ಬಳಕೂರು ವಿ ಎಸ್ ನಾಯಕ
ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ – ಈ ಯಕ್ಷಗಾನದ ಹಾಡನ್ನು ಕೇಳಿದರೆ ಸಾಕು ಒಂದು ಕ್ಷಣ ನಮ್ಮ ಮನಸ್ಸು ಅತ್ತ
ಕಡೆಗೆ ಹೊರಳುತ್ತದೆ.
ಹಲವಾರು ವ್ಯಕ್ತಿಗಳು ಯಕ್ಷಗಾನಕ್ಕೆ ಮನಸೋತಿದ್ದಾರೆ. ಕರಾವಳಿಯ ಯಕ್ಷಗಾನ ಕಲೆಯ ಎಲ್ಲರನ್ನೂ ಆಕರ್ಷಿಸುತ್ತದೆ. ಇದರ ಬಗ್ಗೆ ಆಸಕ್ತಿ ಇರುವವರು ಸಾಮಾನ್ಯವಾಗಿ ಯಕ್ಷಗಾನ ವನ್ನು ನೋಡುತ್ತ ಕೇಳುತ್ತ ಸಾಗುತ್ತಿರುವುದು ಸಹಜ. ವೃತ್ತಿಯಲ್ಲಿ ಹೋಮಿಯೋಪತಿ ವೈದ್ಯರಾಗಿರುವ ಇವರನ್ನು ಸೆಳೆದಿದ್ದು ಯಕ್ಷಗಾನ ಕಲೆ. ವೈದ್ಯ ಸೇವೆಯನ್ನು ಮಾಡುತ್ತಾ ಯಕ್ಷಗಾನದಲ್ಲಿ ಸಾಕಷ್ಟು ಪರಿಶ್ರಮ ಮಾಡಿ, ಹಲವು ವಿಭಿನ್ನ ವಿಶೇಷ ಪಾತ್ರಗಳನ್ನು ಮಾಡಿ ದ್ದಾರೆ. ಅವರು ರಂಗಪ್ರವೇಶ ಮಾಡಿದರೆಂದರೆ ಸಾಕು ಒಂದು ಕ್ಷಣ ಎಲ್ಲರ ಗಮನ ಅವರತ್ತ!
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಕುಣಿಯುವ ದೃಶ್ಯ ಅವರ್ಣನೀಯ. ಯಕ್ಷಗಾನದಲ್ಲಿ ಬಹಳ ಆಸಕ್ತಿಯನ್ನು ಹೊಂದಿರುವ ಇವರು ಹಲವಾರು ರೀತಿಯ ಪಾತ್ರಗಳನ್ನು ವಹಿಸಿದ್ದಾರೆ. ನಯವಾದ ಮಾತುಗಾರಿಕೆ, ವಿಶೇಷವಾದ ಭಾವಾಭಿನಯ ಇವರ ಶಕ್ತಿ ಮತ್ತು ಕೌಶಲ. ತಮ್ಮ ವೈದ್ಯ ವೃತ್ತಿಯ ಜತೆಯಲ್ಲೇ ಯಕ್ಷಗಾನದ ಕಲಾ ಸೇವೆಯನ್ನು ಮಾಡುತ್ತಾ ಬಂದವರು ಶ್ರೀಪಾದ ಹೆಗಡೆಯವರು.
ಇವರು ವೃತ್ತಿಯಲ್ಲಿ ಹೋಮಿಯೋಪತಿ ವೈದ್ಯರು. ಆದರೆ ಯಕ್ಷಗಾನದಲ್ಲಿ ಅಪಾರವಾದ ಆಸಕ್ತಿ. ಬಾಲ್ಯದಿಂದಲೇ ಯಕ್ಷಗಾನ ದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಇವರು ಯಕ್ಷಗಾನ ನೃತ್ಯವನ್ನು, ವೇಷ ಹಾಕುವುದನು ಕಲಿತರು. ಆಗಿನ ಕಾಲದ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಇಂತಹ ಮಹೋನ್ನತ ಕಲಾವಿದರೇ ಇವರಿಗೆ ಸ್ಫೂರ್ತಿಯಾದರು.
ಅಪರೂಪದ ವೇಷ
ಯಕ್ಷಗಾನದಲ್ಲಿ ಅಪರೂಪವೆನಿಸಿದ ತೆರೆಯ ಮರೆಯ ಪಾತ್ರವಾದ ತಟ್ಟಿ ವೀರಭದ್ರ ವೇಷವನ್ನು ಧರಿಸಿ ನಿಂತರೆಂದರೆ ಒಂದು ಕ್ಷಣ ಎಲ್ಲರೂ ಚಕಿತರಾಗಬೇಕು. ಆ ಪಾತ್ರದ ಅಬ್ಬರದ ಪ್ರವೇಶ ಆರ್ಭಟ ದೊಂದಿಗೆ ಸಭೆಯ ಮಧ್ಯದಲ್ಲಿ ನಡೆದು ಬರುವಾಗ ದೊಂದಿ ಬೀಸುತ್ತ ಪ್ರವೇಶಿಸುವ ವೈಖರಿಗೆ ಬೆರಗಾಗ ಲೇಬೇಕು. ರುದ್ರ ಮುಖವರ್ಣಿಕೆ, ಆರ್ಭಟ ಬೆರಗುಗೊಳಿಸುವ ವೇಷಭೂಷಣ ಗಳಿಂದ ಗಮನ ಸೆಳೆಯುವ ಶ್ರೀಪಾದ ಹೆಗಡೆಯವರು ಈ ಪಾತ್ರದಲ್ಲಿ ಸಿದ್ಧಹಸ್ತರು.
ಇದರ ಜತೆಯಲ್ಲೇ, ಇತರ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇಂತಹ ಅಪರೂಪದ ಯಕ್ಷಗಾನದ ಸೇವೆಯನ್ನು ಮಾಡುತ್ತಾ ಅದರಲ್ಲಿಯೇ ಸಂತೋಷವನ್ನು ಕಾಣುತ್ತಿರುವರು. ಬೆಂಗಳೂರಿನಲ್ಲಿ ತಮ್ಮ ಕೆಲಸದ ಒತ್ತಡದ ನಡುವೆ ತಮ್ಮ ಹವ್ಯಾಸದ ಮೂಲಕ ತಮ್ಮೂರಿನ ಕಲೆಯನ್ನು ಆವಾಹಿಸಿಕೊಂಡು, ಜೀವಂತವಿಡುವ ಇಂತಹ ಅನೇಕರು ನಮ್ಮ ನಡುವೆ ಇರುವುದು ನೆಮ್ಮದಿಯ ವಿಷಯ.. ಇವರು ನಿರ್ವಹಿಸಿದ ಹಲವಾರು ಯಕ್ಷಗಾನ ಪಾತ್ರಗಳು ಇವತ್ತಿಗೂ ಕೂಡ ಯಕ್ಷಗಾನ ಆಸಕ್ತರಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಇವರ ಕಲಾಸೇವೆ ಮತ್ತು ಯಕ್ಷಗಾನ ವೇಷದ ಪರಿಣತಿಯನ್ನು ಗುರುತಿಸಿ, ಹಲವಾರು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ನಗರದ ಬಿಡುವಿಲ್ಲದ ದಿನಚರಿಯ ನಡುವೆ, ಕರಾವಳಿಯ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನವನ್ನು ಕಲಿತು, ವೇಷ ಹಾಕುತ್ತಿರುವ ಶ್ರೀಪಾದ ಹೆಗಡೆಯವರು ಅಭಿನಂದನಾರ್ಹರು.