Thursday, 12th December 2024

ಭವಿಷ್ಯದ ಪ್ರೇಮಿಗಳಿಗೆ ಲವ್‌ ಟಿಪ್ಸ್

ಕಿಲಾರಾ ವಿಕ್ರಂ ಹೆಗಡೆ

ಪ್ರೀತಿ ಹುಟ್ಟಿದಾಗ, ಅದನ್ನು ಪ್ರೊಪೋಸ್ ಮಾಡುವುದು, ಪ್ರೀತಿಯ ಗಿಡವನ್ನು ಬೆಳೆಸುವುದು ಹೇಗೆ? ಒಂದಿಷ್ಟು ಟಿಪ್ಸ್ ಇಲ್ಲಿವೆ!

ಲವ್ ಅಥವಾ ‘ಲವ್ ಲೆಟರ್’ ಪದವನ್ನ ಕೇಳೋಕೇನೋ ಮಜವಾಗಿದೆ. ಆದರೆ, ಒಂದು ಲವ್ ಲೆಟರ್‌ನ ಹಿಂದೆ ಅದೆಷ್ಟು ಕಷ್ಟ ಅಡಗಿರುತ್ತೆ ಅನ್ನುವುದರ ಜ್ಞಾನ ಇರಬೇಕು. ಸುಮ್ಮನೆ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತೇನೆ ಅಂದ್ರೆ ಸಾಯೋವರೆಗೆ ಲವ್ ಲೆಟರ್ ಬರೆಯೋದು ಅಥವಾ ಲವ್ ಮಾಡೋದು ಅಸಾಧ್ಯವಾದ ಮಾತು.

ತುಂಬಾ ಹಿಂದಿನ ಕಾಲದಲ್ಲಲ್ಲ, ಈಗೊಂದು ಐದಾರು ವರ್ಷಗಳ ಭೂತವನ್ನೊಮ್ಮೆ ನೋಡಿ. ಜಗತ್ತು ಅದೆಷ್ಟೇ ಮುಂದುವರೆಯುತ್ತಿದ್ದರೂ ಈಗಿನಷ್ಟು ಮೊಬೈಲ್ ಉಪಯೋಗಿಸುವವರು ಇರಲಿಲ್ಲ. ಹಾಗಂತ ಎಲ್ಲರೂ ಲವ್ ಲೆಟರ್ ನಲ್ಲೇ ಪ್ರೀತಿ ವಿನಿಮಯವನ್ನೂ ಮಾಡಿಕೊಳ್ಳುತ್ತಿರಲಿಲ್ಲ. ಈಗ ಲವ್ ಲೆಟರ್ ಬೇಕಂತೇನಿಲ್ಲ ಬಿಡಿ ಹೆಚ್ಚಿನವರ ಲವ್ ಟೈಂ ಪಾಸ್ ಆಗುತ್ತಿದೆ. ಪ್ರೀತಿ ಪದ ಪ್ರಣಯಕ್ಕೆ ಮಾತ್ರವೇ ಸೀಮಿತವಾಗಿ ಓಯೋ ರೂಂನಲ್ಲಿ ಕೊನೆಯಾಗುತ್ತಿದೆ.

ಆದ್ರೆ ಶುಭ್ರವಾಗಿ ಪ್ರೀತಿ ಮಾಡುವವರಿಗೆ ಸಮಸ್ಯೆ ಒಂದಲ್ಲಾ ಎರಡಲ್ಲಾ… ಎದುರಿಗೆ ನಿಂತು ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೂ ಆಗದೆ, ಸ್ನೇಹಿತೆ ಯನ್ನೂ ಮಾಡಿಕೊಳ್ಳಲಾರದೆ ಮನಸ್ಸು ತೊಳಲಾಟದಲ್ಲೇ ಸ್ವಿಮಿಂಗ್ ಮಾಡುತ್ತಿರುತ್ತೆ. ಅವಳ ಸ್ನೇಹಿತೆಯ ಬಳಿ ಲೆಟರ್ ನೀಡಿ ಆಕೆಯೇನಾದರೂ ರಿಜೆಕ್ಟ್ ಮಾಡಿದಳು ಅಂದ್ರೆ ಅಲ್ಲಿಗೆ ಮರ್ಯಾದೆ ಮೂರಾಬಟ್ಟೆ ಆಗಿಹೋದರೆ ಅನ್ನುವ ದೂರಾಲೋಚನೆ ಇನ್ನೊಂದೆಡೆ. ಆದರೂ ಲವ್ ಮಾಡು ತ್ತೇನೆ ಅಂತ ದೃಢವಾಗಿದ್ದರೆ ಹೀಗೆ ಮಾಡಿ/ಮಾಡಬೇಡಿ.

ಆದರೂ ಲವ್ ಮಾಡುತ್ತೇನೆ ಅಂತ ದೃಢವಾಗಿದ್ದರೆ ಹೀಗೆ ಮಾಡಿ/ಮಾಡಬೇಡಿ. ೧ ನಿಮಗೆ ಯಾರ ಮೇಲೆ ಲವ್ ಆಗಿದೆ ಅಂತ ಅಪ್ಪೀ ತಪ್ಪೀನೂ ನಿಮ್ಮ ಸ್ನೇಹಿತರ ಬಳಿ ಹೇಳುವ ದುಸ್ಸಾಹಸಕ್ಕೆ ಹೋಗಬೇಡಿ; ಇದು ನಿಮಗೆ ತುಂಬಾ ಕಂಟಕವಾಗಬಹುದು. ನೀವು ಆಕೆಗೆ ಹೇಳುವ ಮೊದಲೇ ನಿಮ್ಮ ಸ್ನೇಹಿತರು ಆಕೆಗೆ ಸುದ್ದಿ ಮುಟ್ಟಿಸುವ ಪ್ರಸಂಗ ಎದುರಾಗಬಹುದು.

೨ ಆಕೆಯ ಮನೆಯವರ ಕುರಿತು ಅರ್ಧಂಬರ್ಧವಾದರೂ ಅರಿತು ಪ್ರೀತಿ ಮಾಡಿ. ಆಕೆಗೆ ಅಣ್ಣನಿದ್ದಾನೆ ಅಥವಾ ಪೋಲೀಸ್ ತಂದೆಯಿದ್ದಾನೆ ಅಂದರೆ ನಿಮ್ಮ ಕಥೆ ಮುಗೀತು. ನಿಮ್ಮ ಊರಿನಲ್ಲಿ ಮುಂದಿನ ದಿನಗಳಲ್ಲಿ ಯಾರನ್ನೂ ಪ್ರೀತಿ ಮಾಡಲಾಗದ ಪರಿಸ್ಥಿತಿಯೂ ನಿಮ್ಮದಾಗಬಹುದು. ೩ ಆಕೆಗೆ ಯಾರಾದರೂ ಆಪ್ತ ಸ್ನೇಹಿತೆಯಿದ್ದರೆ ಮೊದಲು ಆಕೆಯ ನಂಬರ್ ಪಡೆದುಕೊಳ್ಳುವುದು ಮತ್ತು ಆಕೆಯ ಸ್ನೇಹವನ್ನು ಭದ್ರಪಡಿಸಿಕೊಳ್ಳುವುದು ಕಡ್ಡಾಯ. ನೀವು ಈಕೆಯ ಜತೆ ಏನೇ ಹೇಳಿಕೊಂಡರೂ ಅದು ನೇರವಾಗಿ ನಿಮ್ಮ ಪ್ರಿಯತಮೆಯಾಗುವವಳ ಕಿವಿಗೆ ತಾಗುತ್ತವೆ. ಹಾಗಾಗಿ ನಿಮ್ಮ ಮನಸ್ಸಿನ ಮಾತುಗಳನ್ನು ತಲುಪಿಸುವ ‘ಕಬೂತರ್’ ಆಕೆಯ ಸ್ನೇಹಿತೆಯೇ ಆಗಿರುತ್ತಾಳೆ.

೪ಸಿಂಪಥಿ ಗಿಟ್ಟಿಸಿಕೊಳ್ಳುವುದು ಈಸ್ ಡೇಂಜರಸ್. ನೀವು ಪ್ರಪೋಸ್ ಮಡುವ ಮುನ್ನ ಆಕೆಯನ್ನು ಸ್ನೇಹಿತೆಯನ್ನಾಗಿಸಿಕೊಳ್ಳಬೇಕು ಅನ್ನುವ ನೆಪದಲ್ಲಿ ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳಬೇಡಿ. ಅದು ಸಿಂಪಥಿ ಮಾತ್ರವೇ ಆಗಿ ಪ್ರೀತಿಗೆ ಜಾಗವೇ ಇಲ್ಲದಂತೆ ಆಗಬಹುದು. ೫ ಊಟಾ ಯ್ತಾ? ತಿಂಡಿ ಆಯ್ತಾ? ಮೆಸೇಜ್‌ಗಳು ಬೇಡ. ನೀವೇನಾದರೂ ಇಂತಹಾ ಮೇಸೇಜುಗಳನ ಕಳಿಸುತ್ತಿದ್ದರೆ ‘ಏ.. ಈ ವಯ್ಯ ಬರೀ ಬಕೆಟ್ಟು’ ಅಂತ ನಿಮ್ಮನ್ನು ಅಲಕ್ಷ್ಯ ಮಾಡಿಬಿಡಬಹುದು. ಮೊದಲು ‘ಹೇಗಿದ್ದೀಯಾ? ಅರಾಮಾ? ಮನೆಲ್ಲೆಲ್ಲಾ ಹೇಗಿದ್ದಾರೆ? ನಿಮ್ಮ ಮನೆ ನಾಯಿಯ ಹೆಸರೇನು? ನಿಮ್ಮ ಮನೆಯ ಬೆಕ್ಕು ತುಂಬಾ ಚೆನ್ನಾಗಿದೆ, ನಿಮ್ಮ ಸ್ನೇಹಿತೆ ಪೋಟೋ ಕಳಿಸಿದ್ರು, ಗಾರ್ಡನ್ ನಲ್ಲಿ ಹೂಗಳು ತುಂಬಾ ಚೆನ್ನಾಗಿ ಬೆಳೆದಿವೆ’ ಅಂತೆಲ್ಲಾ ಮೆಸೇಜ್ ಮಾಡುವುದು ಕಡ್ಡಾಯ.

೬ ಯಾವುದೇ ಕಾರಣಕ್ಕೂ ಸುಳ್ಳನ್ನು ಹೇಳಬೇಡಿ. ನೀವೇನಾದರೂ ‘ನಾನೇ ವಿವೇಕಾನಂದ’ ಅಂತ ಪೋಸ್ ಕೊಟ್ಟು ಆಕೆಯ ನಂತರ ನೀವೇನಾದರೂ ಟೀ ಅಂಗಡಿಯಲ್ಲಿ ಕುಳಿತಿದ್ದಾಗ, ನಿಮ್ಮ ನತದೃಷ್ಟಕ್ಕೆ ಆಕೆಯೇನಾದರೂ ಅದೇ ದಾರಿಯಲ್ಲೇ ಬಂದಳು ಅಂದ್ರೆ ನಿಮ್ಮ ಕಥೆ ಮುಗೀತು. ಲವ್ ಬಿಡಿ,  ಫ್ರೆಂಡ್‌ಷಿಪ್ ಪಟ್ಟಾನೂ ಕ್ಯಾನ್ಸಲ್.

೭ ಆತುರ ಬೇಡ: ಮೇಲಿನ ಎಲ್ಲಾ ವಿಚಾರಗಳನ್ನೂ ಸರಿಯಾಗಿ ಪಾಲನೆ ಮಾಡಿ ಆದಮೇಲೆ, ಆಕೆಗೂ ಈ ಹುಡುಗ ನನ್ನವನು ಅನ್ನುವ ಫೀಲಿಂಗ್ ಬರುವುದಕ್ಕೆ ಪ್ರಾರಂಭವಾಗುತ್ತದೆ. ಆಗ ಯಾವುದೇ ಕಾರಣಕ್ಕೂ ಕಾಲು ಜಾರಬೇಡಿ. ನೀವೇ ಮೊದಲು ಹೋಗಿ ಪ್ರಪೋಸ್ ಮಾಡಿದ್ರೆ ಮುಂದಿನ ದಿನಗಳಲ್ಲಿ ನೀವು ಆಕೆಯ ಕೈಗೊಂಬೆಯಾಗಬಹುದು. ಉದಾಹರಣೆಗೆ, ನಿಮಗೆ ಯಾವುದೋ ಕಾರಣಕ್ಕೆ ಆಕೆಯ ಮೇಲೆ ಸಿಟ್ಟು ಬಂದಿದೆ ಅಂತ ಇಟ್ಟುಕೊಳ್ಳಿ. ಆಗ ಆಕೆ ನಿಮಗೆ ಹೇಳಬಹುದು, ‘ನಾನೇನ್ ನಿನ್ ಕಾಲಿಗೆ ಬಂದು ಬಿದ್ದಿದ್ನಾ? ಪ್ರಪೋಸ್ ಮಾಡಿದ್ದು ನೀನೇ ತಾನೆ?’ ಇಂತಹಾ ಮಾತುಗಳು ಬ್ರೇಕಪ್‌ಗಿಂತಲೂ ನೋವಾಗಬಹುದು. ಹಾಗಾಗಿ ಆಕೆಯೇ ನಿಮ್ಮನ್ನು ಪ್ರಪೋಸ್ ಮಾಡುವಂತೆ ಮಾಡಿಕೊಳ್ಳಿ.

೮ ನಟನೆ ಒಮ್ಮೊಮ್ಮೆ ಒಳ್ಳೆಯದು. ಆಕೆ ನಿಮ್ಮ ಜತೆಯಲ್ಲಿದ್ದಾಗ ಇನ್ನೊಬ್ಬಳಿಗೆ ಹತ್ತಿರವಾಗುತ್ತಿರುವಂತೆ ನಟಿಸಿ ಅಷ್ಟೆ. ಆದರೆ ಯಾವುದೇ ಕಾರಣಕ್ಕೂ ಇವಳು ಇಲ್ಲದಿರುವ ಸಮಯದಲ್ಲಿ ಇನ್ನೊಬ್ಬಳ ಜತೆ ಸುತ್ತಾಡಬೇಡಿ. ನಂತರ ಆಕೆಯೇ ನಿಮ್ಮನ್ನು ಪ್ರಪೋಸ್ ಮಾಡುವುದರಲ್ಲಿ ನಿಸ್ಸಂಶಯ. ನಂತರ ಚೆನ್ನಾಗಿ ನೋಡಿಕೊಳ್ಳುವ ಸಾಮರ್ಥ್ಯ ನಿಮ್ಮದು. ಕಡಿಮೆ ಖರ್ಚು ಮಾಡುವ ಹುಡುಗಿಯನ್ನು ಹುಡುಕಿಕೊಂಡರೆ ನಿಮ್ಮ ಜೇಬಿಗೂ ಉತ್ತಮ. ನಂತರ ನೀವು ಆಕೆಗೆ ಏನೇ ಬರೆದರೂ ಅದು ಲವ್‌ಲೆಟರ್ ಆಗಿಯೇ ಉಳಿಯುತ್ತೆ.

ಕಿವಿಮಾತು: ನೀವು ಲವ್‌ಲೆಟರ್ ಬರೆಯುವಾಗ ಇನ್ನೊಬ್ಬರ ಸಹಾಯವನ್ನು ಅಥವಾ ಯಾವುದೋ ಸಿನೆಮಾ ಸ್ಟೈಲನ್ನು ಕಾಪಿ ಮಾಡಬೇಡಿ.