Thursday, 12th December 2024

ಅಮೆರಿಕ ಅಫಘಾನಿಸ್ತಾನದಿಂದ ಪಲಾಯನ ಮಾಡಿದ್ದೇಕೆ ?

ಐಸಿಎಸ್ ಸಂಘಟನೆ ಹೇಳೋದೇ ಬೇರೆ 

ಶ್ರೀನಿವಾಸ ಜೋಕಟ್ಟೆ, ಮುಂಬೈ

ಅಫ್ಘಾನಿಸ್ತಾನದ ಬಾಮಿಯಾನದಲ್ಲಿ ಎರಡು ದಶಕದ ಹಿಂದೆ 2001ರಲ್ಲಿ ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ, ಇಂದಿಗೂ ಶಿಯಾ ಮುಸ್ಲಿಮರನ್ನು (40 ಲಕ್ಷದಷ್ಟು ಇರುವ ಹಜಾರಾ ಸಮುದಾಯವನ್ನು) ಎಷ್ಟು ಸಾಧ್ಯವೋ ಅಷ್ಟು ಹಿಂಸಿಸುತ್ತಿರುವ, ಮಹಿಳೆಯರನ್ನು ಭೋಗದ ವಸ್ತುವಾಗಿ ಪರಿಗಣಿಸಿ ಅವರನ್ನು
ಶಿಕ್ಷಣದಿಂದ ವಂಚಿತರನ್ನಾಗಿಸಿ ಮನೆಯೊಳಗೆ ಕೂರಿಸುತ್ತಿರುವ ಈ ಸುನ್ನೀ ಇಸ್ಲಾಮಿಕ್ ಧಾರ್ಮಿಕ ಬೊಗಳೆ ಬಿಡುವ ತಾಲಿಬಾನ್ ಉಗ್ರರುಗಳನ್ನು ಬೆಂಬಲಿಸುವ ಜನರು, ಬುದ್ಧನ ಶಾಂತಿ ಪ್ರಿಯತೆಯನ್ನು ಎಂದಾದರೂ ಅರ್ಥ ಮಾಡಲು ಸಾಧ್ಯವೇ? ಎಂತಹ ಆಡಳಿತವನ್ನು ಈ ತಾಲಿಬಾನ್‌ಗಳು ಅಫ್ಘಾನಿಸ್ತಾನದಲ್ಲಿ
ನೀಡಲು ಸಾಧ್ಯ? ತಾಲಿಬಾನ್ ಭಯೋತ್ಪಾದಕ ಸಂಘಟನೆಗೆ ಆರಂಭದಲ್ಲಿ ಸೇರಿದವರೆಲ್ಲ ಹೆಚ್ಚಿನವರು ಪಾಕಿಸ್ತಾನದ ಮದರಸಗಳಲ್ಲಿ ಶಿಕ್ಷಣ ಪಡೆದವರು.

ಇಂದು ಪಾಕಿಸ್ತಾನದ ನಂತರ ತಾಲಿಬಾನಿಗಳ ಅಫ್ಘಾನಿಸ್ತಾನವು ವಿಶ್ವದ ಆತಂಕವಾದಿಗಳ ಅತಿದೊಡ್ಡ ಟ್ರೈನಿಂಗ್ ಸೆಂಟರ್ ಆಗುವ ಎಲ್ಲಾ ಸಾಧ್ಯತೆಗಳಿವೆ. ತಾಲೀಬಾನ್‌ಗಳ ‘ಅಪ್ಪ’ ಪಾಕಿಸ್ತಾನವನ್ನು ವಿಶ್ವ ನಿಂದಿಸಿದರೂ ಅದು ತನ್ನ ಕುತಂತ್ರಗಳಿಂದ ತಪ್ಪಿಸಿಕೊಳ್ಳುತ್ತಾ ಬಂದಿದೆ. ಎರಡನೇ ಬಾರಿ ತಾಲಿಬಾನ್ ಕಾಬೂಲ್ ವಶಪಡಿಸಿದ ನಂತರ, ಅತ್ತ ತಾಲಿಬಾನ್ ಉಗ್ರರನ್ನು ಪಾಕ್ ಜೈಲುಗಳಿಂದ ಬಿಡುಗಡೆ ಮಾಡಲಾಗುತ್ತಿದೆ. ವಿಶ್ವ ನೋಡುತ್ತಲೇ ಇತ್ತು, ತಾಲಿಬಾನ್ ಕಾಬೂಲ್‌ಗೆ ಕಾಲಿಟ್ಟೇ ಬಿಟ್ಟಿತು. ಅಫ್ಘಾನಿಸ್ತಾನ ಎರಡನೇ ಬಾರಿ ತಾಲಿಬಾನಿಗಳ ಕೈವಶವಾಗಿ ತಾಲಿಬಾನ್ ಯುಗ ಮತ್ತೆ ಆರಂಭವಾಗಿದೆ.

ಅಮೆರಿಕದ ಪ್ರಲಾಪ
ಅಮೆರಿಕದ ರಾಷ್ಟ್ರಪತಿ ಜೋ ಬೈಡೆನ್ ಬೊಬ್ಬೆ ಹೊಡೆಯುತ್ತಿದ್ದಾರೆ- ನಾವು ಕೋಟಿಗಟ್ಟಲೆ ಡಾಲರ್ ಅಫ್ಘಾನಿಸ್ತಾನ ಸುರಕ್ಷೆಗೆ ಖರ್ಚು ಮಾಡಿದ್ದೆವು! ಅಮೆರಿಕದ ವಾರ್ ಆನ್ ಟೆರರ್..ಘೋಷಣೆ ಎಲ್ಲಿ ಹೋಯ್ತು? ಆಗಸ್ಟ್ 6 ರಿಂದ 15 ರ ಈ ಹತ್ತು ದಿನಗಳಲ್ಲಿ ಅಮೇರಿಕದ 20 ವರ್ಷಗಳ ಶ್ರಮ ಎಲ್ಲ ನೀರುಪಾಲಾಯಿತು. ಕಳೆದ ಎರಡು ದಶಕ ಗಳಿಂದ ಬೀಡು ಬಿಟ್ಟಿದ್ದ ಅಮೆರಿಕ ಸೇನೆ ಮತ್ತು ನ್ಯಾಟೋ ಸೈನಿಕರಿಗೆ ಎಂದೂ ಅಫ್ಘಾನಿಸ್ತಾನದ ಮೇಲೆ ಪೂರ್ಣ ಹಿಡಿತವನ್ನು ಸಾಧಿಸಲು ಆಗಲೇ ಇಲ್ಲ. ಅತ್ತ 2018 ರ ದೋಹಾ ಒಪ್ಪಂದದ ನಂತರ ಅಮೇರಿಕಾ ತನ್ನ ಸೇನೆ ಪೂರ್ತಿ ವಾಪಾಸ್ ಕರೆಸಿಕೊಂಡರೆ, ಇತ್ತ ತಾಲಿಬಾನ್ ನ ನೇತಾ ಮು ಬರಾದರ್ ದೋಹಾ ದಿಂದ ಕಾಬೂಲ್‌ಗೆ ಬಂದಿದ್ದಾನೆ.

ಈವಾಗ ತಾಲಿಬಾನ್ ಭಯೋತ್ಪಾದಕರು ಬಂದೂಕು ಹಿಡಿದು ಸರಕಾರಿ ಸಿಬ್ಬಂದಿ, ಪೊಲೀಸರು, ಸೈನ್ಯಾಧಿಕಾರಿಗಳು, ಪತ್ರಕರ್ತರು, ವಿದೇಶೀ ಎನ್ ಜಿ ಓ ಗಳಿಗೆ ಸಂಬಂಧಿಸಿದ ಜನರ ಮನೆಗಳನ್ನು ಜಾಲಾಡಿಸಲು ಶುರುಮಾಡಿದ್ದಾರೆ. ಒಬ್ಬ ಸೇನಾಧಿಕಾರಿಯನ್ನು ಅದಾಗಲೇ ಹತ್ಯೆ ಮಾಡಿದ್ದಾರೆ. ತಾಲಿಬಾನ್ ಡೋರ್ ಟು ಡೋರ್ ಸರ್ಚ್ ಅಭಿಯಾನ ಆರಂಭಿಸಿದೆ.

ಷರಿಯಾ ಕಾನೂನಿನ ಕಠಿಣ ನಿಯಮಗಳ ನೆಪದಲ್ಲಿ ತಾಲಿಬಾನ್ ಇನ್ನಿಲ್ಲದಂತೆ ಚಿತ್ರಹಿಂಸೆ ದೌರ್ಜನ್ಯ ನಡೆಸಲು ಶುರುಮಾಡಿದೆ. ಅದರ ಗುರಿ ಮಹಿಳೆಯರು, ಮಕ್ಕಳು ಮತ್ತು ಹಜಾರಾ ಶಿಯಾ ಮುಸ್ಲಿಮ್ ಸಮುದಾಯದವರು. 12 ರ ವಯಸ್ಸಿನ ನಂತರದ ಹುಡುಗಿಯರನ್ನು ತಾಲಿಬಾನ್ ತನ್ನ ಭಯೋತ್ಪಾದಕರಿಗೆ
ಬಲಾತ್ಕಾರದ ಮದುವೆ ಮಾಡಿಸಲು ಹೊರಟಿದೆ.

ಪಾಕಿಸ್ತಾನವೇ ಅದರ ಜನಕ
ತಾಲಿಬಾನ್ ಎನ್ನುವುದು ಪಶ್ತೋ ಭಾಷೆಯ ಶಬ್ದ. ಇದರ ಅರ್ಥ ವಿದ್ಯಾರ್ಥಿ. ಉತ್ತರ ಪಾಕಿಸ್ತಾನದಲ್ಲಿ 1990 ರ ಸುಮಾರಿಗೆ ಈ ಸಂಘಟನೆ ಎದ್ದು ನಿಂತಿತು. ಪಶ್ತೂನ್ ಜನರ ಈ ಆಂದೋಲನವನ್ನು ಸುನ್ನೀ ಇಸ್ಲಾಮಿಕ್ ಮದರಸಗಳಿಗೆ ಸಂಬಂಧಿಸಿದ ಜನರು ಗಟ್ಟಿ ಗೊಳಿಸಿದ್ದರು. ಸುನ್ನೀ ಇಸ್ಲಾಮ್ ನ್ನು ಕಟ್ಟರ್ ಪಂಥೀ ರೂಪದಲ್ಲಿ ಕಲಿಸುವ ಮದರಸಗಳಲ್ಲಿ ತಾಲಿಬಾನ್‌ನ ಜನ್ಮವಾಗಿದೆ.

ವರದಿಯಂತೆ ಈ ಮದರಸಗಳಿಗೆ ಫಂಡಿಂಗ್ ಸೌದಿ ಅರಬ್ ನಿಂದ ಬರುತ್ತದೆ. ಇದು ಶಾಂತಿ
ಮತ್ತು ಸುರಕ್ಷೆಯನ್ನು ಸ್ಥಾಪಿಸುವುದಾಗಿ ಹೇಳುತ್ತಿತ್ತು. ಆದರೆ ಆಡಳಿತಕ್ಕೆ ಬರುತ್ತಲೇ (1996-2001 ಇಸ್ಲಾಮಿಕ್ ಕಾನೂನು ಷರಿಯಾ ಆಧಾರದಲ್ಲಿ ಆಡಳಿತ ನಡೆಸಲು ಧರ್ಮದ ಸೋಗಿನಲ್ಲಿ ಹಿಂಸಾ ಅಭಿಯಾನ ಕಾಣಿಸಿತು.

ಗಡ್ಡ ಇಲ್ಲಿ ಕಡ್ಡಾಯ
1998 ರ ಸುಮಾರಿಗೆ ತಾಲಿಬಾನ್ ಅಫ್ಘಾನಿಸ್ತಾನದ 90 ಪ್ರತಿಶತ ಭಾಗವನ್ನು ವಶಪಡಿಸಿತು.ಆದರೆ ಷರಿಯಾ ಕಾನೂನನ್ನು ಮುಂದಿಟ್ಟು ಮಹಿಳೆಯರನ್ನೂ ಬೀದಿ ನಡುವೆ ಕೊಲ್ಲಲು ಮುಂದಾದಾಗ ಅಫ್ಘಾನಿಸ್ತಾನದ ಜನರು ಕಂಗಾಲಾದರು. ಪುರುಷರಿಗೆ ಗಡ್ಡ ಮತ್ತು ಮಹಿಳೆಯರಿಗೆ ಪೂರ್ತಿ ಮುಚ್ಚಿದ ಬುರ್ಕಾ ಕಡ್ಡಾಯ ಮಾಡಿತಷ್ಟೇ ಅಲ್ಲ, 10 ರ ವಯಸ್ಸಿನ ನಂತರದ ಹೆಣ್ಣು ಮಕ್ಕಳಿಗೆ ಶಾಲೆ ಬಂದ್ ಮಾಡಲಾಯಿತು.

ಟಿವಿ, ಸಂಗೀತ, ಸಿನೆಮಾ ಮಹಿಳೆಯರಿಗೆ ನಿಷೇಧಿಸಿತು. 2001 ರಿಂದ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸುವುದಾಗಿ ಹೇಳುತ್ತಿದ್ದ ಅಮೆರಿಕ ತನ್ನ ಮಿಶನ್ ಪೂರ್ಣಗೊಳಿಸದೆಯೇ 2021 ರ ಮೇ ಒಂದರಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿತು. ಇದನ್ನೇ ಕಾಯುತ್ತಿದ್ದ ತಾಲಿಬಾನ್, ರಾಜಧಾನಿ
ಕಾಬೂಲ್‌ನತ್ತ ಬರತೊಡಗಿತು. ಆಗಸ್ಟ್ 15 ರ ನಂತರ ಎರಡನೇ ಬಾರಿಗೆ ಅಫ್ಘಾನಿಸ್ತಾನದ ಆಡಳಿತ ಚುಕ್ಕಾಣಿ ಕೈಗೆತ್ತಿಕೊಂಡಿದೆ. ಸುಮಾರು ಎರಡುವರೆ ಲಕ್ಷದಷ್ಟು ಇರುವ ಅಫ್ಘಾನಿಸ್ತಾನದ ಸೈನಿಕರು 85 ಸಾವಿರದಷ್ಟು ಇರುವ ತಾಲೀಬಾನ್ ಉಗ್ರರುಗಳಿಗೆ ಭಯಪಟ್ಟದ್ದು ಹೇಗೆ? ದೇಶದ ಅಧ್ಯಕ್ಷರೇ ಹೆದರಿ ಓಡಿದರೆ ಇತರರ ಪಾಡೇನು? ಐಸಿಸ್ ಉಗ್ರರು ಮತ್ತು ಅಲ್ ಕಾಯ್ದಾ ಉಗ್ರರು ತೆರೆಮರೆಯಲ್ಲಿ ತಾಲಿಬಾನ್‌ಗೆ ಬೆಂಬಲಿಸುತ್ತಾ ಬಂದವರು.

ತಾಲಿಬಾನ್‌ನ ವಿಜ್ರಂಭಣೆಯಿಂದ ವಿಶ್ವದಲ್ಲಿ ಅಲ್ ಕಾಯ್ದಾ, ಬೋಕೋ ಹರಾಮ, ಅಲ್ ಸಹಾಬ, ತಹರೀಕ್ ಎ ತಾಲಿಬಾನ್, ಹಕ್ಕಾನೀ ಬಣ…..ಈ ಎಲ್ಲ ಭಯೋತ್ಪಾದಕರ ಜೊತೆಗೆ ಪಾಕಿಸ್ತಾನದ ಜೈಶ್ ಎ ಮೊಹ್ಮದ್, ಮತ್ತು ಲಶ್ಕರ್ ಎ ತೊಯ್ಬಾ…..ಇಂತಹ ಭಯಾನಕ ಸಂಘಟನೆಗಳು ಮತ್ತೆ ಸಕ್ರಿಯವಾಗುವ ದಿನಗಳು ಬಂದಿವೆ. ಪಾಕಿಸ್ತಾನ ಕಳೆದ ದಶಕದಲ್ಲಿ ವಿಶ್ವದ ನಿಂದೆಗೆ ಗುರಿಯಾದಾಗ ತಾಲಿಬಾನ್ ಗೆ ಸಂಬಂಽಸಿ ತನ್ನ ಸಂಬಂಧವನ್ನು ತ್ಯಜಿಸಿದ್ದಾಗಿ ಹೇಳಿತ್ತು. ಅನಂತರ ತಾಲಿಬಾನ್ ಭಸ್ಮಾಸುರನಂತೆ ಪಾಕಿಸ್ತಾನದಲ್ಲೂ ಆತಂಕ ಸೃಷ್ಟಿಸಿತ್ತು.

2012 ರಲ್ಲಿ ಮಿಂಗೋರಾದಲ್ಲಿ ಮನೆಗೆ ಹೋಗುತ್ತಿದ್ದ ಶಾಲಾಹುಡುಗಿ ಮಲಾಲಾ ಯುಸುಫ್ ಜಯ್ ಗೆ ತಾಲಿಬಾನಿಗಳು ಗುಂಡು ಹಾರಿಸಿದ್ದರು. (ಆಕೆ ಈಗ ಇಂಗ್ಲೆಂಡ್ ನಲ್ಲಿದ್ದಾರೆ.ನೋಬೆಲ್  ಶಾಂತಿ ಪುರಸ್ಕಾರ ದೊರೆತಿದೆ) ಮತ್ತೊಂದೆಡೆ ಪೇಶಾವರದಲ್ಲಿ ಶಾಲೆಗೆ ನುಗ್ಗಿ ನರಸಂಹಾರ ನಡೆಸಿ 148 ಜನರನ್ನು ಕೊಂದಿತ್ತು. ಪಾಕಿಸ್ತಾನ ಈ ಘಟನೆಯ ನಂತರ ತಾಲಿಬಾನ್ ನಾಯಕರನ್ನು ಬಂಽಸಿದ್ದೂ ಇದೆ. 2001 ರ ಸೆಪ್ಟಂಬರ್ 9 ರಂದು ಒಸಮಾ ಬಿನ್ ಲಾಡೆನ್ ಸಹಚರರು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಧ್ವಂಸ ಮಾಡಿದ ಘಟನೆಯ ನಂತರ ಮಾಸ್ಟರ್ ಮೈಂಡ್ ಒಸಾಮಾ ಮತ್ತು ಅಲ್ ಕಾಯ್ದಾಗೆ ಆಶ್ರಯ ನೀಡಿದ್ದ ಆರೋಪವನ್ನು ಪಾಕಿಸ್ತಾನ ಎದುರಿಸಿತ್ತು.

2011 ರಲ್ಲಿ ಅಮೇರಿಕಾ ಒಸಮಾ ಬಿನ್ ಲಾಡೆನ್ ನನ್ನು ಕೊಂದಿತು. ಈತನ ಗುಟ್ಟನ್ನು ಪಾಕ್ ನ ಐ ಎಸ್ ಐ ಅಮೆರಿಕಕ್ಕೆ ಬಿಟ್ಟುಕೊಟ್ಟಿತ್ತು. ಅಮೆರಿಕದ ಒತ್ತಡ ದಿಂದ ಐಎಸ್ ಐ ಒಸಾಮಾ ಅಡಗಿರುವ ತಾಣ ಹೇಳಿತ್ತು ಎಂಬ ಮಾತೂ ಇದೆ. 2013 ರಲ್ಲಿ ತಾಲಿಬಾನೀ ಪ್ರಮುಖ ಮು ಉಮರ್ ನ ಸಾವು ಸಂಭವಿಸಿತು. ತಾಲಿಬಾನ್ ಎರಡು ವರ್ಷ ಇದನ್ನು ಗುಟ್ಟಾಗಿಸಿತ್ತು. ನಂತರ ಮು ಮನ್ಸೂರ್ ಹೊಸ ತಾಲಿಬಾನೀ ನೇತಾ ಆದ. ಆದರೆ ಮೇ 2016 ರಲ್ಲಿ ಅಮೇರಿಕಾ ಡ್ರೋನ್ ಹಯಲ್ಲಿ ಆತನನ್ನು ಕೊಂದಿತ್ತು.

ಭಾರತದ ಪಾತ್ರ
ಅಫ್ಘಾನಿಸ್ತಾನದ ಪುನರ್ ನಿರ್ಮಾಣದಲ್ಲಿ ನಮ್ಮದೇಶ ಸಾವಿರಾರು ಕೋಟಿ ರೂಪಾಯಿ ತೊಡಗಿಸಿದೆ. ಹಲವು ಭಾರತೀಯ ಕಂಪೆನಿಗಳು ಅಲ್ಲೀಗ ಕೆಲಸ ನಿಲ್ಲಿಸಿವೆ.
ಕೆಲಸಗಾರರು ವಾಪಸ್ ಬರುತ್ತಿದ್ದಾರೆ. 1996 ರಲ್ಲಿ ಸ್ಥಾಪಿತವಾದ ನಾರ್ದನ್ ಅಲಯನ್ಸ್, ತಾಲಿಬಾನಿಗಳ ನಿಯಂತ್ರಣದಿಂದ ಅಫ್ಘಾನಿಸ್ತಾನವನ್ನು ಮುಕ್ತ
ಗೊಳಿಸಲು ಅಂದು ನಿರ್ಣಾಯಕ ಪಾತ್ರ ನಿರ್ವಹಿಸಿತ್ತು. ಆದರೆ ೨೦೦೧ ರಲ್ಲಿ ಅದನ್ನು ವಿಸರ್ಜಿಸಲಾಯ್ತು. ಅಫ್ಘಾನಿಸ್ತಾನ ಪೂರ್ಣ ತಾಲಿಬಾನ್ ವಶವಾಗಿದ್ದರೂ ಈಗಲೂ ಪಂಜಶೀರ್ ಪ್ರದೇಶವು ತಾಲಿಬಾನ್ ನಿಯಂತ್ರಣಕ್ಕೆ ಇನ್ನೂ ಸಿಕ್ಕಿಲ್ಲ. ಅಲ್ಲಿನ ಜನರು ಯುದ್ಧ ಮತ್ತು ಮಾತುಕತೆ ಎರಡಕ್ಕೂ ಸಿದ್ದರಿದ್ದಾರೆ.

ಅಲ್ಲಿ ಅಹ್ಮದ್ ಮಸೂದ್ ಗ್ರೂಪ್ ಸಕ್ರಿಯವಿದೆ. ಪಂಜಶೀರ್ ಈಗ ತಾಲಿಬಾನ್‌ಗೆ ವಿರೋಧ ತೋರುತ್ತಿರುವ ಮುಖ್ಯ ಕೇಂದ್ರ ಎನಿಸಿದೆ. ಶನಿವಾರದ ವರದಿಯಂತೆ, ಅಫ್ಘಾನಿಸ್ತಾನದ ಮೂರು ಪ್ರಾಂತ್ಯಗಳು ತಾಲಿಬಾನ್ ಕೈಬಿಟ್ಟುಹೋಗಿವೆ. ಇದನ್ನೆಲ್ಲ ಗಮನಿಸಿ ತಾಲಿಬಾನ್ ಸರಕಾರದ ಕುರಿತಂತೆ ಭಾರತದ ನಿಲುವು ತಿಳಿಯಲು ಎಲ್ಲರೂ ಕುತೂಹಲದಿಂದಿದ್ದಾರೆ. ಸದ್ಯ ಕಾದು ನೋಡಬೇಕಾದ ಸ್ಥಿತಿ. ರಸ್ತೆಯ ಮಹಿಳೆಯರನ್ನೂ ಕೊಲ್ಲುತ್ತಿರುವ, ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸುತ್ತಿರುವ ತಾಲಿಬಾನ್‌ಗಳ ಆಡಳಿತವನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಕೊನೆಯ ಮಾತು: ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’(ಐಸಿಸ್) ಆಗಸ್ಟ್ 19 ರಂದು, ತನ್ನ ವಾರಪತ್ರಿಕೆ ಅಲ್ ನಬಾದ ಸಂಪಾದಕೀಯದಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ‘ಇದು ಶಾಂತಿಗೆ ಸಂದ ಜಯ, ಇಸ್ಲಾಮ್‌ಗೆ ಸಿಕ್ಕಿದ್ದು ಅಲ್ಲ, ಇದು ಒಪ್ಪಂದಕ್ಕೆ ಸಿಕ್ಕಿದ ಜಯ, ಜಿಹಾದ್‌ಗೆ ಅಲ್ಲ‘ ಎಂದಿದೆ.
ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಯನ್ನು ಹದ್ದುಬಸ್ತಿನಲ್ಲಿಡಲು, ಅದರ ಉಪಸ್ಥಿತಿ ಸಮಾಪ್ತಿಗೆ ಅಮೆರಿಕ ಈಗ ತಾಲಿಬಾನ್‌ನ್ನು ಎತ್ತಿಕಟ್ಟಿದೆಯೇ? ಅಫ್ಘಾನಿ ಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಉಪಸ್ಥಿತಿ ಕ್ಷೀಣಿಸಲು ತಾಲಿಬಾನ್‌ನ ಪಾತ್ರ ಮಹತ್ವದ್ದು.

2019 ರಲ್ಲಿ ಇಸ್ಲಾಮಿಕ್ ಸ್ಟೇಟ್‌ನ ವಿರುದ್ಧ ತಾಲಿಬಾನ್, ಅಮೆರಿಕ ಮತ್ತು ಅಫಘನ್ ಸುರಕ್ಷಾ ಪಡೆ ಜೊತೆಯಾಗಿ ಅಭಿಯಾನ ನಡೆಸಿತ್ತು ಎನ್ನುತ್ತದೆ ಐಸಿಸ್ ಸಂಘಟನೆ. ಇಂತಹ ಸಂಶಯ ಈಗ ಐಸಿಸ್‌ಗೆ ಬಂದಂತಿದೆ. ಇದು ನಿಜವಾದಲ್ಲಿ, ಮುಂದಿನ ದಿನಗಳಲ್ಲಿ ಈ ಎರಡು ಭಯೋತ್ಪಾದಕ ಸಂಘಟನೆಗಳು ಪರಸ್ಪರ ಯುದ್ಧಕ್ಕೆ ಇಳಿದರೆ ಏನಾದೀತು? ಕಾದು ನೋಡಬೇಕಷ್ಟೆ.

ಇದು ಎಂತಹ ತರಬೇತಿ?
ಕಾಬೂಲ್ ತಾಲಿಬಾನ್‌ನ ವಶವಾಗುತ್ತಲೇ ಹೆದರಿದ ಅಫಘಾನಿಸ್ತಾನದ ಸೈನಿಕರು ಮತ್ತು ಪೊಲೀಸರು ತಮ್ಮ ಸರಕಾರಿ ಡ್ರೆಸ್ ಕಳಚಿ ತಾಲಿಬಾನಿಗಳ ಕೈಗೆ ಸಿಗದಂತೆ ತಲೆಮರೆಸಿಕೊಳ್ಳಲು ಶುರುಮಾಡಿದ್ದಾರೆ. ಭೂಗತರಾಗುತ್ತಿದ್ದಾರೆ. ಹಾಗಾದರೆ 2.50 ಲಕ್ಷದಷ್ಟು ಇದ್ದಿದ್ದ ಅಫ್ಘಾನಿಸ್ತಾನದ ಸೇನೆ ಮತ್ತು ಪೊಲೀಸರಿಗೆ ಅಮೆರಿಕ ಎಂತಹ ಟ್ರೈನಿಂಗ್ ನೀಡಿದ್ದರು ಎನ್ನುವ ಪ್ರಶ್ನೆ ಎದುರಾಗಿದೆ.