Sunday, 15th December 2024

ಮಕ್ಕಳ ಸಹಾಯಕ್ಕೆ ನಿಂತ ಈ ಮಹಿಳೆ

ಏಡ್ಸ್‌ ರೋಗದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಸಾಕಲು ತಮ್ಮ ವೈಯಕ್ತಿಕ ಸುಖವನ್ನು ತ್ಯಾಗ ಮಾಡಿದ ಈ ಮಹಿಳೆಯ ಹೆಸರು ತಬಸ್ಸುಮ್.

ಸುರೇಶ ಗುದಗನವರ

ನಮ್ಮ ಸಮಾಜ ಎಷ್ಟೇ ಮುಂದುವರೆದಿದೆ ಅಂದರೂ ಕೆಲವೊಂದು ವಿಚಾರಗಳಲ್ಲಿ ಇನ್ನೂ ಹಿಂದೆಯೇ ಇದೆ. ಏಡ್ಸ್ ಪೀಡಿತ ಪಾಲಕರು, ಮಕ್ಕಳನ್ನು ಸಮಾಜ ಇನ್ನೂ ಸಹ ಒಪ್ಪಿಕೊಳ್ಳುವ ಹಂತವನ್ನು ತಲುಪಿಲ್ಲವೆನ್ನುವದು ದುರದೃಷ್ಟಕರ ಸಂಗತಿ. ಹೆಚ್.ಐ.ವಿ. ಭಯಾನಕ ಕಾಯಿಲೆ ನಿಜ. ಆದರೆ ಈ ಕಾಯಿಲೆ ಪೀಡಿತರನ್ನು ದೂರ ಸರಿಸುವದು ಮತ್ತೊಂದು ದುರಂತ.

ಹೆಚ್.ಐ.ವಿ. ಗೆ ಒಳಗಾದ ಎಷ್ಟೋ ಮಕ್ಕಳು ಕುಟುಂಬದಿಂದ ದೂರವೇ ಉಳಿದಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಮಕ್ಕಳನ್ನು ದೂರ ಮಾಡುವದು ಎಷ್ಟರಮಟ್ಟಿಗೆ ಸರಿ? ಇಂತಹ ಮಕ್ಕಳ ಲಾಲನೆ ಮಾಡುವ ಮಹಿಳೆಯೊಬ್ಬರು ಮಂಗಳೂರಿನಲ್ಲಿದ್ದಾರೆ. ಅವರೇ ತಬಸ್ಸುಮ್. ಇವರು ಮಂಗಳೂರು ಸಮೀಪದ ಕೋಣಾಜೆಯವರು. ಆರ್ಥಿಕವಾಗಿ ಹಿಂದುಳಿದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಅಬ್ದುಲ್ ಸಮದ್ ಮತ್ತು ತಾಯಿ ಖೈರುನ್ನಿಸಾ. ತಬಸ್ಸುಮ್ ಶಾಲಾ-ಕಾಲೇಜಿನ ಓದಿನಲ್ಲಿ ಪ್ರಥಮ ಸ್ಥಾನವನ್ನೇ ಪಡೆಯುತ್ತಿದ್ದರು.

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಬಡತನದಲ್ಲಿಯೇ ಪಿ.ಯು.ಸಿ.ಯನ್ನು ಪೂರೈಸಿದರು. ನಂತರ ಪದವಿ ವರ್ಗಗಳ ಪ್ರಾರಂಭದಲ್ಲಿಯೇ ತಬಸ್ಸುಮ್ ಅವರಿಗೆ ಪಾಲಕರು ಮದುವೆ ಮಾಡಿದರು. ಕೌಟುಂಬಿಕ ಜೀವನದ ನಡುವೆಯೇ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕೆಲವನ್ನು ಪ್ರಾರಂಭಿಸಿದರು.

2010ರಲ್ಲಿ ತಬಸ್ಸುಮ್‌ರ ಗೆಳತಿಯೊಬ್ಬರು ಏಡ್ಸ್‌ ಕಾಯಿಲೆಯಿಂದ ಮೃತಪಟ್ಟರು. ಅವರ ಮಕ್ಕಳು ಅನಾಥರಾದರು. ಇದರಿಂದ ತುಂಬಾ ನೊಂದುಕೊಂಡು ತಬಸ್ಸುಮ್ ಇಂತಹ ಮಕ್ಕಳ ಬಾಳಿಗೆ ಅಮ್ಮನಾಬೇಕೆಂದು ಪಣತೊಟ್ಟರು. ನಂತರ ಅವರು ಏಡ್ಸ್ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಳ್ಳುತ್ತಾರೆ. ಏಡ್ಸ್‌ ಕುರುತು ಕೆಲಸ ಮಾಡುವ ಎನ್‌ಜಿಒ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳು ತ್ತಾರೆ. ಏಡ್ಸ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಿ ಸೈ ಎನಿಸಿಕೊಳ್ಳುತ್ತಾರೆ. ಏಡ್ಸ್‌ನಿಂದ ಮೃತಪಟ್ಟ ಹಲವಾರು ಮಕ್ಕಳ ಮೃತದೇಹಗಳನ್ನು ತಾವೇ ಅಂತ್ಯಕ್ರಿಯೆ ಮಾಡುತ್ತಾರೆ. ಏಡ್ಸ್‌‌ನಿಂದ ಮೃತಪಟ್ಟವರ ಮಕ್ಕಳ ಸೇವೆಯಲ್ಲಿ ನಿರತರಾಗುತ್ತಾರೆ.

ಸ್ನೇಹ ದೀಪ
ಕ್ರಮೇಣ ಇಂತಹ ಮಕ್ಕಳಿಗಾಗಿಯೇ ತಬಸ್ಸುಮ್ ಒಂದು ಮನೆಯನ್ನು ಮಾಡುತ್ತಾರೆ. ಅದುವೇ ಸ್ನೇಹ ದೀಪ. 2011ರಲ್ಲಿ
ಮಂಗಳೂರಿನ ಬಿಜೈ ಕಾಪಿಕಾಡ್‌ನಲ್ಲಿ ತಬಸ್ಸುಮ್ ಸ್ನೇಹ ದೀಪ ಮಕ್ಕಳ ಪಾಲನಾ ಕೇಂದ್ರವನ್ನು ಪ್ರಾರಂಭಿಸುತ್ತಾರೆ. ಬೀದಿ ಪಾಲಾದ ಹೆಚ್.ಐ.ವಿ. ಸೋಂಕಿತ ಹೆಣ್ಣು ಮಕ್ಕಳಿಗೆ ಅಮ್ಮನ ನೆನಪಾಗದಂತೆ, ಮನೆಯ ವಾತಾವರಣವಿರಬೇಕೆಂಬ ಉದ್ದೇಶ ದಿಂದ ಬಾಡಿಗೆಯ ಹಂಚಿನ ಮನೆಯೊಂದರಲ್ಲಿ ಮಕ್ಕಳ ಪಾಲನಾ ಕೇಂದ್ರವನ್ನು ತೆರೆದರು. ಸ್ನೇಹ ದೀಪದಲ್ಲಿ ರಾಜ್ಯದ ವಿಧ ಜಿಲ್ಲೆೆಗಳ 26 ಮಕ್ಕಳಿದ್ದಾರೆ.

ಅವರಿಗೆ ಊಟ, ವಸತಿ, ಆರೋಗ್ಯ, ಶಿಕ್ಷಣದ ಸೇವೆಯನ್ನು ತಮ್ಮ ಮೂವರು ಸಿಬ್ಬಂದಿಗಳ ಜೊತೆಗೆ ಆದರದಿಂದ ಮಾಡುತ್ತಿದ್ದಾರೆ. ಅಲ್ಲಿ ನೆಲೆಸಿರುವ ಎಲ್ಲಾ ಮಕ್ಕಳು ಕೂಡಾ ತಬಸ್ಸುಮ್ ಅವರನ್ನು ಮಾತೆಯಂತೆ, ಸ್ನೇಹದೀಪ ಸಂಸ್ಥೆಯನ್ನು ಸ್ವಂತ ಮನೆಯಂತೆ ಕಾಣುತ್ತಿದ್ದಾರೆ. ಕಣ್ಣೀರ ಕಥೆ ಇಲ್ಲಿನ ಒಂದೊಂದು ಮಕ್ಕಳದ್ದೂ ಒಂದೊಂದು ಕಣ್ಣೀರ ಕಥೆ. ಒಟ್ಟು 19 ಮಕ್ಕಳು ಅವರ ಮಡಿಲ್ಲಲ್ಲಿಯೇ ಪ್ರಾಣ ಬಿಟ್ಟಿದ್ದು, ಜೀವನದ ಅಂತಿಮ ಕ್ಷಣದಲ್ಲಿ ಹತ್ತಿರವಿದ್ದುಕೊಂಡೇ ಸೇವೆ ಮಾಡುತ್ತಿರುವದು ಶ್ಲಾಘನೀಯ ವಾದುದು. ಬೀದಿ ಪಾಲಾಗಿದ್ದ ಎಷ್ಟೋ ಹೆಣ್ಣು ಮಕ್ಕಳಿಗೆ ಮಾತೃ ವಾತ್ಸಲ್ಯ ನೀಡಿ ಹೊಸ ಬದುಕು ಕಟ್ಟುವ ಕೆಲಸವನ್ನು ತಬಸ್ಸುಮ್ ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುತ್ತಿದ್ದಾರೆ. ಇಲ್ಲಿರುವ ಬಹುತೇಕ ಮಕ್ಕಳಿಗೆ ತಮಗೆ ಏಡ್ಸ್ ರೋಗ  ಅಂಟಿ ರುವ ಬಗ್ಗೆ ಗೊತ್ತಿಲ್ಲ. ಕಲಿಯುವ ಶಾಲೆಯಲ್ಲಿ ಗೊತ್ತಾದರೆ ಇತರ ಮಕ್ಕಳು ಅಸ್ಪಶ್ಯರಂತೆ ನೋಡಬಹುದೆಂದು ಮುಖ್ಯೋ ಪಾಧ್ಯಾಯರಿಗೆ ಮಾತ್ರ ವಿವರಿಸಿದ್ದಾರೆ.

ಇಡೀ ದಿನ ಅವರ ಬೇಕು ಬೇಡಗಳಿಗೆ ಸ್ಪಂದಿಸುತ್ತಾರೆ. ಹೀಗೆ ತಬಸ್ಸುಮ್ ತನ್ನ ಒಡಹುಟ್ಟಿದ ಇಬ್ಬರು ಮಕ್ಕಳಿಗಿಂತಲೂ ಹೆಚ್ಚಿನ ಸಮಯವನ್ನು ಈ 26 ಮಕ್ಕಳೊಂದಿಗೆ ಕಳೆಯುತ್ತಾರೆ. ತಬಸ್ಸುಮ್ ಆರ್ಥಿಕವಾಗಿ ಅಷ್ಟು ಸಬಲರಲ್ಲ. ಪುಟ್ಟ ಅಂಗಡಿಯೊಂದನ್ನು ನಡೆಸುತ್ತಿದ್ದು, ಅದರಿಂದ ಬಂದ ಆದಾಯವನ್ನು ಸ್ನೇಹ ದೀಪ ಸಂಸ್ಥೆಗೆ ಖರ್ಚು ಮಾಡುತ್ತಿದ್ದಾರೆ. ಸ್ನೇಹ ದೀಪ ಪ್ರತಿ ತಿಂಗಳು ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಬಟ್ಟೆ, ಔಷದೋಪಾಚರ, ಊಟ, ಮೂವರು ಮಹಿಳಾ ಸಿಬ್ಬಂದಿಗಳ ವೇತನ ಇತ್ಯಾದಿ ಪ್ರತಿ ತಿಂಗಳು ಅಂದಾಜು 80 ಸಾವಿರವರೆಗೆ ಖರ್ಚಾಗುತ್ತದೆ. ಅಲ್ಪ ಸ್ವಲ್ಪ ಔಷಧಿ ಸರ್ಕಾರದಿಂದ ವಿತರಣೆಯಾಗುತ್ತದೆ. ಜತೆಗೆ ಸಹೃದಯಿ ದಾನಿಗಳು ಅಷ್ಟಿಷ್ಟು ದೇಣಿಗೆ ಸಲ್ಲಿಸುತ್ತಿದ್ದಾರೆ. ಕಷ್ಟದ ಸಂದರ್ಭಗಳು ಬಂದರೂ ಎದೆಗುಂದದೇ ತಬಸ್ಸುಮ್ ಸ್ನೇಹದೀಪ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಪ್ರೋತ್ಸಾಹ

ಸಮಾಜ ಸೇವಕಿ ತಬಸ್ಸುಮ್ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಟ್ಯಾಲೆಂಟ್ ರಿಸರ್ಚ ಫೌಂಡೇಶನ್,
ಹಿದಾಯ್ ವುಮೆನ್ಸ್‌ ಫೌಂಡೇಶನ್, 2019ರ ಪ್ರೆಸ್ ಕ್ಲಬ್ ಪ್ರಶಸ್ತಿ ಮುಂತಾದ ಸಂಘ ಸಂಸ್ಥೆಗಳ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಲವು ಪ್ರಮುಖರು ಇವರ ಕೆಲಸವನ್ನು ಗುರುತಿಸಿ, ಸಹಾಯ ಹಸ್ತ ಚಾಚಿದ್ದಾರೆ. 38 ವರ್ಷದ ತಬಸ್ಸುಮ್‌ಗೆ ಗಂಡ, ಇಬ್ಬರು
ಮಕ್ಕಳಿದ್ದಾರೆ. ಅವರು ಮನೆ-ಮಕ್ಕಳು ಅಂತಾ ಗೃಹಣಿಯಾಗಿ ಸಂಸಾರ ನೋಡಿಕೊಳ್ಳುತ್ತಾ ಬದುಕಬಹುದಿತ್ತು. 9 ವರ್ಷಗಳ ಹಿಂದೆ ತೆಗೆದುಕೊಂಡ ದಿಟ್ಟ ನಿರ್ಧಾರದಿಂದಾಗಿ ಏಡ್ಸ್’ಗೆ ಅಂಟಿಕೊಂಡಿರುವ 26 ಹೆಣ್ಣು ಮಕ್ಕಳು ಈಗ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.

ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ, ಕೋಮು ಸಾಮರಸ್ಯಕ್ಕೆ ಹೊಸ ಭಾಷೆ ಬರೆದ ದಿಟ್ಟ ಮಹಿಳೆ ತಬಸ್ಸುಮ್. ಸ್ವಾರ್ಥ ಲಾಭದ ಆಸೆ ಇಲ್ಲದೇ, ಇಂತಹ ಮಕ್ಕಳಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತಬಸ್ಸುಮ್ ಎಲ್ಲರಿಗೂ ಮಾದರಿಯಾಗಿದ್ದಾರೆ.
ಅವರ ಈ ಕೆಲಸಕ್ಕೆ ಸಮಾಜದ ಜನರು ನೀಡುವ ದೇಣಿಗೆಯು ಪ್ರಮುಖ ಬೆಂಬಲವಾಗಿ ನಿಲ್ಲಬಲ್ಲದು. ಸ್ನೇಹದೀಪ ಸಂಪರ್ಕ: 9964024655.