ವೇದಶ್ರೀ ಜಿಎಂ
ಮದುವೆ ಮನೆಯ ತಮಾಷೆಗಳು ಒಂದೇ ಎರಡೇ! ಮದುವೆಯಲ್ಲಿ ಮದುಮಗನ ಕಾಲು ತೊಳೆದ ನೀರನ್ನು ವಧು ಕುಡಿದ ಪ್ರಸಂಗ ಇಡೀ ಮದುವೆ ಮನೆಯಲ್ಲಿ ಗೊಳ್ ಎಂಬ ನಗು ಹುಟ್ಟಿಸಿತು!
ಸುತ್ತ ಮುತ್ತ ಎಲ್ಲಾದರೂ ಮದುವೆಯನ್ನು ನೋಡಿದಾಗ ನನಗೆ ನನ್ನ ಅಕ್ಕನ ಮದುವೆಯ ನೆನಪಾಗುತ್ತದೆ ಮತ್ತು ಆ ಸಮಯದಲ್ಲಿ ನಾನು ಮಾಡಿದ ಕುಚೋದ್ಯ ನೆನಪಾಗುತ್ತದೆ!
ಅಕ್ಕನ ಮದುವೆಯ ಹಿಂದಿನ ದಿನ, ಅವಳ ಕೈಗೆ ಮೆಹಂದಿ ಹಚ್ಚುವಾಗ ತಮಾಷೆಯಲ್ಲಿ ಮಾತುಕತೆಯಾಡುವಾಗ ಅಕ್ಕ ನನಗೆ ಏತಕ್ಕೂ ಬೈದಿದ್ದಳು. ಆಕೆ ಮಾಡಿದ ತಮಾಷೆಯಿಂದ ನನಗೆ ಅವಮಾನವಾಗಿ, ಮನೆಯಲ್ಲಿದ್ದ ಎಲ್ಲರೂ ಗೊಳ್ ಎಂದು ನಕ್ಕಿದ್ದರು.
ಆಗ ರೊಚ್ಚಿಗೆದ್ದ ನಾನು ‘‘ನೀನು ಹೀಗೆ ಮಾತನಾಡಿದರೆ ಮತ್ತು ನನಗೆ ತಮಾಷೆ ಮಾಡಿದರೆ, ನಿನಗೆ ಬಾವನ ಕಾಲ್ ತೊಳೆದ ನೀರನ್ನು ಕುಡಿಸಿ ಬಿಡುತ್ತೇನೆ’’ ಎಂದು ಗದರಿದ್ದೆ. ಆದರೆ ಹಾಗೆ ಮಾಡಬೇಕೆಂಬ ಯಾವ ಇಚ್ಛೆಯೂ ನನಗಿರಲಿಲ್ಲ. ಆದರೆ ಮುಂದೆ ಎದುರಾದ ಸನ್ನಿವೇಶಗಳು ಬಾವನ ಕಾಲು ತೊಳೆಯುವ ಪರಿಸ್ಥಿತಿಯನ್ನು ನನಗೆ ತಂದೊಡ್ಡಿತು. ಕಾಲು ತೊಳೆಯುವ ಸಂದರ್ಭ ದಲ್ಲಿ ಶಾಸ್ತ್ರ ಮಾಡುವವರು ಕರೆದಾಗ, ನನ್ನ ತಂಗಿ ಎಲ್ಲರ ಕಣ್ ತಪ್ಪಿಸಿದ ಅಟ್ಟದಲ್ಲಿ ಅಡಗಿ ಕುಳಿತಳು.
ಎಲ್ಲಿ ಇದ್ದಾಳೆಂದು ಯಾರಿಗೂ ಕಾಣಿಸಲಿಲ್ಲ. ಅಷ್ಟರಲ್ಲಿ ಯಾರೋ ಹೇಳಿದರು, ‘‘ಆ ತಂಗಿ ಇಲ್ಲದಿದ್ದರೆ ಏನು, ಈ ತಂಗಿ ಇದ್ದಾಳೆ’’ ಎಂದು ನನ್ನ ಕಡೆ ಕೈತೋರಿದರು. ಕೊನೆಗೂ ನಾನೇ ಸಿಕ್ಕಿಬಿದ್ದೆ. ನಿಜ ಹೇಳಬೇಕೆಂದರೆ, ಬಾವನ ಕಾಲನ್ನು ತೊಳೆಯಲು ನನಗೆ ಇಷ್ಟವೇ ಇರಲಿಲ್ಲ. ಎಂತಿದ್ದರೂ ತಂಗಿ ಇದ್ದಾಳಲ್ಲಾ ಎಂದು ಆ ತನಕ ಧೈರ್ಯವಾಗಿದ್ದೆ.
ತಂಗಿ ಎಲರ ಕಣ್ತಪ್ಪಿಸಿ, ಅಲ್ಲೆಲ್ಲೋ ಅಡಗಿ ಕುಳಿತಿದ್ದರಿಂದಾಗಿ, ಇದೊಂದು ಶಾಸ್ತ್ರ ನನ್ನ ತಲೆಗೇ ಬಂತು! ಇಷ್ಟವೋ, ಕಷ್ಟವೋ, ತುಸು ಕೋಪದಿಂದಲೆ, ದುಮು ದುಮು ಎನ್ನುತ್ತಾ ಭಾವಿ ಭಾವನ ಕಾಲಿಗೆ ಎರಡು ಚೆಂಬು ನೀರು ಹಾಕಿದೆ. ಹಿರಿಯರೆಲ್ಲರೂ
ಕಾಲು ತೊಳೆದ ನೀರು ತುಂಬಿದ್ದ ಆ ಹಿತ್ತಾಳೆ ತಟ್ಟೆಯನ್ನು ನನ್ನ ಕೈಗೆ ಕೊಟ್ಟು, ಮುಂದಿನ ಶಾಸ್ತ್ರ ಮಾಡಲು ಒಳಗೆ ಹೊರಟು ಹೋದರು. ಆಗ ನನಗೆ ಬಂದ ಸಿಟ್ಟು ಅಷ್ಟಿಷ್ಟಲ್ಲ. ಆ ಕಾಲು ತೊಳೆದ ನೀರನ್ನು ದೊಡ್ಡವರೇ ಯಾರಾದರೂ ಸೂಕ್ತ ವಿಲೇವಾರಿ ಮಾಡಬೇಕಿತ್ತು, ಆದರೆ ಏನೂ ಅರಿಯದ ನನ್ನ ಕೈಗೆ ಕೊಟ್ಟು ಹೋಗಿದ್ದಕ್ಕೆ ಕೋಪ.
ಆ ನೀರನ್ನ ಕೋಪದಿಂದ ತೆಗೆದುಕೊಂಡು ಹೋಗಿ ಮೂಲೆಯಲ್ಲಿ ನೀರನ್ನು ಚೆಲ್ಲಬೇಕೆನ್ನುವಷ್ಟರಲ್ಲಿ, ಥಟ್ ಅಂತ ನೆನಪಿಗೆ ಬಂದದ್ದು, ನಾನು ಈ ಹಿಂದೆ ಅಕ್ಕನೊಂದಿಗೆ ಮಾಡಿದ್ದ ಶಪಥ. ಸಿಕ್ಕಿದ್ದೇ ಚಾನ್ಸ್ ಎಂದು, ಕುಚೋದ್ಯದಿಂದ ಬಾವ ಕಾಲು ತೊಳೆದ ಆ ನೀರನ್ನು ಒಂದು ದೊಡ್ಡ ಸ್ಟೀಲ್ ಲೋಟದಲ್ಲಿ ತುಂಬಿ, ತುಂಟತನದಿಂದ ನಗುತ್ತಾ ಮೆಲ್ಲಗೆ ಅಕ್ಕನ ರೂಮಿಗೆ ಕೊಂಡೊಯ್ದೆ.
ಶಾಸ್ತ್ರ ಸಂಬಂಧವಾಗಿ, ಮದುವೆಯ ವಧುವಾಗಿದ್ದ ಆಕೆ ಹೆಚ್ಚು ಏನೂ ತಿಂದಿಲ್ಲದೇ, ಉಪವಾಸ ಕುಳಿತಿದ್ದಳು. ಸ್ವಂತ ಅಕ್ಕನಿಗೆ ಛೇ ಹೀಗೆ ಮಾಡಬೇಕೆ ಎನಿಸಿದರೂ ಕೂಡ, ಮುಂಚಿನ ದಿನ ಹಠದಿಂದ ಮಾಡಿದ್ದ ನನ್ನ ಶಪಥ ಮಾಡು ಮಾಡು ಎಂದು ನನ್ನನ್ನು ದೂಡುತ್ತಿತ್ತು. ಸರಿ ಎಂದು ನಿರ್ಧರಿಸಿದವಳೇ, ಮೆಲ್ಲಗೆ ಅಕ್ಕನ ಬಳಿ ಸಾರಿ, ‘‘ಏನು ಹೊಟ್ಟೆ ಹಸಿಯುತ್ತಿದೆಯೆ?’’ ಎಂದು ಕೇಳಿದೆ.
‘‘ಹೌದು ಕಣೆ, ಹಸಿವೆ ಸ್ವಲ್ಪ. ಅದಕ್ಕಿಂತಲೂ ಬಾಯಾರಿಕೆ ಆಗುತ್ತಿದೆ.’’ ಎಂದಳು. ಕುಚೋದ್ಯದಿಂದ, ಅವಳ ಬಳಿ ‘‘ಜೋಯಿಸರು ಈ ತೀರ್ಥವನ್ನು ಕುಡಿ ಎಂದಿದ್ದಾರೆ’’ ಎಂದು ಬಾವ ಕಾಲು ತೊಳೆದ ನೀರನ್ನು ಅವಳಿಗೆ ಕೊಟ್ಟುಬಿಟ್ಟೆ. ಪಾಪ ಮೊದಲೇ ತುಂಬಾ
ಸುಸ್ತಾಗಿದ್ದ ಅಕ್ಕ ಹಿಂದೂ ಮುಂದು ವಿಚಾರಿಸದೆ, ಗಟಗಟನೆ ಸದ್ದು ಮಾಡುತ್ತಾ ಒಂದೇ ಗುಕ್ಕಿಗೆ ಆ ನೀರು ಕುಡಿದೇ ಬಿಟ್ಟಳು.
ನನಗೆ ನಗು ತಡೆದುಕೊಳ್ಳಲಾಗಲಿಲ್ಲ. ಅವಳಿಗೆ ಯಾವುದೇ ವಿಚಾರವನ್ನು ಹೇಳದೆ ರೂಮಿನಿಂದ ಹೊರಗೆ ಬಂದು ಜೋರಾಗಿ ನಗುತ್ತಾ ನಿಂತೆ. ‘‘ಯಾಕೆ ನಗ್ತಿದೀಯಾ?’’ ಎಂದು ಅಕ್ಕ ಎರಡೆರಡು ಬಾರಿ ಕೇಳಿದಳು. ಸುಮ್ಮನೆ ಇದ್ದೆ. ಇನ್ನೂ ಒತಾಯ ಮಾಡಿ
ದಾಗ, ಆಮೇಲೆ ಹೇಳ್ತೀನಿ ಎಂದವಳೇ, ಅಲ್ಲಿಂದ ಈಚೆಗೆ ಓಡಿ ಬಂದುಬಿಟ್ಟೆ.
ಮದುವೆಯ ಕಾರ್ಯ ಎಲ್ಲಾ, ಮುಗಿದ ನಂತರ ಎಲ್ಲರೂ ಒಟ್ಟಿಗೆ ಊಟ ಮಾಡುವ ಸಮಯದಲ್ಲಿ ಸತ್ಯ ವಿಚಾರಗಳನ್ನು ಜೋರಾದ ಧ್ವನಿಯಲ್ಲಿ ಎಲ್ಲರಿಗೂ ತಿಳಿಸಿ ಬಿಟ್ಟೆ. ಒಮ್ಮೆಗೇ ಎಲ್ಲರೂ ಗೊಳ್ ಎಂದು ನಕ್ಕುಬಿಟ್ಟರು! ಊಟ ಬಿಟ್ಟು ಎಲ್ಲರೂ ಅಕ್ಕನನ್ನು ಗೇಲಿ ಮಾಡಿದ್ದೇ ಮಾಡಿದ್ದು! ಅಂದಿನ ಇಡೀ ಮದುವೆಯ ಕಾರ್ಯಕ್ರಮದಲ್ಲಿ, ಇದೊಂದು ದೊಡ್ಡ ಪ್ರಾಕ್ಟಿಕಲ್
ಜೋಕ್ ಆಗಿ ಎಲ್ಲರಿಗೂ ಮನರಂಜನೆ ನೀಡಿತು.