Wednesday, 17th July 2024

ವಾಹ್ ಎನ್ನ ಚೆಲುವೆ !

ಎಲ್ಲರ ಮಧ್ಯೆ ಎದ್ದು ಕಾಣುವ ಗಾಂಭಿರ್ಯವೇ ನನಗತಿ ಇಷ್ಟವಾಯ್ತು. ವಾಹ್ ಚೆಲುವೆ ನನ್ನವಳು ಅಂತ ಮನದಲ್ಲೇ ಅಂದುಕೊಂಡಿದ್ದೆ. ಪ್ರತಿಯೊಂದು ಪುಸ್ತಕದಲ್ಲೂ ನಿನ್ನ ಭಾವನೆಯನ್ನು ಪೋಣಿಸಿಟ್ಟಿದ್ದೆ ಮುತ್ತಿನ ಮಾಲೆಯಂತೆ. ನಿನ್ನ ಜ್ಞಾನ ವಿಚಾರಧಾರೆಯೇ ಇರಬೇಕು ನನ್ನ ನಿನ್ನೆಡೆಗೆ ಸೆಳೆದದ್ದು.

ಅಪರ್ಣಾ.ಎ.ಎಸ್.

ನಮ್ಮಿಬ್ಬರ ಭೇಟಿ ತೀರಾ ಆಕಸ್ಮಿಕ. ಅದ ನೆನೆದಾಗ ಮೈಯನೋ ಪುಳಕ. ನೀನು ನನ್ನ ಕಂಡು ಅದೇಕೋ ತುಟಿಯ ಅಂಚ ಮುಗುಳು ನಗೆಯನ್ನು ಹೊಮ್ಮಿಸಿದ ಆ ಕ್ಷಣ ಮರೆಯುವುದು ಹೇಗೆ ಸಾಧ್ಯ! ಅದ್ಯಾಕೋ ಗೊತ್ತಿಲ್ಲ ಒಂದು ವಾರದಿಂದೀಚೆಗೆ ನಿನ್ನ ನೆನಪು ತುಂಬ ಕಾಡುತ್ತಿದೆ. ಒಂದೊಂದು ಕೆಲಸದ ಪ್ರಾರಂಭಕ್ಕೂ ನೀನೇ ಅಂತ್ಯಕ್ಕೂ ನಿನ್ನದೇ ನೆನಪು. ನಿನ್ನ ಮುಖದಲ್ಲಿ ನಗುವಾಗ ಬೀಳುವ ಆ ಡಿಂಪಲ್ -ಅಯ್ಯೋ ಅದ್ಯಾಕೆ ನಿನ್ನ ಈ ಥರ ಹಚ್ಚಿಕೊಂಡಿದೇನೆ ಅಂತ ಕೆಲವೊಮ್ಮೆ ನನಗೇ ಅಚ್ಚರಿ ಯಾಗುತ್ತದೆ.

ಇಷ್ಟಕ್ಕೂ ನಿನ್ನ ಬೆಂಬೆತ್ತಿ ಹುಡುಕ ಹೊರಟವನಿಗೆ ಮೊದಲು ಇದ್ದಿದ್ದು ಅದೊಂದೇ ಗುರಿ ಲೈಬ್ರೆರಿಯಲ್ಲಿ ಕೈಗೆ ಸಿಕ್ಕ ಮುಖ್ಯವಾಗಿ ಲೈಬ್ರೆರಿಯನ್ ಓದು ಎಂದು ಹೇಳಿ ಕೊಟ್ಟ ಪ್ರತಿ ಪುಸ್ತಕದ ಕೊನೆಯ ಪುಟದಲ್ಲಿ ನೀ ಬರೆದ ಟಿಪ್ಪಣಿ ಅದ್ಯಾಕೋ ಅಷ್ಟಿಷ್ಟಲ್ಲ. ಅದೆಷ್ಟೋ ಕುತೂಹಲವನ್ನು ನಿನ್ನೆಡೆಗೆ ಹುಟ್ಟು ಹಾಕಿತ್ತು. ಮುತ್ತು ಪೋಣಿಸಿದಂತೆ ಬರೆಯುವ ನಿನ್ನ ಮುದ್ದಾದ ಕೈಬರಹದ ಜತೆಗೆ ಆ ಒಂದು ಇಮೊಜಿ. ನಿನ್ನ ನಗು ವನ್ನೆಲ್ಲಾ ಅಲ್ಲೇ ಭಟ್ಟಿಇಳಿಸಿದ್ದೆಯೇನೋ ಎಂಬಂತಿತ್ತು. ಹೀಗೆ ಕಂಡ ಪ್ರತಿಯೊಂದು
ಪುಸ್ತಕದಲ್ಲೂ ನಿನ್ನ ಭಾವನೆಗಳೂ, ಅರಿವು ಎಲ್ಲವನ್ನೂ ಪೋಣಿಸಿಟ್ಟಿದ್ದೆ ಮುತ್ತಿನ ಮಾಲೆಯಂತೆ.

ನಿನ್ನ ಆ ಅಕ್ಷರ ಜ್ಞಾನ ವಿಚಾರಧಾರೆಯೇ ಇರಬೇಕು ನನ್ನ ನಿನ್ನೆಡೆಗೆ ಸೆಳೆದದ್ದು. ಇಷ್ಟಕ್ಕೂ ನಿನ್ನ ಬಗೆಗೆ ಈ ಕುತೂಹಲ ಮೂಡಲು ಇನ್ನೊಂದು ಕಾರಣವೂ ಇದೆ ಅದೇ ಪುಸ್ತಕ ಪ್ರೀತಿ. ನಾ ಮುಟ್ಟಿದ ಪ್ರತಿಯೊಂದು ಪುಸ್ತಕದಲ್ಲೂ ಇತ್ತು ನಿನ್ನ ಭಾವನೆಗಳ ಹಸ್ತಾಕ್ಷರ. ಹೀಗಿರುವಾಗ ಇಷ್ಟೇ ಸಾಲದೆ ನಿನ್ನ ಇಷ್ಟಪಡಲು. ಕೇವಲ ಅಕ್ಷರ, ಹಾಗೂ ನಿನ್ನ ಲೈಬ್ರೆರಿಯ ಹಾಜರಿ ಆ ಲೈಬ್ರೆರಿಯನ್‌ನಿಂದ ದೊರೆತ ಅಷ್ಟಿಷ್ಟುಮಾಹಿತಿಯಿಂದ ನಿನ್ನ ಬಗ್ಗೆ ಒಂದಿಷ್ಟು ಕಲ್ಪನಾತ್ಮಕ ಚಿತ್ರಣವನ್ನೂ ಮಾಡಿಟ್ಟಿದೇನೆ.

ನಿನ್ನ ಮನದಲ್ಲೊಂದು ಪ್ರೀತಿಯ ಖಾತೆಯ ತೆರೆಯಲಿಚ್ಚಸುವೆನು ನಾನು. ಖಾತೆಯಲ್ಲೆಲ್ಲ ಬರಿ ಪ್ರೀತಿಯನೆ ತುಂಬಿ ಎಂದೂ ಬರಿದಾಗದಂತೆ ಕಾಪಾಡಬೇಕು ಜಮಾ ಮಾಡಿದ ಪ್ರೀತಿಯ ನನ್ನೆಲ್ಲಾ ಭಾವನೆಗಳ. ಮನಸ್ಸಲ್ಲಂತೂ ಕಾಣದ ನಿನ್ನ ಬಗೆಯದೇ ಹುಚ್ಚು ಕಲ್ಪನೆಗಳು. ಪ್ರತಿ ಬಾರಿ ಪುಸ್ತಕ ಪಡೆದಾಗಲೂ ಅದರಲ್ಲೊಂದು ಘಮ. ಅದು ನಿನ್ನದೇ ಇರಬೇಕು. ಮನದಾಳದಲ್ಲಿ ಇಂದಿಗೂ ಒಂದೊಂದು ಭಾವನೆ ಮೂಡುತಿದೆ. ಹೂಬಳ್ಳಿಯೊಂದು ಅರಿವಿಲ್ಲದೆ ಮನಸ ಹೇಗೆ ಸೆಳೆಯಿತು ಎಂದು.

ಅನೇಕ ಬಾರಿ ಅನಿಸಿದ್ದೂ ಇದೆ ಹೇಗಾದರು ಮಾಡಿ ಈ ಬರವಣಿಗೆಯ ಒಡತಿ ಯಾರು ಎಂದು ತಿಳಿಯಬೇಕು ಎಂದು ಅದಕ್ಕಾ ಗಿಯೇ ಅಂದೊಂದು ದಿನ ಪೂರ್ತಿ ಉಪವಾಸ ಕುಳಿತಾದರೂ ಸರಿ ಎಂದು ದಿನಪೂರ್ತಿ ನಿನ್ನ ಬರುವಿಕೆಗಾಗಿ ಕಾದಿದ್ದು. ಕಾಣದ ನನ್ನ ಮನದ ಪ್ರೀತಿಗಾಗಿ ಜನ್ಮ ಪೂರ್ತಿ ಕಾಯಲು ಸಿದ್ಧನಾದವನಂತೆ ಕಾದಿದೆ. ಹಿರಿಯರು ಯಾರೋ ಹೇಳಿದ್ದರು ಕಾಯುವಿಕೆಯ ಫಲ ಯಾವತ್ತಿದ್ದರೂ ಮಧುರಅಂತ. ನನಗೂ ಹಾಗೇ ಆಯ್ತು.

ನೀ ನಡೆದು ಬಂದಿದ್ದೆ. ಆಗಷ್ಟೇ ಲೈಬ್ರೆರಿ ಬಾಗಿಲು ಮುಚ್ಚುವ ಸನ್ನಾಹದಲ್ಲಿದ್ದರು. ನಾನೂ ನಿರಾಸೆಯಿಂದ ಇವತ್ತೂ ಬರಲಿಲ್ಲ. ಮನದ ತಪಸ್ಸಿಗೆ ಇವತ್ತೂ ಫಲ ದೊರಕಿಲ್ಲ. ಎಂದು ಹೊರಡ ಹೊರಟವನಿಗೆ ‘ರೀ ರೀ ಸ್ವಲ್ಪ ತಡೀರಿ ಸರ್ ನಂದು ಬುಕ್ ಕೊಡೋದಿತ್ತು. ಸಾರಿ ಬರೋದು ಸ್ವಲ್ಪ ಲೇಟ್ ಆಯ್ತು’ ಅನ್ನೋ ಧ್ವನಿ ಕೇಳಿದ್ದೇ ತಿರುಗಿದವನಿಗೆ ಕಂಡಿದ್ದು ತಡೆಯಲಾರದ ಭಾರದ ಜಡೆಯನ್ನು, ಹಾಗೂ ಹೀಗೂ ಸುಧಾರಿಸುತ್ತಾ ಪುಸ್ತಕ ಕೊಡುತ್ತಿದ್ದ ನೀನು.

ಅಂದುಕೊಂಡಷ್ಟು ಅಪ್ಸರೆಯಲ್ಲದಿದ್ದರೂ ಒಂಥರಾ ಚೆಲುವೆ.ಮುಖದಲ್ಲಷ್ಟು ಮೊಡವೆ ಇದ್ದರೂ ಆ ಮೂಗಿನ ನತ್ತಿನ ಕಾಂತಿಗೆ ಮೊಡವೆಯೂ ಡಲ್ ಹೊಡೆದಿತ್ತು. ಇವೆಲ್ಲದರ ಮಧ್ಯೆ ಎದ್ದು ಕಾಣುವ ಗಾಂಭಿರ್ಯ! ವಾಹ್ ಚೆಲುವೆ ನನ್ನವಳು ಅಂತ ಮನ ದಲ್ಲೇ ಅಂದುಕೊಂಡಿದ್ದೆ. ಇಷ್ಟು ಸಾಕು ಈ ಜೀವಕ್ಕೆ ಕಾಣದೇ ಕಾಡುತ್ತಿದ್ದವಳು ಇಂದು ಮನದಾಳಕ್ಕೆ ಲಗ್ಗೆ ಇಟ್ಟಿದ್ದಳು. ಮನಸು ಈಗಲೂ ಹೇಳುತ್ತಿದೆ ಬೇರ್ಯಾವ ಆಸೆಯೂ ಇಲ್ಲ, ನಿನ್ನೊಂದಿಗೆ ಕಳೆಯುವ ಜೀವನವೇ ಸಾಕು.

ನಿನ್ನೊಂದಿಗೆ ಕಳೆವ ಕ್ಷಣಗಳೇ ನನಗೆ ತುಂಬಾ ಮುಖ್ಯ ಅಂತ. ಮನದಷ್ಟೆ ಖುಷಿ, ಸಮಾಧಾನ ಹಾಗೂ ನನ್ನವರು ಅನ್ನುವ
ಭಾವನೆ. ಇಷ್ಟೇ ಸಾಕು ಈ ಜೀವಕೆ. ಅದ್ಯಾಕೋ ನೀನನ್ನ ಜೀವನಕ್ಕೆ ಅಡಿಯಿಟ್ಟಂದಿನಿಂದ ನನಗಾಗಿ ನೀನು.. ನಿನಗಾಗಿ ನಾನು ಅಂತ ನಾನಂತೂ ಫಿಕ್ಸ್ ಆಗಿದ್ದೇನೆ.

ಇನ್ನೇನಿದ್ದರೂ ನಮ್ಮ ಮುಂದಿನ ಜತೆಯಾಗಿರುವ ಜೀವನ. ನನ್ನ ಗೆಳೆಯನೋರ್ವ ಹೇಳುತ್ತಿದ್ದ ಪ್ರೇಮವೆಂದರೆ ಹೀಗೆಯೇ, ಅಂದು ಚೂರು, ಇಂದು ಚೂರು… ದೇಹವೆ ಅದರಾತ್ಮವೆ ಅಂತ ಆದರೆ ಇಂದು ಈ ಮಾತು ನನಗೆ ನಿಜ ಅನಿಸುತ್ತಿದೆ ನಿನ್ನ ನೋಡಿದ ಮೇಲೆ ನಿನ್ನ ಪ್ರೀತಿಸಿದ ಮೇಲೆ ನಿನ್ನ ಪ್ರೀತಿಯಲ್ಲೇ ಜೀವಿಸಿದ ಮೇಲೆ.

error: Content is protected !!