Thursday, 12th December 2024

85 ವರ್ಷದ ಯುವತಿ

ಎಲ್.ಪಿ.ಕುಲಕರ್ಣಿ ಬಾದಾಮಿ

ವಯಸ್ಸು ದೇಹಕ್ಕಾದರೇನು, ಸಾಧಿಸುವ ಮನಸ್ಸಿಗೆ ಅಲ್ಲವಲ್ಲ! ಹೀಗೆಂದು ಯೋಚಿಸಿ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದಾಗ ಇವರ ವಯಸ್ಸು 56.

ಈಗ ಬಹುಪಾಲು ಯುವಜನತೆಗೆ ಇಪ್ಪತ್ತು ವರ್ಷಕ್ಕೆ ಕೈಕಾಲು ನೋವು, 30ಕ್ಕೆ ಮಂಡಿ ನೋವು ಕಾಣಿಸಿಕೊಂಡು, 30 ಹೆಜ್ಜೆ ಯನ್ನು ಸಹ ಕಿತ್ತಿಡಲು ಸಾಧ್ಯವಾಗುತ್ತಿಲ್ಲ. ಅಂತದ್ದರಲ್ಲಿ 84 ವರ್ಷದ ಈ ಗ್ರ್ಯಾಂಡ್ ಮಾ(ಅಜ್ಜಿ ) ಪ್ರತಿ ನಿತ್ಯ ಜಿಮ್ ಮಾಡುತ್ತಾಳೆ, 5 ರಿಂದ 10 ಕಿ.ಮೀ ಓಡುತ್ತಾಳೆ, ಜಿಮ್ ಟ್ರೇನರ್ ಆಗಿ ಕೆಲಸ ನಿರ್ವಹಿಸುತ್ತಾಳೆ, ಮೇಲಾಗಿ ಬಾಡಿ ಬಿಲ್ಡಿಂಗ್‌ನಲ್ಲಿ ಗಿನ್ನೀಸ್ ದಾಖಲೆ ನಿರ್ಮಿಸಿದ್ದಾಳೆಂದರೆ ಅಚ್ಚರಿಯಾಗುತ್ತದೆ. ಹಾಗಾದರೆ ಆ ಹಿರಿಯ ಜೀವ ಯಾರೂ ಅಂತಿರಾ? ಅವಳೇ ‘ಮಿಸ್ ಅರ್ನಿ’ ಎಂದು ಹೆಸರುವಾಸಿಯಾದ ಅರ್ನ್‌ಸ್ಟೈನ್ ಶೆಫರ್ಡ್.

ಅಮೆರಿಕದ ಬಾಲ್ಟಿಮೋರ್‌ನಲ್ಲಿ 16 ನೇ ಜೂನ್ 1936 ರಲ್ಲಿ ಜನಿಸಿದ ಅರ್ನ್‌ಸ್ಟೈನ್ ಶೆಫರ್ಡ್, ಬಾಲ್ಯದಿಂದಲೂ ಬಲು ಚೂಟಿಯ ಹುಡುಗಿ. ಬೆಳೆದಂತೆ ತನ್ನ ಸಹೋದರಿ ಮಿಲ್ಡ ರೆಡ್ ಬ್ಲ್ಯಾಕ್ ವೆಲ್ ಜೊತೆ ಸೇರಿ ಮಾಡಲ್ ಆಗಿ ವೃತ್ತಿ ಆರಂಭಿಸಿದರು. ಮಾಡಲಿಂಗ್ ನಲ್ಲಿ ವೆಲ್ವೆಟ್ ಎಂದು ಪ್ರಸಿದ್ಧಿಯಾಗಿದ್ದರು, ಈ ಮಿಲ್ಡ್ ರೆಡ್ ಬ್ಲ್ಯಾಕ್ ವೆಲ್.

ಒಂದು ದಿನ ಇಬ್ಬರೂ ಸಹೋದರಿಯರು ಸ್ವಿಮ್ ಸೂಟ್ ಧರಿಸುತ್ತಾರೆ. ಅದೇಕೋ ಇವರಿಬ್ಬರ ದೇಹಕ್ಕೆ ಸರಿಹೊಂದುವುದಿಲ್ಲ. ತಾವು ಧರಿಸಿದ ಆ ಸ್ವಿಮ್ ಸೂಟ್ ನ್ನು ನೋಡಿ ಇಬ್ಬರೂ ನಗುತ್ತಾರೆ. ಮಾಡಲಿಂಗ್ ಮಾಡಿ ಮಾಡಿ ಝೀರೋ ಸೈಜ್ ಆಗಿದೆ ನಮ್ಮ ದೇಹ. ಅದಕ್ಕಾಗಿ ನಾವಿನ್ನು ಬಾಡಿ ಫಿಟ್ ಆಗಿ ಇಟ್ಟುಕೊಳ್ಳಲು ಏರೋಬಿಕ್ಸ್ ಮತ್ತು ಜಿಮ್ ತರಗತಿಗಳಿಗೆ ಸೇರೋಣ ಎಂದು ನಿರ್ಧರಿಸುತ್ತಾರೆ.

ಪ್ರಾರಂಭದಲ್ಲಿ ಸಹೋದರಿ ಜೊತೆ ಜಿಮ್ ಸೇರುವಾಗ ಮಿಸ್ ಅರ್ನಿಯವರ ವಯಸ್ಸು 56 ವರ್ಷ ! ಅದೆಕೋ ಗೊತ್ತಿಲ್ಲ, ಸಹೋದರಿ ವೆಲ್ವೆಟ್‌ಳು ಮೆದುಳಿನ ತೊಂದರೆಯಿಂದ ಅಸು ನೀಗುತ್ತಾಳೆ. ಪ್ರೀತಿಯ ಸಹೋದರಿಯನ್ನು ಕಳೆದುಕೊಂಡ ಅರ್ನಿ ಬಹಳ ಖಿನ್ನತೆಗೆ ಒಳಗಾಗಿ ಕೆಲವು ದಿನ ಮನೆಯ ಒಂದು ಮೂಲೆ ಸೇರಿಬಿಡುತ್ತಾಳೆ. ಆಗ ಅವಳ ಸ್ನೇಹಿತೆಯರು, ‘ನಿನಗಾಗಿ ಅಲ್ಲದಿದ್ದರೂ ನಿನ್ನ ಸಹೋದರಿ ಯ ಮಹಾದಾಸೆಯನ್ನು ಈಡೇರಿಸಲು ನೀನು ಮತ್ತೆ ಮೊದಲಿನಂತಾಗಬೇಕು‘ ಎನ್ನುತ್ತಾರೆ.

ಅಂದೇ ಅರ್ನಿ, ನಾನು ಜೀವನದಲ್ಲಿ ಏನಾದರೂ ಸಾಧಿಸಿದರೆ ಸಹೋದರಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಪಣತೊಡುತ್ತಾಳೆ. ಮಿರ್ಸ್ಟ ಯುನಿವರ್ಸ್ ಆಗಿದ್ದ ಯಾರ್ನಿ ಶಾಮ್ ಬರ್ಗ್‌ರ ಜಿಮ್ ತರಬೇತಿ ಶಾಲೆಗೆ ಅರ್ನಿ ಸೇರುತ್ತಾಳೆ. ಅಲ್ಲಿಂದ ಅವಳು ಜೀವನ ದಲ್ಲಿ ಹಿಂದೆ ಸರಿದದ್ದೇ ಇಲ್ಲ. ಜಿಮ್ ತರಬೇತಿ ಪಡೆಯುತ್ತಾ, ಸ್ಥಳೀಯ ದೇಹ ದಾರ್ಢ್ಯ ಪ್ರದರ್ಶನ ಪಂದ್ಯಗಳಲ್ಲಿ ಪಾಲ್ಗೊಂಡು ಎಲ್ಲರಿಂದಲೂ ಸೈ ಎನಿಸಿಕೊಳ್ಳುತ್ತಾಳೆ. ರಾಷ್ಟ್ರೀಯ ಮಟ್ಟದ 2 ಜಿಮ್ ಸ್ಪರ್ಧೆಗಳು ಮತ್ತು 9 ಮ್ಯಾರಾಥಾನ್ ಓಟಗಳಲ್ಲಿ ಪಾಲ್ಗೊಂಡು ಪದಕಗಳನ್ನು ಗೆಲ್ಲುತ್ತಾಳೆ.

ಪ್ರತಿದಿನ ಹತ್ತು ಮೈಲು ಓಟ
ಮಿಸ್ ಅರ್ನಿಯ ಈ ಎಲ್ಲ ಸಾಧನೆಯನ್ನು ಮನಗಂಡು 2010 ರ ಮಾರ್ಚ್ ನಲ್ಲಿ ಇಟಲಿಯ ರೋಮ್ ನಲ್ಲಿ ಜರುಗಿದ ಬಾಡಿ ಬಿಲ್ಡಿಂಗ್ ವೇದಿಕೆಯ ಮೇಲೆ ‘ವಲ್ಡ ಓಲ್ಡೆಸ್ಟ್ ಪರ್ಫಾಮಿಂಗ್‌ ಫಿಮೇಲ್ ಬಾಡಿ ಬಿಲ್ಡರ್’ ಎಂದು ಬಿರುದು ಪಡೆಯುವುದರ ಜೊತೆಗೆ ಗಿನ್ನೀಸ್ ದಾಖಲೆ ಪುಸ್ತಕದಲ್ಲಿ ಶಾಶ್ವತವಾಗಿ ಸೇರ್ಪಡೆಯಾಗುತ್ತಾಳೆ.

2016 ರಲ್ಲಿ, ಡಿಟರ್ಮೈನ್ಡ್, ಡೆಡಿಕೇಟೆಡ್ ಡಿಸಿಪ್ಲೇನ್ ಟು ಬಿ ಫಿಟ್ ಎಂಬ ಪುಸ್ತಕವನ್ನು ಬರೆದಿರುವ ಅರ್ನಿ, ತಮ್ಮ ಬದಲಾದ 17 ವರ್ಷದ ಈ ಬಾಡಿ ಬಿಲ್ಡಿಂಗ್ ವೃತ್ತಿಯಲ್ಲಿ ದೇಹದ ಮೇಲೆ ಮತ್ತು ದೇಹದ ಒಳಗೆ ಯಾವುದೇ ತೀವ್ರತರದ ಗಾಯಗಳನ್ನಾಗಲಿ, ನೋವನ್ನಾಗಲಿ ಹೊಂದಿಲ್ಲ. ಜಿಮ್ಮಿಗೆ ಸೇರಿದಾಗಿನಿಂದಲೂ ಪ್ರತಿ ದಿನ ಮುಂಜಾನೆ 2:30 ಕ್ಕೆ ಎದ್ದು ದಿನ ಕರ್ಮಗಳನ್ನು ಮುಗಿಸಿ 10 ಮೈಲು (16 ಕಿ.ಮೀ ) ರನ್ನಿಂಗ್ ಮಾಡಿ ಜಿಮ್ ಮಾಡುತ್ತಾ ಬಂದಿದ್ದಾರೆ.

5 ಅಡಿ 5 ಇಂಚು ಎತ್ತರ, 130ಪೌಂಡ್ (ಸುಮಾರು 63 ಕೆ.ಜಿ) ತೂಗುವ ಮಿಸ್ ಅರ್ನಿ ಅವರದು ಬಲು ಶಿಸ್ತುಬದ್ಧ ಜೀವನ. ‘ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೆ, ಜೀವನದ ಪ್ರತೀ ಕ್ಷಣವನ್ನು ಮನಃಪೂರ್ವಕ ಅನುಭವಿಸಬೇಕು. ದುಃಖದ ಸಂದರ್ಭವನ್ನು ಬೇಗನೆ ಮರೆಯುತ್ತಾ, ಮನಸ್ಸನ್ನು ಖುಷಿಯಾಗಿ ಇಟ್ಟುಕೊಳ್ಳಬೇಕು’ ಎಂದು ಹೇಳುವ ಅರ್ನ್‌ಸ್ಟೈನ್ ಶೆಫರ್ಡ್, ಈಗಲೂ ದೇಹವನ್ನು ಹುರಿಗೊಳಿಸುವುದನ್ನು ನಿಲ್ಲಿಸಿಲ್ಲ. ಆ ಮೂಲಕ ಇಡೀ ಜಗತ್ತಿನ ಯುವಜನತೆಗೆ ಈಕೆ ಸ್ಫೂರ್ತಿಯೇ ಸರಿ.