Thursday, 12th December 2024

ಗುಲಾಮರ ಮಾರುಕಟ್ಟೆ ಇಂದು ಪ್ರವಾಸಿ ತಾಣ

ಶಶಾಂಕ್‌ ಮುದೂರಿ

ಅಮೆರಿಕದಲ್ಲಿ ಗುಲಾಮಗಿರಿ (ಸ್ಲೇವರಿ)ಯನ್ನು 18.12.1865ರಂದು ನಿಷೇಧಿಸಲಾಗಿದೆ. ಆಫ್ರಿಕಾದಿಂದ ಮತ್ತು ಇತರ ಪ್ರದೇಶಗಳಿಂದ ಜನರನ್ನು ಹಿಡಿದು ತಂದು, ಸಾಕುಪ್ರಾಣಿಗಳ ರೀತಿ ಮಾರಾಟ ಮಾಡಿ, ಆ ಗುಲಾಮರ ಮೇಲೆ ಒಡೆತನ ಮಾಡಿ, ಅದಕ್ಕೂ ಒಂದು ಕಾನೂನಿನ ಚೌಕಟ್ಟನ್ನು ನೀಡಿ, ಅವರನ್ನು ಅಮಾನವೀಯವಾಗಿ ನೋಡಿಕೊಂಡಿದ್ದರ ಕುರಿತು ಇಂದು ಅಮೆರಿಕದ ಮತ್ತು ಯುರೋಪಿನ ಬಿಳಿಯ ಜನರಲ್ಲಿ ಸಾಕಷ್ಟು ಪಶ್ಚಾತ್ತಾಪವಿದೆ. ಆದರೆ, ಅಮೆರಿಕ, ಬ್ರೆಜಿಲ್ ಮೊದಲಾದ ದೇಶಗಳನ್ನು ಕಟ್ಟುವಲ್ಲಿ, ಈ ಮಟ್ಟಕ್ಕೆ ಬೆಳೆಸುವಲ್ಲಿ ಆಫ್ರಿಕಾದಿಂದ ಹಿಡಿದು ತಂದ ಗುಲಾಮರ ಪಾತ್ರ ಹಿರಿದು. 1525 ಮತ್ತು 1865ರ ನಡುವೆ, ಸುಮಾರು 1.2 ಕೋಟಿ ಆಫ್ರಿಕನ್ ಜನರನ್ನು ಆಫ್ರಿಕಾದಿಂದ ಬಲವಂತ ದಿಂದ ಹಿಡಿದು ತಂದು ಹರಾಜಿನ ಮೂಲಕ ಮಾರಾಟ ಮಾಡಲಾಗಿತ್ತು. ಹಡಗಿನಲ್ಲಿ ತುಂಬಿ ತರುವಾಗ, ಒಟ್ಟು ಸುಮಾರು 20 ಲಕ್ಷ ಆಫ್ರಿಕನ್ನರು ಸತ್ತೇ ಹೋಗಿದ್ದರು. ಈ ಮಾನವ ದುರಂತವನ್ನು ಈಗ ನಿಷೇಧಿಸಲಾಗಿದ್ದು, ಆ ಕುರಿತು ಪಶ್ಚಾತ್ತಾಪ ವ್ಯಕ್ತಪಡಿಸಲೆಂದು, 1994ರಲ್ಲಿ ‘ಸ್ಲೇವ್ ರೂಟ್ ಪ್ರಾಜೆಕ್ಟ್‌’ ಎಂಬ ಯೋಜನೆಯನ್ನು ಯುನೆಸ್ಕೋ ಸಂಸ್ಥೆ ಜಾರಿಗೆ ತಂದಿತು. ಕೋಟ್ಯಂತರ ಜನ ಗುಲಾಮರ ನೋವು, ಸಂಕಟ, ಬೇಗುದಿಗೆ ಇಂದಿನ ಜನಾಂಗ ಗೌರವ ಸಲ್ಲಿಸಲು ಅನುವು ಮಾಡಿಕೊಡುವ ಈ ಯೋಜನೆಯು, ಹಲವು ಐತಿಹಾಸಿಕ ಸ್ಥಳಗಳನ್ನು ಗುರುತಿಸಿದೆ ಮತ್ತು ಅಲ್ಲಿಗೆ ಪ್ರವಾಸಿ ಗರು ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿದೆ. ಗುಲಾಮಗಿರಿಯ ಅಮಾನವೀಯ ಘಟನೆಗಳು ನಡೆದ ಈ ಸ್ಥಳಗಳಿಗೆ ಪ್ರವಾಸಿಗರು ಇಂದು ಭೇಟಿ ನೀಡಿ, ಆ ಒಂದು ಕರಾಳ ಅಧ್ಯಾಯವನ್ನು ನೆನಪಿಸಿಕೊಂಡು, ಸಂತ್ರಸ್ಥರಿಗೆ ಗೌರವ ನೀಡುವ ಪರಿಪಾಠವಿದೆ. ಅಂತಹ ಕೆಲವು ಸ್ಥಳಗಳ ಕಿರು ಪರಿಚಯ ಇಲ್ಲಿದೆ.

1 ಮೋಂಟಿಸೆಲ್ಲೋ
ಇದು ಒಂದು ಎಸ್ಟೇಟ್ ಮತ್ತು ಅರಮನೆ. ಇಲ್ಲಿ ಸುಮಾರು 800 ಗುಲಾಮರು ಕೆಲಸ ಮಾಡುತ್ತಿದ್ದರು. ಈ ಎಸ್ಟೇಟ್ ಮತ್ತು   ಇಲ್ಲಿರುವ ಬಂಗಲೆಯ ಒಡೆಯ ಥಾಮಸ್ ಜೆಫರ್‌ಸನ್. ಈತ 1801-1809ರ ಅವಧಿಯಲ್ಲಿ ಅಮೆರಿಕದ ಮೂರನೆಯ ಅಧ್ಯಕ್ಷ

ನಾಗಿದ್ದ. 5,000 ಎಕರೆ ವಿಸ್ತೀರ್ಣವಿದ್ದ ಈ ಎಸ್ಟೇಟ್‌ನಲ್ಲಿ ಈತ ಹೊಗೆಸೊಪ್ಪು, ಗೋಧಿ ಮತ್ತಿತರ ಬೆಳೆಗಳನ್ನು ಬೆಳೆಸುತ್ತಿದ್ದು, 600ಕ್ಕಿಂತ ಹೆಚ್ಚಿನ ಗುಲಾಮರು ಇಲ್ಲಿ ತಮ್ಮ ಶ್ರಮದಾನ ಮಾಡಿದ್ದಾರೆ. ಅರಮನೆಯಂತಹ ಈ ಬಂಗಲೆಯನ್ನು ನಿರ್ಮಿಸಿದ್ದು ಸಹ ಆ ಗುಲಾಮರೇ! ಆ ಗುಲಾಮ ರಲ್ಲಿ ಒಬ್ಬ ಮಹಿಳೆಯು ಥಾಮಸ್ ಜೆಫರ್‌ಸನ್‌ನಿಂದ ಮಕ್ಕಳನ್ನೂ ಪಡೆದಿದ್ದಳು! ಅಮೆರಿಕದ ಅಂದಿನ ಅಧ್ಯಕ್ಷನ ಆ ವೈಭವೋಪೇತ ಬಂಗಲೆ ಮತ್ತು ಎಸ್ಟೇಟ್‌ನ್ನು ಸುಸ್ಥಿತಿಯಲ್ಲಿರಿಸ ಲಾಗಿದ್ದು, ಈಗ ಇದನ್ನು ವಿಶ್ವಪರಂಪರೆ ತಾಣ ಎಂದೂ ಗುರುತಿಸಲಾಗಿದೆ. ಇಲ್ಲಿ ಕೆಲಸ ಮಾಡಿದ ಆ ನೂರಾರು ಗುಲಾಮರ ಗೌರವಾರ್ಥ, ಈ ಸ್ಥಳವನ್ನು ‘ಸ್ಲೇವ್ ರೂಟ್ ಪ್ರಾಜೆಕ್ಟ್‌’ ನ ವ್ಯಾಪ್ತಿಗೆ ಸೇರಿಸಲಾಗಿದೆ.

2 ಕೇಪ್ ಕೋಸ್ಟ್‌ ಕೋಟೆ
ಆಫ್ರಿಕಾದ ಘಾನ ದೇಶದಲ್ಲಿ ಗುಲಾಮರ ವ್ಯಾಪಾರ ನಡೆಸಲು ಸುಮಾರು ನಲವತ್ತು ಕೋಟೆಗಳನ್ನು ಯುರೋಪಿಯನ್ನರು ಮತ್ತು
ವ್ಯಾಪಾರಿಗಳು ಅಭಿವೃದ್ಧಿ ಪಡಿಸಿದ್ದರು. ಆ ಕೋಟೆಗಳ ಹೆಸರೇ ‘ಗುಲಾಮರ ಕೋಟೆ‘ (ಸ್ಲೇವ್ ಕ್ಯಾಸಲ್). ಪಶ್ಚಿಮ ಆಫ್ರಿಕಾದ
ಒಳನಾಡಿನಲ್ಲಿರುವ ಜನರನ್ನು ಒತ್ತಾಯ ಪೂರ್ವಕವಾಗಿ ಹಿಡಿದು, ಪಶುಗಳಂತೆ ಸಾಗಿಸಿ, ಈ ಕೋಟೆಗಳಲ್ಲಿ ಕೂಡಿಹಾಕ ಲಾಗುತ್ತಿತ್ತು. ಅಮೆರಿಕ ಮತ್ತು ಕ್ಯಾರಿಬಿಯನ್‌ನಿಂದ ಹಡಗುಗಳು ಬರುವ ತನಕ ಈ ಕೋಟೆಯಲ್ಲಿರುವ ನೆಲಮಾಳಿಗೆ ಮತ್ತು ಪುಟ್ಟ ಗೂಡುಗಳಂತಹ ಜಾಗದಲ್ಲಿ ಆ ಆಫ್ರಿಕನ್ನರನ್ನು ಕುರಿಗಳಂತೆ ತುಂಬಿಸಿ, ಬಂಧನದಲ್ಲಿಡಲಾಗುತ್ತಿತ್ತು. ಬದುಕುಳಿದವರನ್ನು ಒತ್ತಾಯವಾಗಿ ಹಡಗಿನಲ್ಲಿ ತುಂಬಿಸಿ, ಅಮೆರಿಕಕ್ಕೆ ಸಾಗಿಸಲಾಗುತ್ತಿತ್ತು. ಆ ಪಯಣದಲ್ಲಿ ಬದುಕಿ ಉಳಿದವರನ್ನು, ಅಮೆರಿಕದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಘಾನಾ ದೇಶದ ಅಂತಹ ಒಂದು ಕೋಟೆಯನ್ನು ‘ಸ್ಲೇವ್ ರೂಟ್ ಪ್ರಾಜೆಕ್ಟ್‌’ನ ಅಡಿಯಲ್ಲಿ ಸ್ಮಾರಕದ ರೀತಿ ಅಭಿವೃದ್ಧಿಪಡಿಸಲಾಗಿದ್ದು, ಪ್ರವಾಸಿಗರು ಭೇಟಿ ನೀಡಿ, ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಅಮೆರಿಕದ ಅಧ್ಯಕ್ಷ ಒಬಾಮಾ 2009ರಲ್ಲಿ ಇಲ್ಲಿಗೆ ಭೇಟಿ ನೀಡಿ, ಹಿಂದಿನ ತಲೆಮಾರಿನ ಗುಲಾಮರಿಗೆ ಗೌರವ ಸಲ್ಲಿಸಿದರು.

3ಮಾರಿಶಿಯಸ್‌ನ ದ್ವೀಪ
ಆಫ್ರಿಕಾದಲ್ಲಿ ಸೆರೆಯಾಗಿ, ವ್ಯಾಪಾರಿಗಳ ಕೈಗೆ ಸಿಕ್ಕಿಬಿದ್ದ ಕೆಲವು ಗುಲಾಮರು ಕಷ್ಟಪಟ್ಟು ತಪ್ಪಿಸಿಕೊಳ್ಳುತ್ತಿದ್ದರು. ಅಂತಹ ಕೆಲವರು, ಮಾರಿಷಸ್‌ನ ಹತ್ತಿರವಿರುವ ಲ ಮೋರ್ನೆ ಬ್ರಾಬಂಟ್ ದ್ವೀಪಕ್ಕೆ ಪರಾರಿಯಾಗಿ, ಅಲ್ಲಿನ ಕಲ್ಲುಗಳ ಸಂದಿಯಲ್ಲಿರುವ ಗುಹೆಗಳಂತಹ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ಆಶ್ರಯ ಪಡೆಯುತ್ತಿದ್ದರು. (19ನೆಯ ಶತಮಾನ). ಆ ದ್ವೀಪವನ್ನು ಯುನೆಸ್ಕೋ ಈಗ ‘ಸ್ಲೇವ್ ರೂಟ್ ಪ್ರಾಜೆಕ್ಟ್‌’ ವ್ಯಾಪ್ತಿಗೆ ಒಳಪಡಿಸಿರುವುದರಿಂದ, ಆ ಬರಡು ದ್ವೀಪವು ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ. ಇಲ್ಲಿರುವ ಮ್ಯೂಸಿಯಂನಲ್ಲಿ, ಗುಲಾಮರನ್ನು ಹಿಡಿಯುತ್ತಿದ್ದ ಊರುಗಳು, ಅವರನ್ನು ಮಾರಾಟ ಮಾಡುತ್ತಿದ್ದ ಸ್ಥಳಗಳು, ಅವರಿಗೆ ನೀಡುತ್ತಿದ್ದ ಚಿತ್ರಹಿಂಸೆ ಮತ್ತು ಅವರನ್ನು ರಫ್ತು ಮಾಡುವ ದಾರಿಗಳನ್ನು ಗುರುತಿಸುವ ಕಲಾಕೃತಿಗಳಿವೆ.

4 ಓಲ್ಡ್‌ ಸ್ಲೇವ್ ಮಾರ್ಟ್

ಆಫ್ರಿಕಾದಿಂದ ಹಡಗಿನಲ್ಲಿ ತುಂಬಿಕೊಂಡು ಅಮೆರಿಕಕ್ಕೆ ಬಂದ ಗುಲಾಮರ ಪೈಕಿ ಶೇ.40ರಷ್ಟು ಗುಲಾಮರು, ದಕ್ಷಿಣ ಕೆರೊಲಿನಾದ ಚಾರ್ಲ್‌ಸ್ಟನ್ ಬಂದರಿನ ಮೂಲಕ ಪ್ರವೇಶ ಪಡೆದರು. ಹಡಗಿನ ಸುದೀರ್ಘ ಪಯಣದಲ್ಲಿ ಸಾಯದೇ ಉಳಿದ ಗುಲಾಮರನ್ನು ಇಲ್ಲಿನ ಗೋಡೌನ್ ಮತ್ತು ಗುಲಾಮರ ಮಾರುಕಟ್ಟೆಯಲ್ಲಿ ಕೂಡಿಹಾಕಿ, ಅತಿ ಹೆಚ್ಚು ಬಿಡ್ ಕೂಗುವವರಿಗೆ ಮಾರಾಟ ಮಾಡಲಾಗುತ್ತಿತ್ತು. ಇಲ್ಲೀಗ ‘ಅಂತಾರಾಷ್ಟ್ರೀಯ ಆಫ್ರಿಕನ್ ಅಮೆರಿಕನ್ ಮ್ಯೂಸಿಯಂ’ನ್ನು ಸ್ಥಾಪಿಸಲಾಗುತ್ತಿದೆ.

ಇಲ್ಲಿ ಆಫ್ರಿಕನ್ ಹಿರಿಯರ ಸ್ಮಾರಕವನವನ್ನೂ ಅಭಿವೃದ್ಧಿಪಡಿಸಲಾಗುತ್ತಿದ್ದು, ಗುಲಾಮರ ಸಂತಿಯ ನಕ್ಷೆ ಮತ್ತು ವಿವರಗಳನ್ನು ಸಂಗ್ರಹಿಸಲಾಗಿದೆ. 1859ರಲ್ಲಿ ನಿರ್ಮಾಣಗೊಂಡ, ದಕ್ಷಿಣ ಕೆರೋಲಿನಾದ ಕೊನೆಯ ಹರಾಜು ತಾಣ ಎನಿಸಿದ ‘ಓಲ್ಡ್‌ ಸ್ಲೇವ್ ಮಾರ್ಟ್ ಮ್ಯೂಸಿಯಂ’ನ್ನು ಸಹ ಪ್ರವಾಸಿಗರು ಸಂದರ್ಶಿಸಬಹುದು.