Thursday, 12th December 2024

ನಿಮ್ಮ ಮದುವೆ ಯಾವಾಗ ?

ಡಾ.ಕೆ.ಎಸ್.ಚೈತ್ರಾ

ಓದು ಮುಗಿಯಿತು, ಕೆಲಸ ಸಿಕ್ಕಿತು; ಇನ್ನು ಮದುವೆ ಆಗಿ ಸೆಟ್‌ಲ್‌ ಆಗುವುದು ಯಾವಾಗ? ಇದು ಇಪ್ಪತ್ತೈದು ದಾಟಿದ ಯುವತಿಯರು ಎದುರಿಸುವ ಸಾಮಾನ್ಯ ಪ್ರಶ್ನೆ. ಈ ಕಿರಿಕಿರಿ ತಪ್ಪಿಸಿಕೊಳ್ಳಲೆಂದೇ ಕೆಲವರು ಸಮಾರಂಭಗಳಿಗೆ ಹೋಗುವುದು ನಿಲ್ಲಿಸಿದರೆ ಮತ್ತೆ ಕೆಲವರದ್ದು ಮೌನ ಅಥವಾ ಸಪ್ಪೆ ಮುಖದ ಉತ್ತರ.

ಅಕಸ್ಮಾತ್ ‘ಏನವಸರ? ಇಷ್ಟು ಬೇಗ ಬೇಡ’ ಎಂಬ ಉತ್ತರ ಕೊಟ್ಟರಂತೂ ಏಕೆ ಮದುವೆ ಬೇಗ ಆಗಬೇಕು ಎಂಬ ಬಗ್ಗೆ ಬುದ್ಧಿವಾದ ನೀಡುವುದು ಶತಃಸಿದ್ಧ! ವಯಸ್ಸಾದಂತೆ ಒಳ್ಳೆಯ ವರ ಸಿಗುವುದು ಕಷ್ಟ, ಲೇಟಾಗಿ ಮದುವೆಯಾದರೆ ಮಕ್ಕಳಾಗುವುದು ಕಠಿಣ,
ಒಂಟಿಯಾಗಿ ಬದುಕುವುದು ಸುಲಭವಲ್ಲ. ಇವು ಸಾಮಾನ್ಯ ಅಂಶಗಳು.

ಹೀಗೆ ಕೇಳುವವರ ಮಾತುಗಳ ಹಿಂದೆ ಹೆಚ್ಚಿನ ಬಾರಿ ಕಾಳಜಿ, ಸಹಜ ಕುತೂಹಲ ಇರುವುದು ನಿಜವೇ. ಆದರೂ ಹಿಂದೆಲ್ಲಾ ಇಂತಹ ಮಾತುಗಳು ಕೆಲಮಟ್ಟಿಗೆ ಆತಂಕ ಮೂಡಿಸುತ್ತಿದ್ದವು. ಆದರೀಗ ಪರಿಸ್ಥಿತಿ ಬದಲಾಗಿದೆ. ಯುವತಿಯರ ವಿದ್ಯಾಭ್ಯಾಸದ ಮಟ್ಟ ಹೆಚ್ಚಿದೆ; ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಹೊರಗಿನ ವ್ಯವಹಾರ, ಪ್ರವಾಸ, ಓಡಾಟ ಎಲ್ಲವನ್ನೂ ನಿಭಾಯಿಸ ಬಲ್ಲರು. ಮದುವೆ ಜೀವನದ ಪರಮ ಧ್ಯೇಯ, ಮೌನವಾಗಿ ಸಹಿಸಿ ಬಾಳುವುದು ಪರಮ ಮಂತ್ರ ಎಂಬ ಬೋಧನೆಯನ್ನು ಅನುಸರಿಸಲು ಸಿದ್ಧರಿಲ್ಲ.

ವಿದ್ಯಮಾನಗಳನ್ನು ನೋಡಿ ಸ್ವಂತ ನಿರ್ಣಯ ಕೈಗೊಳ್ಳುವ ಶಕ್ತಿಯಿದೆ. ಇದೆಲ್ಲದರ ಫಲವಾಗಿ ಯುವತಿಯರು ಮದುವೆಯ ಕುರಿತಾದ ವಾದಕ್ಕೆ ಮಂಡಿಸುತ್ತಿರುವ ಪ್ರತಿವಾದ ಹೀಗಿದೆ. ಒಳ್ಳೆಯ ವರ ಸಿಗುವುದು ಕಷ್ಟ ಓದಿ, ಕೆಲಸಕ್ಕೆ ಸೇರಿ ದುಡ್ಡು ಗಳಿಸು ವಾಗಲೇ ಒಳ್ಳೆಯ ಹುಡುಗ ಸಿಕ್ಕ ಎಂದು ಮದುವೆಯಾಗುವುದೇನೋ ಸರಿ. ಆದರೆ ಜನರ ಪ್ರಕಾರ ಒಳ್ಳೆಯವನು ಎಂದರೆ ನೋಡಲು ಸುಂದರ, ಕೈಗೆ ದೊಡ್ಡ ಸಂಬಳ ಮಾತ್ರ!

ಸ್ವಭಾವದ ಬಗ್ಗೆ ಅರಿವಿಲ್ಲ. ಕೂಡಿ ಬಾಳಬೇಕಾದವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದೇ ಮದುವೆಯಾಗಿಬಿಟ್ಟರೆ ಮದುವೆಯ ದಿನವಷ್ಟೇ ಚೆಂದ. ಅನೇಕ ಬಾರಿ ಹಿರಿಯರು ಹೇಳಿದ ಒಳ್ಳೆಯ ಹುಡುಗನನ್ನು ಸಣ್ಣ ವಯಸ್ಸಿಗೇ ತಮ್ಮ ಆಸೆ-ಆಕಾಂಕ್ಷೆಗಳನ್ನು ಬದಿಗಿಟ್ಟು ಮದುವೆಯಾದರೂ, ಹೊಂದಾಣಿಕೆಯ ವಿಷಯದಲ್ಲಿ ಏಕಮುಖ. ಅತ್ತ ಕುಟುಂಬವೂ ಇಲ್ಲ, ಇತ್ತ ವೃತ್ತಿಗೂ ಪೆಟ್ಟು. ಇದೆಲ್ಲದರ ಜತೆ ಆತ್ಮವಿಶ್ವಾಸಕ್ಕೆ ಧಕ್ಕೆ. ಎಲ್ಲವೂ ಸರಿಯಾಗಿದ್ದಾಗ ಕುಟುಂಬ ಒಳ್ಳೆಯದೇ, ಆದರೆ ಇತ್ತೀಚಿನ ದಿನಗಳಲ್ಲಿ ಹಾಗಾಗುತ್ತಿಲ್ಲ. ವಿಚ್ಛೇದನ, ಕೌಟುಂಬಿಕ ದೌರ್ಜನ್ಯಗಳೇ ಹೆಚ್ಚು. ತಡವಾದರೂ ಪರವಾಗಿಲ್ಲ; ವೃತ್ತಿ ಬದುಕಿನಲ್ಲಿ ನೆಲೆನಿಂತು, ಸಂಗಾತಿಯೊಡನೆ ಚರ್ಚಿಸಿ ಮದುವೆ ಆಗುವುದು ಒಳ್ಳೆಯದು.

ಮದುವೆ ತಡವಾದಷ್ಟೂ ಮಕ್ಕಳಾಗುವುದು ಕಠಿಣ
ವೈದ್ಯಕೀಯವಾಗಿ ಮೂವತ್ತರ ಒಳಗೆ ಮೊದಲ ಬಾರಿ ತಾಯಿಯಾದರೆ ಒಳ್ಳೆಯದು ನಿಜ. ಈಗೆಲ್ಲಾ ಹಿಂದಿನಂತಲ್ಲ, ಒಂದೋ ಅಬ್ಬಬ್ಬಾ ಎರಡು ಮಕ್ಕಳು; ತಡವಾದರೂ ನಡೆಯುತ್ತದೆ. ಸಂಸಾರ ಏನೆಂದು ತಿಳಿಯುವ ಮೊದಲೇ ಸಣ್ಣ ವಯಸ್ಸಿನಲ್ಲಿ ತಾಯಿ ಯಾಗಿ ಅವರನ್ನು ಸಾಕಲಾಗದೇ ಬದುಕು ನರಕವಾಗುವ ಸಂದರ್ಭಗಳು ಸಾವಿರಾರು. ಅದರ ಬದಲು ಯೋಚಿಸಿ, ಮಕ್ಕಳನ್ನು ಸಾಕಲು ದೈಹಿಕ-ಮಾನಸಿಕ-ಭಾವನಾತ್ಮಕ ಮತ್ತು ಆರ್ಥಿಕವಾಗಿ ಸಿದ್ಧರಾಗಿರುವಾಗ ಪಡೆಯುವುದು ಉತ್ತಮ.

ಹಾಗೆಯೇ ಆಧುನಿಕ ವೈದ್ಯ ವಿಜ್ಞಾನದಿಂದ ಇಂದು ಸಾಕಷ್ಟು ಮುಂದುವರಿದಿದ್ದು ನಲವತ್ತರವರೆಗೆ ಮಕ್ಕಳನ್ನು ಪಡೆಯಲು ಸಾಧ್ಯವಿದೆ. ಒಂಟಿಯಾಗಿ ಬದುಕುವುದು ಸುಲಭವಲ್ಲ ಮದುವೆಯಾಗಿ ತಮ್ಮದೇ ಮನೆಗೆ ಬಂದಾಗ ಜವಾಬ್ದಾರಿ ನಿಧಾನವಾಗಿ ಹೆಗಲಿಗೇರುತ್ತದೆ. ಅಡಿಗೆ, ಗ್ಯಾಸ್, ಬಿಲ್ಲು, ಬ್ಯಾಂಕು, ಆಫೀಸುಗಳಲ್ಲಿ ದುಡಿದು ಮೈ-ಮನಕ್ಕೆೆ ದಣಿವು. ಇಬ್ಬರೂ ಅರ್ಥ ಮಾಡಿ
ಕೊಂಡು ಜವಾಬ್ದಾರಿ ಹಂಚಿಕೊಂಡರೆ ಪರವಾಗಿಲ್ಲ.

ತನ್ನ ವೃತ್ತಿ-ಅನುಕೂಲವನ್ನು ಅನುಸರಿಸಿ ಅದರಂತೆ ನಡೆಯುವುದು ಪತ್ನಿಯ ಸಹಜ ಕರ್ತವ್ಯ ಎಂಬ ಭಾವನೆ ಗಂಡನಿಗಿದ್ದರೆ ಒಂದೇ ವಿಚ್ಛೇದನ ಇಲ್ಲದಿದ್ದರೆ ಐಡೆಂಟಿಟಿ ಕಳೆದುಕೊಂಡೆವು ಎಂಬ ಬೇಸರ. ಇನ್ನೊಬ್ಬರ ಮಾತಿಗೆ ಕಟ್ಟು ಬಿದ್ದು ಮದುವೆ ಯಾಗಿ, ನಂತರ ಸಮಾಜಕ್ಕೆ ಹೆದರಿ ಎಲ್ಲವನ್ನೂ ಸಹಿಸುವ ಸ್ವಂತಿಕೆ ಇಲ್ಲದ ಜೀವನ. ಇದೆಲ್ಲದರ ಬದಲು ಬೇಕಾದಂತೆ ತಿಂದು-ತಿರುಗಿ, ಯಾರ ಹಂಗಿಲ್ಲದೇ ಒಂಟಿಯಾಗಿರುವುದೇ ಉತ್ತಮ!

ಯುವತಿಯರು ಮಂಡಿಸುವ ಈ ಅಂಶಗಳನ್ನು ಸಂಪೂರ್ಣ ತಿರಸ್ಕರಿಸುವ ಹಾಗಿಲ್ಲ. ಅವರಿಗೆ ಸಮಾಜದಿಂದ ಮದುವೆ- ಕುಟುಂಬದ ಬಗ್ಗೆ ಹೆಚ್ಚಿನ ಒತ್ತಡಗಳಿವೆ ಎಂಬುದು ಸತ್ಯ. ಸಮಾಜದ ಸಲುವಾಗಿ, ಇತರರ ಒತ್ತಡಕ್ಕಾಗಿ ಮದುವೆಯಾಗುವುದು ಸರಿಯಲ್ಲ. ಹಾಗೆಂದು ಸಂಗಾತಿಯೇ ಬೇಡ ಎನ್ನುವುದೂ ತಪ್ಪು.

ತಕ್ಕ ಸಂಗಾತಿ, ಮದುವೆಯ ವಯಸ್ಸು, ಮಕ್ಕಳು, ವೃತ್ತಿ ಎಲ್ಲವೂ ವೈಯಕ್ತಿಕ ಆಯ್ಕೆ. ಕುಟುಂಬ ಎಂಬುದು ಉತ್ತಮ ಸಮಾಜದ ಪ್ರಮುಖ ಘಟಕ. ಬದುಕಲು ಇತರರೂ ಬೇಕು. ಬರೀ ನಾನು ಎನ್ನುವುದು ಸರಿಯಲ್ಲ. ತನ್ನನ್ನೇ ನಂಬಿ, ಪ್ರೀತಿಸಿ, ತನ್ನ ಅಗತ್ಯ ಗಳಿಗೇ ಪ್ರಾಶಸ್ತ್ಯ ನೀಡುತ್ತಾ ಹೋದಲ್ಲಿ ಸ್ವಮೋಹಿಗಳಾಗುವ ಸಾಧ್ಯತೆ ಹೆಚ್ಚಿದೆ.

ಇಬ್ಬರು ವ್ಯಕ್ತಿಗಳು ಕೂಡಿ ಬಾಳಬೇಕಾದರೆ ಕೆಲಮಟ್ಟಿಗಿನ ಹೊಂದಾಣಿಕೆ ಅನಿವಾರ್ಯ. ಹೀಗಾದಾಗ ಅನೇಕ ಬಾರಿ ಮದುವೆ ಇಲ್ಲದಿದ್ದರೇ ಒಳ್ಳೆಯದಿತ್ತು ಅನ್ನಿಸಲೂಬಹುದು. ಹಾಗೆಂದು ಮದುವೆಯೆಂಬ ವ್ಯವಸ್ಥೆಯನ್ನು ತಿರಸ್ಕರಿಸುವುದು ಒಳ್ಳೆಯದಲ್ಲ. ಸಂಘಜೀವಿಯಾದ ಮಾನವರಿಗೆ ನೋಟ, ಸ್ಪರ್ಶ, ಮಾತು ಎಲ್ಲವೂ ಮುಖ್ಯ. ಮೇಲ್ನೋಟಕ್ಕೆ ಮದುವೆ ಎಂದರೆ ದಿನನಿತ್ಯದ
ವಾದ ವಿವಾದ, ಅಸಮಾಧಾನ, ಜವಾಬ್ದಾರಿ ಎನಿಸಬಹುದು.

ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಎಂಬ ಭಾವನೆ ಮೂಡಿಸಬಹುದು. ಇವೆಲ್ಲವೂ ಜೀವನ ಮತ್ತು ಎಲ್ಲಾ ಸಂಬಂಧಗಳಲ್ಲಿಯೂ
ಇದ್ದದ್ದೇ! ಮದುವೆ, ಅಧಿಕಾರ ಸ್ಥಾಪಿಸುವ ಹೋರಾಟವಲ್ಲ, ಪರಸ್ಪರ ನಂಬಿಕೆಯಿಂದ ಕೂಡಿ ಬಾಳುವ ಅನುಬಂಧ. ಭಿನ್ನಾಭಿ ಪ್ರಾಯಗಳು ಸಹ ಜ. ಅದನ್ನು ಪರಿಹರಿಸಿ ಮುಂದುವರಿಯುವುದು, ಸಂದರ್ಭಕ್ಕೆ ತಕ್ಕಂತೆ ರಾಜಿಯಾಗುವುದು ಸರಿ. ಸುಖ-ದುಃಖ ಹಂಚಿಕೊಳ್ಳಲು ನನ್ನವರಿದ್ದಾರೆ ಎಂಬ ಸುರಕ್ಷಿತ ಭಾವನೆ ಬದುಕಿಗೆ ಬೇಕು.

ಪತಿ- ಪತ್ನಿಯರು ಪರಸ್ಪರ ಪ್ರೀತಿ-ಗೌರವಗಳಿಂದ ಬಾಳಿದರೆ ಸಂಸಾರದಲ್ಲಿ ಸರಿಗಮ. ವೈಯಕ್ತಿಕ ಸ್ವಾತಂತ್ರ್ಯ ಬೇಕು ಎಂಬುದು ನಿಜವಾದರೂ ಕೂಡಿ ಬಾಳುವುದರಲ್ಲಿ ಸ್ವಂತ ಮತ್ತು ಸಮಾಜದ ಹಿತವೂ ಇದೆ.