ಡಾ. ಕೆ.ಎಸ್. ಪವಿತ್ರ
ಪ್ರೇಮಪತ್ರದ ಸಂಶೋಧನೆ ಬಹು ಕುತೂಹಲಕಾರಿ! ಮನೋವಿಜ್ಞಾನಿಯಾಗಿರುವ ಲೇಖಕಿಯು ಪ್ರೇಮಪತ್ರದ ಅಂತರಂಗವನ್ನು ಇಲ್ಲಿ ಡಿಸೆಕ್ಟ್ ಮಾಡಿದ್ದಾರೆ!
ಸಿನಿಮಾಗಳಲ್ಲಿ ‘ಲಿಖ್ಖೇ ಜೋ ಕಥ್ ತುಝೇ’ ಎಂದೋ, ಹೀರೋಯಿನ್ ಮಲಗಿ ಸ್ಟೈಲಾಗಿ ಕಾಲು ಅಲ್ಲಾಡಿಸುತ್ತಾ, ಗಲ್ಲದ ಮೇಲೆ ಕೈಯಿಟ್ಟು ಬರೆಯುವ ಪ್ರೇಮಪತ್ರ ನೋಡಿಯೋ ನಾನು ‘ಪ್ರೇಮಪತ್ರ’ದ ಬಗ್ಗೆ ಬರೆಯುತ್ತಿಲ್ಲ. ಇ-ಮೇಲ್, ವಾಟ್ಸ್ ಆಪ್ ಏನೇ ಬರಲಿ, ಸಿನಿಮಾದವರು ಮೊಬೈಲ್‌ನಲ್ಲೇ, ಸಾ-
ಕಾಪಿ ಪ್ರೇಮಪತ್ರ, ಎರಡೂ ಕೈಯ ಹೆಬ್ಬೆರಳಿನಲ್ಲಿ ಟೈಪು ಮಾಡಿದರೂ ನೃತ್ಯ ಕಲಾವಿದರಾದ ನಾವು ಮಾತ್ರ ನೃತ್ಯದಲ್ಲಿ ಕುಳಿತು-ನಿಂತೂ ಪತ್ರ ಬರೆಯು ವವರೇ!
ಅತ್ತ ಹಾರ್ಡ್ ಕಾಪಿಯು ಅಲ್ಲದ, ಇತ್ತ ಸಾಫ್ಟ್ ಕಾಪಿಯೂ ಅಲ್ಲದ, ಕಲ್ಪನೆಯಲ್ಲಿ ಮಾತ್ರ ನಿಲ್ಲಬಹುದಾದ ಪ್ರೇಮಪತ್ರಗಳನ್ನು ಬರೆಯುವಲ್ಲಿ ನಾವು ನಿಪುಣರು. ‘ಪ್ರೇಮಪತ್ರ’ದ ಬಗೆಗೆ ನನ್ನ ಜ್ಞಾನ ಮೊದಲು ಆರಂಭ ವಾದದ್ದು ೧೬ರ ವಯಸ್ಸಿಗೂ ಮುನ್ನ! ೧೨ನೇ ವಯಸ್ಸಿನಲ್ಲಿರುವಾಗ ಡಾ. ಪದ್ಮಾ ಸುಬ್ರಹ್ಮಣ್ಯಂರವರ ‘ಕೃಷ್ಣಾಯ ತುಭ್ಯಂ ನಮಃ’ ಎಂಬ ನೃತ್ಯ ಪ್ರಸ್ತುತಿ ನೋಡಿದ್ದೆ. ರುಕ್ಮಿಣಿಯ ಪ್ರೇಮಕಥೆ, ಆಕೆ ಪತ್ರ ಬರೆಯುವ ರೀತಿ, ಆ ಪತ್ರವನ್ನು ಓದಿದ ಕೃಷ್ಣ ಓಡಿ ಬರುವ ಕ್ಷಣ, ಕೃಷ್ಣನ ರಥದ ಶಬ್ದ ಕೇಳಿ ಬೇಗ ಪೂಜೆ ಮುಗಿಸುವ ರುಕ್ಮಿಣಿ ಇವು ‘ಪ್ರೇಮಪತ್ರ’ ವನ್ನು ಆ ಎಳೆಯ ವಯಸ್ಸಿನಲ್ಲಿ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದವು.
ಡಾ. ಪದ್ಮಾ ಅಭಿನಯಿಸುವ ‘ಅಚ್ಯುತ’ ಎಂಬ ಪದವನ್ನು ಹೇಳುವ, ತುಟಿಗಳನ್ನು ಮುಂದೆ ಮಾಡಿ ‘ಚ್ಯು’ ಎಂಬ ಉಚ್ಚಾರಕೆ ಮುತ್ತು ಕೊಟ್ಟಂತೆ ಮಾಡುವ ರೀತಿಯೇ ಎಷ್ಟು ಆಕರ್ಷಕವೆಂದರೆ ‘ಪ್ರೇಮಪತ್ರ’ ಬರೆಯುವಾಗ ಹೀಗೆ ಮಾಡಿಕೊಂಡೇ, ನಾಚಿಕೊಂಡೇ, ಕಲ್ಪಿಸಿಕೊಂಡೇ ಪತ್ರ ಬರೆಯಬೇಕು ಎಂದು ನನಗನ್ನಿಸಿಬಿಟ್ಟಿತ್ತು.
ಪುಸ್ತಕಗಳಲ್ಲಿ ಪ್ರೇಮಪತ್ರ
ಇ-ಮೇಲ್, ವಾಟ್ಸ್ ಆಪ್‌ಗಳ ಈ ಕಾಲದಲ್ಲಿ ಪ್ರೇಮಪತ್ರಗಳು ಏಕೆ ಬೇಕು ಎಂದುಕೊಂಡು ‘ಹಾರ್ಡ್‌ಕಾಪಿ’ ಗಳನ್ನು ನಾವು ‘ಹಾರ್ಟ್‌ಕಾಪಿ’ ಗಳೇನಲ್ಲ ಇವು ಎಂದು ಎಸೆಯುತ್ತಿರುವಾಗಲೇ ಮತ್ತೆ ಪ್ರೇಮಪತ್ರದ ಬಗ್ಗೆ ನಾನು ಗಮನ ಹರಿಸಬೇಕಾಗಿ ಬಂದದ್ದು, ಇತ್ತೀಚೆಗೆ ಓದಿದ ಎರಡು ಪುಸ್ತಕಗಳಲ್ಲಿ ‘ಪ್ರೇಮಪತ್ರ’ ಗಳು ಒಂದು ದಾಖಲೆಯಾಗಿದ್ದದ್ದೇ ಅದಕ್ಕೆ ಕಾರಣ.
ಮೊದಲನೆಯದು, ರಾಜೇಶ್ವರಿ ತೇಜಸ್ವಿಯವರು ಬರೆದ ‘ನನ್ನ ತೇಜಸ್ವಿ’ ಎಂಬ ಪುಸ್ತಕ ಒಂದು ಪ್ರೇಮಕಥೆಯೇ. ಈ ಪ್ರೇಮ ಕಥೆಯಲ್ಲಿ ಸುಮಾರು ೭೦ ಪುಟಗಳಷ್ಟು ತೇಜಸ್ವಿಯವರು ‘ರಾಜೇಶ್’ ಎಂದು ಸಂಬೋಧಿಸಿ ಬರೆದ ಪ್ರೇಮಪತ್ರಗಳೂ ಇವೆ. ರಾಜೇಶ್ವರಿಯವರು ಹೇಳುವುದು ಹೀಗೆ ‘ಅಂದು ತೇಜಸ್ವಿ ಬರೆದಿದ್ದ ಒಂದೊಂದೇ ಕಾಗದವನ್ನು ಈಗ ತೆಗೆದು ಓದುತ್ತಲಿದ್ದರೆ ನಿನ್ನೆ ಬಂದ ಕಾಗದಗಳಂತಿವೆ. ಇವನ್ನು ಈಗ ಓದುವುದು ಒಂದು ಸುಮಧುರ ಸಂತೋಷ. ಆದರೆ ಇನ್ನೆಂದಿಗೂ ಇವರು ಮುಟ್ಟಲಿಕ್ಕೆ ಸಿಗುವುದಿಲ್ಲವೆಂಬ ಯಾತನೆ ಕಣ್ಣೀರು ಬರಿಸುತ್ತೆ. ಇವರ ಒಂದೊಂದು ಕಾಗದವೂ ಅಮೂಲ್ಯ ವಾದದ್ದು.
ಆವತ್ತಿಗೆ ಕಾಗದ ಬಂದಾಗ ಓದಿ, ಹಲವಾರು ಬಾರಿ ಓದಿ, ಮುಂದಿನ ಕಾಗದ ಬರುವವರೆಗೂ ಅದನ್ನೇ ಓದಿಕೊಳ್ಳುತ್ತಿದ್ದೆ. ಈಗ ಒಂದೊಂದೇ ಕಾಗದ ತೆಗೆದು ಓದಿಕೊಳ್ಳುವೆನು’. ಎರಡನೆಯದು ಮನೋವೈದ್ಯ ಪ್ರೊ. ಸಿ.ಆರ್. ಚಂದ್ರಶೇಖರ್‌ರವರ ‘ಮನೋವೈದ್ಯನ ಆತ್ಮಕಥನ’ದ ಮೂರು ಮುಖ್ಯ ಭಾಗಗಳಲ್ಲಿ ಒಂದು ‘ಒಲವಿನ ಬದುಕಿಗೆ ಮುನ್ನುಡಿ’. ಪ್ರೊ .ಸಿ.ಆರ್.ಸಿ. ಮತ್ತು ಅವರ ಪ್ರಿಯಪತ್ನಿ ದಿ. ರಾಜೇಶ್ವರಿ ಯವರ ನಡುವೆ ಪ್ರೀತಿ -ಪತ್ರ-ಸಂದೇಶಗಳ ಸರಮಾಲೆ. ಸಿ.ಆರ್.ಸಿ. ಈ ಪ್ರೇಮಪತ್ರಗಳ ಹಿನ್ನೆಲೆ ಮತ್ತು ಉದ್ದೇಶವನ್ನು ಕುರಿತು ಹೀಗೆನ್ನುತ್ತಾರೆ – ‘ನಮಗಿಬ್ಬರಿಗೆ ಮದುವೆಯಾಗಲು ಒಂದೂವರೆ ವರ್ಷ ಕಾಯ ಬೇಕಾಯಿತು. ಈ ಅವಧಿಯಲ್ಲಿ ನಮ್ಮ ನೇರ ಭೇಟಿಗೆ-ಮಾತುಕತೆಗೆ ‘ಸಂಪ್ರದಾಯಸ್ಥ’ ನಮ್ಮ ಕುಟುಂಬ ಗಳು ಅವಕಾಶ ಕೊಡಲಿಲ್ಲ. ಕೇಳಲು ನಮಗೂ ಸಂಕೋಚ.
ಆಗ ನಮ್ಮ ನೆರವಿಗೆ ಬಂದದ್ದು ಅಂಚೆ ಅಣ್ಣ. ಇದುವರೆಗೆ ವೈಯಕ್ತಿಕವಾಗಿದ್ದ ಈ ಪತ್ರಗಳನ್ನು ಪರಲೋಕದಲ್ಲಿರುವ ರಾಜೇಶ್ವರಿಯ ಅನುಮತಿ ಕೋರಿ ಬಹಿರಂಗಪಡಿಸುತ್ತಿದ್ದೇನೆ. ಪತಿ-ಪತ್ನಿಯರ ನಡುವೆ ಇರಬೇಕಾದ ಆತ್ಮೀಯತೆ-ಪ್ರೀತಿ ಹೇಗೆ ಹುಟ್ಟಿತು, ಬೆಳೆಯಿತು ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ನವವಧೂವರರಿಗೆ ಇದು ದಾರಿದೀಪವಾದೀತು. ಈಗಾಗಲೇ ದಂಪತಿಗಳಾದವರು ತಮ್ಮ ಹಿಂದಿನ ನೆನಪುಗಳಿಗೆ ಮರುಜೀವ ನೀಡ ಬಹುದು!’
ತಲೆಮಾರಿನ ದಾಖಲೆಗಳು
ಇವೆರಡೂ ಪುಸ್ತಕಗಳಲ್ಲಿರುವ ‘ಪ್ರೇಮಪತ್ರ’ಗಳು ಒಂದು ಪ್ರಮುಖ ಕಾಲದ, ತಲೆಮಾರಿನ ದಾಖಲೆಗಳು. ಪ್ರೇಮ ಪತ್ರಗಳು ‘ ’ , ದಾಖಲಿಸುವುದಷ್ಟೇ ಅಲ್ಲ,
ನಿರೀಕ್ಷೆಯನ್ನು, ಬುದ್ಧಿಯ ಹರಿವನ್ನೂ ಬರೆಹದಲ್ಲಿ ಮೂಡಿಸುತ್ತವೆ. ಅಂದರೆ ‘ಹಾರ್ಡ್‌ಕಾಪಿ’ -ಕೇವಲ ‘ಹಾರ್ಡ್ ಕಾಪಿಯಾಗದೆ, ಮಿದುಳಿನ -ಬುದ್ಧಿಯ ಪ್ರತಿಯೂ ಆಗಿರುತ್ತದೆ. ಹಳೆಯ ಪ್ರೇಮಪತ್ರಗಳು ಆಯಾ ಕಾಲದ ಸಮಾಜದತ್ತ ಒಂದು ನೋಟ ನೀಡಿ, ಜೀವನ ಮೌಲ್ಯಗಳು-ವೈಯಕ್ತಿಕ ಅಭಿವ್ಯಕ್ತಿ ಮತ್ತು ಸಂವಹನದ ಶೈಲಿಗಳನ್ನು ನಮಗೆ ತಿಳಿಸುತ್ತವೆ.
ಸಂಶೋಧನೆ
ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪರಿಷತ್ ಗಂಡು-ಹೆಣ್ಣಿನ ನಡುವಣ ಆಕರ್ಷಣೆ -ಪ್ರೀತಿ ಕುರಿತು ಅಧ್ಯಯನಗಳನ್ನು ಮಾಡಲು ಧನಸಹಾಯ-ಅನುದಾನ ನೀಡಿದಾಗ ಸೆನೆಟರ್‌ಗಳು ಗದ್ದಲವೆಬ್ಬಿಸಿದರಂತೆ -‘ಅಮೆರಿಕನ್ನರು ಜೀವನದ ಕೆಲವನ್ನು ನಿಗೂಢವಾಗಿಯೇ ಇಡಬಯಸುತ್ತಾರೆ. ಆ ಕೆಲವ ದರಲ್ಲಿ ಮೊತ್ತಮೊದಲು ಬರುವುದು ಗಂಡು-ಹೆಣ್ಣು ಪ್ರೇಮದಲ್ಲಿ ಏಕೆ ಬೀಳುತ್ತಾರೆ ಎಂಬುದು’. ಆದರೆ ‘ಪ್ರೇಮ’ದ ಬಗ್ಗೆ ಅಧ್ಯಯನ ಮಾಡುವುದು ಪ್ರೇಮಪತ್ರಗಳನ್ನು ಪ್ರಕಟಿಸುವುದು, ಇವೆಲ್ಲವೂ ಸ್ವಾರಸ್ಯಕರವಷ್ಟೇ ಅಲ್ಲ, ಉಪಯುಕ್ತವೂ ಹೌದು. ಏಕೆಂದರೆ ದುಡ್ಡು-ಉದ್ಯೋಗ-ಲೌಕಿಕ ಸಂಪತ್ತು ಎಂಬ ಎಲ್ಲದಕ್ಕಿಂತಲೂ ಜನ ‘ಪ್ರೀತಿ’ ಯನ್ನು ಮೇಲಿರಿಸುತ್ತಾರೆ.
ಪ್ರೇಮಿಗಳ ಸಂಬಂಧದ ಸೂಕ್ಷ್ಮಗಳನ್ನು ಅರಿತರೆ ಹಿಂಸೆ-ವಿಚ್ಛೇದನ-ಸಂಘರ್ಷ-ಒಂಟಿತನಗಳನ್ನು ತಡೆಯುವುದು ಸಾಧ್ಯವಾದೀತು. ಶನಿಗ್ರಹ-ಗುರು ಗ್ರಹದ ಸುತ್ತ ಎಷ್ಟು ಚಂದ್ರಗಳಿವೆ, ನೊಣದ ಡಿಎನ್‌ಎ ಹೇಗಿದೆ ಇವುಗಳನ್ನು ವಿಜ್ಞಾನ ಅಧ್ಯಯನ ಮಾಡುವಷ್ಟೇ ಮುಖ್ಯ ಪ್ರೇಮದ ಅಧ್ಯಯನವೂ.
ಪ್ರೇಮಪತ್ರಗಳು ‘ಟೆಕ್ಸ್ಟ್’ಗಳಾಗಿ, ವಾಯ್ಸ್ ಮೆಸೇಜ್-ವೀಡಿಯೋ ಕಾಲ್‌ಗಳಾಗಿ ಬದಲಾಗಿರಬಹುದು. ಆದರೆ ಪತ್ರದ ಹಿಂದಿನ ಕಾತುರ-ನಿರೀಕ್ಷೆ-ಅವರವರ ಪ್ರೇಮದ ಗಟ್ಟಿತನಕ್ಕನುಗುಣವಾಗಿ ಶ್ರದ್ಧೆ ಇವುಗಳು ಬದಲಾಗಿಲ್ಲ. ಅವು ಸಾರ್ವತ್ರಿಕ-ಸಾರ್ವಕಾಲಿಕ ಸತ್ಯವಾದ ಪ್ರೇಮದೊಂದಿಗೆ ಸಾಗುತ್ತಲೇ ಇರುತ್ತವೆ.
ನೆಪೋಲಿಯನ್ ಬೊನಾಪಾರ್ಟೆಯ ಪ್ರೇಮಪತ್ರ
‘ಕೆಲವು ದಿನಗಳ ಹಿಂದೆ, ನಾನು ನಿನ್ನ ಪ್ರೀತಿಸುತ್ತ ಅಂದುಕೊಂಡೆ. ಆದರೆ ಕೊನೆಯ ಸಲ ನಿನ್ನನ್ನು ನೋಡಿದಾಗ ನನಗನ್ನಿಸಿದ್ದು ನಾನು ನಿನ್ನನ್ನು ಸಾವಿರ ಬಾರಿ ಹೆಚ್ಚು ಪ್ರೀತಿಸುತ್ತಿದ್ದೇನೆ! ದಿನ ಕಳೆದಂತೆ ಪ್ರೀತಿ ಹೆಚ್ಚುತ್ತಿದೆ. ನನಗೆ ನಿನ್ನ ಕೆಲವು ತಪ್ಪು ತೋರಿಸು! ಕಡಿಮೆ ಸುಂದರಳಾಗು, ಸ್ವಲ್ಪ ಅನಾ ಕರ್ಷಕ ಎನಿಸು, ಕಡಿಮೆ ಕರುಣೆ ತೋರಿಸು, ಸ್ವಲ್ಪ ಕೆಟ್ಟವಳಾಗು! ಎಲ್ಲ ಪ್ರೀತಿಯೂ ಒಟ್ಟಿಗೆ ಬಂದುಬಿಡುತ್ತದೆ ಎಂಬುದೆಷ್ಟು ಸುಳ್ಳು. ಪ್ರಕೃತಿಯಲ್ಲಿ
ಪ್ರತಿಯೊಂದಕ್ಕೂ ಬೆಳವಣಿಗೆಯ ಬೇರೆ ಬೇರೆ ಹಂತಗಳಿವೆ. ಹಾಗೆಯೇ ಪ್ರೇಮಕ್ಕೂ!’
ಪ್ರೇಮ ಮಾತ್ರ ಅಕ್ಷರಗಳಲ್ಲಿ
ಅಚ್ಚರಿಯೆಂದರೆ ‘ಕಾಮ’ದ ಬಗೆಗಿನ ಯಾವುದೇ ಉಲ್ಲೇಖಗಳನ್ನು ಪ್ರೇಮಪತ್ರಗಳಲ್ಲಿ ಹುಡುಗ-ಹುಡುಗಿಯರಿಬ್ಬರೂ ಇಷ್ಟಪಡದಿದ್ದನ್ನು ಅಧ್ಯಯನಗಳು
ತೋರಿಸಿವೆ. ಬಹುಶಃ ಪ್ರೇಮ ಮನಸ್ಸಿನಿಂದ ದೇಹಕ್ಕೆ ಇಳಿಯುವ ಹೊತ್ತಿಗೆ ಪ್ರೇಮಿ ಜೊತೆಗೇ ಇರುವುದ ರಿಂದ ಪ್ರೇಮಪತ್ರಗಳ ಅವಶ್ಯಕತೆಯೇ
ಇರುವು ದಿಲ್ಲವೇನೋ!
ಮೂರು ಅಂಶಗಳ ಪ್ರೇಮಪತ್ರ
ಪ್ರೇಮ ಸಿದ್ಧಾಂತದ ಮನೋವಿಜ್ಞಾನ ಆದರ್ಶ ಪ್ರೇಮಪತ್ರ ಹೇಗಿರಬೇಕೆಂಬುದನ್ನು ವಿವರಿಸುತ್ತದೆ. ಪ್ರೇಮಪತ್ರ ಮೂರು ಮುಖ್ಯ ಅಂಶಗಳ ಮೂಲಕ ತನ್ನ ಪ್ರೇಮವನ್ನು ಪ್ರೇಮಿಗೆ ತಿಳಿಸಬೇಕಂತೆ. ಇಂಟಿಮೆಸಿ-ಅನ್ಯೋನ್ಯತೆ, ಪ್ಯಾಷನ್-ಉತ್ಕಟ ಪ್ರೇಮ, ಕಮಿಂಟ್ ಮೆಂಟ್-ಶ್ರದ್ಧೆ. ಅನ್ಯೋನ್ಯತೆ ದೈಹಿಕ ಪ್ರೀತಿಗೆ, ಉತ್ಕಟತೆ ಪ್ರೇರಣೆಗೆ, ಶ್ರದ್ಧೆ ತನ್ನ ಪ್ರೇಮ ಬಹುಕಾಲ ನಿಲ್ಲುವಂತಹದ್ದು ಎಂದು ಖಚಿತ ಪಡಿಸಲು. ಮನೋವಿಜ್ಞಾನಿಗಳು ಬೇರೆ ಬೇರೆ ಪ್ರೇಮಪತ್ರ ಗಳನ್ನು ಬರೆಸಿ, ಬರೆಸಿ ಪ್ರಯೋಗಿಸಿಯೂ ನೋಡಿದ್ದಾರೆ.
ಕೆಲವು ಒಂದೇ ಅಂಶ ಹೊಂದಿದ್ದರೆ, ಇನ್ನು ಕೆಲವು ಎರಡು ಅಂಶಗಳನ್ನು ಹೊಂದಿದ್ದವು. ಅಲ್ಲಲ್ಲಿ ಮಾತ್ರ ತೇಜಸ್ವಿ, ಸಿ.ಆರ್.ಸಿ. ಜೋಡಿಗಳಂತೆ ‘ಸೂಪರ್ ಲವ್‌ಲೆಟರ್’ ಅಂದರೆ ಮೂರೂ ಅಂಶಗಳನ್ನು ಹೊಂದಿದ್ದವು. ದೀರ್ಘಕಾಲ ಒಟ್ಟಿಗಿರುವುದನ್ನು ಸೂಚಿಸುವ ‘ನಾವಿಬ್ಬರೂ ಜೀವನಪೂರ್ತಿ ಸಂತೋಷ ವಾಗಿ ಒಟ್ಟಿಗೆ ಇರುವವೆಂದು ನನಗೆ ಗೊತ್ತು’, ‘ನೀನಿರದ ಜಗತ್ತನ್ನು ನನಗೆ ಊಹಿಸಿಕೊಳ್ಳಲೇ ಸಾಧ್ಯವಿಲ್ಲ’ ಇಂತಹ ಭಾವನೆಗಳು ಪ್ರೇಮ ‘ಗಟ್ಟಿ’ ಎಂಬು ದನ್ನು ಸೂಚಿಸುತ್ತವೆಯಂತೆ. ಅದೇ ‘ನನಗೆ ನಿನ್ನ ಜೊತೆಗಿರುವುದೆಂದರೆ ಸಂತೋಷ! ಆದರೆ ಮುಂದೇನಾಗುವುದೋ ಯಾರಿಗೆ ಗೊತ್ತು?!’ ಎಂಬಂತಹ ವಾಕ್ಯಗಳು ಪ್ರೇಮ ಆಗಲೇ ಅಲ್ಲಾಡುತ್ತಿದೆ ಎಂಬುದನ್ನು ತೋರಿಸುತ್ತವೆ.