Sunday, 15th December 2024

ಎಂಟು ನದಿಗಳ ನಾಡು

ಮಣ್ಣೆ ಮೋಹನ್‌

ಉತ್ತರದಲ್ಲಿ ಹಿಮಾಲಯ, ಎಲ್ಲೆಲ್ಲೂ ನದಿ, ಸರೋವರಗಳು, ಬೆಟ್ಟ, ಗುಡ್ಡಗಳು. ನಡುವೆ ಕಾಠ್ಮಂಡು ಕಣಿವೆ. ಈ ನಗರವು ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಂಪು ಜಾಗ.

ಹಿಮಾಲದಯ ಮಡಿಲಲ್ಲಿರುವ ನೇಪಾಳವು ಪ್ರವಾಸಿಗರ ಸ್ವರ್ಗ. ಇಡೀ ದೇಶವೇ ಬೆಟ್ಟ, ಗುಡ್ಡ, ಪರ್ವತಗಳಿಂದ ತುಂಬಿದ್ದು, ಇದರ ರಾಜಧಾನಿ ಕಾಠ್ಮಂಡು. ಈ ನಗರ ಇರುವ ಕಣಿವೆಯನ್ನು ಐತಿಹಾಸಿಕವಾಗಿ ನೇಪಾಳ ಮಂಡಲ ಎಂದು ಕರೆಯಲಾಗುತ್ತಿತ್ತು. ದರ್ಬಾರ್ ಚೌಕ, ಸ್ವಯಂಭುನಾಥ, ಬೌಧನಾಥ ಮತ್ತು ಪಶುಪತಿನಾಥ ದಂತಹ ಹಲವಾರು ವಿಶ್ವ ಪರಂಪರೆಯ ತಾಣಗಳಿಗೆ ಈ ನಗರ ನೆಲೆಯಾಗಿದೆ. ಶಿವ, ನೇಪಾಳಿಗಳ ಕುಲದೈವ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪುರಾಣ ಪ್ರಸಿದ್ಧವಾದ ಪಶುಪತಿ ನಾಥ ಮಂದಿರ ಇಲ್ಲಿದೆ.

ಶಿವಪುರಾಣದ ಪ್ರಕಾರ, ಭಾರತ ಮತ್ತು ನೇಪಾಳವೂ ಸೇರಿ ಒಟ್ಟು ೬೪ ಸ್ಥಳಗಳಲ್ಲಿ ಜ್ಯೋತಿರ್ಲಿಂಗಗಳನ್ನು ಕಾಣಬಹುದು. ಅವುಗಳಲ್ಲಿ 12 ಜ್ಯೋತಿರ್ಲಿಂಗಗಳನ್ನು ಅತ್ಯಂತ ಪವಿತ್ರ ಮತ್ತು ಪೂಜನೀಯ ಎಂದು ಪರಿಗಣಿಸಲಾಗಿದೆ. ಈ 12 ಜ್ಯೋತಿ ರ್ಲಿಂಗಗಳನ್ನು ’ಮಹಾ ಜ್ಯೋತಿರ್ಲಿಂಗ’  ಎಂದೂ ಕರೆಯುತ್ತಾರೆ. ಈ ಮಹಾ ಜ್ಯೋತಿರ್ಲಿಂಗಗಳು ಶಿವನ ಅಂಗಾಂಗ ಗಳಾದರೆ, ನೇಪಾಳದಲ್ಲಿ ರುವ ಪಶುಪತಿನಾಥ ಜ್ಯೋತಿರ್ಲಿಂಗವು ಶಿವನ ಶಿರದ ಭಾಗ ಎಂದು ನಂಬಲಾಗಿದೆ. ಆ ಕಾರಣಕ್ಕಾಗಿ ಈ ಜ್ಯೋತಿ ರ್ಲಿಂಗಕ್ಕೆ ಮಹತ್ವದ ಸ್ಥಾನವಿದೆ.

ಕಾಠ್ಮಂಡು ಎಂಬ ಹೆಸರು ‘ಕಾಷ್ಠಮಂಡಪ’ ಎಂಬ ಪದದಿಂದ ಬಂದಿದೆ, ಇದು ಕಾಠ್ಮಂಡು ನಗರದ ದರ್ಬಾರ್ ಚೌಕದಲ್ಲಿದೆ. ಕಾಷ್ಠ ಎಂದರೆ ಮರ ಮತ್ತು ಮಂಡಪ ಎಂದರೆ ಮಂಟಪ. ಮೂರು ಅಂತಸ್ತಿನ ಇದನ್ನು ಮರದಿಂದ ನಿರ್ಮಿಸಲಾಗಿದೆ. ಈ ಮಂಟಪ ನಿರ್ಮಿಸಲು, ಮರಗಳ ಜೋಡಣೆಗೆ ಯಾವುದೇ ಕಬ್ಬಿಣದ ಮೊಳೆಗಳನ್ನು ಬಳಸಲಾಗಿಲ್ಲ. ಎಲ್ಲವನ್ನು ಮರದಿಂದಲೇ ಮಾಡಲಾಗಿದೆ. ಅಷ್ಟೇ ಅಲ್ಲದೆ ಈ ಪಗೋಡವನ್ನು ನಿರ್ಮಿಸಲು ಬಳಸಿದ ಎಲ್ಲಾ ಮರಗಳನ್ನು ಒಂದೇ ಮರದಿಂದ ಪಡೆಯ ಲಾಗಿದೆ. ಈ ಮಂಟಪವನ್ನು ೧೫೯೬ ರಲ್ಲಿ ಬಿಸೆತ್ ರಾಜ ಲಕ್ಷ್ಮೀ ನರಸಿಂಗ್ ಮಲ್ಲನ ಅವಧಿಯಲ್ಲಿ ಪುನರ್ನಿರ್ಮಿಸಲಾಯಿತು.

2015ರ ಏಪ್ರಿಲ್ ನಲ್ಲಿ ಸಂಭವಿಸಿದ 7.8 ತೀವ್ರತೆಯ ಭಾರಿ ಭೂಕಂಪದ ಸಮಯದಲ್ಲಿ ಸಂಪೂರ್ಣವಾಗಿ ಕುಸಿದು ಬಿದ್ದಿತು.
ನಂತರ ಅದನ್ನು ಪುನರ್ನಿರ್ಮಿಸಲಾಯಿತು. ಪ್ರಾಚೀನ ಹಸ್ತಪ್ರತಿಗಳು ಕಾಠ್ಮಂಡುವನ್ನು ನೇಪಾಳ ಮಂಡಲದಲ್ಲಿ ಕಾಂತ ಮಂಡಪ್ ಮಹಾನಗರ ಎಂದು ಉಲ್ಲೇಖಿಸುತ್ತವೆ. ಕೆಲವೆಡೆ ಕಂಠಮಂಡಪ್ ಎಂದು ಕರೆಯಲಾಗಿದೆ. ಮಧ್ಯಕಾಲೀನ ಯುಗದಲ್ಲಿ, ನಗರವನ್ನು ಕಾಂತಿಪುರ ಎಂದು ಕರೆಯಲಾಗುತ್ತಿತ್ತು ಕಾಂತಿ ಎಂಬುದು ಸೌಂದರ್ಯ ವನ್ನು ಪ್ರತಿನಿಧಿಸುವ ಪದವಾಗಿದೆ ಮತ್ತು ಇದು ಬೆಳಕಿಗೆ ಪರ್ಯಾಯವಾಗಿದೆ.

ಲಿಚ್ಚವಿ ಸಾಮ್ರಾಜ್ಯ
ಭಾರತದ ಗಂಗಾ ಬಯಲಿನಿಂದ ಲಿಚ್ಚವಿಗಳು ಇಲ್ಲಿಗೆ ವಲಸೆ ಬಂದು ಸ್ಥಳೀಯ ಕಿರಾತರನ್ನು ಸೋಲಿಸಿ, ಕ್ರಿ.ಶ ೪೦೦ ರ ಸುಮಾರಿಗೆ ಲಿಚ್ಚವಿ ರಾಜವಂಶವನ್ನು ಸ್ಥಾಪಿಸಿದರು. ಲಿಚ್ಚವಿ ದೊರೆ ಗುಣಕಮದೇವನು ಇಲ್ಲಿದ್ದ ಬೇರೆ ಬೇರೆ ಪ್ರಾಂತ್ಯಗಳನ್ನು ವಿಲೀನ ಗೊಳಿಸಿ, ಕಾಠ್ಮಂಡು ಸಂಸ್ಥಾನವನ್ನು ಸ್ಥಾಪಿಸಿದನು. ಈ ನಗರವನ್ನು ಮಂಜುಶ್ರೀಯ ಖಡ್ಗವಾದ ಚಂದ್ರಹರಸದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಮುಂದೆ ಭಾರತ ಮತ್ತು ಟಿಬೆಟ್ ನಡುವಿನ ವ್ಯಾಪಾರದಲ್ಲಿ ಕಾಠ್ಮಂಡು ನಗರವು ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಲ್ಪಟ್ಟಿತು.

ಭಾರತದ ಮೇಲೆ ದೆಹಲಿ ಸುಲ್ತಾನರ ದಾಳಿಯ ನಂತರ, ತಿರ್ಹತ್‌ನ ಆಡಳಿತಗಾರರು ಕಠ್ಮಂಡು ಕಣಿವೆಗೆ ಓಡಿಬಂದರು. ಅವರು ನೇಪಾಳಿ ರಾಜಮನೆತನದವರೊಂದಿಗೆ ವಿವಾಹವಾದರು. ಇದು ಮಲ್ಲ ವಂಶದ ರಾಜಮನೆತನದ ಯುಗಕ್ಕೆ ಕಾರಣವಾಯಿತು.

ಗೂರ್ಖಾ ಸಾಮ್ರಾಜ್ಯ
1768 ರಲ್ಲಿ ನಡೆದ ಮಲ್ಲ ಮತ್ತು ಗೂರ್ಖಾ ರಾಜರುಗಳ ನಡುವಿನ ಕಾಠ್ಮಂಡು ಕದನದ ನಂತರ, ಮಲ್ಲ ಒಕ್ಕೂಟದ ಆಡಳಿತ ಕೊನೆಗೊಂಡು ಗೂರ್ಖಾ ಸಾಮ್ರಾಜ್ಯವು ಉದಯಿಸಿತು. ಇದು ಕಾಠ್ಮಂಡುವಿನಲ್ಲಿ ಆಧುನಿಕ ಯುಗದ ಆರಂಭಕ್ಕೆ ನಾಂದಿ ಹಾಡಿತು. ಕಾಠ್ಮಂಡು ನಗರ ಗೂರ್ಖಾ ಸಾಮ್ರಾಜ್ಯದ ರಾಜಧಾನಿಯಾಯಿತು ಮತ್ತು ಸಾಮ್ರಾಜ್ಯವನ್ನು ನೇಪಾಳ ಎಂದು ಕರೆಯಲಾಯಿತು. ಈ ಕಾಲದಲ್ಲಿ ಕಲೆ ಮತ್ತು ಸಂಸ್ಕೃತಿಗಳು ಇನ್ನಷ್ಟು ಮೆರಗು ಪಡೆದವು. ಬಸಂತಪುರದ ಒಂಬತ್ತು ಅಂತಸ್ತಿನ ಗೋಪುರದಂತಹ ವಿಶಿಷ್ಟ ನೇಪಾಳಿ ವಾಸ್ತುಶೈಲಿಯ ಕಟ್ಟಡಗಳು ಈ ಕಾಲದಲ್ಲಿ ನಿರ್ಮಾಣವಾದವು.

ರಾಣಾ ಆಳ್ವಿಕೆ
1846 ರಲ್ಲಿ ಜಂಗ್ ಬಹದ್ದೂರ್ ರಾಣಾ ಮತ್ತು ಅವರ ಬೆಂಬಲಿಗರು, ನೇಪಾಳದ ಹೆಚ್ಚಿನ ಉನ್ನತ ಅಧಿಕಾರಿಗಳನ್ನು ಕಾಠ್ಮಂಡು ವಿನ ಹನುಮಾನ್ ಧೋಕಾ ದರ್ಬಾರ್ ಬಳಿ ಸಂಭವಿಸಿದ ಹತ್ಯಾಕಾಂಡದಲ್ಲಿ ಕಗ್ಗೊಲೆ ಮಾಡುವುದರೊಂದಿಗೆ ನೇಪಾಳದಲ್ಲಿ ರಾಣಾ ಆಳ್ವಿಕೆ ಆರಂಭವಾಗುತ್ತದೆ. ಇಷ್ಟರಗಲೇ ಭಾರತದಲ್ಲಿ ಬ್ರಿಟಿಷ್ ಆಡಳಿತ ಆರಂಭವಾಗಿರುತ್ತದೆ. ಹೀಗಾಗಿ ರಾಣಾ ಕೂಡ ಬ್ರಿಟಿಷರೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಾರೆ. ರಾಣಾ ಆಳ್ವಿಕೆಯು ನಿರಂಕುಶಾಧಿಕಾರ, ಆರ್ಥಿಕ ಶೋಷಣೆ ಮತ್ತು ಧಾರ್ಮಿಕ ಕಿರುಕುಳದಿಂದ ಗುರುತಿಸಲ್ಪಟ್ಟಿದೆ.

ಇವರ ಕಾಲದಲ್ಲಿ ಕಾಠ್ಮಂಡು ನಗರ ಯುರೋಪಿಯನ್ ವಾಸ್ತುಶಿಲ್ಪದ ಶೈಲಿಯ ಆಧುನಿಕ ನಿರ್ಮಾಣಗಳಿಗೆ ತೆರೆದುಕೊಳ್ಳುತ್ತದೆ. ಕಠ್ಮಂಡು ಕಣಿವೆಯಲ್ಲಿ ಮೊದಲ ಆಧುನಿಕ ವಾಣಿಜ್ಯ ರಸ್ತೆ, ಹೊಸ ರಸ್ತೆ ಕೂಡ ಈ ಯುಗದಲ್ಲಿ ನಿರ್ಮಿಸಲಾಯಿತು. ತ್ರಿಚಂದ್ರ ಕಾಲೇಜು (ನೇಪಾಳದ ಮೊದಲ ಕಾಲೇಜು), ದರ್ಬಾರ್ ಹೈಸ್ಕೂಲ್ (ನೇಪಾಳದ ಮೊದಲ ಆಧುನಿಕ ಶಾಲೆ), ಮತ್ತು ಬಿರ್ ಆಸ್ಪತ್ರೆ (ನೇಪಾಳದ ಮೊದಲ ಆಸ್ಪತ್ರೆ) ಈ ಯುಗದಲ್ಲಿ ಕಠ್ಮಂಡುವಿನಲ್ಲಿ ನಿರ್ಮಿಸಲಾಯಿತು.

ಕಾಠ್ಮಂಡು ಅಷ್ಟ ನದಿಗಳ ನಾಡು. ಭಾಗಮತಿ ಇಲ್ಲಿ ಹರಿಯುವ ಮುಖ್ಯ ನದಿ. ಬಿಷ್ಣುಮತಿ, ಧೋಬಿ ಖೋಲಾ, ಮನೋಹರ ಖೋಲಾ, ಹನುಮಂತೆ ಖೋಲಾ ಮತ್ತು ತುಕುಚಾ ಖೋಲಾ ಮುಂತಾದವು ಅದರ ಉಪನದಿಗಳು, ಕಾಠ್ಮಂಡು ನಗರ ಮತ್ತು
ಸುತ್ತಮುತ್ತಲಿನ ಕಣಿವೆಯು ಪತನಶೀಲ ಮಾನ್ಸೂನ್ ಅರಣ್ಯ ವಲಯದಲ್ಲಿದೆ. ಈ ನದಿ ದಡಗಳು ನೋಡಲು ಬಹು ಸುಂದರ ವಾಗಿದ್ದು, ಪ್ರವಾಸಿಗರ ನೆಚ್ಚಿನ ತಾಣ ಎನಿಸಿವೆ. ಇಲ್ಲಿನ ಜನಸಂಖ್ಯೆಯಲ್ಲಿ 24.7% ಸ್ಥಳೀಯ ನೇವಾರ್ಸ್ ಆಗಿದೆ, ನಂತರದ ಸ್ಥಾನದಲ್ಲಿ 24.5% ರಷ್ಟಿರುವ ಬಹೂನ್ ಇದ್ದಾರೆ. ಇವರನ್ನು ಬೆಟ್ಟದ ಬ್ರಾಹ್ಮಣರು ಎಂದು ಕರೆಯಲಾಗುತ್ತದೆ.

ವಿಶ್ವ ಪರಂಪರೆ ತಾಣ
ಕಾಠ್ಮಂಡುವಿನಲ್ಲಿರುವ ಪ್ರಸಿದ್ಧ ಪಶುಪತಿ ನಾಥ ದೇವಾಲಯವು ತನ್ನ ವಾಸ್ತುವಿನಿಂದ ಹೆಸರಾಗಿದೆ. ಈ ದೇವಾಲಯ ಸಂಕೀರ್ಣ ವನ್ನು 1979 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಯುನೆಸ್ಕೋದ ಕಾಠ್ಮಂಡು ಕಣಿವೆಯ ಹೆಸರಿನ ಏಳು ಸ್ಮಾರಕ ಗುಂಪುಗಳಲ್ಲಿ ಈ ದೇವಾಲಯವು ಒಂದಾಗಿದೆ. ಬುಧನೀಲಕಂಠ ದೇವಾಲಯವು ಕಾಠ್ಮಂಡು ಕಣಿವೆಯ ಉತ್ತರದ ತುದಿಯಲ್ಲಿರುವ ಶಿವಪುರಿ ಬೆಟ್ಟದ ಕೆಳಗೆ ನೆಲೆಗೊಂಡಿದೆ. ಕಾಠ್ಮಂಡು ಕಣಿವೆಯ ಪಶ್ಚಿಮಕ್ಕೆ ಹೊರವಲಯ ದಲ್ಲಿರುವ ಗೌಸಿಂಗ (ಹಸುವಿನ ಕೊಂಬು) ಅಥವಾ ಸೆಮ್ಗು ಬೆಟ್ಟದ ಮೇಲೆ ನೆಲೆಗೊಂಡಿರುವ ಸ್ವಯಂಭೂ ದೇವಾಲಯವು, ಸ್ವಯಂ ಭೂನಾಥನ ಜ್ಯೋತಿ ಸ್ವರೂಪ ಮಂದಿರವಾಗಿದೆ. ದರ್ಬಾರ್ ಚೌಕ ಎಂದರೆ ಅರಮನೆಗಳ ಸ್ಥಳ. ಚೌಕವು ಹಳೆಯ ನಗರದಲ್ಲಿದೆ. ಈ ಸಂಕೀರ್ಣವು ೫೦ ದೇವಾಲಯಗಳನ್ನು ಹೊಂದಿದೆ. ಪ್ರವಾಸಿಗರ ನೆಚ್ಚಿನ ತಾಣ ಇದು.

ಗಾರ್ಡನ್ ಆಫ್ ಡ್ರೀಮ್ಸ್
ಕಾಠ್ಮಂಡುವಿನಲ್ಲಿರುವ ಸುಂದರ ಉದ್ಯಾನವನವಿದು. 1920 ರಲ್ಲಿ ದೊರೆ ಕಿಶೋರ್ ನರ್ಶಿಂಗ್ ನಿರ್ಮಾಣ ಮಾಡಿರುವ ಈ ಉದ್ಯಾ ನವನವನದಲ್ಲಿ ಕೊಳಗಳು, ಅನೇಕ ಮಂಟಪಗಳು, ಭವ್ಯವಾದ ಆಂಫಿಥಿಯೇಟರ್ ಗಳನ್ನು ಕಾಣಬಹುದು.

ವಿಸ್ಮಯಕಾರಿ ವಿದ್ಯಮಾನ
ಕುಮಾರಿ ಎಂಬ ಜೀವಂತ ದೇವಿಯು ನೆಲೆಸಿರುವ ಕುಮಾರಿ ಘರ್, ಕಾಠ್ಮಂಡು ನಗರದ ಮಧ್ಯಭಾಗದಲ್ಲಿರುವ ಅರಮನೆಯಾಗಿದ್ದು,
ದರ್ಬಾರ್ ಚೌಕದ ಸನಿಹದಲ್ಲಿದೆ. ಬಾಲೆಯೊಬ್ಬಳನ್ನು, 32 ಗುಣಗಳ ದೈಹಿಕ ಪರೀಕ್ಷೆಗಳ ನಂತರ ಆಯ್ಕೆ ಮಾಡಿ, ಜೀವಂತ
ದೇವಿಯನ್ನಾಗಿ ಪೂಜಿಸುವ ಪದ್ಧತಿ ನೇಪಾಳದಲ್ಲಿದೆ. ಇಂತಹ ಬಾಲೆಯನ್ನು ಕುಮಾರಿ ಅಥವಾ ಕುಮಾರಿ ದೇವಿ ಎಂದು ಕರೆಯ ಲಾಗುತ್ತದೆ. ಬಾಲೆಯು ಋತುಮತಿಯಾದ ನಂತರ ಮತ್ತೊಬ್ಬ ಬಾಲೆಯನ್ನು ಪಟ್ಟದಲ್ಲಿ ಕೂರಿಸಲಾಗುತ್ತದೆ. ಇಂಥ ದ್ದೊಂದು ಪುರಾತನ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಬಂದುರುವುದು ವಿಸ್ಮಯ. ಜೀವಂತ ದೇವಿಯನ್ನು ಪೂಜಿಸುವ ವಿಶ್ವದ ಅತ್ಯಪರೂಪದ ಉದಾಹರಣೆ ಇಲ್ಲಿದೆ.