Sunday, 13th October 2024

ವಿವಾಹೋತ್ತರದ ಅಮ್ಮನ ಸುಗ್ರೀವಾಜ್ಞೆ

ಬೈಂದೂರು ಚಂದ್ರಶೇಖರ ನಾವಡ

ಬದುಕಿನ ದಾರಿಯಲ್ಲಿ ವಿವಾಹ ನಿಸ್ಸಂದೇಹವಾಗಿಯೂ ಒಂದು ಮೈಲುಗಲ್ಲು. ವಿಶೇಷವಾಗಿ ತಾಯಿ ಮತ್ತು ಮಗನಿಗೆ ಇದೊಂದು ಪರೀಕ್ಷೆಯ ಕಾಲ. ಬದಲಾದ ಸನ್ನಿವೇಶದಲ್ಲಿ ಇಬ್ಬರಿಗೂ ಸಂಬಂಧದ ಪುನರಾವಲೋಕನ ಮಾಡಬೇಕಾದ ನಿರ್ಣಾಯಕ ಕಾಲ ಘಟ್ಟ.

ಅದುವರೆಗೆ ಮಗನ ಮೇಲೆ ಏಕಸ್ವಾಮ್ಯ ಅಧಿಕಾರ ಹೊಂದಿದ್ದ ತಾಯಿಗೆ ಮಗನ ಬದುಕಿನಲ್ಲಿ ಹೊಸದಾಗಿ ಎಂಟ್ರಿ ಪಡೆದ ಮಹಿಳೆಗೆ ಒಂದಷ್ಟು ಸ್ಥಾನ ಕೊಡಬೇಕಾದ, ಸಾಮರಸ್ಯ ಕಾಪಾಡಿಕೊಳ್ಳಬೇಕಾದ ಜಾಣ್ಮೆ, ಹೊಣೆಗಾರಿಕೆ ತೋರಬೇಕಾದ ಸಮಯ.
ಮಗನಿಗೋ.. ಅಮ್ಮ…. ನಿನ್ನ ತೋಳಿನಲ್ಲಿ ಕಂದ ನಾನು ಎನ್ನುವ ಭಾವ. ಹೌದು… ಊರಿಗೆ ಅರಸನಾದರೂ ತಾಯಿಗೆ ಮಾತ್ರ ಆತ ಮಗನೇ.

ಎಷ್ಟೋ ಮನೆಗಳಲ್ಲಿ ವೃದ್ಧ ತಾಯಂದಿರು ನರೆಗೂದಲಿನ ಮಗನನ್ನೂ ಮಾಣಿ ಎಂದು ಕರೆಯುವುದಿದೆ. ಹಾಗೆ ಕರೆಸಿಕೊಳ್ಳಲು ಇಷ್ಟಪಡುವವರೂ ಅನೇಕರು! ಆ ಕಂದ ದೊಡ್ಡವನಾದರೂ ತಾಯಿಯ ಮಮತೆ ಮಾತ್ರ ಕಿಂಚಿತ್ತೂ ಕಡಿಮೆಯಾಗದು. ನಾನೇ ಹೆತ್ತು ಹೊತ್ತ ಕೂಸು ಎನ್ನುವ ಜಗದಗಲ ಪ್ರೀತಿ ಮಾತೆಯದು. ಚಿಗುರು ಮೀಸೆ ಮೂಡಿ ದಾಗಿನಿಂದಲೇ ಯಾರಾದರೂ ಮಾಣಿ ಎಂದು ಕರೆದರೆ ಕಣ್ಣು ಕೆಂಪು ಮಾಡುತ್ತಿದ್ದ ನನಗೋ ೬೦-೭೦ ರ ವಯಸ್ಕ ಮಗನನ್ನು ವೃದ್ಧ ತಾಯಿ ಇನ್ನೂ ‘ಮಾಣಿ’ ಎಂದು ಕರೆಯುತ್ತಿರುವುದು ಸೋಜಿಗದ ವಿಷಯವಾಗಿತ್ತು!

ಚಿಕ್ಕಂದಿನಿಂದಲೂ ಮನೆಗೆ ಬಂದೊಡನೆ ಹೊರಗಿನ ವಿದ್ಯಮಾನಗಳನ್ನು ಚಾಚೂ ತಪ್ಪದೇ ವರದಿ ಅಮ್ಮನಿಗೆ ಒಪ್ಪಿಸದೇ ನನಗಂತೂ ಸಮಾಧಾನವಿರುತ್ತಿರಲಿಲ್ಲ. ಶಾಲೆ, ಪೇಟೆ, ಮದುವೆ, ಸಮಾರಂಭ ಹೀಗೆ ಮನೆಯಿಂದ ಹೊರಗೆ ಎಲ್ಲೇ ಹೋಗಿ
ಬಂದರೂ ಅಲ್ಲಿಯ ವಿಷಯ, ವಿವರ ಒಪ್ಪಿಸುವ ಹಾಗೂ ಅದೆಲ್ಲವನ್ನೂ ಪ್ರೀತಿಯಿಂದ ಕೇಳುವ ಅಮ್ಮ ನನ್ನ ಪಾಲಿನ ದೊಡ್ಡ ಆಸರೆ. ಸಂತೋಷ, ಬೇಸರ ಹೀಗೆ ಮನದ ಎಲ್ಲಾ ದುಗುಡ-ದುಮ್ಮಾನಗಳನ್ನು ಆಕೆಯ ಸಮ್ಮುಖದಲ್ಲಿ ತೋಡಿಕೊಂಡರೆ
ಅದೇನೋ ನಿರಾಳತೆ, ಸಮಾಧಾನ!

ಸೈನ್ಯ ಸೇವೆಯ ನಿಮಿತ್ತ ಅಮ್ಮನಿಂದ ದೂರ ಹೋಗಬೇಕಾಯಿತಾದರೂ ಆರೋ-ಮೂರೋ ತಿಂಗಳ ನಂತರ ಮನೆಗೆ ಬಂದು ಲಗೇಜು ಇಡುತ್ತಲೇ ತಿಂಗಳುಗಟ್ಟಲೆಯಿಂದ ಅಮ್ಮನಿಗೆ ಒಪ್ಪಿಸದ (ಆಗ ಮೊಬೈಲ್ ಇರಲಿಲ್ಲ) ಪೆಂಡಿಂಗ್ ವರದಿಯನ್ನು ಒಪ್ಪಿಸಲು ಶುರು ಮಾಡುತ್ತಿದ್ದೆ. ಅದರ ಆಳ ಅಗಲವೂ ಅಷ್ಟೇ ವಿಶಾಲವಾಗಿರುತ್ತಿತ್ತು. ಕೆಲವೊಮ್ಮೆ ರಾತ್ರಿ ಬಹಳ ಹೊತ್ತು ಸಂವಾದ ಸಾಗುತ್ತಿತ್ತು. ಬಹಳ ಹೊತ್ತಿನ ನಂತರ ಅಮ್ಮನೇ ಸಾಕು ಮಾರಾಯ ನಾಳೆ ಹೇಳುವೆಯಂತೆ ಎನ್ನಬೇಕಾಗುತ್ತಿತ್ತು.

ಇಂತಿರುವಾಗ ನಮ್ಮಿಬ್ಬರ ನಡುವೆ ನನ್ನವಳ ಆಗಮನವನ್ನು ಅಷ್ಟೇನೂ ವಿದ್ಯಾವಂತಳಲ್ಲದ, ಆದರೆ ಬದುಕಿನ ಕಷ್ಟ-ಸುಖದ ಪಾಠ ಕಲಿತ ಅಪಾರ ಅನುಭವಸ್ಥೆ ಅಮ್ಮ ಎಷ್ಟು ಗಾಂಭೀರ್ಯ- ಘನತೆಯಿಂದ ಸ್ವೀಕರಿಸಿದ್ದಳು! ಮದುವೆಯವರೆಗೂ ದೂರದ ಊರಲ್ಲಿ ನನ್ನ ಊಟೋಪಚಾರದ ಕುರಿತಂತೆ ಆತಂಕಿತಳಾಗಿದ್ದ ಅಮ್ಮ ಈಗ ಕಾಳಜಿ ಮಾಡುವ ಇನ್ನೊಬ್ಬಳು ಬಂದಿದ್ದಾಳೆ ಎಂಬ ನಿರ್ಲಿಪ್ತತೆಯ ಭಾವ ತೋರಿದಳು. ತನ್ನ ಭಾರ ಕಡಿಮೆಯಾಯಿತೆಂದು ನಿಟ್ಟುಸಿರು ಬಿಟ್ಟಂತೆ ಕಂಡಳು.

ಮದುವೆಯಾದ ಒಂದೆರಡು ದಿನದಲ್ಲೇ ಆಕೆ ಬದಲಾವಣೆಗೆ ತೆರೆದುಕೊಂಡಿದ್ದಳು. ದಿನನಿತ್ಯದ ನನ್ನ ವರದಿ ಕೇಳುವ ಜವಾಬ್ದಾರಿ ಯಿಂದ ತಾನಾಗಿಯೇ ರಿಲೀವ್ ಆಗಿದ್ದಳು! ಹೇ ಮಾರಾಯ ಇಷ್ಟು ದಿನ ನಿನ್ನ ವರದಿ ನಾನು ಕೇಳಿದ್ದಾಯ್ತು… ಇನ್ನೇನಿದ್ದರೂ ನಿನ್ನ ವರದಿ ನಿನ್ನ ಹೆಂಡತಿಗೇ ಸಲ್ಲಿಸಿಬಿಡು. ಆಕೆ ಏನಂದುಕೊಂಡಾಳು? ಎಂದು ಅಪ್ಪಣೆ ಕೊಡಿಸಿಬಿಟ್ಟಳು. ಅಮ್ಮ ಅಂದು ಹೊರಡಿಸಿದ ಸುಗ್ರೀವಾಜ್ಞೆ ಇಂದಿಗೂ ಜಾರಿಯಲ್ಲಿದೆ. ಈಗಲೂ ನಾನು ಒಪ್ಪಿಸುತ್ತಿರುವೆ ವರದಿ ನನ್ನ ಶ್ರೀಮತಿಗೆ !