ಲಕ್ಷ್ಮೀಕಾಂತ್ ಎಲ್. ವಿ.
ನಗುವೊಂದು ಹೂವಾಗಿ ಅರಳಿದರೆ ಅದೇ ಒಲವಿಗೆ ಶುಭ ಮಹೂರ್ತ. ಎರಡು ಹೃದಯಗಳು ಬೆರೆಯುವ ಆ ಸಂಗಮಕ್ಕೆ ಪ್ರೀತಿಯ ಹೆಸರಿಟ್ಟರೆ ಅದೊಂದು ಮಧುರಾತಿ ಅನುಭವ. ನಿಂತ ನೀರಂತಾಗಿದ್ದ ಬದುಕಲ್ಲಿ ಹೊಸ ಅಲೆಯೊಂದು ಮೂಡಿ ಕಮರಿ ಹೋಗಿದ್ದ ಕನಸುಗಳಿಗೆ ಮರು ಜೀವ ನೀಡುವ ಸುಂದರ ಅನುಭಾವವೊಂದು ನನ್ನ ಬದುಕಿನಲ್ಲಿಯೂ ಆಗಿತ್ತು.
ಅದೇ ಮೊದಲ ಪ್ರೇಮ. ಎರಡು ಹೃದಯಗಳು ಪಿಸುಗುಡುತ್ತಾ ಭಾವನೆಗಳ ವಿನಿಮಯ ವಾಗುತ್ತಾ ಚಿಗುರಿದ ಪ್ರೀತಿ ಹೆಮ್ಮರವಾಗಿ ಬೆಳೆದಿತ್ತು. ಅದರಾಚೆಗೂ ಒಲವು ಮೂಡಿ ಚೆಂದನೆಯ ಗೂಡೊಂದು ನಿರ್ಮಾಣವಾಗಿ ಭವಿಷ್ಯದ ಬಗೆಗೆ ಅದೆಷ್ಟೋ ಹೊಸ ಕನಸುಗಳನ್ನು ಕಟ್ಟಿ ನನಸಾಗಿಸಲು ಆಸೆಯ ಮೂಟೆ ತುಂಬಿಕೊಂಡು ಬದುಕು ಸಾಗು ತ್ತಲೇ ಇತ್ತು.
ಇದರ ಮಧ್ಯೆ ಬದುಕಿನಲ್ಲಿ ಧುತ್ತೆಂದು ಬಂದೆರಗುವ ಅನೇಕ ಕಷ್ಟಗಳ ನಡುವೆಯೂ ಎಲ್ಲವನ್ನೂ ಸಹಿಸಿಕೊಂಡು, ಎಲ್ಲಾ ಸಮಸ್ಯೆಗಳ ಎದುರೂ ಗುರಾಣಿಯಂತೆ ನಿಂತು ಬದುಕನ್ನು ಕಾಪಾಡಿದ್ದು ಇದೇ ಪ್ರೀತಿ. ನಿಜಕ್ಕೂ ಈ ಪ್ರೀತಿಗೆ ಅದೆಷ್ಟು ಶಕ್ತಿ ಇದೆ ಎಂದರೆ, ನಮ್ಮನ್ನು ಯಾವತ್ತೂ ನಡು ಹಾದಿಯೊಳಗೆ ಕೈಬಿಡದಂತೆ ಮುನ್ನುಗ್ಗಿ ಸಮಾಜದ ಕೆಂಗಣ್ಣಿನ ಬಿರುಸು ಕೈಯೊಳಗೆ ಪ್ರೀತಿಯ ಬ್ರಹ್ಮಾಂಡವನ್ನು ಪ್ರತಿಷ್ಠಾಪಿಸಿ ಮುನ್ನಡೆದಾಗ ಸಿಗುವ ಸಂತೋಷ ಮತ್ತೊಂದಿಲ್ಲ. ಗೆಳತಿ, ಇಂತಹ ಪ್ರೀತಿಗೆ ಅದೇಕೋ ಕಡಲ ಅಲೆಗೂ ಇತ್ತೀಚೆಗೆ ಮುನಿಸಾಗುತ್ತಿದೆ ಕಣೆ. ಏಕೆಂದರೆ, ಕಡಲೆದೆಯ ಮೇಲೆ ನಿನ್ನಂದ ವನ್ನು ಚಿತ್ರಿಸುವವಷ್ಟರಲ್ಲಿ ಹೊಟ್ಟೆ ಕಿಚ್ಚಿನ ಕಡಲು ಆ ಚಿತ್ರಕ್ಕೆ ಒಮ್ಮೆಲೆ ತೆರೆಯಾಗಿ ಬಂದೆರಗಿ ತಣ್ಣೀರೆರೆಚಿ ಹೋಗುತ್ತದೆ.
ಗೆಳತಿ, ಕರಗುತ್ತಿರುವ ನೇಸರನು ಸಂಜೆಯನ್ನು ಹೊತ್ತು ತರುವಾಗ, ಶಶಿಯ ತಂಬೆಲರಕೆ ಸೋತ ಮನಸ್ಸು ಸಮಯ ಸರಿಸು ತ್ತಿರುವಾಗ ನನ್ನೆದೆಗೆ ನಿನ್ನ ಬಿಸಿಯುಸಿರು ಮೆಲ್ಲನೆ ತಾಗಿ ಕೂಗಿ ಕರೆಯುವಾಗ ತಿಳಿಸಂಜೆ ರಂಗೇರುವುದು ಅರಿವಿಗೇ ಬರುವುದಿಲ್ಲ.
ಒಡಲಾಳದಲ್ಲಿ ಮೌನವಾಗಿ ಮೂಡಿದ ಕವಿತೆಯೊಂದು ನಮ್ಮ ಹೊಸ ಬದುಕಿಗೆ ಮುನ್ನುಡಿಯಾಗಲು ಇನ್ನೂ ತವಕಿಸುತ್ತಿದೆ. ಮೌನ ಮುರಿದು ಕಾದು ಕುಳಿತಿದ್ದ ಈ ಹೃದಯದ ಬಿಡಾರದಲ್ಲಿ ಇದೀಗ ನಿನ್ನದೇ ಒಲವಿನ ಚಿಲಿಪಿಲಿ. ಮೋಡ ಕವಿದ ವಾತಾವರಣದಲ್ಲಿ ಖಾಲಿ ರೋಡಿನಲ್ಲೂ ನಿನ್ನ ಆಗಮನ.
ಆ ಮಳೆ ಹನಿಗಳೂ ಕೂಡ ನಿನ್ನ ಒಲವಿನ ಘಮಲನ್ನು ಎದೆಗೆ ತಾಗಿಸುತ್ತಲೇ ಇವೆ. ಕಾನನದ ಒಂಟಿ ಝರಿಯ ತಲ್ಲೀನತೆಯೊಂದು ನಿನ್ನನ್ನು ಬಣ್ಣಿಸಲು ಕಾದು ಕುಳಿತಿರುವಾಗ ತಿಳಿಸಂಜೆ ಸಾಗರದಲೆಯ ಪ್ರಶಾಂತತೆಯು ಮನಸ್ಸಿನಲ್ಲಿ ಅವುಡುಗಚ್ಚಿ ಕುಳಿತು ಬಿಟ್ಟಿದೆ. ಒಂಟಿಯಾದರೆ ಸಾಕು ಒಮ್ಮೆಲೆ ಬಿಗಿದಪ್ಪುವ ನೆನಪುಗಳಿಗೆ ನಾನಿಟ್ಟ ಹಾಗೂ ನಿನಗೊಪ್ಪುವ ಹೆಸರೇ ಮೌನ ಕಣೆ. ಈಗೀಗಂತೂ ನನ್ನ ಮೌನದ ಕವಿತೆ ಆಗಾಗ್ಗೆ ಕಾಣೆಯಾಗುತ್ತಲೇ ಇರುತ್ತದೆ. ಅದನ್ನು ಹುಡುಕಿಕೊಡಲು ನಿನ್ನಿಂದ ಮಾತ್ರ ಸಾಧ್ಯ ಕಣೆ. ಈಗಾಗಲೇ ದಾಖಲಿಸಿದ್ದೇನೆ ಕಾಣೆಯಾದ ಪ್ರಕರಣವನ್ನು; ದಯಮಾಡಿ ಬೇಗನೇ ಬಂದು ಹುಡುಕಿ, ಈ ಪಾಳು ಬಿದ್ದ ಹೃದಯ ದಲ್ಲಿ ಮತ್ತೆ ಪ್ರತಿಷ್ಠಾಪಿಸು. ಬರುವೆ ತಾನೆ?