Thursday, 12th December 2024

ಐಕಿಯಾ ಎಂಬ ನೀಲವರ್ಣದ ಸುಂದರಿ

ಗುಣಮಟ್ಟದ ಪೀಠೋಪಕರಣಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕ ರಿಗೆ ಒದಗಿಸುತ್ತಿರುವ ಈ ಸಂಸ್ಥೆ,ಇಂದು ೬೪ ದೇಶಗಳಲ್ಲಿ ಮಳಿಗೆಗಳನ್ನು ಹೊಂದಿದೆ.

ಕಾರ್ತಿಕ್ ಕೃಷ್ಣ

ಕಳೆದ ಎರಡು ವಾರದಿಂದ ಬೆಂಗಳೂರಿನ ನಾಗಸಂದ್ರ ಮೆಟ್ರೋ ಸ್ಟೇಷನ್ ಹಿಂದೆಂದೂ ಕಾಣದಂತ ಜನಜಂಗುಳಿಗೆ ಸಾಕ್ಷಿಯಾಗು ತ್ತಿದೆ. ಇದಕ್ಕೆ ಕಾರಣ ಇತ್ತೀಚೆಗಷ್ಟೇ ಅಲ್ಲಿ ತಲೆ ಎತ್ತಿರುವ ಐಕಿಯ ಎಂಬ ಶೋ ರೂಂ! ಇದು ಸ್ವೀಡನ್ ಮೂಲದ ಗೃಹೋಪಯೋಗಿ ಪೀಠೋಪಕರಣಗಳ ಮಳಿಗೆಯಾಗಿದ್ದು ಯಾವ ಪ್ರವಾಸಿ ತಾಣಕ್ಕೂ ಕಡಿಮೆಯಿಲ್ಲವೆಂಬಂತೆ ಜನರನ್ನು ಸೆಳೆಯುತ್ತಿದೆ.

೧೨.೨ ಎಕರೆ ಪ್ರದೇಶದಲ್ಲಿ, ನಾಲ್ಕೂವರೆ ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಮಳಿಗೆಯಲ್ಲಿ ೭,೦೦೦ಕ್ಕೂ ಅಧಿಕ ಗೃಹೋಪಯೋಗಿ ಪೀಠೋಪಕರಣಗಳು ಲಭ್ಯ! ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಈ ನೀಲ ಸುಂದರಿ ಐಕಿಯಾದ ದರ್ಶನ ಪಡೆಯಲು ಹೀಗೆ ಹಿಂಡು ಹಿಂಡಾಗಿ ಹೋಗುವ ಜನರಿಗೆ ‘ಈ ಶಾಪಿಂಗ್ ಮಾಲ್‌ನಲ್ಲಿ ಯಾವುದೇ ಸಿನಿಮಾ ಹಾಲ್ ಅಥವಾ ಇತರೆ ಶಾಪಿಂಗ್ ಇಲ್ಲ. ಸಾರ್ವಜನಿಕರು ಕೇವಲ ಗೃಹಪಯೋಗಿ ವಸ್ತುಗಳ ಖರೀದಿಸುವ ಉದ್ದೇಶವಿದ್ದಲ್ಲಿ ಮಾತ್ರ ಐಕಿಯ ಮಾಲ್‌ಗೆ ಬರಬೇಕು’ ಎಂಬ ಮನವಿಯನ್ನು ಬೆಂಗಳೂರು ಪಶ್ಚಿಮ ವಿಭಾಗದ ಟ್ರಾಫಿಕ್ ಡಿಸಿಪಿ ಮಾಡಿದ್ದಾರೆ!.

ಐಕಿಯ ಯಾಕಿಷ್ಟು ಹೆಸರುವಾಸಿಯಾಯ್ತು? ಒಂದು ಕಾರಣವೆಂದರೆ, ಇಲ್ಲಿನ ಪೀಠೋಪಕರಣ ಮತ್ತು ಇತರ ಉತ್ಪನ್ನಗಳು ಗುಣಮಟ್ಟದಾಗಿದ್ದು ಕಡಿಮೆ ಬೆಲೆಗೆ ಕೈಗೆಟುಕುವುದರಿಂದ. ಯಾವುದೇ ಹೊಸ ಫರ್ನಿಚರನ್ನು ತಯಾರು ಮಾಡುವ ಮುನ್ನ ಅವರು ಅದರ ಬೆಲೆಯನ್ನು ನಿಗದಿಪಡಿಸುತ್ತಾರಂತೆ. ನಂತರ ಅದರ ನಿರ್ಮಾಣವನ್ನು ರಿವರ್ಸ್ ಎಂಜಿನಿಯರ್ ಮಾಡಲಾಗುತ್ತದೆ. ಸಿದ್ಧಪಡಿಸಾಲಗುತ್ತಿರುವ ಉತ್ಪನ್ನವು ನಿಗದಿ ಪಡಿಸಿದ ಬೆಲೆಗೆ ಹೊಂದಿಕೊಳ್ಳು ತ್ತಿದೆ ಎಂದು ಖಚಿತಪಡಿಸಿಕೊಳ್ಳಲು ವಿನ್ಯಾಸಕರು, ಬಡಗಿಗಳು, ಕುಶಲಕರ್ಮಿ ಗಳು ಕೆಲಸ ಮಾಡುತ್ತಾರೆ.

ಕಣ್‌ಸೆಳೆಯುವ ಡಿಸೈನ್
ಐಕಿಯ ಉತ್ಪನ್ನಗಳ ಬೆಲೆ ಕಡಿಮೆಯಿರುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಅವುಗಳ ಡಿಸೈನ್. ಅದು ಹೇಗಿರುತ್ತದೆ ಎಂದರೆ ಉತ್ಪನ್ನಗಳನ್ನು ಸಮತಟ್ಟಾಗಿ ಪ್ಯಾಕ್ ಮಾಡಬಹುದು. ಇದು ಫ್ಲಾಟ್ ಪ್ಯಾಕ್ ಆಗಿರುವುದರಿಂದ, ಗ್ರಾಹಕರು ಅವುಗಳನ್ನು ಸಾರ್ವಜನಿಕ ಸಾರಿಗೆಯಲ್ಲಿ ಸಾಗಿಸಬಹುದು ಮತ್ತು ಮನೆಯಲ್ಲಿ ತಾವೇ ಅದನ್ನು ಜೋಡಿಸಿಕೊಳ್ಳಬಹುದು. ಇದು ನಮ್ಮ ದೇಶಕ್ಕೆ ಹೊಸ ಪರಿಕಲ್ಪನೆ, ಆದ್ದರಿಂದಲೇ ಜನಸಾಗರ!

ವಿಂಡೋ ಶಾಪಿಂಗ್ ಮಾಡಬಹುದು!
ಐಕಿಯ ಸ್ಟೋರ್‌ಗಳ ವಿಶೇಷತೆಯೆಂದರೆ ಅವುಗಳ ಲೇಔಟ್. Oneway ರೋಡಿನಂತ ದಾರಿಗಳಲ್ಲಿ ಗ್ರಾಹಕರು ಚಲಿಸಬೇಕು. ಇದರಿಂದ ಅಂಗಡಿಯೊಳಗಿನ ಎಲ್ಲಾ ಉತ್ಪನ್ನ ಗಳನ್ನು ಗ್ರಾಹಕ ನೋಡಿದಂತಾಗುತ್ತದೆ. ಕೊನೆಯಲ್ಲಿ ಗ್ರಾಹಕನ ಐಕಿಯಾ ಸಂಚಾರ ವಿಂಡೋ ಶಾಪಿಂಗಷ್ಟೇ ಸೀಮಿತವಾಗದೆ ಕನಿಷ್ಠ ಪಕ್ಷ ಒಂದು ವಸ್ತುವಿನ ಖರೀದಿ ಯೊಂದಿಗೆ ಕೊನೆಗೊಳ್ಳುತ್ತದೆ.ಅಷ್ಟೆ ಅಡ್ಡಾಡಿದರೂ ಖಾಲಿ ಕೈಯಲ್ಲಿ ಹೊರಬರುವ ಹಠಮಾರಿ ಗ್ರಾಹಕರೂ ಇರುತ್ತಾರೆ! ಅವರನ್ನ ಸೆಳೆಯಲು ಬೇರೆಯೇ ಸ್ಟ್ರಾಟೆಜಿ!

ಗೆಳೆಯನೊಬ್ಬ ವ್ಹಾಟ್ಸಪ್ ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದ. ಅವನೆದುರು ನೋಡಲು ಅಮೋಘವಾಗಿದ್ದ ಆಹಾರ ಪದಾರ್ಥವಿತ್ತು. ಕೇಕಿನಂತಿದ್ದ ಆಹಾರದ ಮೇಲೆ ಸ್ವೀಡನ್‌ನ ಧ್ವಜವನ್ನು ಸಣ್ಣ ಕಡ್ಡಿಯ ಸಹಾಯದಿಂದ ನೆಟ್ಟಂತಿತ್ತು. ‘ಒಹ್, ಇವನು ಯಾವಾಗ ಸ್ವೀಡನ್‌ಗೆ ಹೋದ!’ ಎಂದು ಆಶ್ಚರ್ಯದಿಂದ ಕೇಳಿದೆ. ‘ಸ್ವೀಡನ್ ಅಲ್ಲ ಮಾರಾಯಾ, ಐಕಿಯ ರೆಸ್ಟೋರೆಂಟ್‌ೞ ಅದು ಎಂಬ ಉತ್ತರ ಬಂತು. ಸ್ಟೋರಿನಲ್ಲಿ ಸುತ್ತಾಡಿ ಸುಸ್ತಾಗಿದ್ದರೆ ಒಳ್ಳೆಯ ಆಹಾರ ದೊರೆಯುವ ಹೋಟೆಲೂ ಇಲ್ಲಿದೆ!

ಬಾಲಕನ ಸಾಹಸ
ಶಾಲೆಗೆ ಹೋಗುವಾಗಲೇ ಬೆಂಕಿ ಪೊಟ್ಟಣಗಳನ್ನು ತಯಾರಿಸಿ, ವ್ಯವಹಾರಜ್ಞಾನ ಗಳಿಸಿದ Ingvar Kamprad ಎಂಬ ಬಾಲಕನೇ ಐಕಿಯದ ಸಂಸ್ಥಾಪಕ. ೧೯೪೩ ರಲ್ಲಿ ಇಂಗ್ವಾರ್ ೧೭ನೇ ವಯಸ್ಸಿಗೆ ತಲುಪಿದಾಗ ಆತನ ತಂದೆ ಉಡುಗೊರೆಯಾಗಿ ಸಂಸ್ಥೆಗೆ  ಬೇಕಾದ ಲೈಸೆನ್ಸನ್ನು ಮಾಡಿಕೊಟ್ಟರು.ಇಂಗ್ವಾರ್ ಆ ಸಂಸ್ಥೆಗೆ IKEA ಎಂದು ಹೆಸರಿಟ್ಟ. ಅದು ಹುಟ್ಟಿದ್ದು ಇಂಗ್ವಾರ್‌ನ ಮಾವನ ಅಡುಗೆ ಮನೆಯ ಮೇಜಿನ ಮೇಲೆ ! ಅದೇ ಆತನ ಕಚೇರಿ. ೧೯೪೩ ಜನ್ಮ ತಳೆದ ಐಓಉಅ ಮುಂದಿನ ೫ ವರುಷ ಬೆಂಕಿ ಪಟ್ಟಣ, ಪೆನ್ನು ಇತ್ಯಾದಿಗಳ ಮಾರಾಟದಲ್ಲಿ ತೊಡಗಿತ್ತು.

ಇಂದು ಪೀಠೋಪಕರಣಗಳಿಗೇ ಹೆಸರುವಾಸಿಯಾಗಿರುವ ಐಕಿಯ ಅದರ ಮಾರಾಟವನ್ನು ಶುರು ಮಾಡಿದ್ದು ೧೯೪೮ರಲ್ಲಿ.
೬೪ ದೇಶಗಳಲ್ಲಿ ಮಳಿಗೆಗಳು ಅಡುಗೆ ಮನೆಯ ಮೇಜಿನ ಮೇಲೆ ಶುರುವಾದ ಐಕಿಯ ತನ್ನ ಮೊದಲ ಮಳಿಗೆಯನ್ನು ೧೯೫೮ರಲ್ಲಿ ತೆರೆದು ಇಂದು ಜಗತ್ತಿನ ೬೪ ದೇಶಗಳಲ್ಲಿ ೪೭೧ ಮಳಿಗೆಗಳನ್ನು ಹೊಂದಿದೆ. ಸ್ವೀಡನ್ ದೇಶದ ಸಂಸ್ಥೆಯಾದರೂ ಅತಿ ಹೆಚ್ಚು
ಐಕಿಯ ಮಳಿಗೆಗಳಿರುವುದು ಜರ್ಮನಿ ದೇಶದಲ್ಲಿ. ಜಗತ್ತಿನ ಅತೀ ವಿಶಾಲವಾದ ಮಳಿಗೆ ಫಿಲಿಪೈನ್ಸ್ ದೇಶದ ಪಸಾಯ್ ನಗರದಲ್ಲಿದೆ. ಅಂದ ಹಾಗೆ, ಐಕಿಯ ಸ್ಟೋರಿನಲ್ಲಿ ರುಚಿಯಾದ ಆಹಾರ ಸಿಗುವ ಹೋಟೆಲಿದೆ ಎಂದು ಮೊದಲೇ ತಿಳಿಸಿದ್ದೇನಲ್ಲ, ಅದು ಮೊದಲ ಬಾರಿಗೆ ಸ್ಟೋರಿನೊಳಗೆ ೧೯೬೦ರಲ್ಲಿ ಕಾಣಿಸಿಕೊಂಡಿತು.

ಬೆಂಕಿಪೊಟ್ಟಣಗಳನ್ನು ತಯಾರಿಸಿ ಮಾರಿದ ಬಾಲಕ, ಅದೇ ವ್ಯವಹಾರದ ಚಾಣಾಕ್ಷತೆಯನ್ನು ಪೀಠೋಪಕರಣಗಳ ತಯಾರಿ ಮತ್ತು ಮಾರಾಟದಲ್ಲೂ ತೋರಿದ್ದರಿಂದ, ಇಂದು ಐಕಿಯ ಇಷ್ಟು ಹೆಸರುವಾಸಿಯಾಗಿದೆ. ಕರ್ನಾಟಕದ ಜನರ ಗಮನ ಸೆಳೆದಿದೆ.

ಪಕ್ಕಾ ವ್ಯವಹಾರಸ್ಥ
ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ IKEA ಸಂಸ್ಥೆಯ ಸ್ಥಾಪಕ ಸ್ವೀಡನ್ ದೇಶದ Ingvar Kamprad. ಇವರು ತಮ್ಮ ಐದನೇ ವಯಸ್ಸಿನ ಬೆಂಕಿ ಪಟ್ಟಣಗಳನ್ನು ಮಾರಲು ಶುರು ಮಾಡಿದ್ದರಂತೆ. ಮುಂದೆ ಬೆಂಕಿ ಪಟ್ಟಣ ಮಾರಾಟದ ಜೊತೆಗೆ ಕ್ರಿಸ್ಮಸ್ ಕಾರ್ಡುಗಳು, ಮ್ಯಾಗಝಿನ್, ಪರ್ಸುಗಳೂ ಸೇರಿಕೊಂಡವು. ೧೪ನೇ ವಯಸ್ಸಿನಲ್ಲಿ ಒಂದು ಸಂಸ್ಥೆ ಸ್ಥಾಪಿಸುವ ಬಯಕೆ ಯಿದ್ದರೂ ವಯಸ್ಸಿನ ಕಾರಣಕ್ಕೆ ಅದು ನೆರವೇರಿರಲಿಲ್ಲ. ಶಾಲೆಗೂ ಹೋಗುತ್ತಿದ್ದ ಇಂಗ್ವಾರ್ ತನ್ನ ಮಂಚದ ಕೆಳಗಿನ ಜಾಗವನ್ನೇ ದಾಸ್ತಾನಿನಂತೆ ಬಳಸಿಕೊಂಡಿದ್ದನಂತೆ. ಪೆನ್ನು, ಪರ್ಸು, ಬ್ಯಾಗು, ವಾಚ್ ಇತ್ಯಾದಿ ವಸ್ತುಗಳನ್ನು ಚೀಲದಲ್ಲಿ ತುಂಬಿ ಅಲ್ಲಿ
ಇಡುತ್ತಿದ್ದರು. ಶಾಲೆಯ ಸಹಪಾಠಿಗಳೇ ಗ್ರಾಹಕರು.