ಮನೆಯ ಜವಾಬ್ದಾರಿ ಹೊತ್ತು ಮನೆಯವರೆಲ್ಲರ ಯೋಗಕ್ಷೇಮ ವಿಚಾರಿಸುವ ಗೃಹಿಣಿಯ ಬಗ್ಗೆ ಗಂಡ-ಮಕ್ಕಳು ಪ್ರೀತಿ ಯಿಂದ ದಿನದಲ್ಲಿ ನಾಲ್ಕು ಒಳ್ಳೆಯ ಮಾತನಾಡಿದರೆ ಅದುವೇ ಅವಳಿಗೆ ದೊಡ್ಡ ಉಡುಗೊರೆ!
ಗಂಡನಿಗೆ ಸ್ನೇಹಿತರ ಜೊತೆ ಸುತ್ತಾಡಾಲು, ಮೋಜು ಮಜಾ ಮಾಡಲು ಸಮಯವೂ ಇದೆ, ಅವಕಾಶವೂ ಇದೆ. ಮಕ್ಕಳಿಗೂ ಕೂಡ ದಿನದಲ್ಲಿ ಬಿಡುವು ದೊರೆಯುತ್ತದೆ. ಆದರೆ ಗೃಹಿಣಿಗೆ ಬಿಡುವು ಏಕೆ ಸಿಗುವುದಿಲ್ಲ? ಅವಳಿಗೂ ದಿನದಲ್ಲಿ ಸ್ವಲ್ಪ ಸಮಯ ಅವಳಿಗಾಗಿ ಮೀಸಲಿಡಲು ಅವಕಾಶ ಬೇಕಲ್ಲವೇ? ಗೃಹಿಣಿ ಕುಟುಂಬದ ಸೂತ್ರಧಾರಿಣಿ.
ಅವಳು ತನ್ನ ಆರೋಗ್ಯದ ಬಗ್ಗೆ ಕಾಳಜಿ ಹರಿಸದೆ ತನ್ನ ಗಂಡ, ಅತ್ತೆ-ಮಾವ ಮತ್ತು ತನ್ನ ಮಕ್ಕಳ ಯೋಗಕ್ಷೇಮದ ದಿನದ ಬಹಳಷ್ಟು ಸಮಯವನ್ನು ಕಳೆದಿರುತ್ತಾಳೆ. ಅವಳು ದಿನವೂ ತನ್ನ ಕುಟುಂಬದ ಏಳಿಗೆಗೋಸ್ಕರ ಬೆಳಿಗ್ಗೆಯಿಂದ ಸಂಜೆ ತನಕ ದುಡಿಯುತ್ತಿರು ತ್ತಾಳೆ. ಅವಳ ಬಗ್ಗೆ ಕಿಂಚಿತ್ ಗಮನಹರಿಸಲು ಅವಳದೇ ಕುಟುಂಬದ ಸದಸ್ಯರಿಗೆ ಸಮಯ ವಾದರೂ ಎಲ್ಲಿದೆ? ಗೃಹಿಣಿಯೊಬ್ಬಳು ತನ್ನ ಸಮಸ್ತ ಕುಟುಂಬದಲ್ಲಿರುವ ಸದಸ್ಯರ ಆಸೆ-ಆಕಾಂಕ್ಷೆಗಳನ್ನು ಪೂರೈಸುತ್ತ ಅವಳ ಇಡೀ ಜೀವನವನ್ನು ತನ್ನ ಪ್ರೀತಿ ಪಾತ್ರರಿಗಾಗಿ ಕಳೆದುಕೊಂಡಿರುತ್ತಾಳೆ.
ಎಲ್ಲಿಯಾದರೂ ಅವಳ ಇಷ್ಟದಂತೆ ನಡೆದುಕೊಂಡರೆ ಅವಳದೇ ಕುಟುಂಬದ ಸದಸ್ಯರ ಕೆಂಗಣ್ಣಿಗೂ ಕೆಲವೊಮ್ಮೆ ಗುರಿಯಾಗ ಬೇಕಾಗುತ್ತದೆ. ಹಾಗಾದರೆ ಅವಳಿಗೂ ತನ್ನದೇ ಆದ ಅಸ್ತಿತ್ವವೇ ಇಲ್ಲವೇ? ಅವಳ ಭಾವನೆಗಳಿಗೂ ಅವಳದೇ ಕುಟುಂಬದಲ್ಲಿ ಬೆಲೆ ಇಲ್ಲದಂತಾಗಲು ಕಾರಣ ಏನು?
ಪತಿಯ ಮನವನರಿತು..
ಪತಿಗೆ ತನ್ನ ಪತ್ನಿ ಯಾವಾಗಲೂ ತನ್ನ ಬಗ್ಗೆ ಸಂಪೂರ್ಣ ಗಮನಹರಿಸಬೇಕು, ಸಣ್ಣಪುಟ್ಟ ಕೆಲಸಕ್ಕೂ ಅವಳೇ ಬೇಕು ಎನ್ನುವ ಭಾವನೆ ಇದ್ದಾಗ ಹೆಂಡತಿಯಾದಳು ಗಂಡನ ಸೇವೆಯ ದಿನಗಳನ್ನು ಕಳೆಯುವಂತಾಗುವುದನ್ನು ಕೆಲವೊಂದು ಕುಟುಂಬಗಳಲ್ಲಿ ನೋಡಬಹುದು. ಯಾವಾಗಲೂ ಗಂಡನ ಬೇಕು ಬೇಡಗಳ ಬಗ್ಗೆ ಗಮನಹರಿಸುವುದರ ಸಮಯ ಕಳೆದುಹೋಗುವಾಗ ಗೃಹಿಣಿ ಯಾದವಳೂ ರೋಸಿ ಹೋಗಿ ‘ನನಗೂ ಬದಕಲು ಸಮಯವನ್ನು ಕೊಡಿ, ನಾನು ನಿಮ್ಮ ಪತ್ನಿಯೇ ಹೊರತು ಗುಲಾಮ ಳಲ್ಲ!’ ಎಂದು ನೊಂದು ನುಡಿಯುವ ಗೃಹಿಣಿಯರೂ ನಮ್ಮ ನಡುವೆ ಇದ್ದಾರೆ.
ಬಿಡುವಿನ ವೇಳೆ
ಗಂಡ-ಮನೆ-ಮಕ್ಕಳು ಎಂದು ಹಗಳಿರುಳು ಅವರುಗಳ ಸೇವೆಯ ದಿನಗಳನ್ನು ಕಳೆಯುತ್ತಿರುವಾಗ ಗೃಹಿಣಿಯಾದವಳು ತನ್ನ ಸಂತೋಷಕ್ಕಾಗಿ ತನಗೆ ಇಷ್ಟವಾದ ಸಂಗೀತವಾಗಲಿ, ತನ್ನ ಕಾಲಘಟ್ಟದ ಸಿನಿಮಾ ಹಾಡುಗಳನ್ನಾಗಲಿ ಟಿವಿಯಲ್ಲಿ ಅಥವಾ ಮೊಬೈಲ್ ಫೋನ್ನಲ್ಲಿ ಕೇಳುತ್ತಿದ್ದರೆ ಇಂದಿನ ಯುಗದ ಮಕ್ಕಳಿಗೆ ಅವಳು ಕೇಳುತ್ತಿರುವ ಅಥವಾ ಟಿವಿಯಲ್ಲಿ ನೋಡುತ್ತಿರುವ ಸಂಗೀತವಾಗಲಿ, ಸಿನಿಮಾ ಆಗಲಿ ಇಷ್ಟವಾಗದೇ ಟೀಕಿಸಿದರೆ ಅವಳಿಗೆ ನೋವು ಹೇಳತೀರದು.
ತಾನೇ ಸಾಕಿ ಸಲುಹಿದ ಮಕ್ಕಳು ತನಗೆ ಅವಮಾನ ಮಾಡುವುದನ್ನು ಕಂಡು ಮನಸ್ಸಿನ ದುಃಖಿಸುತ್ತಾಳೆ. ಮಕ್ಕಳು, ಗಂಡ ಹೊರ ಹೋಗುವುದನ್ನೇ ಅವಳು ಕಾಯುತ್ತಿರುತ್ತಾಳೆ. ಮನೆಯವರೆಲ್ಲರೂ ಹೊರ ಹೋದಾಗ ಸಂತೋಷದಿಂದ ತನ್ನ ಇಷ್ಟದಂತೆ ಇರಲು ಕಲಿಯುತ್ತಾಳೆ. ತಾನೊಬ್ಬಳೇ ಮನೆಯಲ್ಲಿರುವ ಸಂದರ್ಭದಲ್ಲಿ ಅವಳು ಮನಸ್ಸಿನಲ್ಲಿ ಅಂದು ಕೊಳ್ಳುವುದಿದೆ ಈ ದಿನವಾದರೂ ತನಗಾಗಿ ದಿನದಲ್ಲಿ ಒಂದಿಷ್ಟು ಸಮಯ ಸಿಗುತ್ತದೆ. ನನಗಾಗಿ ನಾನು ಜೀವಿಸಲು ಕಲಿಯಬೇಕು ಎಂದುಕೊಂಡು ಸಂತೋಷ ಪಡುತ್ತಾಳೆ.
ಕೆಲವು ಬಾರಿ ತನಗೆ ಇಷ್ಟ ಬಂದಂತೆ ಅಡುಗೆ ತಿಂಡಿಯನ್ನೂ ತಯಾರಿಸುವ ಸ್ವಾತಂತ್ರ್ಯ ಕೂಡ ಅವಳಿಗೆ ಇರುವುದಿಲ್ಲ. ಮನೆ ಯವರೆಲ್ಲರೂ ಇಷ್ಟಪಡುವ ತಿಂಡಿ, ಅಡುಗೆಗಳನ್ನು ತಯಾರಿಸಿ ಅವರೆರ ಸಮಯಕ್ಕೆ ಸರಿಯಾಗಿ ಹೊತ್ತು ಹೊತ್ತಿಗೂ ಉಣ ಬಡಿಸುತ್ತಾ ಅವರ ಸಂತೋಷವೇ ತನ್ನ ಸಂತೋಷ ಅಂದುಕೊಂಡು ನಿಟ್ಟುಸಿರು ಬಿಡುವ ಅದೆಷ್ಟೋ ಗೃಹಿಣಿಯರು ಈಗಲೂ ಇzರೆ. ಅವಳ ಇಷ್ಟ ಕೇಳುವವರೆ ಇಲ್ಲವಾದರೂ, ತನ್ನ ಕುಟುಂಬವೇ ತನಗೆ ಸರ್ವಸ್ವ ಎನ್ನುವ ಗೃಹಿಣಿಯರೂ ಇಂದಿಗೂ ಇದ್ದಾರೆ.
ಪ್ರೀತಿಯ ಮಾತು
ಮನೆಯ ಜವಾಬ್ದಾರಿ ಹೊತ್ತು ಮನೆಯವರೆಲ್ಲರ ಯೋಗಕ್ಷೇಮ ವಿಚಾರಿಸುವ ಗೃಹಿಣಿಯರ ಬಗ್ಗೆ ಗಂಡ-ಮಕ್ಕಳು ಪ್ರೀತಿಯಿಂದ ದಿನದಲ್ಲಿ ನಾಲ್ಕು ಒಳ್ಳೆಯ ಮಾತನಾಡಿದರೆ ಅದುವೇ ಅವಳಿಗೆ ದೊಡ್ಡ ಉಡುಗೊರೆ! ಅವಳು ಉಣ ಬಡಿಸುವ ಊಟ-ತಿಂಡಿಯ ಬಗ್ಗೆ ಒಂದೆರಡು ಒಳ್ಳೆಯ ಮಾತನಾಡಿದರೆ ಅದು ಅವಳ ಮನಸ್ಸಿಗೆ ಟಾನಿಕ್!
ಹೊಗಳಿಕೆ ಎಲ್ಲರಿಗೂ ಬೇಕು. ದಿನಪೂರ್ತಿ ಮನೆಯನ್ನು ಒಪ್ಪ ಓರಣವಾಗಿಟ್ಟುರುವ ಗೃಹಿಣಿಗೆ ಆಗಾಗ ಧನ್ಯವಾದವನ್ನು ಹೇಳಿ. ಅದು ಅವಳಿಗೆ ನಾಳೆಯ ದಿನದ ಮನೆಯ ಜವಾಬ್ದಾರಿಯ ಕೆಲಸಗಳಿಗೆ, ಆಗುಹೋಗುಗಳ ಬಗ್ಗೆ ಉತ್ತೇಜನ ನೀಡಿದಂತಾಗುತ್ತದೆ. ಅವಳ ಕೆಲಸದಲ್ಲಿ ಚಿಕ್ಕ ಪುಟ್ಟ ಸಹಾಯವನ್ನು ಮನೆಯ ಸದಸ್ಯರೆಲ್ಲರೂ ಮಾಡುತ್ತಾ ಬನ್ನಿ. ಆಗ ಅವಳೊಂದಿಗೆ ನೀವು ಕೂಡ ಜತೆಯಾಗಿದ್ದೀರಿ ಎಂದು ಅವಳಲ್ಲಿ ಇನ್ನಷ್ಟು ಆತ್ಮವಿಶ್ವಾಸ ಮೂಡುತ್ತದೆ, ಪ್ರೀತಿ ಬೆಳೆಯುತ್ತದೆ.