Sunday, 15th December 2024

ದೇಹಕ್ಕೆ ಅಳಿವುಂಟು ಗೆಳತಿ ಒಲವಿಗಲ್ಲ…

ಲಕ್ಷ್ಮೀಕಾಂತ್ ಎಲ್.ವಿ.

ಈ ಬದುಕಿನ ಪಯಣ ಒಂಟಿಯಾಗಿ ಸಾಗದೆ ನಮ್ಮ ಒಲವ ಮಧುರ ನೆನಪು ಜೊತೆಯಾಗಿರಲಿ. ಈ ಸೋನೆ ಮಳೆಯು ಮುತ್ತು ಸುರಿಸಿ ನಮ್ಮ ಪ್ರೀತಿ ಅಮಲಲ್ಲಿ ತೇಲಿಬಿಡಲಿ.

ನಗುವೊಂದು ಅರಳುವ ಮುನ್ನವೇ ಬಾಡಿ ನೋವಿನ ಜಾಡು ಉಳಿಸದಂತೆ ಒಲವಿನ ಅಂತರಂಗದ ಚಿಲುಮೆಗೆ ನಾವಿಕ ನಾನಾಗಿ ಸಾಗಿರುವೆ. ಒಂದೊಂದು ಮಾತೂ ಕೂಡ ನೆಪವಿಲ್ಲದೆ ಕಾಡುತ್ತಾ ಬದುಕೆಲ್ಲವೂ ಮೌನವಾದರೂ ಗುನು ಗುವ ಹಾಡಾಗಿದೆ. ಸಿಕ್ಕರೂ ಸಿಗದಂತೆ ಮರೀಚಿಕೆಯಂತೆ ಪುಟಿದಿದ್ದ ಒಲವ ಗೀತೆ ಇಂದು ಮಳೆಬಿಲ್ಲಾಗಿ ಮಾರ್ಪಟ್ಟಿದೆ. ಈ ಮುಗಿಯದ ಮೌನದ ಪಯಣದಲ್ಲಿ ಬದುಕಿನ ಉದ್ದಕ್ಕೂ ಸಿಕ್ಕ ತಿರುವುಗಳಲ್ಲಿ ಎಲ್ಲವೂ ಹೊಸತು ಮತ್ತು ವಿಭಿನ್ನ; ಆದರೂ ನಿನ್ನ ಒಲವಿನ ನೆನಪು ಮಾತ್ರ ಸವಿಯಾಗಿಯೇ ಉಳಿದಿದೆ.

ಕನಸುಗಳೆಲ್ಲ ಬತ್ತಿದರೂ ನೆಪವಾಗಿ ಕಾಡುವ ಈ ಪ್ರೀತಿ ಭಾಷ್ಯ ಮಾತ್ರ ಇನ್ನೂ ಹಸಿಯಾಗಿಯೇ ಇದೆ. ದೇಹಕ್ಕೆ ಸಾವುಂಟು ಗೆಳತಿ, ಒಲವಿಗಲ್ಲ. ಕತ್ತಲೆ ಬದುಕಿನಲ್ಲಿ ಬೆಳದಿಂಗಳಾಗಿ ಬಂದ ಹೂವೊಂದು ಬದುಕಿನ ಅನಂತತೆಯನ್ನು ತೋರಿಸಿಕೊಟ್ಟಿದೆ. ಗೆಳತಿ, ಬಾಂದಳದ ಚೆಲುವಾಗಿ ಪ್ರೀತಿಯ ಸಿರಿಯನ್ನು ನೀಡಿದ ನಿನಗೆ ಈ ಪದಗಳೆಲ್ಲವೂ ಶೂನ್ಯ ಕಣೆ. ಇತ್ತೀಚಿಗೆ ನೆನಪುಗಳ ಹಾವಳಿ ಅತಿಯಾಗಿ ಅರಿವಿಲ್ಲದೆಯೇ ಕಂಬನಿ ಜಾರುತ್ತಿದೆ.

ಜೀವದ ಭಾವ ಬೆಸೆದ ನಮ್ಮ ಅಮರ ಪ್ರೇಮ ಹೃದಯದ ಗೂಡಲ್ಲಿ ಬೆಚ್ಚಗೆ ವಿರಮಿಸು ತ್ತಿದೆ ಕಣೆ. ಈ ಬಾಳ ದೋಣಿಯಲ್ಲಿ ಒಟ್ಟಿಗೆ ಸಾಗಬೇಕೆಂಬ ತೀವ್ರ ಹಂಬಲ ಹೆಚ್ಚಿದೆ. ಒಲವು ಹರಿಸಿದ ಹೊನಲಿಂದು ಪ್ರೇಮದ ರಾಗ ಹಾಡಿದೆ. ಸೋತು ಶರಣಾಗಿರುವೆ ನಿನ್ನ ತೋಳಲಿ ಗೆಳತಿ, ಜಗವಾ ಮರೆಸು ಬಾ ನಿನ್ನ ಪ್ರೇಮದಲ್ಲಿ. ಒಲವಿಲ್ಲದ ಕ್ಷಣವೆಲ್ಲ ಕಸಿವಿಸಿಯಾಗಿ ಮೌನವೇ ಬೆಳೆದು, ಮಾತು ಮುರಿದಂತೆ ನೀನು ಬರುವ ಆಶಯವನ್ನು ಜೀವಂತವಾಗಿಡಿದು ನಾಳೆಯನ್ನು ಯಾಚಿಸಿ, ನಿನಗಾಗಿ ಕಾಯುತ್ತಾ ಮೌನದಲ್ಲೇ ಉಸಿರಿ ಡುವ ಮೌನದ ಭಾಷೆ ಪ್ರೀತಿಗಷ್ಟೇ ಗೊತ್ತು ಕಣೆ.

ಕಳೆದು ಹೋಗದ ಪ್ರೀತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಮೌನದಲ್ಲೂ ಪ್ರೀತಿ ಅರಸುವ ಪ್ರೇಮಿ ಕಣೆ. ಕತ್ತಲ ಬದುಕಿಗೂ ಬೆಳಕ ಚೆಲ್ಲಿದವಳು ನೀನು; ಹೊಳೆವ ತುಟಿ ಗಳಲ್ಲಿ ನಗು ಬೀರಿದ ಮಂದಾರದ ಹೂವು ಕಣೆ ನೀನು. ನನ್ನ ಬಯಲ ಬದುಕಿಗೆ
ನಿನ್ನದೇ ಶೀರ್ಷಿಕೆ ಇಟ್ಟಿರುವೆ. ಉಸಿರಿಗೆ ಉಸಿರ ಬೆರೆಸಿ ಈ ಒಲವನ್ನು ಅಂಗೈಲಿ ಹಿಡಿದು ಕಾಯಬೇಕಿದೆ. ಬಡತನಕ್ಕೆ ಬೇಡಿದವ ಳಲ್ಲ, ಸಿರಿತನಕ್ಕೆ ಕರಗಿದವಳಲ್ಲ; ಯಾವುದನ್ನೂ ಬಯಸದೇ ಒಲವನ್ನು ಧಾರೆಯೆರೆದ ನಿನ್ನ ಪ್ರೀತಿಗೆ ಏನೆಂದು ಕರೆಯಲಿ ಗೆಳತಿ? ಒಲವಿನ ಸೋನೆ ನಿನ್ನ ಒಲವಿನ ನೆನಪಿನಲ್ಲಿ ಸುರಿಯುತ್ತಿರುವ ಮುಂಗಾರು ಸೋನೆಯಲ್ಲಿ ನಿಲ್ಲದೆ ಅರೆಗಳಿಗೆ ನೆನೆಯುತ್ತಲೇ ಇದ್ದೇನೆ. ಭಾವಬಂಧ ಬೆರೆಸಿಬಿಡು, ಒಲವ ಮಳೆಯನ್ನು ಸುರಿದುಬಿಡು.

ಗೆಳತಿ, ನೀ ಜೊತೆಗಿದ್ದರೆ ಸಾಕು ಬಿಗಿದಪ್ಪಿ ಬರುವ ಎದೆಯ ಭಾರವನ್ನೆಲ್ಲಾ ಹೊತ್ತು ನನ್ನೊಡನೆ ನಡೆವ ಬೀದಿ ದೀಪದ ನೆರಳಿ ನೊಳಗೆ ಸಾಗಿಬಿಡುವೆ. ಏಳು ಬೀಳು ತುಂಬಿದ ಬದುಕಿನಲ್ಲಿ ಎಲ್ಲವೂ ಮುಗಿಯದ ಮಾತಲ್ಲಿ ಮೌನವಾಗಿ ನನ್ನೊಡಲನ್ನು ಸೇರಿ ಬಿಟ್ಟಿದೆ ಕಣೆ. ಹುಚ್ಚು ಹಿಡಿಸಿದ ಮೆಚ್ಚು ಪ್ರೀತಿಯು ಸಾವಿರ ವರ್ಷಗಳು ಮುಂದುವರಿಯಲಿ. ಕನಸುಗಳು ಅರಳಿದ ಸಮಯ ಕೈಜಾರಿ ಹೋಗದಿರಲಿ. ಈ ಬದುಕಿನ ಪಯಣ ಒಂಟಿಯಾಗಿ ಸಾಗದೆ ನಮ್ಮ ಒಲವ ಮಧುರ ನೆನಪು ಜೊತೆಯಾಗಿರಲಿ. ಈ ಸೋನೆ
ಮಳೆಯು ಮುತ್ತು ಸುರಿಸಿ ನಮ್ಮ ಪ್ರೀತಿ ಅಮಲಲ್ಲಿ ತೇಲಿಬಿಡಲಿ.

ಅರ್ಥ ತಿಳಿಯದ ಬದುಕಲ್ಲಿ ನಿನ್ನೊಲವಿನ ಬದುಕೇ ಎಲ್ಲವೂ ಆಗಿಬಿಡಲಿ. ಆಸೆಗಳ ಹುಚ್ಚಾಟ ನಡೆದಿರುವ ಈ ಮನಸಿನಲ್ಲಿ ಕನಸುಗಳು ಬಣ್ಣ ಹಚ್ಚಿಬಿಡಲಿ. ನೀ ಮೌನಿಯಾಗದಿರು ಗೆಳತಿ, ಒಲವ ಬಣ್ಣ ಹಸಿಯಾಗಿರುವಾಗ ಈ ಒಲವ ಗೀತೆ ಇನ್ನಷ್ಟು
ಬದುಕನ್ನು ನಮಗಾಗಿ ಮೀಸಲಿಡಲಿ. ಏನಂತೀಯಾ..?