Sunday, 15th December 2024

ಕನಸುಗಳನ್ನು ಕಟ್ಟಿಕೊಡುವ ಬೆಂಗಳೂರು

ಸಿಲಿಕಾನ್ ಸಿಟಿ ಎಂಬ ಮಾಯಾ ನಗರಿ ಎಲ್ಲರನ್ನೂ ತನ್ನೊಡಲಿಗೆ ಹಾಕಿಕೊಳ್ಳುತ್ತದೆ. ಆದರೆ ಶಿಸ್ತಿನಿಂದ, ಬುದ್ಧಿವಂತಿಕೆ ಯಿಂದ ಜೀವನ ನಡೆಸಿದವರು ಮಾತ್ರ ಇಲ್ಲಿ ಉಳಿಯುತ್ತಾರೆ, ಅಷ್ಟೆ.

ಲಕ್ಷ್ಮೀಕಾಂತ್ ಎಲ್. ವಿ.

ಬದುಕಿನ ಬಯಲೊಳಗೆ ಗೂಡು ನಿರ್ಮಿಸಿಕೊಂಡು ಚೆಂದದ ಜೀವನದ ಕನಸು ಕಟ್ಟಿಕೊಳ್ಳುವ ಆಸೆಯಲ್ಲಿ ಅದೆಷ್ಟೋ ದೂರ ದಿಂದ ಸಿಲಿಕಾನ್ ಸಿಟಿಗೆ ಬರುವ ಜನರ ಜೀವನದ ಪಾಡು ಅವರಿಗಷ್ಟೇ ಅನುಭವವಾಗಿರುತ್ತದೆ.

ಕಾರಣವಿಷ್ಟೆ – ಬದುಕು ಕೇಳಲು ಚೆಂದ ಅನಿಸುತ್ತದೆ. ಆದರೆ ಬದು  ಕೆಂಬ ಬಂಡಿಯನ್ನು ಸಮತೋಲವಾಗಿ ಸರಾಗವಾಗಿ ನಡೆಸಲು ಅದೆಷ್ಟು ಸಾಹಸ ಮಾಡಬೇಕು! ಅಂತಹ ಸಾಹಸಕ್ಕೆ ಕೈಹಾಕಿ ತಮ್ಮ ಹೊಸ ಬದುಕು ಕಟ್ಟಿಕೊಳ್ಳಲು ದೂರದಿಂದ ಬರುತ್ತಾರೆ. ಆದರೆ ಅವರು ಕಟ್ಟಿಕೊಂಡ ಬದುಕು? ಉತ್ತರದ ಹುಡುಕಾಟ ನಡೆಯುತ್ತಲೇ ಇದೆ.

ಬದುಕಿನ ಜಟಕಾ ಬಂಡಿಯನ್ನು ನಡೆಸಲು ಹಲವಾರು ಕೆಲಸಗಳನ್ನು ಹುಡುಕಿಕೊಂಡು ಹೊರ ರಾಜ್ಯಗಳಾದ ಆಂಧ್ರ, ತೆಲಂಗಾಣ, ತಮಿಳುನಾಡು, ಒರಿಸ್ಸಾ, ಮಹಾರಾಷ್ಟ್ರ, ಕೊಲ್ಕತ್ತಾ ರಾಜ್ಯಗಳಿಂದ ಬಂದರೆ, ನಮ್ಮದೇ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಾದ ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬೀದರ್, ಬಾಗಲಕೋಟೆ ಮುಂತಾದ ಭಾಗಗಳಿಂದ ಬೆಂಗಳೂರಿಗೆ ಬಂದು ಯಾವುದೋ ಒಂದು ಪ್ರದೇಶ ಅಥವಾ ಯಾವುದೋ ಒಂದು ಖಾಲಿ ಜಾಗಗಳಲ್ಲಿ ತಮ್ಮದೇ ಆದಂತಹ ಸಣ್ಣ ಗೂಡನ್ನು ಮಾಡಿಕೊಂಡು ಜೀವನವನ್ನು ಸಾಗಿಸುವ ಜನರೇ ಹೆಚ್ಚು.

ಬಹುಶಃ ಬೆಂಗಳೂರಿನ ಸುಸಜ್ಜಿತ ಮನೆಗಳಲ್ಲಿ ವಾಸಿಸುವ ಕನಸು ಇವರ ಪಾಲಿಗೆ ಕೇವಲ ತೂತು ಜೋಪಡಿಯಲ್ಲಿ ಇಣುಕುವ ನಕ್ಷತ್ರಗಳ ಹಿಡಿಯುವ ಆಸೆಯಂತದ್ದು ಅಷ್ಟೆ. ಕೆಲವರಿಗೆ ತಮ್ಮ ಊರುಗಳಲ್ಲಿ ತಮ್ಮದೇ ಆದ ಸ್ವಂತ ಮನೆಗಳಿದ್ದರೂ, ವ್ಯವಸಾ ಯದ ಜಮೀನುಗಳಿದ್ದರೂ ಸರಿಯಾದ ಸಮಯಕ್ಕೆ ಮಳೆ-ಬೆಳೆ ಆಗದೆ ಮಾಡಿದ ಸಾಲ ತೀರಿಸುವುದಕ್ಕೋ, ಬದುಕಿನಲ್ಲಿ ಹೊಸ ದಾರಿ ಹುಡುಕುವುದಕ್ಕೋ, ಮಕ್ಕಳ ಭವಿಷ್ಯದ ಚಿಂತೆಯಲ್ಲಿ ಊರಲ್ಲಿ ಸಿಗುವ ಕಡಿಮೆ ಆದಾಯದಿಂದಾಗಿ ತಮ್ಮ ಅವಶ್ಯಕತೆ ಗಳನ್ನು ಪೂರೈಸಿಕೊಳ್ಳಲಾಗದೆ ಅದಕ್ಕಿಂತಲೂ ಉತ್ತಮ ವಾದ ಜೀವನವನ್ನು ನಡೆಸಬಹುದೆಂದು ಜರಡಿಯಲ್ಲಿ ನೀರು ಸಂಗ್ರಹಿ ಸುವ ಕನಸನ್ನು ಹೊತ್ತು ಬರುವವರು ಒಂದೆಡೆಯಾದರೆ, ಜೀವನ ನಡೆಸಲು ಬೇಕಾದ ಮೂಲ ಅವಶ್ಯಕತೆಗಳ ಕೊರತೆ ಯಿಂದಾಗಿ ಬಡತನ ಬೆನ್ನೇರಿ ಬೇಗೆಯನ್ನು ತಾಳಲಾರದೆ ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳುವ ಉದ್ದೇಶದಿಂದ ವಲಸೆ ಬರುವ ಜನರೇ ಹೆಚ್ಚು.

ಸಣ್ಣ ಕೆಲಸದ ಆಸರೆ 
ಬಂದವರು ಮೊದಲಿಗೆ ಯಾವುದೋ ಒಂದು ಸಣ್ಣ ಕೆಲಸ ಕಂಡುಕೊಂಡು ಅದರಲ್ಲಿ ಜೀವನ ಸಾಗಿಸಲು ಆರಂಭಿಸುತ್ತಾರೆ.
ಕ್ರಮೇಣ ಬಣ್ಣದ ಬದುಕೇ ತುಂಬಿರುವ ಬೆಂಗಳೂರೆಂಬ ಬಯಲೊಳಗೆ ಅಲೆಯುತ್ತಾ, ಇಲ್ಲಿಯೇ ಇದ್ದುಬಿಡಬೇಕೆಂದು ಮನಸು ಬದಲಿಸುತ್ತಾರೆ. ಆದರೆ ಬಣ್ಣದ ಬದುಕಿಗೆ ಮರುಳಾಗಿ ಬದುಕನ್ನೇ ಮಾರಿಕೊಂಡವರು ಒಂದೆಡೆಯಾದರೆ, ಅದೇ ಬದುಕಿಗೆ ಹೆದರಿ ಮತ್ತೆ ತಮ್ಮ ಊರುಗಳಿಗೆ ಮರಳಿದ ಅದೆಷ್ಟೋ ಮಂದಿ ನಮ್ಮ ಕಣ್ಮುಂದೆ ಸಿಗುತ್ತಾರೆ. ಹೀಗೆ ಮಾಯಾನಗರಿಯಲ್ಲಿ ಬದುಕು
ಒಂದೇ ದಿನದಲ್ಲಿ ಏಳು ಬೀಳುಗಳನ್ನು ತೋರಿಸಿಕೊಡುತ್ತದೆ.

ಅದರಲ್ಲಿ ಗೆದ್ದವರು ಉಳಿಯುತ್ತಾರೆ, ಸೋತವರು ಮರಳುತ್ತಾರೆ. ಕೈಗೆಟುವ ಸಂಬಳದ ಕೆಲಸ ಇದ್ದರೂ ಕೂಡ ಬೆಂಗಳೂರಿನ
ಜೀವನ ಕಾಣುವ ಕನಸುಗಳನ್ನು ಕೂಡಿಡಲು ಮಾತ್ರ ಸಹಕರಿಸುತ್ತದೆ ಅಷ್ಟೇ ಹೊರತು ಗಳಿಸಿದ ಹಣವನ್ನಲ್ಲ. ಇಷ್ಟಾದರೂ ಬೆಂಗಳೂರಿನ ವ್ಯಾಮೋಹ ಅದೆಷ್ಟೋ ಮಂದಿಗೆ ಇನ್ನೂ ಬಿಟ್ಟಿಲ್ಲ. ಕೆಲವರು ಮಾತ್ರ ಮಾಯಾನಗರಿಯ ಜಾದೂ ಜೀವನ ಬೇಸತ್ತು ಮರಳಿ ಊರಿನ ಕಡೆಗೆ ಮುಖ ಮಾಡುವುದೂ ಉಂಟು. ಜೀವನದ ಏಳು ಬೀಳುಗಳು, ಕಂಡ ಕನಸುಗಳನ್ನು ಕೂಡಿಡುವ ಬದಲು ಮೂಲೆಗೆಸೆಯುವಷ್ಟು ಬೇಸರ ತರುವುದೂ ಉಂಟು. ಎಲ್ಲದಕ್ಕೂ ದುಡ್ಡು.. ದುಡ್ಡು! ದುಡ್ಡಿಲ್ಲದ ಬದುಕು ಸಾಧ್ಯವೇ ಇಲ್ಲ ಅನ್ನುವಷ್ಟರಮಟ್ಟಿಗೆ ತಂದೊಡ್ಡುತ್ತದೆ.

ಕನಸು ಕಾಣಬೇಕು
ಕನಸುಗಳು ಕಾಣುವ ಕಂಗಳ ಬೆಳಕು ಮುಸುಕಾಗುವವರೆಗೂ ಮಹಾನಗರಿಯಲ್ಲಿ ದುಡಿಯುವುದಷ್ಟೇ ಬದುಕಾಗಿಸಿಕೊಂಡ
ಜನರು ತಮ್ಮ ಕೊನೆಯ ದಿನಗಳನ್ನು ಎಷ್ಟರಮಟ್ಟಿಗೆ ಯಶಸ್ಸು ಪಡೆದುಕೊಂಡರೋ ತಿಳಿಯದು. ಆದರೆ ಇದ್ದಷ್ಟು ದಿನಗಳು ತಮ್ಮ ಆಸೆಗಳ ಮರೀಚಿಕೆಯನ್ನು ನೆನೆಯುತ್ತಾ, ಕನಸುಗಳ ಕುದುರೆ ಏರಿ ಜೀವನದ ಬಂಡಿ ಸಾಗಿಸಿದ್ದು ಮಾತ್ರ ವಾಸ್ತವ. ಹಣದ ಆಸೆಯೋ, ಹೊಸ ಬದುಕಿನ ಕನಸೋ ಮಹಾನಗರಿಯತ್ತ ಆಕರ್ಷಿಸಿ ಜೀವನ ರೂಪಿಸಿಕೊಳ್ಳಲು ಪ್ರೇರೇಪಣೆ ನೀಡುತ್ತದೆ.

ಕನಸುಗಳನ್ನು ಕಂಡು, ನನಸು ಮಾಡಿಕೊಳ್ಳುವುದೇ ಅಂಥಹವರ ಗುರಿ ಎನಿಸುತ್ತದೆ. ಕಂಡ ಕನಸನ್ನು ಬೆನ್ನು ಹತ್ತಿ, ಅದನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ರೂಪಿಸಿಕೊಳ್ಳುವುದರಲ್ಲೇ ಜಾಣತನ ಅಡಗಿದೆ. ಅಂತಹ ಜಾಣತನ ತೋರಿದವರು ಮುಂದೆ ಬರುತ್ತಾರೆ.ಆಸೆಗಳನ್ನು ಚಿಗುರಿಸಿ ಕನಸಿನ ಗೂಡನ್ನು ನಿರ್ಮಿಸಿ ಬಣ್ಣದ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಾಡುವ ಬಯಕೆ ಹುಟ್ಟಿಸುವ ಮಾ ಯಾನಗರಿಯ ಬದುಕು ಸಾಮಾನ್ಯರ ಜೀವನವನ್ನೇ ಬದಲಿಸು ತ್ತದೆ. ಬದಲಾದ ಬದುಕು ದಿಕ್ಕಿಲ್ಲದ ಗಾಳಿ ಪಟದಂತೆ ಸಿಕ್ಕ ಕಡೆ ಹಾರಾಡುತ್ತಾ ಸಾಗಿ ಕೊನೆಗೊಂದು ದಿನ ಎಲ್ಲಿಯೋ ತಲುಪಿ ಬಿಡುತ್ತದೆ. ಹಿಂತಿರುಗಿ ನೋಡಿದರೆ ಕ್ರಮಿಸಿದ
ಹಾದಿ ಕಾಣದಂತಾಗುವುದು ಸುಳ್ಳಲ್ಲ. ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಎಂಬ ಮಾಯಾನಗರಿ ಎಲ್ಲರನ್ನೂ ತನ್ನೊಡಲಿಗೆ ಹಾಕಿ ಕೊಳ್ಳು ತ್ತದೆ.

ಆದರೆ ಶಿಸ್ತಿನಿಂದ, ಬುದ್ಧಿವಂತಿಕೆಯಿಂದ ಜೀವನ ನಡೆಸಿದವರು ಮಾತ್ರ ಉಳಿಯುತ್ತಾರೆ ಅಷ್ಟೆ. ಹೀಗಾಗಿ ಬದುಕು ಅರಸಿ ಮಾಯಾ
ನಗರಿಗೆ ಬರುವ ಜನರು ತಮ್ಮ ಬದುಕಿನ ರೂಪುರೇಷೆಗಳನ್ನು ಮೊದಲೇ ಸಿದ್ಧಪಡಿಸಿ ಬಂದು ಜೀವನ ಕಟ್ಟಿಕೊಳ್ಳುವುದು ಅಗತ್ಯ.