Sunday, 15th December 2024

ಇಲ್ಲಿ ಚಳಿಯೇ ಕೊಲೆಗಾರ

ಮೇಜರ್ ಡಾ ಕುಶ್ವಂತ್ ಕೋಳಿಬೈಲು

ಒಂದು ದೇಶದ ಸೇನೆ ನಡೆದುಕೊಳ್ಳುವ ರೀತಿಯಿಂದ ಆ ದೇಶದ ಪರಂಪರೆಯನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯ ಬಹುದು. ಯುದ್ಧವೆಂದ ಮೇಲೆ ಸೋಲು-ಗೆಲುವುಗಳು ಇರುತ್ತವೆ. ಯುದ್ಧ ಮುಗಿದು, ಗುಂಡು ಮದ್ದುಗಳ ಪರದೆ ಸರಿದ ನಂತರ ಅನೇಕ ವಾಸ್ತವಾಂಶಗಳು ಬೆಳಕಿಗೆ ಬರುತ್ತದೆ. ಕೇವಲ ಹದಿಮೂರು ದಿನಗಳಲ್ಲಿ ಮುಗಿದ 1971ರ ಭಾರತ-ಪಾಕ್ ಯುದ್ಧದಲ್ಲಿ ಬಾಂಗ್ಲಾದೇಶವನ್ನು ಅಸ್ತಿತ್ವಕ್ಕೆ ತರಲಾಯಿತು.

ನಾವು ಅವರ 93,000 ಸೈನಿಕರನ್ನು ಸುರಕ್ಷಿತವಾಗಿ ವಾಪಾಸು ಕಳಿಸಿಕೊಟ್ಟೆವು. ಅದೇ ಯುದ್ಧದಲ್ಲಿ ಪಶ್ಚಿಮದ ಗಡಿಯಲ್ಲಿ ಕಣ್ಮರೆ ಯಾದ ನಮ್ಮ 54 ಸೈನಿಕರ ಬಗ್ಗೆ ನಮ್ಮ ಬಳಿ ಇಂದಿಗೂ ಮಾಹಿತಿಯಿಲ್ಲ. ಈಚೆಗೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕಿಸ್ತಾನದ ಗಡಿಯೊಳಗೆ ಸೆರೆ ಸಿಕ್ಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾರಣಕ್ಕೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಬಿಡುಗಡೆ ಮಾಡುವ ಒತ್ತಡ ಬಂತು. ಅವರು ಸುರಕ್ಷಿತವಾಗಿ ಹಿಂದಿರುಗಿದರು. ಅದೇ ಸಮಯದಲ್ಲಿ ನಮ್ಮ ಮಿಸ್ಸಿಂಗ್ 54 ಬಗ್ಗೆೆಯೂ ಮಾಹಿತಿ ಹೊರಬರುವುದರ ಜೊತೆಗೆ ಕಾಣೆಯಾದ ಸೈನಿಕರ ಕುಟುಂಬದವರು ಮತ್ತೆ ಮಾಧ್ಯಮದ ಮುಂದೆ ಬಂದರು. ಆಲ್ ಇಂಡಿಯಾ ಡಿಫೆನ್‌ಸ್‌ ಬ್ರದರ್ಹುಡ್ ಸಂಸ್ಥೆಯ ಮುಖ್ಯಸ್ಥ ಬ್ರಿಗೇಡಿಯರ್ ಹರ್ವಂತ್ ಸಿಂಗ್ (ನಿ) ಅವರು, 1971ರಲ್ಲಿ ಕಾಣೆಯಾದ ಸೈನಿಕರ ಬಗ್ಗೆ  ನಿರಂತರವಾಗಿ ಸುದ್ದಿ ಮಾಡುತ್ತಲೇ ಇದ್ದಾರೆ.

ಶತ್ರು ರಾಷ್ಟ್ರದ ಗಡಿಯೊಳಗಡೆ ನುಗ್ಗಿ ಕಾರ್ಯಾಚರಣೆ ನಡೆಸಲು ಹೊರಟ ತಂಡದ ನಾಯಕನ ಮೇಲಿರುವ ದೊಡ್ಡ ಜವಾಬ್ದಾರಿ ಯೆಂದರೆ ತಮ್ಮ ತಂಡದ ಸದಸ್ಯರನ್ನೆಲ್ಲ ವಾಪಾಸು ತರುವುದು. ಜೀವಂತವಾಗಿ ವಾಪಾಸು ಬರುವ ಭಾಗ್ಯವಿರದವರ ಶವವ ನ್ನಾದರೂ ತರಲೇಬೇಕು. ಇದು ಭಾರತೀಯ ಸೇನೆಯಲ್ಲಿರುವ ಅಲಿಖಿತ ನಿಯಮ. ‘ಡೆಡ್ ಆರ್ ಎಲೈವ್, ಎವೆರಿವನ್ ವಿಲ್ ಕಮ್ ಬ್ಯಾಕ್’ 1971ರ ಯುದ್ಧದಲ್ಲಿ ಸಿಖ್ ಮತ್ತು ಪಂಜಾಬ್ ರೆಜಿಮೆಂಟಿನ ಸೈನಿಕರು ಹೆಚ್ಚಿಗಿದ್ದ ತುಕಡಿಯೊಂದು ಪಶ್ಚಿಮ ಪಾಕಿಸ್ತಾನದ ಗಡಿಯಲ್ಲಿ ಸೆರೆಸಿಕ್ಕಿದ ನಂತರ ಅವರ ಬಗೆಗಿನ ಎಲ್ಲಾ ಮಾಹಿತಿಗಳನ್ನು ಪಾಕಿಸ್ತಾನದ ಸೇನೆ ಮುಚ್ಚಿಹಾಕಿತು.

ಕಾರ್ಗಿಲ್ ಯುದ್ಧದಲ್ಲಿ ತಮ್ಮದೇ ಸೈನಿಕರ ಮೃತದೇಹವನ್ನು ವಾಪಾಸು ಪಡೆಯಲು ನಿರಾಕರಿಸಿದ ಪಾಕಿಸ್ತಾನದಿಂದ ಈ ರೀತಿಯ ವರ್ತನೆ ನಿರೀಕ್ಷಿತ. ಆದರೆ ಭಾರತೀಯ ಸೇನೆ ಕಾರ್ಗಿಲ್ ಯುದ್ಧದಲ್ಲಿ ಮೃತರಾದ ಪಾಕಿಸ್ತಾನದ ಸೈನಿಕರ ಮೃತದೇಹಗಳಿಗೆ ಅಂತಿಮ ವಿಧಿಯನ್ನು ನೆರವೇರಿಸಿ, ಪ್ರಜಾಪ್ರಭುತ್ವದ  ಮೌಲ್ಯಗಳಿ ರುವ ದೇಶದ ಸೇನೆಯೊಂದು, ಮಿಲಿಟರಿ ಡಿಕ್ಟೇಟರ್ ಕೆಳಗಿರುವ ಸೇನೆಗಿಂತ ಭಿನ್ನವೆನ್ನುವುದನ್ನು ವಿಶ್ವಕ್ಕೆ ತಿಳಿಸಿತು.

ರಣರಂಗದಲ್ಲಿ ಜೀವಂತವಾಗಿ ಉಳಿಯುವ ಅದೃಷ್ಟವಿದ್ದವರು ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಹುತಾತ್ಮರಾದವರನ್ನು ತ್ರಿವರ್ಣ ಧ್ವಜ ಅಷ್ಟು ಸುಲಭದಲ್ಲಿ ಮರೆಯುವುದಿಲ್ಲ. ಅವರ ದೇಹವನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿ ಅವರ ಹುಟ್ಟೂರಿಗೆ ಕಳುಹಿಸುತ್ತಾರೆ. ಸಕಲ ಮಿಲಿಟರಿ ಗೌರವಗಳ ಜತೆ ಅಂತ್ಯಕ್ರಿಯೆಯನ್ನು ನೆರವೇರಿಸಿದ ನಂತರ ಅದೇ ತ್ರಿವರ್ಣ ಧ್ವಜವನ್ನು ಹುತಾತ್ಮರ ಕುಟುಂಬದವರಿಗೆ ನೀಡುತ್ತಾರೆ.

ಹಾಗಾಗಿ ಹುತಾತ್ಮರಾದ ಸೈನಿಕರ ದೇಹವನ್ನು ಅವರ ಕುಟುಂಬದವರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ಸೇನೆಗಿರುತ್ತದೆ. ತಮ್ಮವರನ್ನು ಕೊನೆಯ ಬಾರಿ ನೋಡುವ ಅವಕಾಶ ಸಿಗದಿದ್ದರೆ, ತಮ್ಮ ಸಂಪ್ರದಾಯದ ಪ್ರಕಾರ ಅಂತಿಮ ವಿಧಿಯನ್ನು ನೆರವೇರಿಸಲಾಗದಿದ್ದರೆ ಅದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ. ಆಮ್ಲಜನಕದ ಕೊರತೆ 2010ರ ಚಳಿಗಾಲದ ಸಮಯ. ಅರುಣಾಚಲದ ಗಡಿಭಾಗದ ಕಿರ್ಮೂ ಎಂಬ ಹಳ್ಳಿಯೊಂದರಲ್ಲಿದ್ದ ನಮ್ಮ ಫೀಲ್ಡ್  ಆಸ್ಪತ್ರೆಯಲ್ಲಿ ನಾನು ಡ್ಯೂಟಿಗೆ ರಿಪೋರ್ಟ್ ಆದ ಮೊದಲ ದಿನವದು. ಸತತ ಹಿಮಪಾತವಾಗುತ್ತಿದ್ದ ಕಾರಣ ಎಲ್ಲಿ ನೋಡಿದರಲ್ಲಿ ಬೆಟ್ಟಗಳು ಬಿಳಿ ಸೀರೆಯುಟ್ಟ ವಿಧವೆಯ ರಂತೆ ಕಾಣುತ್ತಿದ್ದವು. ಅದೇ ದಿನ ಪಂಜಾಬ್ ರೆಜಿಮೆಂಟಿನ ಸೈನಿಕನೊಬ್ಬ ತೀವ್ರವಾದ ಹೈ ಆಲ್ಟಿಟೂಡ್ ಪಲ್ಮನರಿ ಎಡಿಮಾದ ಕಾರಣ ಮೃತಪಟ್ಟಿದ್ದ.

ಹೆಚ್ಚು ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಕೊರತೆಯಿರುವುದರಿಂದ ಮನುಷ್ಯನ ಶ್ವಾಸಕೋಶ ಮತ್ತು ಮೆದುಳಿನ ಮೇಲೆ ವ್ಯತಿರಿಕ್ತವಾದ ಪರಿಣಾಮಗಳು ಉಂಟಾಗುತ್ತದೆ. ಹಾಗಾಗಿ ಅಲ್ಲಿ ಗುಂಡಿನ ಚಕಮಕಿಗಿಂತ ಪ್ರಕೃತಿಯ ವಿಕೋಪದಿಂದ ಹುತಾತ್ಮ ರಾಗುವವರ ಸಂಖ್ಯೆೆ ಜಾಸ್ತಿ.  ಆ ಹುತಾತ್ಮ ಸೈನಿಕನ ದೇಹ ಅವನ ಹುಟ್ಟೂರಾದ ಪಂಜಾಬಿನ ಹಳ್ಳಿಗೆ ತಲುಪಲು ಮೂರು – ನಾಲ್ಕು ದಿನ ಬೇಕಾಗುತ್ತದೆ. ದುರ್ಗಮ ಪ್ರದೇಶದಿಂದ ರಸ್ತೆಯ ಮೂಲಕ ಕೆಳತಂದ ನಂತರ ವಾಯುಸೇನೆಯ ವಿಮಾನದ ಮೂಲಕ ಮೃತದೇಹವನ್ನು ಸಾಗಿಸುತ್ತಾರೆ.

ಆತನ ರೆಜಿಮೆಂಟಿನ ಸೈನಿಕರ ಒಂದು ತುಕಡಿ ಆತನಿಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ ಆತನ ಹುಟ್ಟೂರಿಗೂ
ಬರುತ್ತದೆ. ಮೃತದೇಹವನ್ನು ಸೂಕ್ತವಾಗಿ ಸಂರಕ್ಷಣೆ ಮಾಡುವು ಸಲುವಾಗಿ ನಾವು ಆ ದೇಹಕ್ಕೆ ರಾಸಾಯನಿಕ ಪದಾರ್ಥಗಳ ದ್ರವಣವನ್ನು ಚುಚ್ಚುತ್ತೇವೆ. ದೇಹವನ್ನು ಕೆಲವು ದಿನಗಳ ಕಾಲ ಕೊಳೆಯದಂತೆ ರಕ್ಷಿಸಿಡುವ ಆ ಕ್ರಮಕ್ಕೆ ಎಂಬಾಲ್ಮಿಂಗ್ ಎಂದು ಕರೆಯುತ್ತೇವೆ. ಆ ಪಂಜಾಬಿ ಸೈನಿಕನ ಮೃತದೇಹಕ್ಕೆ ನಾನು ಮತ್ತು ನನ್ನ ನಸಿರ್ಂಗ್ ಸಹಾಯಕ ಹವಾಲ್ದಾರ್ ವಸೇಕರ್ ರಾತ್ರಿ ಯಿಡೀ ರಾಸಾಯನಿಕ ದ್ರವಣದ ಮಿಶ್ರಣವನ್ನು ಚುಚ್ಚಿ ಎಂಬಾಲ್ಮಿಂಗ್ ಮಾಡಿದೆವು.

ಸದೃಢ ಮೈಕಟ್ಟಿನ ಆ ಪಂಜಾಬಿ ಸೈನಿಕ ಮುಖದಲ್ಲಿ ಅದೇನೊ ನಿರ್ಲಿಪ್ತ ಭಾವ! ಮರುದಿನ ಪಂಜಾಬ್ ರೆಜಿಮೆಂಟಿನವರು ಅವನ ಮೃತದೇಹವನ್ನು ಅವನ ಹುಟ್ಟೂರಿಗೆ ಸಾಗಿಸಿದರು. ಇದಾಗಿ ಆರು ತಿಂಗಳಾಗಿತ್ತು. ನನ್ನ ಜೊತೆಗಿದ್ದ ನರ್ಸಿಂಗ್
ಸಹಾಯಕ ಹವಾಲ್ದಾರ್ ವಸೇಕರ್ ಮುಂಚೂಣಿ ಪೋಸ್ಟಿಗೆ ತೆರಳಿದ್ದ. ಅಲ್ಲಿ ತೀವ್ರ ಹಿಮಪಾತವಾಗಿ ಎಲ್ಲಾ ಸಂಪರ್ಕ ಕಡಿತ ಗೊಂಡಿದ್ದ ಸಂದರ್ಭದಲ್ಲಿ ಅವನಿಗೆ ಹೃದಯಾಘಾತವಾಯಿತು. ಅವನನ್ನು ನಮ್ಮ ಫೀಲ್ಡ್ ಆಸ್ಪತ್ರೆಗೆ ತರುವಷ್ಟರಲ್ಲಿ ದೇಹ ತಣ್ಣಗಾಗಿತ್ತು. ನನ್ನ ಯೂನಿಟ್ಟಿನ ದಕ್ಷ ನರ್ಸಿಂಗ್ ಸಹಾಯಕನ ದೇಹಕ್ಕೆ ಎಂಬಾಲ್ಮಿಂಗ್ ಮಾಡುವ ದುರಾದೃಷ್ಟ ನನ್ನದಾಗಿತ್ತು. ಆ ಸೈನಿಕನ ಮೃತದೇಹವನ್ನು ಮಹಾರಾಷ್ಟ್ರದ ಹಳ್ಳಿಯೊಂದಕ್ಕೆೆ ತಲುಪಿಸುವ ಜವಾಬ್ದಾರಿ ನಮ್ಮ ಫೀಲ್ಡ್ ಆಸ್ಪತ್ರೆಯ ಮೇಲಿತ್ತು. ಅಚ್ಚುಕಟ್ಟಾಗಿ ಎಂಬಾಲ್ಮಿಂಗ್ ಮಾಡಿದ್ದ ಆತನ ದೇಹಕ್ಕೆೆ ತ್ರಿವರ್ಣ ಧ್ವಜವನ್ನು ಹೊದಿಸಿ ಅಂತಿಮ ನಮನವನ್ನು ಸಲ್ಲಿಸಿದೆವು.

‘ಡೆಡ್ ಆರ್ ಎಲೈವ್, ಎವೆರಿವನ್ ವಿಲ್ ಕಮ್ ಬ್ಯಾಕ್’