ಸೀರೆ ನಾರಿಯರ ಅಚ್ಚುಮೆಚ್ಚಿನ ಉಡುಗೆ. ಸೀರೆ ಉಟ್ಟ ನೀರೆಯ ಮನಸ್ಸು ಸಂತಸದ ಬುಗ್ಗೆ, ಉಲ್ಲಾಸದ ಹುಗ್ಗಿ!
ವಾಣಿ ಹುಗ್ಗಿ
ಸೀರೆ ಮಾನಿನಿಯರಿಗೆ ಬಲು ಮೆಚ್ಚಿನ ಉಡುಗೆ. ಎಷ್ಟೇ ಹೊಸ ಬಗೆಯ ಉಡುಗೆಗಳಿದ್ದರೂ ಸಾಂಪ್ರದಾಯಿಕ ಸೀರೆಗೆ ಪ್ರಾಧಾನ್ಯ! ಜೀನ್ಸ್, ಸ್ಕರ್ಟ್ ತೊಟ್ಟರೂ ಸೀರೆ ವ್ಯಾಮೋಹ ಸದಾ ಇದ್ದೇ ಇದೆ. ಯಾವ ವಯಸ್ಸಿನವರಾಗಲೀ, ಎತ್ತರ, ಕುಳ್ಳ, ದಪ್ಪ ಅಥವಾ ಸಣ್ಣ ಹೇಗೆ ಇರಲಿ ಈ ಸೀರೆ ಎಲ್ಲರಿಗೂ ಸರಿ ಹೊಂದುತ್ತದೆ. ತುಂಬಾ ದಿನ ಬಾಳಿಕೆ ಬರುತ್ತೆ. ಪ್ರದೇಶಿಕವಾಗಿ ಸೀರೆ ಉಡುವ ವಿಧಾನ ದಲ್ಲಿ ಬದಲಾವಣೆ ಇದೆ.
ಉತ್ತರ ಭಾರತದವರು ಒಂದು ರೀತಿ ಉಟ್ಟರೆ, ದಕ್ಷಿಣ ಭಾರತದವರು ಇನ್ನೊಂದೇ ರೀತಿ ಉಡು ತ್ತಾರೆ. ಕಾಲಿಗೆ ನೆರಿಗೆ ಅಡ್ಡ ಬರದ ಹಾಗೆ ಕಚ್ಚೆ ಸೀರೆ, ಬೆನ್ನಿಗೆ ನೆರಿಗೆ ಬರುವ ಹಾಗೆ ಕೊಡಗಿನ ಶೈಲಿ, ಗುಜರಾತಿ, ಬಂಗಾಳಿ, ಮಣಿಪುರಿ ಹೀಗೆ ಒಂದೇ ಸೀರೆಯನ್ನು ನಾನಾ ಬಗೆಯಲ್ಲಿ ಉಟ್ಟು ಕೊಳ್ಳಬಹುದು.
ಇದೂ ಸೀರೆ ಜನಪ್ರಿಯವಾಗಲು ಕಾರಣವಾಗಿದೆ. ರೇಷ್ಮೆ, ಹತ್ತಿ, ಸಿಂಥೆಟಿಕ್, ಕೈ ಮಗ್ಗದಲ್ಲಿ ನೇಯ್ದಿರುವ ವಿವಿಧ ಗುಣಮಟ್ಟದ ಸೀರೆಗಳು ಲಭ್ಯ. ಕಣ್ಮನ ಸೆಳೆಯುವ ಹೂವಿನ ಚಿತ್ತಾರ, ಜಾಮಿತಿಯ ಆಕಾರಗಳು, ಪತ್ರಿಕೆಯ ಅಚ್ಚಾಕಿರುವ ಸೀರೆಗಳು, ಕಸೂತಿ ಹಾಕಿರುವ, ಲೇಸ್ ಹಚ್ಚಿರುವ ಬಣ್ಣಬಣ್ಣದ ಸೀರೆಗಳು ಆಕರ್ಷಿಸುತ್ತವೆ.
ಮದುವೆ ಸೀರೆಯ ವಿಶೇಷ
ಮಾರುಕಟ್ಟೆಯಲ್ಲಿ ಸಿದ್ಧ ಸೀರೆಗಳು ಲಭ್ಯ. ತುಂಬಾ ಸರಳವಾಗಿ ಉಡುಪು ಧರಿಸುವ ರೀತಿ ಹಾಕಿಕೊಂಡರಾಯಿತು. ಇದರಿಂದ ಸೀರೆ ಉಡುವುದು ಮತ್ತಷ್ಟು ಸುಲಭ. ಬೇಗ ಸೀರೆ ಆರಿಸುವ ಸ್ಪರ್ಧೆಯನ್ನು ಏರ್ಪಡಿಸಿದರೆ ಸಾಂಗವಾಗಿ ನೆರವೇರುವುದು ಕಷ್ಟವೆ!
ವರಮಹಾಲಕ್ಷಿಗೆ, ದೀಪಾವಳಿಗೆ ಎರಡು ಸೀರೆಯಂತು ಖಾಯಂ. ಹುಟ್ಟುಹಬ್ಬಕ್ಕೆ, ವಿವಾಹ ವಾರ್ಷಿಕೋತ್ಸವಕ್ಕೆ ಮುದ್ದಾಂ ಖರೀದಿಸುವುದು ವಾಡಿಕೆ. ಮದುವೆಗೆ ಸೀರೆ ಆರಿಸಲೆಂದು ಕಂಚಿ, ಮೈಸೂರು ಮೊದಲಾದ ಊರುಗಳಿಗೆ ಹೋಗಿ ಸೀರೆ ಖರೀದಿಸು ವುದು ಉಂಟು.
ಬಂಧುಗಳಿಗೆ ಸೀರೆಯನ್ನು ಕೊಡಲು ಮದುವೆಯ ಸಂದರ್ಭವು ಉತ್ತಮ ಸಂದರ್ಭ. ಹೀಗೆ ವರ್ಷಕ್ಕೆ ನಾಲ್ಕು ಹೊಸ ಸೀರೆಗಂತೂ ಮೋಸವಿಲ್ಲ. ಸೀರೆ ತೆಗೆದುಕೊಂಡ ನಂತರ ಸೀರೆ ಸೆರಗಿಗೆ ಮೆರಗು ಕೊಡುವ ಅಂದದ ಕುಚ್ಚನ್ನು ಹಾಕಲೇಬೇಕು.
ಉಲ್ಲಾಸ ತುಂಬುವ ಸೀರೆ!
ತಿಜೋರಿಯನ್ನು ತುಂಬಿಸಿರುವ ಸೀರೆಗಳಲ್ಲಿ ಒಂದನ್ನು ಆಯ್ದು ಉಟ್ಟುಕೊಳ್ಳುವುದು ಕಷ್ಟದ ಕೆಲಸವೆ. ತಂದ ಹೊಸ ಸೀರೆಗಳಿಗೆ ಕಪಾಟಿನಲ್ಲಿ ಜಾಗವಿಲ್ಲದಿದ್ದರೂ ಹಾಗೊ ಹೀಗೊ ಮಾಡಿ ಹೊಂದಿಸುವುದು ಮಹಿಳೆಯರಿಗೆ ಒಲಿದ ಕಲೆ. ‘ನಮ್ಮನೇಲಿ ಸಣ್ಣ ಸೀರೆ ಅಂಗಡಿಯೇ ಇದೆ’ ಎಂದು ನನ್ನವರು ಛೇಡಿಸುವುದು ಉಂಟು. ಸೀರೆಗಳನ್ನು ಜೋಪಾನ ಮಾಡದಿದ್ದರೆ ಹಾಳಾಗಿ ಬಿಡುತ್ತವೆ.
ವರ್ಷಕ್ಕೊಮ್ಮೆ ರೇಷ್ಮೆ ಸೀರೆಗಳನ್ನು ಉತ್ತರಿ ಬಿಸಿಲಿಗೆ ಹಾಕಿ ಮಡಿಕೆ ಬದಲಿಸಿ ಮಡಿಚಿ ಅಚ್ಚುಕಟ್ಟಾಗಿ ಜೋಡಿಸಿದರೆ ಸಮಾಧಾನ. ಕಪಾಟಿನಲ್ಲೆ ಇದ್ದು ಸೀರೆಗಳಿಗೂ ಬೇಜಾರಾಗಬಾರದಲ್ಲವೆ? ನಿಶ್ಚಿತಾರ್ಥ, ಮದುವೆ, ಸೀಮಂತದ ಸೀರೆಗಳನ್ನು ಜೋಪಾನ ಮಾಡು ವಾಗ ವಿಶಿಷ್ಠ ಅನುಭೂತಿ ಕೊಡುತ್ತದೆ.
ಮಾಡೋಕೆನೂ ಕೆಲಸವಿಲ್ಲದಾಗ, ಮನಸ್ಸಿಗೆ ಮಂಕು ಕವಿದಾಗ ಎಲ್ಲ ಸೀರೆಗಳನ್ನು ಮಡಿಚಿ ಜೋಡಿಸಿದರೆ ಮನ ಮುದ ಗೊಳ್ಳು ತ್ತದೆ. ಸೀರೆಗೂ ನೀರೆಗೂ ಅವಿನಾಭಾವ ಸಂಬಂಧ. ಸೀರೆ ಉಟ್ಟುಕೊಂಡರೆ ಹೆಣ್ಣಿನ ಅಂದ ಹೆಚ್ಚುತ್ತದೊ ಅಥವಾ ಹೆಣ್ಣಿನಿಂದ ಸೀರೆಗೆ ಜೀವ ಬರುತ್ತದೊ ಆ ದೇವರಿಗೆ ಗೊತ್ತು.
ಸೀರೆ ಜೊತೆಗೆ ಭಾವನೆಗಳ ಹಿಮ್ಮೇಳ ಏರ್ಪಡುತ್ತದೆ. ಸಮಾರಂಭಕ್ಕೆ ಮನೆಯವರೆಲ್ಲ ಒಂದೆ ತೆರನಾದ ಸೀರೆ ತೆಗೆದುಕೊಳ್ಳುವುದು ಮಜವಾಗಿರುತ್ತದೆ. ಎಷ್ಟೇ ಹಳೆಯದಾದರೂ ಅಮ್ಮನ ಸೀರೆ ಉಟ್ಟಾಗ ದೊರೆಯುವ ತನ್ಮಯತೆ, ಸಂಭ್ರಮ ಬಣ್ಣಿಸಲಸಾಧ್ಯ. ಈಗ ಬ್ಯೂಟಿ ಪಾರ್ಲರ್‌ಗಳಲ್ಲಿ ಸೀರೆ ಉಡಿಸು ವುದು ಟ್ರೆಂಡ್ ಆಗಿದೆ. ಸೀರೆ ನೇಯುವವರು, ಸೀರೆಗೆ ಅಚ್ಚು ಹಾಕುವವರು, ಕುಚ್ಚು ಹಾಕು ವವರು, ಫೀಕೊ-ಫಾಲ್ ಮಾಡುವವರು ಹೀಗೆ ಸೀರೆಯಿಂದ ಬದುಕು ಕಟ್ಟಿಕೊಂಡವರು ಬಹಳ ಮಂದಿ. ಹಳೆ ಸೀರೆಗಳು ಬೆಚ್ಚಗಿನ ಕೌದಿ, ಡೋರ್ ಮ್ಯಾಟ್ ರೂಪವನ್ನೂ ಪಡೆಯುತ್ತವೆ.
ಫ್ಯಾಷನ್ ಸೀರೆ
ಈಗ ಫ್ಯಾಷನ್ ಗೀಳಿನಲ್ಲಿ ಹೇಗೇಗೊ, ಚಿತ್ರವಿಚಿತ್ರವಾಗಿ ಸೀರೆ ಸುತ್ತಿಕೊಳ್ಳುವುದು ಉಂಟು. ಸೀರೆಯ ಅಂದಕ್ಕಿಂತ ದೇಹದ ಅಂದ ವನ್ನು ತೋರಿಸಲೆಂದು, ಹೊಸ ವಿನ್ಯಾಸದಲ್ಲಿ ಸೀರೆ ಉಡುವ ಪದ್ಧತಿಯನ್ನು ಫ್ಯಾಷನ್ ಡಿಸೈನರ್ ರೂಪಿಸಿದ್ದಾರೆ. ಅಂತಹ ಕೆಲವು ಹೊಸ ವಿನ್ಯಾಸಗಳು ಕೆಲವೊಮ್ಮೆ ಚೆನ್ನಾಗಿದ್ದರೂ, ಇದು ಸೀರೆಗೆ ಮಾಡುತ್ತಿರುವ ಅವಮಾನ ಎಂದು ಕೆಲವರು
ಹೇಳುವು ದುಂಟು.
ಆದರೇನು ಮಾಡುವುದು, ಆಧುನಿಕ ಫ್ಯಾಷನ್ ವಿನ್ಯಾಸಕಾರರು, ವಿವಿಧ ರೀತಿಯಲ್ಲಿ, ಚಿತ್ರವಿಚಿತ್ರವಾಗಿ ಸೀರೆಯನ್ನು ಉಡುವ ಶೈಲಿಯನ್ನು ರೂಪಿಸಿ, ಅದಕ್ಕೆ ಪ್ರಚಾರ ಕೊಡುತ್ತಲೇ ಇದ್ದಾರೆ, ಆಧುನಿಕ ಮಾನಿನಿಯರು ಆ ರೀತಿ ಸೀರೆ ಉಡುವುದೂ ಉಂಟು!
ಮನೆಗೆ ಬಂದ ಸಂಬಂಽಕರಿಗೆ, ಗೆಳತಿಯರಿಗೆ ಸೀರೆ ಉಡುಗೊರೆಯಾಗಿ ಕೊಡುವುದು ಪದ್ಧತಿ. ಮದುವೆ ಮುಂಜಿಗಳಲ್ಲಿ ಸೀರೆ
ಕೊಟ್ಟು-ತೆಗೆದುಕೊಳ್ಳುವುದು ಸಂಪ್ರದಾಯ. ಹಬ್ಬದ ಉಡುಗೊರೆಯಾಗಿಯೂ ಸೀರೆ! ಎಷ್ಟು ಹೇಳಿದರೂ ಸಾಕಾಗೋಲ್ಲ ಸೀರೆಯ ಮಹಿಮೆಯನ್ನು. ಶುಭ ಕಾರ್ಯಕ್ರಮಗಳಲ್ಲಿ ಸೀರೆ ನಮ್ಮ ಜತೆ ಇರುತ್ತೆ. ಹೆಂಗಳೆಯರ ಕಂಗಳ ಸೆಳೆಯುವ ಮಂಗಳಕರ ಸೀರೆ.
ಶ್ರಾವಣದಲ್ಲಿ ಸೀರೆಯ ಸೊಬಗು
ಶ್ರಾವಣ ಹಬ್ಬಗಳನ್ನು ಕರೆ ತರುತ್ತದೆ. ವಿಶೇಷ ಪೂಜೆಗಳು ನೆರವೇರುತ್ತವೆ. ದೇವರಿಗೂ ಶ್ರಾವಣವೆಂದರೆ ಬಲು ಪ್ರೀತಿ. ಪೂಜೆ, ಹಬ್ಬ, ಶುಭ ಸಮಾರಂಭಗಳಲ್ಲಿ ಸೀರೆ ಖರೀದಿಗೆ ವಿಶೇಷ ಪ್ರಾಶಸ್ತ್ಯ. ಹೊಸ ಸೀರೆ ತೆಗೆದುಕೊಳ್ಳುವುದೆಂದರೆ ಮನೇಲಿ ಸಡಗರ! ಹೊಸ ಸೀರೆ ಎಂದರೆ ಮನಸು ಹಾರುವ ಚಿಟ್ಟೆಯಂತಾಗುತ್ತದೆ. ರಾತ್ರಿಯೆಲ್ಲ ಇಂಥದ್ದೇ ಸೀರೆ ಆರಿಸಬೇಕೆಂಬ ಧ್ಯಾನ. ಕನಸಿನಲ್ಲಿ ವಿಧ ವಿಧದ ವಿನ್ಯಾಸದ ಸೀರೆಗಳು ಕಂಡು, ನಿದ್ದೆಯೆಲ್ಲಾ ವರ್ಣಮಯ! ಮನೆಕೆಲಸ ಮುಗಿಸಿ ಅಂಗಡಿಗೆ ಹೋಗಿ ಮನಸಿಗೊಪ್ಪುವ ಸೀರೆ ಯೊಂದನ್ನು ಆರಿಸುವುದು ದೊಡ್ಡ ಸವಾಲೇ ಸರಿ. ಬಣ್ಣ, ಅಂಚು, ಬುಟ್ಟಾ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಲೇಬೇಕು.
ಯಾವುದು ತೆಗೆದುಕೊಳ್ಳಲಿ, ಯಾವುದು ಬಿಡಲಿ! ಸೀರೆ ಆಯ್ಕೆ ನಿಜಕ್ಕೂ ಸಂಕಟ ತಂದಿಡುತ್ತದೆ. ಎಲ್ಲವೂ ಇಷ್ಟವಾಗೋತನಕ, ರೇಷ್ಮೆ ಸೀರೆ ಮೈಸೂರಿನದ್ದಾಗಲೀ, ಕಂಚಿಯದ್ದಾಗಲೀ ಅಥವಾ ಬನಾರಸ್‌ದ್ದಾಗಲಿ, ನಾನಂತೂ ಖರೀದಿಸುವುದಿಲ್ಲ. ದರದಲ್ಲಿ ಚೌಕಾಸಿ ಮಾಡದೆ ಇರುವುದಿಲ್ಲ!
****