Sunday, 15th December 2024

ಉದ್ಯಾನವನದಲ್ಲಿ ಕ್ರಿಸ್ಮಸ್ ಸಂಭ್ರಮ

ಮಂಜುನಾಥ್‌ ಡಿ.ಎಸ್

ಅಮೆರಿಕ ಸಂಯುಕ್ತ ಸಂಸ್ಥಾನಗಳ ಕ್ಯಾಲಿಫೊರ್ನಿಯ ರಾಜ್ಯದ ಆರೆಂಜ್ ಕೌಂಟಿಯ ಉದ್ಯಾನವನ ಸಾಂತ ಆನ ಪರ್ವತದ ತಪ್ಪಲಿನಲ್ಲಿರುವ ಒಂದು ಸುಂದರ ತಾಣ. ಓಕ್ ಮತ್ತು ಸೈಕಾರ್ಮೋ ಮರಗಳಿಂದ ಕೂಡಿರುವ ಈ ಉದ್ಯಾನವನದಲ್ಲಿ, ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವಂತೆ ಪುಟಾಣಿ ರೈಲು ಇದೆ. ಮಕ್ಕಳಷ್ಟೇ ಅಲ್ಲದೆ ಹಿರಿಯರೂ ಪಯಣಿಸಬಹುದಾದ ಈ ರೈಲು ಇಲ್ಲಿನ ಪ್ರಮುಖ ಆಕರ್ಷಣೆಯೂ ಆಗಿದೆ.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಈ ರೈಲಿಗೆ ‘ಕ್ರಿಸ್ಮಸ್ ಟ್ರೇನ್’ಎಂದು ಹೆಸರಿಟ್ಟು ಅಂದವಾಗಿ ಅಲಂಕರಿಸಿದ್ದರು. ಅಲ್ಲದೆ ಸನಿಹದಲ್ಲಿ ಸಾಂತಾಸ್ ವಿಲೇಜ್ ಎಂಬ ಪುಟ್ಟ ಗ್ರಾಮದ ಮಾದರಿಯನ್ನೂ ನಿರ್ಮಿಸಿದ್ದರು. ಸಿಟಿ ಹಾಲ, ಅಂಚೆ ಕಛೇರಿ, ಹೋಟೆಲ್, ಅಂಗಡಿಗಳು, ಕಮ್ಮಾರನ ಕಮ್ಮಟ, ಅನೇಕ ಬಗೆಯ ಮನರಂಜನಾ ಕ್ರೀಡೆಗಳು, ಕರಕುಶಲ ಮಳಿಗೆ, ಇತ್ಯಾದಿಗಳು ಈ ಗ್ರಾಮ ದಲ್ಲಿದ್ದವು.

ಇವುಗಳೆಲ್ಲವೂ ಕ್ರಿಸ್ಮಸ್ ಸಂಬಂಧಿತ ವಿಷಯಗಳನ್ನಾಧರಿಸಿದ್ದವು. ಸಾಂತಾಸ್ ವಿಲೇಜ್ ನವೆಂಬರ್ ೨೫ರಿಂದ ಡಿಸೆಂಬರ್ ೨೩ರ ವರೆಗೆ ಪ್ರವಾಸಿಗರಿಗೆ ಮುಕ್ತವಾಗಿರುತ್ತದೆ. ಕ್ರಿಸ್ಮಸ್ ರೈಲಿನ ಪಯಣಕ್ಕೆ ಮುಂಗಡವಾಗಿ ಟಿಕೆಟ್ ಖರೀದಿಸಬೇಕಿತ್ತು. ಇದರ ಅರಿವು ಇಲ್ಲದ್ದರಿಂದ ನಮಗೆ ಆ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಪಕ್ಕದಲ್ಲಿಯೇ ಮಕ್ಕಳಿಗೆ ಮೀಸಲಾದ ಕುದುರೆ ಸವಾರಿಯ ಸೌಲಭ್ಯವಿದೆ. ವಿವಿಧ ವರ್ಣಗಳ ಹತ್ತಾರು ಕುದುರೆ ಗಳನ್ನು ಲಾಯದಲ್ಲಿ ಸಾಲಾಗಿ ಕಟ್ಟಿದ್ದರು. ಅವುಗಳ ಆರೈಕೆಯ ಹೊಣೆ ಹೊತ್ತ ಯುವತಿಯರು  ನಗುಮೊಗದಿಂದ ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದರು.

ಪ್ರೀತಿಯಂದ ಅವುಗಳ ಬೆನ್ನು ಸವರುತ್ತಿದ್ದರು. ಅವುಗಳಿಗೆ ನೋವಾಗಬಾರದೆಂದು ಬೆನ್ನಮೇಲೆ ಮೆತ್ತನೆಯ ಹಾಸು ಹೊದಿಸಿ ಅದರ ಮೇಲೆ ಚರ್ಮದ ಆಸನ ಅಳವಡಿಸಿ ಮಕ್ಕಳ ಸವಾರಿಗೆ ಸಿದ್ಧಗೊಳಿಸುತ್ತಿದ್ದರು. ಸವಾರಿ ಮಾಡಲಪೇಕ್ಷಿಸುವ ಮಕ್ಕಳ
ಎತ್ತರ ಮತ್ತು ತೂಕದ ಗರಿಷ್ಠ ಮಿತಿಗಳನ್ನು ದಾಖಲಿಸಿದ್ದರು. ಮಗುವಿನ ಹೆಸರಿನ ಜೊತೆಗೆ ಪೋಷಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಬರೆದು ಹಕ್ಕು ನಿರಾಕರಣ ಪತ್ರದ ಮೇಲೆ ಸಹಿ ಮಾಡಿಸಿ ಕೊಂಡ ನಂತರವಷ್ಟೇ ನಗದು ಹಣ ಪಡೆದು (೮ ಡಾಲರ್) ಪಡೆದು ಟಿಕೆಟ್ ನೀಡುತ್ತಿದ್ದರು. ಮಕ್ಕಳನ್ನು ಕುದುರೆಯ ಮೇಲೆ ಕೂಡಿಸಿ, ನಡುಪಟ್ಟಿ ಕಟ್ಟಿದ ನಂತರ ಪೋಷಕರು ನಿಗದಿತ ಮಾರ್ಗದಲ್ಲಿ ಮೂರು ಸುತ್ತು ಕರೆದುಕೊಂಡು ಹೋಗಬಹುದಿತ್ತು.

ಉದ್ಯಾನದ ನಡುವಿನಲ್ಲಿ ಕೃತಕ ಸರೋವರ ಹಾಗು ಕಿರು ಜಲಪಾತ ಇವೆ. ಸರೋವರದಲ್ಲಿ ದೋಣಿವಿಹಾರ ಮಾಡಲು ಅವಕಾಶವಿದೆ. ಸೈಕಲ್ ಹಾಗು ಕಾಲ್ನಡಿಗೆಯ ಪಥಗಳು, ಆರು ಕ್ರೀಡಾಂಗಣಗಳು, ಉಪಾಹಾರ ಗೃಹ, ಬೆಂಚು-ಮೇಜುಗಳು, ಆಹಾರ ತಯಾರಿಕೆಗಾಗಿ ಒಲೆ, ಶೌಚಾಲಯಗಳು, ವಾಹನ ನಿಲುಗಡೆಗೆ ಸ್ಥಳಾವಕಾಶ ಮುಂತಾದ ಸೌಲಭ್ಯಗಳೂ ಇವೆ. ಅಂತಃ ಕಲಹದ (ಸಿವಿಲ್ ವಾರ್) ಚರಿತ್ರೆಯ ಕುರುಹಾದ ಫಿರಂಗಿಯೊಂದನ್ನು ಈ ಉದ್ಯಾನವನದಲ್ಲಿ ಪ್ರದರ್ಶಿಸಲಾಗಿದೆ.

ಪ್ರಕೃತಿ ಕೇಂದ್ರದಲ್ಲಿ ಉದ್ಯಾನದ ನೈಸರ್ಗಿಕ, ಸಾಂಸ್ಕೃತಿಕ, ಚಾರಿತ್ರಿಕ, ಮತ್ತು ಮನರಂಜನಾ ಸಂಪನ್ಮೂಲಗಳ ಮಾಹಿತಿ ಪಡೆಯಬಹುದಾಗಿದೆ. ಉದ್ಯಾನದ ಸುತ್ತಲೂ ಕುದುರೆ ಸವಾರಿಗೆ ಮೀಸಲಾದ ನಾಲ್ಕು ಮೈಲಿ ಉದ್ದದ ಮಾರ್ಗವಿದೆ. ಈ ಉದ್ಯಾನದಲ್ಲಿ ಅನೇಕ ಜಲಪಕ್ಷಿ ಗಳನ್ನು ಕಾಣಬಹುದು.

ಇಲ್ಲಿ ನವಿಲುಗಳು ನಡೆದಾಡಿದ್ದನ್ನು, ನರ್ತಿಸಿದ್ದನ್ನು ನೋಡಿ  ಲಿದವರಿದ್ದಾರೆ. ಅರ್ವೈನ್ ಉದ್ಯಾನದ ಆವರಣದಲ್ಲಿ ಒಂದು ಚಿಕ್ಕ ಮೃಗಾಲಯವೂ ಇದೆ. ಈ ಉದ್ಯಾನವನ ಬೇಸಗೆಯಲ್ಲಿ ಬೆಳಗಿನ ಆರರಿಂದ ರಾತ್ರಿ ಒಂಬತ್ತರವರೆಗೆ ಹಾಗು ಚಳಿಗಾಲದಲ್ಲಿ ಬೆಳಗಿನ ಆರರಿಂದ ಸಂಜೆ ಆರರವರೆಗೆ ವೀಕ್ಷಣೆಗೆ ಲಭ್ಯ ವಿರುತ್ತದೆ. ವಾಹನ ನಿಲುಗಡೆ ಶುಲ್ಕ ವಾರದ ದಿನಗಳಲ್ಲಿ ಮೂರು ಡಾಲರುಗಳು ಮತ್ತು ವಾರಾಂತ್ಯದಲ್ಲಿ ಐದು ಡಾಲರುಗಳು. ರೈಲು, ಕುದುರೆ ಸವಾರಿ, ಹಾಗು ದೋಣಿವಿಹಾರ ಬೆಳಗಿನ ಹತ್ತು ಘಂಟೆಯ ನಂತರ ಆರಂಭ ವಾಗುತ್ತವೆ. ಇವಕ್ಕೆ ಪ್ರತ್ಯೇಕ ಶುಲ್ಕವಿರುತ್ತದೆ.

ಸೇನಾನೆಲೆಯಾದ ಉದ್ಯಾನವನ!
ಎರಡನೆಯ ಜೇಮ್ಸ್ ಅರ್ವೈನ್ ಕೊಡುಗೆಯಾಗಿ ನೀಡಿದ 477 ಎಕರೆ ಪ್ರದೇಶದಲ್ಲಿ 1897ರಲ್ಲಿ ಈ ಉದ್ಯಾನವನ ಸ್ಥಾಪನೆ ಯಾಯಿತು. ಆಗ ಇದಕ್ಕೆ ಆರೆಂಜ್ ಕೌಂಟಿ ಪಾರ್ಕ್ ಎಂಬ ಹೆಸರಿತ್ತು. ನಂತರ ಕೊಳ ಮತ್ತು ಬೋಟ್ ಹೌಸ್ ಸ್ಥಾಪನೆ ಗೊಂಡಿತು. ಈಗಲೂ ಬಳಕೆಯಲ್ಲಿರುವ ಬೋಟ್ ಹೌಸ್ ಈ ಉದ್ಯಾನದಲ್ಲಿಯ ಅತಿ ಹಳೆಯ ಕಟ್ಟಡ.

೧೯೨೮ರಲ್ಲಿ ಈ ಉದ್ಯಾನ ಅರ್ವೈನ್ ಪಾರ್ಕ್ ಎಂದು ಮರುನಾಮಕರಣಗೊಂಡಿತು. ದ್ವಿತೀಯ ಮಹಾಯುದ್ಧದ ಸಮಯದಲ್ಲಿ
ಉದ್ಯಾನವನವು ಸೇನಾನೆಲೆಯಾಗಿ ಪರಿವರ್ತನೆಗೊಂಡಿತ್ತು. ಕಾಲಾನುಕ್ರಮದಲ್ಲಿ ಮೃಗಾಲಯ ಸೇರ್ಪಡೆಯಾಯಿತು.  1996ರಲ್ಲಿ
ರೈಲು ಕಾರ್ಯಾರಂಭಮಾಡಿತು. ‘ಟಾಪರ್’ ಸೇರಿದಂತೆ ಹಲವು ಚಲನಚಿತ್ರ ಗಳು ಇಲ್ಲಿ ಚಿತ್ರೀಕರಣಗೊಂಡಿವೆ.