Saturday, 23rd November 2024

ನೀನು ಪ್ರೇಮಿ, ನಾ ನಿನ್ನ ಪ್ರೇಯಸಿ

ಅಪರ್ಣಾ.ಎ.ಎಸ್ ಬೆಂಗಳೂರು

ಪ್ರೇಮ ಯಾವ ಕ್ಷಣದಲ್ಲಿ ಹೃದಯವನ್ನು ಹೊಕ್ಕುತ್ತದೋ ಯಾರಿಗೂ ಗೊತ್ತಾಗುವುದಿಲ್ಲ. ಇದೊಂದು ಚಿರಂತನ ಸತ್ಯ.

ಪ್ರೀತಿ ಪ್ರೇಮದ ಗುಂಗಿನಲ್ಲಿ ನಾ ಕಳೆದು ಹೋಗಿದ್ದೆ. ಎಷ್ಟರಮಟ್ಟಿಗೆ ಎಂದರೆ ಪ್ರಪಂಚದ ಅರಿವು ಕೂಡಾ ನನಗಿರಲಿಲ್ಲ. ಅಷ್ಟರ ಮಟ್ಟಿಗೆ ನಾ ಅವನ ನೆನಪಿನ ಲೋಕದಲ್ಲಿ ಮುಳುಗಿ ಬಿಟ್ಟಿದ್ದೆ. ಅವನ ಪ್ರೀತಿ ಬಿಟ್ಟು ಮತ್ತೇನೂ ಈ ಪ್ರಪಂಚದಲ್ಲಿ ನನಗೆ ಬೇಡ ಎನಿಸುವಷ್ಟು ಪ್ರೀತಿಗೆ ನಾನು ಸಿಲುಕಿಕೊಂಡಿದ್ದೆ.

ನನ್ನ ಮನದಾಳದ ಮಾತು ಈ ಕಥೆ, ನಾ ಬರೆದ ಸಾಲು ಸಾಲು ಕವಿತೆಗಳೆಲ್ಲಾ ಹೇಳುತಿವೆ ಕಾಡುವ ನಿನ್ನದೆ ನೆನಪುಗಳು.
ಹೇಳುವುದೇ ಕಷ್ಟ ಎಲ್ಲವನು ಈ ಪತ್ರದಲಿ, ಹೇಗೆ ಸರಿಯಾಗಿ ಹೊಂಚಲಿ ನಾ ಭಾವನೆಗಳ ಪದಗಳಲಿ. ಇನ್ನು ವಿಷ್ಯಕ್ಕೆ ಬರೋಣಾ ಅಂತೆ. ನಮ್ದು ಒಂಥರಾ ಈ ಮೇಲೆ ಹೇಳಿದ್ದೇ ಕತೆ , ಬಿಟ್ಟು ಬಿಟ್ಟು ಬರೋ ಜ್ವರದ ಥರ… ಔಷಧಿ ತಗೊಳೋ ಹಾಗೂ ಇಲ್ಲ. ತಗೊಳ್ದೆ ಇದ್ರೆ ಅದು ಕೇಳೋದು ಇಲ್ಲ.

ಬೇಡ ಅಂದ್ರೂ ತಡಿಯೋಕಾಗದೆ ಮೈಮೇಲೆಲ್ಲ ಹುಳ ಬಿಟ್ಕೋತಾ ಇರ್ಬೇಕು. ಇಲ್ದಿದ್ರೆ ಅದ್ಯಾಕೋ ಜೀವನಕ್ಕೆ ಸಮಾಧಾನ ಇಲ್ಲ. ಇದೇ ಕಿತಾಪತಿಯೇ ನಾನೂ ಮಾಡಿರೋದು. ಡಿಗ್ರಿವರೆಗೆ ಒಂಥರಾ ಇದ್ದೋಳು ನಾನು. ಅಣ್ಣ, ಅಣ್ಣನ ಫ್ರೆಂಡ್ಸ್ ಜತೆಗೆ ತಿರುಗಾಡ್ತಾ ಇದ್ದೆ. ಹಾಗಾಗಿ ಪಕ್ಕಾ ಗಂಡ್ ಹುಡುಗ್ರು ಥರ ಇದ್ದು, ಏನು ಬಂದ್ರೂ ಕ್ಯಾರೆ ಇರದ ಸಣ್ಣ ಮಕ್ಕಳ ಥರ ಇದ್ದ ಜನ್ಮ ನಂದು.

ಮಾರ್ಕ್ ಅಂತ ತಲೆ ಕೆಡಿಸ್ಕೊಂಡವಳೂ ಅಲ್ಲ, ಅವ್ರು ಹಾಗೇಳಿದ್ರು ಇವ್ರು ಹೀಗಂದ್ರು ಅಂತ ನನ್ನ ನಾನು ಬದಲಾಯಿಸಿ ಕೊಂಡವಳು ಅಲ್ಲಾ! ನಾನು, ನನ್ನ ಮೂರು ಜನ ಬೆಸ್ಟ್ ಫ್ರೆಂಡ್ ಅಷ್ಟೇ ನನ್ನ ದಿನಚರಿ. ಕ್ಲಾಸ್ ಗೆ ಹೋದ್ಯ ಲೆಕ್ಚರರ್ ತಲೆ ತಿಂದ್ಯಾ. ಒಂದಷ್ಟ್ಟು ಕಿತಾಪತಿ ಮಾಡಿದ್ಯಾ. ಮನೆಗೆ ಬಂದು ಅಮ್ಮ ಅಪ್ಪಾ ಅಣ್ಣನ್ನ ಗೋಳು ಹೊಯ್ದುಕೊಂಡ್ಯಾ ಅನ್ನೋ ದಷ್ಟೇ ಗೊತ್ತಿತ್ತು…

ಅದೊಂದು ದಿನ ನೀನು ಕಂಡೆ
ಇದರ ಜತೆಗೆ ತುಂಬಾ ಗಮನ ಅಂತ ಕೊಡ್ತಿದ್ದದ್ದು ನನ್ನ ಮುಂದಿನ ಫೀಲ್ಡ್‌ಗೆ ಬೇಕಾದ ವಿಚಾರಗಳ ಬಗ್ಗೆ ಬಿಟ್ಟು ಮತ್ಯಾವುದಕ್ಕೂ ಗಮನ ಕೊಟ್ಟೋಳು ಅಲ್ವೇ ಅಲ್ಲ. ಅದರ ಜತೆಗೆ ನಂಗ್ಯಾವತ್ತೂ ನಂಗೂ ಒಬ್ಬ ಬಾಯ್ ಫ್ರೆಂಡ್ ಬೇಕೂ ಅಂತ ಅನಿಸಿದ್ದೂ ಇಲ್ಲ. ನನ್ನ ಕನಸು ನನಸಿನ ತುಂಬಾ ಕಾಡ್ತಾ ಇದ್ದಿದ್ದು, ನನ್ನ ಅಚ್ಚು ಮೆಚ್ಚಿನ ಶಟಲ್ ಬ್ಯಾಡ್ಮಿಂಟನ್, ಮತ್ತೆ ನನ್ನ ಫ್ಯೂಚರ್ ಜಾಬ್ ಮಾತ್ರ. ಹಾಗಾಗಿ ಫ್ರೆಂಡ್ಸ್, ಫ್ಯಾಮಿಲಿ ಫೀಲ್ಡ್ ಇಷ್ಟು ಆರಾಮದಲ್ಲಿ ಇರೋದಕ್ಕೆ ಬಿಡಬಾರದು ಇವಳನ್ನು ಅಂತ ಕಾಣಬೇಕು ಅದೊಂದು ದಿನ ನೀನು ನನ್ನ ಕಣ್ಣಿಗೆ ಕಾಣಿಸಿರಬೇಕು.. ಈ ಸಮಯ…

ಸುಮ್ ಸುಮ್ಮನೇ ತಿರುಗಾಡಿಕೊಂಡು ಕಂಡ ಕಂಡವರ ಕಾಲೆಳೆಯುತ್ತಾ, ರೋಡ್ ಸೈಡ್ ಪಾನಿಪುರಿ, ಪಕ್ಕದ ಕಾಲೇಜು ಜತೆಗಿನ ಲೇಟ್ ಇವಿನಿಂಗ್ ಶಟಲ್ ಮ್ಯಾಚು, ಜಾಸ್ತಿ ಅಂದ್ರೆ ಕೋಲ್ಡ್ ಸ್ಲೈಸ್ ಬಾಟಲ್‌ಜ್ಯೂಸ್ ಖಾಲಿ ಮಾಡೋ ಕಿರಿಕ್ ಕಾಂಪಿಟೇಷನ್. ವಾರಾಂತ್ಯ ಆದ್ರೆ ಪಕ್ಕದ ಮನೆ ತೋಟದಲ್ಲಿ ಹರಿಯೋ ಕುಮಾರಧಾರಾ ನದಿಗೋಗಿ ನೀರಿಗೆ ಕಾಲಿಳಿಬಿಟ್ಟು ಫಿಶ್ ಮಸಾಜ್, ಬಾತುಕೋಳಿ ಜಹಾಜು ಅಂತಿದ್ದೋಳು ಇವೆಲ್ಲಾ ತಪ್ಪಿತು ಅಂದ್ರೆ ಮತ್ತಿರುತಿದ್ದದ್ದು ನಮ್ಮ ಮನೆಯವರೊಂದಿಗಿನ ಅವಲಕ್ಕಿ ಬಾತ್‌ಗಳು.

ಪ್ರೇಮದ ಸುಳಿ
ಇಷ್ಟೇ ನನ್ನ ಪ್ರಪಂಚ ಅಂತಿದ್ದೋಳಿಗೆ ಅದ್ಯಾವಾಗ ನಾನು ಪ್ರೇಮಲೋಕಕ್ಕೆ ಇಳಿದೆ ಅನ್ನೋ ಸಣ್ಣ ಕುರುಹೂ ಸಿಗದಂತೆ ನನ್ನನ್ನು ಆ ಸುಳಿಯಲ್ಲಿ ಮುಳುಗಿಸಿ ಒಳಗೆಳೆದೊಯ್ದಿದ್ದೆ.ಇನ್ನು ಬಾಯಿ ಬಿಟ್ರೆ ಬರಿ ಬಜಾರಿತನದ ಸಂಕೇತವೇ ಆಗಿ ಹೋಗಿದ್ದ,
ಕಡೆಗೆ ನಿನಗೂ ಕಾಟ ಕೊಟ್ಟು ಕಾಡಿಸಿ ಪೀಡಿಸಿಕೊಂಡಿದ್ದ ನಾನು ಅದ್ಹೇಗೆ ಇಷ್ಟ ಆಗಿದ್ದೆ ಅನ್ನೋದೇ ಯಕ್ಷಪ್ರಶ್ನೆ ಥರ ಕಾಡಿತ್ತು.
ರಾತ್ರಿಯಾದ್ರೆ ಸಾಕು ಕುಂಬಕರ್ಣನ ಸ್ವಂತ ತಂಗಿ ಥರ ನಿದ್ರೆ ಮಾಡ್ತಾ ಇದ್ದ ನನಗೆ ಈ ಒಂದು ತಿಂಗಳಿನಲ್ಲಿ ಬೇಕು ಅಂದ್ರೂ
ನಿದ್ರಾ ದೇವಿ ಹತ್ರ ಸುಳಿತಿರಲಿಲ್ಲ.

ಅಷ್ಟು ಆವರಿಸಿಕೊಂಡು ಬಿಟ್ಟಿದ್ದೆ ನೀ ನನ್ನ. ಯಾವತ್ತೂ ನನ್ನ ಬೆಂಚ್‌ಮೇಟ್ ಹೇಳೋಳು ಬೇರೆಯವರ ಪರದಾಟ ನೋಡಿ ನಗ್ತೀ ಅಲ್ವಾ ಮುಂದೆ ನಿಂಗೂ ಇದೆ ಕಾಟ ಇದೆ ಅಂತ. ಆಗ ‘ಹೋಗೆ ಅಂತವಕ್ಕೆಲ್ಲ ನಾನ್ ಬೀಳಲ್ಲ’ ಅಂತ ಜಂಬ ಕೊಚ್ಚಿ ಕೊಂಡದ್ದು ನೆನಪಾಗಿ ಈಗ ನಗುವಂತ ಸಂದರ್ಭ ನನ್ನದು.

ನೀನೋ ಪ್ರೇಮಿ, ನಾನೋ ನಿನ್ನ ಪ್ರೇಯಸಿ – ಈ ಭಾವನೆ ಆವರಿಸಿಕೊಂಡಾಗೆಲ್ಲಾ ನನಗೋ ಒಂಥರಾ ಕಚಗುಳಿ ಮನದೊಳಗೆ ಈ ಪ್ರೀತಿ-ಪ್ರೇಮದಂತಹ ಕಥಾನಕಗಳನ್ನು ಕೇಳಿ, ಓದಿ ಗೊತ್ತಿದ್ದ ನನಗೆ ನಾನೇ ಪ್ರೇಮಿಯೋರ್ವರ ಪ್ರೇಮಿಕೆಯಾಗಿದ್ದೆ ಅನ್ನುವ ಸಣ್ಣ ವಿಚಾರವೇ ಭಾರೀ ಪುಳಕವನ್ನು ತಂದಿಟ್ಟಿದ್ದರೆ, ಉಳಿದವರೆಲ್ಲರಿಗೂ ‘ಈ ಬಜಾರಿಗೂ ಲವ್ ಆಗತ್ತಾ? ಇವಳನ್ನೂ ಲವ್ ಮಾಡೋರು ಇದ್ದಾರಾ? ಏನ್ ಕಂಡ್ರಪ್ಪಾ ಅಂತಹ ಒಳ್ಳೆ ಗುಣ?’ ಅನ್ನೋ ದೊಡ್ಡ ಡೌಟು ಭಾರೀ ಕಾಡ್ತಾ ಇತ್ತು.

ಎಲ್ಲಾ ಆಗಿದ್ದು ನಿನ್ನಿಂದಲೇ ಅಂತ ನಿನ್ನ ದೂರಲ್ಲ. ಯಾಕಂದ್ರೆ ನೀನು ಕಾರಣ ಇಲ್ಲದೆ ನನಗಿಷ್ಟ ಆಗಿದ್ದೆ… ಹಾಗಂತ ತಪ್ಪೇಲ್ಲ ನಂದೇ ಅಂತಾನೂ ನಾನ್ ಹೇಳಲ್ಲ… ಒಟ್ಟಿನಲ್ಲಿ ಈ ರೀತಿ ಪ್ರೀತಿಯಲ್ಲಿ ಇಬ್ಬರು ಸಮಭಾಗಿಗಳು. ನಾನಾಗ್ಲೇ ಹೇಳಿದಂತೆ ನನ್ನ ಅತಿಯಾದ ಹುಡುಗಾಟದ, ತುಂಟತನದ, ಬಜಾರಿ ವ್ಯಕ್ತಿತ್ವವೇ ನಿನಗಿಷ್ಟ ಆಗಿತ್ತು ಅಂದ್ರೇ ನನಗದೇ ದೊಡ್ಡ ವಿಸ್ಮಯ! ಆ ಹೊತ್ತಿಗೆ ಅದು ಸುಮ್ಮನೆ ಕಾಲೇಜು ದಿನಗಳ ಹುಡುಗಾಟ.

ಅದೇ ನಿನಗಿಷ್ಟವಾಗಿದ್ದರೆ ಅದರಲ್ಲಿ ನಂದೇನು ತಪ್ಪಿದೆ ಹೇಳು? ಒಟ್ಟಾರೆಯಾಗಿ ಬಜಾರಿಯಾಗಿದ್ದವಳನ್ನು ಪ್ರೇಮಿಯಾಗಿಸಿದ ಸಂಪೂರ್ಣ ಕೀರ್ತಿ ನಿನಗೇ ಸೇರಬೇಕು ನೋಡು. ಎಲ್ಲರ ರೀತಿ ನಮ್ಮದು ಅದೇ ಪ್ರೀತಿ. ಆದರೆ ಬೇರೆ ರೀತಿ ಅಷ್ಟೇ. ಕಾಟಾಚಾರದ ಪ್ರೀತಿ ನಮ್ಮದಲ್ಲ. ಪ್ರತಿ ಗಳಿಗೆ, ಪ್ರತೀ ನಿಮಿಷ ಕೂಡಾ ನನಗೊಂದು ಹೊಸ ಹೊಸತನದ ಅನುಭವ. ಹಿಂದೆಂದೂ ಅನುಭವಿ ಸಿರದ ಸಂತಸದ ಕ್ಷಣಗಳು ನಿನ್ನ ನೆನಪಾದಾಗ.

ಇಲ್ಲಿಯವರೆಗೆ ಹುಡುಗಾಟದ ಹುಡುಗಿಯಾಗಿದ್ದ ನನ್ನನ್ನು ಕ್ಷಣ ಮಾತ್ರದಲ್ಲಿ ಬದಲಾಯಿಸಿದ್ದೆ ನೀನು. ಇನ್ನೇನಿದ್ದರೂ ಜತೆಯಾಗಿ ಬಾಳ ಪಯಣ…