Thursday, 12th December 2024

ನೀನು ದೂರಾಗಲು ಕಾರಣವಾದರೂ ಏನು ?

ಸಂಧ್ಯಾ ಎಂ.ಸಾಗರ

ಹೇ ಇನಿಯಾ, ಅನುಮಾನಿಸಬೇಡ ನಿನಗಾಗಿ ಬರೆದ ಸಾಲುಗಳನ್ನು, ನಾ ಬರೆವ ಪ್ರತಿ ಪದಗಳು ನಿನ್ನ ಮೇಲಿನ ಪ್ರೀತಿಯನ್ನು ಸಾರುತ್ತದೆ. ನನಗೆ ಗೊತ್ತು ನಿನಗೆ ಇದ್ಯಾವುದು ಕಾಣುವುದಿಲ್ಲ. ನೀನು ನಿನ್ನದೇ ಭ್ರಮಲೋಕದಲ್ಲಿದ್ದೀಯಾ. ನಿನ್ನೊಡನೆ ಕಳೆದ ಆ ಮಧುರ ನೆನಪುಗಳನ್ನು ನಾ ಹೇಗೆ ಮರೆಯಲಿ!

ಅವತ್ತು ಜಿಟಿ ಜಿಟಿ ಮಳೆ, ನಾನು ಆಫೀಸ್‌ನಿಂದ ಬರುತ್ತಿದ್ದೆ. ನೀನು ಗಾಡಿ ನಿಲ್ಲಿಸಿ ‘ಮನೆಗೆ ಬಿಡಲಾ’ ಎಂದು ಕೇಳಿದ್ದೆ. ನನಗೆ ಆಶ್ಚರ್ಯ, ಎಲ್ಲೋ ನೋಡಿದ ಹಾಗಿದೆಯಲ್ಲ ಎಂಬ ಯೋಚನೆ. ಹಾ! ನನ್ನ ಹೈಸ್ಕೂಲ್ ಮೇಟ್ ವಿಹಾನ್ ಅಲ್ವ . ಅದೆಷ್ಟೋ ದಿನಗಳ ನಂತರ ಭೇಟಿಯಾಗಿದ್ವಿ. ಆ ಜಿಟಿ ಜಿಟಿ ಮಳೆಯಲ್ಲಿ ನಿನ್ನೊಡನೆ ಬೈಕ್ ಸವಾರಿ ಏನೋ ಅನುಭವ ನೀಡಿದ್ದು ಸುಳ್ಳಲ್ಲ.

ಅದು ಮೊದಲ ಭೇಟಿಯಾಗಿ ಉಳಿಯಲಿಲ್ಲ. ನಿನ್ನ ನನ್ನ ಭೇಟಿ ಪ್ರತಿವಾರವೂ ಆಗುತ್ತಿತ್ತು. ನೀನು ನನಗೆ ತೋರುತ್ತಿದ್ದ ಕಾಳಜಿ, ನನ್ನ ಬಗ್ಗೆ ನೆನಪಿಟ್ಟು ಕೊಳ್ಳುತ್ತಿದ್ದ ಪುಟ್ಟ ಪುಟ್ಟ ವಿಷಯಗಳು ನನ್ನಲ್ಲಿ ನಿನ್ನ ಮೇಲೆ ಪ್ರೀತಿ ಮೂಡಲು ಕಾರಣವಾಗಿತ್ತು. ನನಗೆ ನಿನ್ನ ಹತ್ತಿರ ಈ ವಿಷಯ ಹೇಳಲು ಮುಜುಗರ, ಗೆಳೆತನ ಹಾಳಾದರೆ ಎಂಬ ಭಯ. ಅದರಲ್ಲೂ ಒಂದು ಹುಡುಗಿಯಾಗಿ ಹೇಗೆ ನಾನೇ ಮೊದಲು ಹೇಳಲಿ ಎಂಬ ಭಾವ.

ಆದರೂ ಒಮ್ಮೆ ಧೈರ್ಯ ಮಾಡಿ ನಿನಗೆ ನನ್ನ ಪ್ರೀತಿಯ ಬಗ್ಗೆ ಹೇಳಿದ್ದೆ. ಭಯ, ಹಿಂಜರಿಯಕೆಯಲ್ಲಿ ಪ್ರೇಮ ನಿವೇದನೆ ಮಾಡಿದ್ದ
ನನಗೆ ನಿನ್ನ ಉತ್ತರ ಶಾಕ್ ನೀಡಿತ್ತು. ನೀನು ‘ನನಗೂ ನೀನು ಎಂದರೆ ಇಷ್ಟ. ನಾನೇ ಹೇಳುವ ಯೋಚನೆಯಲ್ಲಿದ್ದೆ, ನೀನೇ ಹೇಳಿ ಬಿಟ್ಟಿ’ ಎಂದಾಗ ನನಗೆ ಆಕಾಶಕ್ಕೆೆ ಏಣಿ ಹಾಕಿದಷ್ಟೇ ಸಂತಸ. ಅಂದಿನಿಂದ ಸ್ನೇಹಿತರಾಗಿದ್ದ ನಾವು ಎರಡು ದೇಹ, ಒಂದು ಜೀವದಂತೆ ಒಬ್ಬರೊನ್ನೊಬ್ಬರು ಬಿಟ್ಟಿರಲಾರದೆ ಅಂಟಿಕೊಂಡೆ ಇರುತ್ತಿದ್ದೆವು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಆದರೆ ಆ ಸಂತೋಷ ಕ್ಷಣಿಕ ಎಂದು ನನಗೆ ಆ ದಿನಗಳಲ್ಲಿ ಹೊಳೆದಿರಲೇ ಇಲ್ಲ. ವಾರಗಳು, ತಿಂಗಳುಗಳು ಕಳೆದಂತೆ ನಿನ್ನ ನಡು ವಳಿಕೆಯಲ್ಲಿ ಸಣ್ಣ ಸಣ್ಣ ಬದಲಾವಣೆ ಆಗಲಾರಂಭಿಸಿತು. ಒಂದೊಮ್ಮೆ ನಾನೇ ಪ್ರಪಂಚವಾಗಿದ್ದ ನಿನಗೆ ನನ್ನ ನೆನಪೇ ಆಗುತ್ತಿರ ಲಿಲ್ಲ. ಅದೇಕೋ ನೀನು ನನ್ನಿಂದ ದೂರವುಳಿಯಲು ಆರಂಭಿಸಿದ್ದೆ. ನಾನು ಅದೆಷ್ಟೋ ಬಾರಿ ಕಾರಣ ಕೇಳಿದ್ದರೂ, ನೀನು ಹಾರಿಕೆಯ ಉತ್ತರ ನೀಡಿದ್ದೆ. ಆಫೀಸ್ ಟೆನ್ಷನ್ ಇರಬಹುದು ಎಂದು ಸುಮ್ಮನಾದೆ.

ಆದರೆ ನೀನು ನನ್ನಿಂದ ಶಾಶ್ವತವಾಗಿ ದೂರ ಹೋಗುತ್ತಿಯ ಎಂದು ನಾನು ತಿಳಿದಿರಲೇ ಇಲ್ಲ. . . . ಅಂದು ದೀಪಾವಳಿ ಹಬ್ಬ,
ವಿಷ್ ಮಾಡಲು ಕಾಲ್ ಮಾಡಿದ್ದ ನನಗೆ ನೀನು, ಸಿಟ್ಟಿನಲ್ಲಿ ‘ಇಂದಿನಿಂದ ನನಗೂ ನಿನಗೂ ಸಂಬಂಧವಿಲ್ಲ. ಪದೇ, ಪದೇ ಕಾಲ್
ಮಾಡಿ ತೊಂದರೆ ಕೊಡಬೇಡ’ ಎಂದು ಹೇಳಿ ನನ್ನ ಕಾಲ್ ಕಟ್ ಮಾಡಿದೆ, ಮಾತ್ರವಲ್ಲ ನನ್ನ ನಂಬರನ್ನೇ ಬ್ಲಾಕ್ ಮಾಡಿದ್ದೆ. ಒಮ್ಮೆಗೇ ನನಗೆ ಆಕಾಶವೇ ಕಳಚಿ ಬಿದ್ದ ಅನುಭವ. ನನ್ನಿಂದ ದೂರಾಗಲು ಕಾರಣವಾದೂ ಏನು? ನನ್ನಿಂದಾದ ತಪ್ಪಾದರೂ ಏನು ಎಂಬುದು ನನಗೆ ಈಗಲೂ ಯಕ್ಷಪ್ರಶ್ನೆಯಾಗಿ ಉಳಿದಿದೆ. ಎಂದಾದರೂ ಕಾರಣ ಹೇಳಬೇಕೆನಿಸಿದರೆ ಹೇಳು… ನಾ ಕಾಯು ತ್ತಿರುತ್ತೇನೆ, ನಿನಗಾಗಿ.