರೂ ಅಲ್ಲಿಗಿರುವ ದಾರಿ ಮಾತ್ರ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ನಾವೂ ಗೂಗಲ್ ಮ್ಯಾಪ್ ಹುಡುಗಿ ಹೇಳಿದನ್ನು ಕಣ್ಣು ಮುಚ್ಚಿ ನಂಬಿಕೊಂಡು ಹೋಗು ತ್ತದ್ದೆವು. ಸ್ವಲ್ಪ ದೂರ ಹೋದಾಗ ನೆಟ್‌ವರ್ಕ್ ಹೋಗಿ ಹುಡುಗಿ ಮಾತು ನಿಲ್ಲಿಸಿ ಬಿಟ್ಟಳು.

ಹುಡುಗಿಯರನ್ನು ನಂಬುವುದಕ್ಕೆ ಆಗುದಿಲ್ಲ ಅಂತ ಹೇಳುವುದು ಇದಕ್ಕೆ. ಆದರು ಅಕ್ಕ ಪಕ್ಕ ಸಿಕ್ಕಿದವರಲ್ಲೆಲ್ಲಾ ಕೇಳಿಕೊಂಡು ಕೊನೆಗೂ ಗುರಿ ತಲುಪಿದೆವು. ತಪ್ಪಲು ಪ್ರದೇಶ ಬರು ತ್ತಿದ್ದಂತೆ ಇಕ್ಕೆಲೆಗಳಲ್ಲಿ ಕಣ್ಣಾಡಿಸಿ ನೋಡಿದಾಗ ಎತ್ತರದಲ್ಲಿ ಬೃಹದಾಕರ ದಲ್ಲಿ ಪೈದಲ್ ಮಲೆಯ ವಿಶ್ವರೂಪ ದರ್ಶನವಾಯಿತು. ಪರ್ವತದ ಸೊಂಟ ಭಾಗದಲ್ಲಿ ಮೋಡಗಳು ಓಡಾಡುತ್ತಿದ್ದವು. ಅದಕ್ಕೂ ಮೀರಿ ತಲೆ ಎತ್ತಿ ನಿಂತ ಆ ಪರ್ವತದ ಗಾಂಭಿರ್ಯವನ್ನು ನೋಡುವುದೇ ಬಹಳ ಕುತೂಹಲ.

ಆ ಹೊತ್ತಿಗೆ ಎಲ್ಲರೂ ವಿಡಿಯೋ, ಫೋಟೋಗ್ರಾಫರ್‌ಗಳೇ… ಇಲ್ಲಿ ಜೂನ್‌ನಿಂದ ಅಕ್ಟೋಬರ್ ತಿಂಗಳವರೆಗೆ ಟ್ರಕ್ಕಿಂಗ್‌ಗೆ ಮುಕ್ತವಾದ ಅವಕಾಶ ಇರುತ್ತದೆ. ಈ ಸಮಯದಲ್ಲಿ ಈ ಪ್ರದೇಶವು ಮಂಜು ಮುಸುಕಿ, ಹುಲ್ಲಿನ ಹಾಸಿಗೆ ಹೊದ್ದಂತೆ ತುಂಬಾ ಮುದ್ದಾಗಿರುತ್ತದೆ. ತುಂಬಾ ತಂಪಾದ ವಾತಾವರಣ. ಸುತ್ತಲೂ ಸಮಾನಾಗಿ ನಿಂತಿರುವ ಪರ್ವತಗಳು ಎಲ್ಲರನ್ನು ಮಂತ್ರ ಮುಗ್ದಗೊಳಿಸುತ್ತದೆ.

ಛಾಯಾಗ್ರಾಹಕರನ್ನು ತುಂಬಾ ಆಕರ್ಶಿಸುವ ಸ್ಥಳವಾಗಿದೆ. ಪೈದಲ್ ವ್ಯಾಲಿಯಿಂದ ಸುಮಾರು 45 ನಿಮಿಷಗಳು ನಡೆಯುತ್ತಾ ಪರ್ವತದ ತುತ್ತತುದಿಗೆ ತಲುಪಬಹುದು. ಮೇಲೆ ನಿರೀಕ್ಷಕಾ ಟವರ್ ಇದೆ. ಎತ್ತರದಲ್ಲಿರುವ ಸಮತಟ್ಟಾದ ಪ್ರದೇಶ ವೀಕ್ಷಣೆ ಮಾಡಲು, ಛಾಯಚಿತ್ರಗಳನ್ನು ಸೆರೆ ಇಡಿಯಲು, ಅತ್ತಿಂದಿತ್ತ ಓಡಾಡಲು ಸೂಕ್ತವೆನಿಸುತ್ತದೆ. ಸುತ್ತಲೂ ಅವಿಸ್ಮರಣೀಯ ದೃಶ್ಯ ಗಳನ್ನು ಆಸ್ವಾದಿಸುತ್ತಾ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು.

ವ್ಯಾಲಿಯಿಂದ ಈ ಪಾಯಿಂಟ್‌ಗೆ ಇರುವ ಕಾಲ್ನಡಿಗೆಯ ಯಾತ್ರೆಯು ತುಂಬಾ ಖುಷಿಕೊಡುತ್ತಿತ್ತು. ಅಲ್ಲಲ್ಲಿ ನೀರಿನ ಹರಿವು. ಪ್ರಾಣಿಗಳು, ಪಕ್ಷಿಗಳು, ದೊಡ್ಡದಾಗಿ ಬೆಳೆದುನಿಂತ ಮರಗಳು. ಒಟ್ಟಾರೆ ಕಾಡಿನ ನಿಜವಾದ ಸೌಂದರ್ಯವನ್ನು ಆಸ್ವಾದಿಸ ಬಹುದು. ಕೇರಳ ಅರಣ್ಯ ಇಲಾಖೆಯು ಸುರಕ್ಷತಾ ಕ್ರಮಗಳನ್ನು ಹೊತ್ತು ಅಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಟ್ಟೆಗಳ ಕಾಟ (ಇಂಬಳ) ನಾವು ಮೇಲೇರುತ್ತಿದ್ದಂತೆ ಬೆಳಗ್ಗೆ ಬೇಗನೆ ಹೋದವರು ವಾಪಾಸಾಗುತ್ತಿದ್ದರು. ಅವರ ಕಾಲಿನಲ್ಲಿ ರಕ್ತ ಹರಿಯುತ್ತಿತ್ತು. ಇದನ್ನು ನೋಡಿ ಭಯ ಭೀತರಾದೆವು. ಅಟ್ಟಗಳು ರಕ್ತ ಹೀರಿ ಕಾಲನ್ನು ಬಿಟ್ಟಿದ್ದರೂ ರಕ್ತ ಮಾತ್ರ ನಿಂತಿರಲಿಲ್ಲ.
ಚಪ್ಪಲಿ ಹಾಕಿದವರು, ಅದರಲ್ಲಿಯೂ ಶೂ ಹಾಕಿದವರು ಹೆಚ್ಚಾಗಿ ಗಮನಕೊಡಿ. ಹುಲ್ಲು ಗಳ ಮಧ್ಯೆ ಇರುವ ಅವುಗಳು ಕಾಲಿಗೆ ಕಚ್ಚಿದಾಗಲು ಗೊತ್ತಾಗುವುದಿಲ್ಲ ರಕ್ತ ಹೀರಿ ಭಾರವಾದಾಗ ಗೊತ್ತಾಗುತ್ತದೆ. ಅಂತು ಹೋದವರಲ್ಲಿ ನನಗೂ ಒಬ್ಬ ಗೆಳೆಯನಿಗೆ ಬಿಟ್ಟರೆ ಉಳಿದ ಎಲ್ಲರಿಗೂ ಕಚ್ಚಿದ್ದವು ಭಯಾನಕ ಅಟ್ಟೆಗಳು.

ಒಂದೊಂದು ಪ್ರವಾಸದಲ್ಲಿ ಏನಾದರು ಹೊಸತ್ತನ್ನು ಕಲಿಯಲು ಸಾಧ್ಯವಾಗುತ್ತದೆ. ಅದೇ ರೀತಿ ಕಷ್ಟ ಸಾಧ್ಯ ಅನ್ನುವ
ಗುರಿಯನ್ನು ನಾವು ತುಂಬಾ ಮಂದಿ ಒಗ್ಗಟ್ಟಾಗಿ ಸಾಧಿಸಿ ಬಂದೆವು ಎಂಬ ಖುಷಿ ನಮಗೆ. ಪ್ರವಾಸದಿಂದ ಉತ್ತಮ ಗೆಳೆಯರ ಒಡನಾಟವಾಗುತ್ತದೆ. ಅವತ್ತು ನಮಗೆ ಆ ಬಸ್ಸಿನ ಚಾಲಕ ನಮ್ಮವರಲ್ಲಿ ಒಬ್ಬರಾದರು. ಹೀಗೆ ಈ ಪ್ರವಾಸವು ತುಂಬಾ ಅನುಭವ ಗಳನ್ನು ನೀಡಿದೆ. ಆ ಪ್ರದೇಶದ ಅನುಭವಗಳು ಈಗಲೂ ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿದೆ.