Sunday, 15th December 2024

ನಿನ್ನ ಆ ಮಾಯದ ನೆನಪುಗಳು

ಲಕ್ಷ್ಮೀಕಾಂತ್ ಎಲ್.ವಿ

ಬದುಕು ನಡೆದಿದೆ ಆ ಒಂದು ಎಳೆ ಹಿಡಿದು. ಮನದ ತುಂಬಾ ನಿನ್ನ ನೆನಪುಗಳ ಸೇತುವೆ. ಅದೇ ನನಗೀಗ ಜೀವನಾಧಾರ.

ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ… ಈ ಸಾಲುಗಳು ನಿಜಕ್ಕೂ ಪ್ರಸ್ತುತವೆನಿಸುತ್ತಿವೆ ಗೆಳತಿ. ನಾಳಿನ ಬಗ್ಗೆ ಹೊಸ ಹೊಸ ಕನಸುಗಳನ್ನು ಕಂಡಿದ್ದ ನಮ್ಮಿಬ್ಬರ ಬದುಕಿನಲ್ಲಿ ವಿರಹದ ಸುನಾಮಿಯೊಂದು ಬಂದು ಪ್ರೀತಿಯ ಗೋಡೆಯನ್ನು ಕೆಡವಿ ಕೇವಲ ಮೌನವನ್ನು ಉಳಿಸಿದೆ. ಈ ನಡುವೆ ನಮ್ಮಿಬ್ಬರ ಒಡನಾಟದ ಸವಿಗಳಿಗೆಗಳು ನೆನಪುಗಳಾಗಿ ಕಾಡುತ್ತಿವೆ. ಆ ನೆನಪುಗಳ ನಡುವೆ ನೀ ಆಡಿದ ಮಾತೊಂದು ಈಗಲೂ ಕಾಡುತ್ತಿದೆ. ‘ಬದುಕಿನುದ್ದಕ್ಕೂ ಹೆಜ್ಜೆಗೆ ಹೆಜ್ಜೆಯಾಗಿ ಹಿಡಿದ ಕೈ ಬಿಡಲಾರೆ’ ಎಂದಿದ್ದ ಮಾತುಗಳಿಗೆ ಅದ್ಯಾವ ಕಾಕದೃಷ್ಟಿ ತಾಕಿತ್ತೋ ಏನೋ ಆಸೆಗಳೆಲ್ಲ ನೆರವೇರುವ ಮುನ್ನವೇ ನೀ ಅಗಲಿದ್ದೆ. ಈಗ ನನ್ನೆಲ್ಲ ಹಗಲುಗಳು ಬರೀ ದುಃಖದ ನೆನಪುಗಳಾಗಿವೆ.

ನಮ್ಮಿಬ್ಬರ ಮನಸು ಒಂದೇ ಆಗಿದ್ದರೂ ಕೂಡ ನಾವು ಕಂಡಂತಹ ಕನಸುಗಳು ಮಾತ್ರ ಸಾವಿರಾರು. ಆದರೆ ಈಡೇರುವ ಮುನ್ನವೇ ನೋವಿನ ಸುನಾಮಿಗೆ ಸಿಲುಕಿದ ಕನಸುಗಳು ನುಚ್ಚು ನೂರಾದವು. ಈಗೇನಿದ್ದರೂ ಬರೀ ವಿರಹದ ನೋವಷ್ಟೆ. ನಮ್ಮ ನಾಳೆಯ ಕುರಿತು ಅದೆಷ್ಟೇ ಚರ್ಚಿಸಿ, ಚಿಂತಿಸಿ ಹನಿಗಾಗಿ ಬಾಯ್ತೆರದ ಭೂಮಿಯಂತೆ ಕಾದ ದಿನಗಳನ್ನು ಲೆಕ್ಕವಿಡಲು ಸಾಧ್ಯವಿಲ್ಲ ಗೆಳತಿ. ಯಾವತ್ತೂ ಬಾರದ ನಾಳೆಯ ಬಗ್ಗೆ ಅಷ್ಟೇನು ಕುತೂಹಲವಿರದಿದ್ದರೂ ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬಿ ಈ ಕ್ಷಣ ಅಷ್ಟೇ ಮುಖ್ಯ ಎಂದು ನಂಬಿದ್ದವನ ಬದುಕಲ್ಲಿ ಇದೀಗ ಎಲ್ಲವೂ ವಿರಾಮವಷ್ಟೆ. ಕೇವಲ ನೆನಪು ನನ್ನ ದೃಷ್ಟಿಪರದೆಯಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳಬೇಕಿದ್ದ ನಿನ್ನನ್ನು ನೆನಪಿನ ಲೋಕದಲ್ಲಿ ಮಾತ್ರ ನೆನಪಾಗಿಸಿಕೊಳ್ಳುವಂತಾಗಿದೆ.

ಈಗೀಗಲಂತೂ ದುಃಖದ ನದಿಯಾಗಿ ಹರಿದು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಜೊತೆಯಾಗಬೇಕಿದ್ದವಳ ನೆನಪು ಸೂತಕದ ಛಾಯೆಯನ್ನು ಮೂಡಿಸುತ್ತಿದೆ. ನೆನಪುಗಳೆಲ್ಲ ವ್ಯಸನಗಳಾಗುತ್ತಿವೆ. ಅದಕ್ಕೆ ಇರಬಹು ದೇನೋ ನಿನ್ನ ನೆನಪುಗಳಲ್ಲೇ ನಾನು ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಇಲ್ಲಿ ಹಂಚುವ ಪ್ರಯತ್ನ ಮಾಡಿದ್ದೇನೆ.

ನೋವಿನ ಹಗಲುಗಳೆಲ್ಲವೂ ಇಳಿಸಂಜೆಯ ಹೊತ್ತಿಗೆ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುತ್ತವೆ. ಮನಸ್ಸು ಆಕಾಶದ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯನ್ನು ಕೇಳಬಯಸುತ್ತಿದೆ. ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ಕಡೆಗೆ ಸಂಚಾರ ಹೊರಡುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲ್ಲಿ ಬದುಕನ್ನು ನೆನಪುಗಳನ್ನಾಗಿ ಮಾಡಿ ಕೊಂಡವ ನಾನು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣಬೇಕೆನ್ನುವ ಬೆಳಕಿನ ಜನರ ನಡುವೆ ನೆನಪುಗಳಿಗೆ ಜಾಗವಿಲ್ಲ. ಕತ್ತಲನ್ನು ಕತ್ತಲಾ ಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುವವರ ನಡುವೆ ನಾನೊಬ್ಬ ವಿಚಿತ್ರವಾಗಿದ್ದೇನೆ. ಅಲ್ಲಷ್ಟೇ ನಾನು ನಾನಾಗಿಯಲ್ಲದೆ ಹೆಚ್ಚು ಬದುಕುವುದು.

ನಿನ್ನೊಂದಿಗೆ ಕಳೆದ ಕ್ಷಣಗಳ ವ್ಯಾಮೋಹದಲ್ಲಿ ನೀನಿಲ್ಲದೆ ನನ್ನೆಲ್ಲ ಬದುಕು ಸೂತಕದ ಸಂತೆಯೊಳಗೆ ನಿಂತಂತಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ. ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಳೆಯುವ ಮಾಪಕ ನೀನೆಂಬುದನ್ನು ಕೂಗಿ ಕೂಗಿ ಹೇಳುತ್ತಿದ್ದೆ. ಆದರೆ ಇದ್ಯಾವುದನ್ನೂ ಪೂರ್ಣಗೊಳಿಸದೆ ಹೊರಟು ಹೋದೆ. ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ನನ್ನೆಲ್ಲ ಹಗಲಿನ ನೆನಪುಗಳನ್ನು ದುಃಖದ ಮಡುವಿನಲ್ಲಿ ತೇಲಿ ಬಿಟ್ಟರೂ ಕೂಡ ಅದೇಕೋ ಏನೋ ಮತ್ತೆ ಮತ್ತೆ ನಿನ್ನ ದನಿಯೊಂದು ಪಕ್ಕದಲ್ಲೇ ಕೇಳಿದಂತೆ ಅನಿಸಿ ಕಾಡ ತೊಡಗುತ್ತಿದೆ.

ಇದೀಗ ಮಾಯದ ನೆನಪುಗಳ ನಡುವೆ ನಿನ್ನ ನೆನಪಿನೊಂದಿಗೆ ಮಾತಾಡುತ್ತಾ ಕುಳಿತಿದ್ದೇನೆ ಕಾಯುತ್ತಾ, ಅರಸುತ್ತಾ!