ಸುರೇಶ ಗುದಗನವರ
ಹಸುಗಳ ಮೇಲಿನ ಪ್ರೀತಿಗೆ ಜಾತಿ ಮತದ ಹಂಗಿಲ್ಲ, ಆ ರೀತಿ ತಾರತಮ್ಯವನ್ನು ಮಾಡಲೂ ಬಾರದು. ಪ್ರಾಣಿಗಳ ಮೇಲಿನ ಮಮತೆ, ಆತ್ಮೀಯತೆಯನ್ನೇ ಮುಂದು ಮಾಡಿಕೊಂಡು, ಮುಸ್ಲಿಂ ಮಹಿಳೆಯೊಬ್ಬಳು ಗೋಶಾಲೆಯನ್ನು ನಡೆಸುವ ರೀತಿ ಅನುಕರಣೀಯ.
ಇಲ್ಲೊಂದು ಶಾಲೆ. ಇಲ್ಲಿ ಪಾರ್ವತಿ ತುಂಬಾ ನಾಚಿಕೆ ಪಡುತ್ತಾಳೆ. ಮಹೇಶ್ ಮೇಲಿಂದ ಮೇಲೆ ಬ್ರಹ್ಮ ಮತ್ತು ವಿಷ್ಣುವಿನೊಂದಿಗೆ ಜಗಳವಾಡುತ್ತೇನೆ. ಇದೆಲ್ಲಾ ಏನಂತೀರಾ ! ಇವೆಲ್ಲಾ ಈ ಶಾಲೆಯಲ್ಲಿ, ಅಂದರೆ ಗೋಶಾಲೆಯಲ್ಲಿ ಸಾಕಿದ ಹಸುಗಳ ಹೆಸರು. ಇಲ್ಲಿನ ಹಸುಗಳಿಗೆ ಪಾರ್ವತಿ, ಮಹೇಶ, ಲಕ್ಷ್ಮೀ, ಬ್ರಹ್ಮ, ವಿಷ್ಣು ಹೀಗೆ ಹಿಂದೂ ದೇವರುಗಳ ಹೆಸರುಗಳನ್ನು ಇಡಲಾಗಿದೆ. ಆಶ್ಚ
ರ್ಯವಲ್ಲವೇ? ಹೌದು, ಇದು ಸತ್ಯವೂ ಕೂಡಾ. ಪಂಜಾಬದ ಲೂಧಿಯಾನಾ ಜಿಲ್ಲೆಯ ಪಾಯಲ್ ಎಂಬ ಗ್ರಾಮದಲ್ಲಿ 35 ವರ್ಷದ
ಸಲ್ಮಾ ಎಂಬ ಮುಸ್ಲಿಂ ಮಹಿಳೆ ಗೋಶಾಲೆಯೊಂದನ್ನು ನಡೆಸುತ್ತಿದ್ದಾರೆ.
12 ವರ್ಷಗಳ ಹಿಂದೆ ಗಾಯಗೊಂಡ ಎತ್ತುವೊಂದನ್ನು ನೋಡಿದ ಸಲ್ಮಾ ಅನ್ನು ಮನೆಗೆ ಕರೆತಂದು ಆರೈಕೆ ಮಾಡಿ ಸಾಕಿದರು. ಅದಕ್ಕೆ ನಂದಿ ಎಂದು ಹೆಸರಿಟ್ಟರು. ಅದನ್ನು ಸಾಕುವಾಗಿ ನೆಮ್ಮದಿ, ಪ್ರೀತಿ ಕಂಡುಕೊಂಡರು. ಸಲ್ಮಾಗೆ ಎತ್ತು, ಹಸುಗಳ ಮೇಲೆ ಅದೇಕೆ ಪ್ರೀತಿ ಶುರುವಾಯಿತೋ ಗೊತ್ತಿಲ್ಲ. ಹಾಗೆಯೇ ಬೀಡಾಡಿ ದನವೊಂದನ್ನು ತಂದು ಗೌರಿ ಎಂದು ಹೆಸರಿಟ್ಟು ಸಾಕಲು ಪ್ರಾರಂಭ ಮಾಡಿದರು. ಹೀಗೆ ಅಲ್ಲೊಂದು, ಇಲ್ಲೊಂದು ಅಂತಾ ಬಿಡಾಡಿ ಹಸುಗಳನ್ನು ತಂದು ಸಾಕಲು ಶುರು ಮಾಡಿದರು.
ಈಗ ಈ ಗೋಶಾಲೆಯಲ್ಲಿ 30ಕ್ಕೂ ಹೆಚ್ಚು ಹಸುಗಳಿವೆ.
ಟೀಕೆ ಎದುರಿಸಿ ಗೋ ಸಾಕಣೆ
ಕಳೆದ ಹಲವು ವರ್ಷಗಳಿಂದ ಸೌಹಾರ್ದದ ಸಂದೇಶ ಸಾರುವ ಕೇಂದ್ರವಾಗಿ ಯಾವುದೇ ಸದ್ದುಗದ್ದಲವಿಲ್ಲದೇ ಈ ಗೋಶಾಲೆ ಕಾರ್ಯ ನಿರ್ವಹಿಸುತ್ತದೆ. ಸಲ್ಮಾ ಅವರು ಅವಿವಾಹಿತೆ. ಅಪ್ಪ ನೇಕ್ ಮೊಹಮ್ಮದ್ ಮತ್ತು ಚಿಕ್ಕಮ್ಮ ತೇಜೋ ಅವರು ಗೋಶಾಲೆ ಯ ಸಹಾಯಕರಾಗಿ ನಿಂತಿದ್ದಾರೆ. ಹಸುಗಳ ಆರೈಕೆಯಲ್ಲಿ ತೊಡಗಿರುವ ಈ ಮುಸ್ಲಿಂ ಕುಟುಂಬ ತಮ್ಮ ಬಾಂಧವರಿಂದ ತುಸು ಟೀಕೆ ಎದುರಿಸಬೇಕಾದ ಸಂದರ್ಭವೂ ಬಂದಿತ್ತು. ಆದರೆ ಸಲ್ಮಾ ಅದರ ಬಗ್ಗೆೆ ತಲೆಕೆಡಿಸಿಕೊಂಡಿಲ್ಲ. ಸೇವಾ ಮನೋ ಭಾವದಿಂದ ಸಮನ್ವಯ ಸಾಧಿಸಿದ್ದಾರೆ.
ಪ್ರಾಣಿಗಳೆಂದರೆ ಇಷ್ಟ
‘ನನಗೆ ಪ್ರಾಣಿಗಳೆಂದರೇ ತುಂಬಾ ಇಷ್ಟ, ನಾನು ನಮ್ಮ ಧರ್ಮಗ್ರಂಥ ಓದುತ್ತೇನೆ, ಅಲ್ಲಾಹುವಿನ ಮೇಲೆ ನಂಬಿಕೆಯೂ ಇದೆ. ಎಲ್ಲ ಪ್ರಾಣಿಗಳಿಗೂ ಸಹಾಯ ಮಾಡು ಅಂತಾ ನನ್ನ ಧರ್ಮ ನನಗೆ ಕಲಿಸಿದೆ. ಈ ದೃಷ್ಟಿಯಿಂದಲೇ ಈ ಗೋಶಾಲೆಯನ್ನು ನಡೆಸು ತ್ತಿದ್ದೇನೆ’ ಎಂದು ಸಲ್ಮಾ ಹೇಳಿಕೊಂಡಿದ್ದಾರೆ. ಸುತ್ತಮುತ್ತಲಿನ ಕೆಲವರು ಗೋಶಾಲೆಯಿಂದ ಸೆಗಣಿ ವಾಸನೆ ಬರುತ್ತದೆ ಎಂದು ದೂರಿದ್ದಾರೆ.
ಇತರ ವಿಚಾರಗಳಿಗೂ ಟೀಕೆ ಮಾಡಿದ್ದುಂಟು. ಆದರೂ ಸಲ್ಮಾ ಯಾವದಕ್ಕೂ ಅಂಜದೇ ಗೋವುಗಳ ಪಾಲನೆ ಪೋಷಣೆ ಮಾಡುತ್ತಾ, ಗೋ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಯಾವುದಕ್ಕೂ ಉಪಯುಕ್ತವಿಲ್ಲ ಎನ್ನುವ ಗೋವುಗಳನ್ನು ತಂದು ತಮ್ಮ ಗೋಶಾಲೆಯಲ್ಲಿ ಮೇವು, ನೀರು ಹಾಕಿ ಸಾಕುತ್ತಿದ್ದಾರೆ. ಅದರಲ್ಲೂ ವಯಸ್ಸಾದ, ಕೈಕಾಲು ಮುರಿದ ಗೋವು ಹಾಗೂ ದನ-ಕರುಗಳಿಗೆ ಹೊಸ ಬದುಕು ನೀಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಮೇವು, ನೀರು, ಚಿಕಿತ್ಸೆೆ ಕೊಟ್ಟು ಪ್ರೀತಿಯಿಂದ ಪಾಲನೆ
ಮಾಡುತ್ತಿದ್ದಾರೆ.
‘ನಾನು ಸಸ್ಯಾಹಾರಿ, ಹಸುಗಳ ಆರೈಕೆ ಮಾಡುವದರಿಂದ ನನ್ನ ಮನಸ್ಸಿನಲ್ಲಿ ನೆಮ್ಮದಿ ಕಂಡುಕೊಂಡಿದ್ದೇನೆ. ಪ್ರಾಣಿಗಳನ್ನು ಪ್ರೀತಿಸಲು ಯಾವ ಧರ್ಮವೂ ಅಡ್ಡ ಬರುವುದಿಲ್ಲ’ ಎಂದು ಸಲ್ಮಾ ಹೇಳುತ್ತಾರೆ. ಇಂದಿನ ರಾಜಕಾರಣಿಗಳು ದೇಶದ ಬಡತನ
ಮತ್ತು ನಿರುದ್ಯೋಗದಂತಹ ನೈಜ ಸಮಸ್ಯೆಗಳಿಂದ ಗಮನವನ್ನು ಬೇರಡೆ ಸೆಳೆಯಲು ಧರ್ಮ ಮತ್ತು ಹಸುಗಳನ್ನು ಬಳಸಿ ಕೊಳ್ಳುತ್ತಿರುವದು ವಿಷಾದನೀಯ ಎಂದು ಹೇಳುತ್ತಾರೆ.
ನಮಗೂ ಹೃದಯವಿದೆ, ನಾವು ಪ್ರಾಣಿಗಳನ್ನು ಪ್ರೀತಿಸುತ್ತೇವೆ ಎಂದು ಸಲ್ಮಾ ಹೆಮ್ಮೆಯಿಂದ ಹೇಳುತ್ತಾರೆ. ಸಲ್ಮಾ ಅವರಿಗೆ ವಿವಾಹ ಸಂಬಂಧಗಳು ಬರುತ್ತಿದ್ದರೂ ‘ಈ ಮಹಿಳೆಗೆ ಯಾಕೆ ಗೋಶಾಲೆ ಉಸಾಬರಿ’ ಎಂದು ಹೇಳಿ ವರನ ಕಡೆಯವರು ಸಂಬಂಧ ತಿರಸ್ಕರಿಸಿದ್ದೂ ಇದೆ. ಆದಾಗ್ಯೂ ನನ್ನೊಂದಿಗೆ ಗೋಶಾಲೆಯನ್ನು ನೋಡಿಕೊಳ್ಳುವ ಮನಸ್ಸು ಇರುವ ಹುಡುಗನನ್ನು ಮಾತ್ರ ನಾನು ಮದುವೆಯಾಗುತ್ತೇನೆ ಎಂದು ಸಲ್ಮಾ ಹೇಳುತ್ತಾರೆ.
ಮುಸ್ಲಿಂ ಮಹಿಳೆಯೊಬ್ಬರು ಗೋಶಾಲೆ ಸ್ಥಾಪಿಸಿ, ಯಶಸ್ವಿಯಾಗಿ ಮುನ್ನಡೆಸಿರುವದು ನಿಜಕ್ಕೂ ಮೆಚ್ಚಬೇಕಾದದ್ದೆ. ಅವರಿಗೆ ಪಶುಗಳ ಮೇಲೆ ಇರುವ ಪ್ರೀತಿ ಅನುಕರಣೀಯ. ಕಳೆದ ಹಲವು ವರ್ಷಗಳಿಂದ ಶಾಂತಿ ಮತ್ತು ಸಾಮರಸ್ಯದ ಸಂದೇಶ ನೀಡುತ್ತಾ ಬಂದಿರುವ ಈ ಮಾನವೀಯತೆಯು ಎಲ್ಲಾ ಜಾತಿ, ಧರ್ಮಗಳನ್ನು ಮೀರಿದ್ದು. ಅದು ಮನಸ್ಸಿನಿಂದ ಬರುವಂತಹದ್ದು, ಹೃದಯ ವೈಶಾಲ್ಯತೆಯಿಂದ ಕೂಡಿಸುವ ಮಾನವೀಯ ಗುಣಗಳೇ ಒಂದು ವಿಶೇಷವಾದ ಧರ್ಮ ಅನ್ನವುದಕ್ಕೆ ಉತ್ತಮ ಉದಾಹರಣೆ ಯಾಗಿದ್ದಾರೆ ಗೋವುಗಳನ್ನು ಸಾಕುವ ಸಲ್ಮಾ ಅವರು.