ಶರಣ್ಯ ಕೋಲ್ಚಾರ್
ಎನ್ನ ಹೃದಯದ ಗೂಡು ಖಾಲಿಯಾಗಿದೆ ನಿನ್ನದೇ ತಾವು ಇದು, ನೀನಿದ್ದ ಮನೆ ಇದು ಅದೇಕೆ ತೊರೆದೆಯೋ ಏನೋ
ಮರಳಿ ಬಾ ಈಗ ನನ್ನೆದೆಯ ಗೂಡಿಗೆ
ಮನಸ್ಸಿನ ಭಾವನೆಗಳಲ್ಲಿ ತಂಗಾಳಿ ಬೀಸಿದಾಗ ಪ್ರೀತಿಯ ಪದಗಳು ಪುಟಿದೆದ್ದು ಗಾಳಿಗೆ ಮೈಯೊಡ್ಡುವುದು ಸಹಜ. ಇನಿಯನಿಗೊಲವಿನ ಪತ್ರದೊಂದಿಗೆ ಶುರುವಾದ ಮಧುರ ಪ್ರೀತಿಯ ಉಳಿಸಿಕೊಳ್ಳುವ ಬಗೆಯನ್ನು ತಿಳಿಸಿ ಹೇಳಿದ್ದೆ. ಆದರೆ ನನ್ನ ಪ್ರೀತಿಯ ದೀಪ ಆ ತಂಗಾಳಿಯ ಆರಿ ಬತ್ತಿ ತಣ್ಣಗಾಗುತ್ತಿದೆ. ವಿರಹ….ಮನದಲ್ಲಿ ಭದ್ರವಾಗಿ ಅವಿತ ಪ್ರೀತಿಯ ಪಂಜರದ ಪಕ್ಷಿಯ ಕದ ತೆರೆದು ಹಾರಲು ಬಿಟ್ಟೆ. ಅದು ಹಟವೋ, ಮೊಂಡುತನವೋ ನನ್ನದೇ ಸರಿ ಎನ್ನುವ ಹುಟ್ಟುತನವೋ – ಆ ಕ್ಷಣಕ್ಕೆ ನಾ ಗೆದ್ದು ಬಿಟ್ಟೆ.
ಮನದಲ್ಲಿ ನಾನೇ ಗೆದ್ದೇನೆಂಬ ಅಹಂ. ಪ್ರೀತಿಯ ಮುರಿದುಕೊಂಡ ಆ ಜೀವ ನೊಂದಿತು. ಇದುವರೆಗೂ ಬಹಳ ಸಹಿಸಿಕೊಂಡಿತ್ತು. ತಾಳ್ಮೆಗೂ ಮಿತಿ ಇಲ್ಲವೇ. ನನ್ನ ಉದ್ದಟತನಕ್ಕೆ ಏನೋ ಪ್ರೀತಿ ಕಪ್ಪಾಯಿತು. ಸಂದೇಶಗಳಲ್ಲಿ ನೋವಿನ ಕಣ್ಣೀರು ಹರಿದು ಮರೆಯಾ ಯಿತು. ಕಲ್ಲಾಗಿದ್ದೇ ಆ ಕ್ಷಣ. ತಲೆ ಕೆಡಿಸಿಕೊಳ್ಳದೆ. ಸುಮ್ಮನಿದ್ದೆ. ನನ್ನನ್ನೇ ಸಮರ್ಥಿಸಿ ಕೊಂಡಿದ್ದೆ.
ರೋಧಿಸಿದ ಮನ
ನಡು ರಾತ್ರಿ ಮೂಕವಾಗಿ ರೋದಿಸಿತ್ತು ಆ ಒಲವಿನ ಮನ. ನನ್ನ ಮೇಲಿಟ್ಟ ಅಪಾರ ಪ್ರೀತಿಯ ಎಳೆ ಎಳೆಯಾಗಿಯೇ ವಿವರಿಸಿತ್ತು.
ನನಗಾಗಿ ಮಿಡಿದ ಮೀಸಲಾಗಿಸಿದ ಸಮಯದ ಮೌಲ್ಯವ ಅರ್ಥೈಸಿತ್ತು. ಬದಲಾಗಲಾರೆ, ನಿನ್ನನೆಂದೂ ದೂರ ಮಾಡಿಕೊಳ್ಳಲಾರೆ ಎಂದ ಆ ಜೀವ ಬಹು ನೊಂದು ದೂರವಾಯಿತು. ನನಗೇನೂ ಅನ್ನಿಸಲೇ ಇಲ್ಲ. ಪ್ರೀತಿಯ ಪಕ್ಷಿ ಪಂಜರದಿಂದ ಹಾರಿ ಮರದ ರೆಂಬೆಯ ಆಶ್ರಯಿಸಿತು. ಸುತ್ತಲು ಎತ್ತಿ ಹೋದರೂ ಸಂತೋಷವೇ ಸಿಗುತ್ತಿತ್ತು ಅದಕ್ಕೆ. ನನ್ನ ಪ್ರೀತಿಯ ಪಂಜರ ಖಾಲಿಯಾಗಿದೆ. ಮತ್ತೆ ಕರೆದರೂ ಪ್ರೀತಿಯ ಹಕ್ಕಿ ಮರಳಿ ಗೂಡಿಗೆ ಬಾರದ ಸೂಚನೆ ಬಲವಾಗಿದೆ.
ಮತ್ತೆ ಬೇಕಿದೆ ಆ ಹಕ್ಕಿ
ಆದರೆ ನನಗೆ ಮತ್ತೆ ಬೇಕು ನನ್ನ ಪ್ರೀತಿಯ ಹಕ್ಕಿ. ನಾ ಸಾಕಿ ಮತ್ತೆ ದಷ್ಟ ಪುಷ್ಟವಾಗೇ ಬೆಳೆಸಬೇಕಾಗಿದೆ. ನನ್ನ ಪ್ರೀತಿಯ ಸ್ಪರ್ಶದಲ್ಲಿ ಕೈ ತುತ್ತು ತಿನ್ನಬೇಕಾಗಿದೆ. ಮರಳಿ ಬಾ ನನ್ನ ಗೂಡಿಗೆ. ನೀನಿಲ್ಲದ ಈ ಜೀವ ಬರಡಾಗಿದೆ. ನನ್ನ ನಗುವೆಲ್ಲ ಮಾಯವಾಗಿದೆ ಮನಸ್ಸು ನೋವಿನಲ್ಲಿದೆ. ನನ್ನ ತಪ್ಪು ನನಗರಿವಾಗಿದೆ. ನೀ ನನಗೆ ಬೇಕೆನಿಸಿದೆ. ನನ್ನ ಭಾವನೆಗಳನ್ನು ಹಂಚಬೇಕಿದೆ. ನನಗೆ ಗೊತ್ತು ನೀ ಮರಳಿ ಬರಲಾರೆ, ಬಂದರು ಮಂಕಾಗುವೆ. ನನಗದು ಬೇಡ.
ನೋವನು ಮರೆತು ಮತ್ತೆ ನೀ ನಗಬೇಕು. ನೀ ನಗಲಾರೆ, ನನಗದು ತಿಳಿದಿದೆ. ಮರೆತು ಹೋದವ ನೀನು, ಮರೆಯಲಾರೆ ನಾನು. ಅವೆಷ್ಟೋ ವಿಚಾರಗಳನ್ನು ನಮ್ಮೊಳಗೆ ಹಂಚಿಕೊಂಡಿದ್ದೇವಲ್ಲ ಇಂದು ಅದೆಲ್ಲವೂ ನನ್ನೊಳಗೆ ನಿಂತ ನೀರಾಗಿದೆ. ನೀ ಮತ್ತೆ ಒಲವ ಮಳೆ ಸುರಿಸಿ ಶುಚಿಗೊಳಿಸುವೆ ಎಂದು ಕಾತರಿಸುವೆ ನಾ. ನಿನ್ನ ಸಾಮಿಪ್ಯವಿಲ್ಲದೆ ಬದುಕಿನ ಕನಸುಗಳು ಬತ್ತಿವೆ. ಕಳೆದ ಆ
ನೆನಪುಗಳು, ಮಧುರ ಮಾತುಗಳು ಮತ್ತೆ ಮತ್ತೆ ಬೇಕೆನಿಸಿದೆ. ನೀ ಬಹುದೂರ ಹೋಗಿಲ್ಲ. ಹೋಗಬೇಡ ಮತ್ತೆ ನಮ್ಮ ನಡುವೆ ಪ್ರೀತಿಯ ಬೆಸುಗೆಯ ನಿರೀಕ್ಷೆ ಇದೆ.
ಕೋಪವಿಲ್ಲ
ನನ್ನ ಬದುಕಿನ ಮುಂದಿನ ಪಯಣವ ಇನ್ನೊಂದು ಒಲವಿನೊಂದಿಗೆ ಕಳೆಯಲು ಅವಕಾಶವಿದೆ. ನಾ ಹೇಗೆ ಒಪ್ಪಲಿ ಮನಸ್ಸು ಪೂರ್ತಿ ನೀ ತುಂಬಿರುವಾಗ. ನಿನಗೆ ನಾ ಬೇಡವೆಂದೇ ತೊರೆದು ಹೋಗಿರುವೆ. ಮನಸ್ಸಿಗೇಕೆ ಘಾಸಿಗೊಳಿಸದೆ ಹೋದೆ? ನಿನ್ನ ಮೇಲೆ ನನಗೆ ದ್ವೇಷ ಬರುತ್ತಿಲ್ಲ, ಮುನಿಸಿಲ್ಲ . ಮನಸ್ಸಿನ ಗೋಡೆ ಮೇಲೆ ಬಲವಾದ ಗಾಯ ಮಾಡುತ್ತಿದ್ದರೆ ಈ ವೇದನೆ ಇಷ್ಟೊಂದು
ಆಗುತ್ತಿರಲಿಲ್ಲವೇನೋ? ಈ ವಿರಹದಲ್ಲಿ ಇಷ್ಟೊಂದು ಬೇಯುತ್ತಿರಲಿಲ್ಲವೇನೋ? ನಮ್ಮ ಭೇಟಿಗಳು ಒಂದೆರಡು ಬಾರಿ ಅದು
ಅರ್ಥಪೂರ್ಣವೇ ಆಗಿತ್ತು. ಸರಳ ಸೌಜನ್ಯಯುತವಾಗೇ ಆಗಿತ್ತು.
ಗಾಜಿನ ಮನೆಯೊಳಗಿಂದ ಸುಂದರ ಮೀನೊಂದು ಕೆಳಬಿದ್ದು ಒದ್ದಾಡುತ್ತಿದೆ. ನೀನು ಬಳಿ ಸಾಗಿದರೂ ಮತ್ತೆ ಅದನ್ನ ಎತ್ತಿ ಜೀವ
ನೀಡಲಾರೆ. ನಿನ್ನ ನಿರ್ಧಾರಗಳೇ ಅಂತದ್ದು. ಬದಲಾಗುವುದು ತುಂಬಾ ಕಷ್ಟ. ಬದಲಾಯಿಸಿದರೆ ಚೆಂದವಲ್ಲವೇ? ಪ್ರೀತಿ ಅಮೂಲ್ಯ. ಎಲ್ಲರಲ್ಲಿ ನಿರೀಕ್ಷೆ ಮಾಡುವುದು ಅಸಾಧ್ಯ. ಅಂತಹ ಪ್ರೀತಿಯನ್ನು ಬೊಗಸೆ ತುಂಬಾ ನೀಡಿದ್ದ ನೀನೆಷ್ಟು ನನಗೆ ಅಮೂಲ್ಯ ಎಂದು ತಿಳಿಯದೇ ಹೋದೆ. ದೀನವಾಗಿ ಬೇಡುತ್ತಿರುವೆ ಬೇಬಿ, ಮತ್ತೆ ಮಾತನಾಡು.
ಮತ್ತೆ ಎಂದಿನಂತೆ ಖುಷಿಯಾಗಿರು. ನನಗೆ ಗೊತ್ತಿದೆ, ಚೂರಾದ ಕನ್ನಡಿಯ ಮರು ಜೋಡಣೆ ಕಷ್ಟವೆಂದು. ಇದನ್ನು ನೀನೇ ಆಗಾಗ ಹೇಳುತ್ತಿದ್ದೆ. ಕಷ್ಟವಾಗಬಹುದು, ಆದರೆ ಕನ್ನಡಿ ಜತೆಗೆ ಇದೆ ಎಂಬ ಭಾವವಾದರೂ ನನ್ನಲ್ಲಿ ತೃಪ್ತಿ ಮಾಡಿಸಬಹುದು. ದಯ ಮಾಡಿ ಮರಳಿ ಬಾ ನನ್ನೆದೆಯ ಪ್ರೀತಿಯ ಗೂಡಿಗೆ. ನಾ ಮತ್ತೆ ಮುದ್ದಾಗಿ ಸಾಕುವೆ. ಮತ್ತೆ ನನ್ನ ಖುಷಿಗಳ ಹಂಚಿ ನಿನ್ನೊಂದಿಗೆ ಹಾಯಾಗಿರುವೆ. ತೊರೆದು ಹೋಗಬೇಡ, ಮುದ್ದಿನ ಒಲವೇ! ನನ್ನ ಕಣ್ಣೀರ ಒರೆಸು ಬಾ, ಪ್ರತಿ ಕ್ಷಣವೂ ನಿನಗಾಗಿಯೇ ಕಾಯು ತ್ತಿರುವೆ.